Mpox online desk
ಅಂಕಣಗಳು

ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಮಂಕಿಪಾಕ್ಸನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ರೋಗವನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ನಮ್ಮ ದೇಶದಲ್ಲಿ ಈ ರೋಗ ಹೆಚ್ಚೇನೂ ಕಂಡುಬರದಿದ್ದರೂ ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲರೂ ಕಾಳಜಿ ವಹಿಸುವುದು ಮುಖ್ಯವಾಗಿದೆ. ಜಾಗತಿಕವಾಗಿ, 2022ರಿಂದ ವಿಶ್ವ ಆರೋಗ್ಯ ಸಂಸ್ಥೆಯು 116 ದೇಶಗಳಿಂದ ಮಂಕಿಪಾಕ್ಸ್ ರೋಗದ 99,176 ಪ್ರಕರಣಗಳು ಮತ್ತು 208 ಸಾವುಗಳನ್ನು ವರದಿ ಮಾಡಿದೆ. ಜುಲೈ 2022ರಲ್ಲಿ ಭಾರತದಲ್ಲಿ ಮಂಗನ ಕಾಯಿಲೆಯ ಮೊದಲ ಪ್ರಕರಣ ವರದಿಯಾಗಿತ್ತು. ನಂತರ ಒಟ್ಟು 30 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ ಮತ್ತು ಕೊನೆಯ ಪ್ರಕರಣವು ಮಾರ್ಚ್ 2024ರಲ್ಲಿ ವರದಿಯಾಗಿದೆ.

ಮಂಕಿಪಾಕ್ಸ್ ವೈರಲ್ ಸೋಂಕು

ಮಂಕಿಪಾಕ್ಸ್ ಒಂದು ವೈರಲ್ ಸೋಂಕು ರೋಗ. ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಈ ರೋಗ ಬರುತ್ತದೆ. ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ ಮತ್ತು ಸಿಡುಬು ರೋಗವನ್ನು ಉಂಟುಮಾಡುವ ವೈರಸ್‌ನಂತೆಯೇ ಇದೆ. ಈ ವೈರಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹರಡುತ್ತಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಸ್ವೀಡನ್‌ನಲ್ಲಿ ಸೋಂಕು ಪತ್ತೆಯಾದ ಬಳಿಕ ಆಫ್ರಿಕಾದ ಹೊರಗೆ ಈ ರೋಗದ ಅಪಾಯದ ಸೂಚನೆ ಕೊಟ್ಟಿದೆ.

ಮಂಕಿಪಾಕ್ಸನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನ್ಯುಮೋನಿಯಾ, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಉಸಿರಾಟದ ತೊಂದರೆಗಳು ಇದರಿಂದ ಉಂಟಾಗಬಹುದು. ಕ್ಲಾಡ್-2 ಸ್ವಲ್ಪ ಕಡಿಮೆ ಅಪಾಯಕಾರಿ. ದೇಹದಲ್ಲಿ ಗುಳ್ಳೆಗಳು ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ವೈರಸ್ಸನ್ನು 1958ರಲ್ಲಿ ಮೊದಲ ಬಾರಿಗೆ ಮಂಗಗಳಲ್ಲಿ ಪತ್ತೆ ಮಾಡಲಾಯಿತು. ಆದ್ದರಿಂದಲೇ ಈ ರೋಗಕ್ಕೆ ಮಂಕಿ ಪಾಕ್ಸ್ ಎಂದು ಹೆಸರು ಬಂದಿದೆ. ಆದರೆ ಇದು ಸಾಮಾನ್ಯವಾಗಿ ಇಲಿ, ಮೊಲ, ಅಳಿಲು ಮತ್ತು ಇತರ ಕಾಡು ಪ್ರಾಣಿಗಳಲ್ಲಿ ಕಂಡುಬರುತ್ತದೆ. 1970ರಲ್ಲಿ ಕಾಂಗೋ ದೇಶದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ರೋಗ ಕಂಡುಬಂದಿತು. ಉಷ್ಣವಲಯದ ಆಫ್ರಿಕನ್ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತಿದೆ. ಇತ್ತೀಚೆಗೆ ಜನರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಮಾನಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವುದರಿಂದ ರೋಗ ಪ್ರಸರಣ ಜಾಸ್ತಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿದ್ದರೆ ಅಂತಹವರನ್ನು ಈ ರೋಗ ಬಾಧಿಸುವುದಿಲ್ಲ.

ಮಂಕಿಪಾಕ್ಸ್ ಸೋಂಕು ಹೇಗೆ ಹರಡುತ್ತದೆ?

ಈ ರೋಗ ಸೋಂಕು ಇರುವ ಪ್ರಾಣಿಗಳ ಜೊತೆ ನೇರ ಸಂಪರ್ಕವಿರುವ ಮನುಷ್ಯರಿಗೆ ಮೊದಲು ಹರಡುತ್ತದೆ. ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆಯಿಂದಲೂ ರೋಗ ಬರಬಹುದು. ಸೋಂಕಿತ ವ್ಯಕ್ತಿಗಳ ಉಸಿರಾಟದಿಂದ ಹೊರಬೀಳುವ ಕಣಗಳಿಂದ ಬೇರೆಯವರಿಗೆ ಸೋಂಕು ತಗುಲಬಹುದು. ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣವಾಗಬಹುದು.

ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು

ಈ ಸೋಂಕು ತಗುಲಿದ ನಂತರ ಆರರಿಂದ ಹದಿಮೂರು ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಐದರಿಂದ ಇಪ್ಪತ್ತೊಂದು ದಿನಗಳ ಅವಧಿಯಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರ, ತೀವ್ರ ತಲೆನೋವು, ಹಾಲ್ರಸ ಗ್ರಂಥಿಗಳಲ್ಲಿ ಊತ, ಬೆನ್ನು ನೋವು, ಸ್ನಾಯು ನೋವು, ನಿತ್ರಾಣ, ಮುಖ, ಕೈ, ಕಾಲುಗಳು, ಹಸ್ತ ಮತ್ತು ಪಾದಗಳಲ್ಲಿ ದುದ್ದುಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಶೇಕಡಾ 95ರಷ್ಟು ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದುದ್ದುಗಳು ಕಾಣಿಸಿಕೊಳ್ಳುತ್ತವೆ. ದದ್ದುಗಳು ಚಪ್ಪಟೆಯಾದ ಹುಣ್ಣಾಗಿ ಪ್ರಾರಂಭವಾಗುತ್ತವೆ.

ನಿಧಾನವಾಗಿ ದ್ರವದಿಂದ ತುಂಬಿದ ಗುಳ್ಳೆಯಾಗಿ ಬೆಳೆಯುತ್ತವೆ. ಈ ಗುಳ್ಳೆಗಳು ತುರಿಕೆ ಅಥವಾ ನೋವನ್ನುಂಟುಮಾಡಬಹುದು.

ಮಂಕಿಪಾಕ್ಸ್ ರೋಗಕ್ಕೆ ಚಿಕಿತ್ಸೆ

ಸದ್ಯಕ್ಕೆ ಮಂಕಿಪಾಕ್ಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ, ಆದರೆ ಸೂಕ್ತ ಆರೈಕೆ ಮತ್ತು ಔಷಧಿಗಳಿಂದ ಈ ರೋಗದ ಲಕ್ಷಣಗಳನ್ನು ನಿವಾರಿಸಬಹುದು. ಹೆಚ್ಚಿನ ರೋಗ ಪ್ರಕರಣಗಳು ಸೌಮ್ಯವಾಗಿರುತ್ತವೆ. ಮಂಕಿಪಾಕ್ಸ್ ಮತ್ತು ಸಿಡುಬು ಅನುವಂಶೀಯವಾಗಿ ಒಂದೇ ಎಂದು ಪರಿಗಣಿಸಲಾಗಿರುವುದರಿಂದ ಸಿಡುಬು ನಿಯಂತ್ರಣಕ್ಕೆ ಬಳಸುವ ವೈರಸ್ ನಿಯಂತ್ರಣ ಔಷಧಿಯನ್ನೇ ಇದಕ್ಕೂ ಬಳಸಬಹುದು.

ಮಂಕಿಪಾಕ್ಸ್ ರೋಗ ತಡೆಯುವುದು ಹೇಗೆ?

ಈ ರೋಗವನ್ನು ತಡೆಗಟ್ಟಲು ಕಾಡು ಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಮಂಕಿಪಾಕ್ಸ್ ಸೋಂಕಿತರನ್ನು ನೋಡಿಕೊಳ್ಳುವಾಗ ಮುಖವಾಡಗಳು, ಕೈಗವಸುಗಳು ಮತ್ತು ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದರಿಂದ ಇದರ ಹರಡುವಿಕೆಯನ್ನು ತಡೆಯಬಹುದು. ಸೋಪ್ ಮತ್ತು ನೀರಿನಿಂದ ನಿಯಮಿತವಾಗಿ ಕೈ ತೊಳೆಯುವುದು ಅಥವಾ ಸ್ಯಾನಿಟೈಜರನ್ನು ಬಳಸುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇತರರಿಗೆ ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಬೇಕು. ಅದರಲ್ಲಿಯೂ ಹೊರದೇಶಗಳಿಂದ ಇನ್ನೂ ವಿಶೇಷವಾಗಿ ಆಫ್ರಿಕಾ ಖಂಡದ ದೇಶಗಳಿಂದ ಬರುವ ಜನರನ್ನು ವಿಮಾನ ನಿಲ್ದಾಣಗಳಲ್ಲಿಯೇ ಸೂಕ್ತ ಪರೀಕ್ಷೆ ಮಾಡಿ ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು. ಈ ಬಗ್ಗೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರೂ ಸಮತೋಲಿತ ಆಹಾರ, ತಾಜಾ ಹಣ್ಣುತರಕಾರಿಗಳು ಮತ್ತು ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ಸೇವಿಸಬೇಕು. ಆಹಾರವನ್ನು ಬಿಸಿಯಾಗಿ ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ದೈಹಿಕವಾಗಿ ಸದೃಢರಾಗಿರಲು ಬಿರುಸು ನಡಿಗೆ ಅಥವಾ ವ್ಯಾಯಾಮಗಳನ್ನು ಪ್ರತಿದಿನ ರೂಢಿಸಿಕೊಂಡಿರಬೇಕು. ವೈಯಕ್ತಿಕ ಮತ್ತು ವಾಸಸ್ಥಳದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

ಒಟ್ಟಾರೆ ಹೇಳುವುದಾದರೆ ಮಂಕಿಪಾಕ್ಸ್ ಗಂಭೀರ ಆದರೆ ಸಾಮಾನ್ಯವಾಗಿ ಸೀಮಿತವಾಗಿರುವ ಒಂದು ವೈರಲ್ ಕಾಯಿಲೆಯಾಗಿದೆ. ಸೂಕ್ತ ಆರೈಕೆಯೊಂದಿಗೆ ಹೆಚ್ಚಿನ ರೋಗಿಗಳು ಯಾವುದೇ ತೊಂದರೆಗಳಿಲ್ಲದೆ ಈ ರೋಗದಿಂದ ಚೇತರಿಸಿಕೊಳ್ಳುತ್ತಾರೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT