ಬಹಿರಂಗದಲ್ಲಿ ತೋರಿಕೆಗೆ ನಿಷ್ಠೆ, ಆದರೆ ತೆರೆಯ ಮರೆಯಲ್ಲಿ ಕುರ್ಚಿಗೆ ಪೈಪೋಟಿ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ನಡೆದಿರುವ ಬಣ ಬಡಿದಾಟದ ಕತೆ ಇದು. ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಸದ್ಯಕ್ಕೆ ಮುಂದುವರಿದಿದ್ದಾರೆ. ಮೈಸೂರಿನ ನಿವೇಶನ ಹಗರಣದ ಆರೋಪ ಹೊತ್ತಿರುವ ಅವರ ವಿರುದ್ಧ ಇದೀಗ ಜಾರಿ ನಿರ್ದೇಶನಾಲಯದ ತನಿಖೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಮತ್ತೊಂದು ಕಡೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ವಿರುದ್ಧ ಕಾನೂನು ಹೋರಾಟ ಮುಂದುವರಿಸಿರುವ ಅವರು ಕುರ್ಚಿ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ಯುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ. ಕಾಂಗ್ರೆಸ್ ಹೈಕಮಾಂಡ್ ಕೂಡಾ ರಾಜೀನಾಮೆ ಕೊಡಿ ಎಂದು ಧೈರ್ಯವಾಗಿ ಅವರಿಗೆ ಸೂಚಿಸುವ ಸ್ಥಿತಿಯಲ್ಲಿ ಇಲ್ಲ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು ಒಬ್ಬೊಬ್ಬರೇ ದಿಲ್ಲಿಗೆ ಹೋಗಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸುತ್ತಿದ್ದಾರೆ. ಬಹಿರಂಗವಾಗಿ ತಮ್ಮ ಮಹದಾಸೆ ತೋಡಿಕೊಳ್ಳದಿದ್ದರೂ ಸಂದರ್ಭ ಒದಗಿ ಬಂದರೆ ತಮ್ಮನ್ನೇ ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವಂತೆ ಬೇಡಿಕೆ ಇಟ್ಟು ಬರುತ್ತಿದ್ದಾರೆ.
ಇತ್ತೀಚೆಗೆ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಆರೋಗ್ಯ ವಿಚರಿಸುವ ನೆಪದಲ್ಲಿ ದಿಲ್ಲಿಯಲ್ಲಿ ಭೆಟಿ ಮಾಡಿ ಮಾತುಕತೆ ನಡೆಸಿರುವುದು ಪೂರಕ ಬೆಳವಣಿಗೆ. ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ಆರಂಭವಾದ ನಂತರ ಅವರು ಪದೇ ಪದೇ ದಿಲ್ಲಿಗೆ ಭೇಟಿ ನೀಡಿ ಕಾಂಗ್ರೆಸ್ ವರಿಷ್ಠರನ್ನಷ್ಟೇ ಅಲ್ಲ, ಬಿಜೆಪಿಯ ಕೆಲವು ನಾಯಕರನ್ನೂ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಧಕಾರಾವಧಿಯ ಎರಡು ವರ್ಷದ ಅವಧಿ ಪೂರ್ಣಗೊಂಡ ನಂತರ ಆಂತರಿಕ ಒಪ್ಪಂದದ ಪ್ರಕಾರ (ಅದನ್ನು ಅಧಿಕೃತವಾಗಿ ಕಾಂಗ್ರೆಸ್ ಎಲ್ಲೂ ಪ್ರಕಟಿಸಿಲ್ಲ) ಮುಖ್ಯಮಂತ್ರಿ ಹುದ್ದೆಗೆ ಏರುವ ಕನಸು ಹೊತ್ತಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಿನ 3.5 ವರ್ಷದ ಅವಧಿ ಪೂರ್ಣಗೊಳ್ಳುವವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಹಲವು ಅಚ್ಚರಿಗೆ ಕಾರಣರಾಗಿದ್ದಾರೆ. ಮತ್ತೊಂದು ಕಡೆ ಆಯ್ದ ಕೆಲವು ಸಚಿವರು ಗೃಹ ಸಚಿವ ಡಾ. ಜಿ.ಪರಮೇಶ್ವರ್ ರವರ ಮನೆಯಲ್ಲಿ ಆಗಾಗ್ಗೆ ಸಭೆ ಸೇರುವುದು ಈ ಸಭೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದರೆ ಊಟಕ್ಕೆ ಸೇರಿದ್ದೆವು, ಉಭಯ ಕುಶಲೋಪರಿ ಮಾತಾಡಲು ಸೇರಿದ್ದೆವು ಎಂಬೆಲ್ಲ ಸಬೂಬುಗಳನ್ನು ಹೇಳುವ ಮೂಲಕ ಏನೂ ಬೆಳವಣಿಗೆಗಳೇ ನಡೆದಿಲ್ಲ ಎನ್ನುವಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಈ ಎಲ್ಲ ಕ್ರಿಯೆ – ಪ್ರತಿಕ್ರಿಯೆಗಳ ಒಟ್ಟು ಅರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡೇ ಪ್ರಯೊಗ ಆರಂಭಿಸಿದೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಸೇರಿದಂತೆ ರಾಷ್ಟ್ರೀಯ ನಾಯಕರಿಗೆ ಇಲ್ಲಿನ ಬೆಳವಣಿಗೆಗಳ ಪೂರ್ಣ ಮಾಹಿತಿ ಇದೆ. ಅವರಿಗೆ ಗೊತ್ತಿದ್ದೇ ಅಥವಾ ಅವರ ಸೂಚನೆಗನುಸಾರವಾಗೇ ಈ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಬೆಳವಣಿಗೆಗಳ ಸ್ಪಷ್ಟ ಮಾಹಿತಿ ಇದೆ.
ಒಂದಂತೂ ಸ್ಪಷ್ಟ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತ್ಯಜಿಸದೇ ಇರಲು ನಿರ್ಧರಿಸಿದ್ದಾರೆ. ಹಾಗೊಂದು ವೇಳೆ ಒತ್ತಡಕ್ಕೆ ಕಟ್ಟು ಬಿದ್ದು ರಾಜೀನಾಮೆ ನೀಡಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅಪ್ರಸ್ತುತವಾಗಿಬಿಡುವ ಎಲ್ಲ ಅಪಾಯಗಳ ಅರಿವು ಅವರಿಗಿದೆ. ತಮ್ಮ ಉತ್ತರಾಧಿಕಾರಿ ಸ್ಥಾನಕ್ಕೆ ಸತೀಶ ಜಾರಕಿಹೊಳಿ ಅಥವಾ ಇನ್ಯಾರ ಹೆಸರನ್ನೋ ಅವರು ಸೂಚಿಸಿದ್ದಾರೆಂಬುದಾಗಲೀ ಅಥವಾ ಸೂಚಿಸುತ್ತಾರೆಂಬುದನ್ನಾಗಲೀ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಯಾವುದೇ ನಾಯಕನೂ ಅಂಥದೊಂದು ತ್ಯಾಗಕ್ಕೆ ಸುಲಭವಾಗಿ ಮುಂದಾಗುವುದು ಕೇವಲ ಊಹೆ ಅಷ್ಟೆ.
ಹಾಗಿದ್ದಮೇಲೆ ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು? ಎಂದು ಆಳಕ್ಕಿಳಿದು ನೋಡಿದರೆ ಇದು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಎಂಬ ಸಂಗತಿ ಬಯಲಾಗುತ್ತದೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಎಷ್ಟೇ ಹೇಳಲಿ ಸಿದ್ದರಾಮಯ್ಯ ಆ ಹುದ್ದೆಯಲ್ಲಿ ಮುಂದುವರಿಯುವುದು ವರಿಷ್ಠರಿಗೆ ಬೇಕಾಗಿಲ್ಲ. ಇದಕ್ಕೆ ಕಾರಣ ಹೈಕಮಾಂಡ್ ಹೇಳಿದ್ದಕ್ಕೆಲ್ಲ ಒಪ್ಪಿ ತಲೆಯಾಡಿಸಿ ಅದನ್ನು ಪಾಲಿಸುವ ವ್ಯಕ್ತಿ ಅವರಲ್ಲ. ರಾಜ್ಯದಲ್ಲಿ ಇವತ್ತಿಗೂ ಅವರ ಹಿಂದೆ ಅಹಿಂದ ವರ್ಗಗಳ ದೊಡ್ಡ ಪಡೆಯೇ ಇದೆ. ಅಂತಹ ಪ್ರಭಾವಿ ವ್ಯಕ್ತಿ ಕಾಂಗ್ರೆಸ್ , ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳಲ್ಲೂ ಇಲ್ಲ.ಹಾಗಂತ ಅವರನ್ನು ಮುಂದುವರಿಸಿದರೆ ಕಳಂಕದ ಆರೋಪ ಹೊತ್ತ ವ್ಯಕ್ತಿಯನ್ನು ಬೆಂಬಲಿಸಿದ ಅಪ ಖ್ಯಾತಿ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದಲ್ಲಿ ಬರಲಿದೆ. ಮತ್ತು ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ದೇಶದಾದ್ಯಂತ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ಉತ್ತರದ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಹೀಗಾಗಿ ಕಂಗ್ರೆಸ್ ಗೆ ಇದು ಇಕ್ಕಟ್ಟಿನ ಸ್ಥಿತಿ.
ಹೈಕೋರ್ಟ್ ತೀರ್ಪು ಹೊರ ಬಿದ್ದ ನಂತರ ಕೇರಳದಲ್ಲಿದ್ದ ಕಾಂಗ್ರೆಸ್ ನಾಯಕ ವೇಣೋಪಾಲ್ ಅವರನ್ನು ದಿಢೀರನೆ ಹೋಗಿ ಏಕಾಂಗಿಯಾಗಿ ಭೇಟಿ ಮಾಢಿದ ಸಿದ್ದರಾಮಯ್ಯ ತಾನು ಕಾನೂನು ಹೋರಾಟವನ್ನು ಮುಂದುವರಿಸಲಿದ್ದು ರಾಜೀನಾಮೆ ನೀಡುವುದಿಲ್ಲ ಮತ್ತು ರಾಜೀನಾಮೆಗೆ ತನ್ನನ್ನು ಒತ್ತಾಯಿಸಲೂ ಬಾರದು ಎಂದೂ ಹೇಳಿ ಬಂದಿದ್ದಾರೆ.
ಕಾಂಗ್ರೆಸ್ ಗೆ ತಲೆ ನೋವಾಗಿರುವ ಇನ್ನೊಂದು ಅಂಶ ಎಂದರೆ ಸದ್ಯದಲ್ಲೇ ಸಿದ್ದರಾಮಯ್ಯ ರಾಜ್ಯ ಪ್ರವಾಸ ಕೈಗೊಂಡು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಬಿಜೆಪಿ ಪಿತೂರಿ ನಡೆಸಿದೆ ಎಂಬುದನ್ನು ಬಹಿರಂಗ ಸಭೆಗಳನ್ನು ನಡೆಸುವ ಮೂಲಕ ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿರುವುದು. ರಾಜ್ಯ ಪ್ರವಾಸದ ರೂಪುರೇಷೆಗಳು ಇನ್ನೂ ಪೂರ್ಣವಾಗಿ ಸಿದ್ಧವಾಗಿಲ್ಲವಾದರೂ ಅಂಥದೊಂದು ಪ್ರವಾಸದ ಮೂಲಕ ಮತ್ತೆ ಅಹಿಂದ ವರ್ಗದ ಬೆಂಬಲ ಗಟ್ಟಿಮಾಡಿಕೊಳ್ಳಲು ಅವರು ಬಯಸಿದ್ದಾರೆ. ಮತ್ತೊಂದು ರೀತಿಯಲ್ಲಿ ಈ ಸಮುದಾಯದ ಪ್ರಶ್ನಾತೀತ ನಾಯಕನಾಗಿ ತಾನೇ ಉಳಿದುಕೊಳ್ಳುವುದು,ಆ ಮೂಲಕ ತನ್ನನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಿರುವ ಪಕ್ಷದೊಳಗಿನ ವಿರೋಧಿಗಳಿಗೆ ಹಾಗೂ ಹೈಕಮಾಂಡ್ ಗೆ ಎಚ್ಚರಿಕೆ ಕೊಡುವುದು ಇದರ ಹಿಂದಿರುವ ರಾಜಕೀಯ ತಂತ್ರ. ಅಹಿಂದ ವರ್ಗ ಗಟ್ಟಿಯಾಗಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ನೋಡಿಕೊಳ್ಳುವುದು ಈ ಕಾರ್ಯತಂತ್ರದ ಇನ್ನೊಂದು ಭಾಗ. ಹೀಗಾದಾಗ ಈ ಸಮುದಾಯಗಳ ಮತಗಳನ್ನೇ ನಂಬಿಕೊಂಡಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತನ್ನ ತಂಟೆಗೆ ಬರುವುದಿಲ್ಲ, ಇನ್ನುಳಿದಿರುವ ಅವಧಿಗೂ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಅವರ ತಂತ್ರದ ಮುಂದುವರಿದ ಭಾಗ.
ಈ ಬೆಳವಣಿಗೆಯ ಸೂಚನೆ ಅರಿತೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದುವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳಿಕೆ ನೀಡಿರುವುದರ ಹಿಂದೆ ಪಕ್ಷದೊಳಗೆ ಈ ಹುದ್ದೆಗೆ ಪೈಪೊಟಿ ನಡೆಸುತ್ತಿರುವ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರನ್ನು ತಡೆಯುವುದೇ ತಂತ್ರವಾಗಿದೆ.
ಕಾನೂನು ಹೋರಾಟ ಸೇರಿದಂತೆ ಸ್ವಯಂ ರಕ್ಷಣೆಯ ಎಲ್ಲ ಅಸ್ತ್ರಗಳೂ ಸಿದ್ದರಾಮಯ್ಯ ಅವರ ಬತ್ತಳಿಕೆಯಲ್ಲಿ ಬರಿದಾಗುವ ಸಂದರ್ಭದ ವರೆಗೆ ಕಾಯಲು ಶಿವಕುಮಾರ್ ನಿರ್ಧರಿಸಿದ್ದು ಅಲ್ಲಿಯವರೆಗೆ ಪಕ್ಷದಲ್ಲಿ, ಸರ್ಕಾರದಲ್ಲಿ ಸಂಘಟನಾತ್ಮಕವಾಗಿ ತಮ್ಮ ಬಲ ಹೆಚ್ಚುವಂತೆ ನೋಡಿಕೊಳ್ಳುವುದು ಅವರ ಉದ್ದೇಶಿತ ಕಾರ್ಯತಂತ್ರ. ಹಾಗೂ ನಾಯಕತ್ವ ಬದಲಾವನೆಯ ಸನ್ನಿವೇಶ ಎದುರಾಗುವ ಪರಿಸ್ಥಿತಿ ಬಂದರೆ ಸಿದ್ದರಾಮಯ್ಯ ತನ್ನ ಬೆಂಬಲಕ್ಕೆ ನಿಲ್ಲಬಹುದು ಎಂಬ ದೂರದ ನಿರೀಕ್ಷೆ ಅವರದ್ದು. ಹಾಗಾಗೇ ನಾಯಕತ್ವದ ವಿಚಾರದಲ್ಲಿ ಅವರು ಗಟ್ಟಿಯಾಗಿ ನಿಂತಿದ್ದಾರೆ.
ತೆರವಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಗಳಿವೆ. ಈ ಪೈಕಿ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಶಿವಕುಮಾರ್ ವ್ಯಕ್ತಿಗತ ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿದ್ದು ಇಡೀ ಕ್ಷೇತ್ರದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಶತಾಯಗತಾಯ ಈ ಕ್ಷೇತ್ರದ ಉಪ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ನಲ್ಲಿ ಅದರಲ್ಲೂ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುವ ತಮ್ಮ ಗುರಿಯನ್ನು ಈಡೇರಿಸಿಕೊಳ್ಳುವುದು ಅವರ ಉದ್ದೇಶ. ಈ ಕಾರಣದಿಂದಲೇ ಈ ಭಾಗದಲ್ಲಿ ಇನ್ನೂ ಪ್ರಾಬಲ್ಯ ಉಳಿಸಿಕೊಂಡಿರುವ ಜೆಡಿಎಸ್ ನ್ನು ಪೂರ್ಣವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಗಳನ್ನು ಅವರು ಇಡುತ್ತಿದ್ದು ಇದರಲ್ಲಿ ಒಂದಷ್ಟರ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಗೊಂದಲಕಾರಿ ರಾಜಕೀಯ ನಿಲುವುಗಳು ಆ ಪಕ್ಷದ ಹೆಚ್ಚಿನ ಸಂಖ್ಯೆಯ ಶಾಸಕರಲ್ಲಿ ಅಸಮಧಾನ ಉಂಟು ಮಾಡಿದೆ.ಹೀಗಾಗಿ ಬೇಸತ್ತಿರುವ ಶಾಸಕರು ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಇಂಥ ಅತೃಪ್ತ ಶಾಸಕರ ಸಂಪರ್ಕದಲ್ಲಿ ಶಿವಕುಮಾರ್ ಇರುವುದು ಕುಮಾರಸ್ವಾಮಿಯವರನ್ನು ಕಂಗೆಡಿಸಿದೆ.
2028 ರವರೆಗೆ ತಾನು ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಯಲ್ಲ ಎಂದು ಸತೀಶ ಜಾರಕಿಹೊಳಿ ಹೇಳುತ್ತಿದ್ದರೂ ಪ್ರಯತ್ನವನ್ನು ಅವರು ನಿಲ್ಲಿಸಿಲ್ಲ. ಇದೇ ವೇಳೆ ಹಿರಿತನದ ವಿಚಾರ ಮುಂದಿಟ್ಟುಕೊಂಡು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸಿಎಂ ಪಟ್ಟಕ್ಕೆ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ರಾಜಕೀಯ ಬಲಾಬಲದ ದೃಷ್ಟಿಯಿಂದ ನೋಡಿದರೆ ಡಾ. ಪರಮೇಶ್ವರ್ ಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ. ತುಮಕೂರು ಜಿಲ್ಲೆಯವರೇ ಆದ ಸಿಚಿವ ಕೆ.ಎನ್. ರಾಜಣ್ಣ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಆಗಾಗ್ಗೆ ಅವರ ಹೆಸರು ಹೇಳುತ್ತಾರೆ.
ಕಾಂಗ್ರೆಸ್ ವರಿಷ್ಠರಿಗೆ ತಮ್ಮ ಸೂಚನೆಯನ್ನು ಶಿರಸಾ ವಹಿಸಿ ಪಾಲಿಸುವ ನಾಯಕನೊಬ್ಬ ಮುಖ್ಯಮಂತ್ರಿ ಆದರೆ ಒಳಿತು ಎಂಬ ಭಾವನೆ ಇದೆ. ಸತೀಶ ಜಾರಕಿಹೊಳಿಗೆ ಹೋಲಿಸಿದರೆ ಡಾ. ಪರಮೇಶ್ವರ್ ಆ ಉದ್ದೇಶಕ್ಕೆ ಹೊಂದಿಕೊಳ್ಳುತ್ತಾರೆ.
ಬಿಜೆಪಿಯಲ್ಲಿ ಬೆಂಕಿ:
ಇನ್ನು ಬಿಜೆಪಿಯಲ್ಲಿ ಆಂತರಿಕ ಬೇಗುದಿ ಸಂಘ ಪರಿವಾರದ ಹಿರಿಯರ ಮಧ್ಯಸ್ಥಿಕೆ ನಂತರವೂ ತಣ್ಣಗಾಗಿಲ್ಲ. ತಣ್ಣಗಾಗುವ ಲಕ್ಷಣಗಳೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮೃದು ಧೋರಣೆ ಹೊಂದಿರುವ ಕೆಲವು ನಾಯಕರು ಆ ಪಕ್ಷದಲ್ಲೂ ಇದ್ದಾರೆ.
-ಯಗಟಿ ಮೋಹನ್
yagatimohan@gmail.com