ಜಾತಿ ಗಣತಿ ವರದಿ ಸಲ್ಲಿಕೆ online desk
ಅಂಕಣಗಳು

ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ವರದಿ ಜಾರಿಯಾಗುತ್ತಾ? ಅಥವಾ ವಿರೋಧಿಗಳ ವಿರುದ್ಧದ ರಾಜಕೀಯ ಸಮರಕ್ಕೆ ಇದು ಕೇವಲ ಅಸ್ತ್ರವಾಗೇ ಉಳಿಯುತ್ತಾ?

ವರದಿ ಜಾರಿಯಾಗುತ್ತಾ? ಅಥವಾ ವಿರೋಧಿಗಳ ವಿರುದ್ಧದ ರಾಜಕೀಯ  ಸಮರಕ್ಕೆ ಇದು ಕೇವಲ ಅಸ್ತ್ರವಾಗೇ ಉಳಿಯುತ್ತಾ? ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ  ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಕುರಿತಂತೆ ಎದ್ದಿರುವ ಪ್ರಶ್ನೆ ಇದು.

ಈ ವರದಿ ಕುರಿತಂತೆ ಪರ–ವಿರೋಧ ಚರ್ಚೆಗಳು ಆರಂಭವಾಗಿರುವ ಹಂತದಲ್ಲೇ  ಸಚಿವ ಡಾ. ಮಹದೇವಪ್ಪ ಅವರು ಪ್ರಸ್ತಾಪಿಸಿರುವ ದಲಿತ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂದಿದೆ.  ಇಡೀ ವಿದ್ಯಮಾನಗಳನ್ನು ಸಮಗ್ರವಾಗಿ ಗಮನಿಸಿದರೆ ಇದೊಂದು ರಾಜಕೀಯ ಅಸ್ತ್ರವಾಗಿ ರೂಪುಗೊಳ್ಳುವ ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ಇನ್ನು ಎರಡು ತಿಂಗಳು ಕಳೆದರೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಂದು ವರ್ಷ ಪೂರೈಸುತ್ತಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಮುಖ್ಯಮಂತ್ರಿ ಪದವಿಯ ಅಧಿಕಾರ ಹಂಚಿಕೆ ಒಪ್ಪಂದಗಳು ಪಕ್ಷದ ಉನ್ನತ ಮಟ್ಟದಲ್ಲಿ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆಯಾದರೂ ಅದನ್ನು ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವ ಖಚಿತ ಪಡಿಸಿಲ್ಲ. ಹಾಗೆಯೇ ನಿರಾಕರಿಸಿಯೂ ಇಲ್ಲ.

ಆದರೆ ಅಧಿಕಾರ ಹಂಚಿಕೆ ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ಇರುವುದಂತೂ ಸುಳ್ಳೇನಲ್ಲ. ಸಾರ್ವಜನಿಕವಾಗೇ ಇದು ಬಹಿರಂಗಗೊಂಡಿದೆ.  ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಐದು ವರ್ಷ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ ಎಂದು ಸ್ವತಹಾ ಅವರ ಪುತ್ರ ಮಾಜಿ ಶಾಸಕ ಡಾ. ಯತೀಂದ್ರ ಅವರೇ ಇತ್ತಿಚೆಗೆ ಮತ್ತೆ ಸ್ಪಷ್ಟಪಡಿಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಆಯೋಗ ಸಲ್ಲಿಸಿರುವ ಜಾತಿ ಗಣತಿ ಹೆಸರಿನ ವರದಿ ಕುರಿತಂತೆ ವಿವಾದಗಳು ತಲೆ ಎತ್ತಿವೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಆದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಈ ವರದಿಯನ್ನು ಕಟುವಾಗಿ ವಿರೋಧಿಸಿದ್ದು ಮಹಾ ಸಭಾ ವತಿಯಿಂದಲೇ ಪ್ರತ್ಯೇಕ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದ್ದಾರೆ. ಮತ್ತೊಂದು ಕಡೆ ರಾಜ್ಯದ  ಇನ್ನೊಂದು ಪ್ರಬಲ  ಸಮುದಾಯವಾದ ಒಕ್ಕಲಿಗರೂ ಈ ವರದಿಯನ್ನು ವಿರೋಧಿಸಿದ್ದಾರೆ ಹೀಗಿರುವಾಗ ರಾಜಕೀಯವಾಗಿಯೂ ಪ್ರಬಲವಾಗಿರುವ ಎರಡು ಸಮುದಾಯಗಳ ತೀವ್ರ  ವಿರೋಧ ಎದುರಿಸಿಯೂ ವರದಿಯನ್ನು ಜಾರಿಗೊಳಿಸುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸುತ್ತಾರಾ ಎಂಬುದೇ ಇಲ್ಲಿ ಎದ್ದಿರುವ ಪ್ರಶ್ನೆ.    

ಯಾವುದೇ ಕೋನದಿಂದ ನೋಡಿದರೂ ಮುಂದಿನ ದಿನಗಳಲ್ಲಿ ಇದೊಂದು ರಾಜಕೀಯ ಹೋರಾಟದ  ವಿಷಯವಾಗೇ ಉಳಿಯುವ ಸಾಧ್ಯತೆಗಳು ಹೆಚ್ಚು. ಈಗಾಗಲೇ ಸಚಿವ ಸಂಪುಟದಲ್ಲಿರುವ ವೀರಶೈವ ಸಚಿವರು ವರದಿಯ ಬಗ್ಗೆ ಅಪಸ್ವರ ಎತ್ತಿದ್ದಾರೆ.  ಸಮುದಾಯದ ಕೆಲವು ಶಾಸಕರಿಂದಲೂ  ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದ ರಾಜಕಾರಣದ ಹಾದಿಯ ಇತಿಹಾಸ ಗಮನಿಸುತ್ತಾ ಬಂದರೆ ತಮ್ಮ ಸಮುದಾಯಗಳ ಅಸ್ತಿತ್ವಕ್ಕೆ ಧಕ್ಕೆಆಗುವ ಸನ್ನಿವೇಶ ಎದುರಾದಾಗಲೆಲ್ಲ ಪ್ರಬಲ ಜಾತಿಯ ಮಠಗಳು ಸರ್ಕಾರಗಳ ವಿರುದ್ಧ ಸಿಡಿದು ನಿಂತ ಉದಾಹರಣೆಗಳು ಸಾಕಷ್ಟಿವೆ.  ಅವು ರಾಜಕೀಯವಾಗಿಯೂ ಪರಿಣಾಮ ಬೀರಿದ ಸನ್ನಿವೇಶಗಳೂ ಇವೆ.

ಇಂತಹ ಪರಿಸ್ಥಿತಿಯಲ್ಲಿ ಸ್ವತಹಾ ರಾಜಕಾರಣಿಯೂ ಆದ ಹಾಗೆಯೇ ಮುಖ್ಯಮಂತ್ರಿಯಾಗಿ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸುವ ಆಸೆ ಹೊಂದಿರುವ ಸಿದ್ದರಾಮಯ್ಯ ತಮ್ಮ ಅಧಿಕಾರಕ್ಕೆ ಭಂಗ ತರುವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಆದರೆ ಈ ವರದಿಯನ್ನೇ ಅವರು ಪಕ್ಷದೊಳಗೇ ಇರುವ ತಮ್ಮ ರಾಜಕೀಯ ವಿರೋಧಿಗಳ ಸದ್ದಡಗಿಸಲು ಅಸ್ತ್ರವಾಗಿಸಿಕೊಳ್ಳುತ್ತಾರೆ ಎಂಬುದು ಮಾತ್ರ ಖಚಿತ.

 ಜಯಪ್ರಕಾಶ್ ಹೆಗ್ಡ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಅಥವಾ ಶಿಪಾರಸುಗಳು ಬಹಿರಂಗವಾಗಿಲ್ಲ.ಅದಕ್ಕೆ ಮುನ್ನವೇ ವಿರೋಧ ಎದ್ದಿದೆ.ಇದೀಗ  ಸರ್ಕಾರ ಸ್ವೀಕರಿಸಿರುವ ವರದಿಯನ್ನು ಪರಿಶೀಲನೆಗೆ ಸಚಿವ ಸಂಪುಟದ ಉಪ ಸಮಿತಿಗೆ ಒಪ್ಪಿಸಲಾಗಿದೆ. ಅದರ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕು

ಬಹುತೇಕ ಇದೇ 12 ರಂದು ಲೋಕಸಭೆಗೆ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿವೆ. ಒಮ್ಮೆ ಚುನಾವಣೆ ಅಧಿಸೂಚನೆ ಹೊರ ಬಿದ್ದ ನಂತರ ಫಲಿತಾಂಶ ಬರುವವರೆಗೆ ಸರ್ಕಾರ ನೀತಿ ವಿಚಾರಗಳಿಗೆ ಸಮಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ನೀತಿ ಸಂಹಿತೆ ಅಡ್ಡ ಬರುತ್ತದೆ. ಇದು ಸಿದ್ದರಾಮಯ್ಯನವರಿಗೂ ಗೊತ್ತು. ಹಾಗೇ ಲೋಕಸಭಾ ಚುನಾವನೆಯ ವರೆಗೆ ಈ ವಿವಾದದ ಕಾವು ಜೀವಂತವಾಗಿರುವುದು ಅವರಿಗೂ ಬೇಕಾಗಿದೆ.  ಚುನಾವನೆಗೆ ಬಿಜೆಪಿ ವಿರುದ್ಧದ ಹೋರಾಟಕ್ಕೆ ಇದನ್ನೊಂದು ಆಯುಧವಾಗಿ ಬಳಸಿಕೊಳ್ಳಲೂ ಅವರು ಆಲೋಚಿಸಿದ್ದಾರೆ. ಆ ಮೂಲಕ ಅಹಿಂದ ಮತಗಳನ್ನು ಆಕರ್ಷಿಸುವ ತಂತ್ರಗಾರಿಯೂ ಇದರ ಹಿಂದಿದೆ. ಆದರೆ ಇದು ಚುನಾವಣೆಯಲ್ಲಿ ಅವರು ಬಯಸಿದ ಫಲಿತಾಂಶವನ್ನು ನೀಡುತ್ತದಾ? ಎಂಬುದು ಸದ್ಯಕ್ಕೆ ಬರೀ ಪ್ರಶ್ನೆ ಅಷ್ಟೆ.  

ಬಿಜೆಪಿಯ ಹಿರಿಯ ಮುಖಂಡ ಶಾಸಕ ಸುನಿಲ್ ಕುಮಾರ್ ಈ ವರದಿಯ ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಪಡಿಸಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಅದು ಸಾಧ್ಯವೂ ಇಲ್ಲ. ಇದು ಆ ಪಕ್ಷದ ನಾಯಕರಿಗೂ ಗೊತ್ತು. ಅಧಿಕಾರಕ್ಕಾಗಿ ಮತ್ತು ಮತಗಳಿಗಾಗಿ ರಾಜ್ಯದಲ್ಲಿ ಪ್ರಬಲ ಲಿಂಗಾಯಿತ ಸಮುದಾಯವನ್ನೇ ನೆಚ್ಚಿಕೊಂಡಿರುವ ಬಿಜೆಪಿಗೂ ಈ ವಿವಾದ ಜೀವಂತವಾಗಿರುವುದು ಬೇಕು.

ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಯ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಆ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರ ಆಂತರಿಕ ಕಿತ್ತಾಟದಿಂದ ಪತನಗೊಳ್ಳಬಹುದು ಅದರ ರಾಜಕೀಯ ಲಾಭ ಬಿಜೆಪಿಗೆ ಆಗಬಹುದು ಎಂಬ ಆಸೆ ಹೊಂದಿದ್ದಾರೆ. ಹೀಗಾಗಿ ಈ ವಿವಾದ ಜೀವಂತವಾಗಿರುವುದು ಬಿಜೆಪಿಗೂ ಬೇಕು. ಯಾವುದೇ ರಿತಿಯಿಂದ ನೋಡಿದರೂ ಆಯೋಗದ ವರದಿ ಸದ್ಯಕ್ಕೆ ಒಂದು ಬೃಹತ್ ಕಡತವಾಗಿ ಸರ್ಕಾರದಲ್ಲಿ ಉಳಿಯಲಿದೆ. ಅದು ಜಾರಿಗೆ ಬರುವ ಲಕ್ಷಣಗಳು ಸದ್ಯಕ್ಕೆ ಇಲ್ಲ.

ಸೀಟು ಹಂಚಿಕೆಯ ಕಗ್ಗಂಟು:

ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳುವ ದಿನಗಳು ಹತ್ತಿರವಾದರೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಕುರಿತ ಗೊಂದಲ ಇನ್ನೂ ಇತ್ಯರ್ಥವಾಗಿಲ್ಲ. ಜೆಡಿಎಸ್ ನ ಪ್ರಶ್ನಾತೀತ ನಾಯಕರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ತವರು ಜಿಲ್ಲೆ ಹಾಸನ

ಒಳಗೊಂಡಂತೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪಕ್ಷದ ಸಂಭವನೀಯ ಅಭ್ಯರ್ಥಿಗಳಿಗೆ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಮೈತ್ರಿಯ ವಿಚಾರದಲ್ಲಿ ಅವರದ್ದು ಅಳೆದೂ ಸುರಿದೂ ನೋಡುವ ನೀತಿ. ಒಂದು ವೇಳೆ ಸೀಟು ಹಂಚಿಕೆ ತಾವು ಬಯಸಿದ ರಿತಿಯಲ್ಲಿ ಆಗದಿದ್ದರೆ ಬಿಜೆಪಿಯ ನಿರ್ಧಾರಗಳನ್ನು ಯಥಾವತ್ತಾಗಿ ಅವರು ಒಪ್ಪಿಕೊಳ್ಳುವುದು ಕಷ್ಟ. ಈಗಾಗಲೇ ಹಾಸನ ಜಿಲ್ಲೆಯಲ್ಲೇ ಜೆಡಿಎಸ್ ವಿರುದ್ಧ ಬಿಎಜಪಿಯ ಸ್ಥಳೀಯ ನಾಯಕರು ಸಿಡಿದೆದ್ದಿದ್ದಾರೆ.

ಇದು ರಾಜಕೀಯ ವಿರೋಧಗಳನ್ನು ಮೀರಿ ವೈಯಕ್ತಿಕ ಮಟ್ಟಕ್ಕೆ ತಿರುಗಿದೆ. ಹಾಸನದಲ್ಲಿ ಮತ್ತೆ ಜೆಡಿಎಸ್ ನಿಂದ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿಯಾದರೆ ಬಿಜೆಪಿ ಸ್ಥಳೀಯ ಘಟಕ ಚುನಾವಣೆಯಲ್ಲಿ ಹೈಕಮಾಂಡ್ ಸೂಚನೆಯ ನಂತರವೂ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಎಂಬ ಪರಿಸ್ತಿತಿ ನಿರ್ಮಾಣವಾಗಿದೆ. ಒಂದು ವೇಳೆ ದೇವೇಗೌಡರೆ ಕಣಕ್ಕಿಳಿದರೆ ಚಿತ್ರಣ ಬದಲಾದರೂ ಆಶ್ಚರ್ಯ ಪಡಬೇಕಿಲ್ಲ.

ಆದರೆ 90 ರ ಈ ಇಳಿ ವಯಸ್ಸಿನಲ್ಲಿ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಅವರು ಹೇಳಿದ್ದಾರೆ. ಆದರೆ ರಾಜಕಾರಣದಲ್ಲಿನ ತೀರ್ಮಾನಗಳು ಕಾಲಕಾಲಕ್ಕೆ ಬದಲಾದ ಉದಾಹರಣೆಗಳೂ ಇವೆ.ಚುನಾವಣೆಯಲ್ಲಿನ ಸ್ಪರ್ಧೆ ದೇವೇಗೌಡರಿಗೆ ಅನಿವಾರ್ಯವಲ್ಲ ಎಂಬುದೇನೋ ನಿಜ. ಆದರೆ ಜೆಡಿಎಸ್ ಪಕ್ಷದ ಅಸ್ತಿತ್ವದ ಪ್ರಶ್ನೆ ಎದುರಾದಾಗ ನಿರ್ಧಾರ ಬದಲಾವಣೆ ಅನಿವಾರ್ಯವೂ ಆಗಬಹುದು.  ಸೀಟು ಹಂಚಿಕೆ ಅಂತಿಮವಾದ ನಂತರ ಜೆಡಿಎಸ್ ರಾಜಕೀಯವಾಗಿ ಕೈಗೊಳ್ಳುವ ತಿರ್ಮಾನಗಳು ಆ ಪಕ್ಷದ ಅಸ್ತಿತ್ವದ ಮುಂದಿನ ಹಾದಿಯನ್ನು ನಿರ್ಧರಿಸಲಿವೆ.

ಬಿಜೆಪಿಯಲ್ಲಿ:

ಇನ್ನು ಬಿಜೆಪಿಯಲ್ಲಿ ಎಲ್ಲವೂ ಸುಸೂತ್ರವಾಗೇನೂ ಇಲ್ಲ.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗೆ ಮತ್ತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ. ನಿಸ್ಸಂಶಯವಾಗಿ ಇದು ಮಾಜಿ ಸಚಿವ ಸಿ.ಟಿ.ರವಿ ಹಾಗೂ ಶೋಭಾ ನಡುವೆ ದೊಡ್ಡ ಸಮರವಾಗಿ ಮಾರ್ಪಟ್ಟಿದೆ. ಇತ್ತಿಚೆಗೆ ಚಿಕ್ಕಮಗಳೂರಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶೋಭಾ ಅವರೇ

ಮತ್ತೆ ಸ್ಪರ್ಧಿಸುವುದು ಖಚಿತ ಎಂಬ ಮಾತು ಆಡಿದ್ದಾರೆ. ಇದರ ಬೆನ್ನಲ್ಲೇ ಸಿ.ಟಿ.ರವಿ ನೀಡುತ್ತಿರುವ ಪ್ರತಿಕ್ರಿಯೆಗಳು ಮುಂದಿನ ದಿನಗಳಲ್ಲಿ ಅವರು ಯಡಿಯೂರಪ್ಪ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರುವುದರ ಸೂಚನೆಯನ್ನು ನೀಡಿದೆ.

ಯಡಿಯೂರಪ್ಪ ಹೇಳಿಕೆ ಸಂದೇಶ ಏನು?

ಟಿಕೆಟ್ ನಿರ್ಧರಿಸುವ ಮುನ್ನ ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂದು ಯಡಿಯೂರಪ್ಪ ವರಿಷ್ಠರನ್ನು ಆಗ್ರಹಿಸಿರುವುದರ ಹಿಂದೆಯೂ ಸ್ಪಷ್ಟ ಸಂದೇಶ ಅಡಗಿದೆ. ತನ್ನನ್ನು ಕಡೆಗಣಿಸಿ ವರಿಷ್ಠರು ನಿರ್ಧಾರ ಕೈಗೊಂಡರೆ ಅದಕ್ಕೆ ತಾನು ಹೊಣೆಯಲ್ಲ ಎಂಬ ಸಂದೇಶವನ್ನು ಅವರು ಯಶಸ್ವಿಯಾಗಿ ರವಾನಿಸಿದ್ದಾರೆ. ಬಿಜೆಪಿ ವರಿಷ್ಠ ಮಂಡಳಿಗೆ ಯಡಿಯೂರಪ್ಪ ಅವರ ಸಿಟ್ಟನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂಬುದು ಗುಟ್ಟೇನೂ ಅಲ್ಲ. ರಾಜ್ಯ ರಾಜಕಾರಣ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಇದರ ಫಲಿತಾಂಶ ಹೊರ ಬೀಳಲು ಕಾಯಬೇಕು.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT