ಅಂಕಣಗಳು

ಪ್ರಧಾನಿ ಮೋದಿ ಬ್ರೂನೈ, ಸಿಂಗಾಪುರ್ ಭೇಟಿ: ಸೆಮಿಕಂಡಕ್ಟರ್‌ ಉತ್ಪಾದನೆಗೆ ಒತ್ತು (ಜಾಗತಿಕ ಜಗಲಿ)

ಇಂಡೋ ಪೆಸಿಫಿಕ್ ಪ್ರದೇಶ ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಇಂಡೋನೇಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಾದ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್, ಮತ್ತು ನ್ಯೂಜಿಲೆಂಡ್‌ಗಳನ್ನು ಒಳಗೊಂಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 3ರಿಂದ 5ರ ನಡುವೆ ಬ್ರೂನೈ ಮತ್ತು ಸಿಂಗಾಪುರಗಳಿಗೆ ಭೇಟಿ ನೀಡಿದರು. ಪ್ರಧಾನಿ ಮೋದಿಯವರು ಆಸಿಯಾನ್ (ಅಸೋಸಿಯೇಷನ್ ಆಫ್ ಸೌತ್ಈಸ್ಟ್ ಏಷ್ಯನ್ ನೇಷನ್ಸ್) ಸದಸ್ಯ ರಾಷ್ಟ್ರಗಳು ಮತ್ತು ಇಂಡೋ ಪೆಸಿಫಿಕ್ ಪ್ರದೇಶದ ದೇಶಗಳ ಜೊತೆಗಿನ ಸಂಬಂಧಕ್ಕೆ ಎಷ್ಟು ಮೌಲ್ಯ ನೀಡುತ್ತಾರೆ ಎನ್ನುವುದಕ್ಕೆ ಈ ಭೇಟಿ ಉದಾಹರಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೂ ಮುನ್ನ, ವಿಯೆಟ್ನಾಂ ಮತ್ತು ಮಲೇಷ್ಯಾ ದೇಶಗಳ ಪ್ರಧಾನಿಗಳು ಭಾರತಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫಿಜಿ, ಟಿಮೋರ್ ಲೆಸ್ಟ್ (ಆಗ್ನೇಯ ಏಷ್ಯಾದ ಸಣ್ಣ ದೇಶ) ಮತ್ತು ನ್ಯೂಜಿಲ್ಯಾಂಡ್‌ಗಳಿಗೆ ಭೇಟಿ ನೀಡಿದ್ದು, ಪ್ರಾದೇಶಿಕ ಮತ್ತು ದ್ವಿಪಕ್ಷೀಯ ಹಂತದಲ್ಲಿ ಉತ್ತಮ ಸಂಬಂಧ ಸ್ಥಾಪಿಸುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ. ಅದರಲ್ಲೂ ಭಾರತ ಆಸಿಯಾನ್ ಮತ್ತು ಇಂಡೋ ಪೆಸಿಫಿಕ್ ರಾಷ್ಟ್ರಗಳೆಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

ಆಸಿಯಾನ್ ಒಕ್ಕೂಟ
ಆಸಿಯಾನ್ ಒಕ್ಕೂಟ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) 10 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಅವೆಂದರೆ: ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌‌, ಮಲೇಷ್ಯಾ, ಮಯನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್, ಮತ್ತು ವಿಯೆಟ್ನಾಂ. ಈ ರಾಷ್ಟ್ರಗಳು ಜೊತೆಯಾಗಿ ಆರ್ಥಿಕ ಪ್ರಗತಿ, ಪ್ರಾದೇಶಿಕ ಸ್ಥಿರತೆ, ಮತ್ತು ವಿವಿಧ ವಲಯಗಳಲ್ಲಿ ಸಹಯೋಗ ಸ್ಥಾಪನೆಗೆ ಕಾರ್ಯಾಚರಿಸುತ್ತವೆ. ಆ ಮೂಲಕ ದಕ್ಷಿಣ ಏಷ್ಯಾ ಮತ್ತು ಅದರಾಚೆಗೂ ತಮ್ಮ ಜಂಟಿ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತವೆ.

ಇಂಡೋ ಪೆಸಿಫಿಕ್ ಪ್ರದೇಶ ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಇಂಡೋನೇಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಾದ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್, ಮತ್ತು ನ್ಯೂಜಿಲೆಂಡ್‌ಗಳನ್ನು ಒಳಗೊಂಡಿದೆ. ಭಾರತ ಪ್ರಾದೇಶಿಕ ಭದ್ರತೆ, ವ್ಯಾಪಾರ ಮತ್ತು ಸಾಗರ ಸ್ಥಿರತೆಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ದೇಶಗಳೊಡನೆ ಸಂಬಂಧ ವೃದ್ಧಿಸಲು ಉದ್ದೇಶಿಸಿದೆ.

ಭಾರತ - ಬ್ರೂನೈ ಸಂಬಂಧ ವೃದ್ಧಿ: ಆಸಿಯಾನ್ ಸಹಕಾರ ಅಭಿವೃದ್ಧಿ

ಪ್ರಧಾನಿ ನರೇಂದ್ರ ಮೋದಿಯವರ ಬ್ರೂನೈ ಭೇಟಿ ಆ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿಯಾಗಿದೆ. ಜನವರಿ 1, 1984ರಂದು ಸ್ವಾತಂತ್ರ್ಯ ಪಡೆದ ಬ್ರೂನೈ, ಅದೇ ವರ್ಷ ಮೇ ತಿಂಗಳಲ್ಲಿ ಭಾರತದೊಡನೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೂನೈ ಸುಲ್ತಾನ ಹಸ್ಸನಲ್ ಬೊಲ್ಕಿಯಾಹ್ ಅವರ ಮಾತುಕತೆಯ ಬಳಿಕ, ಎರಡೂ ದೇಶಗಳು ತಮ್ಮ ಸಂಬಂಧವನ್ನು ಒಂದು ಉನ್ನತ ಸಹಯೋಗದ ಹಂತಕ್ಕೆ ಏರಿಸುವ ನಿರ್ಧಾರ ಕೈಗೊಂಡವು. ಆ ಮೂಲಕ ವಿವಿಧ ವಲಯಗಳಲ್ಲಿ ತಮ್ಮ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪ್ರದರ್ಶಿಸಿದವು.

ಪ್ರಧಾನಿ ಮೋದಿ ಮತ್ತು ಸುಲ್ತಾನ್ ಬೊಲ್ಕಿಯಾಹ್ ಅವರು ರಕ್ಷಣೆ, ವ್ಯಾಪಾರ, ಹೂಡಿಕೆ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ, ಮತ್ತು ಯುವಜನ ಕಾರ್ಯಕ್ರಮಗಳಲ್ಲಿ ಸಹಕಾರ ವೃದ್ಧಿಸಲು ಒಪ್ಪಿಗೆ ಸೂಚಿಸಿದರು. ಅವರು ತಂತ್ರಜ್ಞಾನ, ಸಂಪರ್ಕ, ಮತ್ತು ವ್ಯಕ್ತಿ ವಿನಿಮಯಗಳನ್ನು ಅಭಿವೃದ್ಧಿ ಪಡಿಸಲು ಗಮನ ಹರಿಸಿದರು. ಅದರೊಡನೆ, ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳಲ್ಲೂ ಪರಸ್ಪರ ಹಿತಾಸಕ್ತಿಗಳನ್ನು ಗಮನಿಸಲು ನಿರ್ಧರಿಸಿದರು.

2000ನೇ ಇಸವಿಯ ಬಳಿಕ, ಬ್ರೂನೇ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಟೆಲಿಮೆಟ್ರಿ ಟ್ರ್ಯಾಕಿಂಗ್ ಆ್ಯಂಡ್ ಟೆಲಿಕಮ್ಯಾಂಡ್ (ಟಿಟಿಸಿ) ಕೇಂದ್ರವನ್ನು ಹೊಂದಿದೆ. ಈ ವಲಯದಲ್ಲಿನ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಪ್ರಧಾನಿ ಭೇಟಿಯ ವೇಳೆ ಹೊಸ ಎಂಒಯುಗೆ ಸಹಿ ಹಾಕಲಾಗಿದೆ.

ಬ್ರೂನೈಯಲ್ಲಿ ಅಪಾರ ಪ್ರಮಾಣದ ಜೈವಿಕ ಇಂಧನ ಸಂಪನ್ಮೂಲವಿದೆ. ಇದೇ ಸಮಯದಲ್ಲಿ, ಭಾರತ ಅಪಾರ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಬ್ರೂನೈ ಭಾರತಕ್ಕೆ ದ್ರವೀಕೃತ ನೈಸರ್ಗಿಕ ಅನಿಲ (ಎನ್ಎನ್‌ಜಿ) ಪೂರೈಸಲು ದೀರ್ಘಕಾಲೀನ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿವೆ.

ಬ್ರೂನೈ ಏರ್‌ಲೈನ್ಸ್ ಸಂಸ್ಥೆ ಚೆನ್ನೈನಿಂದ ಬ್ರೂನೈ ರಾಜಧಾನಿ ಬಂದಾರ್ ಸೆರಿ ಬೆಗವಾನ್‌ಗೆ ನವೆಂಬರ್ 2024ರಿಂದ ನೇರ ವಿಮಾನ ಸಂಚಾರ ಆರಂಭಿಸಲು ಆಲೋಚಿಸುತ್ತಿದೆ. ಇದು ಪ್ರವಾಸೋದ್ಯಮ, ವ್ಯಾಪಾರ ಸಂಪರ್ಕಗಳು, ಹಾಗೂ ಉಭಯ ದೇಶಗಳ ನಾಗರಿಕರ ನಡುವಿನ ಸಂಬಂಧವನ್ನು ವೃದ್ಧಿಸಲು ನೆರವಾಗಲಿದೆ.

ಭಾರತ ಮತ್ತು ಬ್ರೂನೈಗಳು ಪರಸ್ಪರ ಭೇಟಿಗಳನ್ನು ಹೆಚ್ಚಿಸಿ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಹಡಗುಗಳ ವಿನಿಮಯಗಳ ಮೂಲಕ ತಮ್ಮ ಭದ್ರತಾ ಮತ್ತು ಸಾಗರ ಸಹಯೋಗವನ್ನು ಬಲಪಡಿಸಲು ಒಪ್ಪಿವೆ.

ಎರಡೂ ದೇಶಗಳು ಶಾಂತಿ ಸುವ್ಯವಸ್ಥೆ ನಿರ್ವಹಣೆ, ಸ್ಥಿರತೆ, ಸಾಗರ ಭದ್ರತೆಯ ಕುರಿತು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ. ಪರಸ್ಪರ ಜಲ ಪ್ರದೇಶ ಮತ್ತು ವಾಯು ಪ್ರದೇಶಗಳಲ್ಲಿ ಹಡಗುಗಳು ಮತ್ತು ವಿಮಾನಗಳನ್ನು ನಿರ್ಬಂಧರಹಿತವಾಗಿ ಸಾಗಲು ಅನುಮತಿ ನೀಡಿ, ವ್ಯಾಪಾರ ವೃದ್ಧಿಸಲು ಒಪ್ಪಿಗೆ ಸೂಚಿಸಿವೆ. ಇವೆಲ್ಲವೂ ಅಂತಾರಾಷ್ಟ್ರೀಯ ಕಾನೂನುಗಳ, ಅದರಲ್ಲೂ 1982 ಯುಎನ್‌ಸಿಎಲ್ಒಎಸ್‌ಗಳಿಗೆ ಪೂರಕವಾಗಿವೆ.

ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನಾ ನಿಗ್ರಹದಂತಹ ಪ್ರಮುಖ ವಿಚಾರಗಳಲ್ಲಿ ಭಾರತ ಮತ್ತು ಬ್ರೂನೈ ಸಂಪೂರ್ಣ ಸಹಮತ ಹೊಂದಿವೆ.

ಮೋದಿ ಸಿಂಗಾಪುರ ಭೇಟಿಯ ಮುಖ್ಯಾಂಶಗಳು

  • ಬ್ರೂನೈ ರೀತಿಯಲ್ಲೇ ಸಿಂಗಾಪುರದ ಜೊತೆಗಿನ ಸಂಬಂಧವನ್ನೂ ಈಗ ಮೇಲ್ದರ್ಜೆಗೇರಿಸಿ, ಇನ್ನಷ್ಟು ಸಹಕಾರಿ ಸಂಬಂಧವಾಗಿಸಲು ನಿರ್ಧರಿಸಲಾಗಿದೆ. ಇದು ತಮ್ಮ ಸಹಯೋಗವನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಸಿಂಗಾಪುರಗಳು ಬದ್ಧವಾಗಿವೆ ಎಂದು ಸಾಬೀತುಪಡಿಸಿದೆ.

  • ಆಗಸ್ಟ್ 26, 2024ರಂದು ಭಾರತ - ಸಿಂಗಾಪುರಗಳ ನಡುವೆ ಸಚಿವರ ಮಟ್ಟದ ದುಂಡು ಮೇಜಿನ ಸಭೆ ನಡೆಯಿತು. ಈ ಸಭೆಯಲ್ಲಿ ಭಾರತದ ನಾಲ್ವರು ಹಿರಿಯ ಸಚಿವರು ಮತ್ತು ಸಿಂಗಾಪುರದ ಆರು ಜನ ಸಚಿವರು ಭಾಗವಹಿಸಿದ್ದರು. ಈ ಸಭೆಯ ಆಧಾರದಲ್ಲಿ ಈಗ ಉಭಯ ದೇಶಗಳ ನಡುವೆ ವಿಸ್ತೃತ ಸಮಾಲೋಚನೆ ನಡೆದಿದೆ.

  • ಭಾರತ ಮತ್ತು ಸಿಂಗಾಪುರ ಪ್ರಧಾನಿಗಳು ಆರು ಕ್ಷೇತ್ರಗಳಲ್ಲಿ ಸಹಕಾರ ಸಾಧಿಸಲು ನೆರವಾದುದಕ್ಕೆ ಸಚಿವರನ್ನು ಅಭಿನಂದಿಸಿದ್ದಾರೆ. ಆ ಕ್ಷೇತ್ರಗಳೆಂದರೆ: ಸುಸ್ಥಿರ ಅಭಿವೃದ್ಧಿ, ಡಿಜಿಟಲೀಕರಣ, ಕೌಶಲ್ಯಾಭಿವೃದ್ಧಿ, ಆರೋಗ್ಯ, ಆಧುನಿಕ ಉತ್ಪಾದನಾ ವಲಯ, ಮತ್ತು ಸಂಪರ್ಕ.

  • ಪ್ರಧಾನ ಮಂತ್ರಿಗಳು ರಕ್ಷಣೆ ಮತ್ತು ಭದ್ರತೆ, ಸಾಗರ ಜಾಗೃತಿ, ಶಿಕ್ಷಣ, ಕೃತಕ ಬುದ್ಧಿಮತ್ತೆ, ಆರ್ಥಿಕ ತಂತ್ರಜ್ಞಾನ, ನೂತನ ತಂತ್ರಜ್ಞಾನಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಮತ್ತು ಜ್ಞಾನದ ಹಂಚಿಕೆಯ ಕುರಿತ ಸಹಕಾರವನ್ನು ಅವಲೋಕಿಸಿದ್ದಾರೆ.

  • ಪ್ರಧಾನ ಮಂತ್ರಿಗಳು ಆರ್ಥಿಕ ಮತ್ತು ಜನರ ನಡುವಿನ ಸಂಬಂಧವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಸಂಪರ್ಕ ಕಲ್ಪಿಸಲು ಮತ್ತು ಹಸಿರು ಕಾರಿಡಾರ್ ಯೋಜನೆಗಳನ್ನು ವೇಗಗೊಳಿಸಲು ಆದ್ಯತೆ ನೀಡಿದ್ದಾರೆ. ಉಭಯ ಪ್ರಧಾನಿಗಳು ಭಾರತ ಸಿಂಗಾಪುರಗಳ ನಡುವೆ ದೀರ್ಘಕಾಲದಿಂದ ಇರುವ, ಪ್ರಬಲ ಭದ್ರತಾ ಸಹಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

  • ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಪ್ರಮುಖ ಅಂಶವೆಂದರೆ, ಸಹಿ ಹಾಕಿರುವ ನಾಲ್ಕು ಪ್ರಮುಖ ಒಪ್ಪಂದಗಳಾಗಿದ್ದು, ಅವುಗಳು ಭವಿಷ್ಯದ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ಗುರಿ ಹೊಂದಿವೆ. ಈ ಒಪ್ಪಂದಗಳು ಡಿಜಿಟಲ್ ತಂತ್ರಜ್ಞಾನ, ಸೆಮಿಕಂಡಕ್ಟರ್ ಉದ್ಯಮ, ಆರೋಗ್ಯ ವಲಯ ಮತ್ತು ಶಿಕ್ಷಣದಲ್ಲಿ ಸಹಕಾರ ವೃದ್ಧಿಸಲಿವೆ.

  • ಡಿಜಿಟಲ್ ತಂತ್ರಜ್ಞಾನಗಳ ಕುರಿತ ಎಂಒಯುಗಳು ಎರಡು ದೇಶಗಳ ನಡುವೆ ಸಾರ್ವಜನಿಕ ವಲಯದ ಡಿಜಿಟಲ್ ವ್ಯವಸ್ಥೆಗಳು, ಸೈಬರ್ ಭದ್ರತೆ, 5ಜಿ, ಮತ್ತು ಬೆಳೆಯುತ್ತಿರುವ ತಂತ್ರಜ್ಞಾನಗಳಾದ ಸೂಪರ್ ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ಮತ್ತು ಕೃತಕ ಬುದ್ಧಿಮತ್ತೆಗಳ ಕ್ಷೇತ್ರಗಳಲ್ಲಿ ಸಹಕಾರ ಸಾಧಿಸಲಿವೆ.

  • ಸೆಮಿಕಂಡಕ್ಟರ್ ಎಕೋಸಿಸ್ಟಮ್ ಪಾರ್ಟ್‌ನರ್ಶಿಪ್ ಎಂಬ ಒಪ್ಪಂದ ಸೆಮಿಕಂಡಕ್ಟರ್ ಕ್ಲಸ್ಟರ್‌ಗಳನ್ನು ಅಭಿವೃದ್ಧಿ ಪಡಿಸಲು, ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ವಲಯದ ಪ್ರತಿಭೆಗಳನ್ನು ಗುರುತಿಸಲು ನೆರವಾಗುತ್ತದೆ.

  • ಸಿಂಗಾಪುರ ಜಗತ್ತಿನ ಒಟ್ಟು ಸೆಮಿಕಂಡಕ್ಟರ್‌ಗಳ 10%ದಷ್ಟು ಉತ್ಪಾದಿಸುತ್ತದೆ. ಅದರೊಡನೆ, ಜಾಗತಿಕ ಫ್ಯಾಬ್ರಿಕೇಶನ್ ಸಾಮರ್ಥ್ಯದ 5%, ಮತ್ತು ಸೆಮಿಕಂಡಕ್ಟರ್ ಉಪಕರಣಗಳ 20% ಪಾಲು ಹೊಂದಿದೆ. ಈ ಒಪ್ಪಂದದ ಮೂಲಕ ಸಿಂಗಾಪುರದ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡಲು ಅನುಕೂಲ ಕಲ್ಪಿಸಲಿದೆ.

  • ಮೇಲಿನ ಪರಿಭಾಷೆಯಲ್ಲಿ, 'ಜಾಗತಿಕ ಫ್ಯಾಬ್ರಿಕೇಶನ್ ಸಾಮರ್ಥ್ಯ' ಎಂದರೆ, ಸಿಂಗಾಪುರ ಜಗತ್ತಿನ 5% ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆಯನ್ನು 'ಫ್ಯಾಬ್ರಿಕೇಶನ್ ಪ್ಲಾಂಟ್ಸ್ ಅಥವಾ ಫ್ಯಾಬ್ಸ್' ಎಂದು ಕರೆಯಲಾಗುವ ವಿಶೇಷ ಕಾರ್ಖಾನೆಗಳ ಮೂಲಕ ನಡೆಸುತ್ತದೆ.

  • ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದದ ಮೂಲಕ ಈ ಕ್ಷೇತ್ರಗಳಲ್ಲಿ ಕೌಶಲ ಭರಿತ ಉದ್ಯೋಗಿಗಳನ್ನು ಸೃಷ್ಟಿಸಲು ನೆರವಾಗಲಿದೆ. ಇನ್ನು ನಾಲ್ಕನೇ ಒಪ್ಪಂದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಸಹಕಾರ ವೃದ್ಧಿಸಲು ನೆರವಾಗಲಿದೆ.

  • ಬ್ರೂನೈ ರೀತಿಯಲ್ಲೇ, ಪ್ರಧಾನಿ ಮೋದಿ ಮತ್ತು ಸಿಂಗಾಪುರದ ನಾಯಕರು ಶಾಂತಿ, ಭದ್ರತೆ, ಸ್ಥಿರತೆ, ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ನೌಕೆ ಮತ್ತು ವಿಮಾನ ಹಾರಾಟಗಳನ್ನು ನಡೆಸುವ ಕುರಿತು ಒಪ್ಪಂದ ಸಾಧಿಸಿದ್ದಾರೆ. ಉಭಯ ನಾಯಕರು ಭಾರತ - ಸಿಂಗಾಪುರಗಳ ನಡುವಿನ ವಿವಾದಗಳನ್ನು ಅಂತಾರಾಷ್ಟ್ರೀಯ ಕಾನೂನುಗಳ, ಅದರಲ್ಲೂ 1982 ಯುಎನ್‌ಸಿಎಲ್ಒಎಸ್ ಅನುಸಾರವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

  • 1982 ಯುಎನ್‌ಸಿಎಲ್ಒಎಸ್ (ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ) ಎನ್ನುವುದು ಒಂದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಎಲ್ಲ ದೇಶಗಳು ಹೇಗೆ ಸಮುದ್ರಗಳನ್ನು ಬಳಸಬೇಕು, ಸಾಗರ ಗಡಿಗಳ ಮೇಲೆ ಗಮನ ಹರಿಸಬೇಕು ಎಂಬುದನ್ನು ನಿರ್ದೇಶಿಸುತ್ತದೆ.

  • ಪ್ರಧಾನಿ ನರೇಂದ್ರ ಮೋದಿಯವರ ಬ್ರೂನೈ ಭೇಟಿ ಅಲ್ಲಿಗೆ ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿಯಾಗಿದ್ದು, ಬ್ರೂನೈ ದೇಶದ 40 ವರ್ಷಗಳ ಸ್ವಾತಂತ್ರ್ಯಾವಧಿ ಮತ್ತು ಭಾರತ - ಬ್ರೂನೈಗಳ 40 ವರ್ಷಗಳ ರಾಜತಾಂತ್ರಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ.

  • ಸಾಂಕೇತಿಕ ಪ್ರಾಮುಖ್ಯತೆಯ ಹೊರತಾಗಿ, ಮೋದಿಯವರ ಭೇಟಿ ಎರಡು ದೇಶಗಳ ನಡುವೆ ಆರ್ಥಿಕ, ರಾಜಕೀಯ, ಭದ್ರತೆ, ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಪ್ರಗತಿ ಸಾಧಿಸಲು ನೆರವಾಗಲಿದೆ. ಅದರೊಡನೆ ಪ್ರಾದೇಶಿಕ ಶಾಂತಿ, ಭದ್ರತೆಗೂ ಇದು ಪೂರಕವಾಗಿದೆ.

  • ಭಾರತ ಸಿಂಗಾಪುರಗಳ ನಾಯಕರ ನಡುವೆ ಪರಸ್ಪರ ಗಾಢ ನಂಬಿಕೆ ಮತ್ತು ವಿಶ್ವಾಸಗಳಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಿಂಗಾಪುರ ಪ್ರಧಾನಿ ವಾಂಗ್, ಅಧ್ಯಕ್ಷ ಷಣ್ಮುಗರತ್ನಂ, ಮಾಜಿ ಪ್ರಧಾನಿಗಳು ಮತ್ತು ವಾಂಗ್ ಅವರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಲೀ ಹೆಸೀನ್ ಲೂಂಗ್ ಮತ್ತು ಗೊಹ್ ಚೊಕ್ ಟಾಂಗ್ ಅವರೊಡನೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಸಿಂಗಾಪುರದ ಪ್ರಧಾನಿಗಳು ಸಾಮಾನ್ಯವಾಗಿ ದೀರ್ಘಕಾಲ ಆಡಳಿತ ನಡೆಸುತ್ತಾರೆ. ಗೊಹ್ ಚೊಕ್ ಟಾಂಗ್ ಅವರು 14 ವರ್ಷ ಪ್ರಧಾನಿಯಾಗಿದ್ದರೆ, ಲೀ ಹೆಸೀನ್ ಲೂಂಗ್ ಅವರು 20 ವರ್ಷ ಪ್ರಧಾನಿಯಾಗಿದ್ದರು. ವಾಂಗ್ ಅವರು ಇನ್ನೂ 51 ವರ್ಷ ವಯಸ್ಸಿನವರಾಗಿದ್ದು, ಮೇ 2024ರಲ್ಲಿ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಅವರು ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ.

ಈ ಬಾರಿಯ ಭೇಟಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಧಾನಿ ವಾಂಗ್ ಅವರೊಡನೆ ವೈಯಕ್ತಿಕ ಸಂಪರ್ಕ ಸಾಧಿಸಲು ಉತ್ತಮ ಅವಕಾಶ ಕಲ್ಪಿಸಿದ್ದು, ಮುಂದಿನ ವರ್ಷಗಳಲ್ಲಿ ಉಭಯ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ.

ಪ್ರಧಾನಿ ಮೋದಿಯವರ ಬ್ರೂನೈ ಮತ್ತು ಸಿಂಗಾಪುರ ಭೇಟಿಗಳು ಈ ದೇಶಗಳೊಡನೆ ಮತ್ತು ಆಸಿಯಾನ್ ದೇಶಗಳೊಡನೆ ಭಾರತದ ಸಂಬಂಧ ವೃದ್ಧಿಗೆ ಪೂರಕವಾಗಿವೆ.

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT