ಬಹುಮುಖ ಪ್ರತಿಭೆ ಆಕರ್ಷಕ ವ್ಯಕ್ತಿತ್ವ
ಡಾ. ರಾಜೀವ್ ಚಂದ್ರಶೇಖರ್ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಆದರೆ ಅವರನ್ನು ಹತ್ತಿರದಿಂದ ನೋಡುವ ಮತ್ತು ಅವರೊಂದಿಗೆ ಒಡನಾಡುವ ಅವಕಾಶ ಸಿಕ್ಕಿದ್ದು ನಾನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಂತರ. ಅವರು ಪಾಲ್ಗೊಳ್ಳುವ ಪ್ರತೀ ಚರ್ಚೆಗಳಲ್ಲಿ, ಕೇಳುವ ಪ್ರತೀ ಪ್ರಶ್ನೆಗಳಲ್ಲಿ, ಮಂಡಿಸುವ ಬಿಲ್ಗಳಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಆ ವ್ಯಕ್ತಿಗಿರುವ ಕಾಳಜಿಯನ್ನು ಕಂಡಿದ್ದೇನೆ. ಅಭಿವೃದ್ಧಿಯನ್ನೇ ಆದ್ಯತೆಯಾಗಿಸಿಕೊಂಡು, ಸೇವೆಯನ್ನೇ ತಪಸ್ಸೆಂದುಕೊಂಡ ಅವರ ಶ್ರದ್ಧೆಯನ್ನು ನೋಡಿ ಅಚ್ಚರಿ ಮತ್ತು ಆನಂದ ಪಟ್ಟಿದ್ದೇನೆ.
ಬೆಂಗಳೂರು ಮಹಾನಗರದ ಹಲವಾರು ಸಮಸ್ಯೆಗಳಿಗೆ ಬುದ್ಧಿವಂತ ಪರಿಹಾರಗಳನ್ನು ಒದಗಿಸುವಲ್ಲಿ ರಾಜೀವ್ ಮುಂಚೂಣಿಯಲ್ಲಿದ್ದಾರೆ. ನಾಗರಿಕ ಕೇಂದ್ರಿತ ಆಡಳಿತದಿಂದ ಬದಲಾವಣೆ ಸಾಧ್ಯ ಎನ್ನುವ ಅವರು, ಆಡಳಿತ ಸಂಸ್ಥೆಗಳಲ್ಲಿ ಪಾರದರ್ಶಕತೆ ಬೆಳೆಯಬೇಕು ಎನ್ನುವುದಕ್ಕಾಗಿ ಸಮಾನಮನಸ್ಕರನ್ನು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಿದ್ದಾರೆ. ಸ್ವತಂತ್ರ ಸಂಸದರಾದ ರಾಜೀವ್ ಚಂದ್ರಶೇಖರ್ರದ್ದು ರಾಜಕಾರಣಿಯಾಗಿಯಷ್ಟೇ ಅಲ್ಲದೆ, ವೈಯಕ್ತಿಕ ನಡವಳಿಕೆಯಿಂದಲೂ ಆಕರ್ಷಣೀಯ ವ್ಯಕ್ತಿತ್ವ. ಒಳ್ಳೆಯ ಕೆಲಸ ಮಾಡುವವರು ಯಾರೇ ಇರಲಿ, ಅವರು ಯಾವ ಪಕ್ಷದವರೇ ಆಗಿರಲಿ ಅಂಥವರ ಬೆನ್ನುಚಪ್ಪರಿಸಿ ಬೆಂಬಲಿಸುವ ಗುಣ ರಾಜೀವ್ ಅವರಿಗಿದೆ. ಬಹುಶಃ ಈ ಕಾರಣಕ್ಕಾಗಿಯೇ 2012ರಲ್ಲಿ ಅವರು ಎಲ್ಲಾ ಪಕ್ಷಗಳ ಸರ್ವಾನುಮತ ಬೆಂಬಲದಿಂದ ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಿ ಮರು ಆಯ್ಕೆಗೊಂಡರು! ಇದು ಅವರ ಜನಾನುರಾಗಿ ವ್ಯಕ್ತಿತ್ವಕ್ಕೆ ಸಿಕ್ಕ ಪ್ರತಿಫಲ ಎಂದರೆ ತಪ್ಪಾಗಲಿಕ್ಕಿಲ್ಲ. ಇಂಥ ಸ್ನೇಹಿತ, ನಾಯಕ ಈ ದಿನ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ....
ನನನ
ಅಹಮದಾಬಾದ್ನಲ್ಲಿ ಜನಿಸಿದ ರಾಜೀವ್ ಚಂದ್ರಶೇಖರ್ ದೂರದರ್ಶಿತ್ವವುಳ್ಳ ಸಂಸದ. ಇವರ ತಂದೆ ವಾಯುಪಡೆಯ ಅಧಿಕಾರಿಯಾಗಿದ್ದರಿಂದ ದೇಶ ಸೇವೆ ಅವರ ವಂಶವಾಹಿಯಲ್ಲೇ ಬಂದಿದೆ. ಮಣಿಪಾಲದ ಎಮ್ಐಟಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದು ಆಮೇಲೆ ಅಮೆರಿಕದ ಇಲ್ಲಿನಾಯಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ನ ಉನ್ನತ ಪದವಿ ಗಳಿಸಿದರು. ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆದುಕೊಂಡು. ಯಾವ ಶಿಕ್ಷಣ ಸಂಸ್ಥೆಯಲ್ಲಿ ರಾಜೀವ್ ಓದಿದ್ದರೋ ಅದೇ ಎಮ್ಇಟಿ ಅವರಿಗೆ 2013ರಲ್ಲಿ ತನ್ನ ಮೊಟ್ಟ ಮೊದಲ 'ಮಣಿಪಾಲ್ ಯುನಿವರ್ಸಿಟಿ ಡಿಸ್ಟಿಂಗ್ವಿಷಡ್ ಅಲ್ಯೂಮ್ನಿ' ಪ್ರಶಸ್ತಿ ಕೊಟ್ಟು ಹೆಮ್ಮೆಪಟ್ಟಿತು! ರಾಜೀವ್ ಚಂದ್ರಶೇಖರ್ ಅವರ ಶೈಕ್ಷಣಿಕ ಹಾದಿ ಬಹಳ ಆಸಕ್ತಿಯುತವಾಗಿದೆ. ಇಲಿನಾಯ್ಸ್ ವಿ.ವಿಯಲ್ಲಿ ಪದವಿ ಮುಗಿಸಿದ ನಂತರ "ಪೆಂಟಿಯಮ್ ಚಿಪ್"ಗಳ ಜನಕ ಎಂದೇ ಖ್ಯಾತರಾದ ವಿನೋದ್ ಧಾಮ್ ಅವರು ರಾಜೀವ್ ಅವರ ಸಾಮಾರ್ಥ್ಯವನ್ನು ಗುರುತಿಸಿ 'ಇಂಟೆಲ್' ಸಂಸ್ಥೆಗೆ ಖುದ್ದಾಗಿ ಆಯ್ಕೆ ಮಾಡಿದರು. ಇಂಟೆಲ್ನ 486 ಚಿಪ್ ಅನ್ನು ಸೃಷ್ಟಿಸಿದ ಸಿಲಿಕಾನ್ ವ್ಯಾಲಿಯ ತಂಡದಲ್ಲಿ ರಾಜೀವ್ ಕೂಡ ಒಬ್ಬರು. ವಿಶೇಷವೆಂದರೆ ಇದುವರೆಗೂ ಉತ್ಪಾದನೆಯಾದ ಪ್ರತಿಯೊಂದು 486 ಪ್ರೊಸೆಸರ್ಗಳ ಮೇಲೂ 'ಆರ್ಸಿ'(ರಾಜೀವ್ ಚಂದ್ರಶೇಖರ್) ಎಂಬ ಚಿಹ್ನೆಯಿರುತ್ತದೆ.
ಭಾರತದಲ್ಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತದಿಂದ 90ರ ದಶಕದಲ್ಲಿ ಹಿಂದಿರುಗಿದರು ರಾಜೀವ್. ಈ ತುಡಿತವೇ ಅವರನ್ನು 1994ರಲ್ಲಿ ಭಾರತದ ಮೊದಲ ಮತ್ತು ವಿಶ್ವಗುಣಮಟ್ಟದ ಟೆಲಿಕಾಂ ನೆಟ್ವರ್ಕ್ 'ಬಿಪಿಎಲ್ ಮೊಬೈಲ್' ಕಂಪನಿಯನ್ನು ಸ್ಥಾಪಿಸಲು ಕಾರಣವಾಯಿತು. ಈ ಕಾರಣಕ್ಕಾಗೇ ಭಾರತದ ಟೆಲಿಕಾಂ ಕ್ರಾಂತಿಯ 'ಪೋಸ್ಟರ್ ಬಾಯ್' ಎಂದೂ ಅವರನ್ನು ಕರೆಯಲಾಗುತ್ತದೆ. ಒಂದು ದಶಕದ ನಂತರ, ಅಂದರೆ 2005ರಲ್ಲಿ ಸುಮಾರು 100 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆಯೊಂದಿಗೆ 'ಜುಪಿಟರ್ ಕ್ಯಾಪಿಟಲ್' ಸಂಸ್ಥೆಯನ್ನು ಹುಟ್ಟುಹಾಕಿದರು. ಅಲ್ಲದೆ ತಂತ್ರಜ್ಞಾನ ಅಭಿವೃದ್ಧಿ, ವ್ಯವಸ್ಥಾಪನಾ ಸೇವೆ, ಸಾರಿಗೆ, ಅತಿಥಿ ಸತ್ಕಾರ, ಮನರಂಜನೆ ಇತ್ಯಾದಿಗಳ ಬೆಳವಣಿಗೆಗಾಗಿ ರಾಜೀವ್ ಇತ್ತೀಚೆಗೆ ಒಂದು ಶತಕೋಟಿ ಅಮೆರಿಕನ್ ಡಾಲರ್ಗಳಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.
ಕೇವಲ ತಂತ್ರಜ್ಞಾನ ಅಭಿವೃದ್ಧಿಯತ್ತಲಷ್ಟೇ ಅಲ್ಲದೆ, ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವ ವೈಶಾಲ್ಯತೆ ರಾಜೀವ್ ಅವರಲ್ಲಿ ಮೊದಲಿನಿಂದಲೂ ಇದೆ. ಅಕ್ಟೋಬರ್ 2009ರಲ್ಲಿ ಕರ್ನಾಟಕದ ಕರಾವಳಿ ಮತ್ತು ಉತ್ತರ ಭಾಗಗಳು ಅತ್ಯಂತ ಭೀಕರ ಪ್ರವಾಹಕ್ಕೆ ಸಾಕ್ಷಿಯಾದಾವಲ್ಲ, ಆಗ ಮನೆಮಠ ಕಳೆದುಕೊಂಡವರಿಗೆ ಶಾಶ್ವತ ಆಸರೆ ಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 'ಆಸರೆ' ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿತು. ಆಗ 'ಆಸರೆ'ಯ ಸಂಯೋಜಕರಾಗಿ ರಾಜೀವ್ ಚಂದ್ರಶೇಖರ್ ಅವರನ್ನು ನೇಮಿಸಲಾಯಿತು. ನಿರಾಶ್ರಿತರಿಗೆ ಶೀಘ್ರವಾಗಿ ಆಶ್ರಯ ಕಲ್ಪಿಸಿಕೊಡುವ ಸವಾಲು ಅವರ ಬೆನ್ನಿಗಿತ್ತು. ಅವರು ಸ್ವಪ್ರೇರಣೆಯಿಂದ ಸಕ್ರೀಯವಾಗಿ ಸಂತ್ರಸ್ಥರ ನೆರವಿಗೆ ನಿಂತರು. ಪ್ರವಾಹದಿಂದ ಛಿದ್ರಗೊಂಡಿದ್ದ ಪ್ರದೇಶಗಳಲ್ಲಿ ಓಡಾಡಿ ಮಾಹಿತಿ ಕಲೆಹಾಕಿದರು. ಕಾರ್ಪೊರೇಟ್ ವಲಯಗಳಿಂದ ದೇಣಿಗೆ ಸಂಗ್ರಹಿಸಿದರು, ತತ್ಪರಿಣಾಮ ಸುಮಾರು 50,000 ಮನೆಗಳನ್ನು ನಿರ್ಮಿಸಲು ಸಾಧ್ಯವಾಯಿತು. ಇದಷ್ಟೇ ಅಲ್ಲದೆ ತಮ್ಮ ಪ್ರತಿಷ್ಠಾನದ ಮೂಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶ್ರೀಬಡಗಿ ಎಂಬ ಗ್ರಾಮದಲ್ಲಿ 293 ಮನೆಗಳನ್ನು ಮತ್ತು ನೆರೆಯ ಪ್ರಕೋಪ ಮಂತ್ರಾಲಯಕ್ಕೂ ಅಪ್ಪಳಿಸಿದಾಗ ಸಂತ್ರಸ್ತರಿಗಾಗಿ ತಮ್ಮ ರಾಜೀವ್ ಚಂದ್ರಶೇಖರ್ ಫೌಂಡೇಶನ್ ವತಿಯಿಂದ ಅವರು 175 ಮನೆಗಳನ್ನು ನಿರ್ಮಿಸಿಕೊಟ್ಟರು.
ರಾಜೀವ್ ಎಂದೂ ಪ್ರಶಸ್ತಿಗಳ ಬೆನ್ನು ಬಿದ್ದವರಲ್ಲ. ಜನರ ಮಮತೆಯೇ ಪ್ರಶಸ್ತಿ ಎಂದು ಭಾವಿಸಿದವರು. ವಿಟಿಯುನಿಂದ 2012ರಲ್ಲಿ ಗೌರವ ಡಾಕ್ಟರೇಟ್, ಜಾಗತಿಕ ಸೇವೆಗಾಗಿ ಇಲಿನಾಯ್ಸ್ ಶಿಕ್ಷಣ ಸಂಸ್ಥೆಯಿಂದ ಅಲ್ಯೂಮ್ನಿ ಅಸೋಸಿಯೇಷನ್ ಗೌರವ ದೊರೆತವು. ಅಲ್ಲದೆ ಇಂಗ್ಲೆಂಡ್ನ ಪ್ರತಿಷ್ಠಿತ 'ಇಂಡೆಕ್ಸ್ ಫ್ರೀಡಮ್ ಆಪ್ ಎಕ್ಸ್ಪ್ರೆಷನ್ ಅವಾರ್ಡ್'ಗೂ ನಾಮಾಂಕಿತಗೊಂಡಿದ್ದರು. ಭಾರತದಲ್ಲಿ ಡಿಜಿಟಲ್ ಸ್ವಾತಂತ್ರ್ಯಕ್ಕಾಗಿ ಮತ್ತು ಅಂತರ್ಜಾಲದ ಸೆನ್ಸಾರ್ಶಿಪ್ ವಿರುದ್ಧವೂ ಅವರ ಧ್ವನಿ ಗಟ್ಟಿಯಾಗಿದೆ. ಭಾರತೀಯ ಸೇನೆಯ ಬಗ್ಗೆ ಅತೀವ ಕಾಳಜಿ ಮತ್ತು ಗೌರವ ಹೊಂದಿರುವ ರಾಜೀವ್ ಸೈನಿಕರ ಹಿತವೇ ದೇಶದ ಹಿತ ಎಂದು ನಂಬಿದವರು. ಆನರ್ ಫೌಂಡೇಷನ್ನ ಮುಖಾಂತರ ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರನ್ನು ತಲುಪುವ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ಅವರ ಕನಸಾದ 'ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕ(ಎನ್ಎಮ್ಎಮ್) ಸದ್ಯದಲ್ಲೇ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.
ಅಲ್ಲದೆ ರಾಜೀವ್ ಚಂದ್ರಶೇಖರ್ ಬೆಂಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡಿದ ಅಗೋಚರ ಸಾಧಕರನ್ನು ತಮ್ಮ 'ತಮ್ಮ ಬೆಂಗಳೂರು ಫೌಂಡೇಷನ್ನ' ಮೂಲಕ ಹುಡುಕಿ ಗೌರವಿಸಲು 'ನಮ್ಮ ಬೆಂಗಳೂರು ಅವಾರ್ಡ್' ಅನ್ನು ಪ್ರತಿವರ್ಷವೂ ಕೊಟ್ಟು ಅಂಥವರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.
ಇಲ್ಲಿಯವರೆಗಿನ ಅವರ ಹಾದಿ ಸಾಧನೆಗಳಿಂದ ಕೂಡಿದೆ, ಮುಂದೆಯೇ ಅದು ಹಾಗೆಯೇ ಸಾಗಲಿ ಎಂದು ಹಾರೈಸುತ್ತಾ...
-ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯರು