ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿಯನ್ನು ಒಪ್ಪಿಕೊಳ್ಳದಿರುವುದು ಬುದ್ಧಿ ಜೀವಿಗಳಿಗೆ ಭೂಷಣ ಅಲ್ಲ

Mainashree
Updated On : 26 May 2014, 12:35 pm

ನಾನು ಯಾವಾಗಲೂ ಕಬ್ಬನ್ ಪಾರ್ಕ್‌ನಲ್ಲಿ ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿರುತ್ತೇನೆ. ಆಗ ಸಾಕಷ್ಟು ಗುಜರಾತಿ, ರಾಜಸ್ಥಾನಿ ಮಿತ್ರರು ಸಿಗುತ್ತಾರೆ. ಅವರ್ಯಾರೂ ಒಂದು ತಿಂಗಳಿನಿಂದ ಸರಿಯಾಗಿ ವಾಕಿಂಗ್‌ಗೆ ಬಂದಿಲ್ಲ. ಯಾಕೆಂದು ಕೇಳಿದಾಗ, ಮೋದಿಯವರನ್ನು ಗೆಲ್ಲಿಸಲು ಪಟ್ಟು ಹಿಡಿದು ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಯಿತು. ಇಂದು ಅವರ ಮುಖಗಳಲ್ಲಿ ಕುಣಿಯುತ್ತಿರುವ ಸಂತೋಷ, ಅಭಿಮಾನ ನೋಡಿದರೆ ಗೊತ್ತಾಗುತ್ತದೆ- ಮೋದಿಯವರನ್ನು ಅವರೆಷ್ಟು ಪ್ರೀತಿಸುತ್ತಾರೆ ಎಂದು.
ನಾನು ಕಾಲೇಜುಗಳಲ್ಲಿ ಭಾಷಣ ನೀಡಿದರೆ ಈ ಕೆಳಗಿನ ಕತೆ ಹೇಳುವುದುಂಟು. ಒಂದು ದೊಡ್ಡ ಹೊಂಡದಲ್ಲಿ 125 ಕೋಟಿ ಕಪ್ಪೆಗಳು ವಾಸಿಸುತ್ತಿದ್ದವು. ಯಾವಾಗಲೂ ಗಲಾಟೆ, ಪರಸ್ಪರ ಕಾಲೆಳೆಯುವುದು ಮಾಡುತ್ತಿದ್ದವು. ಇದನ್ನು ನೋಡಿ ರೋಸಿ ಹೋದ ಹಿರಿಯ ಕಪ್ಪೆ, ಭಗವಂತನನ್ನು ಕುರಿತು ತಪಸ್ಸು ಮಾಡಿತು. ದೇವರು ಪ್ರತ್ಯಕ್ಷನಾಗಿ ವರ ಕೇಳಲು ಹೇಳಿದ. ಆಗ ಹಿರಿಯ ಕಪ್ಪೆ, ಇತರ ಕಪ್ಪೆಗಳನ್ನು ನಿಯಂತ್ರಣದಲ್ಲಿಡಲು ಒಂದು ಶಕ್ತಿಯನ್ನು ಕೇಳಿತು. ದೇವರು ಒಂದು ಕಲ್ಲಿನ ವಿಗ್ರಹವನ್ನು ಕಳಿಸಿದ. ಅದಕ್ಕೆ ಸ್ಪಂದನವೇ ಇರಲಿಲ್ಲ. ಕಪ್ಪೆಗಳು ಮೊದಲು ಅದನ್ನು ನೋಡಿ 'ಎಂಥ ಭಾರಿ ಕಲ್ಲಿನ ವಿಗ್ರಹ' ಎಂದು ಗಪ್‌ಚುಪ್ ಆದವು. ಆದರೆ, ಅದಕ್ಕೆ ಚಲನೆಯೇ ಇಲ್ಲದಿದ್ದದ್ದು ನೋಡಿ ಅದರ ತಲೆ ಮೇಲೆ ಹತ್ತಿ ಕುಣಿಯಲಾರಂಭಿಸಿದವು. ಇದರಿಂದ ಗದ್ದಲ ಇನ್ನಷ್ಟು ಹೆಚ್ಚಾಯಿತು. ಹಿರಿಯ ಕಪ್ಪೆ ಮತ್ತೆ ದೇವರನ್ನು ಪ್ರಾರ್ಥಿಸಿತು. ಈ ಸಲ ದೇವರು ಜೀವ ಇರುವ ಮೊಸಳೆಯೊಂದನ್ನು ಹೊಂಡಕ್ಕೆ ಕಳಿಸಿಕೊಟ್ಟ. ಕಲ್ಲಿನ ವಿಗ್ರಹದಂತೆಯೇ ಇದೂ ಎಂದು ಭಾವಿಸಿದ ಕಪ್ಪೆಗಳು ಮೊಸಳೆ ಮೇಲೆ ಏರಲು ಹೋದವು. ಮೊಸಳೆ ಅವುಗಳನ್ನು ತಿಂದು ಪಾಠ ಕಲಿಸಿತು. ಇತರ ಕಪ್ಪೆಗಳು ತಹಬಂದಿಗೆ ಬಂದವು. ಕತೆಯ ಅಂತರಾರ್ಥ ನಿಮಗೆ ಗೊತ್ತಾಗಿರಬಹುದು. ಹೊಂಡವೇ ಭಾರತ, ವಿಗ್ರಹ ಮನಮೋಹನ್ ಸಿಂಗ್, ಮೊಸಳೆ ಮೋದಿ.
ಈ ಸಲದ ಚುನಾವಣೆ ಎಲ್ಲ ರೀತಿಯಿಂದಲೂ ನಿರ್ಣಾಯಕ ಆಗಿತ್ತು. ಕಾಂಗ್ರೆಸ್ ಚೆನ್ನಾಗಿ ಆಡಳಿತ ನಡೆಸಿದ್ದರೆ ಮೋದಿ ಆರಿಸಿ ಬರುತ್ತಿರಲಿಲ್ಲ. ಕಾಂಗ್ರೆಸ್ ತಾನೇ ತೋಡಿಕೊಂಡ ಕುಣಿಗೆ ತಾನೇ ಬಿದ್ದಿದೆ. ಇದು ಅದರ ಸ್ವಯಂಕೃತ ಅಪರಾಧ. ಕೋಟ್ಯಂತರ ರುಪಾಯಿಗಳ ಹಗರಣ ನಡೆಸಿದ ರಾಬರ್ಟ್ ವಾದ್ರಾನನ್ನು ಆತನ ಪತ್ನಿ ಪ್ರಿಯಾಂಕಾ ರಕ್ಷಿಸುತ್ತಾಳೆ. ಆತನ ತಂಟೆಗೆ ಬಂದರೆ ಹುಷಾರ್ ಎಂದು ಅಬ್ಬರಿಸುತ್ತಾಳೆ ಎಂದರೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಂಗ್ರೆಸ್ ಅದೆಷ್ಟರ ಮಟ್ಟಿಗೆ ಗಾಳಿಗೆ ತೂರಿತ್ತು ಎಂಬುದನ್ನು ಊಹಿಸಬಹುದು.
ಮೋದಿ ಗೆಲವು ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಸಾಧನೆ. ಮೋದಿ ಅತ್ಯಂತ ಶೋಷಿತ, ಅತ್ಯಂತ ತಳಸಮುದಾಯದಿಂದ ಬಂದವರು. ಅವರು ಹಿಂದುಳಿದವರ ಸಮಸ್ಯೆಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಪಾರ್ಲಿಮೆಂಟ್ ಅಖಾಡ ಪ್ರವೇಶಿಸುತ್ತಿರುವ ಮೋದಿ ಆರಂಭದಲ್ಲಿಯೇ ಒಳ್ಳೆಯ ಸೂಚನೆಗಳನ್ನು ನೀಡಿದ್ದಾರೆ. ಸಾರ್ಕ್ ರಾಷ್ಟ್ರಗಳ ಪ್ರಧಾನಿಗಳನ್ನು ಪ್ರಮಾಣವಚನ ಸ್ವೀಕಾರಕ್ಕೆ ಆಹ್ವಾನಿಸಿದ್ದು ಒಳ್ಳೆಯ ಬೆಳವಣಿಗೆ. ವೀಸಾ ವಿಚಾರದಲ್ಲಿ ತಕರಾರು ಎತ್ತಿದ್ದ ಅಮೆರಿಕ ಕೂಡ ಅವರನ್ನು ಅಭಿನಂದಿಸಿದೆ. ಎಲ್ಲ ದೇಶಗಳೂ ಅವರನ್ನು ಅಭಿನಂದಿಸಿವೆ. ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆ ಎಂದು ಇದರ ಅರ್ಥ.
ಡೆಮೋಕ್ರಸಿಯ ನಿರ್ಣಯವನ್ನು ಯಾರೇ ಆಗಲಿ ಗೌರವಿಸಬೇಕು. ಆರಿಸಿ ಬಂದವರನ್ನು ನಿರಾಕರಿಸುವುದು ಸರಿಯಲ್ಲ. ಆದರೂ ಬುದ್ಧಿಜೀವಿಗಳ ತಕರಾರು ಮುಗಿದಿಲ್ಲ. ದೇಶದ ಜನಸಂಖ್ಯೆಯ ಕೇವಲ ಶೇ.2ರಷ್ಟಿರುವ ಬುದ್ಧಿಜೀವಿಗಳು ಮೋದಿಯನ್ನು ಕ್ರೂರಾತಿಕ್ರೂರ ವಿಶೇಷಣಗಳಿಂದ ಬಿಂಬಿಸಿದ್ದರು. ಅವರನ್ನು ಫ್ಯಾಸಿಸ್ಟ್, ನರಹಂತಕ, ಕೋಮುವಾದಿ ಎಂದೆಲ್ಲ ಕರೆದಿದ್ದರು. ತಾವೇ ಕೋರ್ಟ್ ಅಂತ ಭಾವಿಸಿ ತಾವೇ ತೀರ್ಪನ್ನೂ ಕೊಟ್ಟಿದ್ದರು. ಭಾಷೆಯ ಸೌಜನ್ಯವನ್ನು ನಾಶ ಮಾಡಿದರು. ಇದು ಬುದ್ಧಿಜೀವಿಗಳಿಗೆ ಭೂಷಣ ಅಲ್ಲ. ಅವರು ಪ್ರಜಾಸತ್ತೆಯ ನಿರ್ಣಯವನ್ನು ಒಪ್ಪಿಕೊಳ್ಳಬೇಕು.
ಮೋದಿ ನಮ್ಮ ದೇಶದ ದೌರ್ಬಲ್ಯಗಳನ್ನು ರಿಪೇರಿ ಮಾಡಬಲ್ಲರು. ರಾಜಕಾರಣಿಗಳ ವೇಷದಲ್ಲಿರುವ ದರೋಡೆಕೋರರಿಂದ ತುಂಬಿದ ನಮ್ಮಂಥ ದೇಶಕ್ಕೆ ಅವರು ಸೂಕ್ತ ರೀತಿಯ ಆಯ್ಕೆ. ದೇಶಕ್ಕೆ ಶಕ್ತಿ ನೀಡುವಂತಹ ಅಗತ್ಯ ಮಸೂದೆಗಳನ್ನು ಜಾರಿಗೆ ತರಲು ಅವರಿಗೆ ತೊಡಕಾಗದು. ವಿದೇಶಿ ಬ್ಯಾಂಕ್‌ಗಳಲ್ಲಿ ಸೇರಿರುವ ದೇಶದ ಕೋಟ್ಯಂತರ ಕಪ್ಪು ಹಣವನ್ನು ಹಿಂದೆ ತರಬಹುದು. ಹೀಗೆ ಅವರ ಬಗ್ಗೆ ಅನೇಕ ನಿರೀಕ್ಷೆಗಳಿವೆ.
ಮೋದಿ ಆಗಮನದಿಂದ ದೇಶದ 125 ಕೋಟಿ ಮಂದಿಯೂ ಸಂತೋಷದಲ್ಲಿದ್ದಾರೆ. ಕಾಂಗ್ರೆಸ್ ಅಲ್ಲಾಡಿ ಹೋಗಿದೆ. ವಿಪಕ್ಷವೇ ಇಲ್ಲದಂಥ ಪರಿಸ್ಥಿತಿ ಬಂದಿದೆ. ಇಂತ ಪರಿಸ್ಥಿತಿ ಆರೋಗ್ಯಕರ ಡೆಮೋಕ್ರಸಿಯಲ್ಲಿ ಬರಬಾರದು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಶಕ್ತಿಯುತ ವಿರೋಧಿಗಳೂ ಅಗತ್ಯ. ಇನ್ನು ಮೋದಿ ಆಡಳಿತದಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ತಲೆದೋರಬಹುದು ಎಂಬ ಆತಂಕಗಳು ಅನಗತ್ಯ ಎಂದು ನನಗೆ ಅನಿಸುತ್ತದೆ. ಮೋದಿ ಅದರ ಕೈಗೊಂಬೆ ಆಗಲಾರರು. ಯಾರನ್ನು ಎಲ್ಲಿಡಬೇಕೋ ಅಲ್ಲಿಡುವ ಚಾಕಚಕ್ಯತೆ ಸಿದ್ಧಿಸಿದೆ.

- ಕುಂ. ವೀರಭದ್ರಪ್ಪ
ಕತೆಗಾರ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement