ನ ಖಾವೂಂಗಾ ನ ಖಾನೇ ದೂಂಗಾ
'ನಖಾವೂಂಗಾ, ನ ಖಾನೇ ದೂಂಗಾ' ನಾನು ತಿನ್ನುವುದಿಲ್ಲ ಮತ್ತು ತಿನ್ನಲು...
'ನಖಾವೂಂಗಾ, ನ ಖಾನೇ ದೂಂಗಾ' (ನಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ) ಎಂದು ಹೇಳಿ ಜನತೆಗೆ ಕೊಟ್ಟ ಮಾತಿನಂತೆಯೇ ಇದುವರೆಗೂ ನಡೆದುಕೊಂಡು ಬಂದಿರುವ ಯಶಸ್ವೀ ರಾಜಕೀಯ ನಾಯಕರ ಪೈಕಿ ಮುಂಚೂಣಿಯಲ್ಲಿರುವವರು ಇಂದು ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಶ್ರೀ ನರೇಂದ್ರ ಮೋದಿಯವರು.
ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಎಂದರೆ, ನಾನು ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಹಾಗೂ ಬೇರೆಯವರು ಭ್ರಷ್ಟಾಚಾರದಲ್ಲಿ ತೊಡಗಿದರೆ ಸಹಿಸುವುದಿಲ್ಲವೆಂದು. ನರೇಂದ್ರ ಮೋದಿಯವರ ಬಗ್ಗೆ ಕೋಮುವಾದಿ, ನರಹಂತಕ, ಸರ್ವಾಧಿಕಾರಿ ಮುಂತಾದ ಹತ್ತು ಹಲವು ಆರೋಪಗಳನ್ನು ಅವರ ರಾಜಕೀಯ ವಿರೋಧಿಗಳು ಮಾಧ್ಯಮದ ಮೂಲಕ ಮಾಡಿಕೊಂಡೇ ಬಂದಿದ್ದಾರೆ. ಕಳೆದ 12 ವರ್ಷಗಳ ಕಾಲ ಗುಜರಾತಿನ ಜನತೆ ಈ ಆರೋಪಗಳನ್ನು ತಿರಸ್ಕರಿಸಿರುವುದು ಮತ್ತು ಈಗ ಇಡೀ ದೇಶ ಸಹ ಈ ಆರೋಪಗಳನ್ನು ತಿರಸ್ಕರಿಸಿ, ಮೋದಿಯವರಿಗೆ ಅತ್ಯಂತ ಹೆಚ್ಚಿನ ಬೆಂಬಲ ನೀಡಿರುವುದು ತಿಳಿದಿರುವ ಸಂಗತಿ.
ಮೋದಿಯವರ ತಥಾಗಥಿತ ವಿರೋಧಿಗಳು ಇದುವರೆಗೆ ಹಲವಾರು ಆರೋಪಗಳನ್ನು ಮಾಡುತ್ತಾ ಬಂದಿದ್ದರೂ ನರೇಂದ್ರ ಮೋದಿಯವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಾಗಿಲ್ಲ ಅಥವಾ ಮಾಡುವ ಧೈರ್ಯ ಯಾರಿಗೂ ಬಂದಿಲ್ಲ. ಗುಜರಾತಿನಲ್ಲಿ ಅದಾನಿ ಎಂಬ ಕೈಗಾರಿಕೋದ್ಯಮಿಗೆ ಅಗಾಧ ಪ್ರಮಾಣದ ಭೂಮಿಯನ್ನು ಅತ್ಯಲ್ಪ ಬೆಲೆಗೆ ನೀಡಿದ್ದರೆಂಬ ಆರೋಪವಿದ್ದರೂ ಇದರಲ್ಲಿಯೂ ಮೋದಿಯವರು ಹಣ ಮಾಡಿದ್ದಾರೆ ಎಂಬ ಪಿಸುಮಾತು ಸಹ ಕೇಳಿ ಬಂದಿಲ್ಲ. ಆದುದರಿಂದ ದೇಶವನ್ನು ಕಾಂಗ್ರೆಸ್ಮುಕ್ತ ಭಾರತ ಮಾಡಬೇಕೆನ್ನುವ ಘೋಷಣೆಯೊಂದಿಗೆ ದೇಶವನ್ನು ಭ್ರಷ್ಟಾಚಾರ ಮುಕ್ತ ಭಾರತ ಮಾಡಬೇಕೆಂಬ ನರೇಂದ್ರ ಮೋದಿಯವರ ಕರೆಯನ್ನು ಯಾರೂ ಸಹ ಲಘುವಾಗಿ ಪರಿಗಣಿಸುವಂತಿಲ್ಲ.
ಮೋದಿಯವರನ್ನು ಭೇಟಿ ಮಾಡಲು ಗಾಂಧಿನಗರದ ಅವರ ಅಧಿಕೃತ ನಿವಾಸಕ್ಕೆ ಹೋಗುವ ಅವಕಾಶ ಸಿಕ್ಕಿದವರೆಲ್ಲರದೂ ಒಂದೇ ಅಭಿಪ್ರಾಯ. ಮುಖ್ಯಮಂತ್ರಿಯೊಬ್ಬರು ಯಾವುದೇ ಆಡಂಬರವಿಲ್ಲದೇ, ವಂಧಿಮಾಗಧರ ಕೂಟವಿಲ್ಲದೇ ಇರಲು ಸಾಧ್ಯ ಎಂಬುದಕ್ಕೆ ನರೇಂದ್ರ ಮೋದಿ ಒಂದು ತಾಜಾ ಉದಾಹರಣೆಯೆಂದು. ಇದೇ ರೀತಿಯ ಸರಳ ಜೀವನ ತ್ರಿಪುರಾದ ಮುಖ್ಯಮಂತ್ರಿ ಹಾಗೂ ಗೋವಾದ ಮುಖ್ಯಮಂತ್ರಿಗಳದ್ದು ಎಂಬುದು ನಮಗೆ ತಿಳಿದಿದೆ.
ನನಗೆ ಮೊಟ್ಟ ಮೊದಲು ನರೇಂದ್ರ ಮೋದಿ ಅವರನ್ನು ನೋಡುವ ಅವಕಾಶ ಸಿಕ್ಕಿದ್ದು ಅವರು ಮುಖ್ಯಮಂತ್ರಿ ಆಗುವ ಬಹಳ ಮುಂಚೆ. 1991ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದ ಏಕತಾಯಾತ್ರೆಯಲ್ಲಿ. ಬಿಜೆಪಿಯ ಅಂದಿನ ಅಧ್ಯಕ್ಷರಾದ ಡಾ. ಮುರಳಿ ಮನೋಹರ ಜೋಷಿಯವರ ನೇತೃತ್ವದಲ್ಲಿ ಆ ಯಾತ್ರೆ ನಡೆದಿತ್ತು. ಕಾಶ್ಮೀರದಲ್ಲಿ ಉಗ್ರಗಾಮಿಗಳು ತಾಯಿ ಹಾಲು ಕುಡಿದಿರುವ ಯಾರಾದರೂ ಇದ್ದರೆ ಶ್ರೀನಗರಕ್ಕೆ ಬಂದು ಲಾಲ್ಚೌಕನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲಿ ಎಂದು ಹಾಕಿದ ಸವಾಲನ್ನು ಗಂಭೀರವಾಗಿ ಸ್ವೀಕರಿಸಿದ ಬಿಜೆಪಿ ಆ ಯಾತ್ರೆಯನ್ನು ಹಮ್ಮಿಕೊಂಡಿತ್ತು.
ಕರ್ನಾಟಕದಿಂದ ಸಹ ಒಂದು ತಂಡ ಜಮ್ಮು ತಲುಪಿತ್ತು. ಜನವರಿ 26, 1992, ನನಗಿನ್ನೂ ಚೆನ್ನಾಗಿ ನೆನಪಿದೆ. ಶ್ರೀನಗರದ ಲಾಲ್ಚೌಕ್ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು ಜಮ್ಮುವಿನ ಆ ದೊಡ್ಡ ಮೈದಾನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಾಗ ನರೇಂದ್ರ ಮೋದಿಯವರು ಅತ್ಯಂತ ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ನಾನು ಕಂಡಿದ್ದೆ. ಮೊನ್ನೆ ಸಂಸತ್ತಿನ ಸೆಂಟ್ರಲ್ಹಾಲ್ನಲ್ಲಿ ಅತ್ಯಂತ ಅಪರೂಪದ ಭಾಷಣ ಮಾಡಿದ ನರೇಂದ್ರ ಮೋದಿ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾದಾಗ ನನಗೆ ಆ ಕ್ಷಣ ನೆನಪಿಗೆ ಬಂದಿದ್ದು 22 ವರ್ಷಗಳ ಹಿಂದೆ ಜಮ್ಮುವಿನಲ್ಲಿ ನೋಡಿದ ಅದೇ ನರೇಂದ್ರ ಮೋದಿಯವರು.
ಮತ್ತೊಮ್ಮೆ ನಾನು ಮೋದಿಯವರನ್ನು ಭೇಟಿಯಾಗಿದ್ದು, ಬೆಂಗಳೂರಿನ ಪ್ರಸಿದ್ಧ ಕಲ್ಯಾಣ ಮಂಟಪ ಒಂದರಲ್ಲಿ ನಡೆದ ಬಿಜೆಪಿ ನಾಯಕರೊಬ್ಬರ ಪುತ್ರಿಯ ಮದುವೆ ಸಮಾರಂಭದಲ್ಲಿ. ಕಲ್ಯಾಣ ಮಂಟಪದ ಮೆಟ್ಟಿಲುಗಳನ್ನು ಏರುವಾಗ ನರೇಂದ್ರ ಮೋದಿಯವರು ಕಲ್ಯಾಣ ಮಂಟಪದಲ್ಲಿ ಕಣ್ಣಿಗೆ ಕುಕ್ಕುವಂತಿದ್ದ ಆಡಂಬರ-ವೈಭವವನ್ನು ನೋಡಿ 'ಓಹ್ ಕರ್ನಾಟಕದಲ್ಲಿ ಈ ರೀತಿ ಆಡಂಬರದ ಮದುವೆಗಳು ನಡೆಯತ್ತವೆಯೇ' ಎಂದು ನನ್ನನ್ನು ಕೇಳುತ್ತಾ ತಮ್ಮ ಅಸಹನೆಯನ್ನು ಹೊರಹಾಕಿದ್ದರು. ನಂತರ ಅನೇಕ ಸಮಾರಂಭಗಳಲ್ಲಿ ಅವರನ್ನು ನೋಡುವ, ಅವರೊಂದಿಗೆ ಮಾತನಾಡುವ, ಅವರ ಮಾತುಗಳನ್ನು ಕೇಳುವ ಅವಕಾಶ ದೊರಕಿತ್ತು.
2009ರ ಸೆಪ್ಟಂಬರ್ 29, 30 ಅಕ್ಟೋಬರ್ 1ರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಪುಣ್ಯ ಕ್ಷೇತ್ರವಾದ ಸುತ್ತೂರಿನಲ್ಲಿ ಮೂರು ದಿನಗಳ ಕಾಲ ಸಹ-ಚಿಂತನಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸುಂದರ ಪರಿಸರದಲ್ಲಿ, ಅತ್ಯಂತ ಆರೋಗ್ಯಕರ ವಾತಾವರಣದಲ್ಲಿ ನಮಗೆ ಅತ್ಯುತ್ತಮ ಮಾರ್ಗದರ್ಶನ ಲಭಿಸಿತ್ತು. ನರೇಂದ್ರ ಮೋದಿಯವರು ಮೊದಲನೆ ದಿನ ಪೂರ್ತಿಯಾಗಿ ನಮ್ಮ ಜೊತೆ ಕಳೆದರು. ಅವರು ಒಳ್ಳೆಯ ಆಡಳಿತವೆಂದರೆ ಏನು ಮತ್ತು ಓರ್ವ ಜನಪ್ರತಿನಿಧಿಯ ನಡವಳಿಕೆ ಹೇಗಿರಬೇಕು ಎಂಬುದರ ಕುರಿತು ಅತ್ಯಂತ ಉದ್ಬೋಧಕ ಮಾರ್ಗದರ್ಶನ ನೀಡಿದರು. ಅವರು ಅಂದು ಹೇಳಿದ ಕೆಲವು ಮಾತುಗಳು ಹೀಗಿವೆ.
- ದಿನವಿಡೀ ರಿಬ್ಬನ್ ಕಟ್ ಮಾಡುತ್ತಾ ಕುಳಿತರೆ ಅಭಿವೃದ್ಧಿ ಅಸಾಧ್ಯ. ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ಮೈಮರೆಯಬೇಡಿ.ನಾನು ಇಷ್ಟು ದಿನದ ಮುಖ್ಯಮಂತ್ರಿ ಅವಧಿಯಲ್ಲಿ ಯಾವುದೇ ಸಭೆಯ ಮಧ್ಯೆ ಮೊಬೈಲ್ನಲ್ಲಿ ಮಾತನಾಡಿಲ್ಲ ಅಪವಾದವೆನ್ನುವಂತೆ ಒಮ್ಮೆ ಅಂದಿನ ಪ್ರಧಾನಿ ವಾಜಪೇಯಿ ಅವರ ಕರೆಬಂದಾಗ, ಇನ್ನೊಮ್ಮೆ ಇಂದಿನ ಪ್ರಧಾನಿ ಮನಮೋಹನ್ಸಿಂಗ್ ಅವರ ಕರೆ ಬಂದಾಗ ಮಾತ್ರ ಮೊಬೈಲ್ನಲ್ಲಿ ಮಾತನಾಡಬೇಕಾಯಿತು.
-ಮಂತ್ರಿಗಳಾದ ತಕ್ಷಣ ಯೋಜನೆಗಳನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸುವುದಲ್ಲ. ಆ ಯೋಜನೆ ಯಾವ ಹಂತದಲ್ಲಿದೆ ಹೇಗೆ ಅನುಷ್ಠಾನವಾಗಿದೆ. ಯೋಜನೆಯಲ್ಲಿ ಎಲ್ಲೆಲ್ಲಿ ಲೋಪದೋಷಗಳಾಗಿವೆ ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸುವುದು ಒಬ್ಬ ಸಮರ್ಥ ಮಂತ್ರಿಯ ಕೆಲಸ. ಯೋಜನೆಗಳನ್ನು ಜಾರಿಗೆ ತಂದಾಗಿದೆ. ಅದರ ಉಸಾಬರಿ ನಮಗೇಕೆ ಎಂದುಕೊಳ್ಳಬೇಡಿ. ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಿ.
- ಯೋಜನೆಗಳಿಗೆ ಶಂಕುಸ್ಥಾಪನೆ ಹಾಕುವಾಗ ಇರುವ ಉತ್ಸಾಹವೇ ಅವುಗಳ ಪ್ರಗತಿ ಕುರಿತು, ಪೂರ್ಣಗೊಳಿಸುವುದರ ಕುರಿತೂ ಇರಲಿ.
-ನಮ್ಮಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಶೀಲವೂ ಮುಖ್ಯ. ಅದೇ ರೀತಿ ನಿಮ್ಮ ಕುಟುಂಬದ ಸದಸ್ಯರು, ನಿಮ್ಮ ಕಚೇರಿಯ ಸಿಬ್ಬಂದಿ ನಡವಳಿಕೆಗಳೂ ಅತ್ಯಂತ ಮುಖ್ಯ. ಇವರಲ್ಲಿ ಯಾರಾದರೂ ಒಬ್ಬರೂ ಅಕ್ರಮ ಮಾಡಿದರೆ ನಿಮ್ಮ ವ್ಯಕ್ತಿತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ.
- ಎಂದಿಗೂ ಮಂತ್ರಿಯಾಗಿದ್ದೇನೆಂದು ಬೀಗಬೇಡಿ. ನೀವು ಈ ಸ್ಥಾನಕ್ಕೆ ಬರಲಿಕ್ಕೆ ಅಸಂಖ್ಯಾತ ಜನರ, ಸಾವಿರಾರು ಕಾರ್ಯಕರ್ತರ ತ್ಯಾಗ, ತಪಸ್ಸು ಹಾಗೂ ಪರಿಶ್ರಮ ಅಡಗಿದೆ. ಅವರ ನಿಸ್ವಾರ್ಥದಿಂದ ಕೂಡಿದ ಕೊಡುಗೆ ಎಂದಿಗೂ ನೆನಪಿನಲ್ಲಿರಲಿ.
-ಅಡ್ವಾನಿಯವರ ಲೋಕಸಭಾ ಕ್ಷೇತ್ರದಲ್ಲಿ ಗೌರವ ಪಥ ಎಂಬ ರಸ್ತೆಯನ್ನು ಅಭಿವದ್ಧಿಗೊಳಿಸಿ ಅದರ ಉದ್ಘಾಟನೆಗೆ ಆಡ್ವಾನಿ ಅವರನ್ನು ಕರೆದಾಗ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಸೇರಿದ್ದನ್ನು ನಮಗೆ ತಿಳಿಸುತ್ತಾ ಯಾವುದೇ ಕಾಮಗಾರಿ ಪೂರ್ಣವಾದ ಮೇಲೂ ಜನಕ್ಕೆ ಅದು ಅವರ ಕಾರ್ಯಕ್ರಮ. ಅವರ ಯೋಜನೆ ಎಂದೆನಿಸಬೇಕು ಎಂಬ ಮಹತ್ವದ ವಿಚಾರ ತಿಳಿಸಿದರು.
ಹೀಗೆ ಅನೇಕ ಸಂಗತಿಗಳನ್ನು ಮನದಟ್ಟಾಗುವಂತೆ ಉದಾಹರಣೆಗಳ ಸಮೇತ ನಮಗೆ ತಿಳಿಹೇಳಿದರು. ಆದರೆ ನಮ್ಮ ದುರ್ದೈವ. ನರೇಂದ್ರ ಮೋದಿಯವರು, ಅರುಣ್ ಜೇಟ್ಲಿ ಅವರು ಅಂದು ನಮಗೆ ತಿಳಿಸಿದ ವಿಚಾರದಲ್ಲಿ ಶೇ. 10-20ರಷ್ಟಾದರೂ ಅರ್ಥ ಮಾಡಿಕೊಂಡು ಅಳವಡಿಸಿಕೊಂಡಿದ್ದರೆ ನಮಗೆ ಮುಂದೆ ಎದುರಾದ ಅನಿಷ್ಟ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ. ನಮ್ಮ ಸಹ ಚಿಂತನ ಶಿಬಿರ ಮುಗಿಯುವ ಹಂತದಲ್ಲಿರುವಾಗ ಉತ್ತರ ಕರ್ನಾಟಕದಲ್ಲಿ ಕಂಡರಿಯದ ರೀತಿಯಲ್ಲಿ ಮಳೆಯ ಆರ್ಭಟ, ನೆರೆಯ ಹಾವಳಿ ಬಂದೆರಗಿತು. ಅತ್ತ ಕಡೆ ಗಮನಹರಿಸುವಷ್ಟರಲ್ಲಿ ನಮ್ಮ ಕೆಲವು ಸಚಿವರ ನೇತೃತ್ವದಲ್ಲಿ ಮೊದಲ ಬಂಡಾಯ ಪ್ರಾರಂಭವಾಯಿತು. ವೇದನೆಯಾಗುವುದೆಂದರೆ ಸಹ-ಚಿಂತನ ಶಿಬಿರದಲ್ಲಿ ಭಾಗವಹಿಸಿ ಈ ಪ್ರೇರಣದಾಯಕ ಮಾತುಗಳನ್ನು ಕೇಳುವ ಸೌಭಾಗ್ಯ ಅನುಭವಿಸಿದ ಕೆಲವು ವ್ಯಕ್ತಿಗಳೇ ಈ ಬಂಡಾಯದ ನೇತೃತ್ವವಹಿಸಿ ನಮ್ಮ ಪಾಲಿಗೆ ದೌರ್ಭಾಗ್ಯ ತಂದರು. ಒಟ್ಟಿನಲ್ಲಿ ಈ ಪ್ರೇರಣಾದಾಯಿ ಮಾರ್ಗದರ್ಶನದ ಮಾತುಗಳನ್ನು ನಾವು ಅರಗಿಸಿಕೊಂಡು ಅನುಷ್ಠಾನಕ್ಕೆ ತರಲು, ಪ್ರಕೃತಿಯ ನೆರೆಹಾವಳಿ ಹಾಗೂ ಅತೃಪ್ತರ ಬಂಡಾಯದ ನೆರೆ ಹಾವಳಿ ನಮಗೆ ಅವಕಾಶ ನೀಡಲಿಲ್ಲ. ಈ ವೇದನೆಯನ್ನು ನಾನು ಎಂದಿಗೂ ಮರೆಯಲಾರೆ.
2010ರಲ್ಲಿ ಬೆಂಗಳೂರಿನಲ್ಲಿ ಐಟಿ ಸಮಾವೇಶ ಉದ್ಘಾಟಿಸಲು ನರೇಂದ್ರ ಮೋದಿ ಬಂದಿದ್ದರು. ಅಂದು ಅವರೊಡನೆ ಸುಮಾರು ಗಂಟೆ ಕಾಲ ಮಾತನಾಡುವ ಸದವಕಾಶ ಸಿಕ್ಕಿತು. ನನ್ನೊಂದಿಗೆ ಅಂದು ಹೇಳಿದ ಎರಡು ಮಾತುಗಳು ಸದಾ ನೆನಪಿನಲ್ಲಿರುತ್ತದೆ.
ನಮ್ಮ ಗುಜರಾತ್ ಭಾರತದ ಬೇರಾವುದೇ ರಾಜ್ಯಗಳೊಡನೆ ಸ್ಪರ್ಧೆ ಮಾಡುತ್ತಿಲ್ಲ. ನಾವು ಚೀನಾ ದೇಶದೊಡನೆ ಸ್ಫರ್ಧೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ.
ಎರಡನೆಯದಾಗಿ ಅವರು ಹೇಳಿದ್ದು, ರಾಜ್ಯಗಳ ನಡುವೆ ಗಡಿವಿವಾದಕ್ಕೆ-ಜಲವಿವಾದಕ್ಕೆ ಜಗಳವಾಗಬಾರದು. ಬದಲಿಗೆ ಅಭಿವೃದ್ಧಿ ಕಾರ್ಯಗಳ ಸ್ಫರ್ಧೆ ನಡೆಯಬೇಕು. ಎಲ್ಲ ಕಡೆ ಒಂದು ದಿನದ (ಒನ್ಡೇ) ಕ್ರಿಕೆಟ್ ಮ್ಯಾಚ್ ಕುರಿತು ಬಹಳ ಆಸಕ್ತಿ ಇರುವಾಗ ನಮ್ಮ ಗುಜರಾತ್ನಲ್ಲಿ ಒಂದು ದಿನದ ಆಡಳಿತ (ಕಃಊ ಉಆಘ ಎಕಗಊಖಃಆಃಈಊ) ಕುರಿತು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ನಾಗರಿಕರು ಬೆಳಗ್ಗೆ ಅರ್ಜಿ ಕೊಟ್ಟರೆ ಸಂಜೆ ವೇಳೆಗೆ ಅವರಿಗೆ ಬೇಕಾದ ಫಲಿತಾಂಶ ಕೊಡಬೇಕೆಂಬುದು ನಮ್ಮ ಉದ್ದೇಶ ಎಂದು ಮೋದಿಯವರು ಹೇಳಿದಾಗ ನನ್ನಲ್ಲಿ ಸಕಾಲದ ಕಲ್ಪನೆ ಅಂಕುರವಾಯಿತು.
ಕಳೆದ ವರ್ಷ ಸೆಪ್ಟಂಬರ್ 13ರಂದು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಇಂದು ಪ್ರಧಾನಮಂತ್ರಿಯಾಗುತ್ತಿದ್ದಾರೆ. ಇದೂ ಸಹ ನರೇಂದ್ರ ಮೋದಿಯರವರ ಕತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿ. ಈ ಅವಧಿಯಲ್ಲಿ 3 ಲಕ್ಷ ಕಿಲೋ ಮೀಟರ್ಗೂ ಹೆಚ್ಚು ದೂರ ಸವೆಸಿ, 450ಕ್ಕೂ ಹೆಚ್ಚು ಸಾರ್ವಜನಿಕ ಭಾಷಣಗಳಲ್ಲಿ ಭಾಗವಹಿಸಿ ತಮ್ಮ ಬದ್ಧತೆ ತೋರಿಸಿದ್ದಾರೆ. ಮಣಿಶಂಕರ್ ಅಯ್ಯರ್ ನರೇಂದ್ರ ಮೋದಿ ಅವರು ಚಹಾ ಮಾರುತ್ತಿದ್ದ ಹಿನ್ನೆಲೆಯನ್ನು ಅಪಹಾಸ್ಯ ಮಾಡಿದಾಗ ಅದನ್ನು ತನಗೆ ಬಂದ ಅವಕಾಶವೆಂದು ತಿಳಿದು 'ಚಾಯ್ ಪೇ ಚರ್ಚಾ' ಕಾರ್ಯಕ್ರಮದ ಮೂಲಕ ಇಡೀ ದೇಶದ ಜನತೆಯೊಂದಿಗೆ ಸಂವಾದ ನಡೆಸಿದ್ದು ಮೋದಿಯಲ್ಲಿರುವ ವಿನೂತನ ಚಿಂತನೆಗೆ ಸಾಕ್ಷಿ.
ಒಂದು ಶತಮಾನದ ಹಿಂದೆ ವಾರಾಣಸಿಯಲ್ಲಿ ಹಿಂದೂ ವಿಶ್ವವಿದ್ಯಾನಿಲಯ ಕಟ್ಟಲು ಪಂಡಿತ್ ಮದನ ಮೋಹನ ಮಾಳವೀಯ ಅವರು ಹೈದ್ರಾಬಾದ್ನ ನಿಜಾಮನ ಬಳಿ ಸಹಾಯ ಕೇಳಿದರು. ಆಗ ಆ ದುರಹಂಕಾರದ ದೊರೆ ತಿರಸ್ಕಾರದಿಂದ ತನ್ನ ಚಪ್ಪಲಿಯನ್ನು ಮಾಳವೀಯರ ಕಡೆಗೆ ಒಗೆದಾಗ ಮಾಳವಿಯರು ಅದೇ ಚಪ್ಪಲಿಯನ್ನು ತೆಗೆದುಕೊಂಡು ಹೈದ್ರಾಬಾದ್ನ ಚಾರ್ಮಿನಾರ್ ಬಳಿ ಹರಾಜಿಗೆ ಇಟ್ಟರು. ಕೊನೆಗೆ ತನಗೆ ಅಪಮಾನವಾಗಬಾರದೆಂದು ಹೈದ್ರಾಬಾದ್ ನಿಜಾಮನು ಹೆಚ್ಚಿನ ಬೆಲೆಗೆ ತನ್ನ ಚಪ್ಪಲಿಯನ್ನೇ ಕೊಂಡ ಘಟನೆಯನ್ನು ಈ ಪ್ರಸಂಗ ನೆನಪಿಸುತ್ತದೆ.
ಮೇ 16ರಂದು ದೇಶದ ಜನತೆ ಅದ್ಭುತ ಫಲಿತಾಂಶ ನೀಡಿ ಭಾರತವನ್ನು ಗೆಲ್ಲಿಸಿದ್ದಾರೆ. ದೇಶದ ಭದ್ರ ಭವಿಷ್ಯಕ್ಕಾಗಿ ನರೇಂದ್ರ ಮೋದಿಯವರ ಮೇಲೆ ತಮ್ಮೆಲ್ಲ ಭರವಸೆ ಇಟ್ಟಿದ್ದಾರೆ. ಬುದ್ಧಿಜೀವಿಗಳ ಮಾತನ್ನು ದೇಶದ ಶ್ರಮಜೀವಿಗಳು ಆಲಿಸದೇ ಬಹಳ ದೊಡ್ಡ ಕಾರ್ಯ ಮಾಡಿದ್ದಾರೆ. ಫಲಿತಾಂಶ ಬಂದ ದಿನದಿಂದ ಮೋದಿ ಅವರ ಪ್ರತಿಯೊಂದು ನಡೆ-ನುಡಿ ಅವರ ವ್ಯಕ್ತಿತ್ವವನ್ನು ವಿಕಸನವಾಗುವಂತೆ ಮಾಡಿವೆ. ಬಹಳ ಕಾಲದ ನಂತರ ನಮಗೆ ನುಡಿದಂತೆ ನಡೆಯುವವನು ದೊರಕಿದ್ದಾನೆ ಎಂದು ದೇಶದ ಜನರಿಗೆ ಅನಿಸಿದೆ. ಮೋದಿ ಅವರಿಗೆ ತಮ್ಮೆಲ್ಲ ಭರವಸೆ ಈಡೇರಿಸಲು ಹೆಚ್ಚಿನ ಶಕ್ತಿ, ಆರೋಗ್ಯ ದೊರಕಲಿ ಎಂಬುದು ಈ ದೇಶದ ಕಟ್ಟಕಡೆಯ ಪ್ರಜೆಯ ಹಾರೈಕೆ.
ನುಡಿದಂತೆ ನಡೆದರು
2011ರಲ್ಲಿ ನಮ್ಮ ಮುಖ್ಯಮಂತ್ರಿಗಳೊಂದಿಗೆ ಗುಜ ರಾತ್ ರಾಜ್ಯ ಸ್ಥಾಪನೆಯ 50ನೇ ವರ್ಷದ ಸಮಾರಂಭಕ್ಕೆ (ಸ್ವರ್ಣಂ ಗುಜರಾತ್) ಹೋಗುವ ಅವಕಾಶ ಸಿಕ್ಕಿತು. ಅಲ್ಲಿನ ಆಡಳಿತದ ಅಚ್ಚುಕಟ್ಟು ನೋಡಿ ಸಂತೋಷವಾಯಿತು. ಅಂದು ಈ ಸಮಾರಂಭದ ನೆನಪಿಗಾಗಿ ಸುಮಾರು 100 ಕೋಟಿ ವೆಚ್ಚದ ಗಾಂಧಿಭವನ ಎಂಬ ಹೆಸರಿನ ಬೃಹತ್ ಸಮಾವೇಶ ಕೇಂದ್ರದ ಕಟ್ಟಡಕ್ಕೆ ಆಡ್ವಾನಿ ಅವರಿಂದ ಶಂಕುಸ್ಥಾಪನೆ ಮಾಡಿಸಿದರು. ಆಶ್ಚರ್ಯವೆಂದರೆ ಆ ದಿನವೇ ಈ ಕಟ್ಟಡದ ಉದ್ಘಾಟನೆಯ ದಿನವನ್ನೂ ನರೇಂದ್ರ ಮೋದಿಯವರು ಘೋಷಿಸಿಬಿಟ್ಟರು. ಮುಂದಿನ ಗುಜರಾತ್ ರಾಜ್ಯೋತ್ಸವದ ದಿನ ಈ ಭವನವನ್ನು ಆಡ್ವಾನಿಯವರೇ ಬಂದು ಉದ್ಘಾಟಿಸುತ್ತಾರೆ ಎಂದು ಘೋಷಿಸಿದರು. ಆ ಘೋಷಣೆಯನ್ನು ಚಾಚೂತಪ್ಪದೇ ಈಡೇರಿಸಿದರು ಎಂಬುದು ಆಡಳಿತದಲ್ಲಿರುವ ಎಲ್ಲರೂ ಗಮನಿಸಬೇಕಾದ ಸಂಗತಿ.
- ಎಸ್. ಸುರೇಶ್ಕುಮಾರ್, ಮಾಜಿ ಸಚಿವ
nimmasuresh.2009@gmail.com