ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಾಂಗ್ರೆಸ್ಸಿಗರಿಗೆ ಈ ವಿಸ್ಮೃತಿಯೇಕೆ?

Srinivasa Murthy VN
Updated On : 30 May 2014, 12:52 pm

ಶಿಕ್ಷಣ, ಡಿಗ್ರಿ ಮತ್ತು ಮಾಡುವ ಕೆಲಸಕ್ಕೆ ಏನಾದರೂ ಸಂಬಂಧ ಇರಲೇಬೇಕೆಂಬ ನಿಯಮವಿದೆಯೆ? ಈ ಪ್ರಶ್ನೆ ಎದ್ದಿದೆ. ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಸಚಿವಾಲಯದ ಮಂತ್ರಿಯಾದ ಬೆನ್ನಲ್ಲೇ ಆಕೆಯ ಶಿಕ್ಷಣಾರ್ಹತೆಯ ಬಗ್ಗೆ ಸಂಶಯ, ಗೊಂದಲ, ಚರ್ಚೆಗಳು ಏಳತೊಡಗಿವೆ. ಕನಿಷ್ಠಪಕ್ಷ ಪದವಿ ಕೂಡ ಮುಗಿಸದವರನ್ನು ಹೇಗೆ ಅಂತಹ ಉನ್ನತ ಹುದ್ದೆಗೆ ನೇಮಕ ಮಾಡುತ್ತೀರಿ? 12ನೇ ತರಗತಿ ಪಾಸು ಮಾಡಿರುವುದೇ ಒಂದು ಸಚಿವಾಲಯ, ಅದರಲ್ಲೂ ಎಚ್‌ಆರ್‌ಡಿಯಂತಹ ಅತ್ಯಂತ ಪ್ರಮುಖ ಮಂತ್ರಾಲಯವನ್ನು ಸಂಭಾಳಿಸಲು ಸಾಕಾಗುವುದೆ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ಸಿಗರು ಕೇಳುತ್ತಿದ್ದಾರೆ.
ಸ್ವಲ್ಪ ವಿಷಯಾಂತರ ಮಾಡೋಣ. ಕಾಂಗ್ರೆಸ್ ಪಕ್ಷದ ್ಝಟ್ಛಿ.್ಝಟಿ ಜಾಲತಾಣಕ್ಕೆ ಹೋಗಿ ಅಲ್ಲಿ "ನಮ್ಮ ನಾಯಕರು" ಎಂಬ ಪುಟ ತೆರೆದರೆ ನಿಮಗೆ ಮೂರು ಹೆಸರುಗಳು ಕಾಣುತ್ತವೆ - ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ಅದರಲ್ಲಿ ಸೋನಿಯಾ ತಾನು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಡಿಗ್ರಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮಗ ರಾಹುಲ್ ಸಂತ ಸ್ಟೀವನ್ಸ್, ಹಾರ್ವರ್ಡ್ ಮತ್ತು ರೋಲಿನ್ಸ್ ಕಾಜುಗಳಿಗೆ ಹೋಗಿ ಬಿಎ ಡಿಗ್ರಿ ಮಾಡಿ, ಟ್ರಿನಿಟಿ ಕಾಲೇಜಿನಲ್ಲಿ ಎಮ್‌ಫಿಲ್ ಪದವಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ (ಗಮನಿಸಿ: ಒಂದು ಡಿಗ್ರಿ ಪಡೆಯಲು ಮೂರು ಕಾಲೇಜುಗಳು!). ಸುಬ್ರಮಣ್ಯಸ್ವಾಮಿ, ಸೋನಿಯಾ ಪದವಿಯ ಬಗ್ಗೆ ಹೆಚ್ಚು ವಿವರ ಕೇಳಿದಾಗ, "ಕ್ಷಮಿಸಿ, ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪಾಗಿದೆ. ನಾನು ಕೇಂಬ್ರಿಜ್‌ನಲ್ಲಿ ಇಂಗ್ಲಿಷ್ ಪದವಿ ಪಡೆದಿದ್ದೇನೆ ಎನ್ನುವುದು ಸ್ಪೆಲ್ಲಿಂಗ್ ಮಿಸ್ಟೇಕ್‌" ಎಂದರು. ಸ್ವಾಮಿ, ಅದಕ್ಕೆ ಪ್ರತಿಕ್ರಿಯಿಸುತ್ತ, "ಇದು ಜಗತ್ತಿನಲ್ಲೇ ಅತಿ ಉದ್ದದ ಸ್ಪೆಲ್ಲಿಂಗ್ ಮಿಸ್ಟೇಕ್ ಎಂದು ಗಿನ್ನೆಸ್ ಪುಸ್ತಕದಲ್ಲಿ ಬರೆಯಬೇಕಾದ ದಾಖಲೆ!" ಎಂದು ಪ್ರತಿಕ್ರಯಿಸಿದ್ದಾರೆ. ಇನ್ನು ರಾಹುಲ್ ಗಾಂಧಿಯ ಶಿಕ್ಷಣವಂತೂ ಅಲ್ಲಿ-ಇಲ್ಲಿ ಹಾರಿದ ಕಪ್ಪೆಯಷ್ಟೇ ಅನಿಶ್ಚಿತ, ಅಸ್ಪಷ್ಟ. ಅವರು ಕೋಟ್ಯಧೀಶರ ಮಕ್ಕಳೇ ಕಲಿಯುವ ಡೂನ್ ಶಾಲೆಯಲ್ಲಿ ಹೈಸ್ಕೂಲನ್ನು ಹಾಗೋ ಹೀಗೋ ಮುಗಿಸಿ ಅಮೆರಿಕಕ್ಕೆ ಹೋದರು. ಜಿಂದಾಲ್ ವಂಶಸ್ಥರು ಕೊಟ್ಟ ಬಹುದೊಡ್ಡ ದೇಣಿಗೆಗೆ ಪ್ರತಿಯಾಗಿ ಹಾರ್ವರ್ಡ್ ವಿಶ್ವವಿದ್ಯಾಲಯ ಉದಾರವಾಗಿ ಕೊಟ್ಟ ಸೀಟಿನ ಬಲದಿಂದ ಡಿಗ್ರಿಗೆ ಸೇರಿಕೊಂಡರು. ಆದರೆ, ಯಾವುದೇ ಪ್ರಗತಿ ತೋರಿಸದ ಕಾರಣ, ಎರಡೇ ತಿಂಗಳಲ್ಲಿ ಅವರನ್ನು ಹೊರಹಾಕಲಾಯಿತು. ಅಲ್ಲಿಂದ ರಾಹುಲ್ ಗಾಂಧಿಯ ಪಯಣ ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿಗೆ. ಪದವಿಯನ್ನೇ ಪೂರ್ತಿಗೊಳಿಸದ 'ರಾವುಲ್ ವಿಂಚಿ'(ರಾಹುಲ್) ಟ್ರಿನಿಟಿಯಲ್ಲಿ ಒಂದೇ ವರ್ಷದಲ್ಲಿ ಎಮ್‌ಫಿಲ್ ಪದವಿ ಪಡೆದರು! 'ಇದೆಂಥಾ ಪವಾಡ!' ಎಂದು ಅವರ ಡಿಗ್ರಿ ಪ್ರಮಾಣಪತ್ರ ತರಿಸಿ ನೋಡಿದಾಗ, ಅವರ ಡಿಗ್ರಿಯ ನಿಜಬಣ್ಣ ಬಯಲಾಯಿತು. ಟ್ರಿನಿಟಿ ಕಾಲೇಜಿನವರು 'ಈ ಮನುಷ್ಯ ತರಗತಿಗೆ ಬಂದುಹೋಗಿದ್ದಾರೆ' ಎಂಬ ಪ್ರಮಾಣಪತ್ರ ನೀಡಿದ್ದರೇ ಶಿವಾಯಿ ಪದವಿ ಮುಗಿಸಿದ್ದಾರೆ ಎಂದಿರಲಿಲ್ಲ. ಹಾಜರಾತಿ ಪತ್ರವನ್ನೇ ಪದವಿಪತ್ರ ಎಂದು ಝಳಪಿಸುತ್ತ ರಾಹುಲ್ ಕಾಂಗ್ರೆಸ್ ಮತ್ತು ದೇಶದ ಕಣ್ಣಿಗೆ ಸುಣ್ಣ ಮೆತ್ತುತ್ತಿದ್ದರು. ಅದನ್ನು ಇಂದಿಗೂ ತಮ್ಮ ಪಕ್ಷದ ವೆಬ್‌ಸೈಟಿನಲ್ಲಿ ಘಂಟಾಘೋಷವಾಗಿ ಬರೆದುಕೊಂಡು ಮೋಸ ಮಾಡುವುದೇ ತಮ್ಮ ಧ್ಯೇಯ ಎನ್ನುವಂತೆ ಈ ಗಾಂಧಿ ಕುಟುಂಬ ಬದುಕುತ್ತಿದೆ. ಇವರಿಬ್ಬರ ಮಧ್ಯೆ, ನಿಜವಾಗಿಯೂ ಕೇಂಬ್ರಿಜ್ ಮತ್ತು ಆಕ್ಸ್‌ಫರ್ಡ್- ಎರಡೂ ವಿಶ್ವವಿದ್ಯಾಲಯಗಳಲ್ಲಿ ಕಲಿತುಬಂದ ವಿದ್ವಾಂಸ ಸಿಂಗ್ ಮಾತ್ರ ಇವರಿಬ್ಬರ ಕೈಗೊಂಬೆಯಾಗಿ ಮೂಕಪ್ರಾಣಿಯಂತೆ ಹತ್ತುವರ್ಷ ಕಳೆದಿದ್ದು ಮತ್ತು ದೇಶವನ್ನು ಕೆಸರಿನಗುಂಡಿಗೆ ಹಾಕಿದ್ದು ಎಂತಹ ವ್ಯಂಗ್ಯ! ಇಂತಹ ರಾಹುಲ್ ಕೈಗೆ ದೇಶದ ಉಸ್ತುವಾರಿ ಕೊಡಲು ಉತ್ಸುಕವಾಗಿದ್ದ ಕಾಂಗ್ರೆಸ್, ಮಾನವ ಸಂಪನ್ಮೂಲ ಸಚಿವರ ಬಗ್ಗೆ ಇಲ್ಲದ ಕ್ಯಾತೆ ತೆಗೆದಿದೆ ಎಂದರೆ, ಅದರ ಮುಖಕ್ಕೆ ಯಾರಾದರೂ ಕನ್ನಡಿ ಹಿಡಿಯಬೇಕಾಗಿದೆ.
ರಾಹುಲ್ ಅಥವಾ ಸೋನಿಯಾ ಸುಳ್ಳು ಹೇಳಿದರು ಎನ್ನುವುದು ಸ್ಮೃತಿ ಇರಾನಿಯನ್ನು ಬಚಾವ್ ಮಾಡಲು ಸಮರ್ಥ್ಥನೆಯಾಗಬೇಕಿಲ್ಲ. ಸ್ಮೃತಿ ಕೂಡ, ಡಿಗ್ರಿಯ ವಿಷಯದಲ್ಲಿ ಸುಳ್ಳು ಹೇಳಿದ್ದಾರೆ ಎಂದರೆ, ಅದನ್ನು ಕೂಡ ತಪ್ಪೆಂದೇ ಪರಿಗಣಿಸಬೇಕು. ಯಾಕೆಂದರೆ, ಮೋದಿಯ ಸರಕಾರ ಅಂಥವರಿಗೆ ಮಣೆ ಹಾಕಬಾರದು. ಆದರೆ, ಕಾಂಗ್ರೆಸ್ ಹೇಳುವಂತೆ ಪದವಿ ಪಡೆಯದ ವ್ಯಕ್ತಿಗೆ ಒಂದು ಖಾತೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಮಾತ್ರ ಒಪ್ಪಲು ಸಾಧ್ಯವಿಲ್ಲ. ಯಾವುದೇ ಖಾತೆಯನ್ನು ನಿರ್ವಹಿಸಲು ಕನಿಷ್ಠ ವಿದ್ಯಾರ್ಹತೆಯನ್ನು ಸಂವಿಧಾನವೇ ವಿಧಿಸದೇ ಇರುವಾಗ, ಅಂತಹದೊಂದು ಅನುಮಾನವನ್ನು ಮುಂದಿಟ್ಟುಕೊಂಡು ಸಚಿವರ ಆತ್ಮವಿಶ್ವಾಸ ಮತ್ತು ಘನತೆಗೆ ಚ್ಯುತಿ ತರುವುದು ಸಂವಿಧಾನಬಾಹಿರವಾಗುತ್ತದೆ ಎನ್ನುವುದನ್ನು ಕಾಂಗ್ರೆಸ್  ಮರೆತಂತಿದೆ! ತಮಾಷೆಯೆಂದರೆ, ಅದೇ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಮೀನು-ಮಾಂಸ ತಿನ್ನದ ಜೈನರನ್ನು ಮೀನುಗಾರಿಕಾ ಸಚಿವರನ್ನಾಗಿ ಮಾಡಿಲ್ಲವೆ? ಮೀನು ವಾಸನೆಗೆ ತಲೆನೋವು ಬರುವ ಈ ಸಚಿವರಿಗೆ ಮೀನುಗಾರಿಕೆಯ ಎಬಿಸಿಡಿ ಅರ್ಥವಾದೀತೇ ಎಂದು ಮರುಸವಾಲು ಹಾಕಬಹುದಲ್ಲವೆ? ಅಲ್ಲದೆ, ಎಸ್.ಆರ್.ಪಾಟೀಲ್ ಐಟಿ-ಬಿಟಿ ಸಚಿವರಾಗಿ ಆಯ್ಕೆಯಾದಾಗ, ಕೃಷಿ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದ ಅವರಿಗೆ ಟ್ವಿಟ್ಟರ್, ಫೇಸ್‌ಬುಕ್ ಎಂದರೆ ಏನೆಂದೇ ಗೊತ್ತಿರಲಿಲ್ಲ! ಸ್ಮಾರ್ಟ್‌ಫೋನ್ ಕೂಡ ಬಳಸಲು ಅವರು ಪರದಾಡುತ್ತಿದ್ದನ್ನು ಅನೇಕರು ನೋಡಿದ್ದಾರೆ. ಹಾಗಿರುವಾಗ, ಅದನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಎರಡೆರಡು ವಿಶ್ವವಿದ್ಯಾಲಯಗಳಲ್ಲಿ ಪದವಿ, ಪಿಎಚ್.ಡಿ. ಮತ್ತು ಪೋಸ್ಟ್ ಡಾಕ್ಟರೇಟ್ ಪದವಿ ಪಡೆದು ಬಂದು ನಮ್ಮ ಘನಪ್ರಧಾನಿಗಳು ಆರ್ಥಿಕ ಕ್ಷೇತ್ರದಲ್ಲಿ ಮುಗ್ಗರಿಸಿಬಿದ್ದದ್ದನ್ನು ನೋಡಿದ್ದೇವೆ. ವಿದೇಶೀ ಶಿಕ್ಷಣ ಪಡೆದುಬಂದ, ಯುಪಿಎ ಸರಕಾರದ ಮಾನಸಂಪನ್ಮೂಲಾಭಿವೃದ್ಧಿ ಸಚಿವ ಕಪಿಲ್ ಸಿಬಲ್ ಶಿಕ್ಷಣ ಕ್ಷೇತ್ರದಲ್ಲಿ ಎಂತಹ ದೊಡ್ಡ ಸುನಾಮಿ ಎಬ್ಬಿಸಿದ್ದಾರೆ ಎನ್ನುವುದನ್ನೂ ನೋಡಿ ಆಯಿತು. ಪೀಸಾ ಎಂಬ ಪರೀಕ್ಷೆಯಲ್ಲಿ 75 ರಾಷ್ಟ್ರಗಳ ಪೈಕಿ ಕೊಟ್ಟಕೊನೆಯದಾಗಿ ಭಾರತ ಹೀನಾಯ ಪ್ರದರ್ಶನ ಕೊಟ್ಟಾಗ, ಇನ್ನುಮುಂದೆ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ - ಎಂದು ಫರ್ಮಾನು ಹೊರಡಿಸಿದವರು ಇವರು! ಪ್ರತಿಷ್ಠಿತ ಐಐಟಿ-ಖರಗ್‌ಪುರದಲ್ಲಿ ಕಲಿತುಬಂದ ಅರವಿಂದ್ ಕೇಜ್ರಿವಾಲ್ ಆಡಿದ ನಾಟಕಗಳನ್ನೂ ನೋಡಿದ್ದೇವೆ. ಒಟ್ಟಲ್ಲಿ, ಪದವಿ, ಶಿಕ್ಷಣ ಮತ್ತು ಬುದ್ಧಿವಂತಿಕೆಗೆ ನೇರಾನೇರ ಸಂಬಂಧ ಇಲ್ಲ ಎನ್ನುವುದು ಮತ್ತೆಮತ್ತೆ ಸಾಧಿತವಾಗಿದೆ.
ಒಂದು ಕ್ಷೇತ್ರದಲ್ಲಿ ಮೇಲ್ಮಟ್ಟಕ್ಕೆ ಬೆಳೆಯಲು ಕೆಚ್ಚೆದೆ ಬೇಕೇ ಹೊರತು ಪದವಿ ಪ್ರಮಾಣಪತ್ರವಲ್ಲ ಎನ್ನುವುದನ್ನು ನಮ್ಮಲ್ಲಿ ಅನೇಕರು ಸಾಧಿಸಿ ತೋರಿಸಿದ್ದಾರೆ. ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್, ಅಮೀರ್ ಖಾನ್‌ರಂಥವರು ಅಂತಹ ಎತ್ತರವನ್ನು ಏರಿ ಉಳಿದವರಿಗೂ ಸ್ಫೂರ್ತಿ ತುಂಬಿದ್ದಾರೆ. ಇಂಗ್ಲಿಷಿನಲ್ಲಿ ಫೇಲಾದೆ ಎಂದು ಸುಮ್ಮನೆ ಕೂತಿದ್ದರೆ, ಆರ್.ಕೆ.ನಾರಾಯಣ್ ಇಂಗ್ಲಿಷ್ ಲೇಖಕ ಆಗಲು ಸಾಧ್ಯವಿತ್ತೆ? ಸಂಸ್ಕೃತ ಪರೀಕ್ಷೆಯಲ್ಲಿ ಎರಡು ಸಲ ನಪಾಸಾದೆ ಎಂದು ಮುಖಮುಚ್ಚಿ ಅಳುತ್ತ ಕೂತಿದ್ದರೆ, ಗೋವಿಂದಾಚಾರ್ಯರು ವಿದ್ಯಾವಾಚಸ್ಪತಿಯಾಗುವುದು ಶಕ್ಯವಿತ್ತೆ? ತಾನು ಪುಟ್ಟ ಹೊಟೇಲೊಂದರ ಸರ್ವರ್ ಎನ್ನುತ್ತ ಅಷ್ಟಕ್ಕೇ ತೃಪ್ತಿಪಟ್ಟುಕೊಂಡಿದ್ದರೆ, ಒಬೆರಾಯ್ ಹೊಟೇಲ್ ಸಾಮ್ರಾಜ್ಯ ಕಟ್ಟಲು ಆಗುತ್ತಿತ್ತೆ? ವಡಾಪಾವ್ ಮಾರುತ್ತಿದ್ದ ಅಂಬಾನಿ ತನ್ನ ಕೈಗಾರಿಕಾ ಸಾಮ್ರಾಜ್ಯ ಬೆಳೆಸಲು ಸಾಧ್ಯವಿತ್ತೆ? ಹತ್ತನೇ ಕ್ಲಾಸಷ್ಟೇ ಪಾಸಾದರು ಅನ್ನುವ ಕಾರಣಕ್ಕೆ ಪಾವೆಂ ಆಚಾರ್ಯರಿಗೆ ಪತ್ರಿಕಾಲೋಕ ಬಾಗಿಲು ಮುಚ್ಚಿದ್ದರೆ? ರೈಲ್ವೇ ಸ್ಟೇಶನ್‌ನಲ್ಲಿ ಚಾಯ್ ಮಾರುತ್ತಿದ್ದ ನರೇಂದ್ರನಲ್ಲಿ ಆ ಬೆಂಕಿ ಇಲ್ಲದೇ ಹೋಗಿದ್ದರೆ?
ಒಟ್ಟಲ್ಲಿ, ಈ ಚರ್ಚೆಯನ್ನು ಯಾರು ಹುಟ್ಟುಹಾಕಿದ್ದಾರೋ ಅವರೇ ಇದಕ್ಕೊಂದು ತಾರ್ಕಿಕ ಅಂತ್ಯವನ್ನೂ ಹಾಡುವುದು ಒಳ್ಳೆಯದು. ಮಾನವ ಸಂಪನ್ಮೂಲ ಸಚಿವಾಲಯವನ್ನು ನಡೆಸಲು ಮೊದಲು ಮಾನವರಾಗಿರಬೇಕಾದದ್ದು ಮುಖ್ಯ ಎಂದು ಇದುವರೆಗೆ ತಿಳಿದಿದ್ದೆವು. ಆದರೆ, ಕಾಂಗ್ರೆಸ್, ಅದನ್ನು ನಡೆಸಲು ಪದವಿ ಪಡೆದಿರಲೇಬೇಕು ಎಂಬ ಹೊಸ ತರ್ಕವನ್ನು ಮುಂದಿಟ್ಟಿದೆ. ಇದೇ ವಾದದ ಮುಂದುವರಿದ ಭಾಗವಾಗಿ, ವಿಮಾನಯಾನ ಸಚಿವರು ವಿಮಾನ ನಡೆಸಲು ತಿಳಿದಿರಬೇಕು, ಜಲಸಾರಿಗೆ ಸಚಿವರು ಕ್ಯಾಪ್ಟನ್ ಆಗಿರಬೇಕು, ಕಲ್ಲಿದ್ದಲು ಖಾತೆಯವರು ಗಣಿಕಾರ್ಮಿಕನಾಗಿ ಕೆಲಸ ಮಾಡಿರಬೇಕು ಎನ್ನುವ ಬೇಡಿಕೆಗಳು ಬಂದಾವು. ಶಿಶುಕಲ್ಯಾಣ ಖಾತೆಯ ಸಚಿವೆ ಶಿಶುವೇ ಆಗಿರಬೇಕೆ ಎನ್ನುವುದನ್ನು ಅವರು ಹೇಳಬೇಕು! ಎಲ್ಲಕ್ಕಿಂತ ಮುಖ್ಯವಾಗಿ, ಪದವಿ-ಡಿಗ್ರಿಗಳ ಬಗ್ಗೆ ಮಾತಾಡುವವರು, ವಾದ್ರಾ ತನ್ನ ಹತ್ತನೇ ಕ್ಲಾಸಿನ ಶಿಕ್ಷಣದ ಬಲದಿಂದಲೇ ನೂರಾರು ಕೋಟಿ ಬಾಳುವ ಸಾಮ್ರಾಜ್ಯ ಹೇಗೆ ಎಬ್ಬಿಸಿದರು, ಜವಾಹರ್‌ಲಾಲ್ ನೆಹರು, ಇಂದಿರಾ, ರಾಜೀವ್, ರಾಹುಲ್ - ಇತ್ಯಾದಿ ಪ್ರಭೃತಿಗಳಲ್ಲಿ ಯಾರು ಡಿಗ್ರಿಯನ್ನು ಪೂರ್ಣಗೊಳಿಸಿ ದೇಶದ ಚುಕ್ಕಾಣಿ ಹಿಡಿದರು ಎನ್ನುವುದನ್ನೂ ಹೇಳಿದರೆ, ವಾದಕ್ಕೆ ಒಂದು ತಾರ್ಕಿಕ ಅಂತ್ಯ ಒದಗಿಸಿದ ಹಾಗೆ ಆಗುತ್ತದೆ.

-ರೋಹಿತ್ ಚಕ್ರತೀರ್ಥ
rohithmath@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement