ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿ ಆಡಳಿತದ ಮುಂದಿರುವ ಸವಾಲುಗಳೇನು?

Srinivasa Murthy VN
Updated On : 1 Jun 2014, 12:58 pm

ಐರೋಪ್ಯ ಒಕ್ಕೂಟಗಳು ಸಾಧಿಸಿರುವ ಮಟ್ಟಕ್ಕೆ ತಲುಪಲು ಭಾರತ ಎಲ್ಲರೊಂದಿಗೂ ಕೂಡಾ ಉತ್ತಮ ಸಂಬಂಧವನ್ನು ಹೊಂದಲೇಬೇಕಾಗಿದೆ. ಇನ್ನು ದೇಶದ ಆಂತರಿಕ ಸಮಸ್ಯೆಗಳಲ್ಲಿ ಪ್ರಮುಖವಾದ ನಕ್ಸಲಿಸಂ ಕೂಡಾ ತಲೆನೋವಾಗಿಬಿಟ್ಟಿದೆ.
ಬಹಳ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಯುವ ಭಾರತದಲ್ಲಿ ಅಷ್ಟೇ ಪ್ರಮಾಣದ ರಾಜಕೀಯ ಇತಿಹಾಸವು ನೆಲೆಗೂಡಿದೆ. ಜಾತಿ ರಾಜಕಾರಣ, ಧರ್ಮ ಸಂಘರ್ಷ ಮುಂತಾದ ಚಟುವಟಿಕೆಗಳಲ್ಲಿ ಭಾರತ ವಿಶ್ವದ ಗಮನ ಸೆಳೆದುದ್ದಲ್ಲದೆ ಬಹುತೇಕ ಹಲವು ಲಕ್ಷ ಕೋಟಿ ರು.ಗಳ ಹಗರಣಗಳ ಸರಮಾಲೆಯನ್ನು ಸಹ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಭಾರತದಲ್ಲಿ, ಭಾರತದ ಜನರ ನರನಾಡಿಯಲ್ಲೂ ಸಹ ರಾಜಕೀಯ ಅನ್ನುವುದು ಮನೆಮಾಡಿದೆ. ಜೊತೆ ಜೊತೆಗೆ ಕೆಲ ಗಂಭೀರ ಸಮಸ್ಯೆಗಳೂ ಸಹ ಆಂತರಿಕ ಮುಖಪುಟದಲ್ಲಿ ಕಾಣಸಿಗುತ್ತದೆ.
ಭಾರತ ಎಲ್ಲರಿಗೂ ತಿಳಿದಿರುವಂತೆ ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಹಲವಾರು ಜಾತಿ, ಧರ್ಮ, ಮತ, ಜನಾಂಗ, ಭಾಷೆಗಳಿವೆ. ಇವುಗಳಲ್ಲಿ ಐಕ್ಯತೆಯನ್ನು ಕಂಡ ದೇಶ ನಮ್ಮದು  -ಬೆನಡಿಕ್ಟ್ ಆ್ಯಂಡರ್‌ಸನ್  “Nation is an imagined community” ಎನ್ನುತ್ತಾರೆ. ಅಂದರೆ ವಾಸ್ತವಿಕತೆಯನ್ನು ನೋಡುತ್ತಾ ಬಂದಾಗ ಒಳನೋಟದಲ್ಲಿ ಜನರು ತಮ್ಮ ಅಸ್ಮಿತೆಯ (identity) ಬಗೆಯೇ ಹೆಚ್ಚಿನ ಹೊಡೆದಾಟ ಮಾಡುತ್ತಿದ್ದಾರೆ. ಅಸ್ಮಿತೆಯನ್ನು ಅನನ್ಯತೆ ಎಂಬ ಪದದಿಂದ ಕೂಡಾ ಕರೆಯಬಹುದಾಗಿದೆ. ಇಲ್ಲಿ ಪ್ರಮುಖವಾಗಿ ತನ್ನನ್ನು ತಾನು ಇತರದೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನ ಪಡುತ್ತಿರುತ್ತಾನೆ. ಅಂದರೆ ತಾನು ಯಾರು? ಸಮಾಜದಲ್ಲಿ ತನ್ನ ಗೌರವ ಏನು? ಇಂತಹ ವಿಷಯಗಳು ಸದಾ ಅವನು ತನ್ನ ವ್ಯಕ್ತಿಗತ ಮನಸ್ಸಿನಲ್ಲಿ ವ್ಯಕ್ತ ಪಡಿಸುತ್ತಾನೆ.
ಜನರು ತಾನು ಭಾರತಕ್ಕೆ ಸೇರಿದವನು, ಆದ್ದರಿಂದ ನಾನು ಭಾರತೀಯನೆಂಬ ಐಡೆಂಟಿಟಿಯಲ್ಲಿ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಏಕೆಂದರೆ ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಈ ಅಸ್ಮಿತೆಯನ್ನು ಪಡೆದಿರುವುದರಿಂದ, ವಿನೂತನ ಅಸ್ಮಿತೆಯಿಂದ ಗುರುತಿಸಲು ಇಚ್ಛಿಸುತ್ತಾನೆ. ಅಂದರೆ ಆ ರೀತಿಯಾಗಿ ಅವನನ್ನು ಮಾತ್ರ ಗುರುತಿಸಬೇಕು ಮತ್ತು ನಾನು ಇತರಿಗಿಂತ ಭಿನ್ನ, ಶ್ರೇಷ್ಠ ಎಂದು ತೋರಿಸಿಕೊಳ್ಳುವುದೇ ಉದ್ದೇಶವಾಗಿರುತ್ತದೆ.
ಈ ರೀತಿ ಒಬ್ಬ ತನ್ನ ವಿಶಿಷ್ಟ ರೀತಿಯ ಅಸ್ಮಿತೆಯನ್ನು ಪಡೆದಾಗ ಅವನು ಇತರ ವ್ಯಕ್ತಿ, ಜಾತಿ, ಧರ್ಮಗಳ, ಸಂಸ್ಕೃತಿಯನ್ನು ಅನುಸರಿಸುವ ಜನರ ಅಸ್ಮಿತೆಗಳನ್ನು ಕೀಳು ಎಂದು ಪರಿಗಣಿಸಿದಾಗ ಮೇಲು ಕೀಳಿನ ಭಾವನೆ ಉಂಟಾಗುತ್ತದೆ. ಈ ರೀತಿಯಾಗಿ ಒಂದು ಅಸ್ಮಿತೆ ಮೇಲು, ಇನ್ನೊಂದು ಕೀಳು ಎಂದು ಪರಿಗಣಿಸುವ ಭಾವನೆಯೇ ಅಸ್ಮಿತಾ ರಾಜಕೀಯ.
ದೇಶದೊಳಗೇ ನಡೆಯುತ್ತಿರುವ ಆಂತರಿಕ ಶೀತಲ ಸಮರದ ಬಗೆಗೆ ಯಾರೂ ಗಮನ ಹರಿಸುವುದಿಲ್ಲ. ಶ್ರೇಷ್ಟತೆಯ ಅಸ್ಮಿತೆಯುಳ್ಳವರು ತನ್ನನ್ನು ತಾನು ಶ್ರೇಷ್ಟರೆಂದು ಭಾವಿಸಿ ಇತರರನ್ನು ಕಡೆಗಣಿಸಿದಾಗ ಅದು ಸಹಜವಾಗಿ ಸಂಘರ್ಷದ ಭಾವನೆಯನ್ನು ಸೃಷ್ಟಿಸುತ್ತದೆ.
ರಾಜ್ಯಶಾಸ್ತ್ರದ ಶ್ರೇಷ್ಟ ದಾರ್ಶನಿಕ ರೂಸೋ ಹೇಳುವ ಪ್ರಕಾರ ಮನುಷ್ಯ ಸ್ವಭಾವತಃ ಸಾಧು, ಆದರೆ ಸಮಯ ಸಂದರ್ಭ ಅವನನ್ನು ಕೆಟ್ಟವನನ್ನಾಗಿ ಮಾಡುತ್ತದೆ. ರಾಜಕಾರಣದಲ್ಲೂ ಕೂಡಾ ಎಲ್ಲರೂ ಸಹ ಮಿತ್ರರೇ ಆದರೆ ಹಾಳುಮಾಡುವುದು ಸಮಯ, ಸಂದರ್ಭ. ಪ್ರತೀ ರಾಜಕೀಯ ಪಕ್ಷಗಳೂ ಸಹ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳುವಾಗ ತನ್ನ ಪಕ್ಷವೇ ಮೇಲೇಂದು ಹೇಳುತ್ತಾ ಬರುತ್ತವೆ. ಈ ಜಾಯಮಾನ ಕಾಂಗ್ರೆಸ್ ಪಕ್ಷದ ರಾಜಕಾರಣದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಕಂಡದ್ದು. ಈ ಬಾರಿಯಂದೇನಲ್ಲ ಆದರೆ ನರೇಂದ್ರ ಮೋದಿ ನಾಯತ್ವದ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕೊಂಚ ವಿಶಿಷ್ಠವೆನೆಸಿತು, ಪ್ರತೀ ಬಾರಿ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿದರೂ ಸಹ ಎಲ್ಲಿಯೂ ಪಕ್ಷದ ಅಸ್ತಿತ್ವದ ಬಗ್ಗೆ ಮೇಲು ಕೀಳೆನ್ನುವ ಭಾವನೆಯನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಲೇ ಇಲ್ಲ. ಮೇಲ್ನೋಟಕ್ಕೆ ಆ ಭಾಷಣ  ಚುನಾವಣಾ ಪ್ರಚಾರದಂತೆ ಕಂಡರೂ ಅಲ್ಲಿ ನಡೆದದ್ದು ವಿಚಾರಮಂಥನ. ಭಾರತವನ್ನು ಅದರ ವೈಭವವನ್ನು ಮರು ಸ್ಥಾಪಿಸುವ, ಸಾಂಪ್ರದಾಯಿಕತೆಯನ್ನು ಇರಿಸಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಹೇಗೆ ಸ್ಪರ್ಧೆ ಮಾಡುವುದು, ಬೇರಿನಿಂದಲೇ ಭಾರತದ ಬುಡ ಗಟ್ಟಿಮಾಡುವ ಯೋಜನೆಗಳ ಬಗ್ಗೆ ಜನರ ವಿಶ್ವಾಸವನ್ನು ತೆಗೆದುಕೊಂಡು ಮಾಡಿದ ದಿಕ್ಸೂಚಿ ಭಾಷಣ ಅದಾಗಿತ್ತು. ಯಾವಾಗ ನಾವು ನಮ್ಮ ನೆರೆಹೊರೆಯ ರಾಷ್ಟ್ರಗಳೊಡನೆ ವಿಶ್ವಾಸ ಬಲಪಡಿಸುವ ಕಾರ್ಯದಲ್ಲಿ ನಮ್ಮನ್ನು ಜೋಡಿಸಿಕೊಳ್ಳುತ್ತೇವೋ ಆಗ ಅಂತಾರಾಷ್ರೀಯ ಮಟ್ಟದಲ್ಲೂ ಕೂಡಾ ಗುರುತಿಸಿಕೊಳ್ಳಲು ಸಾಧ್ಯ. ಮೊದಲು ನಾವು ನಮ್ಮನ್ನು ಭದ್ರಪಡಿಸುವತ್ತ ಚಿಂತಿಸಬೇಕು. ಉತ್ತಮ ಬಾಂಧವ್ಯವನ್ನು ನಾವು ಕಟ್ಟಿಕೊಂಡ ಪ್ರಾದೇಶಿಕ ಸಂಘಟನೆಯಾದ ಸಾರ್ಕ್‌ನ ಸದಸ್ಯ ರಾಷ್ಟ್ರಗಳೊಡನೆ ಮೈಗೂಡಿಸಿಕೊಳ್ಳಬೇಕಾಗುತ್ತದೆ. ನರೇಂದ್ರ ಮೋದಿ ಈ ಕಾರಣದಿಂದಲೇ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಆಮಂತ್ರಿಸಿದರು.  
ಮೋದಿ ಆಡಳಿತ ಗಾದಿಗೆ ತಲುಪುತ್ತಿರುವಂತೇ ಎಲ್ಲವೂ ಆಯಿತೆಂದಲ್ಲ, ಬದಲಾಗಿ ನಾವು ಆಶಿಸಿರುವ ನೈಜ ವ್ಯಕ್ತಿತ್ವದ ಅನಾವರಣ ಆಗಬೇಕಿದೆ. ನಾವು ಕಟ್ಟಿಕೊಂಡು ಬಂದದ್ದು ಆ ಮೋದಿಯನ್ನು ವಿನಃ ಬೇರೆಯವರನ್ನಲ್ಲ. ಅಂದರೆ ಮಾತಾಡುವ, ಕಾಲಹರಣ ಮಾಡುವ, ಗಂಟೆಗಟ್ಟಲೆ ಮೈಕ್ ಹಿಡಿದು ಮಾತನಾಡುವ ಆ ಮೋದಿಯನ್ನಲ್ಲ ಬದಲಾಗಿ ಬದಲಾವಣೆಯ ಹರಿಕಾರನಾಗಿ, ಭೂಪಟದ ನಕ್ಷೆಯಲ್ಲಿ ಕಂಗೊಳಿಸಬೇಕಾದ ಭವ್ಯ ಭಾರತದ ನಿರ್ಮಾತೃವಾಗಿ .. ಈಗಾಗಲೇ ಮೋದಿಯ ಅಧಿಕಾರದ ಖದರ್ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಹಿಂದೆ ನಿದ್ದೆ ಮಾಡಿದ ಹಾಗೆ ಇನ್ನೂ ನಿದ್ರಿಸಿದರೆ ಮುಂದೆ ಸಂಪೂರ್ಣವಾಗಿ ಮನೆಯಲ್ಲೇ ನಿದ್ದೆ ಮಾಡುವ ಪರಿಸ್ಥಿತಿ ಬರಬಹುದು ಎಂಬುದು ಅರಿವಾಗತೊಡಗಿದೆ. ಉಳಿದ ಎಲ್ಲಾ ರಾಷ್ಟ್ರಗಳೂ ಸೇರಿದಂತೆ ಭಾರತವೂ ಎದುರಿಸುತ್ತಿರುವ ಸಮಸ್ಯೆ ಭಯೋತ್ಪಾದನೆ. ಇದನ್ನು ಮಟ್ಟ ಹಾಕಲು ಕೇವಲ ಭಾರತ ಒಂಟಿಯಾಗಿ ಶ್ರಮಿಸಿದರೆ ಏನೇನೂ ಸಾಲದು. ಇದಕ್ಕೆ ನಮ್ಮ ನೆರೆಹೊರೆಯರೊಂದಿಗೆ ಉತ್ತಮ ಭಾಂಧವ್ಯ ಏರ್ಪಡಬೇಕು. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳನ್ನು ನಡೆಸಿ ಹೋರಾಟ ಕ್ರಮದ ನಿರ್ಧಾರಕ್ಕೆ ಬರಬೇಕಾಗಿದೆ. ನಿರುದ್ಯೋಗ, ಬಡತನ, ಪೌಷ್ಟಿಕಾಂಶ ಕೊರತೆ, ರೋಗ ಪೀಡಿತ ಅರ್ಥವ್ಯವಸ್ಥೆಯನ್ನು ಪುನರ್‌ಪರಿಶೀಲಿಸುವ ಮೂಲಕ ಪ್ರಸ್ತುತ ಸಮಸ್ಯೆಯ ಬೇರನ್ನು ಹುಡುಕಿ ತೆಗೆದುಹಾಕಲು ಹೊಸ ತಂತ್ರ ಯೋಜನೆಯನ್ನು ಮಾಡಬೇಕಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭಾರತ ಹಾಗೂ ಪಾಕಿಸ್ತಾನಗಳ ನಡುವಣ ಮಾತುಕತೆಗೆ ಮರುಚಾಲನೆಯನ್ನು ನೀಡಬೇಕಾಗಿದೆ. ಇದರಲ್ಲಿ ಇನ್ನೂ ಬಗೆಹರಿಯದ ಸಮಸ್ಯೆಗಳಾದ ಕಾಶ್ಮೀರದ ಗಡಿರೇಖೆ, ವ್ಯಾಪಾರ, ನಾಗರಿಕ ಸೇವಾ ಕ್ಷೇತ್ರ, ವಾಜಪೇಯಿಯವರ ಕಾಲದಲ್ಲಿ ಮಾಡಲಾದ ಸಂಚಾರ ಸಂಬಂಧ, Intellectual transfer,ಈ ಕ್ಷೇತ್ರಗಳಲ್ಲಿ ಭಾರತ ಉತ್ತಮ ಬಾಂಧವ್ಯವನ್ನು ಬೆಳೆಸುವಲ್ಲಿ ಶ್ರಮಿಸಬೇಕಾಗಿದೆ. ಐರೋಪ್ಯ ಒಕ್ಕೂಟಗಳು ಸಾಧಿಸಿರುವ ಮಟ್ಟಕ್ಕೆ ತಲುಪಲು ಭಾರತ ಎಲ್ಲರೊಂದಿಗೂ ಕೂಡಾ ಉತ್ತಮ ಸಂಬಂಧವನ್ನು ಹೊಂದಲೇಬೇಕಾಗಿದೆ. ಇನ್ನು ದೇಶದ ಆಂತರಿಕ ಸಮಸ್ಯೆಗಳಲ್ಲಿ ಪ್ರಮುಖವಾದ ನಕ್ಸಲಿಸಂ ಕೂಡಾ ತಲೆನೋವಾಗಿಬಿಟ್ಟಿದೆ. ಒಂದು ಕಡೆಯಲ್ಲಿ ಸಮಸ್ಯೆಗಳು ಈ ರೀತಿಯಾಗಿವೆಯಾದರೂ, ಸಹ ರಾಷ್ಟ್ರಗಳಲ್ಲಾಗುವ ಎಲ್ಲಾ ಬದಲಾವಣೆಗಳನ್ನು  ಕೇವಲ ಅನುಮಾನಾಸ್ಪದ ದೃಷ್ಟಿಯಿಂದ ನೋಡಿದರೆ ಅಲ್ಲೂ ನಡೆದ ಮಾತುಕತೆಗಳು ಮುರಿದುಬೀಳುವ ಸಾಧ್ಯತೆಗಳು ಬಹಳಷ್ಟಿವೆ. ಇದು ಒಂದಾದರೆ ಇನ್ನೊಂದು ಕಡೆಯಲ್ಲಿ ನಮ್ಮ ದೇಶದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಕಂಪನಿಗಳನ್ನು ಪುನಃ ಮೇಲೆತ್ತಬೇಕಾಗಿದೆ.
ಎಷ್ಟೆಲ್ಲಾ ಸಮಸ್ಯೆಗಳಿವೆ. ಕಾಶ್ಮೀರ ಸ್ವಾತಂತ್ರ್ಯ ಸಿಕ್ಕಿದ ಕಾಲದಿಂದಲೂ ಇಂದಿನವರೆಗೆ ಬಗೆಹರಿಸಲಾಗದ ಬಿಕ್ಕಟ್ಟು. ಇದು ಮನಸ್ಸಿಗೆ, ಭಾವನೆಗಳಿಗೆ ಸಂಬಂಧಪಟ್ಟದ್ದು. ಪರಿಹರಿಸುವಾಗ ಬಹಳ ನಾಜೂಕಾದ ಹೆಜ್ಜೆ ಇಡಬೇಕಿದೆ. ಹೇಳಿ ಕೇಳಿ ಭಾರತ ಇಡೀ ದಕ್ಷಿಣ ಏಷ್ಯಾದಲ್ಲೇ ದೊಡ್ಡ ದೇಶ. ಚೀನಾ ಇದನ್ನೆಲ್ಲ ಸಹಿಸುವುದಿಲ್ಲ. ವಿಶ್ವಸಂಸ್ಥೆಯಲ್ಲೂ ಭಾರತದ ಸ್ಥಾನ ಅಷ್ಟಕ್ಕಷ್ಟೆ. ಮುಖ್ಯವಾಗಿ ದೇಶದ ನಾಯಕರು ಇನ್ನೊಂದು ದೇಶಗಳ ಮೇಲೆ ಹಿಟ್ಲರ್ ರಾಜಕಾರಣ ಮಾಡಬಾರದು. ಅಂದರೆ ಯಾವಾಗ ದೇಶೀಯ ಅಸ್ಮಿತೆಯ ರಾಜಕಾರಣ ಮಾಡುತ್ತಾರೋ ಅದು ತನ್ನನ್ನು ತಾನು ಶ್ರೇಷ್ಟ, ಇತರೇ ದೇಶಗಳು ಕೀಳು ಎಂದಂತಾಗುತ್ತದೆ. ಇದಕ್ಕೆ ತೀವ್ರಕರವಾದ ರಾಷ್ಟ್ರೀಯತೆ ಎನ್ನುತ್ತಾರೆ. ಕ್ರಮೇಣ ಬೆಳೆದು ಇದು ವೈಷಮ್ಯಗಳಿಗೆ ಕಾರಣ ಮಾಡಿಕೊಡುತ್ತದೆ. ದೇಶದ ಹೊರಗೆ ಮಾತ್ರವಲ್ಲದೆ ದೇಶದ ಒಳಗೆ ಕೂಡಾ ಅನೇಕ ಸವಾಲುಗಳನ್ನು ಎದುರಿಸಬೇಕಾದೀತು. ಇದಕ್ಕೆಲ್ಲಾ ದಿಟ್ಟ ಉತ್ತರ ನೀಡಲಿದ್ದಾರೆ ಮೋದಿ. ನಾವು ಬೇರೆ ಮಾದರಿಯ ಅಭಿವೃದ್ಧಿ ಹಾದಿಗಳನ್ನು ನೋಡೋಣ. ಸಿದ್ಧಾಂತಗಳ ನಡುವೆ ಸಂಘರ್ಷಗಳೂ ಸಹ ಅಭಿವೃದ್ಧಿಗೆ ತೊಡಕಾಗಬಹುದು. ಶೇ. 55 ಯುವಕರೇ ತುಂಬಿರುವ ಭಾರತದಲ್ಲಿ ಯುವಕರು ಹಾದಿ ತಪ್ಪದೇ ತಮ್ಮ ನೆಲವನ್ನು ಪುಣ್ಯಸ್ಥಳ ಎಂದು ಪರಿಗಣಿಸಿ ತಮ್ಮ ಬುದ್ದಿಯನ್ನು ಬೇರೆದೇಶಗಳಿಗೆ ಹಣಕ್ಕಾಗಿ ಮಾರದೇ, ಭಾರತದ ಆಭಿವೃದ್ಧಿಗಾಗಿ ವಿನಿಯೋಗಿಸಬೇಕು. ಹೀಗಾಗಬೇಕಾದರೆ ಅಭಿವೃದ್ಧಿ ಕೇವಲ ಭೌತಿಕವಾಗಿರದೇ ಮಾನಸಿಕ, ಸಾಮಾಜಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಾಗಬೇಕು.
ರಾಜಕೀಯ ಶಾಸ್ತ್ರಜ್ಞರು ಹೇಳುವ ಪ್ರಕಾರ ಆ ದೇಶದ ಅಳಿವು ಉಳಿವು ಎಂಬುವುದು ಅದು ರೂಪಿಸುವ ವಿದೇಶಾಂಗ ನೀತಿಯ ಮೇಲಿರುತ್ತದೆ. ಆದ್ದರಿಂದ ನರೇಂದ್ರ ಮೋದಿಯವರು ಖಂಡಿತಾ ಇದನ್ನು ಯಶಸ್ವಿಯಾಗಿ ನಿಭಾಯಿಸಿ ದೇಶವನ್ನು ಮುನ್ನಡೆಸಲಿದ್ದಾರೆಂಬ ಭರವಸೆ ಎಲ್ಲರಲ್ಲೂ ಮನೆಮಾಡಿದೆ.

-ಹರೀಶ್ ರಾವ್
ಉಪನ್ಯಾಸಕರು, ರಾಜ್ಯಶಾಸ್ತ್ರ ವಿಭಾಗವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement