ಎಚ್ ಡಿ ಕುಮಾರಸ್ವಾಮಿ online desk
ಅಂಕಣಗಳು

ವಿಲೀನವೊ… ವಿಚ್ಛೇದನವೋ..? ಕುಮಾರಸ್ವಾಮಿ ತೊಳಲಾಟ! (ಸುದ್ದಿ ವಿಶ್ಲೇಷಣೆ)

ವಿಲೀನ ಅಥವಾ ವಿಚ್ಛೇದನ…. ಯಾವುದು ಲಾಭ? ಯಾವುದು ನಷ್ಟ? ಇಡೀ ದೇಶದಲ್ಲಿ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ನಂತರ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತಲೆದೋರಿರುವ ಗೊಂದಲ ಇದು.

ವಿಲೀನ ಅಥವಾ ವಿಚ್ಛೇದನ…. ಯಾವುದು ಲಾಭ? ಯಾವುದು ನಷ್ಟ?

ಇಡೀ ದೇಶದಲ್ಲಿ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ನಂತರ ಬಿಜೆಪಿ ಮತ್ತು ಜೆಡಿಎಸ್ (JDS) ನಲ್ಲಿ ತಲೆದೋರಿರುವ ಗೊಂದಲ ಇದು. ಒಂದು ರೀತಿಯಲ್ಲಿ ಇಡೀ ಪ್ರಕರಣ ಜೆಡಿಎಸ್ ನ ಅಸ್ತಿತ್ವಕ್ಕೇ ಸಂಚಕಾರ ತಂದಿದೆ. ಪ್ರಕರಣದ ಸತ್ಯಾಸತ್ಯತೆಗಳು ಏನೇ ಇರಲಿ, ಅದರಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಜೆಡಿಎಸ್ ನಾಯಕರು ನಡೆಸುತ್ತಿರುವ ಕಸರತ್ತು ಯಾವುದೇ ಪ್ರಯೋಜನ ತಂದಿಲ್ಲ ಎಂಬುದಂತೂ ಸತ್ಯ.

ಇದೇ ವೇಳೆ ಇಡೀ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ತನ್ನ ಪರಂಪರಾನುಗತ ವೈರಿ ಬಿಜೆಪಿ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ. ದಿನದಿಂದ ದಿನಕ್ಕೆ ಬಿಜೆಪಿಯನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ (congress) ಯಶಸ್ವಿಯಾಗಿದೆ. ಈ ಪರಿಸ್ತಿತಿಯ ಹಿನ್ನಲೆಯಲ್ಲೇ ಜೆಡಿಎಸ್ ಜತೆ ಮೈತ್ರಿ ಮುಂದುವರಿಸಬೇಕೇ? ಬೇಡವೆ? ಎಂಬ ಗೊಂದಲಕ್ಕೆ ಬಿಜೆಪಿ (BJP) ರಾಷ್ಟ್ರೀಯ ನಾಯಕರು ಸಿಕ್ಕಿದ್ದಾರೆ. ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪಕ್ಷದ ಸ್ಥಳಿಯ ನಾಯಕರು, ಮುಖಂಡರ ಇಚ್ಛೆಗೆ ವಿರುದ್ಧವಾಗಿ ಮಾಡಿಕೊಂಡ ಮೈತ್ರಿಯಿಂದ ಬಿಜೆಪಿಗಾಗಲೀ ಜೆಡಿಎಸ್ ಗಾಗಲೀ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪ್ರಯೋಜನವಾದಂತೆ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ.

ಜೆಡಿಎಸ್ ಜತೆಗಿನ ಮೈತ್ರಿಯಿಂದ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳಲ್ಲಿ ತನಗೆ ಸಹಾಯ ಆಗಬಹುದೆಂಬ ಬಿಜೆಪಿಯ ನಂಬಿಕೆ ಫಲ ನೀಡಿದಂತೆ ಕಾಣುತ್ತಿಲ್ಲ. ಆದರೂ ಜೂನ್ ನಾಲ್ಕರ ಫಲಿತಾಂಶದ ವರೆಗೆ ಕಾದು ನೋಡಿ ನಂತರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲು ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ನಡೆದಿರುವ ಮತದಾನದ ಲೆಕ್ಕಾಚಾರಗಳನ್ನು ಅಂದಾಜಿಸಿ ಹೇಳಬಹುದಾದರೆ ಬಿಜೆಪಿ- ಜೆಡಿಎಸ್ ಮೈತ್ರಿ ಕೆಳ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ನೀಡುವ ಯಾವುದೇ ಲಕ್ಷಣಗಳು ಕಂಡಿಲ್ಲ. ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಸಮನ್ವಯತೆಯೇ ಮೂಡಿಲ್ಲ. ಹೀಗಾಗಿ ಮೈತ್ರಿ ಮುಂದುವರಿದರೂ ಅಷ್ಟೆ, ಬಿಟ್ಟರೂ ಅಷ್ಟೆ ಎಂಬ ಚರ್ಚೆ ಬಿಜೆಪಿ ಪಾಳೇಯದಲ್ಲಿ ನಡೆದಿದೆ.

ದೇಶದಾದ್ಯಂತ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣದಲ್ಲಿ ಜೆಡಿಎಸ್ ನಾಯಕತ್ವ ಮುಜುಗುರದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ. ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಗೌಡರ ಕುಟುಂದವರೇ ಆದ ಶಾಸಕ ರೇವಣ್ಣ ಆರೋಪ ಹೊತ್ತು ವಿಚಾರಣಾಧೀನ ಕೈದಿಯಾಗಿ ಜೈಲು ಪಾಲಾಗಬೇಕಾಗಿ ಬಂದಿರುವುದು ಆ ಪಕ್ಷದ ನಾಯಕತ್ವಕ್ಕೆ ದೊಡ್ಡ ಆಘಾತ. ಮತ್ತೊಂದು ಪ್ರಕರಣದಲ್ಲಿ ಅತ್ಯಾಚಾರದ ಆರೋಪಕ್ಕೆ ಸಿಲುಕಿರುವ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಪರಾರಿ ಆಗಿದ್ದು ಪ್ರಕಣದ ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಹಾಜರಾಗದೇ ಇರುವುದು ಸಾರ್ವತ್ರಿಕವಾಗಿ ಆ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಈ ವಿಚಾರದಲ್ಲಿ ಬಹಿರಂಗವಾಗಿ ಆ ಪಕ್ಷದ ಶಾಸಕರದ್ದು ಏನೇ ನಿಲುವು ಇರಲಿ ಹೆಚ್ಚುಪಾಲು ಸಂಖ್ಯೆಯ ಶಾಸಕರಿಗೆ ತಮ್ಮ ಭವಿಷ್ಯದ ರಾಜಕೀಯ ಅಸ್ತಿತ್ವದ ಕುರಿತಾಗೇ ಆತಂಕ ಎದುರಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಸ್ಪಷ್ಟ ನಿಲುವ ತೆಗೆದುಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಒಂದು ಕಡೆ ಕುಟುಂಬ ಮತ್ತೊಂದು ಕಡೆ ರಾಜಕೀಯ ಅಸ್ತಿತ್ವದ ಉಳಿವಿನ ಗೊಂದಲಕ್ಕೆ ಸಿಕ್ಕಿದ್ದಾರೆ. ಇದರ ಫಲವೇ ಅವರು ನೀಡುತ್ತಿರುವ ಹೇಳಿಕೆಗಳು ವ್ಯರ್ಥಾಲಾಪದಂತೆ ಕಾಣುತ್ತಿದೆ.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಕಳೆದ ವರ್ಷವೇ ಸಾರ್ವಜನಿಕವಾಗಿ ಸುದ್ದಿ ಆಗಿತ್ತು. ಈ ಪ್ರಕರಣದ ಬಗ್ಗೆ ಹೊಳೆ ನರಸೀಪುರದ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಪೂರ್ಣ ಮಾಹಿತಿಯೂ ಇತ್ತು. ಅದನ್ನು ಅವರು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ರವಾನಿಸಿದ್ದರು. ಆದರೂ ಅದನ್ನು ಲೆಕ್ಕಿಸದ ಬಿಜೆಪಿ ರಾಷ್ಟ್ರೀಯ ನಾಯಕತ್ವ ಜೆಡಿಎಸ್ ಜತೆಗೆ ಮೈತ್ರಿಗೆ ಆಸಕ್ತಿ ತೋರಿತು. ಹೀಗಾಗಿ ಇಡೀ ಪ್ರಕರಣದ ಮಾಹಿತಿ ಬಿಜೆಪಿ ನಾಯಕರಿಗೆ ಮೊದಲೇ ಇತ್ತು ಎಂಬುದನ್ನು ದೇವರಾಜೇಗೌಡ ಅವರೇ ಒಪ್ಪಿಕೊಂಡಿದ್ದಾರೆ.

ಇದೀಗ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆಯಾದರೂ ಅವರನ್ನು ಇನ್ನೂ ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆದಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹೆಚ್ಚು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ. ಈಗಿರುವ ಪ್ರಶ್ನೆ ಎಂದರೆ ಕಾನೂನಿನ ಅವಕಾಶ ಬಳಸಿಕೊಂಡು ವಿದೇಶದಲ್ಲಿರುವ ಪ್ರಜ್ವಲ್ ನನ್ನು ಬಂಧಿಸಿ ಕರೆತರಲು ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ ಮುಂದಾಗುತ್ತದೆಯೆ? ಎಂಬುದು.

ಈಗ ಈ ಪ್ರಕರಣದ ತನಿಖೆ ಸ್ವರೂಪ ಸರಿ ಇಲ್ಲ ಎಂದು ಆಕ್ಷೇಪಿಸಿ ಜೆಡಿಎಸ್ ರಾಜಭವನದ ಕದ ತಟ್ಟಿದೆ. ಈಗಾಗಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ರಾಜ್ಯಪಾಲರು ಇಂತಹ ಸನ್ನಿವೇಶದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆಗಳು ತಿರಾ ಕಡಿಮೆ. ಹೆಚ್ಚೆಂದರೆ ಗೃಹ ಖಾತೆ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಕರೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಪಡೆಯಬಹುದು ಅದು ಹೊರತುಪಡಿಸಿದರೆ ಇಂತಹ ಪ್ರಕರಣಗಳಲ್ಲಿ ನೇರವಾಗಿ ರಾಜಭವನ ಮಧ್ಯಪ್ರವೇಶಿಸಲು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಸಾಂವಿಧಾನಿಕ ಬಿಕ್ಕಟ್ಟೇ ಅಲ್ಲ.

ಕಾಂಗ್ರೆಸ್ ನಾಯಕರ ವಿರುದ್ಧ ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹೊರಹಾಕುತ್ತಿರುವ ಕುಮಾರಸ್ವಾಮಿ ತಮ್ಮದೇ ಮಿತ್ರ ಪಕ್ಷದ ಮುಖಂಡರ ಕುರಿತಾಗಿ ಅನೇಕ ಸಂಗತಿಗಳು ಗೊತ್ತಿದ್ದರೂ ಅದರ ವಿರುದ್ಧ ಆಕ್ರೋಶ ಹೊರಹಾಕಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಇದೀಗ ಈ ಪ್ರಕರಣ ಸಹಜವಾಗೇ ಒಕ್ಕಲಿಗ ನಾಯಕತ್ವದ ಸಂಘರ್ಷದ ವೇದಿಕೆಯಾಗಿ ತಿರುವು ಪಡೆದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸುತ್ತಿದ್ದರೆ, ಕಾಂಗ್ರೆಸ್ ನ ಒಕ್ಕಲಿಗ ಶಾಸಕರು, ಸಚಿವರು ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕತ್ವದ ಪಟ್ಟಕ್ಕೆ ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ನಡುವೆ ನಡೆಯುತ್ತಿರುವ ಹೋರಾಟ ನಿನ್ನೆಮೊನ್ನೆಯದೇನಲ್ಲ. ಹೀಗಾಗಿ ಇಡೀ ಪ್ರಕರಣ ಸಮುದಾಯದ ನಾಯಕತ್ವದ ಹೋರಾಟವಾಗಿ ರೂಪುಗೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಇಡೀ ಪ್ರಕರಣದ ತನಿಖೆ ನಡೆದಿರುವ ಸಂದರ್ಭದಲ್ಲೇ ಕೆಲವೊಂದು ವಿದ್ಯಮಾನಗಳನ್ನು ಗಮನಿಸಿದರೆ ಸತ್ಯಾಂಶ ಹೊರ ಬರಲು ಇನ್ನೂ ಸುದೀರ್ಘ ಕಾಲ ಬೇಕಾಗಬಹುದು. ಆದರೆ ಈ ಪರಿಸ್ಥಿತಿಯಿಂದ ಜೆಡಿಎಸ್ ಇಕ್ಕಟ್ಟಿಗೆ ಸಿಕ್ಕಿರುವುದಂತೂ ಸತ್ಯ. ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ಸ್ಪಷ್ಟ ದಿಕ್ಕನ್ನು ನಿರ್ಧರಿಸುವ ಎಲ್ಲ ಸಾಧ್ಯತೆಗಳೂ ಇವೆ. ಇದೇ ವೇಳೆ ತಮ್ಮ ಪುತ್ರನಿಗೊಂದು ಸುಭದ್ರ ರಾಜಕೀಯ ನೆಲಲೆ ಕಲ್ಪಿಸಲು ಕಸರತ್ತು ನಡೆಸಿರುವ ಕುಮಾರಸ್ವಾಮಿ ರಾಜಕೀಯವಾಗಿ ಒಂದು ಸ್ಪಷ್ಟ ತೀರ್ಮಾನ ಕೈಗೊಳ್ಳುವ ಅನಿವಾರ್ಯತೆ ಬರುವ ಸಾಧ್ಯತೆಗಳೂ ಇಲ್ಲದಿಲ್ಲ. ಒಂದು ವೇಳೆ ಮೈತ್ರಿ ರಾಜ್ಯದಲ್ಲಿ ನಿರೀಕ್ಷಿತ ಫಲ ನೀಡದಿದ್ದರೆ ಬಿಜೆಪಿಯೇ ಜೆಡಿಎಸ್ ನಿಂದ ದೂರ ಸರಿಯುವ ಎಲ್ಲ ಸಾಧ್ಯತೆಗಳು ಇವೆ. ಸದ್ಯಕ್ಕೇನೋ ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತು ಮಾಡಲಾಗಿದೆ. ಮುಂದೆ ಉಚ್ಛಾಟಿಸಲೂ ಬಹುದು. ಆದರೆ ಒಂದು ವೇಳೆ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಗೆದ್ದರೆ ಆಗ ಲೋಕಸಭೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಇದೇ ತೀರ್ಮಾನಕ್ಕೆ ಅಂಟಿಕೊಳ್ಳುತ್ತದೆಯೆ? ಎಂಬ ಕುರಿತು ಈಗಲೇ ಚರ್ಚೆಗಳು ಆರಂಭವಾಗಿವೆ.

ಚುನಾವಣೆಯ ನಂತರ ಜೆಡಿಎಸ್ ಮತ್ತೆ ದುರ್ಬಲವಾದರೆ ಆಗ ಅಲ್ಲಿರುವ 19 ಶಾಸಕರ ಪೈಕಿ ಮೂವರು- ನಾಲ್ವರನ್ನು ಹೊರತುಪಡಿಸಿ ಉಳಿದವರು ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಸೇರುವ ನಿರ್ಧಾರ ಕೈಗೊಳ್ಳಬಹುದು. ಅಂಥದೊಂದು ಅಪಾಯವನ್ನು ಮುಂದಾಗಿಯೇ ನಿರೀಕ್ಷಿಸಿರುವ ಕುಮಾರಸ್ವಾಮಿ ಸಂದರ್ಭ ಎದುರಾದರೆ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುತ್ತಾರೆ ಎಂಬ ಮಾತುಗಳು ಜೆಡಿಎಸ್ ಪಾಳೇಯದಲ್ಲಿ ಕೇಳಿ ಬರುತ್ತಿದೆ. ಇದರಿಂದ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಅನುಕೂಲಗಳು ಹೆಚ್ಚು. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ನ್ನು ಸ್ವತಂತ್ರವಾಗಿ ಸಂಘಟಿಸಿ ಅಧಿಕಾರಕ್ಕೆ ತರುವ ಶಕ್ತಿ ಕುಮಾರಸ್ವಾಮಿಯವರಿಗೂ ಇಲ್ಲ. ಏಕೆಂದರೆ ತಮ್ಮ ತಂದೆ ಮಾಜಿ ಪ್ರಧಾನಿ ದೇವೇಗೌಡರಂತೆ ಅವರದ್ದು ಜನಪರ ಅಥವಾ ಸೈದ್ಧಾಂತಿಕ ಹೋರಾಟದ ಮನೋಭಾವವಲ್ಲ. ಗೌಡರಿಗೆ ಈಗ 92 ವರ್ಷ ಮೊದಲಿನಂತೆ ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸುವ ಉತ್ಸಾಹ ಇದೆಯಾದರೂ ವಯಸ್ಸು, ಆರೋಗ್ಯ ಪೂರಕವಾಗಿಲ್ಲ. ಕಾಂಗ್ರೆಸ್ ಜತೆ ಹೊಂದಾಣಿಕೆ ಜೆಡಿಎಸ್ ಗೆ ಸಾಧ್ಯವೇ ಇಲ್ಲ. ಹೀಗಾಗಿ ಬಿಜೆಪಿಯೇ ಸದ್ಯಕ್ಕೆ ಕುಮಾರಸ್ವಾಮಿಗೆ ಅನಿವಾರ್ಯ. ವಿಲೀನ ಅನಿವಾರ್ಯವೇ ಆದರೆ ಅವರು ಸಿದ್ಧರಾಗಬಹುದು. ಆದರೆ ಈಗಿನ ಸನ್ನಿವೇಶದಲ್ಲಿ ಮೊದಲಿನಂತೆ ಬಿಜೆಪಿ ಅವರನ್ನು ಒಪ್ಪಿಕೊಳ್ಳುವ ಸ್ಥಿತಿ ಇಲ್ಲ. ನಿಧಾನವಾಗಿ ಅವರನ್ನು ದೂರ ಇಡುವ ಪ್ರಕ್ರಿಯೆ ಆರಂಭಿಸಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಕಂಗೆಟ್ಡಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಹೆಣೆದ ಬಲೆಯಿಂದ ಹೊರಬರಲೂ ಆಗದ ಸ್ಥಿತಿಗೆ ಮುಟ್ಟಿದ್ದಾರೆ. ಇದೆಲ್ಲ ಏನೇ ಇರಲಿ. ಪ್ರಜ್ವಲ್ ವಿರುದ್ಧ ನಡೆಯುತ್ತಿರುವ ತನಿಖೆಯನ್ನ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನಗಳು ತಲೆ ಎತ್ತಿವೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT