ಇರಾನ್-ಇಸ್ರೇಲ್ online desk
ಅಂಕಣಗಳು

ಇರಾನ್-ಇಸ್ರೇಲ್ ಕದನದಲ್ಲಿ ಭಾರತಕ್ಕಿರುವ ಧರ್ಮಸಂಕಟವೇನು? (ತೆರೆದ ಕಿಟಕಿ)

ಇರಾನಿಗೆ ಅನುಕೂಲವಾಗುವಂತೆ ಇಸ್ರೇಲ್ ಮೇಲೆ ಭಾರತ ಯಾಕೆ ಒತ್ತಡ ಹೇರಬೇಕು ಸ್ವಾಮಿ? ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಮೆರಿಕದಂಥ ದೇಶವೇ ಭಾರತದ ಹಿತಾಸಕ್ತಿಗೆ ಸಹಕರಿಸದಿದ್ದಾಗಲೂ ನಮ್ಮ ಜತೆ ನಿಂತದ್ದು ಇಸ್ರೇಲ್...

“ಭಾರತವು ಇಸ್ರೇಲಿನ ಮೇಲೆ ಹಮಾಸ್ ದಾಳಿಯನ್ನು ಉಗ್ರವಾದಿ ದಾಳಿ ಎಂದಿತು. ಆದರೆ, ಗಾಜಾಕ್ಕೆ ಮಾನವೀಯ ನೆರವನ್ನೂ ಕಳುಹಿಸಿತು. ಇಸ್ರೇಲ್-ಪ್ಯಾಲಸ್ತೀನ್ ಬಿಕ್ಕಟ್ಟಿನಲ್ಲಿ ಭಾರತವು ಮೊದಲಿನಿಂದಲೂ ಎರಡು ರಾಜ್ಯಾಧಿಕಾರಗಳ ಅಸ್ತಿತ್ವವನ್ನು ಬೆಂಬಲಿಸಿಕೊಂಡು ಬಂದಿದೆ. ಅದರ ತರ್ಕವನ್ನು ಒಪ್ಪುವೆ. ಆದರೆ, ರಾಜತಾಂತ್ರಿಕನಾಗಿ ನನಗನಿಸುವುದೇನೆಂದರೆ, ಇಸ್ರೇಲಿನ ಜತೆ ಮಾತನಾಡಿ ಕದನವಿರಾಮವನ್ನು ಸ್ಥಾಪಿಸುವ ಶಕ್ತಿ ಭಾರತಕ್ಕಿದೆ. ಭಾರತ ಆ ವಿಷಯದಲ್ಲಿ ಇನ್ನೂ ಸಕ್ರಿಯವಾಗಬೇಕು. ಏಕೆಂದರೆ, ಈ ಪ್ರಾಂತ್ಯದಲ್ಲಿ ಯುದ್ಧೋತ್ಕರ್ಷವಾಗುವುದು ಜಾಗತಿಕ ಅರ್ಥವ್ಯವಸ್ಥೆಗಾಗಲೀ, ಭಾರತದ ಆರ್ಥಿಕತೆಗಾಗಲೀ ಒಳ್ಳೆಯದಲ್ಲ.” - ಇದು ಇತ್ತೀಚಿನ ಪತ್ರಿಕಾ ಸಂದರ್ಶನದಲ್ಲಿ ಭಾರತದಲ್ಲಿರುವ ಇರಾನಿನ ರಾಯಭಾರಿ ಹೇಳಿರುವ ಮಾತುಗಳು. ಭಾರತವು ಮಧ್ಯಪ್ರವೇಶಿಸಲಿ ಎಂಬ ಇಂಗಿತವನ್ನು ಇರಾನಿನ ಆಡಳಿತದಲ್ಲಿರುವ ಒಂದು ವರ್ಗ ಪ್ರತಿಪಾದಿಸುತ್ತಿರುವುದು ಇದೇ ಮೊದಲೇನಲ್ಲ.

ಇದನ್ನು ಓದಿಕೊಳ್ಳುತ್ತಲೇ, ಇತಿಹಾಸದ ತುಸು ಮಾಹಿತಿ ಇದ್ದವರೂ ಪ್ರಶ್ನಿಸುವುದೇನೆಂದರೆ - ಇರಾನಿಗೆ ಅನುಕೂಲವಾಗುವಂತೆ ಇಸ್ರೇಲ್ ಮೇಲೆ ಭಾರತ ಯಾಕೆ ಒತ್ತಡ ಹೇರಬೇಕು ಸ್ವಾಮಿ? ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಮೆರಿಕದಂಥ ದೇಶವೇ ಭಾರತದ ಹಿತಾಸಕ್ತಿಗೆ ಸಹಕರಿಸದಿದ್ದಾಗಲೂ ನಮ್ಮ ಜತೆ ನಿಂತದ್ದು ಇಸ್ರೇಲ್…ಇಸ್ಲಾಮಿಕ್ ಉಗ್ರವಾದ ಇಸ್ರೇಲಿಗೆ ಮತ್ತು ಭಾರತಕ್ಕೆ ಸಮಾನ ಆತಂಕ ನೀಡಿದೆ. ಇಸ್ರೇಲ್ ಮತ್ತು ಭಾರತಗಳು ಲಾಗಾಯ್ತಿನ ಸ್ನೇಹಿತರು. ಆರ್ಟಿಕಲ್ 370 ರದ್ದಾಗಿದ್ದನ್ನು ವಿರೋಧಿಸಿ ಮಾತನಾಡಿದ ಇರಾನ್ ಜತೆಗೆ ಭಾರತ ಏಕಿರಬೇಕು? ಕಟ್ಟರ್ ಇಸ್ಲಾಮಿಕ್ ದೇಶವಾದ ಇರಾನ್ ನಿಜಾರ್ಥದಲ್ಲಿ ಭಾರತಕ್ಕೆ ಸ್ನೇಹಿತನಾಗುವುದಕ್ಕೆ ಸಾಧ್ಯವೇ? ಇಂಥ ಎಲ್ಲ ಪ್ರಶ್ನೆಗಳು ಸಾಮಾನ್ಯರ ಮನಸ್ಸಿನಲ್ಲೂ ಎದ್ದಾವು.

ವರ್ತಮಾನದ ಜಿಯೊಪಾಲಿಟಿಕ್ಸ್ ಗೋಜಲು

ಇಸ್ರೇಲ್ ಜತೆಗಿನ ಭಾರತದ ಸ್ನೇಹವು ಉಳಿದ ಯಾವುದೇ ದೇಶಗಳಿಗೆ ಹೋಲಿಸಿದರೂ ಹೆಚ್ಚಿನ ತೂಕದ್ದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವುದೇ ದೇಶವು ಜಾಗತಿಕ ರಾಜಕೀಯವನ್ನು ನಿರ್ವಹಿಸುವಾಗ ಯಾವುದೋ ಪ್ರಮುಖ ಭೂಭಾಗವೊಂದನ್ನು ಸೈದ್ಧಾಂತಿಕ ಕಾರಣಕ್ಕೋಸ್ಕರ ವಿರೋಧಿಸಿ ದೂರಮಾಡುವುದಕ್ಕಾಗುವುದಿಲ್ಲ. 

ಇರಾನಿನ ಒಂದು ಪಕ್ಕಕ್ಕಿರುವ ಪರ್ಶಿಯನ್ ಸಮುದ್ರ ಹಾಗೂ ಆ ಮಾರ್ಗದಲ್ಲೊಂದು ಕಡಿದಾದ ಹೊರ್ಮುಜ್ ಸಂಧಿ. ಜಗತ್ತಿನ ಸುಮಾರು 30 ಪ್ರತಿಶತ ವ್ಯವಹಾರ ಈ ಮಾರ್ಗದಲ್ಲಾಗುತ್ತದೆ ಎಂಬುದೊಂದು ಅಂದಾಜು. ಭಾರತದ ಇಂಧನಶಕ್ತಿ ಅವಶ್ಯದ ಶೇ. 55ರಷ್ಟು ಭಾಗದ ಪೂರೈಕೆ ಜಾಲ ಈ ಮಾರ್ಗವನ್ನು ಬಳಸುತ್ತದೆ. ಪರ್ಶಿಯನ್ ಸಮುದ್ರದ ಇನ್ನೊಂದು ಬದಿಯಲ್ಲಿರುವ ಸೌದಿ, ಯುಎಇ, ಒಮನ್ ಜತೆಗೆಲ್ಲ ಉತ್ತಮ ಸಂಬಂಧ ಇರಿಸಿಕೊಂಡಿರುವ ಭಾರತವು ಇತ್ತ ಇರಾನಿನ ಜತೆಗೂ ನಾಜೂಕಾಗಿ ವ್ಯವಹರಿಸಿದರಷ್ಟೇ ಆ ಮಾರ್ಗ ನಿರಾತಂಕ. ಅಲ್ಲದೇ, ಜಮ್ಮು-ಕಾಶ್ಮೀರದ ಒಂದು ಭಾಗ ಪಾಕಿಸ್ತಾನದ ಹಿಡಿತದಲ್ಲಿರುವುದರಿಂದ ಭಾರತಕ್ಕೆ ಭೂಮಾರ್ಗದಲ್ಲಿ ಅಫಘಾನಿಸ್ತಾನ ತಲುಪಿಕೊಂಡು ನಂತರ ಮಧ್ಯ ಏಷ್ಯದ ದೇಶಗಳಿಗೆ ಹೋಗುವುದು ಆಗದ ಮಾತು. ಕಜಕಿಸ್ತಾನ, ಕಿರ್ಗಿಸ್ತಾನ, ತಾಜಿಕಿಸ್ತಾನ, ತುರ್ಕಮೆನಿಸ್ತಾನ, ಉಜ್ಬೇಕಿಸ್ತಾನ ಇವುಗಳದ್ದೆಲ್ಲ ಸಂಪರ್ಕವೇ ಇರದಿದ್ದರೆ ಪರವಾಗಿಲ್ಲ ಎಂಬ ಕಾಲಘಟ್ಟದಲ್ಲಿ ನಾವಿಲ್ಲ. ಹಾಗೆಂದೇ, ಇರಾನ್ ಜತೆ ಒಪ್ಪಂದ ಮಾಡಿಕೊಂಡು ಆ ದೇಶದಲ್ಲಿದ್ದ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಿ, ಇರಾನಿನ ಮೂಲಕ ಮಧ್ಯ ಏಷ್ಯಕ್ಕೊಂದು ಸಂಪರ್ಕ ಇರಿಸಿಕೊಂಡಿದೆ ಭಾರತ. ಈ ಯೋಜನೆ ಅಂದುಕೊಂಡಷ್ಟು ವೇಗದಲ್ಲಿ ಸಾಗುತ್ತಿಲ್ಲ ಎಂಬ ವರದಿಗಳಿವೆ, ಅದು ಬೇರೆ ಮಾತು. 

ಇದಕ್ಕೆ ಮುಂದುವರಿದ ಭಾಗವಾಗಿ ‘ಇಂಟರ್ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್’ (INSTC) ಯೋಜನೆಯೂ 2022ರಿಂದ ಕಾರ್ಯನಿರತವಾಗಿದೆ. ರಷ್ಯದ ಸೈಂಟ್ ಪೀಟರ್ಸಬರ್ಗ್, ಮಾಸ್ಕೊಗಳನ್ನು ಹಾದುಕೊಂಡು ವೊಲ್ಗ ನದಿತೀರದ ಅಸ್ತ್ರಕನ್ ಬಂದರಿಗೆ ತಲುಪಿ ಅಲ್ಲಿಂದ ಕ್ಯಾಸ್ಪಿಯನ್ ಸಮುದ್ರದಲ್ಲಿ ಸಾಗಿ ಇರಾನನ್ನು ತಲುಪಿಕೊಂಡು ಮತ್ತೆ ಭೂಮಾರ್ಗದ ಮೂಲಕ ತೆಹರಾನ್, ಇಸ್ಪೆಹಾನ್ಗಳನ್ನೆಲ್ಲ ಹಾದು ಪರ್ಶಿಯನ್ ಗಲ್ಫ್ ತೀರದ ಬಂದರ್-ಇ-ಅಬ್ಬಾಸ್ ಬಂದರಿಗೆ ತಲುಪಿಕೊಳ್ಳುವುದು. ನಂತರ ಅರಬ್ಬೀ ಸಮುದ್ರದ ನೌಕಾಯಾನದ ಮೂಲಕ ಸರಕುಗಳು ಮುಂಬೈ ತಲುಪಿಕೊಳ್ಳುತ್ತವೆ. ರಷ್ಯ-ಭಾರತವನ್ನು ಬೆಸೆಯುವ ಈಗಿನ ಮಾರ್ಗವೆಂದರೆ ಯುರೋಪನ್ನು ಬಳಸಿಕೊಂಡುಬಂದು ಸೂಯಜ್ ಕಾಲುವೆ ಮೂಲಕ ಕೆಂಪು ಸಮುದ್ರ ತಲುಪಿ, ಅಲ್ಲಿಂದ ಮುಂದಕ್ಕೆ ಅರಬ್ಬೀ ಸಮುದ್ರಯಾನದಲ್ಲಿ ಮುಂಬೈ ತಲುಪಿಕೊಳ್ಳುವುದು. ಇದಕ್ಕೆ ಹೋಲಿಸಿದರೆ ಐ ಎನ್ ಎಸ್ ಟಿ ಸಿ ಸುಮಾರು 15-20 ದಿನಗಳಷ್ಟು ಸಮಯವನ್ನು ಉಳಿಸುತ್ತದೆಯಲ್ಲದೇ, ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ.  

ಕಾರ್ಯತಂತ್ರ ದೃಷ್ಟಿಯಿಂದ ಇರಾನಿನ ಜತೆಗಿನ ಬಾಂಧವ್ಯ ಮತ್ತೊಂದು ಆಯಾಮದಲ್ಲೂ ಪ್ರಮುಖ. ಇರಾನಿನೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನವು ಇಸ್ಲಾಂ ದೇಶವೇ ಆಗಿದ್ದರೂ ಇವರಿಬ್ಬರ ನಡುವೆ ಆಗಾಗ ಸಂಘರ್ಷಗಳು ತೆರೆದುಕೊಂಡಿದ್ದಿದೆ. 2024ರ ಜನವರಿಯಲ್ಲಿ ಪಾಕಿಸ್ತಾನದ ಹಲವು ಭೂಭಾಗಗಳಿಗೆ ಇರಾನ್ ದಾಳಿ ಮಾಡಿತ್ತು ಎಂಬುದು ಉಲ್ಲೇಖನೀಯ. ಶತ್ರುವಿನ ಶತ್ರು ಮಿತ್ರ ಎಂಬರ್ಥದಲ್ಲೂ ಇರಾನ್ ಜತೆಗಿನ ವರ್ತಮಾನದ ಬಾಂಧವ್ಯಕ್ಕೆ ಮಹತ್ತ್ವವಿದೆ. 

ಆದರೆ ಇರಾನ್ ಜತೆಗಿನ ತತ್ ಕ್ಷಣದ ರಾಜಕೀಯ ಬಾಂಧವ್ಯ ಸಹ ಹಲವು ಅಪಾಯಗಳಿಗೆ ತೆರೆದುಕೊಂಡಿದೆ. ಅಮೆರಿಕಕ್ಕೆ ಬೇಡವಾಗಿರುವ, ನಿರಂತರ ಆರ್ಥಿಕ ದಿಗ್ಭಂದನ ಎದುರಿಸುತ್ತಿರುವ ಇರಾನಿನ ಜತೆಗೆ ಭಾರತ ಎಲ್ಲಿಯವರೆಗೆ ವ್ಯವಹಾರ ಮಾಡೀತು? ಅತ್ತ ಚೀನಾ ಸಹ ಇರಾನಿಗೆ ಪರಮಾಪ್ತನೇ ಆಗಿಬಿಟ್ಟಿರುವಾಗ ಭಾರತದೊಂದಿಗಿನ ಸಮೀಕರಣ ಎಷ್ಟು ದಿನ ಎಂಬೆಲ್ಲ ಪ್ರಶ್ನೆಗಳು ಇದ್ದೇ ಇವೆ. 

ಪರ್ಶಿಯಾ ಮತ್ತು ಪ್ರಾಚೀನ ಭಾರತ

ಇರಾನ್ ನಾಗರಿಕತೆ ಉದಯಿಸಿದ ನೆಲ. ಇಸ್ಲಾಂ ಪೂರ್ವದಲ್ಲಿ ಪರ್ಶಿಯಾ ಎಂದು ಕರೆಸಿಕೊಳ್ಳುತ್ತಿದ್ದ ನೆಲವನ್ನು ಈಗಿನ ಇರಾನಿಗೆ ಸಮೀಕರಿಸಬೇಕಿಲ್ಲ, ಏಕೆಂದರೆ ಅದರ ಯಾವ ಲಕ್ಷಣಗಳನ್ನೂ ಈಗದು ಉಳಿಸಿಕೊಂಡಿಲ್ಲ ಎಂಬ ವಾದವಿದೆ. ನಿಜವೇ. ಅದು ಜೊರಾಸ್ಟ್ರಿಯನ್ ಪಂಥದ ನೆಲವಾಗಿತ್ತು. ಸಾಮಾನ್ಯ ಶಕೆ 633 - 651ರ ಸುಮಾರಿಗೆ ಇಸ್ಲಾಂ ಆಕ್ರಮಣವು ಪರ್ಶಿಯಾದ ಸಸ್ಸಾನಿಯನ್ ಸಾಮ್ರಾಜ್ಯವನ್ನು ಬೀಳಿಸುತ್ತಲೇ ಜೊರಾಸ್ಟ್ರಿಯನ್ನರು ಬಲವಂತದ ಮತಾಂತರಕ್ಕೆ, ಜಜಿಯಾ ಮಾದರಿಯ ತೆರಿಗೆಗೆ ಒಳಗಾಗಬೇಕಾಯಿತು. ಆಗ ಒಂದು ಗುಂಪು ಆಶ್ರಯ ಕೇಳಿಕೊಂಡು ಭಾರತಕ್ಕೆ ಬಂತು. ಅವರೇ ಪಾರ್ಸಿಗಳಾದರು. ತಮಗೆ ಆಶ್ರಯ ಕೊಟ್ಟ ಹಿಂದು ರಾಜನಿಗೆ ಕೊಟ್ಟ ಮಾತಿನಂತೆ ಅವರು ಈ ನೆಲಕ್ಕೆ ಹೆಚ್ಚುವರಿ ಭಾರವಾಗದೇ “ಹಾಲಿನಲ್ಲಿ ಸಕ್ಕರೆ ಬೆರೆತಂತೆ” ಭಾರತೀಯ ಸಮಾಜವನ್ನು ಸಮೃದ್ಧಗೊಳಿಸಿರುವುದಕ್ಕೆ ಚರಿತ್ರೆಯೇ ಸಾಕ್ಷಿ. ಟಾಟಾ, ಹೋಮಿ ಜಹಾಗೀರ್ ಭಾಭಾ, ಸ್ಯಾಮ್ ಮಾಣೆಕ್ಶಾ, ನುಸ್ಲಿ ವಾಡಿಯಾ, ನಾನಾ ಪಾಲ್ಖಿವಾಲಾ, ಗೋದ್ರೆಜ್…ಹೀಗೆ ಸಾಲು ಸಾಲು ಸಾಧಕರ ಹೆಸರುಗಳು ಭಾರತದಲ್ಲಿ ಅನುರಣಿಸುತ್ತವೆ. 

ಇವತ್ತಿನ ಇರಾನಿನಲ್ಲಿ 15-20 ಸಾವಿರ ಜೊರಾಸ್ಟ್ರಿಯನ್ ಪಂಥದವರಿರಬಹುದೆಂಬುದು ಅಂದಾಜು. ಅವರಿಗಲ್ಲಿ ಯಾವುದೇ ರಾಜಕೀಯ ಅಧಿಕಾರಗಳಿಲ್ಲ, ಸರ್ಕಾರಿ ಕೆಲಸಗಳಲ್ಲೂ ಅವಕಾಶವಿಲ್ಲ. ಐವತ್ತು ಸಾವಿರದಷ್ಟು ಪಾರ್ಸಿಗಳು ಭಾರತದಲ್ಲಿದ್ದಾರೆ, ಎಲ್ಲ ಸಮಾನ ಅವಕಾಶಗಳೊಂದಿಗೆ.

ಯಹೂದಿ, ಕ್ರೈಸ್ತ ಮತಗಳಿಗಿಂತಲೂ ಪೂರ್ವದಿಂದಲೇ ಅಸ್ತಿತ್ತ್ವದಲ್ಲಿದ್ದದ್ದು ಜೊರಾಸ್ಟ್ರಿಯನ್ ಪಂಥ. ಅದರ ಮತಗ್ರಂಥ ಅವೆಸ್ತಾದಲ್ಲಿ ಬಳಸಿರುವ ಅವೆಸ್ತಿಯನ್ ಭಾಷೆ ಸಂಸ್ಕೃತದೊಂದಿಗೆ ಬಹಳ ತಾಳಮೇಳ ಹೊಂದಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ಲಭ್ಯ ಇವೆ. ಜೊರಾಸ್ಟ್ರಿಯನ್ನರು ಏಕದೇವೋಪಾಸಕರೇ ಆಗಿದ್ದರೂ ಆ ದೇವರು ಹಲವು ಬಗೆಯ ದೇವತೆಗಳ ಮೂಲಕವೂ ಪ್ರಕಟೀಕರಣವಾಗಬಹುದೆಂಬ ಪರಿಕಲ್ಪನೆ ಇತ್ತು. ಪರ್ಶಿಯಾದ ನೆಲವನ್ನು ಹಲವು ಶತಮಾನಗಳ ಕಾಲ ಜೊರಾಸ್ಟ್ರಿಯನ್ನರೇ ಆಳಿದರೂ ಯಹೂದಿ, ಕ್ರೈಸ್ತ ಪಂಗಡಗಳಿಗೆ ಚರಿತ್ರೆಯ ಹೆಚ್ಚಿನ ಭಾಗಗಳಲ್ಲಿ ಸ್ವಾತಂತ್ರ್ಯವಿದ್ದದ್ದು ಕಾಣುತ್ತದೆ. 

ಪಾಶ್ಚಾತ್ಯರು ಕಟ್ಟಿಕೊಡುವ ಇತಿಹಾಸವನ್ನೇ ನಾವು ನೆಚ್ಚಿಕೊಳ್ಳುವುದಾದರೆ, ಅವರು ಭಾರತಕ್ಕೆ ಎಲ್ಲವೂ ಹೊರಗಿನಿಂದಲೇ ಬಂದಿದ್ದು ಎಂಬರ್ಥದ ಕತೆ ಕಟ್ಟಿಕೊಡುವುದರಲ್ಲೇ ಉತ್ಸುಕರು. ಆದರೆ, ಇತಿಹಾಸ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಹಲವು ಕೃತಿಗಳನ್ನು ರಚಿಸಿರುವ ಸಂಜೀವ ಸಾನ್ಯಾಲ್ ಅವರು 2022ರಲ್ಲಿ ಋಗ್ವೇದದ ಆಧಾರಗಳನ್ನಿಟ್ಟುಕೊಂಡು ಪ್ರಸ್ತುತಪಡಿಸಿರುವ ಉಪನ್ಯಾಸವೊಂದು ಜೊರಾಸ್ಟ್ರಿಯನ್ನರಿಗಿರಬಹುದಾದ ಪ್ರಾಚೀನ ಭಾರತದ ಮೂಲವನ್ನು ವಿವರಿಸುತ್ತದೆ.

ಇವತ್ತಿನ ಹರ್ಯಾಣದ ಸಮೀಪದಲ್ಲಿ, ಅವತ್ತಿಗೆ ಜೀವಂತವಿದ್ದ ಸರಸ್ವತೀ ನದಿ ತಟದಲ್ಲಿದ್ದ ಭರತರ ಪಂಗಡದ ಮೇಲೆ ಪಶ್ಚಿಮದ ಮಾರ್ಗದಿಂದ ಹತ್ತು ರಾಜರ ಮೈತ್ರಿ ದಾಳಿ ಮಾಡಿತಷ್ಟೆ. ಈ ದಾಶರಾಜ್ಞ ಯುದ್ಧದ ವಿವರಣೆ ಋಗ್ವೇದವೇ ಹೇಳುತ್ತದೆ. ಭರತರ ಪಂಗಡದ ರಾಜ ಸುದಾಸ ಆ ಯುದ್ಧವನ್ನು ಗೆದ್ದ. ಅಲ್ಲಿಂದಲೇ ಪಂಗಡಗಳಿಗೆ ಸೀಮಿತವಾಗಿದ್ದ ಕಾದಾಟವು ಸಾಮ್ರಾಜ್ಯಕ್ಕೆ ವಿಸ್ತರಿಸಿತು, ಸುದಾಸ ಬೇರೆ ಜಯಗಳನ್ನೂ ಪಡೆದ. ತನ್ನನ್ನು ತಾನು ಚಕ್ರವರ್ತಿ ಎಂದು ಘೋಷಿಸಿಕೊಳ್ಳುವಾಗ ನಡೆದ ವಿದ್ಯಮಾನವು ‘ಐಡಿಯಾ ಆಫ್ ಭಾರತ’ವನ್ನಷ್ಟೇ ಅಲ್ಲದೇ, ನಾಗರಿಕತೆ ಅಂದರೆ ಏನೆಂಬುದನ್ನೂ ವ್ಯಾಖ್ಯಾನಿಸಿದಂತಿದೆ. 

ಇತಿಹಾಸದಲ್ಲೆಲ್ಲ ನಾವು ಕಾಣೋದು ಗೆದ್ದವರು ತಮ್ಮ ದೇವರನ್ನು ಸೋತವರು ಒಪ್ಪಿಕೊಳ್ಳುವಂತೆ ಮಾಡುವುದನ್ನೇ..ಆದರೆ ಭರತರು ವಿಭಿನ್ನ ಮಾರ್ಗ ಅನುಸರಿಸಿದರು. ಅವರು ಸೋತ ಪಾಳೆಯವೂ ಸೇರಿದಂತೆ ಉಳಿದೆಲ್ಲ ಭಾಗಗಳ ಪ್ರಭುತ್ವಗಳನ್ನು ಒಗ್ಗೂಡಿಸಿ, ಅಲ್ಲಿರುವ ಎಲ್ಲ ಚಿಂತಕರು, ಋಷಿಗಳ ವಿಚಾರಗಳನ್ನೆಲ್ಲ ಒಗ್ಗೂಡಿಸಿದರು. ಆ ಎಲ್ಲ ವಿಚಾರಗಳನ್ನು ಕ್ರೋಢಿಕೃತವಾಗಿಸಿ ನಾಗರಿಕತೆಯ ಒಪ್ಪಂದವೊಂದನ್ನು ಎಲ್ಲರ ಸಮ್ಮತಿಯೊಂದಿಗೆ ಜಾರಿಗೆ ತಂದರು. ಎಲ್ಲ ಸಮುದಾಯಗಳ ಜ್ಞಾನಿಗಳ ವಿಚಾರಗಳ ಸಂಕಲನವೇ ವೇದ. ಅದರರ್ಥ ವೇದಗಳು ಅವತ್ತು ಹುಟ್ಟಿದ್ದು ಎಂದಲ್ಲ. ಬದಲಿಗೆ ಕ್ರೋಢಿಕರಣಗೊಂಡವು. ಭರತರು ತಮ್ಮಿಂದಲೇ ನಾಗರಿಕತೆ ಶುರುವಾಯಿತು ಅಂತ ಹೇಳುವುದಕ್ಕೆ ಹೊರಡಲಿಲ್ಲ. ಬದಲಿಗೆ ನಾಗರಿಕ ಗುಂಪುಗಳ ನಡುವೆ ಇದ್ದ ಎಲ್ಲ ಜ್ಞಾನವನ್ನು ಸಂಕಲಿಸಿ, ಅಂಥ ಎಲ್ಲ ಜ್ಞಾನಿಗಳೂ, ಋಷಿಮುನಿಗಳೂ ತಮ್ಮೆಲ್ಲರ ಹಿರೀಕರು ಎಂಬ ಸಾರ್ವತ್ರಿಕ ನಿಲುವಿಗೆ ಬಂದರು. ಯಜ್ಞಕುಂಡದ ಸುತ್ತಲೂ ತಮ್ಮ ದೇವರಷ್ಟೇ ಅಲ್ಲದೇ, ತಾವು ಗೆದ್ದ ಸಮುದಾಯಗಳ ಹಾಗೂ ತಮ್ಮನ್ನು ಚಕ್ರವರ್ತಿ ಎಂದು ಒಪ್ಪಿಕೊಂಡವರೆಲ್ಲವರ ದೇವರಿಗೆ ಸ್ಥಾನಗಳನ್ನು ಕಲ್ಪಿಸಿದರು. ಒಂದು ಯಜ್ಞಕುಂಡ ಹಾಗೂ ಅದರ ಸುತ್ತ ಎಲ್ಲ ದೇವರಿಗೆ ಸ್ಥಾನಮಾನ ಎಂಬ ಭರತರ ಉದಾತ್ತ ಯೋಚನೆಯಿಂದಲೇ ‘ಭಾರತ’ ಉದಯಿಸಿತು.

ಭರತರಿಂದ ಸೋಲಿಸಿಕೊಂಡು ಪಶ್ಚಿಮಕ್ಕೆ ದೂಡಿಸಿಕೊಂಡ ಪಂಗಡವೊಂದಕ್ಕೆ ದೇವರ ಪರಿಕಲ್ಪನೆ ಬಗ್ಗೆ ತಕರಾರಿತ್ತು. ಅವರೇ ಪರ್ಷಿಯಾದಲ್ಲಿ ಆಗಿನ ಕಾಲಕ್ಕೆ ಮತ ಬೆಳೆಸಿಕೊಂಡ ಜೋರಾಷ್ಟ್ರಿಯನ್ನರಿರಬಹುದೆಂಬ (ಪಾರಸಿ) ತರ್ಕವಿದೆ. ವೈದಿಕ ಕಾಲದಲ್ಲಿ ಸುರ-ಅಸುರರ ದೇವರಿಗೆಲ್ಲ ಸ್ಥಾನವಿತ್ತು. ಹಾಗೆಂದೇ ಅಸುರ ಪಂಗಡದ ಇಂದ್ರ, ವರುಣರೂ ದೇವರೇ. ಆದಾಗ್ಯೂ ಜೋರಾಷ್ಟ್ರಿಯನ್ನರ ಪಾಲಿಗೆ ‘ಅಹುರ’ ಎಂದರೆ ದೇವರು. ವೈದಿಕ ಸಂಸ್ಕೃತಿಯ ಸುರ-ಅಸುರ ಪರಿಕಲ್ಪನೆಗಳೊಂದಿಗೆ ತಮ್ಮ ಅಹುರವನ್ನು ಸಮೀಕರಿಸಿ, ತಪ್ಪು ಕಲ್ಪನೆಯಿಂದ ಅವರು ದೂರ ಹೋಗಿದ್ದಿರಬಹುದೆಂಬುದು ಒಂದು ತರ್ಕ. ಹಾಗೆಂದೇ ಅವರ ಗ್ರಂಥದಲ್ಲಿ ‘ವೆಂದಿದಾದ್’ ಅಂದರೆ ‘ದೇವರ ವಿರುದ್ಧ’ ಎಂಬ ಭಾಗವಿದೆ. ಭರತರ ವೈದಿಕ ಸಂಸ್ಕೃತಿ ಮೃತರನ್ನು ಹೂಳುವುದು ಇಲ್ಲವೇ ಸುಡುವುದನ್ನು ಮಾಡುತ್ತಿದ್ದರೆ, ಜೋರಾಷ್ಟ್ರಿಯನ್ನರು ಮೃತದೇಹವನ್ನು ಹಾಗೆಯೇ ಬಿಡುವುದು ಪದ್ಧತಿ. ಇಲ್ಲೆಲ್ಲ ಕಂದಕಗಳು ಮುಂದುವರೆದು ಅವರು ಅವತ್ತಿನ ಯಜ್ಞಕುಂಡದ ಸುತ್ತಲಿನ ಪ್ರತಿಜ್ಞಾವಿಧಿಗೆ ಒಳಪಡದೇ ಉಳಿದಿದ್ದಿರಬಹುದೆಂಬುದೊಂದು ಊಹೆ.

ಅಲ್ಲಿ ಸ ಎಂಬುದರ ಬದಲು ಹ ಪದದ ಬಳಕೆಯಿದೆ. ಹಾಗಾಗಿಯೇ ‘ಸಪ್ತಸಿಂಧು’ ಅಲ್ಲಿ ‘ಹಪ್ತಹಿಂದು’ವಾಗಿ, ನಂತರ ಬಂದ ಸಮಾಜಗಳೆಲ್ಲ ಅಲ್ಲಿಂದಲೇ ಹಿಂದು ಪದ ಎತ್ತಿಕೊಂಡವು. ಹಪ್ತಹಿಂದು ಪ್ರದೇಶವನ್ನು ಇವರು ತಮ್ಮ ಕೃತಿಗಳಲ್ಲಿ ದೂರುತ್ತಲೇ ನಂತರ ಬಂದ ಸಮಾಜಗಳಿಗೆ ನಮ್ಮ ಬಗ್ಗೆ ಪರಿಚಯ ಮಾಡಿಸಿದರು. ಈ ಪ್ರಭಾವದಿಂದಲೇ ಮಧ್ಯಯುಗದಲ್ಲಿ ಘಜ್ನಿಯ ಪರವಾಗಿ ಯಾತ್ರಿಕನ ಸೋಗಿನಲ್ಲಿ ಭಾರತಕ್ಕೆ ಬಂದ ಅಲ್ ಬರೂನಿಯಂಥವರೂ ಈ ನೆಲವನ್ನು ಅಲ್-ಹಿಂದ್ ಎಂದು ಕರೆದು, ಆ ಕಾಲಕ್ಕೆ ರಾಜಕೀಯ ಪ್ರಭುತ್ವಗಳು ಭಿನ್ನ-ಭಿನ್ನವಾಗಿದ್ದರೂ ಭಾರತದಲ್ಲಿ ನಾಗರಿಕತೆಯ ಏಕತೆಯೊಂದು ಸ್ಪಷ್ಟವಾಗಿದೆ ಎಂದು ದಾಖಲಿಸಿದ್ದು ಗಮನಾರ್ಹ.

ಇವೆಲ್ಲ ಆಗಿ, ಪರ್ಶಿಯಾದ ನೆಲ ಇರಾನ್ ಆಗಿ, ಜೊರಾಸ್ಟ್ರಿಯನ್ನರಿಗೆ ಭಾರತವೇ ಆಶ್ರಯ ಕೊಟ್ಟು, ಅದಕ್ಕೆ ಪ್ರತಿಯಾಗಿ ಜೊರಾಸ್ಟ್ರಿಯನ್ನರು ಸಹ ಭಾರತದ ಸಮಾಜವನ್ನು ಬೆಳಗಿದರೆಂಬುದು ಇತಿಹಾಸ. ಪರ್ಶಿಯಾವು ಇಸ್ಲಾಂಮಯವಾದ ಬೆನ್ನಲ್ಲೇ ಅದು ಭಾರತದ ಪಾಲಿಗೆ ಅಸುರಿ ಶಕ್ತಿಯಾಗಿತ್ತಾ, ಅಥವಾ ಇವತ್ತಿನ ಜಾಗತಿಕ ರಾಜಕಾರಣದಲ್ಲಿರುವ ಹೊಂದಾಣಿಕೆಯೇ ಇತ್ತಾ ಎಂಬುದಕ್ಕೆ ಇನ್ನೊಂದು ಅಂಕಣವೇ ಬೇಕಾಗುತ್ತದೆ…

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT