ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್- ಚೀನಾ ವಿದೇಶಾಂಗ ಸಚಿವ ವಾಂಗ್ ಯಿ  online desk
ಅಂಕಣಗಳು

ಸಮರದಷ್ಟೇ ಸ್ಟ್ರಾಟಜಿ ಬೇಡುತ್ತದೆ ಚೀನಾದ ಜತೆಗಿನ ಸ್ನೇಹ (ತೆರೆದ ಕಿಟಕಿ)

ಎರಡು ತಿಂಗಳ ಹಿಂದಷ್ಟೇ, ಆಪರೇಶನ್ ಸಿಂದೂರದ ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಂತಿದ್ದ ದೇಶವೊಂದರ ಜತೆಗೆ ಸಂಬಂಧ ಸುಧಾರಿಸಿಕೊಳ್ಳುವುದು ಆಗುವ ಮಾತೇ ಎಂಬುದು ಸಾಮಾನ್ಯರ ನೆಲೆಯಲ್ಲಿ ಹುಟ್ಟುವ ಪ್ರಶ್ನೆ.

ನಮ್ಮ ಮನಸ್ಸು ಒಪ್ಪಿಕೊಂಡಿದ್ದ ಕಥಾನಕವೊಂದು ದೊಡ್ಡಮಟ್ಟದಲ್ಲಿ ಬದಲಾವಣೆ ಕಾಣುತ್ತಿರುವಂತೆ ಭಾಸವಾದಾಗ ಅದನ್ನು ಹೇಗೆ ಗ್ರಹಿಸಿಕೊಳ್ಳುವುದೆಂಬ ಗೊಂದಲ ಸಹಜವಾಗಿಯೇ ಬರುತ್ತದೆ. ಚೀನಾದ ವಿಚಾರದಲ್ಲಿ ಸದ್ಯಕ್ಕೆ ಆಗುತ್ತಿರುವುದೂ ಅದೇ. ಅಮೆರಿಕವು ನಮ್ಮ ಸ್ನೇಹಿತ ಹಾಗೂ ಚೀನಾ ಎದುರಾಳಿ ಎಂಬ ವ್ಯಾಖ್ಯಾನವೊಂದು ಬಹಳ ವರ್ಷಗಳಿಂದ ನಮ್ಮ ಮನವನ್ನಾಳುತ್ತಿತ್ತು. ಅದಕ್ಕೆ ಪೂರಕ ಸನ್ನಿವೇಶಗಳೂ ಬಹಳ ಇದ್ದವು. ಆದರೀಗ ಬದಲಾಗಿರುವ ಸನ್ನಿವೇಶದಲ್ಲಿ ಅಮೆರಿಕವು ಭಾರತದೊಂದಿಗೆ ಕಟುವಾಗಿ ನಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಅತ್ತ ಚೀನಾ ಕೆಲವೊಂದಿಷ್ಟು ವಿಚಾರಗಳಲ್ಲಿ ಭಾರತದ ಜತೆ ಸೌಮ್ಯವಾಗುತ್ತಿರುವ ವಿದ್ಯಮಾನಗಳು ತೆರೆದುಕೊಳ್ಳುತ್ತಿವೆ. 

ಮೊದಲಿಗೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶ ಸಚಿವರ ಜತೆ ಮಾತುಕತೆಗಳು ನಡೆದವು. ನಂತರ ಉಭಯ ದೇಶಗಳ ವಿದೇಶ ಸಚಿವರೊಂದಿಗೆ ಮಾತುಕತೆಗಳು ನಡೆದವು. ಇದೀಗ ಚೀನಾದ ವಿದೇಶ ಸಚಿವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಚೀನಾದ ಸಂದೇಶವನ್ನೂ ಹಾಗೂ ಶಾಂಘೈ ಸಹಕಾರ ಶೃಂಗಕ್ಕೆ ಆಹ್ವಾನವನ್ನೂ ನೀಡಿದ್ದಾರೆ. ಇದಕ್ಕೆ ಭಾರತದಿಂದಲೂ ಸಕಾರಾತ್ಮಕ ಪ್ರಕ್ರಿಯೆ ವ್ಯಕ್ತವಾಗಿದೆ. “ಉಪಖಂಡದಲ್ಲಿ ಶಾಂತಿ-ಸಮೃದ್ಧಿ ಇರಬೇಕೆಂದರೆ ಭಾರತ ಮತ್ತು ಚೀನಾಗಳ ನಡುವೆ ಸ್ಥಿರವಾದ, ಇದು ಹೀಗೆಯೇ ಸಾಗುತ್ತದೆ ಎಂದು ಹೇಳಬಹುದಾದ ಹಾಗೂ ರಚನಾತ್ಮಕವಾದ ಬಾಂಧವ್ಯ ಇರಬೇಕಾಗುತ್ತದೆ” ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಂದ ಬಂದಿರುವ ಮಾತು. 

ಎರಡು ತಿಂಗಳ ಹಿಂದಷ್ಟೇ, ಆಪರೇಶನ್ ಸಿಂದೂರದ ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಂತಿದ್ದ ದೇಶವೊಂದರ ಜತೆಗೆ ಸಂಬಂಧ ಸುಧಾರಿಸಿಕೊಳ್ಳುವುದು ಆಗುವ ಮಾತೇ ಎಂಬುದು ಸಾಮಾನ್ಯರ ನೆಲೆಯಲ್ಲಿ ಹುಟ್ಟುವ ಪ್ರಶ್ನೆ. ಅಮೆರಿಕದ ಜತೆ ಸದ್ಯಕ್ಕೆ ಭಾರತ-ಚೀನಾಗಳ ವ್ಯವಹಾರ ಕೆಟ್ಟು ನಿಂತಿದೆ ಎಂಬ ಕಾರಣಕ್ಕೆ, ಈ ಕ್ಷಣಕ್ಕೆ ಹುಟ್ಟಿಕೊಳ್ಳುತ್ತಿರುವ ಮೈತ್ರಿ ಇದೇನು ಎಂಬ ಸಂದೇಹವೂ ಬರಬಹುದೇನೋ. ಆದರೆ, ಇದೇ ಪಾಕಿಸ್ತಾನದ ವಿಚಾರದಲ್ಲಿ ಲಾಗಾಯ್ತಿನಿಂದಲೂ ಅಮೆರಿಕವು ನಡೆದುಕೊಂಡಿರುವ ರೀತಿ ಹಾಗೂ ಈಗಿನ ಟ್ರಂಪ್ ಆಡಳಿತವು ಪಾಕಿಸ್ತಾನದ ಮಿಲಿಟರಿ ಅಧಿಕಾರಕ್ಕೆ ಕೆಂಪುಹಾಸು ಹಾಕಿ ಸ್ವಾಗತಿಸುತ್ತಿರುವ ರೀತಿನೀತಿಗಳನ್ನು ನೋಡಿದಾಗ ಈ ವಿಷಯದಲ್ಲಿ ಚೀನಾವನ್ನು ಮಾತ್ರವೇ ದೂರಬಹುದಾದ ಸನ್ನಿವೇಶವೂ ಇಲ್ಲ. ಇವೇನೇ ಇದ್ದರೂ, ಚೀನಾ-ಭಾರತಗಳು ಕ್ಷಣಿಕವಾಗಿಯಾದರೂ ಒಂದು ವೇದಿಕೆಗೆ ಬರುತ್ತಿರುವುದರ ಹಿಂದಿನ ನಿಜವಾದ ಪ್ರೇರಕ ಅಂಶ ಯಾವುದು ಎಂದು ಗಮನಿಸಬೇಕಿರುವುದು ಅಗತ್ಯ. 

ಬಹುಧ್ರುವದ ಜಾಗತಿಕ ರಾಜಕಾರಣ: ಇಲ್ಲಿ ಭಾರತ-ಚೀನಾಗಳ ಆಶಯ ಸಮಾನ

ಡಾಲರ್ ಕಾರಣದಿಂದ ಅಮೆರಿಕವು ಹೊಂದಿರುವ ಜಾಗತಿಕ ರಾಜಕಾರಣದ ಏಕಸ್ವಾಮ್ಯ ಕೊನೆಗೊಳ್ಳಬೇಕು ಎಂಬ ವಿಷಯದಲ್ಲಿ ಭಾರತ ಹಾಗೂ ಚೀನಾಗಳೆರಡಕ್ಕೂ ಹೊಂದಾಣಿಕೆ ಇದೆ. ಈ ಹೊಂದಾಣಿಕೆ ನಿಜಕ್ಕೂ ಗಟ್ಟಿಯಾಗಿದೆ ಎಂದುಕೊಳ್ಳುವುದಕ್ಕೆ ಬ್ರಿಕ್ಸ್ ಕರೆನ್ಸಿಯ ಸಾಧ್ಯತೆಗೆ ಸಂಬಂಧಿಸಿದಂತೆ ಅಮೆರಿಕಕ್ಕೆ ಇರುವ ಭಯವೇ ಸಾಕ್ಷಿ. ಅಧಿಕಾರಕ್ಕೆ ಬರುತ್ತಲೇ ಡೊನಾಲ್ಡ್ ಟ್ರಂಪ್ ಹಾಕಿದ್ದ ಮುಖ್ಯ ಬೆದರಿಕೆಗಳಲ್ಲೊಂದು - “ಡಾಲರಿಗೆ ಪ್ರತಿಯಾಗಿ ಬ್ರಿಕ್ಸ್ ದೇಶಗಳು ತಮ್ಮ ಕರೆನ್ಸಿ ತರಲು ಹೊರಟಿದ್ದೇ ಆದರೆ ಅಮೆರಿಕವು ಉಗ್ರವಾಗಿ ಪ್ರತಿಕ್ರಿಯಿಸಲಿದೆ” ಎನ್ನೋದು. 

ಅಮೆರಿಕದ ಈ ಭಯ ತರ್ಕಬದ್ಧವೂ ಹೌದು. ಏಕೆಂದರೆ, ಈ ಬ್ರಿಕ್ಸ್ ಕೂಟದಲ್ಲಿರುವ ಭಾರತ-ಚೀನಾ-ರಷ್ಯ ಈ ಮೂರೇ ದೇಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಈ ಪ್ರಾಂತ್ಯಗಳ ಒಟ್ಟಾರೆ ಜನಸಂಖ್ಯೆಯೇ ಪಾಶ್ಚಾತ್ಯರ ಇನ್ಯಾವುದೇ ಬಗೆಯ ಕೂಟಗಳನ್ನು ಮೀರಿಸಿಬಿಡುತ್ತದೆ. ಕೇವಲ ಪ್ರಿಂಟ್ ಹಾಕಿಸುವ ಸಾಮರ್ಥ್ಯದ ಮೇಲೆ, ತೈಲ ಆರ್ಥಿಕತೆ ಆಧಾರದಲ್ಲಿ ಉಳಿಸಿಕೊಂಡಿದ್ದ ಡಾಲರ್ ಪಾರಮ್ಯವು ಅಲುಗಾಡುತ್ತಿದೆ. ಅದು ಕುಸಿಯಲು ಹೊರಟರೆ ಅದನ್ನು ಹಿಡಿದಿಡುವ ಯಾವುದೇ ಅಡಿಪಾಯವಿಲ್ಲ. ಕೊನೆಗೂ ಮಾರುಕಟ್ಟೆಗೆ ಬೇಕಿರುವುದು ಜನಸಂಖ್ಯೆ, ಗ್ರಾಹಕರ ಸಂಖ್ಯೆ. ಅದು ಬ್ರಿಕ್ಸ್ ಕೂಟದಲ್ಲಿದೆ. 

ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾಗಳೆರಡೂ ಅಮೆರಿಕದ ಡಾಲರ್ ಬಲವನ್ನು ಪರೋಕ್ಷವಾಗಿ ಪ್ರಶ್ನಿಸುತ್ತಿವೆ. ಇದರರ್ಥ, ಇವೆಲ್ಲ ಸೇರಿ ಕರೆನ್ಸಿ ತಂದುಬಿಡುತ್ತವೆ ಎಂದೇನೂ ಅಲ್ಲದಿದ್ದರೂ, ಜಗತ್ತಿನಲ್ಲಿ ಒಂದೇ ಒಂದು ಕರೆನ್ಸಿಗೆ ಎಲ್ಲವನ್ನೂ ನಿರ್ದೇಶಿಸುವ ಶಕ್ತಿ ಇರಬಾರದು ಎಂಬುದರ ಬಗ್ಗೆ ಇವಕ್ಕೆಲ್ಲ ಸಹಮತವಿದೆ. ಇದೇ ಕಾರಣಕ್ಕೇ ಕಳೆದೊಂದು ವರ್ಷದಲ್ಲಿ ಚೀನಾ-ಭಾರತ-ರಷ್ಯಗಳೆಲ್ಲ ಹೆಚ್ಚು ಹೆಚ್ಚು ಚಿನ್ನ ಖರೀದಿಸಿ ಸಂಗ್ರಹಿಸಿಕೊಂಡಿವೆ. ಅಮೆರಿಕವು ಹೊರಡಿಸುತ್ತಿದ್ದ ಡಾಲರಿನ ಸಾಲದ ಬಾಂಡುಗಳನ್ನು ಅತಿಹೆಚ್ಚಾಗಿ ಕೊಳ್ಳುತ್ತಿದ್ದ ಚೀನಾ, ಮೂರ್ನಾಲ್ಕು ವರ್ಷಗಳಿಂದ ಅದನ್ನು ಕಡಿಮೆ ಮಾಡಿಕೊಳ್ಳುತ್ತಿದೆ. 

ಒಟ್ಟಾರೆ, ಕೇವಲ ಡಾಲರ್ ಬಲವಿರಿಸಿಕೊಂಡು ಅಮೆರಿಕವು ಯಾವುದೇ ದೇಶದ ಮೇಲೆ ದಿಗ್ಬಂಧನ ಹೇರುವ, ಜಗತ್ತು ಯಾರ ಜತೆ ಆರ್ಥಿಕ ಚಟುವಟಿಕೆ ಮಾಡಬೇಕು ಹಾಗೂ ಇನ್ಯಾರ ಜತೆ ಮಾಡಬಾರದು ಎಂಬುದನ್ನು ಅಮೆರಿಕವು ನಿರ್ದೇಶಿಸುವ ಸ್ಥಿತಿ ಇರಬಾರದು ಎಂಬುದರ ಬಗ್ಗೆ ಚೀನಾ ಹಾಗೂ ಭಾರತಗಳೆರಡೂ ಸಹಮತದಲ್ಲಿವೆ. ಅಮೆರಿಕವು ಆರ್ಥಿಕ ರಂಗದಲ್ಲಿ ನಿಜವಾಗಿ ಪೈಪೋಟಿ ಮಾಡುವುದಾದರೆ ಅದು ತನ್ನ ನೈಸರ್ಗಿಕ ಸಂಪನ್ಮೂಲಗಳನ್ನು ಗಣಿಗಾರಿಕೆ ಮಾಡಲಿ, ಜಾಗತಿಕ ಮಾರುಕಟ್ಟೆಗೆ ಅಮೆರಿಕದ ತೈಲವೂ ಹೆಚ್ಚಿನ ಪ್ರಮಾಣದಲ್ಲಿ ಬಂದು ಇಂಧನ ಬೆಲೆಗಳು ಕುಗ್ಗಲಿ. ಅದುಬಿಟ್ಟು, ಕೇವಲ ಡಾಲರ್ ಛಾಪಿಸುವ ಶಕ್ತಿ ಇದೆಯಾದ್ದರಿಂದ ಜಾಗತಿಕ ಮಾರುಕಟ್ಟೆಯನ್ನು ನಿರ್ದೇಶಿಸುತ್ತೇನೆ ಎಂಬ ಅಮೆರಿಕದ ಆಟವು ಇನ್ನು ಮುಂದಿನ ಹಂತದಲ್ಲಿ ತಮ್ಮಿಬ್ಬರಿಗೂ ಪೂರಕವಲ್ಲ ಎಂಬುದನ್ನು ಭಾರತ-ಚೀನಾಗಳು ಅರಿತಿವೆ.

ಇದು ನಿಜಾರ್ಥದಲ್ಲಿ ‘ಸ್ನೇಹ’ವೇ?

ಹೀಗೆ ಭಾರತ ಹಾಗೂ ಚೀನಾಗಳ ನಡುವೆ ಮೂಡಿರುವ ಸಹಮತವು ಖಂಡಿತ ‘ಸ್ನೇಹ’ವಲ್ಲ. ಇದು ರಾತ್ರೋರಾತ್ರಿ ಹುಟ್ಟಿರುವ ಹೊಂದಾಣಿಕೆಯೂ ಅಲ್ಲ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷವಾಗಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಹುಟ್ಟಿದಾಗಿನಿಂದ ಹಲವು ಬಗೆಯ ಮುಸುಕಿನ ಸಮರ ಹಾಗೂ ಸಮಾಧಾನಗಳು ನಡೆದಿವೆ. ಇಲ್ಲೆಲ್ಲ ಭಾರತ ಸಹ ಬಹಳ ದೃಢವಾಗಿಯೇ ನಡೆದುಕೊಂಡಿದೆ. ಉದಾಹರಣೆಗೆ, ಚೀನಾ ಮೂಲದ ಟಿಕ್ಟಾಕ್ ನಿಷೇಧದ ಬಗ್ಗೆ ಅಮೆರಿಕವು ಸಂದಿಗ್ಧದಲ್ಲಿದ್ದಾಗಲೇ ಭಾರತವು ಆ ಕೆಲಸವನ್ನು ಬಹಳ ಪ್ರಾರಂಭದಲ್ಲೇ ಮಾಡಿಬಿಟ್ಟಿತು. ಇವತ್ತಿಗೆ ಪೇಟಿಎಂನಿಂದ ಚೀನಾದ ಹೂಡಿಕೆದಾರರು ಸಂಪೂರ್ಣವಾಗಿ ಹೊರಬಿದ್ದಿದ್ದಾರೆ, ಅಂಥದೊಂದು ಸನ್ನಿವೇಶವನ್ನು ಅವರ ಪಾಲಿಗೆ ಸೃಷ್ಟಿಸಲಾಯಿತು. ಇವು ಕೇವಲ ಉದಾಹರಣೆಗಳು ಮಾತ್ರ. ಇಂಥ ಹಲವು ಬಿಸಿನೆಸ್ ಪ್ರಹಾರಗಳನ್ನು ಚೀನಾಕ್ಕೆ ಭಾರತವು ಕೊಟ್ಟಿತಾದ್ದರಿಂದ ಅದು ರಾಜತಾಂತ್ರಿಕತೆಯ ಚೌಕಾಶಿ ಮೇಜಿಗೆ ಬರುವಂತಾಗಿದೆ. 

ಹಾಗೆಂದು, ಈ ಹಂತದಲ್ಲಿ ಭಾರತವೂ ಹೊಡೆತ ತಿನ್ನಲಿಲ್ಲವೇ? ಅದು ರಣಾಂಗಣದ ಯುದ್ಧವಿರಲಿ, ವ್ಯಾಪಾರ ಸಮರವೇ ಆಗಿರಲಿ ಪ್ರಹಾರವು ಎರಡೂ ಕಡೆಗಳಿಗೂ ಬೀಳುತ್ತದೆ. ಎಂಥ ಶಕ್ತಿಶಾಲಿಯೇ ಆದರೂ ತನ್ನ ಸಂಪತ್ತನ್ನು ಸ್ವಲ್ಪವೂ ನಷ್ಟ ಮಾಡಿಕೊಳ್ಳದೇ ಸಮರ ನಡೆಸಲಾರ. ಗಲ್ವಾನ್ ನಂತರ ಚೀನಾದ ಜತೆಗಿನ ಆರ್ಥಿಕ ಸಮರದಲ್ಲಿ ಭಾರತವೂ ಕಷ್ಟನಷ್ಟ ಎದುರಿಸಿದ್ದು ಹೌದು. ಅವು ಯಾವ ಬಗೆಯದ್ದಾಗಿದ್ದವೆಂಬುದನ್ನು ಈಗ ಚೀನಾ ಯಾವ ವಿಷಯಗಳಲ್ಲಿ ಮೃದುವಾಗುತ್ತಿದೆ ಎಂಬುದನ್ನು ಗಮನಿಸಿಯೇ ಅರಿತುಕೊಳ್ಳಬಹುದು. ಮುಖ್ಯವಾಗಿ, ವಿರಳ ಲೋಹಗಳು ಹಾಗೂ ರಸಗೊಬ್ಬರಗಳ ಪೂರೈಕೆಯನ್ನು ಭಾರತದ ಪಾಲಿಗೆ ಸುವ್ಯವಸ್ಥಿತಗೊಳಿಸುವುದಾಗಿ ಚೀನಾ ಹೇಳಿದೆ. ಕೆಲವು ಯಂತ್ರಗಳ ಪೂರೈಕೆ ವಿಚಾರದಲ್ಲೂ ಭಾರತವು ಹಿನ್ನಡೆ ಅನುಭವಿಸಿತ್ತೆಂಬುದು ಸ್ಪಷ್ಟ. ಮೆಟ್ರೊ, ಪರ್ವತ ಸುರಂಗ ಎಂದೆಲ್ಲ ನಿರ್ಮಾಣ ಕಾಮಗಾರಿಗಳನ್ನು ದೊಡ್ಡಮಟ್ಟದಲ್ಲಿ ನೆರವೇರಿಸಿಕೊಳ್ಳುತ್ತಿರುವ ಭಾರತಕ್ಕೆ ಸುರಂಗ ಕೊರೆಯುವ ಯಂತ್ರಗಳು ಬೇಕಿದ್ದವು. ಈಗವುಗಳ ಪೂರೈಕೆಯನ್ನು ಮತ್ತೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ.

ಭಾರತ-ಚೀನಾದ ಗಡಿ ಮಾತುಕತೆಗಳ ಪುನಾರಂಭ ಹಾಗೂ ಆ ನಿಟ್ಟಿನಲ್ಲಿ ನಿರ್ದಿಷ್ಟ ರೂಪುರೇಷೆಗಳು ಆರಂಭವಾಗುತ್ತಿವೆ. ಹಾಗೆಂದು ಅವೆಲ್ಲ ಅಷ್ಟು ಸುಲಭಕ್ಕೆ ಇತ್ಯರ್ಥವಾಗುವ ವಿಷಯಗಳೇನಲ್ಲ. ಅಲ್ಲದೇ, ಏಷ್ಯದಲ್ಲಿ ತಮ್ಮ ತಮ್ಮ ಹಿತಾಸಕ್ತಿಗಳಿಗಾಗಿ ಭಾರತ ಮತ್ತು ಚೀನಾಗಳ ಪೈಪೋಟಿ ಮುಂದುವರಿಯುವುದನ್ನು ತಪ್ಪಿಸುವುದಕ್ಕಂತೂ ಸಾಧ್ಯವಿಲ್ಲ. 

ಸ್ನೇಹವಲ್ಲ, ಹಾಗಾದರೆ ಸಮರವಾ?

ಭಾರತ-ಚೀನಾಗಳ ನಡುವೆ ಈಗ ಕಾಣಿಸಿಕೊಳ್ಳುತ್ತಿರುವುದು ಸ್ನೇಹವೇನೂ ಅಲ್ಲ ಎಂದಾದಾಗ, ಹಾಗಾದರೆ ಇನ್ನು ಕೆಲವು ವರ್ಷಗಳಲ್ಲಿ ಭಾರತ ಮತ್ತು ಚೀನಾಗಳು ತಮ್ಮ ಸಮಸ್ಯೆಗಳನ್ನು ಸಮರಾಂಗಣದಲ್ಲೇ ಇತ್ಯರ್ಥ ಪಡಿಸಿಕೊಳ್ಳುವ ಸ್ಥಿತಿ ಬರುತ್ತದೆಯಾ ಎಂಬ ಪ್ರಶ್ನೆ ಮತ್ತೆ ಕಾಣಿಸಿಕೊಳ್ಳುತ್ತದೆ. ಮಾಧ್ಯಮ ವಿಶ್ಲೇಷಣೆಗಳು ಈ ಬಗ್ಗೆ ದೊಡ್ಡಮಟ್ಟದ ಚಿತ್ರಣಗಳನ್ನು ಅದಾಗಲೇ ಕಟ್ಟಿಬಿಟ್ಟಿವೆ. ಚೀನಾವು ಮಿಲಿಟರಿ ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಎಷ್ಟೆಲ್ಲ ಮುಂದಿದೆ ಎಂಬ ಬಗ್ಗೆ ಲೆಕ್ಕವಿಲ್ಲದಷ್ಟು ವಿಶ್ಲೇಷಣೆಗಳು ಹಾಗೂ ವಿಡಿಯೊಗಳೆಲ್ಲ ಬಂದಿವೆ. ತಂತ್ರಜ್ಞಾನ ಹಾಗೂ ಅನ್ವೇಷಣೆಗಳಲ್ಲಿ ಚೀನಾದ ಸಾಮರ್ಥ್ಯ ದೊಡ್ಡದಿದೆ ಎಂಬ ಬಗ್ಗೆ ಅನುಮಾನಗಳೇನೂ ಇಲ್ಲ. ಆದರೆ, ಸಮರವನ್ನು ನಿರ್ಧರಿಸುವುದು ಅದೊಂದೇ ಅಂಶವಲ್ಲ.

ಭಾರತದ ಪಡೆಗಳು ಯುದ್ಧಕಸುಬಿಗಳೆನ್ನುವುದು ಜಗತ್ತೇ ಅರ್ಥಮಾಡಿಕೊಂಡಿರುವ ಸತ್ಯ. ಅಂದರೆ, ಉಗ್ರವಾದ- ನಕ್ಸಲ್ ಸಮಸ್ಯೆ- ಪಾಕಿಸ್ತಾನದ ಜತೆಗಿನ ಯುದ್ಧಸನ್ನದ್ಧ ಸ್ಥಿತಿ ಇವೆಲ್ಲ ಕಾರಣಗಳಿಂದ ಭಾರತೀಯ ಯೋಧರು ಸೆಣೆಸಾಟದಿಂದ ದೂರ ಉಳಿದಿರುವ ದಶಕಗಳೇ ಇಲ್ಲ. ಆದರೆ, ಚೀನಾ ಇತ್ತೀಚಿನ ದಶಕಗಳಲ್ಲಿ ಯುದ್ಧ ಮಾಡಿದ್ಯಾವಾಗ ಹಾಗೂ ಅದು ಯುದ್ಧ ಗೆದ್ದಿದ್ಯಾವಾಗ? ಸಮರ ತೆರೆದುಕೊಂಡು ಒಂದೊಂದೇ ಶವದ ಬ್ಯಾಗುಗಳು ಸಂಸ್ಕಾರಕ್ಕೆಂದು ಬರುತ್ತಿದ್ದಂತೆ ಅದನ್ನು ತಡೆದುಕೊಳ್ಳುವ ಮನೋಶಕ್ತಿ ‘ಒಂದೇ ಸಂತಾನ’ದ ಚೀನಾಕ್ಕಿದೆಯೇ? ಎಂಬೆಲ್ಲ ಪ್ರಶ್ನೆಗಳ ಜತೆ ದೀರ್ಘಾವಧಿಯಲ್ಲಿ ಚೀನಾಕ್ಕೆ ತನ್ನ ವಯೋವೃದ್ಧ ಜನಸಂಖ್ಯೆಯ ಆತಂಕವೂ ಇದೆ. ಇವತ್ತಿಗೆ ಚೀನಾದ ಜನಸಂಖ್ಯೆಯ ಸರಾಸರಿ ವಯೋಮಾನ 39 ವರ್ಷಗಳಾದರೆ, ಭಾರತದ್ದು 28. ಇದೇ ಟ್ರೆಂಡ್ ಮುಂದುವರಿದರೆ 2044ರಲ್ಲಿ ಚೀನಾ ಜನಸಂಖ್ಯೆಯ ಸರಾಸರಿ ವಯೋಮಾನ 50 ವರ್ಷಗಳು. ಇದರರ್ಥ ಅದರ ಜನಸಂಖ್ಯೆಯ ಅರ್ಧ ಪ್ರಮಾಣಕ್ಕೆ 50ರ ಪ್ರಾಯವಾಗಿರುತ್ತದೆ ಎಂದರ್ಥ. ಅದೇನೇ ತಂತ್ರಜ್ಞಾನ, ಮಾನವ ರಹಿತ ಎಐ ಯುದ್ಧ ಎಂದೆಲ್ಲ ಮಾತನಾಡಿದರೂ ವಯೋವೃದ್ಧ ದೇಶವೊಂದು ಯುದ್ಧವನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಅಲ್ಲದೇ, ಯುದ್ಧ ಮಾಡಿ ಹೆಚ್ಚಿನ ಭೂಭಾಗವನ್ನು ಆವರಿಸಿಕೊಳ್ಳುವ ಪ್ರಬಲ ಆಸೆಯೇ ಅಂಥ ಜನಸಂಖ್ಯೆ ರಚನೆ ಹೊಂದಿರುವವರ ಜನಮಾನಸದಲ್ಲಿ ಉದ್ಭವಿಸುವುದಿಲ್ಲ. 

ಹಾಗೆಂದೇ, ಇವತ್ತಿಗೆ ಚೀನಾವು ಭಾರತಕ್ಕಿಂತ ಆರ್ಥಿಕವಾಗಿ ಹಾಗೂ ತಂತ್ರಜ್ಞಾನ ವಿಚಾರದಲ್ಲಿ ಮುಂದುವರಿದಿದ್ದರೂ ಅದಕ್ಕೆ ಭಾರತದೊಂದಿಗೆ ದೀರ್ಘಾವಧಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗಳಿವೆ. ಆದರೆ, ಇಂಥ ‘ಸ್ನೇಹ ಸಂಧಾನ’ಗಳಲ್ಲಿ ಸಹ ಚೀನಾವು ಭಾರತಕ್ಕೆ ನೀಡಬೇಕಾದದ್ದನ್ನು ನೀಡದೆಯೇ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಂಡುಬಂದಿರುವುದು ಈವರೆಗಿನ ಇತಿಹಾಸದಲ್ಲಿ ಗೋಚರವಾಗುವ ಅಂಶ. ಈ ಬಗ್ಗೆ ಭಾರತದ ನಿವೃತ್ತ ರಾಜತಾಂತ್ರಿಕ ಅಧಿಕಾರಿ ವಿಜಯ ಗೋಖಲೆ ಅವರು ‘ದ ಲಾಂಗ್ ಗೇಮ್ - ಹೌ ದ ಚೈನೀಸ್ ನೆಗೋಶಿಯೇಟ್ ವಿತ್ ಇಂಡಿಯಾ’ ಎಂಬು ಪುಸ್ತಕ ಬರೆದಿದ್ದಾರೆ. 

ಕಮ್ಯುನಿಸ್ಟ್ ಆಡಳಿತ ಶುರುವಾದಾಗ ಚೀನಾಕ್ಕೆ ಮಾನ್ಯತೆ ನೀಡುವ ಸಂದರ್ಭದಲ್ಲಿ, ಟಿಬೆಟ್ ವಿಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಭಾರತವು ಪ್ರತಿಯಾಗಿ ಏನನ್ನೂ ಪಡೆದುಕೊಳ್ಳುವುದಕ್ಕೆ ಆಗಲಿಲ್ಲ. ಸಿಕ್ಕಿಂ, ನ್ಯೂಕ್ಲಿಯರ್ ಒಪ್ಪಂದ, ಮಸೂದ್ ಅಜರನನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿ ಹೆಸರಿಸುವ ಭಾರತದ ಪ್ರಯತ್ನದಲ್ಲಿ ಇಲ್ಲೆಲ್ಲವೂ ಹೇಗೆ ಭಾರತದ ರಾಜತಾಂತ್ರಿಕ ಚೌಕಾಶಿಗಳ ಮೆರಗನ್ನು ಕಡಿಮೆ ಮಾಡುವ ರೀತಿ ಚೀನಾದ ಸಂಧಾನಕಾರರು ನಡೆ ಇಟ್ಟಿದ್ದರೆಂಬುದನ್ನು ಪುಸ್ತಕ ವಿವರಿಸುತ್ತದೆ.


ಚೀನಾಕ್ಕೆ ಈಗ ಭಾರತದ ಮಾರುಕಟ್ಟೆ ಬೇಕು. ಭಾರತದ ಸಹಕಾರದೊಂದಿಗೆ ಅದು ಸಿಕ್ಕಿ ಮುಖಾಂತರ ಬಂಗಾಳಕೊಲ್ಲಿಗೆ ಸಲೀಸು ಮಾರ್ಗವನ್ನು ತೆರೆದಿರಿಸಿಕೊಳ್ಳುವ ಆಶಯ ಹೊಂದಿದೆ. ಇಲ್ಲೆಲ್ಲ ಮಿಲಿಟರಿ ಕಾರ್ಯತಂತ್ರದ ದೃಷ್ಟಿಯಿಂದ ಜಡಕುಗಳೂ ಇವೆ. ಭಾರತದೊಂದಿಗೆ ಗಡಿ ನಿರ್ದಿಷ್ಟಗೊಳಿಸಿಕೊಳ್ಳುವ ಚೀನಾದ ಎಲ್ಲ ಮಾತುಕತೆಗಳೂ ಈ ಎಲ್ಲ ಅಂಶಗಳನ್ನೂ ಚೌಕಾಶಿ ಮೇಜಿನಲ್ಲಿಡಲಿವೆ. ಈ ಬಾರಿ ಭಾರತವು ಚೀನಾದ ಜತೆಗಿನ ಯಾವುದೇ ಸಂಧಾನದಲ್ಲಿ ತನ್ನ ಹಿತಾಸಕ್ತಿಗಳು ಈಡೇರಬೇಕಾದ್ದನ್ನು ಖಾತ್ರಿಪಡಿಸಿಕೊಂಡೇ ಅದಕ್ಕೆ ಕೆಲವು ಹಂತದ ಮಾರುಕಟ್ಟೆ ತೆರೆದಿರಿಸುವಿಕೆಯನ್ನು ಮಾಡಬೇಕಿದೆ. ಈಗಿನ ರಾಜಕೀಯ ನಾಯಕತ್ವ ಆ ನಿಟ್ಟಿನಲ್ಲಿ ಹಿಂದಿನವರಿಗಿಂತ ಚಾಣಾಕ್ಷ್ಯತೆ ಹೊಂದಿದೆ ಎಂದು ಆಶಿಸೋಣ. 

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT