ಕಿಡ್ನಿ ಸ್ಟೋನ್ 
ಅಂಕಣಗಳು

ಕಿಡ್ನಿ ಸ್ಟೋನ್ ಅಥವಾ ಮೂತ್ರಕೋಶದಲ್ಲಿ ಕಲ್ಲು ಉಂಟಾಗಲು ಕಾರಣಗಳೇನು? ತಡೆಯುವುದು ಹೇಗೆ? (ಕುಶಲವೇ ಕ್ಷೇಮವೇ)

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮಆಹಾರ ಪದ್ಧತಿಯು ಬದಲಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆಗಳಲ್ಲಿ ಮೂತ್ರಕೋಶದಲ್ಲಿ ಕಲ್ಲು (ಕಿಡ್ನಿ ಸ್ಟೋನ್) ಕಾಣಿಸಿಕೊಳ್ಳುವುದು ಒಂದಾಗಿದೆ.

ಕಿಡ್ನಿ ಸ್ಟೋನ್ ಉಂಟಾಗುವುದು ಹೇಗೆ?

ಮೂತ್ರದಲ್ಲಿ ಹೆಚ್ಚು ಲವಣಾಂಶಗಳು ಶೇಖರಣೆಯಾಗಿ ಘನರೂಪಕ್ಕೆ ಮಾರ್ಪಟ್ಟು ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗುತ್ತವೆ. ಈ ಕಲ್ಲುಗಳು ಹರಳುಗಳ ರೂಪದಲ್ಲಿ ಅಥವಾ ಕಲ್ಲಿನಂತೆಯೇ ಕಾಣಿಸಿಕೊಳ್ಳಬಹುದು. ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ತಡೆದಾಗ ನೋವು ಕಾಣಿಸಿಕೊಳ್ಳುತ್ತದೆ. ಹೆಂಗಸರಿಗಿಂತ ಗಂಡಸರಲ್ಲಿ ಈ ಸಮಸ್ಯೆಯು ಹೆಚ್ಚು. 

ಮೂತ್ರಕೋಶದಲ್ಲಿ ಕಲ್ಲು ಉಂಟಾದ ಬಳಿಕ ಒತ್ತಡದ ಕಾರಣದಿಂದಾಗಿ ನೋವು ಕಾಣಿಸಿಕೊಳ್ಳುವುದು. ಬೆನ್ನು, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಇತರ ಭಾಗದಲ್ಲಿ ನೋವು ಕಂಡುಬರುವುದು. ಕಲ್ಲು ದೊಡ್ಡದಾಗಿದ್ದರೆ ಆಗ ಭಾಗ ಊದಿಕೊಳ್ಳುತ್ತದೆ. ಮೂತ್ರ ವಿಸರ್ಜಿಸುವಾಗ ನೋವಾಗುತ್ತದೆ. ಆಗಾಗ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಮೂತ್ರಚೀಲ ಸಂಪೂರ್ಣ ಖಾಲಿಯಾಗಿಲ್ಲ ಎಂಬ ಅನುಭವವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ನೋವಾಗುತ್ತದೆ. ಕೆಲವೊಮ್ಮೆ ಮೂತ್ರದಿಂದ ದುರ್ವಾಸನೆ ಬರುತ್ತದೆ. ವಾಂತಿ/ವಾಕರಿಕೆಯೂ ಉಂಟಾಗಬಹುದು. ಕಲ್ಲುಗಳು ದೊಡ್ಡದಾದರೆ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸಲು ಆಗುವುದಿಲ್ಲ.

ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ತಡೆಯಬಹುದೇ?

ಪ್ರತಿದಿನ ನಾವು ಸರಿಯಾಗಿ ನೀರನ್ನು ಕುಡಿಯುವುದು ಅತ್ಯಂತ ಮುಖ್ಯ. ನಾವು ನೀರನ್ನು ಬೇಕಾದಷ್ಟು ಕುಡಿಯದೇ ಇರುವುದು ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣ. ಜೊತೆಗೆ ಮಸಾಲೆ ಆಹಾರ, ಕೂಲ್ ಡ್ರಿಂಕ್ಸ್ ಮತ್ತು ಕಾಫಿ/ಟೀ ಹೆಚ್ಚಾಗಿ ಸೇವಿಸುವುದೂ ಈ ಸಮಸ್ಯೆಯನ್ನು ಉಂಟುಮಾಡುತ್ತದೆ.ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಲವಣಾಂಶಗಳ ಶೇಖರಣೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಲು ದಿನನಿತ್ಯ ಕನಿಷ್ಠ ಮೂರು ಲೀಟರ್ ನೀರನ್ನು ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿನ ಲವಣಾಂಶಗಳು ಮೂತ್ರದ ರೂಪದಲ್ಲಿ ದೇಹದಿಂದ ಹೊರಹೋಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದಾಗಿದೆ.

ಕಿಡ್ನಿ ಸ್ಟೋನ್ ತಡೆಯಲು ಆಹಾರ ಕ್ರಮ ಪರಿಣಾಮಕಾರಿ

ನಮ್ಮ ಆಹಾರದಲ್ಲಿ ಹಸಿರು ಸೊಪ್ಪುಗಳನ್ನು ಸೇರಿಸಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ಆಹಾರದಲ್ಲಿ ಹೆಚ್ಚು ಉಪ್ಪು (ರಸಾಯನಿಕವಾಗಿ ಸೋಡಿಯಂಕ್ಲೋರೈಡ್) ಇದ್ದರೆ ಕಿಡ್ನಿ ಕಲ್ಲುಗಳ ಅಪಾಯ ಕಂಡುಬರುತ್ತದೆ. ಏಕೆಂದರೆ ಇದು ಮೂತ್ರದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಮ್ಮನ್ನು ಮೂತ್ರದಿಂದ ರಕ್ತ ಹೀರಿಕೊಳ್ಳದಂತೆ ತಡೆಯುತ್ತದೆ. ಇದು ಮೂತ್ರದಲ್ಲಿ ಕ್ಯಾಲ್ಸಿಯಂ ಸೇರಿಕೊಳ್ಳಲು ಕಾರಣವಾಗುತ್ತದೆ. ಹೀಗಾಗಿ  ಅತಿಯಾದ ಉಪ್ಪಿನ ಬಳಕೆ ಕಿಡ್ನಿ ಸ್ಟೋನಿಗೆ ಕಾರಣವಾಗಬಹುದು. ಹಾಗೆಯೇ ಸಂಸ್ಕರಿಸಿದ ಆಹಾರದಲ್ಲಿ ಉಪ್ಪು ಹೆಚ್ಚಾಗಿರುವುದರಿಂದ (ಚಿಪ್ಸ್, ಚೌಚೌ ಇತ್ಯಾದಿ) ಅದರ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಪದೇ ಪದೇ ಕಾಫಿ ಸೇವನೆ ಮಾಡುವುದು ನಮ್ಮ ಚಯಾಪಚಯ ಕ್ರಿಯೆಯನ್ನು (ಮೆಟಾಬಾಲಿಸಂ) ಹೆಚ್ಚಿಸುತ್ತವೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುತ್ತದೆ. ಪರಿಣಾಮವಾಗಿ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುತ್ತವೆ.

ಕಿಡ್ನಿಯಲ್ಲಿ ಕಲ್ಲು ಸಮಸ್ಯೆಯನ್ನು ತಡೆಯಲು ದಿನಕ್ಕೆ ಕನಿಷ್ಠ ಮೂರು/ನಾಲ್ಕು ಲೀಟರಿನಷ್ಟು ನೀರನ್ನು ಕುಡಿಯಬೇಕು. ಸಿಟ್ರಿಕ್ ಆಮ್ಲ (ಹುಳಿ) ಇರುವ ಆಹಾರವನ್ನು ಹೇರಳವಾಗಿ ಸೇವಿಸಬೇಕು (ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ ಇತ್ಯಾದಿ). ಕಲ್ಲಂಗಡಿ, ಪಪ್ಪಾಯ, ದ್ರಾಕ್ಷಿ, ಅನಾನಸು ಮತ್ತು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು. ಹೆಚ್ಚಿನ ಹಣ್ಣು, ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಹೆಚ್ಚಾಗಿರಲಿ (ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇತ್ಯಾದಿ). ಬಾಳೆದಿಂಡು ಮತ್ತು ಅದರ ರಸದ ಸೇವನೆ ಉಪಯುಕ್ತ. ಬಾರ್ಲಿ ನೀರು ಮತ್ತು ಹುರುಳಿ ಕಾಳು/ಹೆಸರು ಕಾಳು ಬೇಯಿಸಿದ ನೀರನ್ನು ಸೇವಿಸುವುದು ಒಳ್ಳೆಯದು.

ಮೂತ್ರಕೋಶದಲ್ಲಿ ಕಲ್ಲುಗಳು ಇರುವವರು ಆಹಾರದಲ್ಲಿ ಪಥ್ಯ ಮಾಡುವುದು ಉತ್ತಮ. ಎಲೆಕೋಸು, ಹೂಕೋಸುಗಳ ಸೇವನೆ ಬೇಡ. ಜೊತೆಗೆ ಈಗಾಗಲೇ ಮೂತ್ರಕೋಶದಲ್ಲಿ ಕಲ್ಲಿನ  ಸಮಸ್ಯೆ ಇರುವವರು ಬೀಜಗಳಿರುವ ತರಕಾರಿಗಳು ಅಂದರೆ ಟೊಮ್ಯಾಟೋ, ದೊಣ್ಣಮೆಣಸಿನಕಾಯಿಗಳನ್ನು ಸೇವಿಸಬಾರದು. ಮಸಾಲೆಯುಕ್ತ ಮಾಂಸಾಹಾರದ ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಅಗತ್ಯಕ್ಕಿಂತ ಕಾಫಿ, ಚಹಾ, ಹಸಿರು ಚಹಾ, ಚಾಕಲೇಟ್, ಕೂಲ್ ಡ್ರಿಂಕ್ಸ್, ಸೋಡಾ, ಮದ್ಯಪಾನದ ಸೇವನೆ ಬೇಡ.

ಹೆಚ್ಚು ತೂಕ ಹೊಂದಿರುವವರು ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಬಗ್ಗೆ ಹುಷಾರಾಗಿರಬೇಕು. ಸ್ಥೂಲಕಾಯ ದೇಹದಲ್ಲಿ ಆಮ್ಲ ಮತ್ತು ಲವಣಗಳ ಪ್ರಮಾಣವನ್ನು ಹೆಚ್ಚಿಸಬಹುದು. ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರ ಕ್ರಮಗಳಿವೆ. ಹಲವಾರು ಮಾತ್ರೆಗಳು ಮತ್ತು ಕಷಾಯಗಳ ಸೇವನೆ ಉಪಯೋಗಕಾರಿ. ಹೆಚ್ಚು ನೀರನ್ನು ಕುಡಿದರೆ ಮೂತ್ರಕೋಶದಲ್ಲಿರುವ ಕಲ್ಲುಗಳು ನಿಧಾನವಾಗಿ ಕರಗಿ ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಒಂದಕ್ಕಿಂತ ಹೆಚ್ಚು/ದೊಡ್ಡಗಾತ್ರದ ಕಲ್ಲುಗಳು ಇದ್ದರೆ ಸ್ವಲ್ಪ ದೀರ್ಘಾವಧಿಯ ಚಿಕಿತ್ಸೆಯು ಬೇಕಾಗಬಹುದು. ಪಂಚಕರ್ಮ ಚಿಕಿತ್ಸೆಯ ವಿರೇಚನ ಕೂಡ ಒಳ್ಳೆಯದು. ಆದರೆ ಯಾವುದಕ್ಕೂ ವೈದ್ಯರನ್ನು ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT