ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್- ಸಿಎಂ ಸಿದ್ದರಾಮಯ್ಯ  online desk
ಅಂಕಣಗಳು

ಸಂಘರ್ಷ ಅಥವಾ ಸಂಧಾನ?: ಸಿದ್ದರಾಮಯ್ಯ ನಡೆಯತ್ತ ಎಲ್ಲರ ಚಿತ್ತ (ಸುದ್ದಿ ವಿಶ್ಲೇಷಣೆ)

ವಾಲ್ಮೀಕಿ ನಿಗಮದ ಹಣ ದುರುಪಯೋಗ, ಭ್ರಷ್ಟಾಚಾರದ ಹಗರಣದ ನಂತರ ಮೈಸೂರಿನ ನಿವೇಶನ ಹಂಚಿಕೆ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗುರ ತಂದಿರುವುದಂತೂ ಸತ್ಯ. ಆದರೆ ಸಿದ್ದರಾಮಯ್ಯ ಅವರನ್ನೇ ನೇರ ಗುರಿಯಾಗಿರಿಸಿಕೊಂಡಿರುವುದರ ಹಿಂದೆಯೂ ಅನೇಕ ನಿಗೂಢ ಸತ್ಯಗಳು ಅಡಗಿವೆ.

ಮುಂದೇನು? ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಗುರಿಯಾಗಿಸಲಾಗಿದೆಯ?

ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ನೀಡುವುದರೊಂದಿಗೆ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷ ಪ್ರಾರಂಭವಾಗಿದೆ. ರಾಜ್ಯಪಾಲರ ನೋಟಿಸ್ ಗೆ ಪ್ರತಿಯಾಗಿ ಗುರುವಾರ ನಡೆದ ರಾಜ್ಯ ಸಚಿವ ಸಂಫುಟದ ಸಭೆ ಕೈಗೊಂಡಿರುವ ನಿರ್ಣಯ ದಿಂದ ರಾಜಭವನ ಮತ್ತು ಸರ್ಕಾರದ ನಡುವೆ ಸಂಘರ್ಷವಂತೂ ಖಚಿತ ಎಂಬ ವಾತಾವರಣ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಮುಂದಿನ ಹಾದಿ ಏನು ಎಂಬುದು ಕೇಳಿ ಬರುತ್ತಿರುವ ಪ್ರಶ್ನೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ( ಮೂಡಾ) ವತಿಯಿಂದ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಆರೋಪಗಳ ಕುರಿತಂತೆ ರಾಜ್ಯ ಸರ್ಕಾರ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನೂ ರಚಿಸಿದ್ದು ಅದಿನ್ನೂ ಕಾರ್ಯಾರಂಭ ಮಾಡಬೇಕಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ. ಅಬ್ರಹಂ ಎಂಬುವರು ನೀಡಿದ ದೂರು ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ರಾಜಭವನ ಈ ವಿಚಾರದಲ್ಲಿ ತರಾತುರಿಯಿಂದ ವಿಶೇಷ ಆಸಕ್ತಿ ವಹಿಸಿ ನೋಟಿಸ್ ನೀಡಿರುವುದು ಈಗ ಸಂಘರ್ಷಕ್ಕೆ ಬಾಗಿಲು ತೆರೆದಂತಾಗಿದೆ. ಸಂವಿಧಾನದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಾದ ರಾಜ್ಯಪಾಲರು ಕೇಂದ್ರ ಸರ್ಕಾರದ ಆದೇಶ ಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕೇಂದ್ರದಲ್ಲಿ ಈ ಹಿಂದಿನ ಸಂದರ್ಭಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೂ ರಾಜಭವನವನ್ನು ತನ್ನ ಹಿತಾಸಕ್ತಿಗಳಿಗೆ ಬಳಸಿಕೊಂಡ ಉದಾಹರಣೆಗಳು ಸಾಕಷ್ಟಿರುವುದರಿಂದ ಇಂತಹ ಆರೋಪ ಸಹಜ.

ಇದೀಗ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಬಂದರೆ ಇಡೀ ನಿವೇಶನ ಹಂಚಿಕೆಯ ಪ್ರಕರಣದಲ್ಲಿ ಮುಖ್ಯಮಂತ್ರಿಯಾಗಿ ಅವರ ಪಾತ್ರ ಏನೂ ಇಲ್ಲ. ಪ್ರಕರಣದಲ್ಲಿ ಫಲಾನುಭವಿ ಅವರ ಪತ್ನಿ. ಬಡಾವಣೆ ರಚಿಸುವ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಆಗ ಅಧಿಕಾರ ನಡೆಸುತ್ತಿದ್ದ ಪ್ರಭಾವಿ ರಾಜಕಾರಣಿಗಳ ಪ್ರಭಾವಕ್ಕೆ ಮಣಿದು ನಿವೇಶನ ಹಂಚಿಕೆಯಲ್ಲಿ ಗೊಂದಲ ಎಬ್ಬಿಸಿದ್ದಾರೆ. ವಿಶೇಷ ಎಂದರೆ ಈ ರೀತಿ ನಿವೇಶನ ಪಡೆದವರಲ್ಲಿ ಬಿಜೆಪಿ, ಜೆಡಿಎಸ್ ನಾಯಕರು, ಮುಖಂಡರೂ ಇದ್ದಾರೆ ಎಂಬುದು. ಹಾಗೆ ನೋಡಿದರೆ ಮೈಸೂರಿನಲ್ಲಿ ನಡೆದಿರುವ ಹಿಂದಿನ ಅನೇಕ ಭೂ ಹಗರಣಗಳ ಬಗ್ಗೆ ಸರ್ಕಾರದ ಉನ್ನತಾಧಿಕಾರಿಗಳ ಸಮಿತಿಯೇ ವರದಿ ನೀಡಿ ಅಕ್ರಮ ನಡೆದಿರುವುದನ್ನು ಖಚಿತ ಪಡಿಸಿದ್ದರೂ ಸಂಬಂಧ ಪಟ್ಟ ರಾಜಕೀಯ ಪ್ರಭಾವಿಗಳ ವಿರುದ್ಧ ತನಿಖೆಯಾಗಲೀ ಅಥವಾ ಕಾನೂನು ಕ್ರಮವಾಗಲೀ ಆಗಿಲ್ಲ.

ಆ ತನಿಖಾ ವರದಿಗಳು ವಿಧಾನಸೌಧದಲ್ಲಿ ಧೂಳು ತಿನ್ನುತ್ತಿವೆ. ಈಗ ವಿವಾದ ಎದ್ದಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಅದರ ಜತೆಗೇ ರಾಜ್ಯಪಾಲರನ್ನು ಹಿಂದೆ ಭೇಟಿಯಾಗಿ ದಾಖಲೆಗಳ ಸಮೇತ ವಿವರಣೆ ನೀಡಿದ್ದಾರೆ. ವಿಚಾರಣಾ ಆಯೋಗ ತನಿಖೆ ನಡೆಸಿ ಇನ್ನೂ ವರದಿ ನೀಡಬೇಕಿದ್ದು ಅದಕ್ಕೆ ಕಾಲವಕಾಶ ಇದೆ. ಆರೋಪಗಳು ಬಂದ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ನಿರ್ಲಕ್ಷಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಹಾಗಿದ್ದರೂ ಈ ಪ್ರಕರಣ ಸಂವಿಧಾನಾತ್ಮಕ ಸಂಘರ್ಷವನ್ನು ಹುಟ್ಟುಹಾಕಿರುವುದರ ಹಿನ್ನೆಲೆ ಏನು ಎಂದು ನೋಡಿದರೆ ಇದರ ಹಿಂದೆ ಇರುವ ರಾಜಕಾರಣದ ವಾಸನೆ ಮೂಗಿಗೆ ಬಡಿಯುತ್ತದೆ. ಕಳೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದೆ. ಅದು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲೂ ಋಜುವಾತಾಗಿದೆ. ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ಅವಕಾಶವಿದ್ದ ಬಿಜೆಪಿಗೆ ಶಾಶ್ವತವಾಗಿ ಅಧಿಕಾರ ಹಿಡಿಯುವ ಕನಸು ಭಗ್ನವಾಗಿದೆ. ಇದರ ಜತೆಗೇ ತೆಲಂಗಾಣ ಚುನಾವಣೆಯಲ್ಲೂ ಕಾಂಗ್ರೆಸ್ ಪ್ರಾಬಲ್ಯ ಸಾದಿಸಿರುವುದು ಬಿಜೆಪಿಯನ್ನು ಕಂಗೆಡಿಸಿದೆ. ಈಗ ಇದರ ಮುಂದುವರಿದ ಭಾಗ ಎಂಬಂತೆ ರಾಜ್ಯದಲ್ಲಿ ಮೂಡ ಹಗರಣವನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸಲು ಹೊರಟಿದೆ ಎಂಬುದು ಗೊತ್ತಾಗುವ ಅಂಶ.

ಹಾಗೆ ನೋಡಿದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭಾರೀ ಪ್ರಮಾಣದ ಹಣ ದುರುಪಯೋಗ, ಭ್ರಷ್ಟಾಚಾರದ ಹಗರಣದ ನಂತರ ಮೈಸೂರಿನ ನಿವೇಶನ ಹಂಚಿಕೆ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗುರ ತಂದಿರುವುದಂತೂ ಸತ್ಯ. ಆದರೆ ಸಿದ್ದರಾಮಯ್ಯ ಅವರನ್ನೇ ನೇರ ಗುರಿಯಾಗಿರಿಸಿಕೊಂಡಿರುವುದರ ಹಿಂದೆಯೂ ಅನೇಕ ನಿಗೂಢ ಸತ್ಯಗಳು ಅಡಗಿವೆ. ಸೈದ್ಧಾಂತಿಕವಾಗಿ ಅವರು ಬಿಜೆಪಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಇವತ್ತಿಗೂ ರಾಜ್ಯದಲ್ಲಿ ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಎಂದು ಅವರನ್ನು ಗುರತಿಸಲಾಗುತ್ತಿದೆ. ಆ ಸಮುದಾಯಗಳು ಅವರ ಬೆನ್ನಿಗಿರುವುದಂತೂ ನಿಜ. ಬಹುಶಃ ಕಾಂಗ್ರೆಸ್ ನಲ್ಲಿ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಬಂಗಾರಪ್ಪ ಅವರ ನಂತರ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡ ಪ್ರಬಲ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಸರಿಗಟ್ಟುವ ನಾಯಕರು ಕಾಂಗ್ರೆಸ್ ನಲ್ಲೂ ಇಲ್ಲ. ಬಿಜೆಪಿಯಲ್ಲೂ ಇಲ್ಲ. ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪಕ್ಷವಾಗಿ ರೂಪಗೊಂಡಿರುವುದರಿಂದ ಅಲ್ಲಿ ಸಿದ್ಧಾಂತಕ್ಕಿಂತ ಕುಟುಂಬದ ಹಿತಾಸಕ್ತಿಯ ಮೇಲೆ ರಾಜಕಾರಣ ನಿರ್ಧರಿತವಾಗುತ್ತದೆ.

ಇನ್ನು ಬಿಜೆಪಿಯಲ್ಲಿ ಹಿಂದುಳಿದವರೂ ಸೇರಿದಂತೆ ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳ ಪ್ರಬಲ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶಗಳಿದ್ದ ಮಾಜಿ ಸಚಿವರಾದ ಈಶ್ವರಪ್ಪ, ಅರವಿಂದ ಲಿಂಬಾವಳಿ ಮೊದಲಾದ ಮೂಲ ಸಂಘಪರಿವಾರದ ಮುಖಂಡರು ಅಲ್ಲಿನ ಜಾತಿ ವ್ಯವಸ್ಥೆಯಡಿ ಸಿಲುಕಿ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ. ಇವತ್ತಿಗೂ ಬಿಜೆಪಿ ಲಿಂಗಾಯಿತರು ಮತ್ತು ಮೇಲ್ವರ್ಗಗಳ ಪಕ್ಷವಾಗಿ ಗುರುತಿಸಿಕೊಂಡಿದೆ. ಇದು ರಾಜಕಾರಣದ ವಸ್ತು ಸ್ಥಿತಿ.

ಇದೆಲ್ಲವನ್ನೂ ಮೀರಿ ಸಿದ್ದರಾಮಯ್ಯ ಅಹಿಂದ ವರ್ಗದ ನಾಯಕರಾಗಿ ವಿಜೃಂಭಿಸುತ್ತಿರುವುದು ಬರೀ ಬಿಜೆಪಿ, ಜಡಿಎಸ್ ಪಕ್ಷಗಳಗಷ್ಟೇ ಅಲ್ಲ ಕಾಂಗ್ರೆಸ್ ನಲ್ಲೂ ಒಂದು ವರ್ಗಕ್ಕೆ ಅಸಹನೀಯವಾಗಿದೆ. ಇದಕ್ಕೆ ಅವರ ಕೆಲವು ಬೆಂಬಲಿಗ ಮುಖಂಡರ ಅಸಹನೀಯ ವರ್ತನೆಯೂ ಕಾರಣ ಎನ್ನಬಹುದು. ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲೂ ಪೈಪೋಟಿ ನಡೆದಿರುವುದು ಗುಟ್ಟೇನೂ ಅಲ್ಲ. ಈ ಸನ್ನಿವೇಶವನ್ನು ಬಳಸಿಕೊಂಡು ಸಿದ್ದರಾಮಯ್ಯ ವಿರುದ್ಧ ರಾಜಕೀಯ ತಂತ್ರ ರೂಪಿಸಿದರೆ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಬಹುದು. ಸಂದರ್ಭ ನೋಡಿ ರಾಜಕೀಯ ದಾಳ ಉರುಳಿಸಿ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದೆ ಎಂಬುದು ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುವ ಸಂಗತಿ.

ರಾಷ್ಟ್ರ ಮಟ್ಟದಲ್ಲಿ ಭರವಸೆಯ ನಾಯಕರಾಗುವ ಎಲ್ಲ ಸೂಚನೆಗಳೂ ಇದ್ದ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಕೇಜರಿವಾಲ್ ಅವರನ್ನು ಈಗಾಗಲೇ ದಿಲ್ಲಿ ಅಬಕಾರಿ ಹಗರಣದಲ್ಲಿ ಕೇಂದ್ರ ಸರ್ಕಾರ ತನ್ನ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜೈಲಿಗೆ ದೂಡುವ ಮೂಲಕ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಈಗ ಕರ್ನಾಟಕದಲ್ಲೂ ಅದೇ ಪ್ರಯೋಗಕ್ಕೆ ಮುಂದಾಗಿದೆ. ಆದರೆ ಕರ್ನಾಟಕದ ಪರಿಸ್ಥಿತಿಯೇ ಬೇರೆ. ಈಗಾಗಲೇ ಅಹಿಂದ ವರ್ಗಗಳು ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಸಿಡಿದೆದ್ದಿದ್ದು ಹೋರಾಟಕ್ಕೆ ಕರೆ ನೀಡಿವೆ.

ಈ ತಿಂಗಳು ಸಿದ್ದರಾಮಯ್ಯ ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ನಡೆಯಲಿರುವ ಬೃಹತ್ ಸಮಾವೇಶ ಮುಂದಿನ ಸಂಘರ್ಷದ ಹಾದಿಯನ್ನು ನಿರ್ಧರಿಸಲಿದೆ. ಹೀಗಾಗಿ ಕೇಜರಿವಾಲ್ ಪ್ರಕರಣಕ್ಕೆ ಹೋಲಿಕೆ ಮಾಡಿದರೆ ರಾಜಕೀಯವಾಗಿ ಸಿದ್ದರಾಮಯ್ಯ ಪ್ರಬಲರಾಗಿದ್ದಾರೆ. ಅವರ ವಿರುದ್ಧದ ಯಾವುದೇ ಕ್ರಮ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಹಾಗೊಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂಬ ಒತ್ತಡದ ಸನ್ನಿವೇಶ ಎದುರಾದರೆ ಅವರು ಸ್ಪಷ್ಟವಾಗಿ ಅದನ್ನು ನಿರಾಕರಿಸುವ ನಿಲುವು ತಾಳುವ ಎಲ್ಲ ಸಾಧ್ಯತೆಗಳೂ ಇವೆ.

ಹಾಗೊಂದು ವೇಳೆ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇ ಆದಲ್ಲಿ ಕಾನೂನು ಹೋರಾಟಕ್ಕೆ ಈಗಾಗಲೇ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಈ ಪ್ರಕರಣ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಪ್ರಶ್ನೆಯಾಗೇ ಉಳಿದಿದೆ.

ಬಂಗಾರಪ್ಪ ರಾಜೀನಾಮೆ ಕೊಡಿಸಿದ್ದ ಕಾಂಗ್ರೆಸ್ ಹೈಕಮಾಂಡ್
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಆರೋಪ ಬಂದು ತನಿಖೆಗೆ ಆದೇಶಿಸಿದಾಗಲೂ ಅವರು ರಾಜೀನಾಮೆಗೆ ನಿರಾಕರಿಸಿ ಹಟ ಹಿಡಿದಿದ್ದರು ಆಗ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿ ರಾಜೀನಾಮೆ ಕೊಡಿಸಿತು. ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಪ್ರಬಲವಾಗಿತ್ತು.

ಆದರೆ ಈಗಿನ ಸನ್ನಿವೇಶ ಬೇರೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪ್ರಬಲವಾಗೇನೂ ಇಲ್ಲ. ಹೀಗಾಗಿ ಒಂದುವೇಳೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ನಿಂದ ಒತ್ತಡ ಎದುರಾದರೆ ಸಿದ್ದರಾಮಯ್ಯ ಅದರ ವಿರುದ್ಧ ಸೆಟೆದು ನಿಲ್ಲುವ ಸಾಧ್ಯತೆಗಳೇ ಜಾಸ್ತಿ. ಸದ್ಯಕ್ಕಂತೂ ಅವರ ಬೆಂಬಲಕ್ಕೆ ಇಡೀ ಮಂತ್ರಿ ಮಂಡಲ, ಶಾಸಕಾಂಗ ಪಕ್ಷ ನಿಂತಿದೆ.

ಆದರೆ ಪರಿಸ್ಥಿತಿಗಳು ಬದಲಾದಂತೆ ಇದೇ ಬೆಂಬಲಿಗರು ಅವರ ಬೆನ್ನಿಗೆ ನಿಲ್ಲುತ್ತಾರಾ ಎಂಬುದು ಅನುಮಾನ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಷ್ಟೆ ಕಳೆದಿದೆ.

ಈ ಹಂತದಲ್ಲಿ ಅಭಿವೃದ್ಧಿಕಾರ್ಯಗಳಿಗೆ ಸರ್ಕಾರದ ಅನುದಾನ ಬಿಡುಗಡೆ ಆಗದೇ ಶಾಸಕರು ಪರಿತಪಿಸುವಂತಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಈಗಿನ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ರಾಜಕೀಯ ಸ್ಥಿತ್ಯಂತರ ಎದುರಾದರೆ ನಾಯಕತ್ವಕ್ಕಿಂತ ಅಧಿಕಾರ ಉಳಿಸಿಕೊಳ್ಳುವುದೇ ಪ್ರಧಾನವಾಗುತ್ತದೆ. ಈ ಹಂತದಲ್ಲಿ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡು ಯಾವುದೇ ಸಂದರ್ಭದಲ್ಲಿ ಅವರ ಜತೆ ನಿಲ್ಲುವ ಶಾಸಕರ ಸಂಖ್ಯೆ ಎಷ್ಟು ಎಂಬುದು ಸದ್ಯಕ್ಕೆ ನಿಗೂಢ.

ದಿಲ್ಲಿ ಕಾಂಗ್ರೆಸ್ ವಲಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುತ್ತಾರೆ ಎಂಬ ಸುದ್ದಿಗಳಿವೆ. ಅವರನ್ನು ಮುಖ್ಯಮಂತ್ರಿಯಾಗಿಸಲು ಒಂದು ಗುಂಪು ಆಸಕ್ತವಾಗಿದೆ.

ಆದರೆ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕೆ ಆಕಾಂಕ್ಷಿಗಳಾಗಿರುವವರ ದೊಡ್ಡ ದಂಡೇ ಇದೆ. ಅಂತಹ ಸಂದರ್ಭ ಎದುರಾದರೆ ಆ ಪಕ್ಷದಲ್ಲೂ ಅಂತಃ ಕಲಹ ದೊಡ್ಡದಾಗಬಹುದು. ಈ ಸನ್ನಿವೇಶದ ಲಾಭ ಪಡೆದು ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ತಯಾರಿ ನಡೆಸುತ್ತಿದೆ.

ಬಿಜೆಪಿಯಲ್ಲಿನ ಭಿನ್ನಮತ

ಹಾಗೆ ನೋಡಿದರೆ ಬಿಜೆಪಿಯಲ್ಲೂ ಎಲ್ಲವೂ ಸರಿ ಇಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಬಂಡಾಯ ಎದ್ದಿದ್ದಾರೆ. ಈ ಬಂಡಾಯಕ್ಕೆ ಆ ಪಕ್ಷದ ದಿಲ್ಲಿ ಧಣಿಗಳೇ ಪ್ರೊತ್ಸಾಹ ನೀಡುತ್ತಿದ್ದಾರೆ. ಬಿಜೆಪಿ ಆರಂಭಿಸಿರುವ ಮೈಸೂರು ಚಲೋ ಪಾದ ಯಾತ್ರೆಗೆ ಆ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಸದ್ಯಕ್ಕೆ ವಿಜಯೇಂದ್ರ ಬೆಂಬಲಕ್ಕೆ ವರಿಷ್ಠರೇನೋ ನಿಂತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ಕಾಯಂ ಆದರೆ ಅಲ್ಲೂ ಕೆಲವರು ಪಕ್ಷ ತೊರೆಯುವ ಸನ್ನಿವೇಶ ಎದುರಾದರೂ ಆಶ್ಚರ್ಯ ಏನಿಲ್ಲ. ಲೋಕೋಪಯೊಗಿ ಸಚಿವ ಸತೀಶ ಜಾರಕಿಹೊಳಿ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳಿವೆ. ಮುಂದಿನ ಬೆಳವಣಿಗೆ ಕಾದು ನೋಡಬೇಕು.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT