(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ) 
ಅಂಕಣಗಳು

ಹಣ ಎನ್ನುವುದು ನಾವು ಮಾಡಿದ ಕೆಲಸಕ್ಕೆ ಸಿಕ್ಕ ಸಣ್ಣ ಉಡುಗೊರೆ!

ರಂಗಸ್ವಾಮಿ ಮೂಕನಹಳ್ಳಿ

ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರ ಒಂದು ಮಾತು ನನ್ನ ತಲೆಯಲ್ಲಿ ಅಚ್ಚಾಗಿ ಬಿಟ್ಟಿದೆ. ಅವರು ಹೇಳುತ್ತಾರೆ "Progress is often equal to the difference between mind and mindset" ಅಭಿವೃದ್ಧಿ ಎಂದರೆ ಅದು ನಮ್ಮ ಮನಸ್ಸು ಮತ್ತು ಮನಸ್ಥಿತಿ ಎರಡರ ನಡುವಿನ ಅಂತರಕ್ಕೆ ಅಥವಾ ಅವುಗಳ ನಡುವಿನ ವ್ಯತ್ಯಾಸಕ್ಕೆ ಸಮವಾಗಿರುತ್ತದೆ ಎನ್ನುತ್ತಾರೆ.

ಮನಸ್ಥಿತಿ ಬದಲಾಯಿಸಿಕೊಂಡರೆ ಬದುಕು ಬದಲಾಯಿಸಿಕೊಳ್ಳಬಹುದು. ಸಿರಿತನ ಮತ್ತು ಬಡತನ ಎನ್ನುವುದು ಮನಸ್ಥಿತಿಯ ಪ್ರತೀಕಗಳು. ನಿಮಗೆ ನಿಮ್ಮ ಗಟ್ ಫೀಲಿಂಗ್, ಒಳಮನಸ್ಸು ಎನ್ನುವುದು ಸ್ಪಷ್ಟವಾಗಿ ಏನನ್ನು ಹೇಳುತ್ತದೆ ಅದನ್ನು ಮಾಡಿ. ನಿಮ್ಮ ಮನಸ್ಸು 'ಗೋ ಫಾರ್ ಇಟ್, ಯು ಹ್ಯಾವ್ ಇಟ್ ಇನ್ ಯು!' ಎಂದರೆ ತಪ್ಪದೆ ಆತ್ಮದ ದನಿಗೆ ಕಿವಿಯಾಗಿ ಸೋಲು ಗೆಲುವು ಎನ್ನುವುದು ಕೇವಲ ಫಲಿತಾಂಶಗಳಷ್ಟೇ! ಖುಷಿ ಇರುವುದು ಕೆಲಸ ಮಾಡುವುರಲ್ಲಿ, ಅಂದುಕೊಂಡದ್ದನ್ನು ಪಡೆಯಲು ನಡೆಯುವ ಹಾದಿಯಲ್ಲಿ!

ಫೆಡ್ರಿಕ್ ಹೆರ್ಜ್ಬೆರ್ಗ್, ಅಮೆರಿಕನ್ ಸೈಕಾಲಾಜಿಸ್ಟ್ ಮತ್ತು ಮೋಟಿವೇಶಲ್ ಸ್ಪೀಕರ್ ಹೇಳುತ್ತಾರೆ" The powerful motivator in our lives isn't money; it's the opportunity to learn, grow in responsibilities, contribute to others, and be recognized for achievements.” ಹಣ ಎನ್ನುವುದು ನಾವು ಮಾಡಿದ ಕೆಲಸಕ್ಕೆ ಸಿಕ್ಕ ಸಣ್ಣ ಉಡುಗೊರೆ, ಅದಕ್ಕಿಂತ ದೊಡ್ಡ ಖುಷಿ ಕೊಡುವುದು ಕಲಿಕೆ, ಸಮಾಜದಲ್ಲಿ ಉಳಿಸಿಕೊಳ್ಳುವ ಪ್ರಸ್ತುತತೆ, ಬೇರೆಯವರಿಂದ ಮಾಡಿದ ಕೆಲಸಕ್ಕೆ ಪಡೆದುಕೊಳ್ಳುವ ಮೆಚ್ಚುಗೆ ಎನ್ನುವುದು ಫೆಡ್ರಿಕ್ ಉವಾಚ.

ಶ್ರೀಮಂತರಾಗಬೇಕು ಎನ್ನುವುದು ಎಂದಿಗೂ ತಪ್ಪಲ್ಲ. ನಮ್ಮ ಅವಶ್ಯಕತೆಗಿಂತ ಮೀರಿದ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಒಂದು ರೀತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎನ್ನುವುದು ಕೂಡ ಸತ್ಯ. ಈ ಸಾಲುಗಳ ಉದ್ದೇಶ ನಾವು ಅಂಬಾನಿಯೂ ಅಥವಾ ಅದಾನಿಯು ಆಗಬೇಕು ಎನ್ನವುದಲ್ಲ. ಬದಲಿಗೆ ನಮ್ಮ ಪ್ರಯತ್ನದಿಂದ ಹಣೆಬರಹವನ್ನು ಬದಲಿಸಿಕೊಳ್ಳೋಣ. ನೆಮ್ಮದಿಯ ಬದುಕಿಗೆ ಬೇಕಾದ ಹಣವನ್ನು ಸಂಗ್ರಹಿಸೋಣ ಎನ್ನುವುದು. ಜಗತ್ತಿನ ಮೊದಲ 1 ಪ್ರತಿಶತದಲ್ಲಿ ಅಥವಾ 10 ಪ್ರತಿಶತದಲ್ಲಿ ನಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಷ್ಟವೇನಲ್ಲ . ನೆನಪಿರಲಿ 27 ಕೋಟಿಗೂ ಮೀರಿದ ಸಂಪತ್ತಿನ ಒಡಯರಾದರೆ ನಾವು ಜಾಗತಿಕ ಮಟ್ಟದಲ್ಲಿ 1 ಪ್ರತಿಶತ ಕ್ಲಬ್ ಸೇರಿದಂತೆ! 16/20 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರೆ ಮೊದಲ 20 ಪ್ರತಿಶತ ಜನರಲ್ಲಿ ನಾವೊಬ್ಬರಾಗಿರುತ್ತೇವೆ. ಸಿರಿವಂತರಾಗುವುದು ಎಂದರೆ ಸಮಯವನ್ನು ಕೊಂಡಂತೆ, ನಮಗೆ ಬೇಕಾದ ಸಮಯದಲ್ಲಿ ನಮಗೆ ಬೇಕಾದ ಕೆಲಸವನ್ನು ಮಾಡಲು ಲೈಸನ್ಸ್ ಪಡೆದುಕೊಂಡಂತೆ! ಮಿಕ್ಕಂತೆ ಹೆಚ್ಚಿನ ಹಣ ಸಂಗ್ರಹಣೆ ಕಂಪ್ಯೂಟರ್ ಪರದೆಯ ಮೇಲೆ ಕೇವಲ ಒಂದು ಸಂಖ್ಯೆ. ಅದು ಒಂದು ಆಟವಾಗಿ ಉಳಿಯುತ್ತದೆ ಅಷ್ಟೇ.

ಅಮೆರಿಕಾದ ಮಾಜಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ "Happiness is not in the mere possession of money; it lies in the joy of achievement, in the thrill of creative effort" ಎನ್ನುತ್ತಾರೆ. ಕೇವಲ ಹಣ ಸಂಗ್ರಹಣೆ ಖುಷಿಗೆ ಕಾಣವಾಗುವುದಿಲ್ಲ, ಸಾಧನೆಯ ಹಾದಿಯಲ್ಲಿ ಹಾಕುವ ನಮ್ಮ ಶ್ರಮ, ಸಿಕ್ಕ ಫಲಿತಾಂಶದ ಸಾಧನೆ ಇವುಗಳು ನಿಜವಾದ ಖುಷಿಗೆ ಕಾರಣವಾಗುತ್ತವೆ ಎನ್ನುವುದು ಫ್ರಾಂಕ್ಲಿನ್ ನಂಬಿಕೆ.

ನೀವು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರಿ?

ಸ್ಯಾಲರಿ ಪಾಥ್: ಜಗತ್ತಿನ ಮುಕ್ಕಾಲು ಪಾಲು ಜನ ಇಲ್ಲಿ ಬರುತ್ತಾರೆ. ನಾವೇನೂ ಆಗಬೇಕು ಎನ್ನುವ ಮನಸ್ಸು ಇರುತ್ತದೆ ಆದರೆ ಮನಸ್ಥಿತಿ ಬದಲಾಯಿಸಿಕೊಳ್ಳುವುದಿಲ್ಲ. ತಿಂಗಳ ಕೊನೆಯಲ್ಲಿ ಬರುವ ಸ್ಯಾಲರಿ ಎನ್ನುವ ಹಣ ಕನಸುಗಳನ್ನು ಕೊಳ್ಳುವ ವಿಷ. ಹಾಗೆಂದು ನಾವು ಇಂದಿಗೆ ನಮ್ಮ ಕೆಲಸ ಬಿಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಬದಲಾವಣೆ ಎನ್ನುವುದು ಒಂದು ದಿನದಲ್ಲಿ ಆಗುವುದಲ್ಲ. ಈ ಮನಸ್ಥಿತಿ ಬದಲಾವಣೆಗೆ ಸಮಯ ಬೇಕು.

ಮಿಡೆಲ್ ಪಾಥ್: ಇದು ಸ್ಯಾಲರಿ ಪಾಥ್ ಎನ್ನವುದರಲ್ಲಿ ಸಂಶಯವಿಲ್ಲ. ಆದರೆ ಇಲ್ಲಿ ಸಿಗುವ ಕಂಪೆನ್ಸೇಷನ್ ಅಥವಾ ಹಣ ನಮ್ಮ ಶ್ರಮಕ್ಕೆ ತಕ್ಕಂತೆ ಇರುತ್ತದೆ. ಇದು ಕನಸಿಗೆ ನೀರೆರೆಯುವ ಕೆಲಸ ಕೂಡ ಮಾಡುತ್ತದೆ. ಇಂದಿನ ದಿನದಲ್ಲಿ ನಾವೇ ಎಲ್ಲವನ್ನೂ ಮಾಡಬೇಕು ಎಂದಿಲ್ಲ. ವೃತ್ತಿಪರರಿಗೆ ಇಂದು ವಿಫುಲ ಅವಕಾಶಗಳಿವೆ. ನಮ್ಮದೇ ಉದ್ದಿಮೆ ತೆರೆಯದೆ ಕೂಡ ಕೋಟ್ಯಧಿಪತಿಯಾಗುವ ಸಾಧ್ಯತೆಗಳಿವೆ. ಇದನ್ನು ಮಿಡಲ್ ಪಾಥ್ ಎಂದದ್ದು.

ನೋ ಪೈನ್, ನೋ ಗೈನ್-ಬಿಸಿನೆಸ್ ಪಾಥ್: ಎಲ್ಲರಿಗೂ ವೇತನಕ್ಕೆ ದುಡಿಯುವ ಮನಸ್ಸಿರುವುದಿಲ್ಲ. ಎಲ್ಲರೂ ಮಿಡ್ ಪಾಥ್ ತೆಗೆದುಕೊಳ್ಳುವ ಕ್ಷಮತೆ ಇರುವುದಿಲ್ಲ. ಇವೆರಡರ ಮಧ್ಯದ ಜನ ವ್ಯಾಪಾರಿಗಳಾಗುತ್ತಾರೆ. ಉದ್ದಿಮೆ ತೆರೆಯುತ್ತಾರೆ. ಈ ದಾರಿಯಲ್ಲಿ ನೋವಿಲ್ಲದೆ ಲಾಭವಿಲ್ಲ. ನೋವು ಎನ್ನುವುದು ಈ ದಾರಿಯಲ್ಲಿ ಸಹಜವಾಗಿ ಜೊತೆಯಾಗುವ ಜೊತೆಗಾರ. ನಮ್ಮದೇ ವಯಸ್ಸಿನ ಜೊತೆಗಾರರು ನೆಮ್ಮದಿಯ ಜೀವನ ನಡೆಸುವಾಗ, ದೂರದ ಊರಿಗೆ ಸುತ್ತಾಟಕ್ಕೆ ಹೋಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿದಾಗ ಸಹಜವಾಗೇ ಪೈನ್ ಉತ್ಪನ್ನವಾಗುತ್ತದೆ. ಇದು ಬೇಕಿತ್ತಾ ಎನ್ನಿಸುತ್ತದೆ. ಆದರೆ ನೆನಪಿರಲಿ ಈ ನೋವನ್ನು ಜಯಸಿದರೆ ಮಾತ್ರ ನಮ್ಮ ಅದೃಷ್ಟವನ್ನು ನಾವು ಬರೆದುಕೊಳ್ಳಬಹುದು. ಹೀಗೆ ನಮ್ಮ ಹಣೆಬರವನ್ನು ನಾವೇ ಬರೆದುಕೊಳ್ಳಲು ಕೂಡ ಕೆಲವೊಂದು ಟಿಪ್ಸ್ಗಳು ಲಭ್ಯವಿದೆ.

ಇಂದು ನಾವು ಸಾಗುತ್ತಿರುವ ದಾರಿಯಲ್ಲಿ ಈಗಾಗಲೇ ಸಾವಿರಾರು ಮಹಾತ್ಮರು ಸಾಗಿ ಹೋಗಿರುವ ಕಾರಣ ಅವರು ನೀಡಿರುವ ಸಲಹೆಗಳೇ ನಮಗೆ ಟಿಪ್ಸ್.

  • ನೆಟ್ವರ್ಕ್ ಬೆಳಸಿಕೊಳ್ಳಬೇಕು: ಲೀ ಕ ಶಿಂಗ್ ಮಾಡಲ್ ಪ್ರಕಾರ ನಾವು ದುಡಿದ 100 ರೂಪಾಯಿಯಲ್ಲಿ 20 ರೂಪಾಯಿ ನೆಟ್ವರ್ಕ್ ಬೆಳಸಿಕೊಳ್ಳಲು ಖರ್ಚು ಮಾಡಬೇಕು ಎನ್ನುತ್ತದೆ. ಉತ್ತಮ ಸ್ನೇಹ ವಲಯ, ಸಮಾನಮನಸ್ಕರ ವೃಂದ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುತ್ತದೆ. ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ.

  • ಹೊಸ ವಿಷಯಗಳಿಗೆ ಸನ್ನದ್ಧರಾಗಿರಬೇಕು: ಸಮಾಜದಲ್ಲಿ ಹೊಸತಿಗೆ ಹೆದರುವವರ ಸಂಖ್ಯೆ ಬಹಳ ಹೆಚ್ಚು. ಹೀಗಾಗಿ ನಾವು ಚಾನ್ಸ್ ತೆಗೆದುಕೊಳ್ಳಬೇಕು. ಕಡಿಮೆ ಜನರು ತೆಗೆದುಕೊಂಡ ಹಾದಿಯಲ್ಲಿ ನಾವು ಸಾಗಿದರೆ ಗೆಲುವಿನ ಸಾಧ್ಯತೆ, ಸಂಭಾವ್ಯತೆ ಹೆಚ್ಚಾಗುತ್ತದೆ. ರೋಡ್ ಲೆಸ್ ಟೇಕನ್ ಎಂದಾಗ ಅಲ್ಲಿ ಚಾಲೆಂಜ್ ಕೂಡ ಇದ್ದೆ ಇರುತ್ತದೆ. ಹೊಸ ದಾರಿ= ಹೊಸ ಅವಕಾಶ= ಹೊಸ ಅಪಾಯ. ಇದಕ್ಕೆ ಸಿದ್ಧವಿರಬೇಕು.

  • ಕೆಳಗೆ ಬೀಳುವ ಅಪಾಯ ಬೇಕಿಲ್ಲ: ನಾವಿದ್ದರೆ ಬೇಕಾದು ಸಾಧಿಸಬಹುದು. ಹೀಗಾಗಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವ ಅಪಾಯ ಬೇಕಿಲ್ಲ. ನೂರು ರೂಪಾಯಿ ಮುಳುಗಿ ಹೋದರೆ ಹೋಗಲಿ ಅದರಿಂದ ನನ್ನ ಜೀವನಕ್ಕೆ ತೊಂದರೆಯಿಲ್ಲ ಎನ್ನುವಂತಿದ್ದರೆ ಮಾತ್ರ ನೂರು ರೂಪಾಯಿ ಅಪಾಯ ತೆಗೆದುಕೊಳ್ಳಬಹುದು. ನೂರು ರೂಪಾಯಿ ಜೀವನ್ಮರಣದ ಪ್ರಶ್ನೆ ಎಂದಾಗ ನೂರು ರೂಪಾಯಿ ಅಪಾಯಕ್ಕೆ ಒಡ್ಡಬಾರದು. ಅರ್ಥವಿಷ್ಟೆ ಕೈ ಮೀರಿದ ಅಪಾಯ ತೆಗೆದುಕೊಳ್ಳುವುದು ಬೇಡ. ಲೆಕ್ಕಾಚಾರದ ಅಪಾಯ ತೆಗೆದುಕೊಳ್ಳಬೇಕು. ಕಾಣದ ನಾಳೆಗಾಗಿ ಇಂದಿನ ದಿನವನ್ನು ಬಲಿಕೊಡುವಂತಿಲ್ಲ.

  • ತಪ್ಪುಗಳಿಂದ ಕಲಿಯಬೇಕು: ವ್ಯಾಪಾರ, ಉದ್ದಿಮೆ ಎಂದರೆ ಸೋಲು. ಹೌದು ಮೊದಲು ಈ ಮನಸ್ಥಿತಿಯನ್ನು ವೃದ್ಧಿಸಿಕೊಳ್ಳಬೇಕು. ಸೋಲು ಎನ್ನುವುದು ನೆರಳಿನಂತೆ ಸದಾ ಹಿಂಬಾಲಿಸುತ್ತಿರುತ್ತದೆ. ತಪ್ಪುಗಳು ಆಗುತ್ತವೆ. ತಪ್ಪು ಎಂದು ಕೂರುವುದರ ಬದಲು ತಪ್ಪುಗಳಿಂದ ಕಲಿತು ಮುಂದಕ್ಕೆ ಹೆಜ್ಜೆ ಇಡುವ ಸ್ವಭಾವ ನಮ್ಮದಾಗಬೇಕು.

  • ಕೆಟ್ಟ ಸಮಯದಲ್ಲಿ ಅವಕಾಶ ಹೆಚ್ಚು : ಸಾಮಾನ್ಯವಾಗಿ ಕೆಟ್ಟ ಸಮಯ ಎಂದರೆ ಹೆದರುವವರು ಹೆಚ್ಚು, ವ್ಯಾಪಾರಾದಲ್ಲಿ ಕುಸಿತವಾದರೆ ಎಂದು ಭಯ ಪಡುವವರ ಸಂಖ್ಯೆ ಅಸಂಖ್ಯ. ಆದರೆ ಅಡ್ವರ್ಸಿಟಿಯಲ್ಲಿ ಅವಕಾಶ ಹೆಚ್ಚಾಗುತ್ತದೆ. ಯಾರೊಬ್ಬರೂ ಮುಂದೆ ಬಾರದ ಸಮಯದಲ್ಲಿ ಇಡುವ ಪ್ರಥಮ ಹೆಜ್ಜೆಗಳು ದೈತ್ಯ ಹೆಜ್ಜೆಗಳಾಗುತ್ತದೆ.

  • ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು: ಯಾ ಸುಪ್ತೆಶು ಜಾಗ್ರತ ಎನ್ನುವ ಮಾತಿನಂತೆ ಸದಾ ಜಾಗ್ರತವಾಗಿ, ಸನ್ನದ್ಧ ಸ್ಥಿತಯಲಿದ್ದರೆ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳುವುದು ಸುಲಭವಾಗುತ್ತದೆ. ತಪ್ಪುಗಳು ಕಡಿಮೆಯಾಗುತ್ತದೆ.

ಕೊನೆ ಮಾತು: ಈ ದಾರಿಯಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಸೋಲಿನ ಜೊತೆಗೆ ಬರುವ ನಷ್ಟ ಎನ್ನುವ ಹಣಕಾಸು ಬಿಕ್ಕಟ್ಟು . ಉದ್ಯಮ ಚನ್ನಾಗಿ ನಡೆಯುತ್ತಿದ್ದರೂ ಕೂಡ ಅದು ಇನ್ನಷ್ಟು ಬಂಡವಾಳವನ್ನು ಬೇಡುತ್ತದೆ. ಹೆಚ್ಚಿನ ಬಂಡವಾಳ ಹೂಡುವುದು ಎಂದರೆ ದೊಡ್ಡ ಮಟ್ಟದ ನಷ್ಟಕ್ಕೆ ತಯಾರಾಗುವುದು ಎನ್ನುವ ಮನಸ್ಥಿತಿ ನಮ್ಮದಾಗಿರಬೇಕು ಎನ್ನುತ್ತಾರೆ ಅಮೆರಿಕಾದ ವ್ಯಾಲ್ಯೂ ಇನ್ವೆಸ್ಟ್ಮೆಂಟ್ ಪಿತಾಮಹ ಬೆಂಜಮಿನ್ ಗ್ರಹಾಂ . ಮುಂದುವರೆದು ಹೇಳುತ್ತಾರೆ ಅಭಿವೃದ್ಧಿ ಹೊಂದಲು , ಹೆಚ್ಚಿನ ಸಂಪತ್ತು ಸೃಷ್ಟಿಸಲು ಇರುವುದೊಂದೇ ಮಾರ್ಗ ಅದು ಹೂಡಿಕೆ. ಆದರೆ ನಾವು ಯಾವಾಗ ಕೆಟ್ಟ ಪರಿಣಾಮಕ್ಕೆ ಸಿದ್ಧರಾಗಿರುತ್ತೇವೆ ಆಗ ಸೋಲಿನ ಭಯ ಕಡಿಮೆಯಾಗುತ್ತದೆ. ಯಶಸ್ಸು ನಮ್ಮದಾಗುತ್ತದೆ.

ಪ್ರಸಿದ್ಧ ಇಂಗ್ಲಿಷ್ ಬರಹಗಾರ ಲಾರೆನ್ಸ್ 'A Man Is Only As Big As His Dreams' ಎಂದಿದ್ದರು. ಅಂದಿನ ದಿನಕ್ಕೆ ಅದು ಸರಿಯಾದ ಮಾತು. ಇಂದಿನ ದಿನದಲ್ಲಿ ಅದನ್ನು 'A person Is Only As Big As His/her Dreams' ಎನ್ನಬಹುದು. ಇಂದು ಲಿಂಗಭೇಧವಿಲ್ಲದೆ ಅವಕಾಶಗಳು ಹೇರಳವಾಗಿವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮಕೈಲಿದೆ.

SCROLL FOR NEXT