ಇರಾನಿಯನ್ ಮಾಧ್ಯಮ ವರದಿಗಳ ಪ್ರಕಾರ, ಇರಾನಿನ ಉನ್ನತ ಕ್ಷಿಪಣಿ ಅಧಿಕಾರಿ, ಬ್ರಿಗೇಡಿಯರ್ ಜನರಲ್ ಆಮಿರ್ ಅಲಿ ಹಾಜಿಸಾದೆ ಅವರು ಹಿರಿಯ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಅಲಿರೇಜಾ಼ ಸಾಬಾಹಿಫರ್ದ್ ಅವರೊಡನೆ ಪರ್ಷಿಯನ್ ಕೊಲ್ಲಿಯ ಆಗ್ನೇಯ ಭಾಗದ ಬಂದರು ನಗರವಾದ ಬಂದರ್ ಅಬ್ಬಾಸ್‌ಗೆ ಶುಕ್ರವಾರ ಭೇಟಿ ನೀಡಿದರು.
ವರಿದಿಗಳ ಪ್ರಕಾರ, ಅವರು ಇರಾನ್ ಸಂಭಾವ್ಯ ಯುದ್ಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಎಷ್ಟು ಸಿದ್ಧವಾಗಿದೆ ಎಂದು ಪರೀಕ್ಷಿಸಲು ಈ ಭೇಟಿ ನೀಡಿದ್ದರು.
ಪರಿಶೀಲನಾ ಭೇಟಿಯ ಬಳಿಕ ಮಾತನಾಡಿದ ಸಾಬಾಹಿಫರ್ದ್ ಅವರು ಇರಾನಿನ ವಾಯು ರಕ್ಷಣಾ ವ್ಯವಸ್ಥೆ ಸಾಕಷ್ಟು ಬಲವಾಗಿದ್ದು, ಪರ್ವತದಂತೆ ಸ್ಥಿರವಾಗಿದೆ ಎಂದಿದ್ದಾರೆ. ಯಾವುದೇ ಸಂಭಾವ್ಯ ದಾಳಿ ಅಥವಾ ಅಪಾಯಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಸಿದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನಿನ ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಮೆರಿಕಾದಿಂದ ಬೆದರಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೇನಾ ಮುಖಂಡರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಕಳೆದ ವಾರ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದು, ಇರಾನ್ ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ, ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ, ವಿಧ್ವಂಸಕ ಮಿಲಿಟರಿ ದಾಳಿಯನ್ನು ಎದುರಿಸಬೇಕಾಗಬಹುದು ಎಂದಿದ್ದಾರೆ.
ಇಬ್ಬರು ಹಿರಿಯ ಕಮಾಂಡರುಗಳು ಪರಿಶೀಲಿಸಿದ ಈ ಸೇನಾ ನೆಲೆ ಹಿಂದೂ ಮಹಾಸಾಗರದ 'ಡಿಯಾಗೋ ಗ್ರೇಸಿಯಾ' ದ್ವೀಪಕ್ಕೆ ಅತ್ಯಂತ ಸನಿಹದಲ್ಲಿರುವ ಇರಾನಿಯನ್ ಸೇನಾ ನೆಲೆಯಾಗಿದೆ. ಈ ದ್ವೀಪದಲ್ಲಿ ಅಮೆರಿಕನ್ ಸೇನೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇನಾ ಉಪಕರಣಗಳನ್ನು ಕಲೆ ಹಾಕಿದೆ.
ಡಿಯಾಗೋ ಗ್ರೇಸಿಯಾ ಬ್ರಿಟಿಷ್ ಇಂಡಿಯನ್ ಓಷನ್ ಟೆರಿಟರಿಯಲ್ಲಿರುವ (ಬಿಐಒಟಿ) ಬ್ರಿಟಿಷ್ ಮಾಲೀಕತ್ವದ ದ್ವೀಪವಾಗಿದೆ. ಆದರೆ, ಯುನೈಟೆಡ್ ಕಿಂಗ್‌ಡಮ್ ಜೊತೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕಾ ಈ ದ್ವೀಪವನ್ನು ತನ್ನ ಪ್ರಮುಖ ಸೇನಾ ನೆಲೆಯನ್ನಾಗಿಸಿಕೊಂಡಿದೆ. ಡಿಯಾಗೋ ಗ್ರೇಸಿಯಾ ದ್ವೀಪ ಇರಾನಿನ ಆಗ್ನೇಯ ಗಡಿಯಿಂದ ಅಂದಾಜು 3,500 ಕಿಲೋಮೀಟರ್ (ಅಂದಾಜು 2,175 ಮೈಲಿ) ದೂರದಲ್ಲಿದ್ದು, ಒಮಾನ್ ಕೊಲ್ಲಿಗೆ (ಇರಾನ್, ಒಮಾನ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆ ಗಡಿ ಹಂಚಿಕೊಳ್ಳುವ ಪ್ರದೇಶ) ಸನಿಹದಲ್ಲಿದೆ.
ಅಮೆರಿಕಾ ಇಲ್ಲಿ ಸೇನಾ ನಿಯೋಜನೆ ನಡೆಸಿರುವುದು ಅದರ ಸಾಮರ್ಥ್ಯ ಪ್ರದರ್ಶನಕ್ಕಾಗಿದ್ದು, ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿ ನಡೆಸಲು ಈ ನೆಲೆ ನೆರವಾಗಬಲ್ಲದು. ಅಮೆರಿಕಾ ಸೇನೆ ಹಲವಾರು ಬಿ-2 ಬಾಂಬರ್‌ಗಳನ್ನು (ಬಹುತೇಕ 6 ಬಾಂಬರ್) ನಿಯೋಜಿಸಿದ್ದು, ಅವುಗಳು ಅಂದಾಜು 2,000 ಪೌಂಡ್ (907 ಕೆಜಿ) ಬಾಂಬ್‌ಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿವೆ. ಈ ಬಾಂಬರ್‌ಗಳು ನೆಲದಾಳದಲ್ಲಿರುವ ಇರಾನಿನ ಪರಮಾಣು ನೆಲೆಗಳನ್ನೂ ನಾಶಪಡಿಸಲು ಸಮರ್ಥವಾಗಿವೆ.
ಇರಾನ್ ಹಲವಾರು ವರ್ಷಗಳಿಂದ ತನ್ನ ಕ್ಷಿಪಣಿ ಯೋಜನೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ವಿವಿಧ ವ್ಯಾಪ್ತಿಗಳ, ವಿವಿಧ ರೀತಿಯ ಕ್ಷಿಪಣಿಗಳನ್ನು ರೂಪಿಸುತ್ತಿದೆ. ಕಳೆದ ವರ್ಷ ಗಾಜಾ ಯುದ್ಧ ತೀವ್ರವಾಗಿದ್ದಾಗ ಇಸ್ರೇಲ್ ಜೊತೆ ನಡೆದ ಪ್ರಮುಖ ಚಕಮಕಿಯಲ್ಲಿ ಇರಾನ್ ಇಂತಹ ನೂರಾರು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಪ್ರಯೋಗಿಸಿತ್ತು.
ಇವುಗಳಲ್ಲಿ ಹಲವಾರು ಕ್ಷಿಪಣಿಗಳನ್ನು ಮಧ್ಯ ಪೂರ್ವದಲ್ಲಿರುವ ಅಮೆರಿಕಾ ಮತ್ತು ಯುಕೆ ಮಿಲಿಟರಿ ನೆಲೆಗಳು ಹೊಡೆದುರುಳಿಸಿದ್ದರೂ, ಕೆಲವೊಂದು ಕ್ಷಿಪಣಿಗಳು ಇಸ್ರೇಲ್ ವಾಯು ಪ್ರದೇಶವನ್ನು ಪ್ರವೇಶಿಸಿ, ಪ್ರಮುಖ ಸೇನಾ ನೆಲೆಗಳ ಬಳಿ ಪತನಗೊಂಡವು.
ಅಮೆರಿಕಾ ಜೊತೆಗಿನ ಇರಾನ್ ಉದ್ವಿಗ್ನತೆಗಳು ಹೆಚ್ಚುತ್ತಿದ್ದು, ಇರಾನಿಯನ್ ನಾಯಕರು ಇಸ್ರೇಲ್ ಮೇಲಿನ ತಮ್ಮ ಕ್ಷಿಪಣಿ ದಾಳಿ ಇರಾನಿನ ಕ್ಷಿಪಣಿ ಸಾಮರ್ಥ್ಯದ ಯಶಸ್ವಿ ಪ್ರದರ್ಶನ ಎಂದಿದ್ದಾರೆ. ಮಧ್ಯ ಪೂರ್ವದಲ್ಲಿರುವ ಅಮೆರಿಕನ್ ಸೇನಾ ನೆಲೆಗಳು ಸ್ವತಃ ಅಮೆರಿಕಾ ಮತ್ತು ಇಸ್ರೇಲ್‌ಗಿಂತಲೂ ತಮಗೇ ಹತ್ತಿರದಲ್ಲಿವೆ ಎಂದು ಇರಾನ್ ನಾಯಕರು ಹೇಳಿದ್ದಾರೆ. ಇಷ್ಟು ಸಣ್ಣ ಮಟ್ಟದ ಅಂತರದಲ್ಲಿ ತಮ್ಮ ಕ್ಷಿಪಣಿಗಳು ಅತ್ಯಂತ ನಿಖರತೆ ಹೊಂದಿರಲಿದ್ದು, ಈ ನೆಲೆಗಳು ಇರಾನ್‌ಗೆ ಸುಲಭ ಗುರಿಯಾಗಲಿವೆ ಎಂದು ಇರಾನ್ ಭಾವಿಸಿದೆ.
ಇರಾನ್ ತನ್ನ ಗಡಿಯ ಬಳಿ ಇರುವ ದೇಶಗಳಲ್ಲಿನ ಅಮೆರಿಕಾದ ಸೇನಾ ನೆಲೆಗಳನ್ನು ಹೆಸರಿಸಿ, ತನ್ನ ಅಭಿಪ್ರಾಯ ನಿಜ ಎಂದು ವಿವರಿಸಿದೆ. ಈ ನೆಲೆಗಳೆಂದರೆ:
ಇರಾನ್ ಜೊತೆ ಗಡಿ ಹಂಚಿಕೊಳ್ಳುವ ಇರಾಕ್, ಅಮೆರಿಕನ್ ನೌಕಾಪಡೆಯ ಐದನೇ ಫ್ಲೀಟ್ ಇರುವ ಬಹ್ರೇನ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಎಲ್ಲವೂ ಇರಾನಿನಿಂದ 300 - 500 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ), ಒಮಾನ್ ಮತ್ತು ಸೌದಿ ಅರೇಬಿಯಾ (ಎರಡೂ ಇರಾನ್‌ಗೆ ಸನಿಹದಲ್ಲಿದ್ದು, ಅಮೆರಿಕನ್ ಪಡೆಗಳಿಗೆ ಆಶ್ರಯ ನೀಡುತ್ತಿವೆ).
ಇಷ್ಟೊಂದು ಅಮೆರಿಕನ್ ಸೇನಾ ನೆಲೆಗಳು ಇರಾನ್‌ಗೆ ಸನಿಹದಲ್ಲಿದ್ದು, ಯಾವುದೇ ಯುದ್ಧದ ಸಂದರ್ಭದಲ್ಲಿ ಅವುಗಳು ತನಗೆ ಸುಲಭ ಗುರಿಯಾಗಬಹುದು ಎಂದು ಇರಾನ್ ಭಾವಿಸಿದೆ.
2020ರಲ್ಲಿ, ಅಮೆರಿಕನ್ ಪಡೆಗಳು ನೆಲೆಸಿದ್ದ, ಇರಾಕಿನ ಐನ್ ಅಲ್ ಅಸಾದ್ ನೆಲೆಯ ಮೇಲೆ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿತ್ತು. ಇರಾನಿನ ಉನ್ನತ ಮಿಲಿಟರಿ ಮುಖಂಡ ಕಾಸಿಮ್ ಸೊಲೆಮಾನಿಯನ್ನು ಅಮೆರಿಕಾ ಹತ್ಯೆಗೈದುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಯಿತು.
ಈ ದಾಳಿಯನ್ನು ಅತ್ಯಂತ ನಿಖರವಾಗಿ, ಯಾವುದೇ ಸಾವು ಸಂಭವಿಸದ ರೀತಿಯಲ್ಲಿ ಆಯೋಜಿಸಿದ್ದರೂ, ಇರಾನಿನ ಕ್ಷಿಪಣಿಗಳು ಅಮೆರಿಕನ್ ಸೇನಾ ನೆಲೆಯ ಕಟ್ಟಡಗಳು ಮತ್ತು ಮಿಲಿಟರಿ ಉಪಕರಣಗಳನ್ನು ಹಾಳುಗೆಡವಲು ಯಶಸ್ವಿಯಾಗಿದ್ದವು.
ಅಮೆರಿಕಾ ಈ ಪ್ರದೇಶದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಸಾಕಷ್ಟು ಹೆಚ್ಚಿಸಿದ್ದರೂ, ಅಮೆರಿಕಾ ಸದ್ಯದ ಮಟ್ಟಿಗೆ ಇರಾನ್ ಮೇಲೆ ದಾಳಿ ನಡೆಸುವ ಯಾವುದೇ ಸಾಧ್ಯತೆಗಳಿಲ್ಲ. ಬದಲಿಗೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಬೆದರಿಕೆ ಒಡ್ಡಿ, ಇರಾನ್ ತನಗೆ ಬೇಕಾದ ಒಪ್ಪಂದಗಳಿಗೆ ಒಪ್ಪಿಗೆ ಸೂಚಿಸುವಂತೆ ಮಾಡುವ ಉದ್ದೇಶ ಹೊಂದಿರುವಂತೆ ಕಾಣುತ್ತಾರೆ.
ಇರಾನ್ ಹಲವಾರು ಪ್ರದೇಶಗಳಲ್ಲಿ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ, ಇರಾನ್ ಮೇಲೆ ಏನಾದರೂ ಗಂಭೀರ ದಾಳಿ ನಡೆಸಬೇಕಾದರೆ ಅಮೆರಿಕಾ ಅಪಾರ ಪ್ರಮಾಣದ ಆಯುಧಗಳು, ವಿಮಾನಗಳು ಮತ್ತು ಸೇನಾಪಡೆಗಳನ್ನು ಹೊಂದಬೇಕಾಗುತ್ತದೆ. ಇಂತಹ ದಾಳಿ ಏನಾದರೂ ನಡೆಸಿದರೆ, ಅದು ಇರಾನಿನ ಪರಮಾಣು ನೆಲೆಗಳು ಮತ್ತು ಸೇನಾ ನೆಲೆಗಳನ್ನು ನಾಶಪಡಿಸಿ, ಇರಾನ್ ತಕ್ಷಣವೇ ಪ್ರತಿದಾಳಿ ನಡೆಸದಂತೆ ನೋಡಿಕೊಳ್ಳಬೇಕಾಗುತ್ತದೆ.
ಅಮೆರಿಕಾ ಕೇವಲ ಶಕ್ತಿ ಪ್ರದರ್ಶನಕ್ಕೆ ಸೀಮಿತವಾಗದೆ, ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗುವುದು ಅದರ ಎಚ್ಚರಿಕೆಗೆ ಇರಾನ್ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ಅಮೆರಿಕಾ ಅಧ್ಯಕ್ಷರ ಪತ್ರಕ್ಕೆ ಟೆಹರಾನ್ ಒಮಾನ್ ಮೂಲಕ ಪ್ರತಿಕ್ರಿಯೆ ರವಾನಿಸಿದೆ. ಸಾರ್ವಜನಿಕ ಹೇಳಿಕೆಗಳ ಪ್ರಕಾರ, ಅಮೆರಿಕಾ ಸದ್ಯಕ್ಕೆ ಇರಾನ್ ಜೊತೆ ಪರೋಕ್ಷ ಮಾತುಕತೆಗಳನ್ನಷ್ಟೇ ನಡೆಸುವುದಾಗಿ ಸೂಚಿಸಿದೆ.
ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನವಾದ ಏರ್‌ಫೋರ್ಸ್ ವನ್ ನಿಂದ ಎಪ್ರಿಲ್ 3ರಂದು ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ಅಮೆರಿಕಾದೊಡನೆ ನೇರ ಮಾತುಕತೆ ನಡೆಸಲು ಆಸಕ್ತಿ ಹೊಂದಿದೆ ಎಂದಿದ್ದರು. ಆದರೆ ಇರಾನ್ ಅಧಿಕಾರಿಗಳು ಟ್ರಂಪ್ ಹೇಳಿಕೆಯನ್ನು ಬೆಂಬಲಿಸುವಂತಹ ಯಾವುದೇ ಹೇಳಿಕೆ ಬಿಡುಗಡೆಗೊಳಿಸಿಲ್ಲ.
ಅಮೆರಿಕಾ ಮತ್ತು ಇಸ್ರೇಲ್‌ಗಳ ಮಿಲಿಟರಿ ಸಾಮರ್ಥ್ಯದ ಅರಿವು ಇರಾನಿಗಿದ್ದು, ಅದು ತನಗೆ ಯುದ್ಧ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಿಗೆ, ಪರಸ್ಪರ ಗೌರವದ ಆಧಾರದಲ್ಲಿ ಒಪ್ಪಂದಗಳು ಏರ್ಪಡುವುದಾದರೆ ತಾನು ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದೆ.
ಇನ್ನೊಂದೆಡೆ, ಇರಾನ್ ಒಂದು ಪ್ರಾದೇಶಿಕ ರಾಜತಾಂತ್ರಿಕ ಪ್ರಯತ್ನದಲ್ಲಿ ನಿರತವಾಗಿದೆ. ಈ ವಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಸೌದಿ ಅರೇಬಿಯಾ, ಇರಾಕ್, ಜೋರ್ಡಾನ್, ಯುಎಇ, ಕುವೈತ್, ಬಹ್ರೇನ್, ಮತ್ತು ಟ್ಯುನೀಶಿಯಾಗಳ ನಾಯಕರೊಡನೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕಾಗೆ ನಿಮ್ಮ ನೆಲ ಆಥವಾ ವಾಯು ಪ್ರದೇಶವನ್ನು ಒದಗಿಸಬೇಡಿ ಎಂದು ಪೆಜೆಶ್ಕಿಯಾನ್ ಮನವಿ ಮಾಡಿಕೊಂಡಿದ್ದಾರೆ.
ಇರಾನ್ ಜೊತೆ ಇಂದಿಗೂ ಅಪನಂಬಿಕೆ ಮತ್ತು ದೀರ್ಘಾವಧಿಯ ವೈರತ್ವ ಹೊಂದಿದ್ದರೂ, ಒಂದಷ್ಟು ಅರಬ್ ರಾಷ್ಟ್ರಗಳು ಇಂದಿಗೂ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಲ್ಲಿ ಭಾಗವಾಗುವ ಕುರಿತು ಜಾಗರೂಕತೆಯಿಂದಿವೆ. ಪರ್ಷಿಯನ್ ಕೊಲ್ಲಿಯ ತೈಲ ಉತ್ಪಾದಕ ದೇಶಗಳಿಗೆ ಇಂಧನ ಮಾರುಕಟ್ಟೆಯಲ್ಲಿನ ಬದಲಾವಣೆಯ ಕುರಿತು ಆತಂಕ ಇರುವುದರಿಂದ, ಅವುಗಳು ಸಂಭಾವ್ಯ ಯುದ್ಧದ ಕುರಿತು ಭಯ ಹೊಂದಿವೆ.
ಹೊರ್ಮುಸ್ ಜಲಸಂಧಿಯ (ಇರಾನ್ ಮತ್ತು ಒಮಾನ್ ನಡುವಿನ ಸಣ್ಣ ಜಲಮಾರ್ಗ) ಬಳಿ ಏನಾದರೂ ಕದನ ನಡೆದರೆ, ಅದರ ಪರಿಣಾಮವಾಗಿ ತೈಲ ಬೆಲೆಗಳು ಭಾರೀ ಹೆಚ್ಚಳ ಕಾಣಬಹುದು. ಜಗತ್ತಿನ ಐದನೇ ಒಂದು (20%) ಪ್ರಮಾಣದ ತೈಲ ಈ ಮಾರ್ಗದ ಮೂಲಕವೇ ಸಾಗುತ್ತಿದ್ದು, ಇದು ಜಾಗತಿಕ ಇಂಧನ ವ್ಯಾಪಾರಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಇತರ ತೊಂದರೆಗಳ ಜೊತೆಗೆ, ಈ ಪ್ರದೇಶ ಹೆಚ್ಚುತ್ತಿರುವ ನೀರಿನ ಕೊರತೆ ಸೇರಿದಂತೆ, ಹಲವಾರು ಹವಾಮಾನ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದೆ. ಕತಾರ್‌ನಂತಹ ದೇಶಗಳಲ್ಲಿ ಈ ಸಮಸ್ಯೆ ಈಗಾಗಲೇ ಹೆಚ್ಚಾಗಿದ್ದು, ಯುದ್ಧ ನಡೆಯುವುದು ಅವುಗಳಿಗೆ ಬೇಕಾಗಿಲ್ಲ.
ವರದಿಗಳ ಪ್ರಕಾರ, ಒಂದು ಗಂಭೀರ ಯುದ್ಧ ನಡೆಯುವ ಭೀತಿಯಿಂದಾಗಿ ಇರಾನ್ ಮಧ್ಯ ಪೂರ್ವದಲ್ಲಿ ತನ್ನ ಚಟುವಟಿಕೆಗಳನ್ನು ಕಡಿಮೆಗೊಳಿಸಲು ಆಲೋಚಿಸುತ್ತಿದೆ. ಕನಿಷ್ಠ ಪಕ್ಷ ಹೆಚ್ಚಿರುವ ಉದ್ವಿಗ್ನತೆಗಳು ತಿಳಿಯಾಗುವ ತನಕವಾದರೂ ಇರಾನ್ ಸಮಾಧಾನದ ಹೆಜ್ಜೆ ಇಡಬಹುದು.
ಅನಾಮಧೇಯ ಇರಾನಿಯನ್ ಅಧಿಕಾರಿಯೊಬ್ಬರು ಇರಾನ್ ಯೆಮೆನ್‌ನಿಂದ ತನ್ನ ಪಡೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅಮೆರಿಕಾ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಅಮೆರಿಕಾದೊಡನೆ ನೇರ ಯುದ್ಧ ಎದುರಾಗುವುದನ್ನು ತಪ್ಪಿಸುವ ಸಲುವಾಗಿ ಇರಾನ್ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಅದರೊಡನೆ, ಇರಾನ್ ವ್ಯವಹರಿಸುವ ರೀತಿಯಲ್ಲಿ ಆಕ್ರಮಣಕಾರಿ ಧೋರಣೆಯೂ ಈಗ ಕಡಿಮೆಯಾಗುತ್ತಿದೆ. ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮುಖ್ಯ ಸಲಹೆಗಾರರಾದ ಅಲಿ ಲರಿಜಾನಿ ಒಂದು ಬಾರಿ ಟಿವಿ ಕಾರ್ಯಕ್ರಮದಲ್ಲಿ ಇರಾನ್ ಮೇಲೆ ದಾಳಿ ನಡೆದರೆ ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಸಿದ್ಧಗೊಳಿಸುತ್ತೇವೆ ಎಂದಿದ್ದರು. ಈಗ ಅವರೂ ತನ್ನ ಕಠಿಣ ಧೋರಣೆಯಿಂದ ಹಿಂದೆ ಸರಿಯುತ್ತಿರುವಂತೆ ಕಂಡುಬರುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, "ಡೊನಾಲ್ಡ್ ಟ್ರಂಪ್ ಅವರೊಬ್ಬ ಪ್ರತಿಭಾನ್ವಿತ ವ್ಯಕ್ತಿ. ಆದ್ದರಿಂದಲೇ ಅವರು ಉದ್ಯಮದಲ್ಲೂ ಯಶಸ್ವಿಯಾಗಿದ್ದಾರೆ" ಎಂದಿದ್ದರು. ಅಮೆರಿಕನ್ ಅಧ್ಯಕ್ಷರನ್ನು ಇರಾನಿಯನ್ ಅಧಿಕಾರಿಯೊಬ್ಬರು ಹೀಗೆ ಹೊಗಳುವುದು ಅಪರೂಪದ ಬೆಳವಣಿಗೆಯಾಗಿದ್ದು, ಅವರು ಭವಿಷ್ಯದಲ್ಲಿ ಇರಾನ್‌ನಲ್ಲಿ ಆರ್ಥಿಕ ಹೂಡಿಕೆ ನಡೆಸುವ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಅಮೆರಿಕಾಗೆ ಸಂದೇಶವನ್ನೂ ನೀಡಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ, ಓರ್ವ ಹಿರಿಯ ಕಠಿಣ ಇಸ್ಲಾಮಿಕ್ ಧರ್ಮಗುರು ಮತ್ತು ಸರ್ವೋಚ್ಚ ನಾಯಕರ ಕ್ರಮಗಳನ್ನು ನೋಡಿಕೊಳ್ಳುವ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಸದಸ್ಯರೂ ಆಗಿರುವ ಮಹ್ಮೂದ್ ಮೊಹಮ್ಮದ್ ಅರಾಘಿ ಅವರು ಅಮೆರಿಕಾ ಕುರಿತು ಇರಾನಿನ ನಿಲುವಿನಲ್ಲಿ ಸಂಭಾವ್ಯ ಬದಲಾವಣೆಗಳ ಸುಳಿವನ್ನೂ ನೀಡಿದ್ದಾರೆ. ವಾಷಿಂಗ್ಟನ್ ಜೊತೆ ವ್ಯವಹರಿಸುವುದು ಇರಾನ್ ಪಾಲಿಗೆ ಒಳ್ಳೆಯ ಬೆಳವಣಿಗೆ ಆಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದು, ಇರಾನ್ ನೇರ ಮಾತುಕತೆಗೆ ಸಿದ್ಧವಾಗಬೇಕು ಎಂಬ ಪ್ರಸ್ತಾಪವನ್ನೂ ನೀಡಿದ್ದಾರೆ.
ತನ್ನ ಭಾಷಣದಲ್ಲಿ ಇರಾನಿನ ನಡೆಯನ್ನು 'ಶಕ್ತಿಯಿಂದ ಹೊಂದಾಣಿಕೆಯೆಡೆಗಿನ ದಿಟ್ಟ ನಡೆ' ಎಂದು ಬಣ್ಣಿಸಿದ್ದು, 2013ರಲ್ಲಿ ಅಮೆರಿಕಾದೊಡನೆ ಮಾತುಕತೆಗೆ ಅನುಮತಿಸಿದ ಖಮೇನಿ ನಿಲುವನ್ನು ಪ್ರಸ್ತಾಪಿಸಿದ್ದಾರೆ. ಅಂದರೆ, ಇರಾನ್ ರಾಜತಾಂತ್ರಿಕತೆಯನ್ನು ಆಯ್ದುಕೊಳ್ಳುವುದು ದೌರ್ಬಲ್ಯದಿಂದಲ್ಲ, ಬದಲಿಗೆ ಅದು ಹೊಂದಿರುವ ಆತ್ಮವಿಶ್ವಾಸದಿಂದ ಎಂದು ಅವರು ಹೇಳಿದ್ದಾರೆ. ಇದರ ಪರಿಣಾಮವಾಗಿ 2015ರ ಪರಮಾಣು ಒಪ್ಪಂದ ನಡೆದು, ದೇಶಕ್ಕೆ ಪ್ರಯೋಜನಕಾರಿಯಾಯಿತು ಎಂದು ಅವರು ಹೇಳಿದ್ದಾರೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com