ಕಲಿಕಾ ಮಾಧ್ಯಮ: ಯುನೆಸ್ಕೊ ವರದಿ ಹೇಳಿದ್ದೇನು?
ಕಲಿಕಾ ಮಾಧ್ಯಮದ ಆಯ್ಕೆಯ ವಿಷಯವಾಗಿ ಸುಪ್ರೀಮ್ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಲವಾರು ಚರ್ಚೆಗಳು ಏರ್ಪಡುತ್ತಿವೆ. ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವುದೇ ಒಳಿತು ಎಂದು ಹೇಳುವವರಿದ್ದಾರೆ. ಅಂತೆಯೇ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಚೆನ್ನಾಗಿ ಇಂಗ್ಲಿಷ್ ಕಲಿಯಬಹುದು, ಹಾಗಾಗಿ ಇಂಗ್ಲಿಷ್ ಮಾಧ್ಯಮ ಉತ್ತಮ ಎಂದು ಇನ್ನು ಕೆಲವರು ಹೇಳುತ್ತಾರೆ. ಈ ವಾದ-ಪ್ರತಿವಾದಗಳ ನಡುವೆ ವೈಜ್ಞಾನಿಕ ದೃಷ್ಟಿಕೋನ ಮರೆಯಾದಂತಿದೆ.
ಒಂದು ಮಗುವಿನ ಕಲಿಕೆ ಯಾವ ನುಡಿಯಲ್ಲಿ ನಡೆದರೆ ಒಳ್ಳೆಯದು ಎನ್ನುವುದರ ಕುರಿತು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ (UNESCO) ತನ್ನದೊಂದು ವರದಿಯಲ್ಲಿ ತಿಳಿಸಿದೆ. ಈ ವರದಿಯ ಕೆಲವು ಮುಖ್ಯವಾದ ಅಂಶಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಮಗು ತನ್ನ ಮೊದಲ ಹಂತದ ಕಲಿಕೆಗಾಗಿ ಶಾಲೆಯ ಮೆಟ್ಟಿಲು ಏರುವ ಹೊತ್ತಿಗೆ ಚೆನ್ನಾಗಿ ಮಾತನಾಡುವ ನುಡಿಯೆಂದರೆ ಅದರ ತಾಯ್ನುಡಿ, ಮನೆಯ ನುಡಿ ಅಥವಾ ಆ ಮಗುವಿನ ಪರಿಸರದ ನುಡಿ. ಮಗುವಿನ ತಾಯ್ನುಡಿ ಅಥವಾ ಮನೆಯ ನುಡಿಯು ಪರಿಸರದ ನುಡಿಗಿಂತಾ ಬೇರೆಯದಾಗಿದ್ದರೂ, ಮಗುವು ಪರಿಸರದ ನುಡಿಯನ್ನು ಮಾತನಾಡಲು ಕಲಿತಿರುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಹೀಗೆ ಮಗುವಿಗೆ ಗೊತ್ತಿರುವ ನುಡಿಯಲ್ಲಿ ಶಾಲೆಯಲ್ಲಿ ಕಲಿಸಿದಾಗ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ನೆರವಾಗುತ್ತದೆ. ಮಗುವಿಗೆ ಗೊತ್ತಿಲ್ಲದ ನುಡಿಯಲ್ಲಿ ಕಲಿಸುವ ಬಗೆಯನ್ನು 'ಮುಳುಗಿಸುವಿಕೆ' (submersion)ಅನ್ನಲಾಗುತ್ತದೆ. ಏಕೆಂದರೆ ಅದು ಈಜು ಕಲಿಸದೆಯೇ ಮಗುವನ್ನು ನೀರಿನಲ್ಲಿ ಇಳಿಸುವುದಕ್ಕೆ ಸಮಾನ ಎನ್ನುತ್ತದೆ ವಿಶ್ವಸಂಸ್ಥೆ. ಇದಕ್ಕೆ ಉದಾಹರಣೆ, ಕರ್ನಾಟಕದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿನ ಬಗೆ. ಕಲಿಕೆಯ ಮೊದಲ ಹಂತದಲ್ಲಿ ಮಗುವಿಗೆ ಚೆನ್ನಾಗಿ ಗೊತ್ತಿರುವ ನುಡಿಯಲ್ಲಿ ಕಲಿಸುವುದರಿಂದ ಮಕ್ಕಳು ಓದುವಾಗ ನೋಡುವ ಗುರುತುಗಳಿಗೂ (ಅಕ್ಷರಗಳು, ಡಣಟಛ್ಟಿಟಡ), ಸದ್ದುಗಳಿಗೂ (sounds) ಮನಸ್ಸಿನಲ್ಲೇ ಸಂಬಂಧ ಬೆಸೆಯುವುದು ಸುಲಭವಾಗುತ್ತದೆ. ಅಲ್ಲದೇ ಗೊತ್ತಿರುವ ನುಡಿಯಲ್ಲೇ ಕಲಿಸುವುದರಿಂದ ವಿಜ್ಞಾನ, ಗಣಿತ ಇಂತಹ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕೆ ಬೇಗನೇ ತೊಡಗಬಹುದು. ಮುಳುಗಿಸುವಿಕೆ ಪದ್ಧತಿಯಲ್ಲಿ ಮಕ್ಕಳು ವಿಷಯಗಳನ್ನು ಬಾಯ್ಪಾಟ ಮಾಡಿ ಒಪ್ಪಿಸುತ್ತಾರೆ. ಆದರೆ ತಮ್ಮ ನುಡಿಯಲ್ಲೇ ಕಲಿಯುವ ಪದ್ಧತಿಯಲ್ಲಿ ಮಕ್ಕಳಿಗೆ ಶಿಕ್ಷಕರೊಂದಿಗೆ ಸಹಜವಾದ ಒಡನಾಟದಿಂದ ವಿಚಾರಗಳ ತಿರುಳನ್ನು (concepts) ಕಲಿಯುವ ಪರಿಸರವಿರುತ್ತದೆ. ಶಿಕ್ಷಕರೊಂದಿಗೆ ಹೆಚ್ಚಿನ ಒಡನಾಟ ಇರುವ ಕಾರಣ ಮಕ್ಕಳು ವಿಷಯಗಳನ್ನು ಚೆನ್ನಾಗಿ ಕಲಿತಿದ್ದಾರೆಯೇ ಅನ್ನುವುದನ್ನು ಶಿಕ್ಷಕರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮುಳುಗಿಸುವಿಕೆ ಪದ್ಧತಿಯಲ್ಲಿ ಶಿಕ್ಷಕರೊಂದಿಗೆ ಮಕ್ಕಳ ಸಹಜವಾದ ಒಡನಾಟ ಕಡಿಮೆಯಾಗಿರುತ್ತದೆ. ಆದ ಕಾರಣ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಶಿಕ್ಷಕರು ತಿಳಿದುಕೊಳ್ಳುವುದು ಕಷ್ಟ. ಸಂಶೋಧನೆಗಳಿಂದಲೂ ಈ ಸಂಗತಿಗಳು ಸಾಬೀತಾಗಿವೆ. ಈ ರೀತಿ ತಮ್ಮ ನುಡಿಯಲ್ಲೇ ವಿಷಯಗಳನ್ನು ಕಲಿಯುವ ಮಕ್ಕಳು, ಇಂಗ್ಲಿಷ್ ನುಡಿಯನ್ನು ಒಂದು ವಿಷಯವಾಗಿ ಕಲಿತಾಗ, ತಾವು ತಮ್ಮ ನುಡಿಯಲ್ಲಿ ಕಲಿತ ವಿಷಯಗಳನ್ನು ಇಂಗ್ಲಿಷ್ ನುಡಿಯಲ್ಲೂ ಹೇಳಲು ನೆರವಾಗುತ್ತದೆ. ಪರಿಸರದ ನುಡಿಯಲ್ಲೇ ಕಲಿಯುವ ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಿರುತ್ತದೆ ಅಲ್ಲದೆ ಸಾಂಸ್ಕೃತಿಕ ಒಳಗೂಡಿಕೆಯೂ ಇರುತ್ತದೆ ಎಂದು ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.
ಮೇಲೆ ಹೇಳಿದ ಎಲ್ಲಾ ಅಂಶಗಳೂ ಮಗುವೊಂದರ ವೈಯುಕ್ತಿಕ ಕಲಿಕೆಗೆ ಸಂಬಂಧಿಸಿದ ವಿಷಯಗಳಾದರೆ, ಸಾಮಾಜಿಕ ದೃಷ್ಟಿಕೋನದಿಂದ ನೋಡುವುದೂ ಮುಖ್ಯವಾಗಿದೆ. ಮನೆಯ ನುಡಿ (ಅಥವಾ ಪರಿಸರದ ನುಡಿ) ಯಲ್ಲಿ ಕಲಿಸುವ ಪದ್ಧತಿಯಲ್ಲಿ ತಾಯ್ತಂದೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುತ್ತದೆ. ಶಾಲೆಯ ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಕಲಿಕೆಯ ಕುರಿತು ತಮ್ಮ ನುಡಿಯಲ್ಲೇ ಮಾತಾನಾಡಬಹುದಾದ್ದರಿಂದ ತಾಯ್ತಂದೆಯರು ಹಿಂಜರಿಕೆಯಿಲ್ಲದೆ ಶಾಲೆಯೊಂದಿಗೆವಾತುಕತೆಯಲ್ಲಿ ಪಾಲ್ಗೊಳ್ಳುತ್ತಾರೆ. ಪರಿಸರದ ನುಡಿಯಲ್ಲಿ ಕಲಿಸುವ ಶಾಲೆಗಳಲ್ಲಿ ತಾಯ್ತಂದೆಯರ ಪಾಲ್ಗೊಳ್ಳುವಿಕೆ ಹೆಚ್ಚು ಎಂಬ ಸತ್ಯವನ್ನು ಸಮೀಕ್ಷೆಯೊಂದರಲ್ಲಿ ಕಂಡುಕೊಳ್ಳಲಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ಹೆಚ್ಚಿನ ಇಂಬು ಸಿಗುತ್ತದೆ. ಮತ್ತೊಂದು ಸಂಶೋಧನೆಯ ಪ್ರಕಾರ ಹೆಣ್ಣುಮಕ್ಕಳ ಸಾಕ್ಷರತೆಯನ್ನು ಹೆಚ್ಚಿಸುವಲ್ಲಿ ಮತ್ತು ಹೆಚ್ಚಿನ ಕಲಿಕೆಯಲ್ಲಿ ಒಳಗೂಡಿಸುವಲ್ಲಿ ಪರಿಸರದ ನುಡಿಯಲ್ಲಿ ಕಲಿಸುವುದರ ಪಾತ್ರ ದೊಡ್ಡದಿದೆ. ವಿಶ್ವ ಸಂಸ್ಥೆಯ ವರದಿಯ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಸಮಾಜವನ್ನು ಇಣುಕಿ ನೋಡಿದರೆ ಕಾಣುವ ಸತ್ಯವೇನೆಂದರೆ ನಮ್ಮ ನಾಡಿನ ಪರಿಸರದ ನುಡಿ ಕನ್ನಡವೇ ಆಗಿದೆ. ನಮ್ಮ ನಾಡಿನ ಸುಮಾರು 2.5-3 ಕೋಟಿ ಮಂದಿಗೆ ಗೊತ್ತಿರುವ ನುಡಿ ಕನ್ನಡ ಒಂದೇ. ಬೆಂಗಳೂರಿನ ಒಂದೆರಡು ಮಾಲ್ಗಳಲ್ಲೊ, ಹೆಚ್ಚಾಗಿ ವಲಸಿಗರು ಇರುವ ಪ್ರದೇಶಗಳಲ್ಲೋ ಸ್ವಲ್ಪ ಮಟ್ಟದಲ್ಲಿ ಇಂಗ್ಲಿಷ್ ಬಳಕೆಯಾಗುತ್ತಿರುವುದು ಬಿಟ್ಟರೆ ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಕನ್ನಡದ ಪರಿಸರವೇ ಇದೆ. ಮನೆಯಲ್ಲಿಯೂ ಇಂಗ್ಲಿಷ್ ನುಡಿಯಿಲ್ಲ, ಪರಿಸರದಲ್ಲಿಯೂ ಇಂಗ್ಲಿಷ್ ನುಡಿಯಿಲ್ಲ. ನಮ್ಮ ಪರಿಸರಕ್ಕೆ ಸಂಬಂಧವೇ ಇಲ್ಲದ ಇಂಗ್ಲಿಷ್ ನುಡಿಯಲ್ಲಿ ಮಕ್ಕಳ ಕಲಿಕೆ ನಡೆಸುವುದು ನಿಜಕ್ಕೂಅವೈಜ್ಞಾನಿಕ ನಡೆಯೇ ಸರಿ.
ಜಗತ್ತಿನ ಎಲ್ಲಾ ಮುಂದುವರೆದ ರಾಷ್ಟ್ರಗಳಲ್ಲೂ ಕಲಿಕೆ ಏರ್ಪಾಡು ಅಲ್ಲಲ್ಲಿನ ಪರಿಸರದ ನುಡಿಯಲ್ಲೇ ಇದೆ. ಇದಕ್ಕೆ ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಫಿನ್ಲ್ಯಾಂಡ್ ಹೀಗೆ ಹಲವಾರು ನಿದರ್ಶನಗಳಿವೆ. ನಮ್ಮ ನಾಡಿನಲ್ಲೂ ತಾಯ್ನುಡಿಯಲ್ಲಿ ಕಲಿತ ಮಹನೀಯರು ಹಲವರಿದ್ದಾರೆ. ಮೇಲಿನ ಎಲ್ಲಾ ವಿಷಯಗಳನ್ನು ಗಮನಿಸಿದಾಗ ತಾಯ್ನುಡಿ ಅಥವಾ ಪರಿಸರದ ನುಡಿಯಲ್ಲಿ ಕಲಿಯುವುದೇ ಅತ್ಯುತ್ತಮವಾದುದು ಅನ್ನುವ ನಂಬಿಕೆ ಮೂಡುತ್ತದೆ. ಈ ವೈಜ್ಞಾನಿಕ ಹಿನ್ನೆಲೆಯ ಆಧಾರದ ಮೇಲೆಯೇ ನಾನೂ ನನ್ನ ಮಗನನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿದ್ದೇನೆ. ವಿಶ್ವ ಸಂಸ್ಥೆಯ ವರದಿಯ ಸೆಲೆ ಇಲ್ಲಿದೆ- http://unesdoc.unesco.org/images/0014/001466/146632e.pdf
-ವಲ್ಲೀಶ್ ಕುಮಾರ್ ಎಸ್., ಬೆಂಗಳೂರು