ಇಲಿ ಜ್ವರ online desk
ಅಂಕಣಗಳು

ಇಲಿ ಜ್ವರ ಅಥವಾ Rat Fever (ಕುಶಲವೇ ಕ್ಷೇಮವೇ)

ಈ ಕಾಯಿಲೆಯು ಆರಂಭಿಕ ಹಂತದಲ್ಲಿ ಫ್ಲೂ, ಡೆಂಗಿ ಅಥವಾ ಟೈಫಾಯ್ಡ್ ಜ್ವರದ ಲಕ್ಷಣಗಳನ್ನು ತೋರಿಸುತ್ತದೆ. ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು (ಸೋಂಕು ಉಂಟಾದ ಎರಡು ದಿನಗಳ ನಂತರ) ಮತ್ತು ಕೀಲುನೋವು ಕಂಡುಬರುತ್ತದೆ.

ಮಳೆಗಾಲ ಈಗಾಗಲೇ ಆರಂಭವಾಗಿದ್ದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಡೆಂಗ್ಯೂ ಜ್ವರ ಈಗಾಗಲೇ ಕಾಣಿಸಿಕೊಂಡಿದೆ. ಜೊತೆಗೆ ಇಲಿ ಜ್ವರವೂ (Rat Fever) ಕಾಣಿಸಿಕೊಂಡು ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಿದೆ.

ಇಲಿ ಜ್ವರ ಎಂದರೇನು?

ಇಲಿ ಜ್ವರ ಎಂದರೆ ಇಲಿ ಕಚ್ಚಿದರೆ ಬರುವ ಜ್ವರ ಎಂದು ಅರ್ಥವಲ್ಲ. ಇದೊಂದು ಪ್ರಾಣಿಜನ್ಯ ಬ್ಯಾಕ್ಟೀರಿಯಾ ಸೋಂಕು. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗಿದರೆ ಈ ಸೋಂಕು ಉಂಟಾಗಬಹುದು.

ಇಲಿ ಜ್ವರದ ವೈಜ್ಞಾನಿಕ ಹೆಸರು ಲೆಪ್ಟೊಸ್ಪೈರೋಸಿಸ್. ಇದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ ಬರುತ್ತದೆ ಮತ್ತು ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು ಪ್ರಮುಖ ಕಾಯಿಲೆ. ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಈ ಕಾಯಿಲೆಯು ಇಲಿ ಜ್ವರ ಎಂದೇ ಹೆಸರು ಪಡೆದಿದೆ.

ಇಲಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆಯೇ?

ಈ ಕಾಯಿಲೆಯು ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳಿಗೆ ತೊಂದರೆ ಕೊಡುತ್ತದೆ. ಕೆಲವರಿಗೆ ಇಲಿಗಳು ತಮ್ಮ ಉಗುರುನಿಂದ ಪರಚಿ ಹೋದರೆ ಅಥವಾ ಹಲ್ಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರಬಹುದು. ಕೇವಲ ಇಲಿಗಳು ಮಾತ್ರವಲ್ಲ, ಇಲಿಗಳನ್ನು ಹಿಡಿಯುವ ಬೆಕ್ಕುಗಳು ಮತ್ತು ನಾಯಿಗಳಿಗೆ ಈ ಸೋಂಕು ತಗುಲಿ ಅವುಗಳಿಂದಲೂ ಜನರಿಗೆ ಈ ರೋಗ ಬರಬಹುದು ಎಂಬುದನ್ನು ನಾವು ಅರಿಯಬೇಕು. ಒಂದು ಸಮಾಧಾನಕರ ವಿಷಯ ಎಂದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.

ಇಲಿ ಜ್ವರದ ಲಕ್ಷಣಗಳು

ಈ ಕಾಯಿಲೆಯು ಆರಂಭಿಕ ಹಂತದಲ್ಲಿ ಫ್ಲೂ, ಡೆಂಗಿ ಅಥವಾ ಟೈಫಾಯ್ಡ್ ಜ್ವರದ ಲಕ್ಷಣಗಳನ್ನು ತೋರಿಸುತ್ತದೆ. ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು (ಸೋಂಕು ಉಂಟಾದ ಎರಡು ದಿನಗಳ ನಂತರ) ಮತ್ತು ಕೀಲುನೋವು ಕಂಡುಬರುತ್ತದೆ. ವೈದ್ಯರ ಬಳಿ ಹೋಗಿ ಎರಡು ವಾರಗಳ ನಂತರವೂ ಈ ಲಕ್ಷಣಗಳು ಹಾಗೆ ಇದ್ದವು ಎಂದರೆ ಹುಷಾರಾಗಿರಬೇಕು. ವಿಸ್ತೃತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ರೋಗ ನಿರ್ಣಯ ತಪ್ಪಾಗುವ ಸಾಧ್ಯತೆಯಿದೆ. ಆದ್ದರಿಂದ ಸರಿಯಾದ ಲ್ಯಾಬ್ ಟೆಸ್ಟಿನಿಂದ ಇಲಿ ಜ್ವರವನ್ನು ನಿಖರವಾಗಿ ಪತ್ತೆ ಹಚ್ಚಬಹುದು.

ಇಲಿ ಜ್ವರಕ್ಕೆ ಚಿಕಿತ್ಸೆ

ಇದರ ಚಿಕಿತ್ಸೆಗೆ ಜೀವಿರೋಧಕ ಔಷಧಗಳು ಪರಿಣಾಮಕಾರಿಯಾದರೂ ಮಾನವರಲ್ಲಿ ಈ ರೋಗವನ್ನು ತಡೆಗಟ್ಟುವಂತಹ ಸೂಕ್ತ ಲಸಿಕೆ ಇನ್ನೂ ಲಭ್ಯವಿಲ್ಲ. ಆದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಪರಿಹಾರವಾಗುತ್ತದೆ. ಇಲ್ಲದಿದ್ದರೆ ಬ್ಯಾಕ್ಟೀರಿಯಾದ ಸೋಂಕು ಕಿಡ್ನಿ, ಲಿವರ್, ಹೃದಯಕ್ಕೆ ಹರಡಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

ಇಲಿ ಜ್ವರ ತಡೆಯುವುದು ಹೇಗೆ?

ಇಲಿ ಜ್ವರವನ್ನು ವೈಯಕ್ತಿಕ ನೈರ್ಮಲ್ಯ, ಪರಿಸರ ನಿರ್ವಹಣೆ ಮತ್ತು ಅಪಾಯದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಡೆಗಟ್ಟಬಹುದು. ಮನೆಯಲ್ಲಿ/ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಅಲ್ಲಿ ಇಲಿಗಳ ಓಡಾಟವನ್ನು ನಿಯಂತ್ರಿಸಬಹುದು.

ಕಾಲಿನ ಬಿರುಕುಗಳು, ಗಾಯದ ಮೂಲಕ ರೋಗಾಣುಗಳು ದೇಹ ಸೇರುವುದರಿಂದ ರೈತರು ಮತ್ತು ಹೈನುಗಾರರು ಕೊಟ್ಟಿಗೆ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ರಕ್ಷಣೆಗಾಗಿ ಪಾದರಕ್ಷೆಗಳನ್ನು ಬಳಸಲೇಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಕೆಸರು ನೀರು ನಿಂತಿರುವ ಹೊಂಡಗಳಲ್ಲಿ ದನಗಳಿಗೆ ನೀರು ಕುಡಿಸುವುದು ಮತ್ತು ಮಕ್ಕಳು ಆಟವಾಡುವುದನ್ನು ತಪ್ಪಿಸುವುದು ಒಳ್ಳೆಯದು. ರೈತರು ಮತ್ತು ಕೃಷಿ ಕಾರ್ಮಿಕರು ಹೊರಗಡೆ ಕೆಲಸ ಮಾಡುವಾಗ ರಕ್ಷಣಾತ್ಮಕ ಸಾಧನಗಳನ್ನು ಬಳಸಬೇಕು ಮತ್ತು ಹೊಲಗಳಲ್ಲಿ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವಾಗ ಎಚ್ಚರ ವಹಿಸಿ ಸುರಕ್ಷಿತರಾಗಿರಬೇಕು.

ಬಯಲು ಪ್ರದೇಶದಲ್ಲಿ ನೀರು ನಿಲ್ಲುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಸರಿಯಾದ ಪ್ರವಾಹ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕು.

ಪ್ರಾಣಿಗಳನ್ನು ಮುಟ್ಟಿದ ನಂತರ ಅಥವಾ ಕಲುಷಿತ ನೀರು ಅಥವಾ ಮಣ್ಣಿನೊಂದಿಗೆ ಸಂಪರ್ಕಕ್ಕೆ ಬಂದ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಬೇಕು. ಪ್ರಾಣಿಗಳ ಮೂತ್ರ ಮಾಡುವ ಪ್ರದೇಶಗಳಲ್ಲಿ ಬರಿಗಾಲಿನಲ್ಲಿ ನಡೆಯಬಾರದು. ಸಾಕು ಪ್ರಾಣಿಗಳಿಂದ ರೋಗ ಹರಡುವುದನ್ನು ತಪ್ಪಿಸಲು ನಾಯಿ ಮತ್ತು ಬೆಕ್ಕುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಸೂಕ್ತ. ಯಾವುದಾದರೂ ರೋಗ ಬಂದು ಸತ್ತ ಪ್ರಾಣಿಗಳ ದೇಹವನ್ನು ಆಳವಾದ ಗುಂಡಿಯಲ್ಲಿ ಸುಣ್ಣದೊಟ್ಟಿಗೆ ಹೂಳುವುದು ಒಳ್ಳೆಯದು.

ಮಳೆ ಬಂದಾಗ ನಗರಪ್ರದೇಶಗಳಲ್ಲಿಯೂ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲಿ ಮತ್ತು ಹೆಗ್ಗಣಗಳಂತಹ ದಂಷ್ಟ್ರಕಗಳು ಬರುವುದನ್ನು ತಪ್ಪಿಸಲು ಬಲೆಗಳು ಮತ್ತು ದಂಷ್ಟ್ರಕನಾಶಕಗಳನ್ನು ಬಳಸಬೇಕು. ವಸತಿ ಪ್ರದೇಶಗಳು, ದಿನಸಿ ಅಂಗಡಿಗಳು, ಹೋಟೆಲುಗಳು ಮತ್ತು ಉಗ್ರಾಣ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ಹಸಿಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಕುಡಿಯುವ ನೀರಿನ ಮೂಲಗಳನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಇಲಿ ಜ್ವರಕ್ಕೆ ಆಯುರ್ವೇದದಲ್ಲಿ ಉಪಶಮನ

ಇಲಿ ಜ್ವರದಿಂದ ಪಾರಾಗಲು ಆಯುರ್ವೇದದಲ್ಲಿ ಹೇಳಲಾಗಿರುವಂತೆ ಅಶ್ವಗಂಧ ಮತ್ತು ಅಮೃತಬಳ್ಳಿ ಚೂರ್ಣವನ್ನು ಅರ್ಧರ್ಧ ಚಮಚ ಬಿಸಿನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಆದರೆ ಈ ಎರಡೂ ಚೂರ್ಣಗಳನ್ನು ಕಾಲು ಚಮಚ ಮತ್ತು ಸ್ವಲ್ಪ ಬೆಲ್ಲವನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಸಬೇಕು. ಅಮೃತಬಳ್ಳಿಯನ್ನು ನೀರಿನಲ್ಲಿ ನಿಧಾನವಾಗಿ ಕುದಿಸಿ ಕಷಾಯ ಮಾಡಿಯೂ ಸೇವಿಸಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT