ಸುವರ್ಣಸೌಧ- ಡಿಕೆ ಶಿವಕುಮಾರ್- ಸಿದ್ದರಾಮಯ್ಯ online desk
ಅಂಕಣಗಳು

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಚರ್ಚೆ ಮತ್ತು ಸಿಎಂ ಕುರ್ಚಿ ಕಿತ್ತಾಟದ ನೆರಳು (ನೇರ ನೋಟ)

ಈ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ ನಲ್ಲಿ ನಡೆದಿರುವ ಕುರ್ಚಿ ಕಿತ್ತಾಟ ಬೆಳಗಾವಿ ಅಧಿವೇಶನದ ವೇಳೆಯೂ ಮುಂದುವರಿದಿರುವುದು ಆಡಳಿತಾರೂಢ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಂದಿದೆ.

ಅದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಈ ಬಾರಿ ಪ್ರಾರಂಭದಲ್ಲೇ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯುತ್ತಿರುವುದು ಒಂದು ಆಶಾವಾದ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯನ್ನು ಸಾಮಾನ್ಯವಾಗಿ ಕೊನೆಯ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿತ್ತು. ಸಮಯದ ಅಭಾವದ ಕಾರಣ ಪರಿಣಾಮಕಾರಿ ಚರ್ಚೆ ಸಾಧ್ಯವಾಗುತ್ತಿರಲಿಲ್ಲ. ಉಭಯ ಸದನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಈಗ ಚರ್ಚೆಯಾಗುತ್ತಿದೆ.

ಈ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ ನಲ್ಲಿ ನಡೆದಿರುವ ಕುರ್ಚಿ ಕಿತ್ತಾಟ ಬೆಳಗಾವಿ ಅಧಿವೇಶನದ ವೇಳೆಯೂ ಮುಂದುವರಿದಿರುವುದು ಆಡಳಿತಾರೂಢ ಪಕ್ಷ ಹಾಗೂ ಸರಕಾರಕ್ಕೆ ಮುಜುಗರ ತಂದಿದೆ.

ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರದ ವೈಫಲ್ಯ, ಉತ್ತರ ಕರ್ನಾಟಕದ ಅಭಿವೃದ್ದಿಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆಯೂ ಗಮನ ಸೆಳೆಯಲು ಪ್ರತಿಪಕ್ಷಗಳಿಗೆ ವಿಧಾನಮಂಡಲದ ಉಭಯ ಸದನಗಳು ವೇದಿಕೆಯಾಗಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಚರ್ಚೆ ವೇಳೆ ಬೆಳಗಾವಿಯಲ್ಲಿ ಹಿಂದಿನ ಎರಡು ಅಧಿವೇಶನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡಿದ ಭರವಸೆಗಳ ಪೈಕಿ ಎಷ್ಟು ಈಡೇರಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಪಡಿಸಿದ್ದಾರೆ. ನಿಜ. ಭರವಸೆಗಳನ್ನು ನೀಡುವುದು ಸುಲಭ. ಆದರೆ, ಕೊಟ್ಟ ಭರವಸೆಗಳ ಅನುಷ್ಠಾನ ಮುಖ್ಯ. ಅದು ಯಾವುದೇ ಪಕ್ಷದ ಸರಕಾರವಿರಲಿ, ನೀಡಿರುವ ಆಶ್ವಾಸನೆಗಳನ್ನು ಜಾರಿಗೊಳಿಸಬೇಕು. ಆ ನಿಟ್ಟಿನಲ್ಲಿ ಆಗಾಗ್ಗೆ ಪ್ರಗತಿ ಪರಿಶೀಲನೆ ನಡೆಸುವ ಕಾರ್ಯ ಆಗಬೇಕು.

ಬೆಳಗಾವಿ ಅಧಿವೇಶನದಲ್ಲೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಆದ್ಯತೆ ಮೇಲೆ ಚರ್ಚಿಸಬೇಕೇಂದೇನೂ ಇಲ್ಲ. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಆದ್ಯತೆ ಆಗಬೇಕಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕೆಂಬ ಒತ್ತಡ ಸರಕಾರದ ಮೇಲೆ ಬೀಳುವುದು ಸಾಮಾನ್ಯ. ಏಕೆಂದರೆ, ಇಡೀ ಸಚಿವ ಸಂಪುಟ, ಉನ್ನತ ಅಧಿಕಾರಿಗಳು ಆ ಸಮಯದಲ್ಲಿ ಬೆಳಗಾವಿಯಲ್ಲೇ ಇರುವುದರಿಂದ ಇಂತಹ ಒತ್ತಡ ಸರಕಾರದ ಮೇಲೆ ಬೀಳುತ್ತದೆ.

ಬೆಳಗಾವಿಯಲ್ಲಿ ಕಳೆದ ವರ್ಷ ನಡೆದ ಅಧಿವೇಶನದಲ್ಲಿ 49 ಶಾಸಕರು 13 ಗಂಟೆಗಳ ಕಾಲ ಮಾತಾಡಿದ್ದರು. ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ, ಮೂಲ ಸೌಕರ್ಯಗಳು ಹೀಗೆ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ 14 ಜಿಲ್ಲೆಗಳ ವಿವಿಧ ವಿಷಯಗಳ ಕುರಿತು ಚರ್ಚೆ ಆಗಿತ್ತು. ಉತ್ತರ ಕರ್ನಾಟಕ ನಿರೀಕ್ಷಿಸಿದ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕಿದೆ.

ಉತ್ತರ ಕರ್ನಾಟಕ ಅಂದರೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಎರಡೂ ಸೇರಿ ಉತ್ತರ ಕರ್ನಾಟಕ ಆಗಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ಎಂದಾಕ್ಷಣ ಕಿತ್ತೂರು ಕರ್ನಾಟಕ ಎಂದು ಅನೇಕರು ಭಾವಿಸುತ್ತಾರೆ. ಇದು ಸರಿಯಲ್ಲ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಎರಡೂ ಸೇರಿ 14 ಜಿಲ್ಲೆಗಳನ್ನು ಒಳಗೊಂಡ ಪ್ರದೇಶ ಉತ್ತರ ಕರ್ನಾಟಕ.

ಉತ್ತರ ಕರ್ನಾಟಕ ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಕಾರಣಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಿತ್ತೂರು ಕರ್ನಾಟಕದ ಅನೇಕ ಪ್ರದೇಶಗಳು ಮುಂಬೈ ಪ್ರಾಂತ್ಯದಲ್ಲಿಯೂ, ಕಲ್ಯಾಣ ಕರ್ನಾಟಕದ ಅನೇಕ ಪ್ರದೇಶಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಾತಂತ್ರ್ಯ ನಂತರವೂ ಕನ್ನಡ ಮಾತಾಡುವ ಪ್ರದೇಶಗಳು ಹರಿದು ಹಂಚಿಹೋಗಿದ್ದವು. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಕರ್ನಾಟಕ ಏಕೀಕರಣವಾದ ನಂತರ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಪ್ರದೇಶಗಳು ಸೇರಿ ಅಖಂಡ ಮೈಸೂರು ರಾಜ್ಯ ಸ್ಥಾಪನೆಯಾಯಿತು. ನಂತರ ಮೈಸೂರು ರಾಜ್ಯ ಕರ್ನಾಟಕ ಎಂದು ಹೆಸರಾಯಿತು.

ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ನಗರಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಆದರೆ, ಪ್ರಶ್ನೆ ಇರುವುದು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಅಭಿವೃದ್ಧಿಯ ವೇಗ ಕಂಡು ಬಂದಿದೆಯೇ? ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂಬ ಅಸಮಾಧಾನ ದಶಕಗಳಿಂದಲೂ ಇದೆ. ಹೀಗಾಗಿಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಈಗಲೂ ಕೇಳಿ ಬರುತ್ತಲೇ ಇದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಮಾರ್ದನಿಸಿದೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇದೇ ಮೊದಲೇನಲ್ಲ. ಕರ್ನಾಟಕ ಏಕೀಕರಣದ ನಂತರ ಅನೇಕ ಬಾರಿ ಇಂತಹ ಕೂಗು ಎದ್ದಿದೆ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಹಾಗೂ ಧಾರವಾಡದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಮುಗಿಲು ಮುಟ್ಟಿತ್ತು. ಹೋರಾಟಗಾರರು ಪ್ರತ್ಯೇಕ ರಾಜ್ಯದ ಧ್ವಜವನ್ನು ಧಾರವಾಡದಲ್ಲಿ ಹಾರಿಸಿದ್ದ ಘಟನೆಯೂ ನಡೆದಿತ್ತು. ಅದು 1990ರ ದಶಕದ ಅಂತಿಮ ವರ್ಷಗಳು. ಉತ್ತರ ಕರ್ನಾಟಕ ಭಾಗದ ಜನರ ಹೋರಾಟದ ಫಲವಾಗಿಯೇ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಕೇಂದ್ರ ಕಚೇರಿ, ಧಾರವಾಡ ಹಾಗೂ ಕಲಬುರಗಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿರುವುದನ್ನು ಮರೆಯುವಂತಿಲ್ಲ.

ಅಭಿವೃದ್ದಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯವಾಗಿರುವುದು ಸ್ಪಟಿಕ ಸ್ಪಷ್ಟ. ಆದರೆ ಇದೇ ವೇಳೆ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಆಳುವ ಸರಕಾರಗಳ ಮೇಲೆ ನಿರಂತರವಾಗಿ ಒತ್ತಡ ಹೇರಿ ಅಭಿವೃದ್ಧಿ ಕಾರ್ಯಗಳನ್ನು ಆಗುಮಾಡಿಸಿಕೊಳ್ಳಬೇಕಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವೆಚ್ಚ ಮಾಡಿದ ಹಣ ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳಬೇಕಿದೆ. ಮಾಹಿತಿ ತಂತ್ರಜ್ಞಾನದ ಕಂಪನಿಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸ್ಥಾಪನೆಯಾಗಲು ಸರಕಾರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ 371 ಜೆ ಮೀಸಲು ಅನುಷ್ಠಾನ ಪಾರದರ್ಶಕವಾಗಿರಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯದ ಕೂಗು ಪರಿಹಾರವಲ್ಲ.

ಪ್ರತಿಪಕ್ಷದಲ್ಲಿದ್ದಾಗ ಉತ್ತರ ಕರ್ನಾಟಕ ಅಭಿವೃದ್ಧಿಯ ಮಂತ್ರ ಜಪಿಸುವ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಗ ನಿರ್ಲಕ್ಷ್ಯ ತೋರುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಡೆದ ಚರ್ಚೆ ಅಧಿವೇಶನ ಮುಗಿದ ಕೂಡಲೇ ಅಲ್ಲಿಗೆ ಕೊನೆಗೊಳ್ಳುತ್ತದೆ. ಇದರ ಫಾಲೋಅಪ್ ಬೆಂಗಳೂರಿನ ವಿಧಾನಸೌಧದಲ್ಲಿ ಆಗಬೇಕಿದೆ. ಆದರೆ, ಆಗುವುದಿಲ್ಲ. ಕಾಲಮಿತಿಯೊಳಗೆ ಭರವಸೆ ಜಾರಿಯಾಗಬೇಕು. ಆದರೆ, ಅಸಡ್ಡೆ ತೋರಲಾಗುತ್ತದೆ. ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

ಉತ್ತರಕರ್ನಾಟಕದ ಪ್ರಗತಿಯ ಸ್ಥಿತಿಗತಿ ಅವಲೋಕನಕ್ಕೆ ಆರ್ಥಿಕ ತಜ್ಞ ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇದೆ. ಈ ಸಮಿತಿ ಒಂದು ವರ್ಷವಾದರೂ ಸರಕಾರಕ್ಕೆಇನ್ನೂ ವರದಿಯನ್ನೇ ಸಲ್ಲಿಸಿಲ್ಲ. ಸಮಿತಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಆಗಬೇಕು.

ಇನ್ನು ಯಾವುದೇ ಸರಕಾರವಿರಲಿ, ಹಳೆಯ ಮೈಸೂರು ಪ್ರಾಂತ್ಯದ ಸಚಿವರು ಉತ್ತರ ಕರ್ನಾಟಕದ ಕಡೆ ಪ್ರವಾಸ ಮಾಡುವುದು ವಿರಳ. ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡದಿದ್ದರೆ ಅವರಿಗೆ ಆಯಾ ಪ್ರದೇಶದ ಜನರ ಸಂಕಷ್ಟಗಳು ಅರಿವು ಆಗುವುದಾದರೂ ಹೇಗೆ? ವಿವಿಧ ಪ್ರದೇಶಗಳ ಪರಿಚಯ ಆಗುವುದಾದರೂ ಹೇಗೆ? ರಾಜ್ಯದ ಸಮಗ್ರ ದೃಷ್ಟಿಕೋನ ಒದಗಿ ಬರುವುದಾದರೂ ಹೇಗೆ?

ಬೆಳಗಾವಿಯ ಅಧಿವೇಶನದ ಈ ಸಂದರ್ಭದಲ್ಲಿಯೂ ಆಳುವ ಕಾಂಗ್ರೆಸ್‌ ಸರಕಾರದ ಬಣ ಬಡಿದಾಟ ಮುಂದುವರಿದಿದೆ. ಸಿಎಂ ಹಾಗೂ ಡಿಸಿಎಂ ಅವರ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ಗಳು ರಂಗಪ್ರಹಸನಗಳು ಎಂಬುದು ಅವು ನಡೆದಾಗಲೇ ಗೊತ್ತಾಗಿತ್ತು. ಬ್ರೇಕ್‌ ಫಾಸ್ಟ್‌ ಸಭೆಗಳ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಎಂದು ಬೆಳಗಾವಿಯಲ್ಲಿ ನೀಡಿರುವ ಹೇಳಿಕೆ ಮತ್ತೆ ಚರ್ಚೆಯ ತಾಪವನ್ನು ಹೆಚ್ಚಿಸಿದೆ.

ಸಿದ್ದರಾಮಯ್ಯ ಅವರಿಗೆ ನಿಷ್ಠರಾದ ಸಚಿವ ಬೈರತಿ ಸುರೇಶ್‌ ಅವರು ಕಿಂಗ್‌ ಇಸ್ ಅಲೈವ್‌, ಟೈಗರ್‌ ಜಿಂದಾ ಹೈ ಎಂದಿರುವುದು ಬಿಕ್ಕಟ್ಟನ್ನು ಮತ್ತಷ್ಟು ಆಳಗೊಳಿಸಿದೆ.

ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನೂ ಕಾಂಗ್ರೆಸ್ಸಿನ ಶಾಸಕರೇ ವಿರೋಧಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ, ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಪೋಸ್ಟ್‌ ಮಾಡಿದ್ದು ವಿವಾದವಾಯಿತು. ನಂತರ ಇದನ್ನು ಅವರು ಸರಿಪಡಿಸಿಕೊಂಡರೂ ಚರ್ಚೆ ನಿಲ್ಲಲಿಲ್ಲ. ಬೆಳಗಾವಿ ಅಧಿವೇಶನದ ಮೇಲೆಯೂ ಪವರ್‌ ಶೇರಿಂಗ್‌ನ ಬಡಿದಾಟದ ನೆರಳು ಬಿದ್ದಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ನಟಿ ಮೇಲೆ ಅತ್ಯಾಚಾರ, ಹಲ್ಲೆ ಪ್ರಕರಣ: ಪಲ್ಸರ್ ಸುನಿ ಸೇರಿ ಎಲ್ಲಾ ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ಗೃಹ ಲಕ್ಷ್ಮಿ ಹಣ: ಸಚಿವೆ ಲಕ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ರಾ? 'ಡಿನ್ನರ್ ಪಾಲಿಟಿಕ್ಸ್' ಬಗ್ಗೆ ಬಿಜೆಪಿ ಕಿಡಿ!

'ಏನೋ ತಪ್ಪಾಗಿದೆ...' ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ!

ದರ್ಶನ್ ಜೈಲ್‌ನಲ್ಲಿ ಇದ್ರೂ ರಾಜ್ಯಾದ್ಯಂತ 'ಡೆವಿಲ್' ಫೀವರ್, ಮೊದಲ ದಿನದ ಗಳಿಕೆ ಎಷ್ಟು?

ಮಾಲೀಕರೇ ವಿದೇಶಿಗರಿಗೆ ಮನೆ ಬಾಡಿಗೆ ಕೊಡುವ ಮುನ್ನ ಎಚ್ಚರ; ಡ್ರಗ್ಸ್ ಮಾರಾಟಗಾರರಿರುವ ಕಟ್ಟಡ ಕೆಡವಲು ಸರ್ಕಾರ ಚಿಂತನೆ!

SCROLL FOR NEXT