ಇತ್ತೀಚೆಗೆ ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ರೆಟಿನೋಬ್ಲಾಸ್ಟೋಮಾ ಪ್ರಕರಣಗಳು ಹೆಚ್ಚಾಗುತ್ತಿವೆ. ರೆಟಿನೋಬ್ಲಾಸ್ಟೋಮಾ ಜೀವ ಬೆದರಿಕೆ ಒಡ್ಡುವ ಒಂದು ಅಪಾಯಕಾರಿ ಕಣ್ಣಿನ ಕ್ಯಾನ್ಸರ್. ಇದು ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಕಾಣಿಸಿಕೊಳ್ಳಬಹುದು. ಇದನ್ನು ಬೇಗನೆ ಪತ್ತೆ ಮಾಡಿದರೆ ಹೆಚ್ಚಿನ ಮಕ್ಕಳನ್ನು ತೊಂದರೆಗಳಿಂದ ಕಾಪಾಡಬಹುದು.
ಜಾಗತಿಕವಾಗಿ ಪ್ರತಿವರ್ಷ ರೆಟಿನೋಬ್ಲಾಸ್ಟೋಮಾದ 8,000 (ಎಂಟು ಸಾವಿರ) ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳ ಪೈಕಿ ಭಾರತದಲ್ಲಿ 1,500 ಪ್ರಕರಣಗಳು ಕಂಡುಬರುತ್ತಿವೆ. ಆದರೆ ಹೆಚ್ಚಿನ ಪ್ರಕರಣಗಳು ದಾಖಲಾಗುವುದಿಲ್ಲ ಅಥವಾ ಪತ್ತೆಯಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಭಾರತದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಅರಿವಿರುವುದು ಅತ್ಯಂತ ಕಡಿಮೆ.
ರೆಟಿನೋಬ್ಲಾಸ್ಟೋಮಾ ಆದಾಗ ಮಕ್ಕಳಲ್ಲಿ ಮೊದಲು ಕಣ್ಣಿನ ಪಾಪೆಯಲ್ಲಿ ಬಿಳಿಯ ಚುಕ್ಕೆ (ವೈಟ್ ರಿಫ್ಲೆಕ್ಸ್) ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಹಗಲು ಬೆಳಕಿನಲ್ಲಿ ಅಥವಾ ಫೋಟೋಗಳಲ್ಲಿ ಬಿಳಿಯ ಚುಕ್ಕೆ ಎದ್ದು ಕಾಣುತ್ತದೆ. ಜೊತೆಗೆ ಮೆಳ್ಳುಗಣ್ಣು, ಕಣ್ಣು ಊದಿರುವುದು, ಸದಾ ನೀರು ಸುರಿಯುವುದು ಗುರುತುಗಳು ಕಂಡು ಬಂದರೆ ಈ ರೋಗದ ಲಕ್ಷಣಗಳು ಎಂದು ಗುರುತಿಸಬಹುದಾಗಿದೆ. ಕೆಲವೊಮ್ಮೆ ಎರಡೂ ಕಣ್ಣುಗಳು ಬೇರೆಬೇರೆ ದಿಕ್ಕಿನ ಕಡೆ ನೋಡುತ್ತಿರುವುದು. ಒಂದು ಕಣ್ಣು ನೇರವಾಗಿ ನೋಡುತ್ತಿದ್ದರೆ ಇನ್ನೊಂದು ಒಳ ಓರೆಯಾಗಿ, ಹೊರ ಓರೆಯಾಗಿ, ಮೇಲ್ಮುಖ ಅಥವಾ ಕೆಳಮುಖವಾಗಿರುವುದು ಕಂಡುಬರುತ್ತದೆ. ಹೆಚ್ಚಿನ ಮಕ್ಕಳಿಗೆ ಹುಟ್ಟಿದಾಗ ಕಣ್ಣಿನ ಹೊಂದಾಣಿಕೆಯಿರುವುದಿಲ್ಲ, ಆದರೆ 2 ರಿಂದ 3 ತಿಂಗಳಲ್ಲಿ ಅದು ತಾನಾಗಿಯೇ ಸರಿ ಹೋಗುತ್ತದೆ. ಹಾಗೇ ಉಳಿದರೆ ಅದು ಸರಿಹೋಗುವ ಸಾಧ್ಯತೆ ಕಡಿಮೆ. ಹಾಗಾಗಿ ಆದಷ್ಟು ಬೇಗ ಕಣ್ಣಿನ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಕಣ್ಣುಗಳಲ್ಲಿ ನೋವು ಇರಬಹುದು ಮತ್ತು ಕಣ್ಣುಗಳಲ್ಲಿ ದೃಷ್ಟಿ ಹಾಳಾಗುವುದು ಅಥವಾ ದೃಷ್ಟಿ ಹೀನತೆಯೂ ಕಂಡುಬರಬಹುದು. ಬೆಳೆದಿರುವ ಮಕ್ಕಳು ಮತ್ತು ವಯಸ್ಕರಲ್ಲಿ ಇದು ಕಾಣಿಸಿಕೊಳ್ಳುವುದು ಬಹಳ ಅಪರೂಪ.
ರೆಟಿನೊಬ್ಲಾಸ್ಟೊಮಾ ಚಿಕಿತ್ಸೆಗೆ ಬಹುಶಿಸ್ತಿನ ವಿಧಾನದ ಅಗತ್ಯವಿದೆ ಮತ್ತು ತಜ್ಜವೈದ್ಯರು ಇದನ್ನು ನಿರ್ವಹಿಸುತ್ತಾರೆ, ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮತ್ತು ರೋಗದ ವರ್ಗೀಕರಣದ ನಂತರ ಚಿಕಿತ್ಸೆಯ ಯೋಜನೆಯನ್ನು ಮಾಡಲಾಗುತ್ತದೆ. ಪ್ರತಿ ರೋಗಿಗೆ ಚಿಕಿತ್ಸೆಯು ವೈಯಕ್ತಿಕವಾಗಿರುತ್ತದೆ. ಚಿಕಿತ್ಸೆಯು ಕಣ್ಣಿನ ಗಾತ್ರ, ಬಾಧಿತ ಜಾಗದ ಸ್ಥಳ ಮತ್ತು ದೃಷ್ಟಿ ನಷ್ಟವಾಗುತ್ತಿರುವ ಪ್ರಮಾಣವನ್ನು ಅವಲಂಬಿಸಿದೆ.
ರೆಟಿನೋಬ್ಲಾಸ್ಟೋಮಾ ಚಿಕಿತ್ಸೆಯು ಔಷಧಿಗಳು, ಕೀಮೋಥೆರಪಿ, ಶಸ್ತ್ರಚಿಕಿತ್ಸೆ ಮತ್ತು ರೇಡಿಯೇಷನ್ ಚಿಕಿತ್ಸೆಯನ್ನು ಒಳಗೊಂಡಿರಬಹುದು. ಚಿಕಿತ್ಸೆಯು ರೋಗದ ಹಂತ ಮತ್ತು ಗಂಭೀರತೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಕೀಮೋಥೆರಪಿಯಲ್ಲಿ ಕ್ಯಾನ್ಸರ್ನ ಕೋಶಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರಾಸಾಯನಿಕ ಔಷಧಿಗಳನ್ನು ಬಳಕೆ ಮಾಡುತ್ತಾರೆ. ಲೇಸರ್ ಬೆಳಕಿನ ತಂತ್ರಜ್ಞಾನವನ್ನು ಬಳಸಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲಾಗುವುದು. ಇದಲ್ಲದೇ ಹೈ-ಎನರ್ಜಿ ರೇಡಿಯೇಶನ್ ಬಳಸಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತಾರೆ. ಚಿಕಿತ್ಸೆಯು ಪೂರ್ಣವಾದ ನಂತರ, ರೋಗದ ಮರುಕಳಿಸುವಿಕೆ ಮತ್ತು ವ್ಯವಸ್ಥಿತ ಚಿಕಿತ್ಸೆಯ ಅಡ್ಡಪರಿಣಾಮಗಳ ಮೇಲೆ ನಿಗಾ ಇಡಲು ಹೆಚ್ಚಿನ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡಲಾಗುತ್ತದೆ.
ರೆಟಿನೋಬ್ಲಾಸ್ಟೋಮ ಕುರಿತ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ. ಮಗುವಿನ ದೃಷ್ಟಿ ಕಾಪಾಡಲು ಕಾಯಿಲೆಯನ್ನು ಬೇಗ ಪತ್ತೆ ಮಾಡಬೇಕಾದದ್ದು ಅತ್ಯಂತ ಮುಖ್ಯ. ಬೇಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರೆ ಶೇ.95 ಮಕ್ಕಳನ್ನು ಸಾವಿನಿಂದ ರಕ್ಷಿಸಬಹುದು. ಶೇ.90ರಷ್ಟು ಮಕ್ಕಳು ದೃಷ್ಟಿ ಪಡೆಯುತ್ತಾರೆ ಹಾಗೂ ಶೇ.85ರಷ್ಟು ಮಕ್ಕಳ ದೃಷ್ಟಿಯನ್ನು ರಕ್ಷಿಸಬಹುದಾಗಿದೆ. ಆದ್ದರಿಂದ ಚಿಕ್ಕ ಮಕ್ಕಳ ಕಣ್ಣಿನಲ್ಲಿ ಬಿಳಿ ಚುಕ್ಕೆ ಕಂಡರೆ, ಹೆಚ್ಚಾಗಿ ಕಣ್ಣು ಕೆಂಪಾಗಿದ್ದರೆ ಅಥವಾ ಸೋಂಕು ಇಲ್ಲದೆ ಕಣ್ಣು ಊದಿಕೊಂಡಿರುವುದನ್ನು ಗಮನಿಸಿದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಅವರನ್ನು ನೇತ್ರ ವೈದ್ಯರಿಗೆ ತೋರಿಸಬೇಕು.
ಭಾರತದಲ್ಲಿ ರೆಟಿನೋಬ್ಲಾಸ್ಟೊಮಾ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಜನ್ಮಜಾತ ಅಥವಾ ಅನುವಂಶಿಕ ರೆಟಿನೊಬ್ಲಾಸ್ಟೊಮಾ ಮಗುವಿಗೆ ಮೊದಲ ವರ್ಷದಲ್ಲಿ ಕಂಡುಬರುತ್ತದೆ. ಅನುವಂಶಿಕವಲ್ಲದ ರೆಟಿನೋಬ್ಲಾಸ್ಟೊಮಾ ಎರಡು ಅಥವಾ ಮೂರನೇ ವರ್ಷದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನವಜಾತ ಶಿಶು ಹಾಗೂ ಸಣ್ಣ ಮಕ್ಕಳ ಕಣ್ಣಿನಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣ ಕುರಿತಂತೆ ಬೇಗ ತಪಾಸಣೆ ಮಾಡಿಸಬೇಕಾದ ಅಗತ್ಯವಿದೆ, ಈ ಮೂಲಕ ಮಕ್ಕಳಲ್ಲಿ ಚಿಕ್ಕವರಿದ್ದಾಗಲೇ ಬರುವ ಅಂಧತ್ವವನ್ನು ತಡೆಯಬಹುದಾಗಿದೆ.
ಈ ಉದ್ದೇಶಕ್ಕಾಗಿಯೇ ಪ್ರತಿ ವರ್ಷ ಮೇ 14ರಿಂದ 20ರವರೆಗೆ ವಿಶ್ವ ರೆಟಿನೋಬ್ಲಾಸ್ಟೊಮಾ ಸಪ್ತಾಹವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರೆಟಿನೋಬ್ಲಾಸ್ಟೊಮಾ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಇದರಿಂದ ಬಾಧಿತ ಮಕ್ಕಳ ಆರೈಕೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿಕೊಡಲಾಗುತ್ತದೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com