ಚಿಕ್ಕವರಿದ್ದಾಗ ಕೇಳಿದ ಹೀಗೊಂದು ಸುಂದರ ಕಥೆಯಿದೆ. ಕೃಷ್ಣದೇವರಾಯನ ರಾಜ್ಯಕ್ಕೆ ಭಾರೀ ಪೈಲ್ವಾನನೊಬ್ಬ ಬಂದ. ರಾಜನೆದುರಿಗೆ ನಿಂತು ನಿಮ್ಮ ದೇಶದ ಪೈಲ್ವಾನರನ್ನೆಲ್ಲ ಸೋಲಿಸುವೆ ಎಂದು ಸವಾಲು ಹಾಕಿದ. ಅದರಂತೆ ರಾಜ್ಯದ ಮಹಾ ಪೈಲ್ವಾನರನ್ನೆಲ್ಲಾ ಸ್ಪರ್ಧೆಯಲ್ಲಿ ಮಣ್ಣು ಮುಕ್ಕಿಸಿದ. ರಾಜನಿಗೆ ಮರ್ಯಾದೆಯ ಪ್ರಶ್ನೆ! ಯಾರು ಈ ಹೊರರಾಜ್ಯದ ಪೈಲ್ವಾನನನ್ನು ಸೋಲಿಸುವರೋ ಅವರಿಗೆ ಸೂಕ್ತವಾದ ಬಹುಮಾನ ಕೊಡಲಾಗುವುದು ಎಂದು ಡಂಗುರ ಸಾರಿದ. ಘಟಾನುಘಟಿಗಳೇ ಸೋತ ಮೇಲೆ ನಮ್ಮದೇನು ಲೆಕ್ಕ ಎಂದು ಹೆದರಿದ ಪ್ರಜೆಗಳಾರೂ ಮುಂದೆ ಬರಲಿಲ್ಲ. ಚಿಂತಿತನಾದ ರಾಜ ತೆನಾಲಿ ರಾಮನ ಮೊರೆ ಹೋದ. ತೆನಾಲಿ ರಾಮನು ಕೊಂಚ ಯೋಚಿಸಿ ಒಂದು ಉಪಾಯ ಮಾಡಿದ. ಒಂದು ವಾರದ ನಂತರ ಸ್ಪರ್ಧೆಯನ್ನು ಏರ್ಪಡಿಸಲು ಹೇಳಿದ. ಅದರಂತೆ ಸ್ಪರ್ಧೆಯನ್ನು ಘೋಷಿಸಲಾಯಿತು. ಮರುದಿನ ತೆನಾಲಿ ರಾಮನು ಒಬ್ಬ ನರಪೇತನ ಯುವಕನನ್ನು ತಂದು ನಿಲ್ಲಿಸಿ ಇವನೇ ಪೈಲ್ವಾನನೊಡನೆ ಕದಾಡುವ ಜಟ್ಟಿ ಎಂದು ಎಂದು ಆಸ್ಥಾನದಲ್ಲಿ ಪರಿಚಯಿಸಿದ. ಪೈಲ್ವಾನನಿಗೆ ಯಾವ ರೀತಿಯಿಂದಲೂ ಸಾಟಿಯಾಗದ ಯುವಕನ ದೇಹಸೌಷ್ಠವವನ್ನು ನೋಡಿ ಸಭಾಸದರೆಲ್ಲ ನಗತೊಡಗಿದರು. ರಾಜನಿಗೆ ತೆನಾಲಿ ರಾಮನಲ್ಲಿ ಸಂಪೂರ್ಣ ನಂಬಿಕೆಯಿತ್ತು.
ಒಂದು ವಾರಗಳ ಕಾಲ ತೆನಾಲಿರಾಮನು ಕರೆತಂದ ಯುವಕ ರಾಜ ವೈಭೋಗಗಳನ್ನು ಅನುಭವಿಸುತ್ತಾ ಕಾಲ ಕಳೆದ. ಯಾವುದೇ ವ್ಯಾಯಾಮವನ್ನಾಗಲೀ, ಸಾಮು ತೆಗೆಯುವುದಾಗಲೀ, ಕುಸ್ತಿಯ ಅಭ್ಯಾಸ ಮಾಡುವುದನ್ನಾಗಲೀ ಅವನು ಮಾಡುವುದನ್ನು ಯಾರೂ ಕಾಣಲಿಲ್ಲ. ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ಪೈಲ್ವಾನನು ಯುವಕನನ್ನು ಎತ್ತಿ ನೆಲಕ್ಕೆ ಕುಕ್ಕಿಬಿಡುತ್ತಾನೆ ಎಂದು ಎಲ್ಲರೂ ಕಾಯುತ್ತಿದ್ದರು. ಪೈಲ್ವಾನನೂ ತನ್ನ ಪ್ರತಿಸ್ಪರ್ಧಿಗೆ ಕಾಯುತ್ತಿದ್ದ. ಎಲ್ಲರ ನಡುವೆ ಸ್ಪರ್ಧಾಕಣಕ್ಕೆ ನಿಧಾನವಾಗಿ ಯುವಕನು ಭಾರೀ ಗಾತ್ರದ ಎಮ್ಮೆಯನ್ನು ಒಬ್ಬನೇ ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಣಕ್ಕೆ ಬಂದ. ಇದನ್ನು ನೋಡಿ ಪೈಲ್ವಾನನೂ,ರಾಜನೂ ಸೇರಿದಂತೆ ಎಲ್ಲರೂ ದಿಗ್ಭ್ರಾಂತರಾದರು. ಎಮ್ಮೆಯನ್ನು ನಿಧಾನವಾಗಿ ಕೆಳಗಿಳಿಸಿ ಯುವಕನನು ಪೈಲ್ವಾನನಿಗೆ ಸವಾಲು ಹಾಕಿದ. "ಎಲೈ ಪೈಲ್ವಾನನೇ, ನಾನು ಹೆಗಲ ಮೇಲೆ ಹೊತ್ತುಕೊಂಡಂತೆ ನೀನೂ ಇದನ್ನು ಹೆಗಲ ಮೇಲೆ ಹೊತ್ತುಕೊಂಡು ಒಂದು ಸುತ್ತು ಹಾಕಿದರೆ ನೀನು ನನ್ನೊಡನೆ ಕಾದಾಡಲು ಶಕ್ತ. ಇಲ್ಲವಾದರೆ ಈ ಕೂಡಲೇ ರಾಜರಿಗೆ ಶರಣಾಗಿ ಅವರ ಸೇವಕನಾಗಿರಬೇಕು." ಎಂದು ಸವಾಲು ಹಾಕಿ ಮತ್ತೊಮ್ಮೆ ಎಮ್ಮೆಯನ್ನು ನಿಧಾನವಾಗಿ ಹೆಗಲ ಮೇಲೆ ಎತ್ತಿಕೊಂಡು ಮೈದಾನದ ಸುತ್ತ ಒಂದು ಸುತ್ತು ಹಾಕಿ ಬಂದು ಪೈಲ್ವಾನನೆದುರು ಇಳಿಸಿದ. ಪೈಲ್ವಾನನಿಗೆ ಎಮ್ಮೆಯನ್ನು ಹೊತ್ತುಕೊಳ್ಳುವುದಿರಲಿ ನಾಲ್ಕುಕಾಲುಗಳನ್ನು ಜೋಡಿಸಲೂ ಆಗಲಿಲ್ಲ. ರಾಜನೆದುರಿಗೆ ಶರಣಾಗಿ ಸೋಲನ್ನೊಪ್ಪಿಕೊಂಡ.
ತೆನಾಲಿ ರಾಮನಿಗೂ, ಯುವಕನಿಗೂ ಸನ್ಮಾನಗಳನ್ನು ಮಾಡಿದ ರಾಜ ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದ. ಆಗ ಯುವಕನು "ಮಹಾಪ್ರಭೂ, ನಾನು ಚಿಕ್ಕವನಿದ್ದಾಗಿನಿಂದಲೂ ಅಂದರೆ ಈ ಎಮ್ಮೆಯು ಕರುವಾಗಿದ್ದಾಗಿನಿಂದಲೂ ಇದನ್ನು ಪ್ರತಿದಿನ ಸಂಜೆ ಮತ್ತು ಬೆಳಿಗ್ಗೆ ಹೆಗಲ ಮೇಲೆ ಹೊತ್ತುಕೊಂಡು ಹೊಲದ ಕಡೆ ಒಂದು ಸುತ್ತು ಹಾಕಿ ಬರುತ್ತಿದ್ದೆ. ಇದೇ ಅಭ್ಯಾಸವಾಗಿ ಕರು ಬೆಳೆದು ದೊಡ್ಡ ಕರುವಾಗಿ ಎಮ್ಮೆಯಾಗುವವರೆಗೂ ಮುಂದುವರೆಸಿಕೊಂಡು ಬಂದೆ. ಹಾಗಾಗಿ ಈಗಲೂ ಸುಲಭವಾಗಿ ಕರುವನ್ನೆತ್ತುವಂತೆ ಎಮ್ಮೆಯನ್ನು ಎತ್ತುವೆ" ಎಂದು ಹೇಳಿದನು.
ಕಥೆಯು ಕಾಲ್ಪನಿಕವಾಗಿದ್ದರೂ ಇಲ್ಲೊಂದು ನಮಗೆ ನೀತಿ ಪಾಠವಿದೆ. ಚಿಕ್ಕಂದಿನಿಂದಲೇ ಸರಿಯಾದ ಸಂಗಾತಿಗಳನ್ನು ರೂಢಿಸಿಕೊಂಡರೆ ಸಮಸ್ಯೆಗಳನ್ನು ಬಿಡಿಸುವ ಅರಿವಿದ್ದರೆ ಅವೆಷ್ಟೇ ದೊಡ್ಡವಾಗಿದ್ದರೂ ಸಮಸ್ಯೆಗಳಿಂದ ಬಿಡಿಸಿಕೊಳ್ಳುವುದು ಸುಲಭ. ಪಿಯುಸಿ, ಸಿಇಟಿ, ಐ ಎ ಎಸ್ ಹಾಗೂ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜಿ ಆರ್ ಇ, ಟೋಫೆಲ್, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮೊದಲಿನಿಂದಲೇ ಸರಿಯಾದ ತಯಾರಿ ಅಗತ್ಯ. ಓದುವುದಲ್ಲದೇ ಸೂಕ್ತವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ತೆಗೆದುಕೊಳ್ಳಬೇಕು. ಒಲಿಂಪಿಯಾಡ್, ಕೇಂದ್ರ ಸರಕಾರದ ವತಿಯಿಂದ NCERT ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆ (NTES) ಒಳ್ಳೆಯ ಉದಾಹರಣೆಗಳು. ಈ ಪರೀಕ್ಷೆಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನ್ಯತೆ ಇದೆ. ವಿವಿಧ ಹಂತಗಳ ಸ್ಪರ್ಧೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ, ವಿದ್ಯಾರ್ಥಿ ವೇತನ ಮತ್ತು ಅತ್ಯುತ್ತಮ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಅನೇಕ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಪ್ರವೇಶ ನೀಡಿದ ಉದಾಹರಣೆಗಳಿವೆ.
ಈ ಪರೀಕ್ಷೆಗಳ ಇನ್ನೊಂದು ವಿಶೇಷತೆಯೆಂದರೆ ಇವು ಶಾಲೆಯಲ್ಲಿ ಓದುವ ಪಠ್ಯಕ್ರಮ ಆಧಾರಿತವಾಗಿರುತ್ತವೆ. ಹಾಗಾಗಿ ಮಕ್ಕಳ ಓದಿನ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ವಿಶೇಷ ಹೆಚ್ಚಿನ ಓದಿನ ಅವಶ್ಯಕತೆ ಇರುವದಿಲ್ಲ. ಆಳವಾದ ತಿಳುವಳಿಕೆಯ ಪ್ರಶ್ನೆ ಕೇಳುವುದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ ಮತ್ತು ವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮಯ ಪಾಲನೆಯ ಶಿಸ್ತು ಕೂಡ ಇದರಿಂದ ಬೆಳೆಯುತ್ತದೆ.
ಇದಲ್ಲದೇ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಈ ಸ್ಪರ್ಧೆಗಳು ನಡೆಯುವುದರಿಂದ ಮಕ್ಕಳಿಗೆ ಓದಿನಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ನೀಡಿದಂತಾಗುತ್ತದೆ. ಬೇರೆ ಬೇರೆ ಸ್ಥಳಗಳ ಸ್ಪರ್ಧಾಳುಗಳೊಡನೆ ಭೇಟಿ, ವಿವಿಧ ವಿಷಯಗಳ ಪರಿಣಿತರೊಡನೆ ವಿಚಾರ ವಿನಿಮಯಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಅದುದರಿಂದ ತಂದೆ ತಾಯಿಗಳು, ಶಾಲೆಗಳ ಸಹಯೋಗದಿಂದ ಮಕ್ಕಳನ್ನು ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹೆಚ್ಚು ಪ್ರೋತ್ಸಾಹಿಸಬೇಕು. ಪ್ರವೇಶ ಶುಲ್ಕವು ಕಡಿಮೆ ಇರುವುದರಿಂದ ಪೋಷಕರ ಜೇಬಿಗೂ ಹೊರೆಯಾಗದ, ಮಕ್ಕಳ ಮನಸ್ಸಿಗೂ ಹೊರೆಯಾಗದ ಈ ಪರೀಕ್ಷೆಗಳು ಉತ್ತಮ ಭವಿಷ್ಯಕ್ಕೆ ಅಡಿಪಾಯಗಳು.