ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಧ್ಯಮ ವರ್ಗದ ಕನಸುಗಳನ್ನು ಸಾಕಾರ ಮಾಡುವರೇ ಮೋದಿ?

ತನ್ನ ತಾಕತ್ತು ಏನೆಂಬುದನ್ನು ಮಧ್ಯಮ..

Srinivasa Murthy VN
Updated On : 31 May 2014, 2:10 am

ತನ್ನ ತಾಕತ್ತು ಏನೆಂಬುದನ್ನು ಮಧ್ಯಮ ವರ್ಗದ ಮತದಾರ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೋರಿಸಿದ್ದಾನೆ. ಚುನಾವಣೆಗೆ ಮೊದಲು ಮೋದಿ ಕೇವಲ ಮಾಧ್ಯಮಗಳು ಸೃಷ್ಟಿಸಿರುವ ನಕಲಿ ನಾಯಕ, ಆತನೊಬ್ಬ ಪೇಪರ್ ಟೈಗರ್ ಎಂಬ ಮಾತು ಮೋದಿ ವಿರೋಧಿಗಳ ಬಾಯಲ್ಲಿ ಪದೇ ಪದೇ ಕೇಳಿಬರುತ್ತಿತ್ತು. ಆದರೆ, ಮೋದಿ ಕೇವಲ ಮಾಧ್ಯಮಗಳ ಮಿತ್ರನಲ್ಲ, ಆತ ಮಧ್ಯಮ ವರ್ಗಗಳ ಸಮರ್ಥ ಪ್ರತಿನಿಧಿ ಎಂಬುದನ್ನು ಈ ಬಾರಿಯ ಚುನಾವಣೆ ಫಲಿತಾಂಶ ನಿರೂಪಿಸಿದೆ.
ನಮ್ಮ ದೇಶವನ್ನು ಜಗತ್ತಿನ ಇತರೆ ದೇಶಗಳಿಗಿಂತ, ಅರ್ಥ ವ್ಯವಸ್ಥೆಗಳಿಗಿಂತ ವಿಭಿನ್ನವಾಗಿ ನಿಲ್ಲಿಸಿರುವುದೇ ಈ ಮಧ್ಯಮ ವರ್ಗ. ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಮಧ್ಯಮ ವರ್ಗದವರೇ. ಈ ದೇಶದ ಪ್ರಗತಿ, ಕನಸು, ಸಾಧನೆ ಎಲ್ಲವೂ ಬೆಸೆದುಕೊಂಡಿರುವುದು ಈ ಮಧ್ಯಮ ವರ್ಗದ ಕನಸುಗಳ ಜತೆಗೆ, ಆ ವರ್ಗದ ಮಂದಿಯ ಭಾವನೆಗಳ ಜತೆಗೆ. ಒಟ್ಟಿನಲ್ಲಿ ಇಡೀ ದೇಶವನ್ನು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಚಲನಶೀಲವಾಗಿ ಇಟ್ಟಿರುವುದೇ ಇಲ್ಲಿನ ಮಧ್ಯಮ ವರ್ಗದವರ ತುಡಿತ-ಮಿಡಿತ. ಇದು ತೀರಾ ಸರಳ. ಶ್ರೀಮಂತ ವರ್ಗಕ್ಕೆ ಕನಸುಗಳ ಅವಶ್ಯಕತೆ ಇಲ್ಲ. ಬೇಕೆನಿಸಿದ್ದೆಲ್ಲ ಕ್ಷಣ ಮಾತ್ರದಲ್ಲಿ ಕೈಗೆಟಕುತ್ತದೆ. ಇನ್ನು ಬಡ ವರ್ಗದವರಿಗೆ ಕನಸು ಕಾಣುವ ಹಕ್ಕೂ ಇಲ್ಲ, ಪುರುಸೊತ್ತೂ ಇಲ್ಲ! ಅವರಿಗೇನಿದ್ದರೂ ಆ ಹೊತ್ತಿನ, ಆ ದಿನದ ಚಿಂತೆ. ಹೀಗಾಗಿ ನಾಳಿನ ನೆಮ್ಮದಿಯ ಕನಸಿನಲ್ಲಿ ಇವತ್ತು ಕ್ರಿಯಾಶೀಲವಾಗಿರುವುದೇ ಈ ಮಧ್ಯಮ ವರ್ಗ. ಅಂಥ ಮಧ್ಯಮ ವರ್ಗದ ಪ್ರತಿನಿಧಿಯಾಗಿ, ಕನಸಿನ ಸರದಾರನಾಗಿ, ಅವರೆಲ್ಲರ ಆಶೋತ್ತರಗಳ ಪ್ರತಿನಿಧಿಯಾಗಿ ಇವತ್ತು ಭಾರತದ ಪ್ರಧಾನ ಮಂತ್ರಿಯಾಗಿ ಎದೆಯುಬ್ಬಿಸಿ ನಿಂತಿರುವ ನೇತಾರನೇ ನರೇಂದ್ರ ದಾಮೋದರ ದಾಸ್ ಮೋದಿ! ಹಿಂದೆ ಇಂದಿರಾ ಗಾಂಧಿಯವರಿಗೆ ಬೆನ್ನೆಲುಬಾಗಿ ನಿಂತಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಧರಿಸಿದ್ದು, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರಿಗೆ ಆ ಮಟ್ಟದ ಚರಿಷ್ಮಾ ತಂದುಕೊಟ್ಟಿದ್ದು ಇದೇ ಮಧ್ಯಮ ವರ್ಗದ ಮತದಾರ. ಕಳೆದ ಹತ್ತು ವರ್ಷಗಳ ಯುಪಿಎ ಆಳ್ವಿಕೆಯಲ್ಲಿ ಉಸಿರುಕಟ್ಟುವ ವಾತಾವರಣದಲ್ಲಿ ಬದುಕಿದ್ದ ಮಧ್ಯಮ ವರ್ಗದ ಪಾಲಿಗೆ ನರೇಂದ್ರ ಮೋದಿ ಇವತ್ತು ಆಮ್ಲಜನಕವಾಗಿ ಉದ್ಭವಿಸಿದ್ದಾರೆ.
ಎಲ್ಲರೂ ಗುಜರಾತ್ ಮಾದರಿ ಬಗ್ಗೆ ಮಾತನಾಡುತ್ತಾರೆ. ಗುಜರಾತ್ ಮಾದರಿ ಎಲ್ಲೆಡೆ ಯಶಸ್ವಿಯಗುವುದಿಲ್ಲ ಎಂದು ಮೋದಿ ವಿರೋಧಿಗಳು ಬಾಯಿಬಡಿದುಕೊಳ್ಳುತ್ತಾರೆ. ಇಷ್ಟಕ್ಕೂ ಏನಿದು ಗುಜರಾತ್ ಮಾದರಿ? ಸರಳವಾಗಿ ಹೇಳಬೇಕೆಂದರೆ ಶ್ರೀಮಂತರಿಗೆ ಹೂಡಿಕೆಗೆ ಅವಕಾಶ ಮಾಡಿಕೊಡಿ. ಮಧ್ಯಮ ವರ್ಗದವರಿಗೆ ಉದ್ಯೋಗ ಕೊಡಿ. ಬಡವರಿಗೆ ಅನ್ನ-ಆಶ್ರಯ ಕೊಡಿ! ಮೋದಿ ಗುಜರಾತ್‌ನಲ್ಲಿ ಮಾಡಿದ್ದು ಇದನ್ನೇ. ಅಲ್ಲಿಯ ಸೋಲಾರ್ ಘಟಕಗಳು, ಬೃಹತ್ ಕೈಗಾರಿಕೆಗಳು, ನದಿ ಜೋಡಣೆಯಂಥ ಯೋಜನೆಗಳು, ಅಂತರ್ಜಲ ಮಟ್ಟ ಏರಿಸುವ ಕಾಮಗಾರಿಗಳು, ಅಚ್ಚುಕಟ್ಟಾದ ಶಿಕ್ಷಣ ವ್ಯವಸ್ಥೆ, ನಿರಂತರ ನೀರು, ವಿದ್ಯುತ್ ಸರಬರಾಜು, ವ್ಯವಸ್ಥಿತ ಮೂಲ ಸೌಕರ್ಯ.. ಮಧ್ಯಮ ವರ್ಗದ ಕನಸು ಸಾಕಾರಗೊಳ್ಳಲು ಇದಕ್ಕಿಂತ ಇನ್ನೇನು ಬೇಕು?
ಮೋದಿ ಯಾವತ್ತೂ ಶಾದಿ ಭಾಗ್ಯ, ಅಕ್ಕಿ ಭಾಗ್ಯ, ಅಗ್ಗದ ಸಾರಾಯಿ ಅಂತಾ ಜನರನ್ನು ಸೋಮಾರಿತನಕ್ಕೆ ತಳ್ಳುವ ಚಿಲ್ಲರೆ ಯೋಜನೆಗಳ ಬಗ್ಗೆ ಚಿಂತಿಸಲಿಲ್ಲ. ಅವರು ಜನರಿಗೆ ಮೀನು ಕೊಡುವ ಬದಲು ಮೀನು ಹಿಡಿಯುವುದನ್ನು ಕಲಿಸಿದರು, ಮೀನು ಸಾಕಣೆಗೆ ಕೆರೆಗಳನ್ನು ಅಭಿವೃದ್ಧಿಪಡಿಸಿದರು, ಆ ಕೆರೆಗಳಲ್ಲಿ ಸದಾ ಕಾಲ ನೀರಿರುವಂತೆ ನೋಡಿಕೊಳ್ಳಲು ಅಂತರ್ಜಲ ಮಟ್ಟ ಏರಿಸುವ ಕೆಲಸ ಮಾಡಿದರು. ಇದು ಗುಜರಾತ್ ಮಾದರಿ. ಅಂದರೆ ಮಧ್ಯಮ ವರ್ಗದ ಬಲವರ್ಧನೆ. ಇದನ್ನು ನೋಡಿಯೇ ಕರ್ನಾಟಕದಲ್ಲೂ ಮಧ್ಯಮ ವರ್ಗದ ಮತದಾರರು 'ನಮಗೆ ಶಾದಿ ಭಾಗ್ಯ ಬೇಡ, ಮೋದಿ ಭಾಗ್ಯ ಸಾಕು' ಎಂಬ ತೀರ್ಪು ಕೊಟ್ಟಿದ್ದು! ನಮಗೆ ಮದುವೆ ಮಾಡಿಸುವ ಸರ್ಕಾರ ಬೇಡ. ಮದುವೆಯಾಗಿ ನೆಮ್ಮದಿಯ ಸಂಸಾರ ನಡೆಸೋದಕ್ಕೆ ಬೇಕಾದ ವಾತಾವರಣ ಸೃಷ್ಟಿಸುವ ಸರಕಾರ ಬೇಕು ಎಂಬುದೇ ಆ ತೀರ್ಪಿನ ತಾತ್ಪರ್ಯ. ಮೋದಿ ಪ್ರಧಾನಿ ಆಗೋದು ಸಾಧ್ಯವೇ ಇಲ್ಲ ಅಂತಾ ಖಡಾಖಂಡಿತವಾಗಿ ಹೇಳುತ್ತಿದ್ದವರು, ಈಗ ಮೋದಿ ಗೆಲುವಿಗೆ ಅಸಂಬದ್ಧ ವ್ಯಾಖ್ಯಾನ ಕೊಡುತ್ತಿದ್ದಾರೆ. ಕಾಂಗ್ರೆಸ್ ವಿರೋಧಿ ಅಲೆಯಿಂದಾಗಿ ಮೋದಿ ಲಾಭ ಮಾಡಿಕೊಂಡರು ಎಂಬುದು ಅಂಥವರ ಅರ್ಥಹೀನ ಪ್ರಲಾಪಗಳಲ್ಲೊಂದು. ಮಧ್ಯಮ ವರ್ಗದವರ ಕನಸಿಗೆ ಕೊಳ್ಳಿ ಇಟ್ಟ ಕಾಂಗ್ರೆಸ್ ಬಗ್ಗೆ ಜನಕ್ಕೆ ಕೋಪ ಇದ್ದಿದ್ದು ನಿಜ. ಆದರೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇರಲಿಲ್ಲ. ಅಲ್ಲಿ ಯಾಕೆ ಜನ ಬಿಜೆಪಿಗೆ ಮತ ನೀಡಿದರು? ಹಾಗೆಯೇ ಬಿಹಾರದಲ್ಲೂ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅಲ್ಲಿಯೂ ಯಾಕೆ ಮತದಾರರು ಬಿಜೆಪಿಯನ್ನು ಬೆಂಬಲಿಸಿದರು? ಅದರರ್ಥ, ಮೋದಿಯವರನ್ನು ಗೆಲ್ಲಿಸಿರುವುದು ಕಾಂಗ್ರೆಸ್ ವಿರೋಧದ ನಕಾರಾತ್ಮಕ ಮತಗಳಲ್ಲ. ಮಧ್ಯಮ ವರ್ಗದ ಸಕಾರಾತ್ಮಕ ಮತಗಳು. ಕಾಂಗ್ರೆಸ್ ಮೇಲಿನ ಕೋಪವೊಂದೇ ಈ ಬಾರಿಯ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದಾಗಿದ್ದರೆ ಉತ್ತರಪ್ರದೇಶದಲ್ಲಿ ಬಿಎಸ್ಪಿ ಅಥವಾ ಎಸ್ಪಿ, ಬಿಹಾರದಲ್ಲಿ ಜೆಡಿಯುಗೆ ಹೆಚ್ಚು ಸ್ಥಾನಗಳು ಸಿಗಬೇಕಿತ್ತು.
ಇನ್ನು ಕರ್ನಾಟಕದ ವಿಚಾರಕ್ಕೆ ಬರೋಣ. ಯಾವುದೇ ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರ ಹಿಡಿದು ಎರಡು ವರ್ಷಗಳ ಒಳಗೆ ಗ್ರಾಮ ಪಂಚಾಯಿತಿಯಿಂದ ಹಿಡಿದು-ಲೋಕಸಭೆ ತನಕ ಯಾವುದೇ ಚುನಾವಣೆ ಬಂದರೂ ಮತದಾರರು ಅಧಿಕಾರಾರೂಢ ಪಕ್ಷವನ್ನು ಬೆಂಬಲಿಸುವುದು ಸರ್ವೇ ಸಾಮಾನ್ಯ. 2009ರ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಜಯಭೇರಿ ಬಾರಿಸಿದ್ದರೂ, ಕರ್ನಾಟಕದಲ್ಲಿ ಮಾತ್ರ ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹಾಗಾದರೆ, ಈ ಬಾರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಯಾಕೆ ಇಲ್ಲಿ ಎರಡಂಕಿಯನ್ನೂ ದಾಟಲಿಲ್ಲ? ಅದಕ್ಕೆ ಕಾರಣ, ಸಿದ್ದು ಸರ್ಕಾರದ ವಿರುದ್ಧ ಇಲ್ಲಿನ ಮಧ್ಯಮ ವರ್ಗದ ಗರ್ಭದೊಳಗೆ ಮೂಡಿರುವ ಆಕ್ರೋಶ. ಒಂದು ಕಡೆ ಶಾದಿ ಭಾಗ್ಯ, ಒಂದು ರೂಪಾಯಿಗೆ ಕೆಜಿ ಅಕ್ಕಿಯಂಥ ಕಾರ್ಯಕ್ರಮಗಳು, ಇನ್ನೊಂದೆಡೆ ಮಧ್ಯಮ ವರ್ಗದ ಮಕ್ಕಳ ಭವಿಷ್ಯ ನಿರ್ಧರಿಸುವ ಸಿಇಟಿಯಂಥ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದು, ಮಲ್ಲಿಕಾರ್ಜುನ ಬಂಡೆಯಂಥ ಅಧಿಕಾರಿಗಳ ಕೊಲೆ, ರಶ್ಮಿ ಅವರಂಥ ದಕ್ಷ ಅಧಿಕಾರಗಳಿಗೆ ಕಿರುಕುಳ, ಮೂಢನಂಬಿಕೆ ನಿಷೇಧದ ಹೆಸರಿನಲ್ಲಿ ಮಧ್ಯಮ ವರ್ಗದವರ ನಂಬಿಕೆಗಳ ಜತೆ ಚೆಲ್ಲಾಟ.. ಇವೆಲ್ಲವೂ ಸಿದ್ದು ವಿರುದ್ಧ ಮಧ್ಯಮ ವರ್ಗದ ಮತದಾರ ಸಿಡಿದೇಳಲು ಕಾರಣ. ಮೋದಿ-ಸಿದ್ದರಾಮಯ್ಯ ಮಧ್ಯೆ ಮೋದಿಯೇ ಮಧ್ಯಮ ವರ್ಗದವರ ಪಾಲಿಗೆ ಹೆಚ್ಚು ಆಶಾದಾಯಕವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಮೋದಿಯವರ ಖಾಸಗಿ ಬದುಕನ್ನೊಮ್ಮೆ ನೋಡಿ. ಅವರ ಬದುಕಿನ ಏಳು-ಬೀಳು, ಅಲೆದಾಟ-ಹುಟುಕಾಟ, ಹೋರಾಟ-ತಾಕಲಾಟ ಎಲ್ಲವೂ ನಮ್ಮ, ನಿಮ್ಮೆಲ್ಲರಂತೆಯೇ ಕಾಣುತ್ತದೆ. ಅವರು ನೆಹರೂರಂತೆ ಫಾರಿನ್‌ನಲ್ಲಿ ಓದಿದವರಲ್ಲ, ಮನಮೋಹನ್ ಸಿಂಗ್ ಥರ ಆರ್ಥಿಕ ತಜ್ಞ ಎಂಬ ಬೋರ್ಡು ನೇತುಹಾಕಿಕೊಂಡವರಲ್ಲ. ರಾಜೀವ್ ಗಾಂಧಿಯಂತೆ ವಿಮಾನ ಹಾರಿಸುವುದನ್ನು ಕಲಿತವರಲ್ಲ, ರಾಹುಲ್‌ರಂತೆ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರೂ ಅಲ್ಲ. ಅಷ್ಟೆಲ್ಲ ಏಕೆ? ಅರವಿಂದ ಕೇಜ್ರೀವಾಲ್ ಥರ ಯಾರದ್ದೋ ಹೋರಾಟದ ಫಲವಾಗಿ ಲಾಟರಿ ಹೊಡೆದಂತೆ ಅಧಿಕಾರ ಪಡೆದವರೂ ಅಲ್ಲ. ತಮ್ಮ ಮುಂದಿದ್ದ ಕಲ್ಲು ಮುಳ್ಳುಗಳ ಹಾದಿಯನ್ನೇ ಹೆದ್ದಾರಿಯಾಗಿ ಮಾಡಿಕೊಂಡು ದಿಲ್ಲಿ ಗದ್ದುಗೆ ಮುಂದೆ ಬಂದು ನಿಂತವರು.
ಇನ್ನು ಸಾಮಾನ್ಯವಾಗಿ ರಾಜಕೀಯ ವಿಚಾರಗಳಿಂದ ದೂರವೇ ಉಳಿಯುವ ಮಧ್ಯಮ ವರ್ಗದ ಮಹಿಳೆಯರೂ ಕೂಡ ಈ ಬಾರಿ ಮೋದಿಯವರ ಬೆನ್ನಿಗೆ ನಿಂತಿದ್ದಾರೆ. ಬಹುಷಃ ತನ್ನ ತಾಯಿಗೆ ಮೋದಿ ನೀಡುವ ಗೌರವ, ಪತ್ನಿಯಿಂದ ದೂರವಿದ್ದರೂ ದಾಂಪತ್ಯದ ವಿಚಾರದಲ್ಲಿ ಅವರು ನಡೆದುಕೊಂಡಿರುವ ರೀತಿ, ಆನಂದಿ ಬೆನ್, ಸ್ಮೃತಿ ಇರಾನಿ, ವಸುಂಧರಾ ರಾಜೆ, ಉಮಾ ಭಾರತಿ ಅವರಂಥ ನಾಯಕಿಯರನ್ನು ಮುಂಚೂಣಿಗೆ ತಂದಿರುವುದು ಇವೆಲ್ಲವೂ ಈ ವಿಚಾರದಲ್ಲಿ ಮೋದಿಯವರ ಪ್ಲಸ್ ಪಾಯಿಂಟ್‌ಗಳು. ಈ ಬಾರಿ ಚುನಾವಣೆಯಲ್ಲಿ 'ನಮೋ ಬ್ರಿಗೇಡ್‌' ಹೆಸರಿನಲ್ಲಿ ಸಾವಿರಾರು ಹುಡುಗರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲಿರುಳು ಮೋದಿ ಗೆಲುವಿಗಾಗಿ ದುಡಿದಿದ್ದಾರೆ. ಇವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಸುಶಿಕ್ಷಿತ ಯುವಕರು. ಒಟ್ಟಿನಲ್ಲಿ ಇಡೀ ಮಧ್ಯಮ ವರ್ಗ ಜಾತಿ-ಪ್ರಾಂತ್ಯಗಳ ಬೇಧವಿಲ್ಲದೇ ಮೋದಿ ಬೆನ್ನಿಗೆ ನಿಂತಿದೆ. ತಕ್ಷಣಕ್ಕೆ ಅವರ್ಯಾರೂ ಮೋದಿ ಅವರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಅವರಿಗೆ ಇವತ್ತಿಗೆ ಏನೂ ಬೇಡ. ಅವರೆಲ್ಲರಿಗೂ ಒಳ್ಳೆಯ ನಾಳೆಗಳು ಬೇಕು! ಅದನ್ನು ಮೋದಿ ಕೊಡುತ್ತಾರೆಂಬ ಭರವಸೆ ಅವರಿಗಿದೆ.
ನಿಮ್ಮೆಲ್ಲರ ಮನೆಗೂ ಅಮೃತ ಧಾರೆಯನ್ನೇ ಹರಿಸುತ್ತೇನೆ ಎಂದು ಮೋದಿ ಎಲ್ಲಿಯೂ ಹೇಳಿಲ್ಲ. ಆದರೆ, ಬೆಚ್ಚನೆಯ ಒಂದು ಕಪ್ ಚಹಾ ಕೊಟ್ಟು ಹೆಗಲ ಮೇಲೆ ಕೈ ಹಾಕಿ ಮೈದಡವುತ್ತಾರೆ ಎಂಬ ಭರವಸೆ ಮೂಡಿಸಿದ್ದಾರೆ. ಮೋದಿ ಅವರ ಬಳಿ ಮಧ್ಯಮ ವರ್ಗದ ಕನಸನ್ನು ಪೋಷಿಸುವ ಹಲವಾರು ಯೋಜನೆಗಳಿವೆ. ಮುಖ್ಯವಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗುವ ಸೂಚನೆ ಸಿಗುತ್ತಿದೆ. ಹಾಗೆಯೇ, ಭವಿಷ್ಯದಲ್ಲಿ ಆದಾಯ ತೆರಿಗೆಯನ್ನೇ ರದ್ದು ಮಾಡುವ ಮಾತನ್ನು ಮೋದಿಯವರು ಆಡಿದ್ದರು. 'ಅಚ್ಛೇ ದಿನ್ ಆನೇವಾಲೇ ಹೈ...' ಎಂಬ ಮೋದಿಯವರ ಮಾತನ್ನು ಮಧ್ಯಮ ವರ್ಗದವರು ನಂಬುವುದಕ್ಕೆ ಇಂಥ ಹಲವಾರು ಬಲವಾದ ಕಾರಣಗಳಿವೆ. ಮೋದಿ ಹೇಳಿದ್ದನ್ನು ಮಾಡಿ ತೋರಿಸುತ್ತಾರೆ ಎಂಬುದಕ್ಕೆ ಗುಜರಾತ್ ಮಾದರಿ ಕಣ್ಣ ಮುಂದಿದೆ!

-ಸುಧೀಂದ್ರ ಭಾರದ್ವಾಜ್, sudhi@suvarna.tv

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement