ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬುದು ತತ್ತ್ವಜ್ಞಾನವಾಯಿತು. ಮೊದಲು ಎಲ್ಲರಿಗೂ ಉಪ್ಪು ಕೊಳ್ಳುವಂತೆ ಆಕರ್ಷಿಸಿ, ನಂತರ ನೀರು ಮಾರುವ ವಹಿವಾಟಿಗೆ ಹಾರಿಕೊಂಡರೆ ಅದು ಬಿಸಿನೆಸ್ ಆಯಿತು.
ಜಗತ್ತಿನಲ್ಲಿ ಈಗ ಅಕ್ಷರಶಃ ಇಂಥದೇ ಪ್ರಹಸನವೊಂದು ತೆರೆದುಕೊಳ್ಳುತ್ತಿದೆ. ಪಿಜ್ಜಾ-ಬರ್ಗರ್-ಆಲೂ ಚಿಪ್ಸ್ ತಿನ್ನಿಸಿ ಅದರ ಸುತ್ತಲೇ ಉದ್ಯಮ ಕಟ್ಟಿದ್ದಾಯಿತು. ಇದೀಗ ವೇಟ್ ಲಾಸ್ ಪರ್ವ. ಅಮೆರಿಕದಿಂದ ಹಿಡಿದು ಭಾರತದವರೆಗೆ ಭಾರ ಇಳಿಸಿಕೊಳ್ಳುವ ‘ಔಷಧ’ಗಳ ವಹಿವಾಟು ದೊಡ್ಡದಾಗಿ ಚಿಗಿತುಕೊಳ್ಳುತ್ತಿದೆ. ಅರ್ಥಾತ್, ಇಲ್ಲೂ ಸಹ ಯಾರಿಗೂ ವೈಯಕ್ತಿಕ ನೆಲೆಯಲ್ಲಿ ಸತತ ವ್ಯಾಯಾಮ ಇತ್ಯಾದಿಗಳ ಪ್ರಯಾಸದ ಮಾರ್ಗ ಹಿಡಿಯುವುದಕ್ಕೆ ಆಸಕ್ತಿ ಇಲ್ಲ. ಎಲ್ಲ ಕಡೆ ನಮಗೆ ಪವಾಡಗಳಾಗಬೇಕು, ಮ್ಯಾಜಿಕ್ ಥರದಲ್ಲಿ ಸಮಸ್ಯೆಗೆ ಪರಿಹಾರ ಸಿಗಬೇಕು. ಹೀಗಾಗಿ ಭಾರ ಇಳಿಸುವುದು ಎಂಬುದು ಕೂಡ ಔಷಧ ಕಂಪನಿಗಳಿಗೆ ಸಂಬಂಧಿಸಿದ ಜಾಗತಿಕ ಉದ್ಯಮ!
ಮೊದಲಿಗೆ ಅಮೆರಿಕದ ಕತೆ ನೋಡೋಣ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ತೂಕ ಇಳಿಕೆ ಚುಚ್ಚುಮದ್ದುಗಳ ವ್ಯಾಪಕ ಬಳಕೆ ಶುರುವಾಗಿರುವುದು ಅಲ್ಲಿಂದಲೇ.
ಇವೆರಡೂ ಚುಚ್ಚುಮದ್ದಿನ ರೂಪದಲ್ಲಿ ತೆಗೆದುಕೊಳ್ಳಬೇಕಿರುವ ಔಷಧ. ನೊವೊ ನಾರ್ಡಿಸ್ಕ್ ಎಂಬ ಡ್ಯಾನಿಶ್ ಔಷಧ ಕಂಪನಿ ಇದನ್ನು ಮಾರುಕಟ್ಟೆಗೆ ತಂದಿದೆ. 2017-18ರಲ್ಲಿ type 2 diabetes ಹತೋಟಿಗೆಂದು ತಂದ ಚುಚ್ಚುಮದ್ದು ಇದು. ಅದಕ್ಕೆ ಅಮೆರಿಕದ ಔಷಧ ನಿಯಂತ್ರಣ ವ್ಯವಸ್ಥೆಯು ಅನುಮತಿ ಕೊಟ್ಟಿರುವುದು ಸಹ type 2 diabetes ತಡೆಯುವುದಕ್ಕಾಗಿ. ಆದರೆ, ಯುವಕರಲ್ಲೂ ಹೆಚ್ಚುತ್ತಿರುವ ಈ type 2 diabetes ಗೆ ಹಲವು ಕಾರಣಗಳಲ್ಲಿ ಒಂದು ಕಾರಣವೆಂದರೆ ಅತಿತೂಕ ಅರ್ಥಾತ್ ಬೊಜ್ಜು. ಹೀಗಾಗಿ ಅಮೆರಿಕದ ವೈದ್ಯರು ತೂಕ ಇಳಿಸಿಕೊಳ್ಳುವುದಕ್ಕಾಗಿ ತಮ್ಮ ಬಳಿ ಬರುವವರಿಗೂ ಇದೇ ಚುಚ್ಚುಮದ್ದನ್ನು ಶಿಫಾರಸು ಮಾಡುತ್ತಿರುವುದರಿಂದ ಇದರ ಬಳಕೆ ಬಹಳ ಜನಪ್ರಿಯತೆ ಪಡೆದಿರುವುದಾಗಿ ವರದಿಯಾಗುತ್ತಿದೆ. ವೈದ್ಯರ ಶಿಫಾರಸ್ಸಿನ ಮೇರೆಗೆ ವಾರಕ್ಕೊಮ್ಮೆ ದೇಹಕ್ಕೆ ಚುಚ್ಚಿಕೊಳ್ಳಬೇಕಾದ ಇಂಜೆಕ್ಶನ್ ಇದು. ಈಗೇನಾಗಿದೆ ಎಂದರೆ ತೂಕ ಇಳಿಸುವ ಕಾರಣಕ್ಕೆ ಇದನ್ನು ತೆಗೆದುಕೊಳ್ಳುವ ಪರಿಪಾಠವು ಅಮೆರಿಕನ್ನರ ನಡುವೆ 2021ರಿಂದೀಚೆಗೆ ಬೆಳೆದು ಅಮೆರಿಕದಾಚೆಗೂ ಈಗ ವಹಿವಾಟು ವಿಸ್ತರಿಸಿಕೊಳ್ಳುತ್ತಿದೆ.
ಅಮೆರಿಕದ ಪಾಲಿಗೆ ಬೊಜ್ಜು ಮತ್ತದರ ಪರಿಣಾಮವೆಂಬಂತೆ ಬರುವ ಸಕ್ಕರೆ ಕಾಯಿಲೆ ದೊಡ್ಡ ಆರೋಗ್ಯ ಸಮಸ್ಯೆ. ಅಲ್ಲಿನ ಯುವ ಜನಸಂಖ್ಯೆಯಲ್ಲಿ ಶೇ. 30ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಬೊಜ್ಜಿನ ಸಮಸ್ಯೆ ಇದೆ. 2 ರಿಂದ 19ರ ವಯೋಮಾನದ ಜನಸಂಖ್ಯೆಯಲ್ಲಿ ಶೇ. 20 ಮಂದಿಗೆ ಬೊಜ್ಜಿನ ತೊಂದರೆ ಇದೆ. ಅದಕ್ಕೆ ಪಿಜ್ಜಾ-ಬರ್ಗರ್-ಪೆಪ್ಸಿಕೋಲಾಗಳ ಅನನ್ಯ ಕೊಡುಗೆ ಇದೆ ಎಂಬುದು ಯಾರೂ ಅಲ್ಲಗಳೆಯಲಾಗದ ಅಂಶ. ಇಷ್ಟಕ್ಕೂ ಈ ಚುಚ್ಚುಮದ್ದು ಮಾಡುವುದೇನನ್ನು? ಈ ಔಷಧಗಳು ದೇಹವನ್ನು ಹೊಕ್ಕ ನಂತರ ಮಾಡುವ ಕೆಲಸವೆಂದರೆ ಮಿದುಳಿನಲ್ಲಿ ಜಿಎಲ್ಪಿ-1 ಎಂಬ ಹಾರ್ಮೋನು ಸಕ್ರಿಯವಾಗುವಂತೆ ಮಾಡುತ್ತವೆ. ಈ ಹಾರ್ಮೋನು ವ್ಯಕ್ತಿಯ ಹಸಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಆಲೂ ಚಿಪ್ಸ್, ಬರ್ಗರ್, ಕೊಕಾಕೊಲಾ, ಪೆಪ್ಸಿ ಇಂಥವನ್ನೆಲ್ಲ ಬೇಕೋ ಬೇಡವೋ ಹೊಟ್ಟೆಗಳಿಸಿಕೊಳ್ಳುವ ಇಚ್ಛೆಯೇ ಕುಂದಿಬಿಡುತ್ತದೆ.
ವಾಲ್ಮಾರ್ಟ್ ಎಂಬ ಚಿಲ್ಲರೆ ಸಾಮಾನುಗಳ ಮಾರಾಟದ ದೈತ್ಯ ಮಳಿಗೆಗಳ ಜಾಲ ಗೊತ್ತಲ್ಲ? ಅದು ತನ್ನ ಔಷಧ ಮಳಿಗೆ ಮತ್ತು ಕಿರಾಣಿ ಮಳಿಗೆ ಇವೆರಡರ ಖರೀದಿ ಮಾಹಿತಿಗಳನ್ನು ಸಮೀಕರಿಸಿ, ಒಜೆಂಪಿಕ್ ಚುಚ್ಚುಮದ್ದು ಖರೀದಿಸುವವರು ಕಿರಾಣಿ ವಿಭಾಗದಲ್ಲಿ ಖರ್ಚು ಕಡಿಮೆ ಮಾಡಿರುವುದು ಹೌದು ಎಂದಿದೆ.
ಮುಂದಿನ ಹತ್ತು ವರ್ಷಗಳಲ್ಲಿ ಒಜೆಂಪಿಕ್ ಅಥವಾ ಆ ಥರದ ಔಷಧಗಳನ್ನು ಅಮೆರಿಕ ಜನಸಂಖ್ಯೆ ಶೇಕಡ 7 ಭಾಗ ತೆಗೆದುಕೊಳ್ಳಲಿದೆ ಎಂಬುದು ವಿಶ್ಲೇಷಣಾ ಸಂಸ್ಥೆಗಳು ಮಾಡಿಟ್ಟಿರುವ ಅಂದಾಜು. ಸೋಡಾ, ಬೇಕರಿ ತಿನಿಸು, ಉಪ್ಪಿನ ತಿಂಡಿಗಳು ಇವೆಲ್ಲದರಲ್ಲಿ ಅಮೆರಿಕನ್ನರ ಉಪಭೋಗ ಶೇ. 3ರಷ್ಟು ಇಳಿಯಬಹುದು ಎಂಬುದು ಮಾರ್ಗನ್ ಸ್ಚ್ಯಾನ್ಲಿ ಎಂಬ ಹಣಕಾಸು ಸಂಸ್ಥೆ ಹಾಕಿರುವ ಲೆಕ್ಕಾಚಾರ. ಇನ್ನೊಂದೆಡೆ, ಕೇವಲ ಪ್ಲಸ್ ಸೈಜ್ ಧಿರಿಸುಗಳನ್ನೇ ತೊಡುತ್ತಿದ್ದ ಅಮೆರಿಕದಲ್ಲಿ ಬೇರೆ ಬೇರೆ ಸೈಜುಗಳಲ್ಲಿ ಅಲ್ಲಿನ ವಸ್ತ್ರೋದ್ಯಮವು ಮರುನಿರೂಪಣೆಗೆ ಒಳಗಾಗುತ್ತಿದೆ.
ಹೀಗೆ ತೂಕ ಇಳಿಕೆ ಔಷಧ ಬೇರೆ ಬೇರೆ ರೀತಿಯಲ್ಲಿ ಮಾರುಕಟ್ಟೆಯನ್ನು ಪ್ರಭಾವಿಸಲಿಕ್ಕಿದೆ.
ಪಾಶ್ಟಾತ್ಯ ಮಾರುಕಟ್ಟೆಗೆ ತನ್ನ ಮಾಲನ್ನು ಬಿಕರಿಯಾಗಿಸಿ ಸ್ವಂತದ ಮಾರುಕಟ್ಟೆಯನ್ನು ಮಾತ್ರ ಸುಲಭಕ್ಕೆ ಯಾರಿಗೂ ತೆರೆದಿರಿಸದ ಚೀನಾ, ವಾರದ ಹಿಂದೆ ಈ ವಿಗೊವಿ ಚುಚ್ಚುಮದ್ದಿಗೆ ಮಾತ್ರ ತನ್ನ ಮಾರುಕಟ್ಟೆಯನ್ನು ತೆರೆದಿರಿಸಿದೆ!
2020ರ ಚೀನಾದ ಆರೋಗ್ಯ ಸಮೀಕ್ಷೆಯೇ ಹೇಳುವ ಪ್ರಕಾರ, ದೇಶದ ಜನಸಂಖ್ಯೆಯ ಅರ್ಧದಷ್ಟು ಮಂದಿ ಅತಿತೂಕ ಇಲ್ಲವೇ ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. ಆರ್ಥಿಕ ಪ್ರಗತಿ ಸಾಧಿಸುವುದಕ್ಕೂ ಮುಂಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಿಂದಲೇ ಚೀನಾದಲ್ಲಿ ಹೆಚ್ಚಿನ ಜನ ಸಾಯುತ್ತಿದ್ದರು. ಅದನ್ನೇನೋ ಚೀನಾ ಹತೋಟಿಗೆ ತಂದಿದೆ. ಆದರೆ ಅತಿರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್ ಇವೆಲ್ಲ ಚೀನಾದಲ್ಲಿ ಹೆಚ್ಚಾಗಿವೆ. ಇವಕ್ಕೆಲ್ಲ ಜನರ ಆಹಾರಕ್ರಮದಲ್ಲಿ ದೋಷವಾಗುತ್ತಿರುವುದೇ ಕಾರಣ ಎಂಬ ಅಭಿಪ್ರಾಯ ಅಲ್ಲಿದೆ. ಹೀಗಾಗಿ, ಹಸಿವನ್ನು ಕಡಿಮೆಯಾಗಿಸಿ ಡಯಾಬಿಟೀಸ್ ದೂರವಾಗಿಸುವ ಚುಚ್ಚುಮದ್ದು ಚೀನಾಕ್ಕೆ ಸಹ ಆಪ್ತವಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.
ಈಗ ಮಾರುಕಟ್ಟೆಯಲ್ಲಿರುವ ಈ ಔಷಧಗಳ ಮೂಲ ಪರಿಕರ ಸೆಮಾಗ್ಲೂಟೈಡ್ ಎಂಬ ಪದಾರ್ಥ. 2026ರಲ್ಲಿ ಚೀನಾದಲ್ಲಿ ಇದರ ಪೇಟೆಂಟ್ ಮುಗಿಯುತ್ತಾದ್ದರಿಂದ ಅಲ್ಲಿಯವರೆಗೆ ಪಾಶ್ಚಾತ್ಯ ಕಂಪನಿಗೆ ಅವಕಾಶ ಕೊಟ್ಟು ನಂತರ ತನ್ನದೇ ಉತ್ಪನ್ನ ಹೊಂದಬಹುದು ಚೀನಾ.
ಭಾರತದಲ್ಲಿ ಇದರ ಆಟವಿನ್ನೂ ಶುರುವಾಗಿದೆ ಅಷ್ಟೆ. ಚುಚ್ಚುಮದ್ದಿಗಿನ್ನೂ ಅನುಮತಿ ಸಿಕ್ಕಿಲ್ಲ. ಆದರೆ ಇದೇ ನೊವೊ ನಾರ್ಡಿಸ್ಕ್ ಕಂಪನಿಯ ರೈಬೆಲ್ಸುಸ್ ಎಂಬ ಮಾತ್ರೆಗೆ ಜನವರಿ 2022ರಲ್ಲಿ ಮಾರುಕಟ್ಟೆ ಪ್ರವೇಶ ದೊರೆಯಿತು. ಆ ವರ್ಷ 174 ಕೋಟಿ ರುಪಾಯಿಗಳ ವಹಿವಾಟು ಮಾಡಿದ್ದ ಮಾತ್ರೆ, 2023ರ ವರ್ಷಾಂತ್ಯದಲ್ಲಿ 474 ಕೋಟಿ ರುಪಾಯಿಗಳಿಗೆ ವಹಿವಾಟು ಹೆಚ್ಚಿಸಿಕೊಂಡಿತ್ತು.
ಭಾರತದ ಔಷಧ ನಿಯಂತ್ರಕ ವ್ಯವಸ್ಥೆಗೆ ಸಲಹೆ ಕೊಡುವ ಸಮಿತಿಯು, ಅಮೆರಿಕದ ಎಲಿ ಲಿಲ್ಲಿ ಎಂಬ ಔಷಧ ಕಂಪನಿ ತಯಾರಿಸಿರುವ ಟೈಪ್ 2 ಡಯಾಬಿಟೀಸ್ ತಡೆಯುವ ಚುಚ್ಚುಮದ್ದಿಗೆ ಅನುಮತಿ ನೀಡುವಂತೆ ಈ ವರ್ಷ ಜೂನ್ 19ರಂದು ಶಿಫಾರಸು ಮಾಡಿದೆ.
ಈವರೆಗೂ ಹೇಳಿಕೊಂಡು ಬಂದಿರುವುದು ಬೊಜ್ಜಿಳಿಸುವ ನಿಟ್ಟಿನಲ್ಲಿ ಬಂದಿರುವ ಹೊಸ ಔಷಧಗಳ ಕತೆ. ಇದರಾಚೆಗೆ, ಡಯಟ್ ಮಾಡಿಸಿ ಬೊಜ್ಜಿಳಿಸಿಕೊಡ್ತೀನಿ ಎನ್ನುವವರು, ನಿರ್ದಿಷ್ಟ ಕಸರತ್ತು ಮಾಡಿಸಿ ತೂಕ ಇಳಿಸಿಕೊಡುವೆ ಎನ್ನುವವರು ಹೀಗೆಲ್ಲ ಥರಹೇವಾರಿ ಮಂದಿ ಮಾರುಕಟ್ಟೆಯಲ್ಲಿದ್ದಾರೆ. ಈ ಕೋನದಲ್ಲಿ ಲೆಕ್ಕ ಹಾಕಿದಾಗ ತೂಕ ಇಳಿಸುವ ಉದ್ಯಮ ಎಂಬುದು ಭಾರತದಮಟ್ಟಿಗೆ ಒಂದೂಮುಕ್ಕಾಲು ಲಕ್ಷ ಕೋಟಿ ರುಪಾಯಿಗಳ ಮಾರುಕಟ್ಟೆ ಎಂಬುದೊಂದು ಅಂದಾಜು, ಮತ್ತಿದು ಬೆಳೆಯುತ್ತಲೇ ಇದೆ.
ಸದ್ಯಕ್ಕೆ ಯಾವಮಾರ್ಗದಲ್ಲೇ ಹೋದರೂ ನಿಮ್ಮ ಬ್ಯಾಂಕ್ ಖಾತೆಯ ತೂಕವನ್ನಂತೂ ಈ ಬೊಜ್ಜಿಳಿಸುವ ಮಾರುಕಟ್ಟೆ ಇಳಿಸಿಯೇ ಇಳಿಸುತ್ತದೆ. ಅಮೆರಿಕದ ವೈದ್ಯ ವ್ಯವಸ್ಥೆಯಲ್ಲಿ ಇನ್ಶುರೆನ್ಸ್ ಎಂಬುದು ಹಾಸುಹೊಕ್ಕಾಗಿರುವುದರಿಂದ ಒಜೆಂಪಿಕ್ ಮತ್ತು ವಿಗೊವಿಯಂಥ ಚುಚ್ಚುಮದ್ದುಗಳು 25-30 ಡಾಲರುಗಳಿಗೆ ಲಭಿಸುತ್ತವೆ. ವಿಮೆಯಿಲ್ಲದಿದ್ದರೆ ಅವುಗಳ ಬೆಲೆ 900 ರಿಂದ 1300 ಡಾಲರುಗಳವರೆಗೂ ಹೋಗುತ್ತದೆ. ಭಾರತದಲ್ಲಿ ಲಭ್ಯವಿರುವ ಮಾತ್ರೆಯ ವರ್ಷನ್ ಸಹ 2 ಸಾವಿರ ಚಿಲ್ಲರೆ ರುಪಾಯಿಗಳಷ್ಟು ದುಬಾರಿ.
ಔಷಧಗಳ ವಿಚಾರಕ್ಕೆ ಬಂದರೆ ಈಗ ಜಾಗತಿಕವಾಗಿ ಒಂದಿಬ್ಬರು ಕಂಪನಿಗಳಷ್ಟೇ ಇದ್ದರೂ, ಈ ತೂಕ ಇಳಿಕೆ ಔಷಧ ಜನಪ್ರಿಯವಾಗುತ್ತಲೇ ಜಗತ್ತಿನ ಹಲವು ಔಷದೋದ್ಯಮ ದಿಗ್ಗಜ ಕಂಪನಿಗಳು ಈ ಆಟಕ್ಕೆ ಧುಮುಕುವುದಕ್ಕೆ ಸಾಲಿನಲ್ಲಿ ನಿಂತಿವೆ! ನೆಸ್ಲೆಯಂಥ ಆಹಾರೋದ್ಯಮ ಕಂಪನಿ ಸಹ ತಾನು ಮುಂದಿನ ದಿನಗಳಲ್ಲಿ ಈ ತೂಕ ಇಳಿಸುವ ಔಷಧಗಳನ್ನು ತೆಗೆದುಕೊಂಡವರು ಅನುಸರಿಸಬೇಕಾದ ಆಹಾರ ಪದ್ಧತಿಗೆ ಸರಿಹೊಂದುವ ಉತ್ಪನ್ನಗಳನ್ನು ತರುವುದಾಗಿ ಹೇಳಿದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ನಮ್ಮನ್ನೆಲ್ಲ ಈ ಮಾರುಕಟ್ಟೆಯ ಗ್ರಾಹಕರನ್ನಾಗಿಸುವ ನಿಟ್ಟಿನಲ್ಲಿ ಹಲಬಗೆಯ ‘ಭಯೋತ್ಪನ್ನ’ ಪ್ರಚಾರಗಳಾಗಬಹುದು. ಆಹಾರದ ಮೇಲೆ ನಿಯಂತ್ರಣವಿಡುವ, ವ್ಯಾಯಾಮ ಶಿಸ್ತಿಲ್ಲದವರು ನೀವಾದರೆ ಪರಿಹಾರಕ್ಕೆ ಚುಚ್ಚುಮದ್ದೇ ನಿಮಗೆ ದಾರಿಯಾದೀತು.
ಆ ಗುಂಪಿಗೆ ನೀವು ಸೇರಿಲ್ಲದವರಾದರೆ, ಪುರಂದರದಾಸರ ಪದ್ಯವೊಂದನ್ನು ಮಜವಾಗಿ ಹಾಡಿಕೊಂಡು ನಿರಾಳವಾಗಬಹುದು.
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ।।
ಪತಿಯ ಸೇವೆ ಬಿಟ್ಟು ಪರರ
ಪತಿಯ ಕೂಡ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ।।
ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುವವರ ಕಂಡು ।।
ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಸ್ವಾಮಿ ಪುರಂದರವಿಠಲನಾಮ
ನೆನೆವ ಮನುಜರನ್ನು ಕಂಡು ।। ನಗೆಯು ।।
-ಚೈತನ್ಯ ಹೆಗಡೆ
cchegde@gmail.com