ಡೋಲಾಯಮಾನ ಸ್ಥಿತಿಯಲ್ಲಿ ವಿತ್ತ ಜಗತ್ತು! ಹೀಗಿದ್ದಾಗ ನಾವೇನು ಮಾಡಬೇಕು?
ಜಗತ್ತನ್ನ ಒಂದು ದೊಡ್ಡ ರೈಲು ಎಂದುಕೊಂಡರೆ, ದೇಶಗಳು ಆ ರೈಲಿನ ಬೋಗಿಗಳು!. ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ಭಾರತವನ್ನ ಇಷ್ಟು ದೊಡ್ಡ ರೈಲನ್ನ ನೆಡೆಸುವ ಇಂಜಿನ್ ಎನ್ನಬಹದು. ಬೋಗಿ ಎಷ್ಟೇ ಅಂದವಾಗಿರಲಿ ಇಂಜಿನ್ ಕಾರ್ಯ ನಿರ್ವಹಿಸದಿದ್ದರೆ ಅಲ್ಲಿಗೆ ಮುಗಿಯಿತು. ಬೋಗಿ ನಿಂತಲ್ಲೇ ನಿಲ್ಲುತ್ತದೆ. ಚಲನೆಗೆ ಇಂಜಿನ್ ಕಾರ್ಯನಿರ್ವಹಣೆ ಅತಿ ಮುಖ್ಯ. ಇಂತಹ ಸಮಯದಲ್ಲಿ ಈ ಇಂಜಿನ್ ಗಳು ಹೇಗೆ ಕೆಲಸ ಮಾಡುತ್ತಿವೆ ಅವುಗಳ ಹಣಕಾಸು ಆರೋಗ್ಯದ ಸ್ಥಿತಿಯೇನು? ಇಂತಹ ಸಮಯದಲ್ಲಿ ನಾವೇನು ಮಾಡಬೇಕು? ಎನ್ನುವುದನ್ನ ಇಂದು ತಿಳಿದುಕೊಳ್ಳೋಣ.
ಫೆಬ್ರವರಿ 25, 2019 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ದೇಶದ ಟ್ರೇಡ್ ವಾರ್ ಬಗ್ಗೆ ಎರಡು ಟ್ವೀಟ್ ಮಾಡಿದ್ದರು. ಮೊದಲನೆಯದು 'ನಾನು ಸಂಪ್ರೀತನಾಗಿದ್ದೇನೆ ಏಕೆಂದರೆ ಚೀನಾ ಜೊತೆಗಿನ ಮಾತುಕತೆ ಉತ್ತಮ ಬೆಳವಣಿಗೆಯ ಹಂತದಲ್ಲಿದೆ. 'ಎರಡನೆಯದು 'ಮಾರ್ಚ್ 1 ಕ್ಕೆ ಹೆಚ್ಚಿಸಬೇಕಾಗಿದ್ದ ತೆರಿಗೆಯನ್ನ ನಾನು ಮುಂದೂಡುತ್ತಿದ್ದೇನೆ. ಎರಡು ದೇಶಗಳ ನಡುವಿನ ಸಂಬಂಧ ಹೀಗೇ ಮುಂದುವರಿದರೆ ಚೀನಾ ಅಧ್ಯಕ್ಷರ ಜೊತೆ ಒಂದು ಭೇಟಿ ಮಾಡಿ ಒಪ್ಪಂದ ಮುಗಿಸುತ್ತೇವೆ. ಶುಭ ವಾರಾಂತ್ಯ ಅಮೆರಿಕಾ ಮತ್ತು ಚೀನಾ ದೇಶಗಳಿಗೆ' ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ನಂತರ ಏಷ್ಯಾ ಷೇರು ಮಾರುಕಟ್ಟೆ ಕೂಡ ಒಂದಷ್ಟು ಲವಲವಿಕೆ ಪಡೆದುಕೊಂಡಿದ್ದವು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಅಮೆರಿಕಾ ಮತ್ತು ಚೀನಾ ಟ್ರೇಡ್ ವಾರ್ ಶುರುವಾಗಿ ವರ್ಷವಾಗುತ್ತಾ ಬಂದಿದೆ. ಹೀಗೆ ಶುರುವಿನ ಆರಂಭದಲ್ಲಿ ಎರಡೂ ದೇಶಗಳು ಜಿದ್ದಿಗೆ ಬಿದ್ದವರಂತೆ ಒಬ್ಬರ ಮೇಲೆ ಒಬ್ಬರು ವಸ್ತುಗಳ ಬೆಲೆಯನ್ನ ಅವುಗಳ ಮೇಲೆ ಹಾಕುವ ತೆರಿಗೆಯನ್ನ ಹೆಚ್ಚಿಸಿದವು. ಹೀಗೆ ವರ್ಷದಿಂದ ಹೆಚ್ಚಾಗುತ್ತಾ ಬಂದ ಬೆಲೆಯನ್ನ ಇವುಗಳು ಇಳಿಸುವ ಮಾತಾಡಿಲ್ಲ. ಹಾಗೆಯೇ ಸದ್ಯದ ಪರಿಸ್ಥಿತಯಲ್ಲಿ ಬೆಲೆ ತಕ್ಷಣ ಇಳಿಯುವ ಯಾವ ಸಾಧ್ಯತೆಗಳು ಇಲ್ಲ. ಇವುಗಳ ಇಂದಿನ ಮಾತೇನಿದ್ದರೂ ಇನ್ನು ಹೆಚ್ಚಿನ ಹೊಡೆದಾಟ ಮಾಡದಿರುವುದರ ಬಗ್ಗೆಯಷ್ಟೇ!. ಗಮನಿಸಿ ನೋಡಿ ಈ ಕಾದಾಟ ಎರಡೂ ದೇಶಗಳನ್ನ ಬಸವಳಿಸಿದೆ. ಇವತ್ತು ಟ್ರೇಡ್ ವಾರ್ ಎರಡೂ ದೇಶಕ್ಕೂ ಬೇಡದ ವಿಷಯ. ಪರಿಸ್ಥಿತಿ ಹೀಗಿದ್ದೂ ಹಿಂದೆ ಮಾಡಿದ ತಪ್ಪಿಗೆ ಇನ್ನೆರಡು ವರ್ಷ ಬೆಲೆ ತರಬೇಕಾಗುತ್ತದೆ.
ಜಪಾನ್ ಮುದಿತನದ ಜೊತೆಗೆ ನೆಗಟಿವ್ ಇಂಟರೆಸ್ಟ್ ರೇಟ್ ಅಲ್ಲದೆ ತನ್ನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಾನೇ ಖುಷಿಯಿಂದ ಹಣೆದುಕೊಂಡ ಬಲೆಯಲ್ಲಿ ವ್ಯವಸ್ಥಿತವಾಗಿ ಸಿಕ್ಕಿ ಬಿದ್ದಿದೆ. ಎಲ್ಲಕ್ಕೂ ಮೊದಲು ಈ ದೇಶ ತನ್ನ ಉತ್ಪಾದನೆಯನ್ನ ಬೇರೆ ದೇಶಗಳಿಗೆ ಕಳಿಸುತ್ತದೆ. ಇಲ್ಲಿನ ಆಂತರಿಕ ಬಳಕೆಗಿಂತ ರಫ್ತು ಹೆಚ್ಚು. ಹೀಗೆ ಎಕ್ಸ್ಪೋರ್ಟ್ ನಂಬಿರುವ ಈ ದೇಶದ ಆರ್ಥಿಕತೆ ಎಂದಿಗೂ ಬಹಳ ಸೂಕ್ಷ್ಮ. ಅಮೆರಿಕಾ ಮತ್ತು ಚೀನಾ ನಡುವಿನ ಟ್ರೇಡ್ ವಾರ್ ನಲ್ಲಿ ಜಪಾನ್ ಕೂಡ ಬಳಲಿದೆ. ಯುರೋ ಜೋನ್ ನಲ್ಲಿ ಕಳೆದ ದಶಕದಿಂದ ಇಂದಿಗೂ ಮುಂದುವರಿಯುತ್ತಿರುವ ಕ್ರೈಸಿಸ್ ಕೂಡ ಜಪಾನ್ ಮಾರುಕಟ್ಟೆಯನ್ನ ಹೈರಾಣಾಗಿಸಿದೆ.
ಜರ್ಮನಿ-ಯುನೈಟೆಡ್ ಕಿಂಗ್ಡಮ್-ಯೂರೋಪಿಯನ್ ಒಕ್ಕೂಟ
ಜರ್ಮನಿ ಯೂರೋಪಿಯನ್ ಒಕ್ಕೂಟದ ಹಿರಿಯಣ್ಣ. ಇಲ್ಲಿನ ಹಲವಾರು ನ್ಯೂನತೆಗಳೆಲ್ಲವನ್ನೂ ಹೇಗೋ ಸರಿದೂಗಿಸಿಕೊಂಡು ಯೂರೋಪಿಯನ್ ಒಕ್ಕೊಟವನ್ನ ಮುನ್ನಡಿಸಿಕೊಂಡು ಬಂದಿದೆ. ಪ್ರಥಮ ಬಾರಿಗೆ ಜರ್ಮನಿ ಆರ್ಥಿಕತೆ ಕೂಡ ಒಂದಷ್ಟು ವೇಗವನ್ನ ಕಳೆದುಕೊಂಡಿದೆ. ಯೂರೋಪಿಯನ್ ಯೂನಿಯನ್ ನಲ್ಲಿದ್ದೂ ಎಂದಿಗೂ ಪೂರ್ಣವಾಗಿ ಅದರಲ್ಲಿ ತೊಡಗಿಕೊಳ್ಳದೆ ಕೇವಲ ತನ್ನ ಲಾಭವನ್ನ ಮಾತ್ರ ಎಣಿಸುತ್ತಾ ಬರುತ್ತಿದ್ದ ಬ್ರಿಟನ್ ಒಕ್ಕೂಟದಿಂದ ಹೊರಹೋಗುವ ಕಾರ್ಯ ಶುರುವಾಗಿದೆ. ಇದು ಯೂರೋಪಿಯನ್ ಒಕ್ಕೂಟಕ್ಕೆ ಹೆಚ್ಚಿನ ಧಕ್ಕೆ ತರದಿದ್ದರೂ ಬ್ರಿಟನ್ ನೆಲಕಚ್ಚುವುದು ಮಾತ್ರ ತಪ್ಪಿಸಲು ಸಾಧ್ಯವಿಲ್ಲ.
ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ರೇಟ್ 0.25 ಪ್ರತಿಶತ ಕಡಿಮೆ ಮಾಡಿದೆ. ಇದು ಮಾರುಕಟ್ಟೆಗೆ ಬೇಕಾಗಿದ್ದ ಚೇತರಿಕೆಯ ಟಾನಿಕ್! ಭಾರತ ಇಂದಿಗೂ 6.6 ಪ್ರತಿಶತ ಗ್ರೋಥ್ ರೇಟ್ ಉಳಿಸಿಕೊಂಡಿದೆ. ಇದು ಅತ್ಯಂತ ಉತ್ತಮ ಮತ್ತು ಆರೋಗ್ಯಕರ ಬೆಳವಣಿಗೆಯ ಸಂಖ್ಯೆ. ಇನ್ನೊಂದು ನವತ್ತೈದು ದಿನದಲ್ಲಿ ಅಂದರೆ ಮೇ 23, 2019 ರಲ್ಲಿ ಭಾರತವನ್ನ ಮತ್ತೊಂದು ಐದು ವರ್ಷ ಆಳುವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಈ ಪ್ರಶ್ನೆಯ ಉತ್ತರ ಭಾರತದ ಆರ್ಥಿಕತೆಯನ್ನ ಮತ್ತು ಅದರ ಓಟದ ವೇಗವನ್ನ ನಿರ್ಧರಿಸುತ್ತದೆ.
ಜಗತ್ತು ಎನ್ನುವ ರೈಲಿನ ಆರು ಪ್ರಮುಖ ಇಂಜಿನ್ ಗಳಲ್ಲಿ ನೂರಕ್ಕೆ ನೂರು ಪ್ರತಿಶತ ಕಾರ್ಯನಿರ್ವಹಿಸುತ್ತಿರುವ ಇಂಜಿನ್ ಇಲ್ಲವೇ ಇಲ್ಲ ಎನ್ನಬಹದು. ಭಾರತ ಮತ್ತು ಜಪಾನ್ ಪರವಾಗಿಲ್ಲ ಎಂದು ಕೊಂಡರೂ ಉಳಿದ ಇಂಜಿನ್ಗಳ ಕಾರ್ಯನಿರ್ವಹಣೆ ಕೂಡ ಅತಿ ಮುಖ್ಯವಾಗುತ್ತದೆ. ಅಲ್ಲದೆ ಭಾರತವೆಂಬೋ ಇಂಜಿನ್ ಕಾರ್ಯನಿರ್ವಹಣೆ ಮುಂದಿನ ದಿನಗಳಲ್ಲಿ ಹೇಗಿರಬಹದು ಎನ್ನುವುದು ಚುನಾವಣೆಯ ಫಲಿತಾಂಶವನ್ನು ಅವಲಂಬಿಸಿದೆ.
ಜಾಗತಿಕವಾಗಿ ನೋಡಿದಾಗ ಇಂದು ನಾವು ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದ್ದೇವೆ. ಇಂತಹ ವಿಷಮ ಪರಿಸ್ಥಿತಿಯಿಂದ ಹೊರಬರಲು ಜಾಗತಿಕ ನಾಯಕರು ಏನು ಮಾಡುತ್ತಾರೆ? ಎಂದು ಕಾದು ನೋಡಬೇಕು. ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ನಡುವೆಯೇ ಹೊಂದಾಣಿಕೆಯಿಲ್ಲ....,
ಇರಲಿ, ನಾವೇನು ಮಾಡಬೇಕು ಅನ್ನುವುದು ಸರಳವಾಗಿದೆ:
- ಗಳಿಕೆಯಲ್ಲಿ ಇಳಿಕೆಯಾಗದಂತೆ ನೋಡಿಕೊಳ್ಳುವುದು. ಸಾಧ್ಯವಾದರೆ ಗಳಿಕೆಯನ್ನ ವೃದ್ಧಿಸಿಕೊಳ್ಳುವುದು.
- ಗಳಿಕೆಯಲ್ಲಿ ಕಡಿಮೆಯೆಂದರೂ 30 ಪ್ರತಿಶತ ಉಳಿಕೆ ಮಾಡುವುದು. ಉಳಿಕೆಯನ್ನ ಹೂಡಿಕೆ ಮಾಡುವ ಮುನ್ನ ಅದರ ಪೂರ್ವಾಪರ ತಿಳಿದುಕೊಳ್ಳುವುದು.
- ಇಂದು ಜೀವನ ಎಂದರೆ ಅದೊಂದು ಕ್ಷಣಿಕ ಎನ್ನುವ ಭಾವನೆ ಹೆಚ್ಚಾಗಿದೆ. ಅದಕ್ಕೆ ಕಾರಣಗಳು ಹಲವು. ಹೀಗಾಗಿ ಅನುಭವಗಳನ್ನ ಪಡೆಯಬೇಕು. ವಸ್ತುಗಳ ಖರೀದಿ ಕಡಿಮೆ ಮಾಡಬೇಕು.
- ಸಾಲ ಪಡೆಯುವುದು ಮತ್ತು ಸಾಲ ಕೊಡುವುದು ಎರಡೂ ಮಾಡುವುದು ಬೇಡ.
ತಪ್ಪದೆ ಮೇಲಿನ ನಾಲ್ಕು ಅಂಶಗಳನ್ನ ಪಾಲಿಸುವುದು.
ಕೊನೆಮಾತು: ಅಂತಾರಾಷ್ಟ್ರೀಯ ವಿದ್ಯಮಾನಗಳನ್ನ ನಾವು ನಿಯಂತ್ರಿಸಲು ಸಾಧ್ಯವಿಲ್ಲ ಅಲ್ಲವೇ? ಕೊನೆಗೂ ನಮ್ಮ ಕೈಲಿರುವುದು ಮಾತ್ರ ನಾವು ಮಾಡಲು ಸಾಧ್ಯ. ಬದುಕು ಭದ್ರತೆ ಬೇಡುತ್ತದೆ. ಪರಿಸ್ಥಿತಿ ಡೋಲಾಯಮಾನವಾಗಿರುವಾಗ ಕನಿಷ್ಠ ನಮ್ಮ ನಿಯಂತ್ರಣದಲ್ಲಿರುವ ವಿಷಯಗಳನ್ನಾದರೂ ನಿಷ್ಠೆಯಿಂದ ಪಾಲಿಸೋಣ. ಭಾರತವೆಂಬೋ ಜಾಗತಿಕ ಇಂಜಿನ್ ಗೆ ಶಕ್ತಿ ತುಂಬುವ ಕೆಲಸ ಕೂಡ ನಾವು ಮಾಡಬಹದು. ನಿಗದಿತ ದಿನಾಂಕದಂದು ತಪ್ಪದೆ ಓಟು ಮಾಡುವುದು ಕೂಡ ಈ ನಿಟ್ಟಿನಲ್ಲಿ ಬಹಳ ಉಪಕಾರಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos