ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ಅಂಕಣಗಳು

'ಮೇರಾ ಜೂತಾ ಹೈ ಜಪಾನಿ' ಹಾಡಿನಾಚೆಗಿನ ಸ್ನೇಹ: ಭಾರತ-ರಷ್ಯಾ ಬಾಂಧವ್ಯಕ್ಕೆ ಮೋದಿ ಸಾಂಸ್ಕೃತಿಕ ರಾಜತಾಂತ್ರಿಕತೆಯ ಬೆಸುಗೆ!

ಭಾರತ ಮತ್ತು ರಷ್ಯಾಗಳ ನಡುವಿನ ನಿಕಟ ಬಾಂಧವ್ಯವನ್ನು ನಿರ್ವಹಿಸುವಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎರಡು ದಿನಗಳ ರಷ್ಯಾ ಭೇಟಿ ಇದೀಗ ಪಾಶ್ಚಾತ್ಯ ದೇಶಗಳ ಗಮನವನ್ನು ಬಹುಪಾಲು ತನ್ನತ್ತ ಸೆಳೆದಿದೆ. 2019ರ ಬಳಿಕ, ಇದು ನರೇಂದ್ರ ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದೆ. ಮಂಗಳವಾರ, ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೆಮ್ಲಿನ್‌ನಲ್ಲಿ ಭಾರತ ಮತ್ತು ರಷ್ಯಾಗಳ 22ನೇ ವಾರ್ಷಿಕ ಸಭೆಯ ಜಂಟಿ ನೇತೃತ್ವ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ನ್ಯಾಟೋ ಸಹಯೋಗಿ ರಾಷ್ಟ್ರಗಳು ಉಕ್ರೇನ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಉಕ್ರೇನ್‌ನಲ್ಲಿ ಸಭೆಯೊಂದನ್ನು ಆಯೋಜಿಸುತ್ತಿದ್ದಾರೆ.

ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ಸಹ ಮೋದಿ ಮತ್ತು ಪುಟಿನ್‌ರ ನಡುವೆ ರಷ್ಯಾದ ಅಧ್ಯಕ್ಷರ ನಿವಾಸದಲ್ಲಿ ಜುಲೈ 8, ಸೋಮವಾರದಂದು ನಡೆದ ಅನೌಪಚಾರಿಕ ಭೇಟಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದೆ.

"ಭಾರತ ಅಮೆರಿಕಾದ ಪ್ರಮುಖ ಸಹಯೋಗಿ ರಾಷ್ಟ್ರವಾಗಿದೆ. ನಾವು ಭಾರತದೊಡನೆ ಮುಕ್ತ ಮತ್ತು ಪ್ರಾಮಾಣಿಕ ಮಾತುಕತೆ ನಡೆಸುತ್ತಿದ್ದೇವೆ. ರಷ್ಯಾದೊಡನೆ ಭಾರತದ ಬಾಂಧವ್ಯವೂ ಸೇರಿದಂತೆ, ಎಲ್ಲ ವಿಚಾರಗಳ ಕುರಿತೂ ನಾವು ಸಂವಹನ ನಡೆಸುತ್ತೇವೆ" ಎಂದು ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅವರು ಸೋಮವಾರ ವಾಷಿಂಗ್ಟನ್‌ ಡಿಸಿಯಲ್ಲಿ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಸ್ಕೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪು ಹಾಸಿನ ಸ್ವಾಗತ ಕೋರುತ್ತಿದ್ದ ಸಂದರ್ಭದಲ್ಲಿ, ಅಮೆರಿಕಾದಿಂದ ಈ ಹೇಳಿಕೆ ಹೊರಬಂದಿದೆ.

ನರೇಂದ್ರ ಮೋದಿಯವರು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಅವರನ್ನು ರಷ್ಯಾದ ಮೊದಲನೇ ಉಪ ಪ್ರಧಾನಿ ಡೆನಿಸ್ ಮಂಟುರೊವ್ ಅವರು ಸ್ವಾಗತಿಸಿ, ಮೋದಿಯವರು ಉಳಿದುಕೊಳ್ಳುವ ಹೊಟೆಲ್‌ಗೆ ಕರೆದೊಯ್ದರು.

ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅವರು ಈ ಭೇಟಿಯನ್ನು ಉಕ್ರೇನ್‌ನಲ್ಲಿ ತಲೆದೋರಿರುವ ಪರಿಸ್ಥಿತಿಯ ಸಂದರ್ಭದಲ್ಲಿ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

"ರಷ್ಯಾದೊಡನೆ ಸಂವಹನ ನಡೆಸುವ, ಭಾರತವೂ ಸೇರಿದಂತೆ ಎಲ್ಲ ರಾಷ್ಟ್ರಗಳಿಗೂ ನಾವು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯಗಳಾದರೂ ವಿಶ್ವಸಂಸ್ಥೆಯ ಉಪಕ್ರಮಗಳಿಗೆ ಬದ್ಧವಾಗಿದ್ದು, ಉಕ್ರೇನಿನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ನಾವು ಆಗ್ರಹಿಸುತ್ತೇವೆ" ಎಂದು ಮಿಲ್ಲರ್ ಹೇಳಿದ್ದಾರೆ.

ಭಾರತ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಗಳ ಪ್ರಕಾರ, ನರೇಂದ್ರ ಮೋದಿಯವರು ಪುಟಿನ್ ಅವರೊಡನೆ ಮಾತುಕತೆ ನಡೆಸುವ ಸಂದರ್ಭದಲ್ಲಿ, ಉಕ್ರೇನ್ ಬಿಕ್ಕಟ್ಟನ್ನು ಯುದ್ಧರಂಗದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಗ್ಲೋಬಲ್ ಸೌತ್ ಭಾಗವಾಗಿರುವ ಎಲ್ಲ ರಾಷ್ಟ್ರಗಳೂ ರಷ್ಯಾ ಮತ್ತು ಉಕ್ರೇನ್‌ಗಳು ಯುದ್ಧ ಸ್ಥಗಿತಗೊಳಿಸಿ, ಮಾತುಕತೆ ನಡೆಸಬೇಕು ಎಂದು ಬಯಸುತ್ತಿವೆ ಎಂದು ಮೋದಿ ಹೇಳಿದ್ದಾರೆ.

ರಷ್ಯಾದೊಡನೆ ಸ್ನೇಹ ಬಾಂಧವ್ಯ ವೃದ್ಧಿಗೆ ಮೋದಿ ಪ್ರಯತ್ನ

ನರೇಂದ್ರ ಮೋದಿಯವರ ರಷ್ಯಾ ಭೇಟಿ ಸಂಪೂರ್ಣವಾಗಿ ಭಾರತ - ರಷ್ಯಾ ನಡುವಿನ ದ್ವಿಪಕ್ಷೀಯ ಕಾರ್ಯಕ್ರಮವಾಗಿದ್ದು, ರಕ್ಷಣೆ, ಇಂಧನ, ವ್ಯಾಪಾರ, ಹೂಡಿಕೆ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವೃದ್ಧಿಸುವ ಗುರಿ ಹೊಂದಿದೆ ಎಂದು ನವದೆಹಲಿ ತಿಳಿಸಿದೆ.

ಮಾಸ್ಕೋ ಭೇಟಿಗಾಗಿ ನವದೆಹಲಿಯಿಂದ ತೆರಳುವ ಮುನ್ನ, ಪ್ರಧಾನಿ ನರೇಂದ್ರ ಮೋದಿ ತಾನು ಪುಟಿನ್ ಅವರೊಡನೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳನ್ನು ಚರ್ಚಿಸುವುದಾಗಿ ಹೇಳಿದ್ದರು.

ಸೋಮವಾರ ಮಧ್ಯಾಹ್ನದ ವೇಳೆ ಮಾಸ್ಕೋಗೆ ಆಗಮಿಸಿದ ನರೇಂದ್ರ ಮೋದಿಯವರು ಭಾರತ ಮತ್ತು ರಷ್ಯಾಗಳ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಭವಿಷ್ಯದ ದೃಷ್ಟಿಯಿಂದ ಇನ್ನಷ್ಟು ವೃದ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

ಆ ಬಳಿಕ, ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮಾಸ್ಕೋದ ನೊವೊ ಒಗಾರ್ಯೊವೊ ಪ್ರದೇಶದಲ್ಲಿರುವ ಅಧ್ಯಕ್ಷರ ನಿವಾಸದಲ್ಲಿ ಅನೌಪಚಾರಿಕವಾಗಿ ಭೇಟಿಯಾದರು.

ಕ್ರೆಮ್ಲಿನ್ ಹಂಚಿಕೊಂಡಿರುವ ದೃಶ್ಯಾವಳಿಗಳಲ್ಲಿ ಉಭಯ ನಾಯಕರು ಆರಾಮವಾಗಿ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದ್ದು, ಕೆಲವೊಂದು ಬಾರಿ ಅನುವಾದಕರ ನೆರವಿಲ್ಲದೆಯೂ ಅವರು ಸಂವಹನ ನಡೆಸಿದ್ದರು.

ಕ್ರೆಮ್ಲಿನ್ ಮೋದಿ - ಪುಟಿನ್ ಭೇಟಿಯ ಕುರಿತು ಸಂಕ್ಷಿಪ್ತ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಮಾತುಕತೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಚುನಾಯಿತರಾದುದಕ್ಕೆ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.

ಮೋದಿಯವರು ಭಾರತ ಸರ್ಕಾರದ ಮುಖ್ಯಸ್ಥರಾಗಿ ದೇಶಕ್ಕೋಸ್ಕರ ಸೇವೆ ಸಲ್ಲಿಸಿರುವ ಕಾರಣದಿಂದಲೇ ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.

"ಈಗ ಎಲ್ಲ ಫಲಿತಾಂಶಗಳು ಸ್ಪಷ್ಟವಾಗಿವೆ. ಭಾರತ ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲು ಸಿದ್ಧವಾಗಿದೆ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಈಗ ಜಗತ್ತಿನ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ" ಎಂದು ಪುಟಿನ್ ಮೋದಿಯವರಿಗೆ ಹೇಳಿದ್ದಾರೆ.

ಭಾರತೀಯರು ಸುರಕ್ಷಿತೆಯ ಭಾವನೆ ಮತ್ತು ಆತ್ಮವಿಶ್ವಾಸ ಹೊಂದಿರುವುದಕ್ಕೆ ಬೆಳೆಯುತ್ತಿರುವ ಭಾರತದ ಜನಸಂಖ್ಯೆ ಮತ್ತು ಆರ್ಥಿಕತೆ ಸಾಕ್ಷಿಯಾಗಿದೆ ಎಂದು ಪುಟಿನ್ ಅಭಿಪ್ರಾಯ ಪಟ್ಟಿದ್ದಾರೆ.

"ಭಾರತೀಯರು ಆತ್ಮವಿಶ್ವಾಸ ಮತ್ತು ಸುರಕ್ಷತೆಯ ಭಾವನೆ ಹೊಂದಿದ್ದಾರೆ. ಇದಕ್ಕೆ ಈಗ ಅವರು ಅನುಭವಿಸುತ್ತಿರುವ ಸ್ಥಿರತೆಯೂ ಕಾರಣವಾಗಿದೆ. ಇಂತಹ ಭಾವನೆ ಜೀವನಕ್ಕೆ ಅತ್ಯವಶ್ಯಕವಾಗಿದೆ" ಎಂದು ಪುಟಿನ್ ಹೇಳಿದ್ದಾರೆ.

73 ವರ್ಷ ವಯಸ್ಸಿನ ನರೇಂದ್ರ ಮೋದಿಯವರು ತಮ್ಮ ಸಂಪೂರ್ಣ ಜೀವನವನ್ನು ಭಾರತದ ಜನರ ಸೇವೆಗಾಗಿ ಸಮರ್ಪಿಸಿದ್ದಾರೆ ಎಂದು ಪುಟಿನ್ ಶ್ಲಾಘಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, ನರೇಂದ್ರ ಮೋದಿಯವರು ಅಧ್ಯಕ್ಷರ ನಿವಾಸದಲ್ಲಿ ಈ ಆಸಕ್ತಿಕರ ಭೇಟಿಯನ್ನು ಆಯೋಜಿಸಿದ್ದಕ್ಕೆ ಪುಟಿನ್ ಅವರಿಗೆ ಧನ್ಯವಾದ ಸಲ್ಲಿಸಿ, ತನ್ನ ಮೂರನೇ ಅವಧಿಯಲ್ಲೂ ಭಾರತದ ಸೇವೆಗೆ ಸಂಪೂರ್ಣ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ. ಭಾರತ ಮತ್ತು ಭಾರತೀಯರ ಸೇವೆಯೇ ತನ್ನ ಏಕೈಕ ಗುರಿ ಎಂದು ಮೋದಿ ಪುಟಿನ್‌ರಿಗೆ ತಿಳಿಸಿದ್ದಾರೆ.

ಪ್ರಮುಖ ಇಂಧನ ಮತ್ತು ವ್ಯಾಪಾರ ಯೋಜನೆಗಳ ಅನ್ವೇಷಣೆ

ರಷ್ಯಾ ಮತ್ತು ಭಾರತ ಪ್ರಸ್ತುತ ವಿವಿಧ ಪ್ರಮುಖ ಇಂಧನ ಮತ್ತು ವ್ಯಾಪಾರ ಯೋಜನೆಗಳು ಮತ್ತು ಮೂಲಭೂತ ನಿರ್ಮಾಣ ಯೋಜನೆಗಳ ಕುರಿತು ಸಮಾಲೋಚನೆ ನಡೆಸುತ್ತಿವೆ.

ಪರಮಾಣು ಶಕ್ತಿ ಸಹಯೋಗ

ರಷ್ಯನ್ ಸರ್ಕಾರಿ ಪರಮಾಣು ಸಂಸ್ಥೆ, ರೋಸಾಟಾಮ್ ತಾನು ಭಾರತದೊಡನೆ ಆರು ಅತ್ಯಂತ ಶಕ್ತಿಶಾಲಿ ಪರಮಾಣು ರಿಯಾಕ್ಟರ್‌ಗಳ ನಿರ್ಮಾಣದ ಕುರಿತು ಮಾತುಕತೆ ನಡೆಸುತ್ತಿರುವುದಾಗಿ ಘೋಷಿಸಿದೆ. ಈ ರಿಯಾಕ್ಟರ್ ಘಟಕಗಳು ರಷ್ಯನ್ ವಿನ್ಯಾಸದ್ದಾಗಿರಲಿದ್ದು, ಭಾರತದಲ್ಲಿ ಹೊಸ ಸ್ಥಳದಲ್ಲಿ ನಿರ್ಮಾಣಗೊಳ್ಳಲಿವೆ. ಅದರೊಡನೆ, ರೋಸಾಟಾಮ್ ಭಾರತದಲ್ಲಿ ಕಡಿಮೆ ಸಾಮರ್ಥ್ಯದ ಪರಮಾಣು ಘಟಕಗಳನ್ನೂ ಸ್ಥಾಪಿಸುವ ಕುರಿತು ಚಿಂತನೆ ನಡೆಸುತ್ತಿದೆ.

ಎಪ್ರಿಲ್ 2024ರಲ್ಲಿ, ರಷ್ಯಾ ಭಾರತಕ್ಕೆ ತಮ್ಮ ಸಹಯೋಗದ ಹೊಸ ಯುಗದ ಭಾಗವಾಗಿ, ತೇಲುವ ಪರಮಾಣು ಶಕ್ತಿ ಘಟಕಗಳನ್ನು ಒದಗಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು.

ಶಕ್ತಿ ಸಂಪನ್ಮೂಲಗಳ ಪೂರೈಕೆ

ಭಾರತ ಮತ್ತು ರಷ್ಯಾಗಳು ಈಗ ತೈಲ, ಕಲ್ಲಿದ್ದಲು ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್‌ಜಿ) ಸೇರಿದಂತೆ, ವಿವಿಧ ರಷ್ಯನ್ ಶಕ್ತಿ ಸಂಪನ್ಮೂಲಗಳನ್ನು ನಿಯಮಿತವಾಗಿ ಪೂರೈಸುವ ಕುರಿತು ಸಮಾಲೋಚನೆ ನಡೆಸುತ್ತಿವೆ. ಈ ಯೋಜನೆಯಲ್ಲಿ, ರಷ್ಯಾದ ವಾಯುವ್ಯ ಬಂದರುಗಳಿಂದ ನಾರ್ದನ್ ಸೀ ರೂಟ್ (ಎನ್ಎಸ್ಆರ್) ಮೂಲಕ ಭಾರತೀಯ ಬಂದರುಗಳಿಗೆ ಸಾಗಾಣಿಕೆ ನಡೆಸುವುದೂ ಸೇರಿದೆ.

ಭಾರತ - ರಷ್ಯಾ ನಂಬಿಕಾರ್ಹ ಸ್ನೇಹವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ನರೇಂದ್ರ ಮೋದಿಯವರು ಮಾಸ್ಕೋದಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾರಂಭದಲ್ಲಿ ಮಾತನಾಡುತ್ತಾ, ರಷ್ಯಾ ಮತ್ತು ಭಾರತಗಳ ನಡುವಿನ ಸುದೀರ್ಘ ಸ್ನೇಹ ಸಂಬಂಧವನ್ನು ಶ್ಲಾಘಿಸಿದರು. ರಷ್ಯಾ ಭಾರತದ ನಂಬಿಕಾರ್ಹ ಸ್ನೇಹಿತ ಎಂದ ಮೋದಿಯವರು, ಭಾರತ ಒಳ್ಳೆಯ ಮತ್ತು ಕೆಟ್ಟ ಸಮಯಗಳೆರಡರಲ್ಲೂ ರಷ್ಯಾ ಜೊತೆಯಾಗಿತ್ತು ಎಂದಿದ್ದಾರೆ.

ಭಾರತ ಮತ್ತು ರಷ್ಯಾಗಳ ಸಂಬಂಧ ಪರಸ್ಪರ ನಂಬಿಕೆ ಮತ್ತು ಗೌರವಗಳ ತಳಹದಿಯ ಮೇಲೆ ನಿರ್ಮಿತವಾಗಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಭಾರತ ಮತ್ತು ರಷ್ಯಾಗಳ ನಡುವಿನ ನಿಕಟ ಬಾಂಧವ್ಯವನ್ನು ನಿರ್ವಹಿಸುವಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ, ಪ್ರತಿಯೊಬ್ಬ ಭಾರತೀಯನೂ ರಷ್ಯಾವನ್ನು ನಂಬಿಕಾರ್ಹ ಗೆಳೆಯ ಎಂದೇ ಭಾವಿಸುತ್ತಾನೆ ಎಂದು ಮೋದಿ ಹೇಳಿದ್ದಾರೆ. ರಷ್ಯಾದಲ್ಲಿ ಜನಪ್ರಿಯವಾಗಿರುವ 'ಮೇರಾ ಜೂತಾ ಹೈ ಜಪಾನಿ' ಎಂಬ ಭಾರತೀಯ ಹಾಡು ಹಳೆಯದಾಗಿದ್ದರೂ, ಅದು ವ್ಯಕ್ತಪಡಿಸುವ ಭಾವನೆಗಳು ಇಂದಿಗೂ ಅಂದಿನಂತೆಯೇ ಇವೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆಯಾಗಿ, ಮೋದಿಯವರ ಮಾತುಗಳು ಭಾರತ ಮತ್ತು ರಷ್ಯಾಗಳ ನಡುವಿನ ಅಚಲ ಸ್ನೇಹದ ರೀತಿಯನ್ನು ಶ್ಲಾಘಿಸಿವೆ. ಭಾರತ ಮತ್ತು ರಷ್ಯಾದ ಸ್ನೇಹಗಳು ಕಾಲದ ಪರೀಕ್ಷೆಗಳನ್ನೂ ಎದುರಿಸಿ, ಸ್ಥಿರವಾಗಿ ನಿಂತಿವೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT