“ಉದ್ದಕ್ಕೂ ದಟ್ಟ ಇಂಗಾಲವನ್ನೇ ಹೊದ್ದಿರುವ ಮಂಗಳನ ಮೇಲೆ ಇನ್ನೆಷ್ಟೋ ನೂರು ವರ್ಷಗಳ ಮೇಲಾದರೂ ಮಾನವ ವಾಸಿಸಬಲ್ಲ ಎಂದು ನಿನಗೆ ಹೇಗೆ ಅನ್ನಿಸುತ್ತದೆ? ಒಂದೊಮ್ಮೆ ಮಂಗಳನ ಮೇಲೆ ಮಾನವ ಇಳಿದು ಓಡಾಡಿ ಬರುವುದಕ್ಕೆ ಸಾಧ್ಯವಾದರೂ ಮುಂದದನ್ನು ವಾಸಯೋಗ್ಯವಾಗಿಸುವ ಬಗೆ ಹೇಗೆ?”
ಸಾಹಸಿ ಉದ್ಯಮಿ ಎಲಾನ್ ಮಸ್ಕ್ ಗೆ ಹಲವು ಸಂದರ್ಶನಗಳಲ್ಲಿ ಎದುರಾಗಿರುವ ಪ್ರಶ್ನೆ ಇದು.
ಅದಕ್ಕಾತ ಒಂದು ವಿಚಿತ್ರ ನಗೆ ನಕ್ಕು ಉತ್ತರಿಸುವುದಿದೆ. “ನೋಡಿ ಇದರಲ್ಲಿ ತತ್ಕಾಲಕ್ಕೆ ಮಾಡಬಹುದಾದ ಐಡಿಯಾ ಒಂದಿದೆ. ಅದೆಂದರೆ, ಹೆಪ್ಪುಗಟ್ಟಿದ ಮಂಗಳದ ಎರಡು ಧ್ರವಗಳಲ್ಲಿ ಅಣ್ವಸ್ತ್ರಗಳನ್ನು ಸಿಡಿಸುವುದು. ಅಲ್ಲಿನ ಐಸ್ ಕ್ಯಾಪ್ ಕರಗಿ ನೀರು ಹರಿಯತೊಡಗುತ್ತದೆ ಹಾಗೂ ಶೀತಮಯ ಮಂಗಳವು ಬೆಚ್ಚಗಾಗತೊಡಗುತ್ತದೆ. ಈ ಯೋಚನೆ ನಿಮಗೆ ಅಪಾಯ ಎನಿಸಿದರೆ, ಬಹಳ ದೀರ್ಘಾವಧಿವರೆಗೆ ಪ್ರಯತ್ನಿಸಬೇಕಾಗಿರುವ ಇನ್ನೊಂದು ಮಾರ್ಗವಿದೆ. ಮಂಗಳದ ಸುತ್ತ ಬೃಹತ್ ಕನ್ನಡಿಗಳ ಜಾಲ ನಿರ್ಮಿಸಬೇಕಾಗುತ್ತದೆ. ಇದು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತ ದೀರ್ಘಾವಧಿಯಲ್ಲಿ ಮಂಗಳವನ್ನು ಬೆಚ್ಚಗಾಗಿಸುತ್ತದೆ. ಯಂತ್ರಮಾನವ ಸಮೂಹವು ಮಂಗಳದ ಅಂಗಳದಲ್ಲಿ ಇಳಿದು ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ತಂತ್ರಜ್ಞಾನ ಬಳಸಬೇಕಾಗುತ್ತದೆ. ಹೀಗೆ ಹೀರಿಕೊಂಡ ಇಂಗಾಲವನ್ನು ಮಿಥೇನ್ ಮತ್ತು ಆಮ್ಲಜನಕಗಳಾಗಿ ವಿಂಗಡಿಸುವ ಕೆಲಸವಾಗಬೇಕು. ಆಮ್ಲಜನಕ ಅಲ್ಲಿನ ವಾತಾವರಣಕ್ಕೆ ಸೇರಿದರೆ, ಮಿಥೇನ್ ಇಂಧನವಾಗಬೇಕು.”
ಹೀಗೆಲ್ಲ ಮಸ್ಕ್ ಮಸ್ತಿಷ್ಕದಲ್ಲಿ ತರ್ಕಲೇಪಿತ ಬೃಹತ್ ಕನಸುಗಳಿವೆ. ಈ ವಿಚಾರಗಳ ಬಗ್ಗೆ ತಕರಾರು ವ್ಯಕ್ತಪಡಿಸುವ ವಿಜ್ಞಾನ ಸಮುದಾಯದ ಹಲವರು ಸಹ ಈ ಮೇಲಿನ ತಿರುಳನ್ನು ಒಪ್ಪುತ್ತಾರೆ. ಅದೆಂದರೆ, ವಾಸಯೋಗ್ಯವಾಗುವುದಕ್ಕೆ ಮಂಗಳವು ಬೆಚ್ಚಗಾಗಬೇಕು ಹಾಗೂ ಅಲ್ಲಿ ಫೋಟೊ ಸಿಂಥಸಿಸ್ ಪ್ರಕ್ರಿಯೆ ಆರಂಭವಾಗಬೇಕು. ಇದಕ್ಕೆ ಮಸ್ಕ್ ಹೇಳುತ್ತಿರುವ ಮಾರ್ಗ ಅಲ್ಲದಿದ್ದರೆ ಮತ್ತೇನು ಎಂಬ ಪ್ರಶ್ನೆಗೆ ವಿಜ್ಞಾನ ವೃಂದದ ಹಲವರು ಮುಂದಿಡುವ ಮಾದರಿ ನಿಸರ್ಗದತ್ತವಾದದ್ದು. ಅದರ ಸಾಕಾರಕ್ಕೆ ಬಿಲಿಯಾಂತರ ವರ್ಷಗಳು ಬೇಕು. ಅಲ್ಲಿ ಮಸ್ಕ್ ಕಟ್ಟಿಕೊಡುವ ಅಣ್ವಸ್ತ್ರ ಸ್ಫೋಟದ ಶಬ್ದವಾಗಲಿ, ಗ್ರಹವನ್ನು ಸುತ್ತುವ ಕನ್ನಡಿಗಳ ಆಕರ್ಷಕ ಚಿತ್ರಣವಾಗಲೀ ಇಲ್ಲ. ಆ ಮಾರ್ಗ ಸದ್ದೇ ಮಾಡುವುದಿಲ್ಲ, ಕಣ್ಣನ್ನೂ ಸೆಳೆಯುವುದಿಲ್ಲ.
ನೀರಿನಲ್ಲಿ ನೀಲಿ-ಹಸಿರು ಮಿಶ್ರಿತ ಪಾಚಿಯಲ್ಲಿರುವ ಈ ಸೂಕ್ಷ್ಮಜೀವಿಗಳು ಕನಿಷ್ಟ ಮುನ್ನೂರು ಕೋಟಿ ವರ್ಷಗಳ ಹಿಂದಿನಿಂದಲೇ ಭೂಮಿಯಲ್ಲಿದ್ದವು. ಇವು ತಮ್ಮ ಆಹಾರ ತಯಾರಿಕೆಗೆ ಈಗಿನ ಸಸ್ಯಗಳ ಫೋಟೊಸಿಂಥಸಿಸ್ ಮಾದರಿಯನ್ನೇ ಅವಲಂಬಿಸುತ್ತವಾದ್ದರಿಂದ ಆ ಪ್ರಕ್ರಿಯೆಯಲ್ಲಿ ಭೂಮಿಗೆ ಆಮ್ಲಜನಕ ಸೇರಿಸುತ್ತ ಬಂದವು. ಆ ಘಟ್ಟದಲ್ಲಿ ಭೂಮಿಯೂ ವಿಷಾನಿಲದ ಮುದ್ದೆಯೇ ಆಗಿತ್ತು. ಲಕ್ಷಾಂತರ ವರ್ಷಗಳ ಕಾಲ Cyanobacteriaಗಳ ಕಾರ್ಯಪ್ರಕ್ರಿಯೆಯೇ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ, ಸಸ್ಯವೇ ಮೊದಲಾದ ಇತರ ಸಂಕುಲಗಳು ತಲೆಎತ್ತುವಂತಾಗಿ, ಲಕ್ಷ-ಲಕ್ಷ ವರ್ಷಗಳ ಪ್ರಕ್ರಿಯೆಯಲ್ಲಿ ಭೂಮಿ ಜೀವರಾಶಿಗಳನ್ನು ಪೊರೆಯುವಷ್ಟು ಬೆಚ್ಚಗಾಯಿತು.
ಮಂಗಳವಾಗಲೀ, ಮತ್ಯಾವುದೇ ಅನ್ಯಗ್ರಹದಲ್ಲಿ ವಾಸಯೋಗ್ಯತೆ ನಿರ್ಮಿಸುವ ಲಕ್ಷ ವರ್ಷಗಳ ತಪಸ್ಸಿಗೆ ಮನುಕುಲವು ತನ್ನನ್ನು ಜೋಡಿಸಿಕೊಳ್ಳುವುದಾದರೆ, ಅದು ಕಣ್ಣೆದುರು ವಿಜೃಂಭಿಸುವ ಆಧುನಿಕ ತಾಂತ್ರಿಕ ಸಾಧನಗಳಿಂದ ಮಾತ್ರ ಸಾಧ್ಯ ಎಂದುಕೊಳ್ಳಬಾರದು, ಬ್ಯಾಕ್ಟೀರಿಯಾ ಹಂತದಲ್ಲೂ ಯೋಚಿಸಬೇಕು ಅನ್ನುವುದು ಹಲವು ವೈಜ್ಞಾನಿಕರ ವಾದ.
ಮನುಷ್ಯನ ಇತ್ತೀಚಿನ ಎಂಜಿನಿಯರಿಂಗ್ ಸಾಮರ್ಥ್ಯ ಖುದ್ದು ಮಾನವ ಸಂತತಿಗೇ ಬೆರಗುಂಟುಮಾಡುವಂಥದ್ದು ಎಂಬುದೇನೋ ಖರೆ. ಆದರೆ ಬಾಹ್ಯಾಕಾಶದಂಥ ಮಹಾವಿಕ್ರಮಗಳಿಗೆ ಅಣಿಯಾದಾಗ ನಿಸರ್ಗವೂ ಎಂಜಿನಿಯರಿಂಗ್ ಕುಸುರಿಗಳನ್ನು ಕಲಿಸುತ್ತದೆ. ಬ್ಯಾಕ್ಟೀರಿಯಾದ ಕತೆ ಆಯ್ತು, ಈಗ ಸಸ್ಯಕ್ಕೆ ಬರೋಣ.
ಮಂಗಳನ ಅಂಗಳದ ತಾಲೀಮನ್ನು ಚಂದ್ರನ ಮೇಲೆ ಹಲವು ವರ್ಷಗಳ ಕಾಲ ಮಾಡುವ ಯೋಚನೆಯಲ್ಲಿದೆ ಜಗತ್ತು. ಹಾಗೆಂದೇ ಅಮೆರಿಕ, ಭಾರತ, ಚೀನಾ, ಜಪಾನ್ ಮುಂತಾದ ದೇಶಗಳು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಚಂದ್ರನ ಮೇಲೆ ಯೋಜನೆಗಳನ್ನು ರೂಪಿಸುತ್ತಿವೆ. ಚಂದ್ರನಂಗಳದಲ್ಲಿ ಈ ಹಿಂದೆ ಹಲವು ಬಾರಿ ಇಳಿದಿರುವ ಅಮೆರಿಕದ ಗಗನಯಾನಿಗಳ ಅನುಭವದ ಪ್ರಕಾರ ಅಲ್ಲಿನ ಒಂದು ಆತಂಕ ಎಂದರೆ ಧೂಳಿನದ್ದು.
ಬಾಹ್ಯಾಕಾಶದ ಧಿರಿಸಿಗೆ ಅಂಟಿಕೊಳ್ಳುವ ಧೂಳು ಅಲ್ಲಿ ಬ್ಯಾಕ್ಟೀರಿಯಾ ಬೆಳೆಯಲುಬಿಟ್ಟು ಆರೋಗ್ಯಕ್ಕೆ ಸವಾಲಾಗುವ ದೊಡ್ಡ ಸಮಸ್ಯೆ ಹುಟ್ಟಬಾರದಲ್ಲ? ಹೀಗಾಗಿ ಧೂಳು ನಿಲ್ಲದ ಸ್ಪೇಸ್ ಸೂಟ್ ವಿನ್ಯಾಸದ ಬಗ್ಗೆ ಹಲವು ಆಯಾಮಗಳಲ್ಲಿ ಪ್ರಯೋಗ ಮಾಡುತ್ತ ಬಂದಿದೆ NASA. ಆ ಪೈಕಿ ಒಂದು ಸ್ಫೂರ್ತಿ ಬಂದಿರುವುದು ತಾವರೆ ಎಲೆಯಿಂದ! ನೀರು-ಕೆಸರಿನ ನಡುವೆ ಇದ್ದೂ ತನ್ನ ಮೇಲೆ ಏನನ್ನೂ ಅಂಟಿಸಿಕೊಳ್ಳದೇ ಇರುವುದಕ್ಕೆ ತಾವರೆ ಎಲೆಯ ಒಳಗಿನ ವಿನ್ಯಾಸ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದರು. ಮೇಲ್ಮೈನಲ್ಲಿ ತಾವರೆ ಎಲೆ ನಯವಾಗಿದ್ದರೂ ಅದರೊಳಗೆ ಮೈಕ್ರೊಸ್ಕೋಪಿಗೆ ಮಾತ್ರ ಸಿಗುವ ಒತ್ತುತುದಿಗಳಿವೆ. ನೀರಾಗಲೀ, ಕೆಸರು-ಧೂಳುಗಳಾಗಲೀ ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುವುದಕ್ಕೆ ಅವು ಜಾಗ ನೀಡುತ್ತಿಲ್ಲ. ಈ ವಿನ್ಯಾಸವನ್ನು ಬಾಹ್ಯಾಕಾಶ ವಸ್ತ್ರದಲ್ಲಿ ತರುವುದು ಸಾಧ್ಯವಾದರೆ ಆಗ ಧೂಳಿನ ಹೆದರಿಕೆ ಹೋಗುತ್ತದೆ ಎಂದು ನಾಸಾ ಅಧ್ಯಯನ ನಿರತವಾಗಿತ್ತು. ಈ ತಂತ್ರಜ್ಞಾನದಲ್ಲೇನಾದರೂ ದೊಡ್ಡ ಯಶ ಸಿಕ್ಕರೆ ಅದನ್ನು ಕಟ್ಟಡದ ಕಿಟಕಿಗಳು, ವಾಹನದ ಗಾಳಿನಿರೋಧಕ ಗ್ಲಾಸು ಇಲ್ಲೆಲ್ಲ ನಾಗರಿಕ ಬಳಕೆಗೂ ಉತ್ಪನ್ನಗಳನ್ನು ರೂಪಿಸಬಹುದಾಗಿದೆ.
ಜೇನು ನೊಣಗಳು ರಸ ಸಂಗ್ರಹಿಸುವಾಗ ಪರಾಗ ಸ್ಪರ್ಶವನ್ನೂ ಮಾಡುತ್ತವಷ್ಟೆ. ಅಷ್ಟು ಚಿಕ್ಕ ದೇಹಕ್ಕೆ ಪರಾಗದ ಕಣಗಳು ಬಾಧಿಸದ ರೀತಿಯಲ್ಲಿ ಅವು ವಿದ್ಯುತ್ಕಾಂತೀಯ ವಲಯವನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ನಾಸಾದ ಛತ್ರದಡಿಯಲ್ಲೇ ಅಭ್ಯಸಿಸುತ್ತಿರುವ ಸೆಂಟ್ರಲ್ ಫ್ಲೊರಿಡಾ ವಿಶ್ವವಿದ್ಯಾಲಯದ ನ್ಯಾನೊಟೆಕ್ನಾಲಜಿ ವಿಭಾಗದ ಆಯ್ದ ಸಂಶೋಧಕರು, ಇದನ್ನೇ ಬಾಹ್ಯಾಕಾಶ ಉಡುಗೆಯಲ್ಲಿ ಅನ್ವಯಿಸಿಕೊಳ್ಳುವ ಐಡಿಯಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
ಚಂದ್ರನಂಗಳದಲ್ಲಿ ಹಾಗೂ ಅದಕ್ಕೂ ಮುಂದಕ್ಕೆ ಮಂಗಳನಂಗಳದಲ್ಲಿ ಮಾನವನೇ ಹೋಗಿ ಇಳಿದ ಸಂದರ್ಭಗಳಲ್ಲೂ ಈಗಿರುವ ಯೋಜನೆಗಳ ಪ್ರಕಾರ ಯಂತ್ರಗಳ ಕೆಲಸವೇ ಹೆಚ್ಚಿರುತ್ತದೆ. ರೊಬಾಟಿಕ್ಸ್ ವಲಯವು ಜಗತ್ತಿನ ಕೈಗಾರಿಕಾ ವಲಯಕ್ಕೇನೂ ಹೊಸದಲ್ಲ. ಅದಾಗಲೇ ಬೃಹತ್ ಉತ್ಪಾದನಾ ಘಟಕಗಳಲ್ಲಿ ವಸ್ತುಗಳನ್ನು ಒಪ್ಪಓರಣವಾಗಿಸುವ, ಅವುಗಳನ್ನು ಇನ್ಯಾವುದೋ ಮುಖ್ಯಭಾಗದೊಂದಿಗೆ ಪೇರಿಸುವ ಮಾದರಿಯ ಕೆಲಸಗಳನ್ನೆಲ್ಲ ರೊಬಾಟುಗಳೇ ಮಾಡುತ್ತಿವೆ. ಆದರೆ ಇವುಗಳಲ್ಲಿ ಖಚಿತತೆ-ನಿಖರತೆಗಳ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳಾಗುತ್ತಿವೆ. ಏಕೆಂದರೆ ಆಕಾಶಕಾಯದ ಮೇಲೆಲ್ಲೋ ಯಂತ್ರಸಾಧನ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಗೆಯುವ ಕೆಲಸಕ್ಕೊಂದು, ಭಾರ ಎತ್ತುವುದಕ್ಕೆ ಇನ್ನೊಂದು ಅಂತೆಲ್ಲ ಬಹುವಸ್ತುಗಳನ್ನು ಒಯ್ಯಲಾಗುವುದಿಲ್ಲ. ಒಂದು ಸಾಧನವು ಆದೇಶ ಪಾಲಿಸುತ್ತ ಹಲವು ಬಗೆಯ ಕೆಲಸಗಳನ್ನು ನಿರ್ವಹಿಸುವಂಥದ್ದಾಗಿರಬೇಕು.
ಈ ನಿಟ್ಟಿನಲ್ಲಿ ಆನೆ ಸೊಂಡಲಿನ ಮೇಲೆ ಆಗಿರುವ ಅಧ್ಯಯನಗಳು ರೊಬಾಟಿಕ್ಸ್ ಪ್ರಪಂಚಕ್ಕೆ ಮತ್ತಷ್ಟು ಬಲ ತುಂಬಬಲ್ಲದ್ದಾಗಿವೆ. ಆನೆಯ ಸೊಂಡಿಲಿನ ವೈಶಿಷ್ಟ್ಯ ನೋಡಿ. ಅದು ಬಾಳೆಹಣ್ಣನ್ನು ಕಿತ್ತು ಬಾಯಿಗೇರಿಸುವ ನಾಜೂಕು ಕೆಲಸವನ್ನೂ ಮಾಡುತ್ತದೆ, ಹಾಗೆಯೇ ದೊಡ್ಡ ಮರವೊಂದನ್ನು ಬುಡ ಸಮೇತ ಕೀಳುವ ಕೆಲಸಕ್ಕೂ ಬಳಕೆ ಆಗುತ್ತದೆ. ಹಾಗೆಂದು ಸೊಂಡಿಲೆಂಬುದು ಎಲುಬುಗಳ ಆಧಾರ ಹೊಂದಿರುವ ಗಟ್ಟಿ ರಚನೆಯೇನೂ ಅಲ್ಲ. ವಸ್ತುವಿನ ವಾಸನೆ ಪರಿಶೀಲನೆಯ ಮೃದುಕಾರ್ಯದಿಂದ ಹಿಡಿದು ಬುಡಮೇಲು ಮಾಡಬಲ್ಲ ಅತಿಬಲದ ಕಾರ್ಯದವರೆಗೆ ಆನೆಯ ಸೊಂಡಿಲಿನ ಕ್ಷಮತೆ ರೂಪುಗೊಂಡಿರುವ ಬಗೆ, ಅದರ ಸೊಂಡಿಲ ಅಂತ್ಯದಲ್ಲಿರುವ ಎರಡು ಹೊರಚಾಚುಗಳು ಮತ್ತವುಗಳ ಮಹತ್ವ ಇವುಗಳನ್ನೆಲ್ಲ ಆಫ್ರಿಕಾದ ಆನೆಗಳನ್ನಿರಿಸಿಕೊಂಡು ದೀರ್ಘ ಅಧ್ಯಯನ ನಡೆಸಿದೆ ವಿಜ್ಞಾನಿಗಳ ತಂಡ. ಅಂಥ ಸಂರಚನೆಯ ಸೂಕ್ಷ್ಮಗಳನ್ನೆಲ್ಲ ರೊಬಾಟಿಕ್ಸ್ ವಲಯಕ್ಕೆ ಅನ್ವಯಿಸುವ ಸಾಧ್ಯತೆಗಳನ್ನು ಬಿಡಿಸಿಡಲಿದೆ. ಇದರಿಂದ ರೊಬಾಟುಗಳ ಹಿಡಿತದಲ್ಲಿ ಸೂಕ್ಷ್ಮ ಸುಧಾರಣೆಗಳನ್ನು ತರುವುದು ಸಾಧ್ಯವಾಗಲಿದೆ. ಮೆಡಿಸಿನ್, ಕೈಗಾರಿಕೆ, ಕೃಷಿ ಈ ಎಲ್ಲ ವಲಯಗಳಲ್ಲಿ ಸೊಂಡಿಲ ಕೌಶಲದ ರೊಬಾಟ್ ಮುಖ್ಯಪಾತ್ರ ವಹಿಸಬಲ್ಲದು. ಜತೆ ಜತೆಗೆ, ಕಠಿಣ-ದುರ್ಗಮ ಜಾಗಗಳಲ್ಲಿ ಕಾರ್ಯಾಚರಣೆಗೆ ಸಹ ಈ ಸುಧಾರಣೆಗಳು ಸಹಕಾರಿ. ಇದನ್ನೇ ವಿಸ್ತರಿಸಿಕೊಳ್ಳುವುದಾದರೆ ಬಾಹ್ಯಾಕಾಶದ ಬೇರೆ ಬೇರೆ ಆಕಾಶಕಾಯಗಳಲ್ಲಿ ರೊಬಾಟುಗಳನ್ನು ದುಡಿಸಿಕೊಳ್ಳುವುದಕ್ಕೆ ಸಹ ಈ ಸೊಂಡಿಲ ಮಾದರಿ ಸಹಕರಿಸೀತೇನೋ.
ಧೂಳು ಹಿಡಿಯದ ಬಾಹ್ಯಾಕಾಶ ವಸ್ತ್ರ, ಆಮ್ಲಜನಕ ಸೃಜಿಸಬಲ್ಲ ಬ್ಯಾಕ್ಟೀರಿಯಾ, ಅಪರಿಚಿತ ಆಕಾಶಕಾಯದ ನೆಲದಲ್ಲಿ ಆನೆ ಸೊಂಡಿಲಿನಂತೆ ಕೆಲಸ ಮಾಡಬಲ್ಲ ಯಂತ್ರಗಳು ಇಂಥವೆಲ್ಲ ಸಾಕಾರವಾಗಿಬಿಟ್ಟವು ಎಂದುಕೊಳ್ಳೋಣ. ಆದರೆ ಎಷ್ಟೆಷ್ಟೋ ವರ್ಷಗಳೇ ಪ್ರಯಾಣದಲ್ಲಿ ಮುಗಿದುಹೋಗುವ ಆಕಾಶಕಾಯಗಳನ್ನು ಮನುಷ್ಯ ತಲುಪಿಕೊಂಡು ಅಲ್ಲಿ ಭವಿಷ್ಯದ ಬೀಜಗಳನ್ನು ಬಿತ್ತಬೇಕು ಎಂದಾದರೆ ಅದರ ಸವಾಲಿನ್ನೂ ಸಂಕೀರ್ಣ.
ಈ ನಿಟ್ಟಿನಲ್ಲೂ ನಿಸರ್ಗದ ನಡುವಿನಿಂದ ಆಗುತ್ತಿದೆ ಒಂದು ‘ಅಳಿಲು ಸೇವೆ’!
ಅದಾಗಲೇ ನೀವು ಕೆಲವು ಸೈನ್ಸ್ ಫಿಕ್ಶನ್ ಗಳಲ್ಲಿ, ಇಂಟರ್’ಸ್ಟೆಲ್ಲಾರ್ ಥರದ ಸಿನಿಮಾಗಳಲ್ಲಿ ಬಾಹ್ಯಾಕಾಶ ಯಾನದ ನೌಕೆಯಲ್ಲಿರುವವರು ಸುದೀರ್ಘ ಅವಧಿಗೆ ‘ಶೀತನಿದ್ರೆ’ಗೆ ಹೋಗುವ ಪರಿಕಲ್ಪನೆ ನೋಡಿರುತ್ತೀರಿ. ಇದು ನಿಸರ್ಗದಲ್ಲಿ ಕೆಲವು ಜೀವಿಗಳು ಚಳಿಗಾಲದ ಸಮಯದಲ್ಲಿ ನಿದ್ರೆಗೆ ಜಾರಿ, ತಮ್ಮ ಹೃದಯ ಬಡಿತ ಕಡಿಮೆ ಮಾಡಿಕೊಂಡು ಶಕ್ತಿ ಸಂಚಯಿಸಿಕೊಳ್ಳುವ ಕ್ರಮವನ್ನು ನೋಡಿ ಹುಟ್ಟಿಕೊಂಡ ಪರಿಕಲ್ಪನೆ. ಇದು ಮನುಷ್ಯರಲ್ಲೇನೂ ಸಾಕಾರವಾಗಿಲ್ಲವಾದರೂ ಆ ಬಗ್ಗೆ ನಾಸಾ ಗಂಭೀರ ಅಧ್ಯಯನ ಮಾಡುತ್ತಿರುವುದಂತೂ ಹೌದು.
ನಾಸಾದ ಧನಸಹಾಯ ಉಪಯೋಗಿಸಿಕೊಂಡು ಅಲಾಸ್ಕಾ ವಿಶ್ವವಿದ್ಯಾಲಯದ ಸಂಶೋಧನಕಾರರು ಆರ್ಕ್ಟಿಕ್ಟ್ ಹಿಮಪ್ರದೇಶದ ಅಳಿಲಿನ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಜಾತಿಯ ಅಳಿಲುಗಳು ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ನಿದ್ರೆಗೆ ಜಾರುತ್ತವೆ. ಈ ವೇಳೆಯಲ್ಲಿ ಅವುಗಳ ಉಸಿರಾಟ ನಿಧಾನ, ಹೃದಯಬಡಿತ ಕ್ಷೀಣ, ಆಹಾರವಿಲ್ಲ. ಅಷ್ಟಾಗಿಯೂ ಇವುಗಳ ಮಾಂಸಖಂಡಗಳು ಬಡವಾಗುವುದಿಲ್ಲ, ಎಲುಬಿನ ಸಾಂದ್ರತೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಇದರ ಜೈವಿಕ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿ, ಬಾಹ್ಯಾಕಾಶದ ಭಾರರಹಿತ ಸ್ಥಿತಿಯಲ್ಲಿ ಆರೋಗ್ಯ ವ್ಯತ್ಯಾಸಗಳಾಗದಂತೆ ಮನುಷ್ಯ ಇರಬಹುದಾದ ಬಗೆ, ವೈದ್ಯಕೀಯವಾಗಿ ಇಂಥದೊಂದು ಅಳಿಲಿನ ಮಾದರಿಯ ಶೀತನಿದ್ರೆ ಸಾಧಿಸುವ ಬಗೆ ಇಂಥ ಎಲ್ಲ ಆಯಾಮಗಳ ಬಗ್ಗೆ ಸಂಶೋಧನೆಗಳು ಮುಂದುವರಿಯುತ್ತವೆ. ಈ ತಂತ್ರವೇನಾದರೂ ಮಾನವರಿಗೆ ಕರಗತವಾದರೆ ಅದನ್ನು ಬಾಹ್ಯಾಕಾಶಯಾನಕ್ಕೆ ಬಳಸುವ ಜತೆಜತೆಗೆ, ಇಲ್ಲಿ ಯಾರಿಗಾದರೂ ಗಂಭೀರ ಗಾಯಗಳಾಗಿ ಮುಖ್ಯ ಆಸ್ಪತ್ರೆಯೊಂದಕ್ಕೆ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಯ್ಯುವ ಸ್ಥಿತಿ ಬಂದಾಗ, ಅಲ್ಲಿ ತಲುಪುವವರೆಗೆ ಆ ಗಾಯಾಳು ವ್ಯಕ್ತಿಯ ಜೈವಿಕ ಕ್ರಿಯೆ ತಹಬಂದಿಯಲ್ಲಿರುವಂತೆ ಶೀತನಿದ್ರೆ ಉದ್ದೀಪಿಸುವುದು ಸಾಧ್ಯವೇ ಎಂದೆಲ್ಲ ಅನ್ವೇಷಣೆಗಳಾಗುತ್ತಿವೆ.
ಬಾಹ್ಯಾಕಾಶದ ಇನ್ಯಾವುದೋ ಅಂಗಳದಲ್ಲಿ ಹೊಸ ಭೂಮಿ ಕಂಡುಕೊಳ್ಳುವ ಬುದ್ಧಿವಂತ ಸಾಹಸದೃಷ್ಟಿ ಕೇವಲ ಮಾನವನಿಗೆ ಮಾತ್ರ ಎಂದು ನಾವು ಬೀಗುವಂತಿಲ್ಲ. ನಿಸರ್ಗದ ಜೀವಿಗಳು ಯಾವ್ಯಾವುದೋ ಬಗೆಗಳಲ್ಲಿ ಅದಾಗಲೇ ಇಂಥದೊಂದು ಯಾನದ ಭಾಗವಾಗಿಬಿಟ್ಟಿವೆ.
ಮುಗಿಸುವ ಮುನ್ನ ಒಂದು ರೋಮಾಂಚನದ ಕಲ್ಪನೆ. ಒಂದು ಕ್ಷಣಕ್ಕೆ ನೀವು ಜನ್ಮ-ಜನ್ಮಾಂತರಗಳಲ್ಲಿ ನಂಬಿಕೆ ಇಟ್ಟವರಾಗಿ ಉತ್ತರಿಸಿ. ಅವೆಷ್ಟೊ ಸಹಸ್ರ ಕೋಟಿ ವರ್ಷಗಳ ಹಿಂದೆ ವ್ಯಗ್ರವಾಗಿ ಸುತ್ತುತ್ತಿದ್ದ ಭೂಮಿಯ ಮೇಲೆ ಸೈನೊಬ್ಯಾಕ್ಟೀರಿಯಾಗಳು ತಪಸ್ಸಿಗೆ ಕುಳಿತವರಂತೆ ಸಹಸ್ರಾರು ವರ್ಷ ಆಮ್ಲಜನಕ ಸೃಜಿಸಿದವು. ಅವೆಲ್ಲ ಆಗಿ ಲಕ್ಷ ಲಕ್ಷ ವರ್ಷಗಳ ನಂತರ ಹಲವು ಜೀವಜಾಲಗಳ ಹೊತ್ತ ಭೂಮಿಯಲ್ಲಿ ಮಾನವ ಸಂತತಿಯೀಗ ಬೇರೆ ವ್ಯಗ್ರ ಕಾಯಗಳನ್ನು ಪಳಗಿಸುವ ಯೋಚನೆ ಮಾಡಿ ಕಾರ್ಯಪ್ರವೃತ್ತವಾಗುತ್ತಿದೆ. ಇವಕ್ಕೆಲ್ಲ ಸಾಕ್ಷಿಯಾಗುತ್ತಿರುವ ನಿಮ್ಮ ಈ ಮಾನವ ಜನ್ಮವು ಕೋಟಿ ಕೋಟಿ ವರ್ಷಗಳ ಹಿಂದೆ ಬ್ಯಾಕ್ಟೀರಿಯಾ ಆಗಿದ್ದದ್ದು ಪ್ರಾರಬ್ಧಗಳನ್ನೆಲ್ಲ ದಾಟಿಬಂದು ಈ ಹಂತದಲ್ಲಿದೆಯಾ? ಇದು ವಾಸ್ತವದಲ್ಲಿ ನೀವೇ ಶುರುಮಾಡಿದ್ದ ಕತೆಯಾ?
-ಚೈತನ್ಯ ಹೆಗಡೆ
cchegde@gmail.com