ಮತಗಳ್ಳತನ...!
ಸ್ವತಂತ್ರ ಭಾರತದ ಚುನಾವಣಾ ರಾಜಕಾರಣದಲ್ಲಿ ಹೊಸ ಪದದ ಆವಿಷ್ಕಾರ ಇದು. ಕಳ್ಳವೋಟು ಗೊತ್ತು. ಆದರೆ, ಮತಗಳ್ಳತನ ಎಂಬುದು ಇದೇ ಮೊದಲ ಬಾರಿಗೆ ಕೇಳಿ ಬಂದಿರುವ ಹೊಸ ಪದ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಯಾವಾಗ ಭಾರತೀಯ ಜನತಾಪಕ್ಷವು ಚುನಾವಣಾ ಆಯೋಗದ ಜೊತೆಗೂಡಿ ಮತಗಳ್ಳತನ ನಡೆಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಿದೆ ಎಂದು ಆರೋಪಿಸಿದರೋ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಹಾಗೂ ಚುನಾವಣಾ ಆಯೋಗದ ಮಧ್ಯೆ ಸಂಘರ್ಷ ಆರಂಭವಾಗಿದೆ. ದೇಶದಲ್ಲಿ ಪ್ರತಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಈ ಪ್ರಮಾಣದಲ್ಲಿ ಮುಗಿಬಿದ್ದಿರುವುದು ಬಹುಶಃ ಇದೇ ಮೊದಲು.
ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಮೊದಲು ಮತಗಳ್ಳತನದ ವಿವರಗಳನ್ನು ಬಹಿರಂಗಪಡಿಸಿದರು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಿ ಬಿಜೆಪಿ ಜಯ ಸಾಧಿಸಿದೆ ಎಂದು ನೇರವಾಗಿ ಆರೋಪಿಸಿದರು. ಮಹದೇವಪುರದಲ್ಲಿ 1,00,250 ಮತಗಳು ʻಚೋರಿʼಯಾಗಿವೆ ಎಂಬುದು ಆಪಾದನೆ. ದಾಖಲೆಗಳ ಬಿಡುಗಡೆ. ಒಂದು ಸಣ್ಣ ಮನೆಯಲ್ಲಿ 80 ಜನ ಮತದಾರರ ವಾಸ, ಹೀಗೆ ವಿವಿಧ ದಾಖಲೆಗಳ ಬಿಡುಗಡೆ. ಮರುದಿನ ಬೆಂಗಳೂರಿಗೆ ಬಂದು ಪ್ರತಿಭಟನಾ ಸಭೆ ನಡೆಸಿದರು. ಆರೋಪಗಳನ್ನು ಪುನರುಚ್ಛರಿಸಿದರು. ಹೋರಾಟ ಮುಂದುವರಿಯುವುದಾಗಿ ಸಾರಿದರು.
ರಾಹುಲ್ ಗಾಂಧಿ ಅವರ ಆರೋಪ ಬಹಳ ಗಂಭೀರ ಸ್ವರೂಪದ್ದು. ಚುನಾವಣಾ ಆಯೋಗ ರಾಹುಲ್ ಆರೋಪವನ್ನು ಅಲ್ಲಗಳೆದಿದೆ. ಕ್ಷಮೆ ಕೇಳಿ ಇಲ್ಲವೇ ಪ್ರಮಾಣಪತ್ರ ಸಲ್ಲಿಸಿ ಆರೋಪ ಮಾಡಿ ಎಂದಿದೆ. ರಾಹುಲ್ ಗಾಂಧಿ ಎರಡನ್ನೂ ಮಾಡಿಲ್ಲ. ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದೆ. ಚುನಾವಣಾ ಆಯೋಗದ ವಿರುದ್ಧ ರಾಹುಲ್ ಸಮರ ಸಾರಿದ್ದಾರೆ. ಪ್ರಮಾಣಪತ್ರ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸೆಟೆದು ನಿಂತಿದ್ದಾರೆ.
ಮತಕಳ್ಳತನ ಎಂಬುದು ಒಬ್ಬ ವ್ಯಕ್ತಿ, ಒಂದು ಮತ ಎಂಬ ಪ್ರಜಾಪ್ರಭುತ್ವದ ಮೂಲತತ್ವದ ಮೇಲಿನ ದಾಳಿ. ದೋಷರಹಿತ ಮತದಾರರ ಪಟ್ಟಿ ಆಗತ್ಯ. ಡಿಜಿಟಲ್ ಸ್ವರೂಪದಲ್ಲಿ ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಏಕೆ ಕೊಡುವುದಿಲ್ಲ ಎಂಬುದು ರಾಹುಲ್ ಗಾಂಧಿ ಪ್ರಶ್ನೆ. ಇದೊಂದು ರೀತಿ ರಾಹುಲ್ ಗಾಂಧಿ ಹಾಗೂ ಚುನಾವಣಾ ಆಯೋಗದ ಮಧ್ಯೆ ನೇರ ಸಂಘರ್ಷ. ದೇಶಾದ್ಯಂತ ನನ್ನ ವೋಟು, ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಾವಾಕ್ಯದಡಿ ಕಾಂಗ್ರೆಸ್ ಚಳವಳಿ.
ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಕೆಲವು ಮಾಹಿತಿಗಳನ್ನು ಕೇಳಿದ್ದಾರೆ. ಶಕುನ್ ರಾಣಿ ಎಂಬುವರು ಎರಡು ಬಾರಿ ಮತ ಚಲಾಯಿಸಿದ್ದಾರೆ. ಇದು ಹೇಗೆ ಎಂಬುದು ಅವರ ಪ್ರಶ್ನೆ. ವಿಚಾರಣೆ ನಡೆಸಿದಾಗ ಅವರು ಒಂದೇ ಬಾರಿ ಮತ ಚಲಾಯಿಸಿರುವುದು ಗೊತ್ತಾಗಿದೆ ಎಂಬುದು ಚುನಾವಣಾ ಆಯೋಗದ ಸ್ಪಷ್ಟನೆ. ರಾಹುಲ್ ಗಾಂಧಿ ಅವರು ಬೆಂಗಳೂರಿನ ಪ್ರತಿಭಟನಾ ಸಭೆ ನಂತರ ಸಮೀಪದಲ್ಲೇ ಇದ್ದ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಪ್ರಮಾಣಪತ್ರ ಸಲ್ಲಿಸಿ ದೂರು ನೀಡಿದ್ದರೆ ಇದರ ಮಹತ್ವ ಇನ್ನೂ ಹೆಚ್ಚಾಗುತ್ತಿತ್ತು. ಹೋರಾಟಕ್ಕೂ ಹೊಸ ಆಯಾಮ ದೊರೆಯುತ್ತಿತ್ತು. ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಹೊರಿಸುತ್ತಾ ಇದರ ಲಾಭ ಬಿಜೆಪಿಗೆ ದೊರೆತಿದೆ ಎಂದಿದ್ದಾರೆ. ಇದು ಹೇಗೆ? ಕಾಂಗ್ರೆಸ್ಸಿಗೂ ಮತ ನೀಡಿಲ್ಲ ಎಂದು ಹೇಗೆ ಹೇಳುತ್ತಾರೆ? ಬೇರೆ ಅಭ್ಯರ್ಥಿಗಳಿಗೂ ವೋಟು ಹಾಕಿರಬಹುದಲ್ಲವೇ?
ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಸಿದ ಮರುದಿನವೇ ಅವರದೇ ಪಕ್ಷದ ರಾಜ್ಯದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ತುಮಕೂರಿನಲ್ಲಿ ಮಾತನಾಡುತ್ತಾ ನಾವೇ ಮೊದಲು ಮತದಾರರ ಪಟ್ಟಿ ನೋಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಈಗ ದೋಷವಿತ್ತು ಎನ್ನುವುದು ಸರಿಯಲ್ಲ. ನಮ್ಮದೇ ಸರಕಾರ ಅಧಿಕಾರದಲ್ಲಿರುವಾಗ ಮತದಾರರ ಪಟ್ಟಿ ಸಿದ್ದವಾಗಿದೆ. ಆಗ ನಮ್ಮ ನಾಯಕರು ಕಣ್ಣು ಮುಚ್ಚಿ ಕುಳಿತಿದ್ದರಾ? ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನೇ ಇದ್ದೇವಲ್ಲ ಎಂದು ನಾಚಿಕೆಯಾಗಬೇಕು. ನಮ್ಮ ಕಣ್ಣು ಮುಂದೆ ಅಕ್ರಮಗಳು ನಡೆದಿರುವುದನ್ನು ನೋಡಿದರೆ ನಮಗೆ ಅವಮಾನ ಆಗಬೇಕು. ಆಗ ಸುಮ್ಮನೇ ಇದ್ದು ಈಗ ಹೇಳುತ್ತಿದ್ದೇವೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮುಂದೆ ಎಚ್ಚರಿಕೆಯಿಂದ ಇರುತ್ತೇವೆ ಎಂದಿದ್ದು ಕಾಂಗ್ರೆಸ್ ನಲ್ಲಿ ತಲ್ಲಣ ಮೂಡಿಸಿತ್ತು. ಹೈಕಮಾಂಡ್ ಗರಂ ಆಯಿತು. ರಾಹುಲ್ ಗಾಂಧಿ ಕುಪಿತರಾದರು.
ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗ ತಮ್ಮದೇ ಪಕ್ಷದ ಸಚಿವರೊಬ್ಬರ ಇಂತಹ ಹೇಳಿಕೆ ಹೈಕಮಾಂಡ್ ಅನ್ನೇ ಕೆರಳಿಸಿತ್ತು. ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಅವರನ್ನು ಈ ತಕ್ಷಣವೇ ಸಚಿವ ಸಂಪುಟದಿಂದ ವಜಾ ಮಾಡುವಂತೆ ಸೂಚನೆ ನೀಡಿತು. ತಮ್ಮಕಟ್ಟಾ ಬೆಂಬಲಿಗನನ್ನು ಸಂಪುಟದಿಂದ ವಜಾ ಮಾಡದೇ ಸಿದ್ದರಾಮಯ್ಯ ಅವರಿಗೆ ಅನ್ಯಮಾರ್ಗವೇ ಇರಲಿಲ್ಲ. ಇದರೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬಣ ರಾಜಕಾರಣವೂ ಮುನ್ನೆಲೆಗೆ ಬಂದಿತು ಎಂಬ ಮಾತು ಬೇರೆ.
ಇದೇನೆ ಇರಲಿ. ಯಾವುದೇ ಚುನಾವಣೆ ಇರಬಹುದು, ಮತದಾರರ ಪಟ್ಟಿ ಎಂಬುದು ಬಹಳ ಮುಖ್ಯವಾದ ದಾಖಲೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ. ಅಂತಹ ಮತದಾರರ ಪಟ್ಟಿಯೇ ದೋಷವಾದರೆ ಹೇಗೆ? ಭಾರತದಲ್ಲಿ ಮತದಾರರ ಪಟ್ಟಿಯಲ್ಲಿ ದೋಷ ಎಂಬುದು ಚುನಾವಣೆ ಆರಂಭವಾದಾಗಿನಿಂದ ಇದ್ದದ್ದೇ. ಮತದಾರರ ಪಟ್ಟಿ ದೋಷಕ್ಕೆ ಚುನಾವಣಾ ಆಯೋಗದ ಮೇಲೆ ಮಾತ್ರ ದೋಷ ಹೊರಿಸುವುದು ಸರಿಯಲ್ಲ. ರಾಜಕೀಯ ಪಕ್ಷಗಳು ಹಾಗೂ ಮತದಾರರ ಹೊಣೆಗಾರಿಕೆಯೂ ಇಲ್ಲಿ ಬಹಳ ಮುಖ್ಯ.
ಮತದಾರರ ಪಟ್ಟಿಯಲ್ಲಿರುವ ದೋಷವು ಮತದಾನದ ದಿನ ಮತಗಟ್ಟೆ ಸಮೀಪ ಸ್ವಲ್ಪ ಹೊತ್ತು ನಿಂತು ನೋಡಿದರೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ಹತಾಶರಾಗಿ ವಾಪಸ್ ಹೋಗುವವರು, ಸತ್ತವರ ಹೆಸರು ಮತದಾರರ ಪಟ್ಟಿಯಲ್ಲಿರುವುದು, ವಯಸ್ಸಿನ ಏರುಪೇರು, ವಿಳಾಸ ಬದಲು ಇವೆಲ್ಲವೂ ಸಾಮಾನ್ಯವಾಗಿ ಕಂಡು ಬರುತ್ತವೆ. ಇದು ಲಾಗಾಯ್ತಿನಿಂದಲೂ ಇದ್ದದ್ದೇ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ನೆರವಾಗುವುದು ಗೊತ್ತಿರುವ ಸಂಗತಿಯೇ. ಕೆಲವು ಮತದಾರರು ನೇರವಾಗಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ, ಅನೇಕ ಪ್ರಕರಣಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ, ಒಂದು ಊರಿನಿಂದ ಇನ್ನೊಂದು ಊರಿಗೆ ವಾಸಸ್ಥಳ ಬದಲಿಸಿದಾಗ ಹಳೆಯ ವಿಳಾಸದಲ್ಲಿದ್ದ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆಸಬೇಕು. ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು. ಆದರೆ, ಅನೇಕ ಪ್ರಕರಣಗಳಲ್ಲಿ ಹೊಸ ವಿಳಾಸದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಆಗುತ್ತದೆ. ಆದರೆ, ಹಳೆಯ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಸುವುದಿಲ್ಲ. ಆಗ ಒಬ್ಬ ವ್ಯಕ್ತಿಯ ಹೆಸರು ಎರಡು ಕಡೆ ಇರುತ್ತದೆ. ಆದರೆ, ವೋಟು ಮಾಡಲು ಸಾಧ್ಯವಾಗುವುದು ಒಂದೇ ಕಡೆ ಮಾತ್ರ.
ಕೆಲವು ಬಾರಿ ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಕೈಬಿಡಲಾಗಿರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ ಸತ್ತವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಇರುತ್ತವೆ. ವ್ಯಕ್ತಿಗಳ ನಿಧನದ ನಂತರ ಸಂಬಂಧಪಟ್ಟವರು ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸಬೇಕು. ಆದರೆ, ಅನೇಕರು ಹೀಗೆ ಮಾಡುವುದಿಲ್ಲ. ಹೀಗಾಗಿ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಉಳಿದು ಬಿಡುತ್ತದೆ. ಇದರಲ್ಲಿ ಮತದಾರರ ಜವಾಬ್ದಾರಿ ಹೆಚ್ಚು.
ಮತದಾರರ ಪಟ್ಟಿ ದೋಷರಹಿತವಾಗಿರಬೇಕು ಎಂದರೆ ಮತದಾರ ಮೊದಲು ಕಾಳಜಿ ವಹಿಸಬೇಕು. ರಾಜಕೀಯ ಪಕ್ಷಗಳು ತನ್ನ ಜವಾಬ್ದಾರಿ ಅರಿಯಬೇಕು. ಆದರೆ, ಮತದಾರರ ಪಟ್ಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಾಗೂ ಮತದಾರರಲ್ಲಿ ನಿರಾಸಕ್ತಿ ಇದ್ದೇ ಇದೆ. ಮತದಾನದ ದಿನ ಮತ ಚಲಾಯಿಸಲು ಬಂದಾಗ ದೋಷ ಕಂಡು ಹೌಹಾರುತ್ತಾರೆ. ಚುನಾವಣಾ ಆಯೋಗ ನಿಗದಪಡಿಸಿದ ದಿನಾಂಕದ ಒಳಗಾಗಿ ದೋಷವನ್ನು ಗಮನಕ್ಕೆ ತಂದು ಸರಿಪಡಿಸಿಕೊಂಡರೆ ಅಷ್ಟರಮಟ್ಟಿಗೆ ಮತದಾರರ ಪಟ್ಟಿ ಸ್ವಚ್ಛವಾಗುತ್ತದೆ. ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಿಸುವಾಗ ಕರಡು ಮತದಾರರ ಪಟ್ಟಿಯನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಿರುತ್ತದೆ. ದೋಷಗಳಿದ್ದರೆ ತಿಳಿಸುವಂತೆ ಕೋರಿರುತ್ತದೆ. 2024ರ ಲೋಕಸಭಾ ಚುನಾವಣೆ ವೇಳೆಯೂ ಇಂತಹ ಮನವಿ ಮಾಡಿತ್ತು. ಇದನ್ನೇ ಉಚ್ಛಾಟಿತ ಸಚಿವ ರಾಜಣ್ಣ ಅವರು ಹೇಳಿರುವುದು. ರಾಜಣ್ಣ ಅವರು ಹೇಳಿರುವ ಉದ್ದೇಶ ಸರಿ ಇದೆ. ಆದರೆ, ಹೇಳಿದ ಧಾಟಿ, ಸಮಯ ಸರಿಯಿಲ್ಲ. ಇದನ್ನೇ ಅವರು ಪಕ್ಷದ ವೇದಿಕೆಯಲ್ಲಿ ಹೇಳಿದ್ದರೆ ಆ ಮಾತು ಬೇರೆ ಇತ್ತು.
ಬಿಹಾರದಲ್ಲಿ ಈಗ ನಡೆದಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಕಾರ್ಯದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಮತದಾರರ ಸ್ನೇಹಿಯಂತೆ ಕಾಣಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಿ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ.
ಆದರೆ, ಚುನಾವಣಾ ಆಯೋಗದ ಈ ಕಾರ್ಯವನ್ನು ವಿರೋಧಿಸುವ ಪ್ರತಿಪಕ್ಷಗಳ ಒಕ್ಕೂಟ ಐಎನ್‌ಡಿಐಎ ಮತ್ತೊಂದೆಡೆ ದೋಷದಿಂದ ಕೂಡಿದ ಮತದಾರರ ಪಟ್ಟಿಯ ವಿರುದ್ಧ ಹೋರಾಟ ನಡೆಸಿದೆ. ಇದು ಐಎನ್ ಡಿಐಎ ದ್ವಂದ್ವ ನಿಲುವು. ಬಿಹಾರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಬೇಡ ಎನ್ನುತ್ತಾರೆ. ಮತ್ತೊಂದು ಕಡೆ ಮತದಾರರ ಪಟ್ಟಿ ದೋಷ ಸರಿಪಡಿಸಿ ಎಂದು ಬೀದಿಗೆ ಇಳಿಯುತ್ತಾರೆ. ಇದು ಕಾಂಗ್ರೆಸ್ಸಿನ ಇಬ್ಬಂದಿತನವಲ್ಲವೇ?
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com