ಅಮೆರಿಕದಲ್ಲಿ ಎಲೆಕ್ಷನ್ ಸೀಸನ್. ನವೆಂಬರಿನಲ್ಲಿ ಚುನಾವಣೆಗಳಾಗಿ ಜನವರಿ ಹೊತ್ತಿಗೆ ಶ್ವೇತಭವನದಲ್ಲಿ ಮತ್ತೆ ನಾಲ್ಕು ವರ್ಷಗಳ ಅವಧಿಗೆ ಪಟ್ಟಾಭಿಷೇಕ ಆಗುತ್ತದೆಯಾದರೂ ಈಗ ಎರಡು-ಮೂರು ತಿಂಗಳುಗಳ ಹಿಂದಿನಿಂದಲೇ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಪಾಳೆಯದ ನಡುವಿನ ಪ್ರಚಾರಾಂದೋಲನಗಳು ಬಿರುಸಿನಲ್ಲಿವೆ. ಅಮೆರಿಕದ ಚಿತ್ತವನ್ನು ಆವರಿಸಿರುವ ಮುಖ್ಯ ವಿಷಯಗಳ್ಯಾವವು ಎಂಬುದನ್ನು ಈ ಚುನಾವಣೆ ಪ್ರಚಾರದಲ್ಲಿ ಪ್ರಸ್ತಾಪವಾಗುತ್ತಿರುವ ವಿಷಯಗಳು ಹಾಗೂ ಉಭಯ ಬಣಗಳಲ್ಲಿ ಅವು ಪ್ರತಿಪಾದನೆ ಆಗುತ್ತಿರುವ ರೀತಿನೀತಿಗಳಿಂದ ತಿಳಿದುಕೊಳ್ಳಬಹುದು.
ವಾಸ್ತವದಲ್ಲಿ, ಅಮೆರಿಕದ ಚುನಾವಣೆ ಸ್ವಾರಸ್ಯ ತೆರೆದಿರಿಸುವುದು ಈ ಅಂಕಣದ ಮುಖ್ಯ ಉದ್ದೇಶವೇನಲ್ಲ. ಬದಲಿಗೆ ಪ್ರತಿಹೋರಾಟದ ಮಹತ್ವವು ಹೇಗೆಲ್ಲ ಇರುತ್ತದೆ ಎಂಬುದನ್ನು ಇಂಥ ಚುನಾವಣಾ ಕಣಗಳು ತಿಳಿಸುತ್ತವೆ. ಇದನ್ನು ತಿಳಿದುಕೊಂಡು ನಾವು ಮಾಡಬೇಕಿರುವುದೇನು ಎಂಬ ಪ್ರಶ್ನೆ ಏಳಬಹುದೇನೋ.
ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನಮಗೆಲ್ಲ ದಟ್ಟವಾಗಿ ಒಂದು ತಲೆಯಲ್ಲಿ ಕುಳಿತಿದೆ. ಅದೇನೆಂದರೆ - ಜೋ ಜೀತಾ ವಹೀ ಸಿಕಂದರ್. ಗೆದ್ದವರಷ್ಟೇ ಲೆಕ್ಕಕ್ಕೆ, ಉಳಿದವರು ಗೌಣ. ಸಾಮಾನ್ಯವಾಗಿ ಗೆಲ್ಲುವುದು ಎಂದರೆ ಅಧಿಕಾರದಲ್ಲಿ ಪಾರಮ್ಯ ಸಾಧಿಸುವುದು ಇಲ್ಲವೇ ಸಂಪತ್ತಿನ ನಾಯಕನಾಗುವುದು. ಖಂಡಿತವಾಗಿಯೂ ಹೀಗೆ ಗೆದ್ದುಕೊಳ್ಳುವವರಲ್ಲಿ ಧೀರತ್ವ, ಬುದ್ಧಿವಂತಿಕೆ ಇತ್ಯಾದಿ ಅಂಶಗಳು ಇದ್ದಿರಲೇಬೇಕು. ಅಂಥ ಎಲ್ಲ ವಿಜಯಗಳೂ ಸ್ತುತ್ಯರ್ಹ. ಆದರೆ ಗೆಲುವಿನಿಂದ ದೂರ ಉಳಿದವರೆಲ್ಲರೂ ಅಯೋಗ್ಯರು, ಆಲಸಿಗಳು ಎಂದಲ್ಲ. ಅವರ ಹೋರಾಟಕ್ಕೆ ಅರ್ಥವೇ ಇಲ್ಲ, ವ್ಯರ್ಥವಾಗಿ ಹೋಯಿತು ಎಂದೂ ಅಲ್ಲ. ಇವತ್ತಿಗೆ ವ್ಯಕ್ತಿತ್ವ ವಿಕಸನ ಹಾಗೂ ಹಣ ಮಾಡುವುದು ಹೇಗೆ ಎಂದೆಲ್ಲ ವಿವರಿಸುತ್ತಲೇ ಜನಪ್ರಿಯವಾಗುತ್ತಿರುವವರು ಮಾತನಾಡುವ ಧಾಟಿ ಏನೆಂದರೆ- ಪರಿಶ್ರಮ ಹಾಕಿದರೆ ಯಾರು ಬೇಕಾದರೂ ಸಂಪತ್ತು ಮತ್ತು ಅಧಿಕಾರಗಳನ್ನು ಪಡೆದೇ ಪಡೆಯುತ್ತಾರೆ. ಹಾಗೊಂದು ಯಶಸ್ಸು ಸಿಗುತ್ತಿಲ್ಲ ಎಂದಾದರೆ ಅವರಲ್ಲಿ ಪರಿಶ್ರಮ ನಿರಂತರತೆಗಳ ಕೊರತೆ ಇದೆಯಷ್ಟೆ ಎಂಬರ್ಥದಲ್ಲಿ ಮಾತುಗಳಿರುತ್ತವೆ. ವಾಸ್ತವ ಏನೆಂದರೆ, ತಮ್ಮೆಲ್ಲ ಶಕ್ತಿ ವ್ಯಯಿಸಿ ಹೋರಾಡಿಯೂ ಸೋಲುವ ಸಾಧ್ಯತೆಗಳಿರುತ್ತವೆ. ಅವರೆಲ್ಲ ಹಾಗೆ ಸೋತಾಗಲೂ ಚರಿತ್ರೆ ನಿರ್ಮಿಸಿರುತ್ತಾರೆ, ದೇಶ-ಕಾಲಗಳ ಗತಿ ಬದಲಾಯಿಸಿರುತ್ತಾರೆ. ಅವನ್ನು ನೋಡುವ ದೃಷ್ಟಿ ಬಂದಾಗ ಹೊಸದೇ ಪ್ರಪಂಚದ ಅರಿವಾಗುತ್ತದೆ ಮತ್ತದು ಮನಸ್ಸಿಗೆ ಸಮಾಧಾನವನ್ನೂ ಕೊಡುತ್ತದೆ.
ಮತ್ತೀಗ ಅಮೆರಿಕದ ಪ್ರಸ್ತುತ ಚುನಾವಣಾಗಾಥೆಗೆ ಬರೋಣ. ಇಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ನಿಂತು ಸೆಣೆಸುತ್ತಿರುವ ವ್ಯಕ್ತಿ ರಿಪಬ್ಲಿಕನ್ ಪಾಳೆಯದ ಡೊನಾಲ್ಡ್ ಟ್ರಂಪ್. ಆಡಳಿತಾರೂಢ ಡೆಮಾಕ್ರಟಿಕ್ ಪಾಳೆಯದಲ್ಲಿರುವ, ಪ್ರಸ್ತುತ ಅಮೆರಿಕದ ವೈಸ್ ಪ್ರಸಿಡೆಂಟ್ ಆಗಿರುವ ಕಮಲಾ ಹ್ಯಾರೀಸ್ ಹೆಗಲಿಗೆ ಟ್ರಂಪ್ ಎಂಬ ವ್ಯಕ್ತಿಯನ್ನು ತಡೆಯುವ ಸವಾಲು.
ಅಮೆರಿಕದ ಮಾಧ್ಯಮ ಮತ್ತು ಅಲ್ಲಿನ ಲಾಗಾಯ್ತಿನ ಅಧಿಕಾರವರ್ಗವು ತುಂಬ ವಿರೋಧವನ್ನು ಇರಿಸಿಕೊಂಡಿರುವ ಟ್ರಂಪ್ ಜಯ ಸುಲಭದ್ದೇನಲ್ಲ. ಆದರೆ ಒಟ್ಟಾರೆ ಮೀಡಿಯಾ ಜಗತ್ತು ಟ್ರಂಪ್ ವಿರೋಧಿಯಾಗಿದ್ದರೂ ಅವರು ಗೆಲ್ಲುವ ಸಾಧ್ಯತೆ ಇಲ್ಲವೆಂದಿಲ್ಲ. ಎಲಾನ್ ಮಸ್ಕ್ ಥರದ ದಿಗ್ಗಜ ಉದ್ಯಮಿಗಳು ಟ್ರಂಪ್ ಅನ್ನು ಬೆಂಬಲಿಸಿದ್ದಾರೆ. ಅದೇನೇ ಇರಲಿ… ಈಗ ಅಮೆರಿಕದ ಚುನಾವಣಾ ಕಣದಲ್ಲಿ ಭಾರಿ ಅಬ್ಬರದಲ್ಲಿರುವ ಟ್ರಂಪ್ ಒಂದೊಮ್ಮೆ ಸೋತರೂ ಅಲ್ಲಿನ ವ್ಯಾಖ್ಯಾನವನ್ನು ಅದಾಗಲೇ ಬದಲಿಸಿಬಿಟ್ಟಿದ್ದಾರೆಂಬುದನ್ನು ಗಮನಿಸಬೇಕು. ಹೀಗಾಗಿ ಟ್ರಂಪ್ ಸೋತರೂ ಅವರ ಪಕ್ಷವು ಈಗ ಪ್ರತಿಪಾದಿಸುತ್ತಿರುವ ಐಡಿಯಾಗಳ ಪೈಕಿ ಕೆಲವನ್ನು ಹೆಸರು ಬದಲಿಸಿಯಾದರೂ ಅನುಷ್ಠಾನಗೊಳಿಸಬೇಕಾದ ಒತ್ತಡ ಕಮಲಾ ಹ್ಯಾರೀಸರ ಡೆಮಾಕ್ರಾಟ್ ಪಡೆಗೆ ಬಂದುಬಿಟ್ಟಿದೆ!
ಈ ಬಾರಿ ಅಮೆರಿಕದ ಚುನಾವಣೆಯಲ್ಲಿ ಕೆಲಸಮಾಡುತ್ತಿರುವ ಬಹುದೊಡ್ಡ ವ್ಯಾಖ್ಯಾನ ಎಂದರೆ ವಲಸೆ ಕುರಿತಾಗಿದ್ದು. ಈ ಬಗ್ಗೆ ಟ್ರಂಪ್ ಅವರ ರಿಪಬ್ಲಿಕನ್ ಪಾಳೆಯ ಮೊದಲಿನಿಂದಲೂ ಕಠೋರ. ಮೆಕ್ಸಿಕೊದಿಂದ ಅನಿಯಂತ್ರಿತ ವಲಸೆ ತಡೆಯುವುದಕ್ಕೆ ಗೋಡೆ ನಿರ್ಮಾಣದ ಕಾರ್ಯಗಳೆಲ್ಲ ಶುರುವಾಗಿದ್ದು ಈ ಹಿಂದಿನ ಟ್ರಂಪ್ ಅಧಿಕಾರಾವಧಿಯಲ್ಲಿ. ಡೆಮಾಕ್ರಾಟ್ ಪಕ್ಷದವರದ್ದು ಮೊದಲಿನಿಂದಲೂ ಉದಾರನೀತಿ. ಪರವಾಗಿಲ್ಲ, ಯುದ್ಧಪೀಡಿತ ಪ್ರದೇಶಗಳಿಂದ ಬಂದವರು ಸೇರಿದಂತೆ ಅಮೆರಿಕದೊಳಗೆ ಹೇಗೋ ನುಸುಳಿದವರನ್ನೆಲ್ಲ ಅನುಕಂಪದಿಂದಲೇ ನೋಡೋಣ ಎಂಬಂಥ ಧೋರಣೆ.
ಆದರೆ, ಈ ಬಾರಿ ಕಮಲಾ ಹ್ಯಾರೀಸ್ ನೇತೃತ್ವದ ಪ್ರಚಾರಾಂದೋಲನವು ಸಂಪೂರ್ಣ ಧ್ವನಿ ಬದಲಿಸಿದೆ. ಈ ಬಾರಿ ಕಮಲಾ ಹ್ಯಾರೀಸ್ ಭರವಸೆಗಳ ಪೈಕಿ ಪ್ರಮುಖವಾದವುಗಳಲ್ಲಿ ವಲಸೆ ನಿಯಂತ್ರಣದ ಕಾನೂನು ತರುತ್ತೇನೆ ಎನ್ನುವುದೂ ಸೇರಿದೆ! ಯಾವ ಟ್ರಂಪ್ ಆಡಳಿತದ ವೇಳೆ ಇವರೆಲ್ಲ ದಕ್ಷಿಣದ ಗಡಿಗೆ ಗೋಡೆ ಕಟ್ಟುವುದನ್ನು ವಿರೋಧಿಸಿದ್ದರೋ, ಇವೆಲ್ಲ ಅಮೆರಿಕದ ಜಾಯಮಾನವೇ ಅಲ್ಲ ಎಂದು ಟೀಕಿಸಿದ್ದರೋ ಅದೇ ಗೋಡೆಯನ್ನು ತಾವೇನಾದರೂ ಅಧ್ಯಕ್ಷರಾದಲ್ಲಿ ನೂರಾರು ಮಿಲಿಯನ್ ಡಾಲರ್ ತೆತ್ತು ಮುಂದುವರಿಸುವುದಾಗಿ ಕಮಲಾ ಹ್ಯಾರೀಸ್ ಘೋಷಿಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದವರನ್ನು ಅಮೆರಿಕದಿಂದ ಹೊರಕ್ಕೆ ಅಟ್ಟುವ ಯೋಜನೆ ಸಹ ಇದೆ. ಆದರೆ ಇದೇ ಕಮಲಾ ಹ್ಯಾರೀಸ್ 2017ರಲ್ಲಿ ಭಾಷಣ ಮಾಡುತ್ತ, ಟ್ರಂಪ್ ಕಟ್ಟುತ್ತಿರುವ ರಕ್ಷಣಾ ಗೋಡೆ ತೆರಿಗೆದಾರರ ಹಣವನ್ನು ಪೋಲಾಗಿಸುವ ಮೂರ್ಖತನದ ಕೆಲಸ ಎಂದಿದ್ದರಲ್ಲದೇ, ಅದೊಂದು ಮಧ್ಯಕಾಲೀನ ಯುಗದ ಯೋಚನೆ ಎಂದೆಲ್ಲ ಜರೆದಿದ್ದರು.
ಆದರೀಗ, ಒಂದೊಮ್ಮೆ ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸೋತು ಹೋದರೂ ಅಲ್ಲಿನ ವಲಸೆ ನೀತಿಯಲ್ಲಿ ಟ್ರಂಪ್ ಪ್ರತಿಪಾದನೆಯೇ ಉಳಿದುಕೊಳ್ಳುವಮಟ್ಟಿಗೆ ಅವರ ಚುನಾವಣೆ ವ್ಯಾಖ್ಯಾನ ಗಟ್ಟಿಯಾಗಿಬಿಟ್ಟಿದೆ. ಏಕೆಂದರೆ ವಲಸೆ ಕುರಿತು ಡೆಮಾಕ್ರಟ್ ಪಾಳೆಯ ಆಡುತ್ತಿದ್ದ ಉದಾರವಾದದ ನೀತಿಗಳಿಗೆ ಜಾಗವೇ ಇಲ್ಲದಂತೆ ಟ್ರಂಪ್ ಅಲ್ಲಿನ ಜನಮಾನಸವನ್ನು ಸಿದ್ಧಪಡಿಸಿದ್ದಾರೆ. 2025ರಲ್ಲಿ ಅಧಿಕಾರಕ್ಕೆ ಮರಳಿ ಬಂದರೆ ವಲಸೆ ವಿಚಾರದಲ್ಲಿ ಟ್ರಂಪ್ ನೀಡುತ್ತಿರುವ ಭರವಸೆಗಳೆಂದರೆ- ಅಮೆರಿಕ ಇತಿಹಾಸದಲ್ಲೇ ಅತಿದೊಡ್ಡ ಗಡಿಪಾರು ವ್ಯವಸ್ಥೆ, ದಾಖಲೆ ಇಲ್ಲದ ದಂಪತಿಗೆ ಜನಿಸುವ ಮಗುವಿಗೆ ಅಮೆರಿಕದಲ್ಲಿ ಸಿಗುತ್ತಿದ್ದ ಪೌರತ್ವ ರದ್ದು, ಹಮಾಸ್ ಹಾಗೂ ಇಸ್ಲಾಮಿಕ್ ಪರವಾಗಿ ಮಾತನಾಡುವವವರ ಅಮೆರಿಕ ಪೌರತ್ವ ಹಾಗೂ ಪ್ರವೇಶಗಳೆರಡಕ್ಕೂ ನಿಷೇಧ…ಹೀಗೆಲ್ಲ ಸಾಲು ಸಾಲು ಕಠಿಣ ನಿಯಮಗಳು ಟ್ರಂಪ್ ಪ್ರಣಾಳಿಕೆಯಲ್ಲಿವೆ.
ಉದಾರವಾದಿಗಳೆನಿಸಿಕೊಂಡರೆ ಮತ ಗಳಿಕೆಗೆ ಅನುಕೂಲ ಎಂಬ ಸ್ಥಿತಿಯೇ ಸದ್ಯಕ್ಕೆ ಅಮೆರಿಕದ ರಾಜಕಾರಣಕ್ಕೆ ಅಪ್ರಸ್ತುತವಾಗುವ ಪರಿಸ್ಥಿತಿಯೊಂದನ್ನು ನಿರ್ಮಿಸಿದ ಶ್ರೇಯಸ್ಸು ಡೊನಾಲ್ಡ್ ಟ್ರಂಪ್ ಪಾಲಿಗೆ ಸೇರುತ್ತದೆ. ಟ್ರಂಪ್ ಎಂಬ ವ್ಯಕ್ತಿ ನಿಜಕ್ಕೂ ಅರ್ಹನಾ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಾರಾ ಅಥವಾ ಸೋಲುತ್ತಾರಾ ಎಂಬೆಲ್ಲ ಪ್ರಶ್ನೆಗಳು ಬೇರೆಯವು. ಆದರೆ ಚರಿತ್ರೆಯಲ್ಲಿ ಹೀಗೊಂದು ವ್ಯಾಖ್ಯಾನದ ತಿರುವನ್ನು ರೂಪಿಸಿದ ಉಲ್ಲೇಖ ಟ್ರಂಪ್ ಹೆಸರಲ್ಲಿ ಉಳಿಯಲೇಬೇಕಾಗುತ್ತದೆ.
ಕಳೆದ ಮೂರು ಲೋಕಸಭೆ ಚುನಾವಣೆಗಳ ಫಲಿತಾಂಶದ ಆಧಾರದಲ್ಲಿ ಯಾರಿಗಾದರೂ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯವರನ್ನು ಲೂಸರ್ ಎಂದು ಅಣಕಿಸುವುದಕ್ಕೆ ಅವಕಾಶವಿದೆ. ಕಾಂಗ್ರೆಸ್ಸಿನ ಸಮಾಜವಾದದ ದಿನಗಳು ಕೇಸರಿ ಸಿದ್ಧಾಂತದ ಹೊಡೆತಕ್ಕೆ ಛಿದ್ರವಾಯಿತು ಅಂತಲೂ ಸೈದ್ಧಾಂತಿಕ ಚರ್ಚೆಯಲ್ಲಿರುವ ಕೆಲವರಿಗೆ ಅನ್ನಿಸಬಹುದು. ಆದರೆ, ಸಮಾಜವಾದಿ ಎಂದು ಕರೆಸಿಕೊಳ್ಳಬಹುದಾದ ನೀತಿಗಳನ್ನು ಹೆಚ್ಚು-ಹೆಚ್ಚು ಅನುಷ್ಠಾನ ಮಾಡುವ ಒತ್ತಡವೊಂದನ್ನು ಪ್ರತಿಪಕ್ಷವು ಮೋದಿ ಸರ್ಕಾರದ ಮೇಲೆ ಹೇರಿಬಿಟ್ಟಿದೆ. 2019ರ ಚುನಾವಣೆಗೆ ಹೋಗುವ ಮುಂಚೆ ಸಣ್ಣ ರೈತರ ಖಾತೆಗಳಿಗೆ ಹಣಹಾಕುವ ಪಿಎಂ ಕಿಸಾನ್ ಯೋಜನೆ ತಂದಿದ್ದಾಗಿರಬಹುದು ಇಲ್ಲವೇ ಅದಾಗಲೇ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತದರ ಮಿತ್ರರು ಅನುಸರಿಸಿದ್ದ ಉಚಿತ ಕೊಡುಗೆಗಳ ಗ್ಯಾರಂಟಿ ಮಾದರಿಯನ್ನು ನಿರಾಕರಿಸಲಾಗದೇ ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ‘ಮೋದಿ ಕಿ ಗ್ಯಾರಂಟಿ’ ಎಂದಿದ್ದರಲ್ಲಾಗಿರಬಹುದು, ಸಿಗುತ್ತಿರುವ ಹೊಳಹು ಯಾವುದು? ಸೋತವರೂ ದೇಶಕಾಲಗಳನ್ನು ಪ್ರಭಾವಿಸುತ್ತಾರೆ ಎನ್ನುವುದು. ಇದು ಯಾವುದು ಸರಿ, ಇನ್ಯಾವುದು ತಪ್ಪು ಎಂಬ ಚರ್ಚೆ ಅಲ್ಲ. ಆದರೆ ಒಳ್ಳೆಯದಿರಲಿ, ಕೆಟ್ಟದ್ದೇ ಇರಲಿ ಅದನ್ನು ಶ್ರಮವಹಿಸಿ ಪ್ರತಿಪಾದಿಸುವವವರು ಜನಜೀವನವನ್ನು ಪ್ರಭಾವಿಸಿಯೇ ಪ್ರಭಾವಿಸುತ್ತಾರೆ, ಗೆಲುವಿನ ಪೋಡಿಯಂನಲ್ಲಿ ನಿಲ್ಲದಿದ್ದರೂ!
ಇದನ್ನೇ ಜಾಗತಿಕ ರಾಜಕಾರಣದ ಚಿಂತನೆಗೂ ವಿಸ್ತರಿಸಿ ನೋಡೋಣ. ಮೇಲ್ನೋಟಕ್ಕೆ ಒಂದು ರಾಜಕೀಯ ಚಿಂತನೆಯಾಗಿ ಮಾರ್ಕ್ಸ್’ವಾದ ಸೋಲುತ್ತಿದೆ. ಎಡಪಂಥದ ರಾಜಕಾರಣ ಜಗತ್ತಿನಾದ್ಯಂತ ಮುಗ್ಗರಿಸಿದೆ. ಆದರೆ, ಮಾರ್ಕ್ಸ್ ಸಿದ್ಧಾಂತ ಮಾತ್ರ ಬೇರೆಯದೇ ಬಗೆಗಳಲ್ಲಿ ಕ್ಯಾಪಿಟಲಿಸ್ಟ್ ವ್ಯವಸ್ಥೆ ನಡುವೆಯೇ ಬಿಗಿ ಕಂಡುಕೊಳ್ಳುತ್ತಿರುವುದನ್ನು ಕಾಣಬಹುದು. ಉದಾಹರಣೆಗೆ, “ಕಾರ್ಮಿಕ ವರ್ಗವನ್ನು ಶೋಷಿಸುವುದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿದೆ. ಹೀಗೆ ಆಳುವ ವರ್ಗವು ದುಡಿಯುವ ವರ್ಗದ ಮೇಲೆ ನಡೆಸುವ ಶೋಷಣೆ ತಡೆಯಬೇಕು” ಎಂಬುದು ಮಾರ್ಕ್ಸ್’ವಾದದ ಕೂಗುಗಳಲ್ಲೊಂದು. 90ರ ದಶಕದಿಂದೀಚೆ ಬಂಡವಾಳ ವ್ಯವಸ್ಥೆಯ ಸುಖಗಳನ್ನು ಉಂಡಿರುವ ನಮ್ಮಲ್ಲಿನ ಹೆಚ್ಚಿನವರ ಪಾಲಿಗೆ ಅದರಲ್ಲೇನೂ ಅರ್ಥ ಗೋಚರಿಸಿರಲಿಲ್ಲ. ಆದರೆ ಈಗ ತಲೆಎತ್ತುತ್ತಿರುವ ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಸಾಂಪ್ರದಾಯಿಕ ಉದ್ಯೋಗಗಳನ್ನು ಕೊಲ್ಲುತ್ತ ಹೋದಂತೆ ನಾವೇ ಈ ಮೇಲೆ ಉದಾಹರಿಸಿದ ಮಾರ್ಕ್ಸ್’ವಾದಿ ಕೂಗನ್ನು ಕೂಗಲಿದ್ದೇವೆ. ಇಂಥ ಕೂಗುಗಳನ್ನು ಸಮಾಧಾನಪಡಿಸುವುದಕ್ಕೆ ಜಗತ್ತಿನ ಬಹುತೇಕ ದೇಶಗಳಿಗೆ ಇನ್ನೊಂದು ದಶಕದ ನಂತರ ಎಲ್ಲರಿಗೂ ಕನಿಷ್ಟ ಆದಾಯವೊಂದನ್ನು ಖಾತ್ರಿಗೊಳಿಸುವ ‘ಯುನಿವರ್ಸಲ್ ಬೇಸಿಕ್ ಇನ್ಕಂ’ ಘೋಷಿಸುವುದು ಅನಿವಾರ್ಯವಾಗುತ್ತದೆ.
ಚರಿತ್ರೆಯ ದಾಖಲಾತಿ ದೃಷ್ಟಿಯಿಂದ ಈ ಹಂತದಲ್ಲಿ ಮಾರ್ಕ್ಸ್’ವಾದ, ಸಮಾಜವಾದ ಎಂಬವುಗಳೆಲ್ಲ ಸೋತು ಸುಣ್ಣವಾಗಿದ್ದಿರಬಹುದು. ಆದರೆ ಹಾಗೆ ಸೋತಿದ್ದಾವೆಂದುಕೊಂಡ ಹಂತದಲ್ಲೂ ಅವು ದೇಶ ಮತ್ತು ಸಮಾಜಗಳನ್ನು ಪ್ರಭಾವಿಸಿಯೇ ಇವೆ.
ಮೇಲೆ ವಿವರಿಸಿದ ರಾಜಕೀಯ ಉದಾಹರಣೆಗಳು ಟ್ರಂಪ್, ಕಾಂಗ್ರೆಸ್, ರಾಹುಲ್ ಗಾಂಧಿ ಇವೆಲ್ಲ ಶ್ರೇಷ್ಟ ಎಂದು ವಾದಿಸುವುದಕ್ಕೆ ಕೊಟ್ಟಿರುವಂಥದ್ದಲ್ಲ. ಅಥವಾ ಇನ್ಯಾವುದೋ ಸಿದ್ಧಾಂತದ ಪರವಹಿಸುವ ಮಾತುಗಳೂ ಇವಲ್ಲ. ಜಯದ ಪದಕ ಕೊರಳಲ್ಲಿರಿಸಿಕೊಳ್ಳದವ ಸಹ ಆ ನಿರ್ದಿಷ್ಟ ಸಮಯ ಮತ್ತು ಪ್ರದೇಶಗಳನ್ನು ಬೇರೆಯದೇ ರೀತಿಯಲ್ಲಿ ಪ್ರಭಾವಿಸಿರುತ್ತಾನೆ ಅಂತ ಹೇಳುವುದಕ್ಕೆ ಪೂರಕವಾಗಿ ಒದಗಿದ ಸಂಗತಿಗಳು ಇವಷ್ಟೆ.
ಈಗ ಇದನ್ನು ಬೇರೆಯದೇ ನೆಲೆಯಲ್ಲಿ ವೈಯಕ್ತಿಕ ಜೀವನಕ್ಕೆ ಲಗತ್ತಿಸಿಕೊಂಡರೆ ಹೇಗಿರುತ್ತದೆ ಎಂದು ಯೋಚಿಸುವ ಸಮಯ.
ಸಂಪತ್ತಿನ ಸಮೀಕರಣವೇ ಪ್ರಧಾನವಾಗಿರುವ ಇವತ್ತಿನ ಬದುಕಲ್ಲಿ ನಮಗೆದುರಾಗುವ ವ್ಯಾವಹಾರಿಕ ಹಿಂಜರಿತಗಳು ಬಹಳಷ್ಟು ಬಾರಿ ಸೋತ ಭಾವ ಕೊಡುತ್ತವೆ. ನಮ್ಮ ಬದುಕು ತುಂಬ ಅಮುಖ್ಯವಾಯಿತೇನೋ ಎನಿಸಿಬಿಡಬಹುದು. ಎಲ್ಲ ಪ್ರಯತ್ನ ಮತ್ತು ಶ್ರಮಗಳ ನಂತರವೂ ಹಾಗನಿಸಿದರೆ ಸಾಫಲ್ಯ-ಸೋಲುಗಳ ಲೆಕ್ಕಾಚಾರವನ್ನು ವಿಶ್ವಪ್ರಜ್ಞೆಗೆ ಬಿಡಬೇಕು. ಬಹುಶಃ ನಿಮ್ಮ ಬದುಕಿನ ಅಳತೆಪಟ್ಟಿಯನ್ನು ಅದು ಬೇರೆ ಅಳತೆಪಟ್ಟಿಯಲ್ಲಿ ಅಳೆಯುತ್ತಿದೆ… ನೀವು ಬ್ಯಾಂಕ್ ಬ್ಯಾಲೆನ್ಸ್ ಹೊರೆತಾದ ಇನ್ಯಾವುದಕ್ಕೋ ಮಾಡಲ್ಪಟ್ಟಿದ್ದೀರಿ. ಅದನ್ನು ನಿಮ್ಮ ಸುತ್ತಲಿನ ಹತ್ತು ಮಂದಿ ಅವರ ಸ್ಕೇಲಿನಲ್ಲೆಳೆದು ನೀವು ಸೋತಿರುವುದಾಗಿ ಘೋಷಿಸಿದರೆ ತಲೆಕೆಡಿಸಿಕೊಳ್ಳಬೇಕಿರುವುದೇನಿಲ್ಲ.
- ಚೈತನ್ಯ ಹೆಗಡೆ
cchegde@gmail.com