ಇವರ ದೃಷ್ಟಿಯಲ್ಲಿ ಎಲ್ಲರೂ ಸೋಲ್ಡ್ ಔಟ್!
ನೀವು ವಾರಣಾಸಿಗೆ ಚುನಾವಣೆ ಸ್ಪರ್ಧೆಗೆ ಹೋಗುವಾಗ ಜನ ಸಾಮಾನ್ಯರಂತೆ ರೈಲ್‌ನಲ್ಲಿ ಹೋದಿರಿ, ಸೋತಾಗ ವಿಮಾನದಲ್ಲಿ ವಾಪಸ್ ಹೋದದ್ದು ಏಕೆ?
ಆಮ್ ಆದ್ಮಿ ಪ್ರೈಮ್ (ಟೈಮ್) ಮಿನಿಸ್ಟರ್ ಅಭ್ಯರ್ಥಿ ಕುಂತರೂ, ನಿಂತರೂ, ಜೈಲ್‌ಗೆ ಹೋದರೂ ಎಷ್ಟೊಂದು ಪ್ರಚಾರ? ಅಂಥಾ ಮೋದಿ, ರಾಹುಲ್ ಅವರನ್ನೆಲ್ಲಾ ಚಾನೆಲ್‌ಗಳಲ್ಲಿ ಹಿಂದೆ ಹಾಕಿ ಪ್ರೈಮ್ ಟೈಮ್‌ಗಳಲ್ಲಿ ಮಿಂಚುವ ಹೊತ್ತಲ್ಲಿ ಹಿಂದಿ ಚಾನೆಲ್ ಫೆಮಸ್ ಶೋ 'ಕಾಮಿಡಿ ವಿತ್ ಕಪಿಲ್' ಕೂಡಾ ಮಂಕು ಹೊಡೆಯುತ್ತಿದೆಯಂತೆ. ಇದಕ್ಕೆಲ್ಲ ಕಾರಣ ಹುಡುಕಲು ಘನ ವರದಿಗಾರ ಮೂರ್ಖಾಸೀಮ ತಿಹಾರ್ ಜೈಲಿಂದ ಹೊರ ಬರುತ್ತಿದ್ದ ಕುಜ್ಲಿವಾಲ್ ಜತೆ ಫಟಾಫಟ್ ಸಂದರ್ಶನ ಮಾಡಿದ.
"ಕುಜ್ಲಿವಾಲ ಹಾರ್ ಗಯಾ, ತಿಹಾರ್ ಗಯಾ, ಬಾಂಡ್ ದೇಕೆ ಬಾಹರ್ ಆಗಯಾ" ಎಂದು ಜನರೆಲ್ಲ ನಿಮ್ಮನ್ನು ಅಣಕ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕುಜ್ಲಿವಾಲರು ಕೆಮ್ಮಿ ಭಾಷಣ ಶುರು ಮಾಡಿದರು, "ಮೀಡಿಯಾ ಸೋಲ್ಡ್ ಔಟ್, ಜನರೂ ಸೋಲ್ಡ್ ಔಟ್, ನ್ಯಾಯಾಧೀಶರೂ..." ಎನ್ನುವಷ್ಟರಲ್ಲಿ ಕಾಯಂ ಜೈಲು ವಾಸದ ನೆನಪಾಗಿ ಅರ್ಧಕ್ಕೆ ನಿಲ್ಲಿಸಿದರು. "ಭ್ರಷ್ಟಾಚಾರ ವಿರೋಧಿ ಆಂದೋಲನ ವೇಳೆ ರಾಜಕೀಯ ಸೇರುವುದಿಲ್ಲ ಎಂದು ಹೇಳಿ ಬಳಿಕ ಸೇರಿದಿರಿ, ಕಾಂಗ್ರೆಸ್ ಬೆಂಬಲ ಖಡಾ ಖಂಡಿತ ಪಡೆಯಲಾರೆ ಎಂದು ಹೇಳಿ ಅದರ ಬೆಂಬಲದಿಂದಲೇ ಸರ್ಕಾರ ಮಾಡಿದಿರಿ, ಬೇಡ ಎನ್ನುತ್ತಲೇ ಬಂಗಲೆ, ಭದ್ರತೆ ಪಡೆದಿರಿ, ಬಾಂಡ್ ನೀಡುವುದಿಲ್ಲ ಎಂದು ಜೈಲಿಗೆ ಹೋದಿರಿ, ಈಗ ಬಾಂಡ್ ನೀಡಿ ಹೊರಗೆ ಬಂದಿರಿ?" ಇದಕ್ಕೇನು ಕಾರಣ ಎಂದು ಮೂರ್ ಖಾಸೀಮ್ ಕುಟುಕಿದ.
ಇಲ್ಲ ನಾನು ಜನರಿಗೆ ಕೊಟ್ಟ ಮಾತು ಪರಿಪಾಲನೆ ಮಾಡಲೆಂದೇ ಜೈಲ್‌ಗೆ ಹೋಗಿದ್ದೇನೆ. ದಿಲ್ಲಿ ಜನರಿಗೆ ಮಾಜಿ ಮುಖ್ಯಮಂತ್ರಿಯನ್ನು ಜೈಲಿಗೆ ಅಟ್ಟುತ್ತೇನೆ ಎಂದು ಭರವಸೆ ನೀಡಿದ್ದೆ. ಲೋಕಸಭೆ ಚುನಾವಣೆ ಆದ ಬಳಿಕ ತಕ್ಷಣ ಮಾಜಿ ಮುಖ್ಯಮಂತ್ರಿ ಜೈಲಿಗೆ ಹೋಗುವಂತೆ ಮಾಡಿದೆನೋ ಇಲ್ಲವೋ? ಇದನ್ನು ಬೆಂಬಲಿಸಿ ನಮ್ಮ ಶಾಸಕರೊಬ್ಬರೂ ಜೈಲ್‌ಗೆ ಹೋಗಿ ನನ್ನನ್ನು ಬೆಂಬಲಿಸಿದ್ದಾರೆ ಎಂದರು.
ಪೆನ್ನು ಕೆಳಗಿಟ್ಟು ಮೂರುಖಾಸಿಮ ಚಪ್ಪಾಳೆ ಹೊಡೆಯತೊಡಗಿದೆ. ಅರ್ಧಕ್ಕೆ ತಡೆದ ಕುಜ್ಲಿ, ಇನ್ನೂ ಒಂದು ಕಾರಣ ಇದೆ. ಜಾಮೀನು ಬಾಂಡ್‌ಗೆ ಹತ್ತು ಸಾವಿರ ಕೊಡಲು ನನ್ನ ಸಿದ್ಧಾಂತ ಒಪ್ಪುವುದಿಲ್ಲ ಎಂದು ಎಲ್ಲ ಮಾಧ್ಯಮಗಳ ಮುಂದೆ ಹೇಳಿದ್ದೇನೆ. ನೀವು ನನ್ನ ಆತ್ಮೀಯ ಪತ್ರಕರ್ತರಾದ ಕಾರಣ ಹೇಳುತ್ತಿದ್ದೇನೆ. ಆಪ್ ಸಿದ್ದಾಂತವೇ ಆಗಿದ್ದರೇ ನಮ್ಮ ಫೋಟೋಗಳನ್ನೆಲ್ಲ ಬೇಕಾದ ಹಾಗೆ ಎಡಿಟ್ ಮಾಡುವ ಯೋಗೇಂದ್ರ ಕೂಡಾ ಜೈಲ್‌ಗೆ ಬರಬೇಕಿತ್ತು. ಅವರು ಬೇಲ್ ಪಡೆದಿಲ್ವಾ? ನಿಮ್ಮ ಪಕ್ಷ ಬಿಜೆಪಿ, ಕಾಂಗ್ರೆಸ್‌ಗಿಂತಲೂ ಹೆಚ್ಚು ಅಂದರೆ 432 ಕಡೆ ಸ್ಪರ್ಧಿಸಿ, ಎಲ್ಲರಿಗಿಂತ ಹೆಚ್ಚು ಅಂದರೆ 413 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. 4 ಮಂದಿ ಗೆದ್ದಿದ್ದಾರೆ. ನೀವು ಮತ್ತು ವ್ಯೋಮನಾಥ ಸಾರಥಿ ಒಟ್ಟು 4 ಬಾರಿ ಪೆಟ್ಟು ತಿಂದಿರಿ, ಫೋರ್ಡ್ ಫೌಂಡೇಷನ್‌ನಿಂದ 4 ಲಕ್ಷ ಅಮೆರಿಕನ್ ಡಾಲರ್ ಪಡೆದಿರಿ. 49 ದಿನ ದಿಲ್ಲಿ ಆಡಳಿತ ಮಾಡಿದಿರಿ. ಚುನಾವಣೆಯಲ್ಲಿ ಸೋತು 4 ದಿನದಲ್ಲಿ ಜೈಲಿಗೆ ಹೋದಿರಿ, ಜೈಲಿಗೆ ಹೋದ ನಾಲ್ಕೇ ದಿನದಲ್ಲಿ ಬಾಂಡ್ ನೀಡುವುದಾಗಿ ಒಪ್ಪಿಕೊಂಡಿರಿ! ನಿಮ್ಮ ಪ್ರತಿ ನಡೆಯಲ್ಲಿ 4 ಸಂಖ್ಯೆ ಅದೃಷ್ಟ ಕಾರಣವೇ?
ಕುಜ್ಲಿ ತಕ್ಷಣ ಅಂದರು "ಮುಂಡಾ ಮೋಚ್ತು, ಯೇ ಚಾರ್ ದಿನ್ ಕಾ ಖೇಲ್ ಹೈ, ಸಬ್‌ಕೆ ಸಬ್ ಚೋರ್ ಹೈ. ಇಸ್‌ಕೆ ಪೀಛೆ ಅಂಬಾನಿ, ಔರ್ ಅದಾನಿಕಾ ಹಾತ್ ಹೈ" ಎಂದು ಒಂದೇ ಮಾತಿನಲ್ಲಿ ಮುಗಿಸಿದರು.
ನೀವು ವಾರಣಾಸಿಗೆ ಚುನಾವಣೆ ಸ್ಪರ್ಧೆಗೆ ಹೋಗುವಾಗ ಜನ ಸಾಮಾನ್ಯರಂತೆ ರೈಲ್‌ನಲ್ಲಿ ಹೋದಿರಿ, ಸೋತಾಗ ವಿಮಾನದಲ್ಲಿ ವಾಪಸ್ ಹೋದದ್ದು ಏಕೆ? ತಕ್ಷಣ ಪಕ್ಕದಲ್ಲಿಯೇ ಇದ್ದ ಪಾಪ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಅವರು ತೋರಿಕೆಗಾಗಿ ರೈಲ್‌ನಲ್ಲಿ ಬರಲಿಲ್ಲ. ಕುಜ್ಲಿವಾಲ್ ಎಷ್ಟೊಂದು ಪ್ರಾಮಾಣಿಕ, ಜನ ಸಾಮಾನ್ಯ ಎಂದರೆ ಅವರು ರಾಜಕಾರಣಿಗಳಂತೆ ಬಿಳಿ ಬಟ್ಟೆ, ಜುಬ್ಬಾ ಧರಿಸದೆ ಮಾಮೂಲಿ ಪ್ಯಾಂಟ್ ಶರ್ಟ್ ಹಾಕುತ್ತಾರೆ. ವಿಐಪಿ ಹೆಸರಿದೆ ಎಂಬ ಕಾರಣಕ್ಕೆ ವಿಐಪಿ ಒಳಚಡ್ಡಿ ಕೂಡಾ ಹಾಕೋದಿಲ್ಲ ! ಎಂದರು. ಇನ್ನು ಹೆಚ್ಚು ಡೀಪ್ ಸಂದರ್ಶನ ಮಾಡಲು ಇಚ್ಛಿಸದೆ, ರಾಜ್ಯ ಸರ್ಕಾರದ ಹೊಗಳು ಭಟರಾಗಿ ಕೆಲಸ ಮಾಡಿದ್ದಕ್ಕೆ ಜ್ಞಾನಮೂರ್ತಿಗಳ ಸಂದರ್ಶನಕ್ಕೆ ಮೂರುಖಾಸೀಮ ಹಾಜರ್. ಸುಖಾ ಸುಮ್ಮನೆ ಮೋದಿಯನ್ನು ಟೀಕಿಸಿ, ಜನರಿಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಕಾರಣಕ್ಕೆ, ಸರ್ಕಾರದ ಎಲ್ಲ ನೀತಿಗಳಿಗೂ ಕೋಲೆ ಬಸವನಂತೆ ತಲೆ ಅಲ್ಲಾಡಿಸುವ ಕಾರಣಕ್ಕೆ ಸರ್ಕಾರ ಪ್ರಶಸ್ತಿ ನೀಡಿರಬೇಕಲ್ಲವೇ ಎಂದು ಮೊದಲ ಪ್ರಶ್ನೆ ಮೂರ್ತಿಗಳಿಗೆ ಎಸೆದ.
ಇಲ್ಲ ಕರಾವಳಿ ಕಡೆ ಬಸವ (ಗೋವು)ಗಳನ್ನು ದಿನ ನಿತ್ಯ ಕಳವು ಮಾಡುವ, ಕೊಲ್ಲುವ ಕಸಾಯಿಗಳಿಗೆ ಸದಾ ಬೆಂಬಲ ನೀಡುತ್ತೇನೆ ಈ ಕಾರಣಕ್ಕೆ ನನಗೆ ಕೋಲೇ ಬಸವ ಪ್ರಶಸ್ತಿ ಬಂತು. ನಾನು ಇದನ್ನು ಕುರಿ ಮಂದೆಗೆ ಅರ್ಪಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು !
-ಜಿತೇಂದ್ರ ಕುಂದೇಶ್ವರ
ಕನ್ನಡ ಪ್ರಭ