ಪಾದಗಳ ಬಿರುಕು-ಆರೈಕೆ ಮತ್ತು ಮನೆಮದ್ದು 
ಅಂಕಣಗಳು

ಪಾದಗಳ ಬಿರುಕು: ಆರೈಕೆ ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)

ಪ್ರತಿಯೊಬ್ಬರೂ ತಮ್ಮ ಪಾದಗಳು ನಯವಾಗಿ ಮತ್ತು ಮೃದುವಾಗಿರಬೇಕೆಂದು ಬಯಸುತ್ತಾರೆ. ಆದರೆ ಹವಾಮಾನ ಬದಲಾದಾಗ ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆಯಾಗಿದೆ.

ಪ್ರತಿಯೊಬ್ಬರೂ ತಮ್ಮ ಪಾದಗಳು ನಯವಾಗಿ ಮತ್ತು ಮೃದುವಾಗಿರಬೇಕೆಂದು ಬಯಸುತ್ತಾರೆ. ಆದರೆ ಹವಾಮಾನ ಬದಲಾದಾಗ ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆಯಾಗಿದೆ. ಒಣಗಿರುವ, ಒಡೆದ ಮತ್ತು ಬಿರುಕು ಬಿಟ್ಟ ಪಾದಗಳು ಪುರುಷರು ಮತ್ತು ಸ್ತ್ರೀಯರೂ ಸೇರಿದಂತೆ ಬಹುತೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಕೆಲವರಿಗೆ ಈ ಸಮಸ್ಯೆ ವರ್ಷವಿಡೀ ಕಾಡುತ್ತದೆ. ಒಮ್ಮೊಮ್ಮೆ ಬಿರುಕು ಬಿಟ್ಟ ಪಾದಗಳಿಂದ ರಕ್ತಸ್ರಾವವಾಗುತ್ತದೆ ಮತ್ತು ನೋವು ಉಂಟಾಗುತ್ತದೆ. ಪಾದಗಳು ಬಿರುಕು ಬಿಟ್ಟಾಗ ಎಲ್ಲರ ಎದುರು ಕಾಲು ಚಾಚಿ ಕುಳಿತುಕೊಳ್ಳಲು ಏನೋ ಒಂದು ರೀತಿ ಸಂಕೋಚವಾಗುತ್ತದೆ. ಹಿಮ್ಮಡಿ ಕಾಣಿಸುವ ಚಪ್ಪಲಿ ಹಾಕಿಕೊಳ್ಳಲು ಆಗುವುದಿಲ್ಲ. ಆಗಾಗ ಸೋರುವ ರಕ್ತ, ನೋವು ಬಹಳ ಯಾತನೆ ನೀಡುತ್ತವೆ.

ಪಾದಗಳಲ್ಲಿ ಬಿರುಕು ಮೂಡಲು ಕಾರಣಗಳು

ಪಾದಗಳ ಚರ್ಮದಲ್ಲಿ ತೇವಾಂಶ ಕಡಿಮೆಯಾಗುವುದು ಪಾದಗಳು ಒಡೆಯಲು ಅಥವಾ ಬಿರುಕು ಬಿಡಲು ಮುಖ್ಯ ಕಾರಣ. ಬೇಸಿಗೆಯಲ್ಲಿ ತೇವಾಂಶದ ನಷ್ಟದಿಂದಾಗಿ ಚರ್ಮವು ಒಣಗುತ್ತದೆ. ಇದರಿಂದ ಪಾದದ ಹಿಮ್ಮಡಿಗಳು ಬಿರುಕು ಬಿಡುತ್ತವೆ. ಆದ್ದರಿಂದ ಚರ್ಮವನ್ನು ತೇವಾಂಶದಿಂದ ಮತ್ತು ಮೃದುವಾಗಿಡಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಪ್ರತಿದಿನ ಸಾಕಷ್ಟು ನೀರು ಅಂದರೆ ನಾಲ್ಕು ಲೀಟರಿನಷ್ಟು ನೀರು ಸೇವಿಸಿದರೆ ಚರ್ಮ ಮತ್ತು ಒಟ್ಟಾರೆ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ.

ಪಾದಗಳು ಗಾಳಿ ಮತ್ತು ಬಿಸಿಲಿಗೆ ತೆರೆದುಕೊಂಡಾಗ ಹಿಮ್ಮಡಿಗಳು ಒಣಗುತ್ತವೆ ಮತ್ತು ಬಿರುಕು ಬಿಡುತ್ತವೆ. ಆದ್ದರಿಂದ ಹಿಮ್ಮಡಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಬಿರುಕು ಬಿಡದಂತೆ ಇರಿಸಿಕೊಳ್ಳಲು ಮುಚ್ಚಿದ ಪಾದರಕ್ಷೆಗಳು ಮತ್ತು ಹತ್ತಿ ಸಾಕ್ಸ್ಗಳನ್ನು ಮಾತ್ರ ಧರಿಸಬೇಕು.

ಪಾದಗಳ ಆರೈಕೆ

ಮೃದುವಾದ ಮತ್ತು ನಯವಾದ ಪಾದಗಳಿಗಾಗಿ ಪ್ರತಿದಿನ ಪಾದದ ಆರೈಕೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಿ ನಂತರ ಮೃದುವಾದ ಹತ್ತಿ ಸಾಕ್ಸ್ ಗಳನ್ನು ಹಾಕಿಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ಪಾದಗಳಲ್ಲಿ ತೇವಾಂಶ ಉಳಿದು ಪಾದಗಳು ಒಣಗುವುದಿಲ್ಲ.

ವ್ಯಾಸಲಿನ್ ಪೆಟ್ರೋಲಿಯಂ ಜೆಲ್ಲಿಯು ಬಿರುಕು ಬಿಟ್ಟ ಹಿಮ್ಮಡಿಗಳ ಆಳಕ್ಕಿಳಿದು ಚೆನ್ನಾಗಿ ಆರೈಕೆ ಮಾಡುತ್ತದೆ. ಜೊತೆಗೆ ರಕ್ತಸ್ರಾವವನ್ನು ತಡೆಗಟ್ಟುತ್ತದೆ. ಪ್ರತಿ ದಿನ ಸ್ನಾನದ ನಂತರ ಸ್ವಲ್ಪ ವ್ಯಾಸಲಿನ್ನನ್ನು ಪಾದಗಳಿಗೆ ಹಚ್ಚಿ ಒಂದೆರಡು ನಿಮಿಷಗಳ ಕಾಲ ಮಸಾಜು ಮಾಡಬೇಕು.

ವಾರಕ್ಕೊಮ್ಮೆ ಪಾದಗಳನ್ನು 20 ನಿಮಿಷ ಉಗುರುಬೆಚ್ಚಗಿನ ನೀರಿನಲ್ಲಿ ಇರಿಸಿ ನಂತರ ಸ್ಕ್ರಬ್ ಮಾಡಿ ಮತ್ತು ಮಾಯಿಶ್ಚರ್ ಕ್ರೀಮನ್ನು ಹಚ್ಚಿಕೊಳ್ಳಬೇಕು. ಸ್ನಾನ ಮಾಡುವಾಗ ಕಾಲುಗಳನ್ನು ಸ್ಕ್ರಬ್ಬರ್‌ನಿಂದ ಚೆನ್ನಾಗಿ ಉಜ್ಜಿ ಸಂಗ್ರಹವಾಗಿರುವ ಕೊಳೆ ತೆಗೆಯಬೇಕು.

ಪಾದಗಳಲ್ಲಿ ಬಿರುಕು ತಡೆಯಲು ಮನೆಮದ್ದು

ಒಂದು ಚಮಚ ಅಕ್ಕಿ ಹಿಟ್ಟಿಗೆ, ಎರಡು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸ ಮಿಶ್ರಣ ಮಾಡಿ 15 ನಿಮಿಷ ಪಾದಗಳನ್ನು ನೀರಿನಲ್ಲಿ ಇರಿಸಿ ನಂತರ ಸ್ಕ್ರಬ್ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿದರೆ ಪಾದದ ಚರ್ಮ ಒಡೆಯುವುದಿಲ್ಲ.

ಪಾದಗಳು ಒಡೆಯುವುದನ್ನು ತಪ್ಪಿಸಲು ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಎಳ್ಳಿನ ಎಣ್ಣೆ ಬಳಸಿದರೆ ಇನ್ನೂ ಉತ್ತಮ. ಎಳ್ಳೆಣ್ಣೆಯಲ್ಲಿ ಹಲವಾರು ಪೋಷಕಾಂಶಗಳಿವೆ ಮತ್ತು ಇದು ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ. ಒಂದು ಚಮಚ ಎಳ್ಳಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಿಮ್ಮಡಿ ಮೇಲೆ ಲಘುವಾಗಿ ಮಸಾಜು ಮಾಡಬೇಕು. ಪ್ರತಿ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಒಡೆದ ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಸೇರಿಸಿ ಹತ್ತು ನಿಮಿಷಗಳ ಕಾಲ ಅದರೊಳಗೆ ಪಾದಗಳನ್ನು ಇಟ್ಟುಕೊಳ್ಳಿ. ಇದರಿಂದ ತ್ವಚೆ ಮೃದುವಾಗುತ್ತದೆ. ಸಿ ವಿಟಮಿನ್ ಅಂಶವಿರುವ ನಿಂಬೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂರು ಚಮಚ ಗ್ಲಿಸರಿನ್‌ಗೆ ಒಂದು ಚಮಚ ರೋಸ್ ವಾಟರ್ ಸೇರಿಸಿ ಒಡೆದ ಪಾದಗಳಿಗೆ ಹಚ್ಚಿಕೊಳ್ಳುವುದರಿಂದಲೂ ಬಿರುಕು ಬಿಟ್ಟ ಪಾದಗಳು ಮೃದುವಾಗುತ್ತವೆ.

ಮನೆಯಲ್ಲೇ ತಯಾರಿಸಿ ಮುಲಾಮು

ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಮನೆಯಲ್ಲಿ ಒಂದು ಮುಲಾಮನ್ನು ತಯಾರಿಸಿಕೊಳ್ಳಬಹುದು. ಒಂದು ನೂರು ಗ್ರಾಮ್ ಜೇನುಮೇಣವನ್ನು ಕರಗಿಸಿ ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಬೇವಿನೆಣ್ಣೆ ಎರಡನ್ನೂ ಬೆರೆಸಿ ಮಿಶ್ರಣ ತಣಿದ ಮೇಲೆ ಅದನ್ನು ಒಂದು ಬಾಟಲಿಗೆ ತುಂಬಿಸಿಟ್ಟುಕೊಂಡು ಪ್ರತಿದಿನ ರಾತ್ರಿ ಮಲಗುವಾಗ ಬಿರುಕು ಬಿಟ್ಟ ಪಾದಗಳಿಗೆ ಹಚ್ಚಿಕೊಳ್ಳಬೇಕು. ಜೊತೆಗೆ ಜಿಡ್ಡಿನಂಶವಿರುವ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು.

ಸಾಮಾನ್ಯವಾಗಿ ಒಣಚರ್ಮ ಇರುವವರಿಗೆ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚು. ಜೊತೆಗೆ ಸೋರಿಯಾಸಿಸ್ ಅಥವಾ ಎಕ್ಜಿಮಾ ಕೂಡ ಇದಕ್ಕೆ ಕೂಡ ಕಾರಣವಾಗಿರಬಹುದು. ಪಾದಗಳಲ್ಲಿ ಹೆಚ್ಚು ಬಿರುಕುಗಳಿದ್ದರೆ ಮತ್ತು ಆರೈಕೆ ಮಾಡಿಯೂ ಸರಿಹೋಗದಿದ್ದರೆ ತಡ ಮಾಡದೇ ವೈದ್ಯರನ್ನು ಕಾಣಬೇಕು. ಅವರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT