(ಸಂಗ್ರಹ ಚಿತ್ರ) online desk
ಅಂಕಣಗಳು

ಹೊಸ ತಲೆಮಾರಿನ ಹುಡುಗರು ಎಲ್ಲಿ ಹೂಡಿಕೆ ಮಾಡ್ತಾ ಇದ್ದಾರೆ ಗೊತ್ತಾ? (ಹಣಕ್ಲಾಸು)

ರೀಲ್ಸ್ ಯುಗದಲ್ಲಿ ಕೂಡ ಒಂದಷ್ಟು ಪ್ರತಿಶತ ಹುಡುಗರು 25/30 ವಯಸ್ಸು ದಾಟುವ ಮುನ್ನವೇ ಕೋಟ್ಯಧಿಪತಿಗಳಾಗುತ್ತಿದ್ದಾರೆ! ಹೌದು ಸರಿಯಾಗಿ ಓದಿದಿರಿ... ಅವರೆಲ್ಲಾ ಎಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಗೊತ್ತಾ? (ಹಣಕ್ಲಾಸು-421)

ನೀವು ಈ ಜಗತ್ತನ್ನು ಗಮನಿಸಿ ನೋಡಿದರೆ ಅದರಲ್ಲಿ 4-5 ಪ್ರತಿಶತ ಜನ ಮಾತ್ರ ಹಣಕಾಸು ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಈ 5 ಪ್ರತಿ ಶತದಲ್ಲೂ ಅತಿ ದೊಡ್ಡ ಶ್ರೀಮಂತರ ಪಟ್ಟಿ ಬೇರೆಯದಿದೆ. ಒಟ್ಟಾರೆ ಜಗತ್ತಿನ 4 ರಿಂದ 5 ಪ್ರತಿಶತ ಜನ ಮಾತ್ರ ಹಣಕಾಸು ಜ್ಞಾನವನ್ನು ಹೊಂದಿದ್ದಾರೆ. ಅದರಲ್ಲೂ ಈ ತಲೆಮಾರಿನ ಹುಡುಗರು ಬೇರೆ ಎಲ್ಲಾ ಕೆಲಸವನ್ನೂ ಬಿಟ್ಟು ಪ್ಯಾಶನ್ ಹೆಸರಿನಲ್ಲಿ ಮೈಗಳ್ಳರಾಗುತ್ತಿದ್ದಾರೆ.

ರೀಲ್ಸ್, ಶಾರ್ಟ್ಸ್, ವ್ಲಾಗ್ಸ್ ಗಳಲ್ಲಿ ಅವರು ಮಗ್ನರು. ಹೌದು ಮೆಜಾರಿಟಿ ಜನ ಇರುವುದು ಹೀಗೆ. ಇದು ಇಂದಿನ ಕಾಲದಲ್ಲಿ ಎಂದಲ್ಲ, ಎಲ್ಲಾ ಕಾಲದಲ್ಲೂ ಹೀಗೆ ಇತ್ತು. ಹಿಂದಿನ ತಲೆಮಾರಿನ ಜನರಿಗೆ ಈ ರೀತಿಯ ಯಾವ ಅಡಚಣೆ ಇರಲಿಲ್ಲ. ಅಡಿಕ್ಷನ್ ಇರಲಿಲ್ಲ ಅಲ್ಲವೇ? ಹಾಗಾದರೆ ಅವರೆಲ್ಲರೂ ಅದೇಕೆ ಶಾಲೆಯಲ್ಲಿ ಅತ್ಯುತ್ತಮ ಅಂಕಗಳಿಸಿ ತೇರ್ಗಡೆ ಹೊಂದಲಿಲ್ಲ? ಅವರೇಕೆ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆದುಕೊಳ್ಳಲಿಲ್ಲ? ಅರ್ಥ ಇಷ್ಟೇ, ಎಲ್ಲಾ ಕಾಲದಲ್ಲೂ ಕೇವಲ ಒಂದಷ್ಟು ಪ್ರತಿಶತ ಜನ ಮಾತ್ರ ಅಂದುಕೊಂಡದ್ದನ್ನು ಸಾಧಿಸುತ್ತಾರೆ. ಮಿಕ್ಕವರದು ನಿತ್ಯದ ಗೋಳು. ಹಣವಿಲ್ಲ, ಬೆಂಬಲ ನೀಡುವ ಕುಟುಂಬದ ಹೆಸರಿಲ್ಲ ಇತ್ಯಾದಿ.

ಇಷ್ಟೆಲ್ಲಾ ಪೀಠಿಕೆ ಏಕೆ ಬಂತು ಗೊತ್ತಾ? ಇದೆ ರೀಲ್ಸ್ ಯುಗದಲ್ಲಿ ಕೂಡ ಒಂದಷ್ಟು ಪ್ರತಿಶತ ಹುಡುಗರು 25/30 ವಯಸ್ಸು ದಾಟುವ ಮುನ್ನವೇ ಕೋಟ್ಯಧಿಪತಿಗಳಾಗುತ್ತಿದ್ದಾರೆ! ಹೌದು ಸರಿಯಾಗಿ ಓದಿದಿರಿ, ಭಾರತವೂ ಸೇರಿ ಜಾಗತಿಕ ಮಟ್ಟದಲ್ಲಿ ಯುವ ಸಮೂಹ ಎಲ್ಲಿ ಹೂಡಿಕೆ ಮಾಡುತ್ತಿದೆ ಎನ್ನುವುದನ್ನು ಸ್ವಲ್ಪ ತಿಳಿದುಕೊಳ್ಳೋಣ. ಅಂದಹಾಗೆ ಜ್ಞಾನ ಎನ್ನುವ ಸಂಪತ್ತನ್ನು ಗಳಿಸಿಕೊಂಡು ಬಿಟ್ಟರೆ ಧನರೂಪದ ಸಂಪತ್ತು ಗಳಿಸುವುದು ಕಷ್ಟವಲ್ಲ.

ಕ್ರಿಪ್ಟೋ ಕರೆನ್ಸಿ: ಸದ್ಯದ ಮಟ್ಟಿಗೆ ಭಾರತದಲ್ಲಿ ಇದನ್ನು ಪೂರ್ಣಪ್ರಮಾಣದ ನಿಯಂತ್ರಿಸುವ ಯಾವುದೇ ಸಂಸ್ಥೆಗಳಿಲ್ಲ. ಸರಿಯಾದ ರೆಗ್ಯುಲೇಟರಿ ಬಾಡಿ (ನಿಯಂತ್ರಕ ವ್ಯವಸ್ಥೆ) ಇರದ ಕಾರಣ ಇದನ್ನು ಹೈ ರಿಸ್ಕ್ ಇನ್ವೆಸ್ಟ್ಮೆಂಟ್ ಎಂದು ಕರೆಯಲಾಗುತ್ತದೆ. ಆದರೆ ಜಾಗತಿಕ ಮಟ್ಟದಲ್ಲಿ ಯುವ ಹೂಡಿಕೆದಾರರ ಮನಸ್ಸನ್ನು ಇದು ಗೆದ್ದಿದೆ.

ರಿಯಲ್ ಎಸ್ಟೇಟ್ ಕ್ರೌಡ್ ಫಂಡಿಂಗ್, ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಸ್: ಜಾಗತಿಕ ಮಟ್ಟದಲ್ಲಿ ಕ್ರೌಡ್ ಫಂಡಿಂಗ್ ಹೆಚ್ಚು ಜನಪ್ರಿಯ. ಭಾರತದಲ್ಲಿ ಇನ್ವೆಸ್ಟ್ಮೆಂಟ್ ಟ್ರಸ್ಟ್ ಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಸದ್ಯದ ಸಮಯದಲ್ಲಿ ರಿಯಲ್ ಎಸ್ಟೇಟ್ ಕೂಡ ಯುವ ಹೂಡಿಕೆದಾರರ ಡಾರ್ಲಿಂಗ್ ಆಗಿದೆ.

ಪೀರ್ ಟು ಪೀರ್ ಲೆಂಡಿಂಗ್: ಇದರ ಬಗ್ಗೆ ವಿವರವಾಗಿ ಈ ಹಿಂದೆ ಹಣಕ್ಲಾಸು ಅಂಕಣದಲ್ಲಿ ಬರೆದಿದ್ದೇನೆ. ಸಣ್ಣಪುಟ್ಟ ಬಿಸಿನೆಸ್ಗಳಿಗೆ ಅಥವಾ ವ್ಯಕ್ತಿಗಳಿಗೆ ನೇರವಾಗಿ ಹಣವನ್ನು ಸಾಲದ ರೂಪದಲ್ಲಿ ನೀಡುವುದು ಮತ್ತು ಆ ಮೂಲಕ ಬಡ್ಡಿಯನ್ನು ಗಳಿಸಿಕೊಡುವ ಅನೇಕ ಪ್ಲಾಟ್ಫಾರ್ಮ್ಗಳು ಇಂದು ಲಭ್ಯವಿದೆ. ಎಷ್ಟು ಹಣ ಸಾಧ್ಯ ಅಷ್ಟು ಹಣವನ್ನು ಹೂಡಿಕೆ ಮಾಡಬಹುದು.

ನವೋದ್ದಿಮೆಗಳಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಆಗಿ ಹಣ ಹೂಡುವುದು: ವೆಂಚರ್ ಕ್ಯಾಪಿಟಲಿಸ್ಟ್ ಎಂದರೆ ದೊಡ್ಡ ಹಣದ ಥೈಲಿ ಹಿಡಿದು ಕೊಂಡಿರಬೇಕು ಎನ್ನುವ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ಏಂಜಲ್ ಇನ್ವೆಸ್ಟ್ ತರಹದ ಪ್ಲಾಟ್ಫಾರ್ಮ್ ಗಳ ಮೂಲಕ ಹಣವನ್ನು ತೊಡಗಿಸಬಹುದು. ಅರ್ಲಿ ಸ್ಟೇಜ್ ನವೋದ್ದಿಮೆಗಳಿಗೆ ಇಲ್ಲಿ ಫಂಡ್ ಮಾಡಲಾಗುತ್ತದೆ.

ಕಲೆಕ್ಟಿಬೆಲ್ಸ್: ಹಳೆ ಕಾಲದ ಉತ್ಪನ್ನಗಳು, ಆರ್ಟ್, ಸ್ಪೋರ್ಟ್ಸ್ ಕಾರ್ಡ್ಸ್, ವಿಡಿಯೋ ಗೇಮ್ಸ್ ಹೀಗೆ ಹಳೆಯ ನೆನಪುಗಳನ್ನು ಮರಳಿ ತರುವ ಮತ್ತು ಅದಕ್ಕೊಂದು ದೊಡ್ಡ ಬೇಸ್ ಇರುವ ಉತ್ಪನ್ನಗಳನ್ನು ಕೊಳ್ಳುವುದು ಮತ್ತು ನಂತರ ಅದನ್ನು ಮಾರುವುದು ಕೂಡ ಒಳ್ಳೆಯ ಹೂಡಿಕೆಯಾಗಿದೆ. ಭಾರತೀಯ ಯುವ ಸಮೂಹ ಇದರಲ್ಲಿ ಅಷ್ಟಾಗಿ ಹೂಡಿಕೆ ಮಾಡುತ್ತಿಲ್ಲ. ಅಲ್ಪಸ್ವಲ್ಪ ಇದ್ದರೂ ಅದು ಕೇವಲ ಹಳೆ ಕಾರುಗಳ ಮೇಲೆ ಮಾತ್ರ ಹೂಡಿಕೆಯಾಗುತ್ತಿದೆ. ಆದರೆ ಜಾಗತಿಕವಾಗಿ ಇದು ವೇಗವನ್ನು ಪಡೆದುಕೊಂಡಿದೆ.

ದೀರ್ಘಕಾಲ ಉಳಿಯಬಲ್ಲ ಅಂಶಗಳ ಮೇಲೆ ಹೂಡಿಕೆ: ಸಸ್ಟೈನಬಲ್ ಎನ್ನುವ ಪದ ಇಂದಿಗೆ ಅತಿ ಹೆಚ್ಚು ಮೌಲ್ಯವನ್ನು ಪಡೆದುಕೊಂಡಿದೆ. ಹೀಗಾಗಿ ಯಾವುದೆಲ್ಲಾ ಎನ್ವಿರಾನ್ಮೆಂಟ್ ಮೇಲೆ ಕಡಿಮೆ ಕೆಟ್ಟ ಪರಿಣಮವನ್ನು ಬೀರುತ್ತದೆ, ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುತ್ತದೆ ಮತ್ತು ಆಡಳಿತವನ್ನು ಸರಿಯಾಗಿ , ಪಾರದರ್ಶಕವಾಗಿ ನಡೆಸುತ್ತದೆ ಅಂತಹ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆಯನ್ನು ಮಾಡುತ್ತಿದ್ದಾರೆ.

ಬೆಲೆಬಾಳುವ ಲೋಹಗಳ ಮೇಲೆ ಹೂಡಿಕೆ: ಗೋಲ್ಡ್ , ಸಿಲ್ವರ್ ಜೊತೆಗೆ ಪ್ಲಾಟಿನಂ, ರೋಡಿಯಂ, ಪಲ್ಲಡಿಯಂ ಹೀಗೆ ಇನ್ನು ಹಲವು ಹತ್ತು ಲೋಹಗಳ ಮೇಲೆ ಹೂಡಿಕೆಯನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಚಿನ್ನ ಇಂದಿಗೂ ರಾಜ. ಇತ್ತೀಚೆಗೆ ಗೋಲ್ಡ್ ಬಾಂಡ್ಸ್ ಮತ್ತು ಡಿಜಿಟಲ್ ಗೋಲ್ಡ್ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ.

ರಾಯಲ್ಟಿಸ್ ಮತ್ತು ಪೇಟೆಂಟ್ ಗಳಲ್ಲಿ ಹೂಡಿಕೆ: ಇದು ಭಾರತದಲ್ಲಿ ಅತಿ ಕಡಿಮೆ ಎನ್ನಬಹುದು. ಆದರೆ ಇದು ಜಾಗತಿಕವಾಗಿ ಸಾಕಷ್ಟು ಸದ್ದು ಮಾಡುತ್ತಿದೆ.

ಫಾರ್ಮ್ ಲ್ಯಾಂಡ್, ಅಗ್ರಿಕಲ್ಚರಲ್ ಇನ್ವೆಸ್ಟ್ಮೆಂಟ್: ಇಲ್ಲಿ ಹೂಡಿಕೆ ಮಾಡಲು ಕೂಡ ನಮ್ಮ ಬಳಿ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ. ಈ ವಲಯದಲ್ಲಿ ಕೂಡ ಹತ್ತಾರು ವೇದಿಕೆಗಳು ಲಭ್ಯವಿವೆ. ಅವುಗಳ ಮೂಲಕ ಸುಲಭವಾಗಿ ಕೈಲಿದ್ದಷ್ಟು ಹೂಡಿಕೆಯನ್ನು ಮಾಡಬಹುದು. ಮುಂಬರುವ ದಿನಗಳಲ್ಲಿ ಕೃಷಿ ಮತ್ತು ಕೃಷಿ ಭೂಮಿ ಎರಡಕ್ಕೂ ವಿಶೇಷ ಬೇಡಿಕೆ ಬರುವ ಸಾಧ್ಯತೆ ಇರುವ ಕಾರಣ ಇಲ್ಲಿನ ಹೂಡಿಕೆ ಕೂಡ ವೇಗವನ್ನು ಪಡೆದುಕೊಳ್ಳುತ್ತಿದೆ.

ರಿನ್ಯೂವಬೆಲ್ ಎನೆರ್ಜಿ ಪ್ರೊಜೆಕ್ಟ್ಗಳ ಮೇಲಿನ ಹೂಡಿಕೆ: ನವೀಕರಿಸ ಬಹುದಾದ ಶಕ್ತಿ ಮೂಲಗಳ ಮೇಲಿನ ಎಲ್ಲಾ ಪ್ರೊಜೆಕ್ಟ್ಗಳು ಕೂಡ ಇಂದು ಜಾಗತಿಕವಾಗಿ ಎಲ್ಲಾ ಸರಕಾರಗಳ ಕೃಪೆಗೆ ಪಾತ್ರವಾಗಿವೆ. ಹೀಗಾಗಿ ಯುವ ಜನತೆ ಇಲ್ಲಿ ಹಣವನ್ನು ತೊಡಗಿಸುತ್ತಿದ್ದಾರೆ.

ಮ್ಯೂಚುಯಲ್ ಫಂಡ್ ಮತ್ತಿತರ ಅಲ್ಟೇರ್ನೆಟ್ ಅಸೆಟ್ ಕ್ಲಾಸ್ ಗಳಲ್ಲಿ ಹೂಡಿಕೆ: ಭಾರತದ ಯುವ ಜನತೆ ಮ್ಯೂಚುಯಲ್ ಫಂಡ್ ಮೇಲೆ ಬಹಳವಾಗಿ ಹೂಡಿಕೆ ಮಾಡುತ್ತಿದ್ದಾರೆ. 25 ರಿಂದ 30 ಪ್ರತಿಶತದ ವರೆಗೆ ರಿಟರ್ನ್ ನೀಡುತ್ತಿರುವುದು ಈ ಮಟ್ಟಿಗೆ ಇದನ್ನು ಪ್ರಖ್ಯಾತವಾಗಿಸಿದೆ. ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ತಡೆದುಕೊಳ್ಳಲು ಸಾಧ್ಯವಾಗದವರು , ಮತ್ತು ಕನಿಷ್ಠ ಏಳೆಂಟು ವರ್ಷ ಸತತವಾಗಿ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡುತ್ತೇವೆ ಎನ್ನುವವರಿಗೆ ಇದು ಬಹಳ ಉತ್ತಮವಾಗಿದೆ. ಹೀಗಾಗಿ ಇಲ್ಲೂ ಕೂಡ ಯುವ ಜನತೆ ಹೆಚ್ಚು ಹೂಡಿಕೆಯನ್ನು ಮಾಡುತ್ತಿದೆ.

ಕೊನೆಮಾತು: ಭಾರತದ ಜನಸಂಖ್ಯೆಯ ಕೇವಲ 2 ಪ್ರತಿಶತ ಜನ ಕೂಡ ಆಕ್ಟಿವ್ ಆಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡುತ್ತಿಲ್ಲ.ಹೀಗಾಗಿ ಮೇಲೆ ಹೇಳಿರುವ ರೀತಿಯಲ್ಲಿ ಗೋಲ್ಡ್ ಒಂದನ್ನು ಬಿಟ್ಟು ಮಿಕ್ಕದರ ಮೇಲಿನ ಹೂಡಿಕೆಯನ್ನು ಹಳೆ ತಲೆಮಾರಿನ ಜನರು ಮಾಡುತ್ತಿಲ್ಲ. ಹೊಸ ತಲೆಮಾರು ಹೊಸತನಕ್ಕೆ , ಹೊಸ ಸವಾಲುಗಳಿಗೆ ಸಿದ್ಧವಾಗಿದೆ ಎನ್ನುವದಕ್ಕಿಂತ ಅದನ್ನು ಸ್ವೀಕರಿಸದೆ ಇದ್ದರೆ ಬದುಕು ಸಾಧ್ಯವಿಲ್ಲ ಎನ್ನುವಂತಾಗಿದೆ.

ಹೀಗಾಗಿ ಅವರು ಇದರಲ್ಲಿ ಹೆಚ್ಚು ಹೂಡಿಕೆಯನ್ನು ಮಾಡುತ್ತಿದ್ದಾರೆ. ಮೇಲೆ ಹೇಳಿರುವ ಹತ್ತು ವಿಧಗಳಲ್ಲಿ ಕೂಡ ಭಾರತೀಯ ಯುವ ಸಮೂಹ ಅತಿ ಹೆಚ್ಚು ತೊಡಗಿಸಿಕೊಂಡಿರುವುದು ಮ್ಯೂಚುಯಲ್ ಫಂಡ್ ಗಳಲ್ಲಿ ! ಮ್ಯೂಚುಯಲ್ ಫಂಡ್ ಗಳಲ್ಲಿ ಭಾರತದ 8 ಪ್ರತಿಶತ ಜನ ಹೂಡಿಕೆ ಮಾಡುತ್ತಿದ್ದಾರೆ ಎನ್ನುವುದು ಇದನ್ನು ಸರಿಯೆಂದು ಹೇಳುವುದಕ್ಕೆ ಇರುವ ಸಾಕ್ಷಿ. ಒಟ್ಟಾರೆ ಭಾರತದಲ್ಲಿ ಹೂಡಿಕೆ ಮಾಡಬೇಕು ಎನ್ನುವ ಮನಸ್ಸಿರುವ ಜನರ ಸಂಖ್ಯೆ ಕೇವಲ 2 ರಿಂದ 8 ಪ್ರತಿಶತ ಮಾತ್ರ ! ಈ ಸಂಖ್ಯೆ 45 ರಿಂದ 50 ಅಥವಾ 80 ಪ್ರತಿಶತವಾದರೆ ಏನಾಗಬಹುದು? ಅದು ಊಹೆಗೂ ನಿಲುಕದ ಬದಲಾವಣೆಯನ್ನು ಭಾರತದಲ್ಲಿ ತರುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT