ಭರವಸೆಯ ಶಿಖರ ಧ್ವಂಸ ಮಾಡದಿರಿ
ಭಾರತದ 14ನೇ ಪ್ರಧಾನಿಯಾದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು...
ಭಾರತದ 14ನೇ ಪ್ರಧಾನಿಯಾದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಗಳಿಸಿಕೊಟ್ಟು ಇತಿಹಾಸ ಬರೆದಿದ್ದಕ್ಕೆ ಇನ್ನಷ್ಟು. ಇಂತಹುದೊಂದು ಸಾಧನೆಯನ್ನು 1984ರಿಂದ ಈವರೆಗೆ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಯಾವೊಬ್ಬ ನಾಯಕನಿಗಾಗಲೀ, ಯಾವುದೇ ಪಕ್ಷಕ್ಕಾಗಲೀ ಸಾಧಿಸಲು ಆಗಿರಲಿಲ್ಲ. ಆದರೆ ನೀವು ಊಹಿಸಲಸಾಧ್ಯ ಸಾಧನೆ ಮಾಡಿದ್ದೀರಿ: ಕೇಂದ್ರದಲ್ಲಿ ಮೈತ್ರಿ ಸರ್ಕಾರದ ಯುಗಾಂತ್ಯಗೊಳಿಸಿದ್ದೀರಿ. ಹೀಗಿದ್ದಾಗ್ಯೂ ಎನ್ಡಿಎ ಸರ್ಕಾರದ ನೇತೃತ್ವ ವಹಿಸಲು ನೀವು ನಿರ್ಧರಿಸಿರುವುದು ವಿಶ್ವಸನೀಯ ಹೆಜ್ಜೆ. ಸಣ್ಣ, ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದ ಆಡಳಿತದಲ್ಲಿ ಭಾಗಿಯಾದಾಗಲೇ ದೇಶದ ಪ್ರಜಾಪ್ರಭುತ್ವ ಮತ್ತು ಕೇಂದ್ರ-ರಾಜ್ಯ ಸಂಬಂಧ ಬಲಿಷ್ಠಗೊಳ್ಳಲು ಸಾಧ್ಯ.
ಜನತೆಯ ಭರವಸೆ, ನಿರೀಕ್ಷೆಗಳಂತೆಯೇ ನಿಮ್ಮ ಚುನಾವಣಾ ಸಾಧನೆಯೂ ಎವರೆಸ್ಟ್ ಶಿಖರದಷ್ಟೇ ಎತ್ತರದ್ದು. ಇದೊಂದು ಉತ್ತಮ ಬೆಳವಣಿಗೆ. ಯಾವಾಗಲೂ ಕೆಳಮಟ್ಟದ ವಿಶ್ವಾಸವನ್ನು ಹೊಂದಿರುವವರು, ಕೆಳಮಟ್ಟದ ಸಾಧನೆಯತ್ತಲೇ ಗಮನಕೊಡುತ್ತಾರೆ. ಸ್ವಾತಂತ್ರ್ಯಾನಂತರ ಭಾರತದ ಸಾಧನೆಯು ಪರಿಣಾಮಕಾರಿಯಾಗಿದೆ ನಿಜ. ನಮ್ಮ ಯುವಜನರು, ವಿಶೇಷವಾಗಿ ಅಭಿವೃದ್ಧಿಯಾಗದ ಪ್ರದೇಶ ಮತ್ತು ಸಮಾಜದ ತುಳಿತಕ್ಕೊಳಗಾದ ವರ್ಗಕ್ಕೆ ಸೇರಿದವರು ಉಕ್ಕುತ್ತಿರುವ ತಮ್ಮ ಅಭಿಲಾಶೆಗಳನ್ನು ಪೂರೈಸುವ ಅವಕಾಶಗಳತ್ತ ಎದುರುನೋಡುತ್ತಿದ್ದಾರೆ. ಅವರು ತಾಳ್ಮೆಕಳೆದುಕೊಂಡಿದ್ದಾರೆ. ಇದನ್ನು ನೀವು ಅರ್ಥಮಾಡಿಕೊಂಡಷ್ಟು ಚೆನ್ನಾಗಿ ಬೇರೆ ಯಾವ ರಾಜಕೀಯ ನಾಯಕನೂ ಅರ್ಥಮಾಡಿಕೊಳ್ಳಲಿಲ್ಲ. ಆದರೆ, ಈ ವಾಸ್ತವವನ್ನು ಅರಿತುಕೊಂಡರಷ್ಟೇ ಸಾಲದಾಗಿತ್ತು. ಭಾರಿ ಸಂಖ್ಯೆಯ ಮೊದಲ ಬಾರಿಯ ಮತದಾರರನ್ನು, ಹಳೆಯ ಮತದಾರರನ್ನು ನೀವೊಬ್ಬರೇ ಒಲಿಸಿಕೊಳ್ಳಬೇಕಾಗಿತ್ತು. ಏಕೆಂದರೆ, 'ಅಭಿವೃದ್ಧಿ ಮತ್ತು ಉತ್ತಮ ಆಡಳಿತ'ವೇ ನಿಮ್ಮ ಸ್ಲೋಗನ್. ಗುಜರಾತ್ನ ನಿಮ್ಮ ಟ್ರ್ಯಾಕ್ ರೆಕಾರ್ಡ್ ಕೂಡ ಅದಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಇದು ಭಾರತವನ್ನು ಸಾಧನೆಯ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿತ್ತು. ರಾಜಕೀಯದಲ್ಲಿ ಸಾಧನೆಯು ಆಶ್ವಾಸನೆಗಿಂತ ಹರಿತವಾದದ್ದು. ಇಲ್ಲೇ ನೀವು ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಸ್ಕೋರ್ ಪಡೆದಿದ್ದು. ಜನರು ನಿಮ್ಮಲ್ಲೊಬ್ಬ ಆರ್ಥಿಕಾಭಿವೃದ್ಧಿ ಮಾಡುವ, ಉದ್ಯೋಗಾವಕಾಶ ಸೃಷ್ಟಿಸುವ, ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸುವ, ಭ್ರಷ್ಟಾಚಾರ ನಿಗ್ರಹಿಸುವ 'ಬಲಿಷ್ಠ ನಾಯಕ'ನನ್ನು ಕಂಡರು. ಇದಕ್ಕೆ ಬಿಜೆಪಿಯ ಮತ ಹಂಚಿಕೆಯಲ್ಲಿ ಈ ಬಾರಿ ಆದ ಏರಿಕೆ (2009ರಲ್ಲಿದ್ದ ಶೇ.18.5ರಿಂದ ಶೇ.31.4)ಯೇ ಅಲ್ಲಗಳೆಯಲಾಗದ ಸಾಕ್ಷಿ.
ಅಧಿಕಾರಯುತ ಶೈಲಿಯಲ್ಲಿ ನೀವು ನಡೆಸಿದ ಪ್ರಚಾರ ಮತ್ತು ಅದಕ್ಕೆ ದೊರಕಿದ ಪ್ರತಿಫಲವು ಮತ್ತೊಂದು ನಿರಾಕರಿಸಲಾಗದ ಸತ್ಯವನ್ನು ತೆರೆದಿಟ್ಟಿದೆ: ಅದೇನೆಂದರೆ, ಈ ಚುನಾವಣೆಯು ಜನ ನಿಮಗೆ ಕೊಟ್ಟ ತೀರ್ಪು, ಅಂದರೆ ನರೇಂದ್ರ ಮೋದಿಗೆ; ಬಿಜೆಪಿಗಲ್ಲ; ಸಂಘಪರಿವಾರಕ್ಕೂ ಅಲ್ಲ. ಇದನ್ನು ಸಂಘಪರಿವಾರವೂ ಅರ್ಥಮಾಡಿಕೊಳ್ಳುತ್ತದೆ ಎಂದು ನಂಬಿದ್ದೇನೆ. ಆರೆಸ್ಸೆಸ್ ಸೇರಿದಂತೆ ಎಲ್ಲ ದೇಶಭಕ್ತ ಮತ್ತು ಸೇವಾಕೇಂದ್ರಿತ ಸಂಸ್ಥೆಗಳ ಸಹಕಾರವನ್ನು ತಾರತಮ್ಯವಿಲ್ಲದೇ ಪಡೆದುಕೊಳ್ಳುವುದು ಒಳ್ಳೆಯ ಬೆಳವಣಿಗೆ. ಆದರೆ, ಆರೆಸ್ಸೆಸ್ನ ಮುಷ್ಟಿಯಿಂದ ಮುಕ್ತವಾಗಿ ಸರ್ಕಾರ ನಡೆಸಲು ನೀವು ಬದ್ಧವಾಗಿದ್ದೀರೇ ಎಂಬುದರ ಮೇಲೆ ನಿಮ್ಮ ನಾಯಕತ್ವದ ಪರೀಕ್ಷೆ ನಡೆಯಲಿದೆ.
ಈ ವಿಚಾರವು ನನ್ನಲ್ಲಿದ್ದ, ಈಗಲೂ ಸ್ವಲ್ಪಮಟ್ಟಿಗೆ ಇರುವ ಕೆಲವೊಂದು ಸಂಶಯಗಳನ್ನು ನೆನಪಿಸುತ್ತದೆ- ಅದು ನಿಮ್ಮ ನಾಯಕತ್ವ ಮತ್ತು ನೀವು ನೇತೃತ್ವ ವಹಿಸಿರುವ ಪಕ್ಷದ ಬಗ್ಗೆ. (ನಾನೂ ಈ ಪಕ್ಷದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದೆ). ಒಂದು ಹಂತದಲ್ಲಿ ಈ ಸಂಶಯಗಳು ಈಗೇನೂ ಅಲ್ಲ. ಏಕೆಂದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಮ್ಮೆ ಬಹುಸಂಖ್ಯೆಯ ಜನರು ತಮ್ಮ ತೀರ್ಪು ನೀಡಿದ ಬಳಿಕ, ಅದನ್ನು ಎಲ್ಲರೂ ಸ್ವೀಕರಿಸಲೇಬೇಕು. ಆ ಪಕ್ಷಕ್ಕೆ ಮತ ಹಾಕದ ನನ್ನಂಥವರೂ ಕೂಡ. ನಾನಿದನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಒಬ್ಬ ಉತ್ತಮ ನಾಯಕನು ಟೀಕೆಗಳನ್ನು ನಿರ್ಲಕ್ಷಿಸಲಾರ. ತಮ್ಮ ಸುತ್ತಮುತ್ತಲೂ ಹೊಗಳುಭಟ್ಟರನ್ನು ತಾವೇ ಬಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಹಾನಿ ಅನುಭವಿಸಿದ್ದಾರೆ. ನಿಮ್ಮ ನಾಯಕತ್ವದ ಬಗ್ಗೆ ನನಗಿದ್ದ ಅನುಮಾನಗಳನ್ನು ಪ್ರಸ್ತಾಪಿಸಲು ಮತ್ತೊಂದು ಕಾರಣವಿದೆ. ಒಂದು ವರ್ಷದ ಹಿಂದಷ್ಟೇ ನಿಮ್ಮನ್ನು 'ನಿರಂಕುಶ' ವ್ಯಕ್ತಿ ಎಂದು ಕರೆದಿದ್ದ ನಾನು ಈಗ ನೀವು ಗೆಲವು ಸಾಧಿಸಿದೊಡನೆ ನಿಮ್ಮನ್ನು ಹೊಗಳಿದರೆ ನನ್ನ ಕಣ್ಣಿಗೇ ನಾನು ಆಷಾಢಭೂತಿ ಹಾಗೂ ಅಂಜುಬುರುಕ ಪಲಾಯನವಾದಿಯಂತೆ ಕಾಣುತ್ತೇನೆ. ನನ್ನ ಅಭಿಪ್ರಾಯವು ನಿಂತಿರುವುದು, ನೀವು ಕಳೆದೊಂದು ದಶಕದಲ್ಲಿ ಗುಜರಾತ್ನಲ್ಲಿ ಸರ್ಕಾರವನ್ನು ಹಾಗೂ ಪಕ್ಷದ ನೇತೃತ್ವ ವಹಿಸಿದ ರೀತಿಯ ಮೇಲೆ. ಭಾರತದ ಪ್ರಧಾನಿಯು ಒಬ್ಬ ಬಲಿಷ್ಠ ನಾಯಕನಾದರೆ ಸಾಲದು, ಅವರು ತಮ್ಮ ಬದ್ಧತೆ ಹಾಗೂ ಕ್ರಿಯೆ ಎರಡರಲ್ಲೂ ಒಬ್ಬ ಪ್ರಜಾಪ್ರಭುತ್ವವಾದಿಯಾಗಿರಬೇಕು ಎನ್ನುವುದು ನನ್ನ ನಂಬಿಕೆ. ಒಂದು ಪಕ್ಷ ಅಥವಾ ಒಬ್ಬ ನಾಯಕನ ಲಾಭಕ್ಕಾಗಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಕಡೆಗಣಿಸಿದರೆ, ಅದರ ಕೇಡು ಇಡೀ ಸಮಾಜಕ್ಕೇ ವ್ಯಾಪಿಸುತ್ತದೆ. ನಿಮ್ಮಂತಹ ಒಬ್ಬ ನಿರ್ಣಾಯಕ ನಾಯಕ ಭಾರತದ ಮೂಲಸೌಕರ್ಯವು ಸುಧಾರಣೆಯಾಗಲು, ಆರ್ಥಿಕತೆಯು ಚೇತರಿಸಲು ಖಂಡಿತಾ ಕಾರಣವಾಗುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ನೀವು ನಿರಂಕುಶ ಅಧಿಕಾರಿಯಾಗಿಯೇ ಉಳಿದರೆ, 5 ವರ್ಷಗಳಲ್ಲಿ ಬರುವ ಚುನಾವಣೆಗೂ ಮೀರಿದ ಪ್ರಜಾಸತ್ತೆಯು ದೀರ್ಘಕಾಲದಲ್ಲಿ ಸಾಮಾಜಿಕ ಅವ್ಯವಸ್ಥೆ ಹಾಗೂ ಸಾಂಸ್ಥಿಕ ನಾಶಕ್ಕೆ ದಾರಿ ಮಾಡಿಕೊಡುತ್ತದೆ.
ಹೆಚ್ಚಿನ ಭಾರತೀಯರಲ್ಲಿ ಇನ್ನೊಂದು ಪ್ರಮುಖ ಸಂಶಯವಿದೆ. ಜಾತ್ಯತೀತತೆ ಬಗೆಗಿನ ನಿಮ್ಮ ಬದ್ಧತೆ ಬಗ್ಗೆ ಅವರಿಗೆ ಅನುಮಾನವಿದೆ. ಒಂದೆಡೆ ಭಾರತದ ಸಂವಿಧಾನವನ್ನು ಒಂದು ಪವಿತ್ರ ಗ್ರಂಥವೆಂದು ಪರಿಗಣಿಸಿದ್ದೇನೆ ಎಂದು ನೀವು ಪದೇ ಪದೆ ಹೇಳುತ್ತಾ ಬಂದಿದ್ದೀರಿ. ಇದು ಒಳ್ಳೆಯ ಆಶಯವೇ. ಆದರೆ ಮತ್ತೊಂದೆಡೆ, ಸಂವಿಧಾನದ ಪ್ರಮುಖ ಅಂಶವಾದ ಜಾತ್ಯತೀತತೆ ಬಗ್ಗೆ ನೀವು ಮೌನ ವಹಿಸಿದ್ದೀರಿ. ನಿಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಜಾತ್ಯತೀತತೆಯನ್ನು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ನಿಮ್ಮ ಭಾವನೆಯಾಗಿದ್ದರೆ ಅದು ಸರಿ. ಅಂತೆಯೇ, ಬಿಜೆಪಿ ಕೂಡ ರಾಜಕೀಯ ಲಾಭಕ್ಕಾಗಿ ರಾಜಕೀಯ ಧ್ರುವೀಕರಣ ಹಾಗೂ ಜಾತ್ಯತೀತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದೂ ಸತ್ಯ. ಇವುಗಳಿಗೆ ಇತ್ತೀಚೆಗಷ್ಟೇ ಮುಗಿದ ಚುನಾವಣೆಯೂ ಸಾಕ್ಷಿ. ಕಾಶಿಯಲ್ಲಿ ಗಂಗಾ ಆರತಿ ಮಾಡುತ್ತಿರುವಾಗ ಜ್ಞಾನವ್ಯಾಪಿ ಮಸೀದಿಗೆ ಭೇಟಿ ನೀಡುವುದಾಗಲೀ, ಮುಸ್ಲಿಮರ ಟೋಪಿ ಧರಿಸುವುದಾಗಲೀ ಜಾತ್ಯತೀತತೆಯ ಪ್ರತೀಕವಲ್ಲ ಎಂಬುದನ್ನು ನಾನೂ ಒಪ್ಪುತ್ತೇನೆ. ನೈಜ ಪರೀಕ್ಷೆಯಿರುವುದು ನಿಮ್ಮ ಪ್ರಜ್ಞೆಯಲ್ಲಿ. ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎನ್ನುವುದು ಆತನ ಕ್ರಿಯೆಯಲ್ಲಿ ಪ್ರತಿಬಿಂಬಿಸುತ್ತದೆ. ದೇಶದ ಪ್ರಧಾನಿಯಾದ ನೀವು ಎಲ್ಲರ ನಂಬಿಕೆಯನ್ನೂ ಸಮಾನವಾಗಿ ಗೌರವಿಸಬೇಕು, ಅದೇ ಜಾತ್ಯತೀತತೆ ಎಂದು ಜನ ತಿಳಿದುಕೊಂಡಿದ್ದಾರೆ. ನಿಮ್ಮ ಆಡಳಿತವು ಜಾತ್ಯತೀತವಾಗಿದ್ದರೆ, ನೀವು ಖಂಡಿತಾ ಯಶಸ್ಸಿನ ತುತ್ತತುದಿಗೇರುತ್ತೀರಿ ಹಾಗೂ ಭಾರತದ ವೈಭವವನ್ನು ಎತ್ತರಿಸುತ್ತೀರಿ. ಜಾತ್ಯತೀತತೆ ಜತೆ ರಾಜಿ ಮಾಡಿಕೊಂಡಿದ್ದೇ ಆದಲ್ಲಿ, ಅಲ್ಲಿಂದಲೇ ನಿಮ್ಮ ಕುಸಿತ ಶುರುವಾಗುತ್ತದೆ. ಇದು ಖಚಿತ.
ಪ್ರೀತಿಯ ನರೇಂದ್ರಭಾಯಿ, ಭಾರತದ ಜನರು ನಿಮ್ಮ ಹೆಗಲಿನ ಮೇಲೆ ಭಾರಿ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಇದನ್ನು ನೀವು ವಿವೇಕ, ತಿಳಿವಳಿಕೆ ಹಾಗೂ ದೂರದೃಷ್ಟಿಯಿಂದ ನಿರ್ವಹಿಸಿದ್ದೇ ಆದಲ್ಲಿ, ಭಾರತಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ ಮಹಾನ್ ನಾಯಕ ಎಂದು ಇತಿಹಾಸವು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ. ಟಿ
-ಸುಧೀಂದ್ರ ಕುಲಕರ್ಣಿ