ದೂರದ ಬಿಹಾರಕ್ಕೂ ಕರ್ನಾಟಕಕ್ಕೂ ರಾಜಕಾರಣದಲ್ಲಿ ಒಂದು ರೀತಿ ಅವಿನಾಭಾವ ಸಂಬಂಧ. ಅದು ಲೋಕನಾಯಕ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿ ಇರಬಹುದು, ಜನತಾ ಪರಿವಾರದ ಯಾದವಿ ಕಲಹವಿರಬಹುದು, ಕರ್ನಾಟಕ ಮತ್ತು ಬಿಹಾರಕ್ಕೆ ರಾಜಕೀಯ ಸಾಮ್ಯತೆ ಇದೆ. ತುರ್ತು ಪರಿಸ್ಥಿತಿಯ ಹೋರಾಟದ ಕಿಚ್ಚು, ನಂತರದ ಜನತಾ ಪರಿವಾರದ ರಾಜಕಾರಣದಲ್ಲಿ ಬಿಹಾರ ಮತ್ತು ಕರ್ನಾಟಕಕ್ಕೆ ಹೋಲಿಕೆ ಇದೆ. ಬಿಹಾರ ಜನತಾ ಪರಿವಾರದ ಅನೇಕ ಹಿರಿಯ ನಾಯಕರು ಕರ್ನಾಟಕದ ಜನತಾ ಪರಿವಾರ ನಾಯಕರ ಒಂದು ಕಾಲದ ಒಡನಾಡಿಗಳು. ಬಿಹಾರ ಚುನಾವಣೆ ಎಂದರೆ ಕನ್ನಡಿಗರಿಗೂ ಕುತೂಹಲ. ಬಿಹಾರ ಈಗ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಂದು ನಿಂತಿದೆ.
ಬಿಹಾರ 243 ವಿಧಾನಸಭಾ ಕ್ಷೇತ್ರಗಳ ರಾಜ್ಯ. ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಎಲೆಕ್ಷನ್. ಕೇಂದ್ರ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ. ಬೆನ್ನಲ್ಲೇ ಇದು ವಿವಾದ. ಪ್ರತಿಪಕ್ಷ ಒಕ್ಕೂಟ ಐಎನ್‌ಡಿಐಎ ದಿಂದ ಬಲವಾದ ವಿರೋಧ. ಅನಕ್ಷರಸ್ಥ ವಲಸೆ ಕಾರ್ಮಿಕರು, ದಲಿತರು, ಬಡವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಹುನ್ನಾರ ಇದು ಎಂಬುದು ಐಎನ್‌ಡಿಐಎ ಆರೋಪ. ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಆಯಾಮ.
ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಹಾಗೂ ಆಡಳಿತಾರೂಢ ಎನ್‌ಡಿಎ ಆಣತಿಯಂತೆ ನಡೆಯುತ್ತಿದೆ ಎಂಬ ಆರೋಪ. ಮಿತ್ರ ಪಕ್ಷಗಳು ಹಾಗೂ ಜನರಿಂದ ಅಭಿಪ್ರಾಯ ಸಂಗ್ರಹಿಸಿದ ನಂತರ ಬಿಹಾರ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ತೀರ್ಮಾನಿಸುವುದಾಗಿ ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ, ಆರ್‌ಜೆಡಿಯ ತೇಜಸ್ವಿ ಯಾದವ್ ಎಚ್ಚರಿಕೆ. ಬಿಹಾರ ಚುನಾವಣೆಯಲ್ಲಿ 50 ರಿಂದ 80 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಬಹುದು ಎಂಬ ಆತಂಕ ಅವರದು.
ಬಿಹಾರದಲ್ಲಿ ಈಗ ಚುನಾವಣೆಯದ್ದೇ ಹವಾ. ಎನ್‌ಡಿಎ ದಿಂದ ಗ್ಯಾರಂಟಿಗಳ ಘೋಷಣೆ. ಬಿಹಾರ ಅಸೆಂಬ್ಲಿಯಲ್ಲಿ ಈಗ ಎನ್ ಡಿ ಎ 131 ಸೀಟುಗಳು. ಆರ್‌ಜೆಡಿ -ಕಾಂಗ್ರೆಸ್ 111. ಪಕ್ಷೇತರ ಒಬ್ಬರು. ಬಿಹಾರದಲ್ಲಿ 2020ರಲ್ಲಿ ನಡೆದ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡಪಕ್ಷವಾಗಿ ಉದಯ. ಬಿಜೆಪಿ 74, ಜೆಡಿಯು 43, ಕಾಂಗ್ರೆಸ್ ಪಡೆದಿದ್ದು 19 ಸೀಟುಗಳು. ಆರ್ ಜೆಡಿ ಶೇ. 23.1, ಬಿಜೆಪಿ ಶೇ. 19.5, ಜೆಡಿಯು ಶೇ.15.4, ಕಾಂಗ್ರೆಸ್ ಶೇ.9.5 ಮತಗಳನ್ನು ಪಡೆದಿತ್ತು.
ಬಿಹಾರ ರಾಜಕಾರಣ ಎಂದರೆ ಕಳೆದ ಇಪ್ಪತ್ತು ವರ್ಷಗಳಿಂದ ನಿತೀಶ್ ಕುಮಾರ್ ಅವರ ಆಡುಂಬೋಲ. ನಿತೀಶ್ ಕಳೆದ ಇಪ್ಪತ್ತು ವರ್ಷಗಳಲ್ಲಿ ಐದು ಬಾರಿ ತಮ್ಮ ಇಚ್ಛೆಯಂತೆ ಮೈತ್ರಿಕೂಟ ಬದಲಿಸಿದವರು. ಇದಕ್ಕಾಗಿಯೇ ಅವರ ಬಗ್ಗೆ ಪಲ್ಟುರಾಮ್ ಎಂಬ ಗೇಲಿ ಮಾತು. ಇದರಿಂದ ಅವರ ಜನಪ್ರಿಯತೆಗೆ ಮುಕ್ಕು. ಆದರೂ, ವಿಶ್ವಾಸಾರ್ಹತೆ ಹಾಗೂ ಜನಪ್ರಿಯತೆಯಲ್ಲಿ 74 ವರ್ಷದ ನಿತೀಶ್ ಕುಮಾರ್ ಅವರನ್ನು ಹಿಂದಿಕ್ಕುವುದು ಅಷ್ಟು ಸುಲಭದ ಮಾತಲ್ಲ.
ನಿತೀಶ್ ಕುಮಾರ್ ಅವರಿಗೆ ತಮ್ಮದೇ ಕುರ್ಮಿ ಸಮಾಜದ ಬೆಂಬಲ ಹೆಚ್ಚು. ಕುಶ್ವ ಸಮಾಜದ ಮತದಾರರ ಒಲವು ನಿತೀಶ್ ಅವರತ್ತಲೇ. ನಿತೀಶ್ ಕುಮಾರ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ 2005ರಲ್ಲಿ ಮಹಾದಲಿತ ಆಯೋಗ ಹಾಗೂ ಅತಿ ಹಿಂದುಳಿದ ಜಾತಿ ಆಯೋಗವನ್ನು ರಚಿಸಿದರು. ಅತಿ ಹಿಂದುಳಿದ ಜಾತಿ ಹಾಗೂ ಮಹಿಳೆಯರಿಗೆ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಜಾರಿಗೆ ತಂದರು. ಮಹಿಳಾ ಸಬಲೀಕರಣದ ಅನೇಕ ಯೋಜನೆಗಳ ಹರಿಕಾರರು ಅವರು. ಅಭಿವೃದ್ಧಿ ಕಾರ್ಯಗಳ ಮೇಲೆ ಹೆಚ್ಚು ಗಮನ. ಇದು ನಿತೀಶ್ ಅವರಿಗೆ ಚುನಾವಣಾ ರಾಜಕಾರಣದಲ್ಲಿ ಲಾಭ ತಂದುಕೊಟ್ಟಿದೆ. ನಿತೀಶ್ ಅವರನ್ನು ಗೆಲುವಿನ ದಡಕ್ಕೆ ತಲುಪಿಸುವವರೇ ಮಹಿಳಾ ಮತದಾರರು. ಜಾತಿ ಗಣತಿಯನ್ನು ನಡೆಸಿದ್ದು ಅವರನ್ನು ಹಿಂದುಳಿದ ವರ್ಗಗಳ ವಿಶಾಲ ತಳಹದಿಯ ಮೇಲೆ ತಂದು ನಿಲ್ಲಿಸಿತು.
ನಿತೀಶ್ ಇಪ್ಪತ್ತು ವರ್ಷಗಳಿಂದ ಮುಖ್ಯಮಂತ್ರಿ. ನಡುವೆ 2014-15 ರಲ್ಲಿ ಒಂಬತ್ತು ತಿಂಗಳು ಮಾತ್ರ ಮುಖ್ಯಮಂತ್ರಿ ಆಗಿರಲಿಲ್ಲ. ನಿತೀಶ್ ಅವರ ಜೆಡಿಯು ಅಸೆಂಬ್ಲಿ ಚುನಾವಣೆಯಲ್ಲಿ ಏಕಾಂಗಿಯಾಗಿ ಯಾವತ್ತೂ ಬಹುಮತ ಪಡೆದಿಲ್ಲ. ಮೈತ್ರಿ ರಾಜಕಾರಣದಲ್ಲೇ ಬಾಣ ಹೂಡಿ ಗುರಿ ಸಾಧಿಸಿದವರು. ನಿತೀಶ್ ಕುಮಾರ್ ಅವರಿಗೆ 1999 ರಿಂದ 2013ರ ವರೆಗೆ ಬಿಜೆಪಿ ಜೊತೆ ಸಖ್ಯವಿತ್ತು. ನಂತರ ಯುಪಿಎ ಜೊತೆ ಸೇರಿದರು. 2017ರಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಬಂದರು. ಮಹಾಘಟಬಂಧನ್ ಗೆ 2022ರಲ್ಲಿ ಜಾರಿದರು. ಜನವರಿ 2024ರಲ್ಲಿ ಮತ್ತೆ ಎನ್‌ಡಿ ಎ ಮಡಿಲಿಗೆ ಬಿದ್ದರು.
ಬಿಹಾರ ಕಳೆದ 30 ವರ್ಷಗಳಿಂದ ವೈಯಕ್ತಿಕ ವರ್ಚಸ್ಸಿನ ರಾಜಕಾರಣದ ಮೇಲೆ ಸಾಗುತ್ತಾ ಬಂದಿದೆ. ಮೊದಲು 15 ವರ್ಷಗಳ ಕಾಲ ಲಾಲೂಪ್ರಸಾದ್ ಯಾದವ್ ಅವರ ಸಾಮ್ರಾಜ್ಯ. ಮೇವು ಹಗರಣದಲ್ಲಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾದಾಗ ಲಾಲೂ ತಮ್ಮ ಪುತ್ನಿ ರಾಬ್ಡಿದೇವಿ ಅವರನ್ನೇ ಮುಖ್ಯಮಂತ್ರಿ ಪದವಿಯಲ್ಲಿ ಕೂರಿಸಿದವರು. ಈಗ 20 ವರ್ಷಗಳಿಂದ ನಿತೀಶ್ ರಾಜ್ಯಭಾರ.
ನಿತೀಶ್ ಕುಮಾರ್ ಅವರ ಆರೋಗ್ಯದ ಬಗ್ಗೆಯೂ ಪ್ರತಿಪಕ್ಷಗಳು ಬಾಣಗಳನ್ನು ಬಿಡುತ್ತಿವೆ. ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಹುಟ್ಟುಹಬ್ಬದ ದಿನ ಒಮ್ಮೆ ಹೇಳಿದ್ದು ಹೀಗೆ- 15 ವರ್ಷದ ವಾಹನಗಳೇ ಓಡುವುದಿಲ್ಲ. ಇನ್ನು 20 ವರ್ಷದ ಸರಕಾರ ಏಕೆ ?ನಿತೀಶ್ ಕುಮಾರ್ ಬಳಲಿರುವ ಮುಖ್ಯಮಂತ್ರಿ.
ಕೇಂದ್ರದಲ್ಲಿ ಸಚಿವರಾಗಿದ್ದ ರಾಮವಿಲಾಸ್ ಪಾಸ್ವಾನ್ ಸ್ಥಾಪಿಸಿದ ಲೋಕಜನಶಕ್ತಿ ಪಕ್ಷಕ್ಕೆ ಬಿಹಾರದ ಕೆಲವೆಡೆ ನೆಲೆ ಇದೆ. ಈ ಪಕ್ಷ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷ. ಈ ಪಕ್ಷದ ನಾಯಕ, ರಾಮವಿಲಾಸ ಪಾಸ್ವಾನ್ ಅವರ ಪುತ್ರ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹಾಗೂ ನಿತೀಶ್ ಕುಮಾರ್ ಅವರ ಮಧ್ಯೆ ಭಿನ್ನಾಭಿಪ್ರಾಯವಿದೆ. ಬಿಹಾರದಲ್ಲಿ ಇತ್ತೀಚೆಗೆ ಆಂಬುಲೆನ್ಸ್ ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆಯಿತು. ಈ ಘಟನೆ ನಂತರ ಚಿರಾಗ್ ಪಾಸ್ವಾನ್ ತಮ್ಮದೇ ಮಿತ್ರಕೂಟದ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದರು.
ಬಿಹಾರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಕ್ರಿಮಿನಲ್ ಗಳನ್ನು ನಿಯಂತ್ರಿಸಲು ವಿಫಲರಾಗಿರುವ ಸರಕಾರವನ್ನು ಬೆಂಬಲಿಸುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮಗಳು ಗಂಭೀರ ಸ್ವರೂಪ ಪಡೆಯಲಿದೆ ಎಂದು ಪ್ರಾರಂಭದಲ್ಲಿ ಚಿರಾಗ್ ಪಾಸ್ವಾನ್ ಎಚ್ಚರಿಸಿದರು. ಇದಾದ ಎರಡು ದಿನಗಳಲ್ಲೇ ಚಿರಾಗ್ ಉಲ್ಟಾ ಹೊಡೆದರು. ಈ ಚುನಾವಣೆ ನಂತರ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದು ಟೀಕೆಗೆ ಗುರಿಯಾದರು.
ಚಿರಾಗ್ ಅವರಿಗೆ ದೆಹಲಿಯ ರಾಜಕಾರಣಕ್ಕಿಂತ ಪಾಟ್ನಾ ರಾಜಕಾರಣದಲ್ಲೇ ಆಸಕ್ತಿ. ರಾಜ್ಯ ರಾಜಕೀಯದಲ್ಲಿ ನೆಲೆಯೂರಿ ದಾಳಗಳನ್ನು ಉರುಳಿಸಬೇಕೆಂಬ ಪ್ರಯತ್ನ. ಬಿಹಾರ ಜನರಿಗಾಗಿ ರಾಜ್ಯ ರಾಜಕಾರಣ ಪ್ರವೇಶಿಸುವೆ ಎಂದಿದ್ದಾರೆ ಚಿರಾಗ್ ಪಾಸ್ವಾನ್. ಚಿರಾಗ್ ಮಹತ್ವಾಕಾಂಕ್ಷಿ ರಾಜಕಾರಣಿ.
ಬಿಹಾರದ ರಾಜಕಾರಣಕ್ಕೆ ಈ ಬಾರಿ ರಾಜಕೀಯ ತಂತ್ರಗಳನ್ನು ಹೆಣೆಯುವ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್ ಅವರ ಪ್ರವೇಶವಾಗಿದೆ. ರಾಜಕೀಯ ಪಕ್ಷಗಳಿಗೆ ತೆರೆಮರೆಯಲ್ಲಿ ನಿಂತು ತಂತ್ರಗಳನ್ನು ರೂಪಿಸುತ್ತಿದ್ದ ಪ್ರಶಾಂತ್ ಈಗ ತಾವೇ ಅಖಾಡಕ್ಕೆ ಧುಮುಕಿ ಸತ್ವ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಜನ್ ಸೂರಾಜ್ ಬಿಹಾರದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ಹೊರಟಿದೆ. ಆದರೆ, ಬಿಹಾರದ ಕೆಲವು ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜನ್ ಸೂರಾಜ್ ಪಕ್ಷದ ಅಭ್ಯರ್ಥಿಗಳು ಬಹುತೇಕ ಕಡೆ ಠೇವಣಿ ಕಳೆದುಕೊಂಡಿದ್ದು ನಿಜ. ಪ್ರಶಾಂತ ಕಿಶೋರ್ ಬಿಹಾರದ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದಾರೆ.
ಬಿಹಾರದಲ್ಲಿ ಜಾತಿ ರಾಜಕಾರಣದ್ದೇ ಮೇಲಾಟ. ಬಿಜೆಪಿಯ ಹಿಂದುತ್ವ ಇಲ್ಲಿ ಏಕಾಂಗಿಯಾಗಿ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ. ಹಿಂದಿ ಭಾಷೆಯ ರಾಜ್ಯಗಳಲ್ಲಿ ಬಿಹಾರದಲ್ಲಿ ಮಾತ್ರ ಬಿಜೆಪಿ ಏಕಾಂಗಿಯಾಗಿ ಅಧಿಕಾರ ನಡೆಸಲು ಈವರೆಗೂ ಸಾಧ್ಯವಾಗಿಲ್ಲ. ಬಿಜೆಪಿಗೆ ಇಲ್ಲಿ ನೆಲೆ ಇದೆ. ಆದರೆ, ಏಕಾಂಗಿಯಾಗಿ ಕಣಕ್ಕೆ ಧುಮುಕುವ ಸಾಹಸಕ್ಕೆ ಕೈಹಾಕಿಲ್ಲ. ಅಧಿಕಾರಕ್ಕೆ ಬರಲು ಮೈತ್ರಿ ಅತ್ಯಗತ್ಯ. ಇಲ್ಲಿ ಬಿಜೆಪಿಗೆ ಹಿಂದುಳಿದ ವರ್ಗಗಳಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಗೆ ಸಾಂಪ್ರದಾಯಿಕ ಮೇಲ್ಜಾತಿಯ ಮತದಾರರು ಶ್ರೀರಕ್ಷೆ. ಬಿಹಾರದಲ್ಲಿ ಕಳೆದ 35 ವರ್ಷಗಳಿಂದ ಮೇಲ್ಜಾತಿಯ ಹೊಸ ನಾಯಕತ್ವ ಬಂದಿಲ್ಲ ಎಂಬುದು ಗಮನಾರ್ಹ. ಬಿಹಾರ ಹಿಂದುಳಿದ ವರ್ಗಗಳ ರಾಜಕಾರಣವನ್ನೇ ಹಾಸಿ ಹೊದ್ದಿದೆ.
ಆರ್‌ಜೆಡಿಗೆ ಮುಸ್ಲಿಂ ಹಾಗೂ ಯಾದವ ಸಮಾಜದ ಮತದಾರರನ್ನು ಕ್ರೂಢೀಕರಣವೇ ಪ್ಲಸ್ ಪಾಯಿಂಟ್. ಬಿಹಾರದಲ್ಲಿ ಇವತ್ತು ಆರ್ ಜೆಡಿಯ ತೇಜಸ್ವಿ ಯಾದವ್ ಗಟ್ಟಿ ನಾಯಕತ್ವ ಪ್ರದರ್ಶಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಐಎನ್‌ಡಿಐಎ ಒಕ್ಕೂಟದಿಂದ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಟಾರ್ ಪ್ರಚಾರಕರು. ಗಯಾದ ಗಾಂಧಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಮಾರು ರಾಜ್ಯದಿಂದ ಬಿಹಾರವನ್ನು ಹೊರತರಬೇಕಿದೆ. ಬಿಹಾರ ಭಾರತದಲ್ಲಿಯೇ ಅತ್ಯಂತ ಕಡಿಮೆಯ ತಲಾ ವಿದ್ಯುತ್ ಬಳಕೆಯ ರಾಜ್ಯ ಎಂದು ಅಭಿವೃದ್ಧಿಯ ಅಜೆಂಡಾ ಮುಂದಿಟ್ಟಿದ್ದಾರೆ. ಬಿಹಾರ ಗೌತಮ ಬುದ್ಧನ ನೆಲ. ಈ ನೆಲದಲ್ಲಿ ಈಗ ರಾಜಕೀಯ ಸಂಘರ್ಷ. ಚುನಾವಣೆ ನಂತರ ಹೊಸ ಸ್ವರೂಪದ ರಾಜಕಾರಣ ಮೂಡಿಬರಲಿದೆಯೇ? ಕಾದು ನೋಡಬೇಕು.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com