ಮಂಗಳವಾರ, ಜುಲೈ 23ರಂದು ಎದುರಾಳಿಗಳಾದ ಫತಾ ಮತ್ತು ಹಮಾಸ್ ಸೇರಿದಂತೆ 12ಕ್ಕೂ ಹೆಚ್ಚು ಪ್ಯಾಲೆಸ್ತೀನಿ ಸಂಘಟನೆಗಳು ಬೀಜಿಂಗ್‌ನ ಬೆಂಬಲದೊಡನೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದವು. ಈ ಸಂಘಟನೆಗಳು ಒಂದಾಗಿ, ಒಂದು ತಾತ್ಕಾಲಿಕ ಒಕ್ಕೂಟ ಸರ್ಕಾರ ಸ್ಥಾಪಿಸಿಕೊಂಡವು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ಒಪ್ಪಂದವನ್ನು ಶ್ಲಾಘಿಸಿದ್ದು, ಪ್ರಸ್ತುತ 'ಬೀಜಿಂಗ್ ಒಪ್ಪಂದ' ಪ್ಯಾಲೆಸ್ತೀನ್ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಆದರೆ, ಪ್ಯಾಲೆಸ್ತೀನಿಯನ್ ಸಂಘಟನೆಗಳ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಚೀನಾ ನೇತೃತ್ವದಲ್ಲಿ ನಡೆದಿರುವ ಒಪ್ಪಂದ ಈ ಅಸಮಾಧಾನಗಳನ್ನು ಮೀರುವ ಶಕ್ತಿ ಹೊಂದಿರುವ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸ ಒಪ್ಪಂದದ ಕುರಿತ ಮಾತುಕತೆಗಳು ಭಾನುವಾರ, ಜುಲೈ 21ರಂದು ಆರಂಭಗೊಂಡವು. ಈ ಮೂಲಕ 2024ರಲ್ಲಿ ಎರಡನೇ ಬಾರಿಗೆ ಫತಾ ಮತ್ತು ಹಮಾಸ್ ಪ್ರತಿನಿಧಿಗಳು ಬೀಜಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ಈಗಾಗಲೇ ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ, ಚೀನಾ ಜಾಗರೂಕವಾಗಿ ಮಧ್ಯ ಪೂರ್ವ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದೆ. ಚೀನಾ ಜಾಗತಿಕ ಮಟ್ಟದಲ್ಲಿ ಅಮೆರಿಕಾದೊಡನೆ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದು, ಆದ್ದರಿಂದ ತನ್ನ ರಾಜತಾಂತ್ರಿಕ ಗೌರವವನ್ನು ಹೆಚ್ಚಿಸುವ ಸಲುವಾಗಿ ಇಂತಹ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಪ್ರಾದೇಶಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ಯಾಲೆಸ್ತೀನಿನ ನೂತನ ಪ್ರಾದೇಶಿಕ ಒಕ್ಕೂಟ ಸರ್ಕಾರದ ದಾಖಲಾತಿಗಳ ಪ್ರಕಾರ, ನೂತನ ಸರ್ಕಾರ ಗಾಜಾ ಮತ್ತು ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶಗಳ ಆಡಳಿತದ ಜವಾಬ್ದಾರಿ ಹೊಂದಿದೆ. ನೂತನ ತಾತ್ಕಾಲಿಕ ಸರ್ಕಾರಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುವ ಜವಾಬ್ದಾರಿಯೂ ಇದೆ.
ಚೀನಾದ ಸರ್ಕಾರಿ ಮಾಧ್ಯಮಗಳು ನೂತನ ಒಪ್ಪಂದವನ್ನು ಮಹತ್ವದ ಸಾಧನೆ ಎಂಬಂತೆ ಬಿಂಬಿಸಲಾರಂಭಿಸಿದವು. ಪ್ರಕ್ಷುಬ್ಧತೆಯಿಂದ ತುಂಬಿರುವ ಜಗತ್ತಿನಲ್ಲಿ ಚೀನಾ ಮತ್ತೊಂದು ಬಾರಿ ಜಾಗತಿಕ ಶಾಂತಿ ಸ್ಥಾಪಿಸಲು ಯಶಸ್ವಿಯಾಗಿದೆ ಎಂದು ಚೀನಾದ 'ಗ್ಲೋಬಲ್ ಟೈಮ್ಸ್' ಮಾಧ್ಯಮ ಶ್ಲಾಘಿಸಿದೆ. ಇದೇ ರೀತಿ, ಚೀನಾ ಸರ್ಕಾರಿ ಮಾಧ್ಯಮ 'ಕ್ಸಿನುವಾ' ಪ್ರಸ್ತುತ ಒಪ್ಪಂದವನ್ನು ಒಂದೇ ಭವಿಷ್ಯಕ್ಕಾಗಿ ಜಾಗತಿಕ ಸಮುದಾಯವನ್ನು ಒಗ್ಗೂಡಿಸುವ ಚೀನಾದ ಪ್ರಯತ್ನಕ್ಕೆ ಉದಾಹರಣೆ ಎಂದು ವರದಿ ಮಾಡಿದೆ.
ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಯಾದ ಹಮಾಸ್ ಇತ್ತೀಚಿನ ಚಕಮಕಿಯ ತನಕ ಗಾಜಾ ಪಟ್ಟಿಯ ಆಡಳಿತ ನಡೆಸುತ್ತಿತ್ತು. ಹಮಾಸ್ ಸಂಘಟನೆ ಮತ್ತು ಇಸ್ರೇಲಿ ಆಕ್ರಮಿತ ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ಸೆಕ್ಯುಲರ್ ಪ್ಯಾಲೆಸ್ತೀನಿಯನ್ ಅಥಾರಿಟಿ ಸರ್ಕಾರ ನಡೆಸುತ್ತಿದ್ದ ಫತಾ ಸಂಘಟನೆಗಳು 2006-2007ರಲ್ಲಿ ತೀವ್ರ ಅಂತರ್ಯುದ್ಧ ನಡೆಸಿದ್ದವು. ಈ ಚಕಮಕಿಗಳ ಅವಧಿಯಲ್ಲಿ, ಹಮಾಸ್ ಗಾಜಾದ ಮೇಲೆ ನಿಯಂತ್ರಣ ಸಾಧಿಸಿತು. ಅಂದಿನಿಂದ ಹಮಾಸ್ ಮತ್ತು ಫತಾ ಸಂಘಟನೆಗಳು ಪರಸ್ಪರ ತೀವ್ರ ವಿರೋಧಿಗಳಾಗಿ ಮಾರ್ಪಟ್ಟಿದ್ದವು.
ಹಮಾಸ್ ಮತ್ತು ಫತಾ ಸಂಘಟನೆಗಳ ನಡುವೆ ಮತ್ತೊಂದು ಬಾರಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಕೆಲ ವಾರಗಳ ಹಿಂದೆ ಅಭಿಪ್ರಾಯಪಡಲಾಗಿತ್ತು. ಆದರೆ, ಅದಾದ ಕೆಲ ಸಮಯದಲ್ಲೇ ಎರಡು ಸಂಘಟನೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಫತಾ ಮುಖಂಡ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರು ಈ ಚಕಮಕಿಗೆ ಹಮಾಸ್ ನೇರವಾಗಿ ಕಾರಣವಾಗಿದ್ದು, ಕಾನೂನಾತ್ಮಕವಾಗಿ, ನೈತಿಕವಾಗಿ ಮತ್ತು ರಾಜಕೀಯವಾಗಿ ಹಮಾಸ್ ಸಂಘಟನೆಯನ್ನೇ ದೂರಬೇಕು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಿರಿಯ ಹಮಾಸ್ ಅಧಿಕಾರಿಗಳು, ಫತಾ ಸಂಘಟನೆ ಇಸ್ರೇಲ್ ಪರ ವಾಲುತ್ತಿದೆ ಎಂದು ಆರೋಪಿಸಿದ್ದರು.
ಪ್ರಸಿದ್ಧ ಬ್ರಿಟಿಷ್ ಥಿಂಕ್ ಟ್ಯಾಂಕ್ ಸಂಸ್ಥೆ ಚಾತಮ್ ಹೌಸ್‌ನ ಅಹ್ಮದ್ ಅಬೌದೋ ಅವರು ಮಧ್ಯ ಪೂರ್ವ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವದ ತಜ್ಞರಾಗಿದ್ದಾರೆ. ಪ್ಯಾಲೆಸ್ತೀನಿಯನ್ ಒಗ್ಗಟ್ಟು ಸಾಧಿಸಲು ಚೀನಾ ಆಸ್ಥೆ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದು ಗ್ಲೋಬಲ್ ಸೌತ್ ಮತ್ತು ಇಸ್ಲಾಮಿಕ್ ಜಗತ್ತಿನ ದೇಶಗಳಿಗೆ ಬಲವಾದ ಸಂದೇಶ ನೀಡಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಗ್ಲೋಬಲ್ ಸೌತ್ ಮತ್ತು ಇಸ್ಲಾಮಿಕ್ ಜಗತ್ತು ಗಾಜಾದಲ್ಲಿ ಇಸ್ರೇಲಿನ ಕಠಿಣ ಮಿಲಿಟರಿ ಕ್ರಮಗಳನ್ನು ಬಲವಾಗಿ ಖಂಡಿಸಿವೆ.
ತನ್ನ ನಿಲುವನ್ನು ತೆಗೆದುಕೊಳ್ಳುವ ಮೂಲಕ, ಚೀನಾ ದಿನೇ ದಿನೇ ಬಹು ಧ್ರುವೀಕರಣ ಹೊಂದುತ್ತಿರುವ ಜಗತ್ತಿನಲ್ಲಿ ಪಾಶ್ಚಾತ್ಯ ನೇತೃತ್ವದಲ್ಲಿದ್ದ ಸ್ಥಾನವನ್ನು ಹೊಂದುವ ಗುರಿ ಹಾಕಿಕೊಂಡಿದೆ. ಸಾಂಪ್ರದಾಯಿಕವಾಗಿ, ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಯನ್ನರ ನಡುವೆ ರಾಜತಾಂತ್ರಿಕ ಪ್ರಯತ್ನಗಳನ್ನು ಅಮೆರಿಕಾ ನಡೆಸುತ್ತಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಸ್ಥಾಪಿಸಿ, ಗಾಜಾದಲ್ಲಿ ಇನ್ನೂ ಸೆರೆಯಾಳುಗಳಾಗಿರುವ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ನಡೆಸಲು ಕತಾರ್ ಮತ್ತು ಈಜಿಪ್ಟ್‌ಗಳ ಜೊತೆಗೆ ಅಮೆರಿಕಾ ಸಹ ಪ್ರಯತ್ನ ನಡೆಸುತ್ತಿತ್ತು. ಈಗ ಪ್ಯಾಲೆಸ್ತೀನಿಯನ್ ಸಂಘಟನೆಗಳ ನಡುವೆ ಶಾಂತಿ ಸ್ಥಾಪಿಸಲು ಚೀನಾ ಪ್ರಯತ್ನ ನಡೆಸಿರುವುದು ಅದರ ಕಾರ್ಯತಂತ್ರಗಳು ಮತ್ತು ಪ್ರಮುಖ ಸಮಸ್ಯೆಯ ಸಣ್ಣ ಭಾಗಗಳತ್ತ ಮಾತ್ರವೇ ಅದು ಗಮನ ಹರಿಸುತ್ತಿದೆ ಎನ್ನುವುದನ್ನು ತೋರಿಸುತ್ತಿದೆ.
ಚೀನಾ ಇತ್ತೀಚೆಗೆ ಪ್ಯಾಲೆಸ್ತೀನಿಯನ್ ಸಂಘಟನೆಗಳ ಜೊತೆಗೆ ನಡೆಸಿರುವ ಮಾತುಕತೆಗಳಿಂದ ಒಂದಷ್ಟು ಪ್ರಯೋಜನಗಳು ಕಂಡುಬರುವ ನಿರೀಕ್ಷೆಗಳಿದ್ದರೂ, ಯುದ್ಧದ ಬಳಿಕ ಗಾಜಾದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಹಮಾಸ್ ಮತ್ತು ಫತಾ ನಡುವಿನ ಸಹಯೋಗ ಅತ್ಯಂತ ಮುಖ್ಯವಾಗಿದೆ ಎಂದು ಎಲ್ಗಿಂಡಿ ಹೇಳಿದ್ದಾರೆ. ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಬಳಿಕ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಸಂಘಟನೆಯ ಮೂಲೋತ್ಪಾಟನೆ ನಡೆಸುವ ಹಠ ಹಿಡಿದಿದ್ದಾರೆ. ಅದರೊಡನೆ, ಅಮೆರಿಕಾ ಸಹ ಯುದ್ಧ ಮುಗಿದ ಬಳಿಕ ಗಾಜಾದ ಮೇಲೆ ನಿಯಂತ್ರಣ ಸಾಧಿಸಲು ಫತಾ ನೇತೃತ್ವದ ಪ್ಯಾಲೆಸ್ತೀನಿಯನ್ ಅಥಾರಿಟಿಯೇ ಸೂಕ್ತ ಆಯ್ಕೆ ಎಂದು ಅಭಿಪ್ರಾಯ ಹೊಂದಿದೆ. ಆದರೆ ನೆತನ್ಯಾಹು ಈ ಅಭಿಪ್ರಾಯವನ್ನು ಬಲವಾಗಿ ತಳ್ಳಿಹಾಕಿದ್ದಾರೆ.
ಪ್ರಸ್ತುತ ಯುದ್ಧ ಹಮಾಸ್ ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯವನ್ನು ಬಹುಪಾಲು ತಗ್ಗಿಸಿದ್ದರೂ, ಅಮೆರಿಕನ್ ಅಧಿಕಾರಿಗಳು ಮತ್ತು ತಜ್ಞರು ಹಮಾಸ್ ಸಂಘಟನೆ ಮತ್ತು ಅದರ ಸಿದ್ಧಾಂತಗಳು ನಾಶವಾಗುವ ಸಾಧ್ಯತೆಗಳು ಕಡಿಮೆ ಎಂದು ಭಾವಿಸಿದ್ದಾರೆ. ಎರಡು ಸಂಘಟನೆಗಳ ನಡುವೆ ಯಾವುದಾದರೂ ಒಪ್ಪಂದ ಜಾರಿಗೆ ಬರದಿದ್ದರೆ, ಪ್ಯಾಲೆಸ್ತೀನಿಯನ್ ಅಥಾರಿಟಿ ಗಾಜಾದಲ್ಲಿ ಮರಳಿ ಆಡಳಿತ ವಹಿಸಿಕೊಂಡರೂ ಹಮಾಸ್ ಏನಾದರೂ ಸಮಸ್ಯೆ ತಂದೊಡ್ಡಬಹುದು. ಎಲ್ಗಿಂಡಿ ಅವರ ಪ್ರಕಾರ, ಹಮಾಸ್ ಸಂಘಟನೆಯಿಂದ ಕನಿಷ್ಠ ಒಂದಷ್ಟು ಸಹಕಾರ ದೊರಕದಿದ್ದರೆ, ಪ್ಯಾಲೆಸ್ತೀನಿಯನ್ ಅಥಾರಿಟಿ ಗಾಜಾಗೆ ಮರಳಿ ಆಡಳಿತ ನಡೆಸಲು ಸಾಧ್ಯವಿಲ್ಲ!
ಮಿಡಲ್ ಈಸ್ಟ್ ಇನ್ಸ್ಟಿಟ್ಯೂಟ್‌ನ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ - ಪ್ಯಾಲೆಸ್ತೀನಿಯನ್ ವ್ಯವಹಾರ ವಿಭಾಗದ ನಿರ್ದೇಶಕರಾದ ಖಾಲೆದ್ ಎಲ್ಗಿಂಡಿ ಅವರು ಹೊಸ ಒಪ್ಪಂದದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಳೆದ ಹಲವಾರು ವರ್ಷಗಳಲ್ಲಿ ಪ್ಯಾಲೆಸ್ತೀನಿನ ಎರಡು ಪ್ರಮುಖ ರಾಜಕೀಯ ಸಂಘಟನೆಗಳಾದ ಹಮಾಸ್ ಮತ್ತು ಫತಾಗಳನ್ನು ಒಗ್ಗೂಡಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದಿದ್ದಾರೆ. ಈ ಬಾರಿಯೂ, ಬೀಜಿಂಗ್ ಒಪ್ಪಂದ ಯಶಸ್ಸು ಕಾಣುವ ಕುರಿತು ತಜ್ಞರು ಬಹಳಷ್ಟು ಅನುಮಾನಗಳನ್ನು ಹೊಂದಿದ್ದಾರೆ ಎಂದು ಫಾರೀನ್ ಪಾಲಿಸಿ ಮೀಡಿಯಾ ಹೌಸ್ ವರದಿ ಮಾಡಿದೆ.
ನೂತನ ಒಪ್ಪಂದದಲ್ಲಿ ಹೇಳಿಕೊಳ್ಳುವಂತಹ ಹೊಸತನವೇನಿಲ್ಲ ಎಂದು ಎಲ್ಗಿಂಡಿ ಅಭಿಪ್ರಾಯ ಪಟ್ಟಿದ್ದು, 2001ರ ಕೈರೋ ಒಪ್ಪಂದದಿಂದ ಆರಂಭಿಸಿ, ಇಲ್ಲಿಯತನಕ ಸಾಕಷ್ಟು ಇಂತಹ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಆದರೆ ಅದರಿಂದ ಅಂತಹ ಪ್ರಯೋಜನಗಳಾಗಿಲ್ಲ ಎಂದಿದ್ದಾರೆ. ಅವರು ಇಂತಹ ಮಧ್ಯಸ್ಥಿಕೆಯ ಪ್ರಯತ್ನಗಳಿಗೆ ಇತ್ತೀಚಿನ ಮಾಸ್ಕೋ ಹೇಳಿಕೆಯೂ ಒಂದು ಉದಾಹರಣೆ ಎಂದು ವಿವರಿಸಿದ್ದಾರೆ. ರಷ್ಯಾ ಸಹ ಮಾಸ್ಕೋದಲ್ಲಿ ಪ್ಯಾಲೆಸ್ತೀನಿಯನ್ ಸಂಘಟನೆಗಳ ನಡುವೆ ಮಾತುಕತೆಗಳನ್ನು ಆಯೋಜಿಸಿದ್ದು, ಇತ್ತೀಚಿನ ಮಾತುಕತೆ ಫೆಬ್ರವರಿಯಲ್ಲಿ ನಡೆದಿತ್ತು.
ಆದರೆ, ನೂತನ ಬೀಜಿಂಗ್ ಒಪ್ಪಂದದಲ್ಲಿ ನೀಡಿರುವ ಭರವಸೆಗಳನ್ನು ಹೇಗೆ ಜಾರಿಗೆ ತರುವುದು ಎಂಬ ಕುರಿತು ಯಾವುದೇ ಕಾರ್ಯಯೋಜನೆಗಳನ್ನು ನೀಡಲಾಗಿಲ್ಲ ಎಂದು ಎಲ್ಗಿಂಡಿ ವಿವರಿಸಿದ್ದಾರೆ. ಇಸ್ರೇಲಿ ದಿನಪತ್ರಿಕೆ 'ಹಾರೆಟ್ಜ್' ಜೊತೆ ಮಾತನಾಡಿರುವ, ಓರ್ವ ಅನಾಮಧೇಯ ಹಿರಿಯ ಫತಾ ಅಧಿಕಾರಿಯೊಬ್ಬರು ಈ ಒಪ್ಪಂದಕ್ಕೆ ಚೀನೀ ಆತಿಥ್ಯಕ್ಕೆ ಗೌರವ ತೋರುವ ಏಕೈಕ ಕಾರಣದಿಂದ ಸಹಿ ಹಾಕಲಾಗಿದೆ ಎಂದಿದ್ದಾರೆ!
ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್ ಸಂಸ್ಥೆಯ ಇಸ್ರೇಲ್ - ಚೀನಾ ವಿಭಾಗದ ನಿರ್ದೇಶಕರಾದ ಅಸ್ಸಾಫ್ ಓರಿಯನ್ ಅವರು ಪ್ರಸ್ತುತ ಒಪ್ಪಂದ ರಾಜತಾಂತ್ರಿಕ ಗೌರವ ಸಂಪಾದಿಸುವ ಸಲುವಾಗಿ ಚೀನಾ ಕೈಗೊಂಡಿರುವ ಅಗ್ಗದ, ಪ್ರಚಾರ ಪ್ರಿಯ ತಂತ್ರವಷ್ಟೇ ಎಂದು ಟೀಕಿಸಿದ್ದಾರೆ. ಈ ಒಪ್ಪಂದ ಕೇವಲ ಮೇಲ್ನೋಟಕ್ಕೆ ಮಾತ್ರವೇ ಸೀಮಿತವಾಗಿದ್ದು, ಇದರ ಮೂಲಕ ಚೀನಾ ಮಧ್ಯ ಪೂರ್ವ ಪ್ರದೇಶದಲ್ಲಿ ತಾನೂ ಓರ್ವ ಪ್ರಮುಖ ಮಧ್ಯಸ್ಥಿಕೆದಾರ ಎಂದು ತೋರಿಸಲು ಪ್ರಯತ್ನ ನಡೆಸುತ್ತಿದೆ. ಈ ಮೊದಲು ಮಧ್ಯಸ್ಥಿಕೆದಾರನ ಪಾತ್ರವನ್ನು ಅಮೆರಿಕಾ ನಿರ್ವಹಿಸುತ್ತಿತ್ತು ಎಂದು ಅಸ್ಸಾಫ್ ಹೇಳಿದ್ದಾರೆ. ಬೀಜಿಂಗ್ ದೀರ್ಘಕಾಲದಿಂದಲೂ ಪ್ಯಾಲೆಸ್ತೀನಿಯನ್ನರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು, ಪ್ಯಾಲೆಸ್ತೀನಿಯನ್ ರಾಷ್ಟ್ರವನ್ನು 1988ರಲ್ಲಿ ಮಾನ್ಯ ಮಾಡಿದ ಆರಂಭಿಕ ದೇಶಗಳಲ್ಲಿ ಚೀನಾ ಸಹ ಒಂದಾಗಿತ್ತು.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)