ಡಿಸೆಂಬರ್ 24ರಂದು ಇಸ್ರೋ ಬ್ಲೂಬರ್ಡ್-6 ಸಂವಹನ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ನಡೆಸಲಿದೆ.
ಬರೋಬ್ಬರಿ 6,500 ಕೆಜಿ ತೂಕ ಹೊಂದಿರುವ ಈ ಉಪಗ್ರಹವನ್ನು ಭಾರತದ ಪ್ರಮುಖ ಬಾಹ್ಯಾಕಾಶ ಕೇಂದ್ರವಾದ ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲಾಗುತ್ತದೆ. ಉಪಗ್ರಹವನ್ನು ಭೂಮಿಯಿಂದ 550 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್‌ಇಒ) ಅಳವಡಿಸಲಾಗುತ್ತದೆ.
ಡಿಸೆಂಬರ್ 19, ಶುಕ್ರವಾರದಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಮೆರಿಕದ ಎಎಸ್‌ಟಿ ಸ್ಪೇಸ್ ಮೊಬೈಲ್ ಎಂಬ ಸಂಸ್ಥೆ ನಿರ್ಮಿಸಿರುವ ಸಂವಹನ ಉಪಗ್ರಹವಾದ ಬ್ಲೂಬರ್ಡ್-6 ಅನ್ನು ಭಾರತದ ಎಲ್‌ವಿಎಂ3 – ಎಂ6 ರಾಕೆಟ್ ಮೂಲಕ ಉಡಾವಣೆಗೊಳಿಸುವುದಾಗಿ ಹೇಳಿತ್ತು.
ಮೂರು ಹಂತಗಳ ಎಲ್‌ವಿಎಂ3 – ಎಂ6 ರಾಕೆಟ್ ಡಿಸೆಂಬರ್ 24, 2025ರಂದು ಭಾರತೀಯ ಕಾಲಮಾನದಲ್ಲಿ ಬೆಳಗಿನ 8:54ಕ್ಕೆ ಶ್ರೀಹರಿಕೋಟಾದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಈ ಮೊದಲು ಉಪಗ್ರಹವನ್ನು ಡಿಸೆಂಬರ್ 15ರಂದು ಉಡಾವಣೆಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಉಡಾವಣೆ ಮುಂದೂಡಲ್ಪಟ್ಟಿತು. ಇಸ್ರೋ ವಿಳಂಬಕ್ಕೆ ನಿರ್ದಿಷ್ಟ ಕಾರಣವನ್ನೇನೂ ತಿಳಿಸಿರಲಿಲ್ಲ.
ಬ್ಲೂಬರ್ಡ್-6 ಉಪಗ್ರಹ ಇಲ್ಲಿಯತನಕ ಭಾರತೀಯ ರಾಕೆಟ್ ಬಾಹ್ಯಾಕಾಶಕ್ಕೆ ಒಯ್ದಿರುವ ಅತ್ಯಂತ ತೂಕದ ಉಪಗ್ರಹ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಎಲ್‌ವಿಎಂ3 ರಾಕೆಟ್ ಒಟ್ಟು ಎಂಟು ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಸ್ತುತ ಉಡಾವಣಾ ಯೋಜನೆ ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಮತ್ತು ಅಮೆರಿಕಾ ಮೂಲದ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆಗಳ ನಡುವೆ ನಡೆದಿರುವ ವಾಣಿಜ್ಯಿಕ ಒಪ್ಪಂದದ ಭಾಗವಾಗಿದೆ. ಒಂದು ಉಡಾವಣಾ ಸೇವೆ ಒದಗಿಸುವ ಸಂಸ್ಥೆಯಾಗಿ ಇಸ್ರೋ ವಿದೇಶೀ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ ಆದಾಯ ಸಂಪಾದಿಸುತ್ತದೆ.
ಎನ್‌ಎಸ್‌ಐಎಲ್ ಮೂಲಕ ನಿರ್ವಹಿಸಲ್ಪಡುವ ಈ ವಾಣಿಜ್ಯಿಕ ಉಡಾವಣೆಗಳು ಒಂದು ರೀತಿ ಟ್ಯಾಕ್ಸಿ ಸೇವೆಯಂತೆ ಕಾರ್ಯಾಚರಿಸುತ್ತವೆ. ಇಲ್ಲಿ ಅಮೆರಿಕದ ಕಂಪನಿ ಪ್ರಯಾಣಿಕನಾಗಿದ್ದು, ಉಡಾವಣೆ ನಡೆಸಿಕೊಟ್ಟದ್ದಕ್ಕೆ ಭಾರತ ಸರ್ಕಾರಕ್ಕೆ ಹಣ ಪಾವತಿಸುತ್ತದೆ.
ಇದು ಎಲ್‌ವಿಎಂ3 ರಾಕೆಟ್ ಮೂಲಕ ನಡೆಸುತ್ತಿರುವ ಮೂರನೇ ವಾಣಿಜ್ಯಿಕ ಉಡಾವಣೆಯಾಗಿದ್ದು, ಮೊದಲ ಬಾರಿಗೆ ಅಮೆರಿಕನ್ ಕಂಪನಿಯೊಂದರ ಉಪಗ್ರಹವನ್ನು ಉಡಾವಣೆಗೊಳಿಸಲಾಗುತ್ತಿದೆ. ಈ ಹಿಂದೆ ಎಲ್‌ವಿಎಂ3 ರಾಕೆಟ್ ಯುರೋಪಿಯನ್ ಕಂಪನಿಯಾದ ವನ್‌ವೆಬ್‌ನ ಎರಡು ಉಡಾವಣೆ ನೆರವೇರಿಸಿತ್ತು. ಈಗ ವನ್‌ವೆಬ್ ಯುಟೆಲ್‌ಸ್ಯಾಟ್ ವನ್‌ವೆಬ್ ಎಂಬ ಹೆಸರು ಹೊಂದಿದೆ.
ವನ್‌ವೆಬ್ ಮೂಲತಃ ಯುಕೆಯ ಕಂಪನಿಯಾಗಿದ್ದು, ಬಳಿಕ ಫ್ರಾನ್ಸಿನ ಯುಟೆಲ್‌ಸ್ಯಾಟ್ ಗ್ರೂಪಿಗೆ ಸೇರ್ಪಡೆಗೊಂಡಿತು.
ಎಎಸ್‌ಟಿ ಸ್ಪೇಸ್ ಮೊಬೈಲ್ ಅಮೆರಿಕದ ಟೆಕ್ಸಾಸ್ ಮೂಲದ ಒಂದು ಟೆಲಿಕಾಂ ಕಂಪನಿಯಾಗಿದೆ. ಇದು ಉಪಗ್ರಹಗಳನ್ನು ಬಳಸಿಕೊಂಡು, ಸಾಮಾನ್ಯ ಮೊಬೈಲ್ ಫೋನ್‌ಗಳಿಗೆ ಮೊಬೈಲ್ ಟವರ್‌ಗಳ ಅವಶ್ಯಕತೆಯೇ ಇಲ್ಲದೆ ನೇರ ಅಂತರ್ಜಾಲ ಸಂಪರ್ಕ ಒದಗಿಸುವ ಗುರಿ ಹೊಂದಿದೆ.
ಸಾಮಾನ್ಯವಾಗಿ, ವಿಶೇಷವಾದ ಸ್ಯಾಟಲೈಟ್ ಫೋನ್‌ಗಳು ಮಾತ್ರವೇ ಉಪಗ್ರಹಗಳಿಗೆ ಸಂಪರ್ಕ ಹೊಂದಬಲ್ಲವು. ಆದರೆ ಈ ಫೋನುಗಳು ಗಾತ್ರದಲ್ಲಿ ಬಹಳ ದೊಡ್ಡವಾಗಿದ್ದು, ಕಣ್ಣಿಗೆ ಕಾಣುವಂತಹ ಆಂಟೆನಾಗಳನ್ನು ಹೊಂದಿರುತ್ತವೆ. ಇವು ಬಹುತೇಕ ಧ್ವನಿ ಕರೆಗಳನ್ನು ಮಾತ್ರವೇ ಒದಗಿಸಬಲ್ಲವಾಗಿದ್ದು, ಇವುಗಳು ಅತ್ಯಂತ ನಿಧಾನವಾದ ಸಂದೇಶ ಮತ್ತು ಅಂತರ್ಜಾಲ ವ್ಯವಸ್ಥೆ ಹೊಂದಿರುತ್ತವೆ.
ಇಂತಹ ಸೇವೆಗಳನ್ನು ಇರಿಡಿಯಂ ಮತ್ತು ತುರಾಯಾದಂತಹ ಕಂಪನಿಗಳು ಒದಗಿಸುತ್ತವೆ. ಇವುಗಳನ್ನು ಸಾಮಾನ್ಯವಾಗಿ ರಕ್ಷಣಾ ಮತ್ತು ಸಮುದ್ರ ವಲಯಗಳು ಬಳಸಿಕೊಂಡು, ಸಾಮಾನ್ಯವಾಗಿ ಮೊಬೈಲ್ ನೆಟ್‌ವರ್ಕ್‌ಗಳು ಕಾರ್ಯ ನಿರ್ವಹಿಸದ ಸ್ಥಳಗಳಲ್ಲೂ ಸಂಪರ್ಕ ಸಾಧಿಸುತ್ತವೆ.
ಎಎಸ್‌ಟಿ ಮತ್ತು ಸ್ಟಾರ್‌ಲಿಂಕ್ ಗಳಂತಹ ಕಂಪನಿಗಳು ಉಪಗ್ರಹ ಸಂವಹನ ಕಾರ್ಯಾಚರಿಸುವ ವಿಧಾನವನ್ನೇ ಬದಲಾಯಿಸುವ ಪ್ರಯತ್ನ ನಡೆಸುತ್ತಿವೆ.
ಅವುಗಳು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಾದ ಆಂಡ್ರಾಯ್ಡ್ ಮತ್ತು ಐಫೋನ್‌ಗಳೂ ಸಹ ನೇರವಾಗಿ ಉಪಗ್ರಹಗಳೊಡನೆ ಸಂಪರ್ಕ ಸಾಧಿಸಿ, ಯಾವುದೇ ಹೆಚ್ಚುವರಿ ಉಪಕರಣ ಅಥವಾ ಹಾರ್ಡ್‌ವೇರ್ ಇಲ್ಲದೆಯೂ ಕಾರ್ಯಾಚರಿಸುವಂತೆ ಮಾಡುವ ಉದ್ದೇಶ ಹೊಂದಿವೆ.
ಜಗತ್ತನ್ನು ವ್ಯಾಪಿಸಿರುವ ಉಪಗ್ರಹಗಳನ್ನು ಹೊಂದಿ, ಆ ಮೂಲಕ ಕಾರ್ಯಾಚರಿಸುವ ಈ ಸೇವೆಗಳು ಮೊಬೈಲ್ ಫೋನ್‌ಗಳನ್ನು ಜಗತ್ತಿನ ಬಹುತೇಕ ಎಲ್ಲ ಮೂಲೆಗಳಲ್ಲೂ ಕಾರ್ಯಾಚರಿಸುವಂತೆ ಮಾಡಲಿವೆ. ಸರಳವಾಗಿ ಹೇಳುವುದಾದರೆ, ಇದರ ನೆರವಿನಿಂದ ಜನರು ʼನೋ ಸಿಗ್ನಲ್ʼ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎನ್ನುವ ಸಮಸ್ಯೆಗಳಿಂದ ಮುಕ್ತರಾಗಲಿದ್ದಾರೆ.
ವರದಿಗಳ ಪ್ರಕಾರ, ಎಎಸ್‌ಟಿ ಪ್ರಸ್ತುತ ಬಾಹ್ಯಾಕಾಶದಲ್ಲಿ ಮೊದಲ ತಲೆಮಾರಿನ ಐದು ಉಪಗ್ರಹಗಳನ್ನು ಹೊಂದಿದೆ. ಇವುಗಳನ್ನು ಬ್ಲೂಬರ್ಡ್ 1ರಿಂದ 5 (ಬ್ಲಾಕ್ - 1) ಎಂದು ಗುರುತಿಸಲಾಗುತ್ತದೆ.
ಎಎಸ್‌ಟಿ ಮುಂದಿನ ದಿನಗಳಲ್ಲಿ ಎರಡನೇ ತಲೆಮಾರಿನ (ಬ್ಲಾಕ್ - 2) 45ರಿಂದ 50 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ಹಾಕಿಕೊಂಡಿದೆ. ಈ ಉಪಗ್ರಹಗಳು ಎಲ್ಲ ಪ್ರಮುಖ ಭೂ ಪ್ರದೇಶಗಳಲ್ಲೂ ತಮ್ಮ ಸೇವೆ ಒದಗಿಸಲಿವೆ. ಅಂದರೆ, ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಅಮೆರಿಕಗಳಂತಹ ಖಂಡಗಳಲ್ಲಿ ಅವುಗಳ ವ್ಯಾಪ್ತಿ ಇರಲಿದೆ.
ಮುಂದಿನ ತಿಂಗಳುಗಳಲ್ಲಿ ಒಂದರ ನಂತರ ಒಂದರಂತೆ ಹಲವು ಉಪಗ್ರಹಗಳನ್ನು ನಿರಂತರವಾಗಿ ಉಡಾವಣೆಗೊಳಿಸಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಬ್ಲೂಬರ್ಡ್-7 ಉಪಗ್ರಹವನ್ನು ಈಗಾಗಲೇ ಉಡಾವಣೆಗಾಗಿ ಫ್ಲೋರಿಡಾದ ಕೇಪ್ ಕ್ಯಾನವೆರಾಲ್‌ಗೆ ಕಳುಹಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬ್ಲೂಬರ್ಡ್ 8ರಿಂದ 16ರ ತನಕದ ಉಪಗ್ರಹಗಳನ್ನು ಈಗಾಗಲೇ ನಿರ್ಮಿಸಲಾಗುತ್ತಿದ್ದು, ಪ್ರತಿ 1-2 ತಿಂಗಳಿಗೆ ಒಂದು ಬಾರಿಯಂತೆ 2025 ಮತ್ತು 2026ರಲ್ಲಿ ಅವುಗಳು ಉಡಾವಣೆಗೊಳ್ಳಲಿವೆ.
ಎಎಸ್‌ಟಿ ಸ್ಪೇಸ್ ಮೊಬೈಲ್ 2026ರ ಕೊನೆಯ ವೇಳೆಗೆ ಬಾಹ್ಯಾಕಾಶದಲ್ಲಿ 45ರಿಂದ 60 ಉಪಗ್ರಹಗಳನ್ನು ಹೊಂದುವ ನಿರೀಕ್ಷೆಯಲ್ಲಿದೆ. ಈ ಬ್ಲೂಬರ್ಡ್ ಉಪಗ್ರಹಗಳು ಭೂಮಿಯಿಂದ ಅಂದಾಜು 600 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಯಲ್ಲಿ ಅಳವಡಿಸಿರುವ ಅತ್ಯಂತ ದೊಡ್ಡದಾದ ವಾಣಿಜ್ಯಿಕ ಉಪಗ್ರಹಗಳು ಎನ್ನಲಾಗಿದೆ.
ಪ್ರತಿಯೊಂದು ಉಪಗ್ರಹವೂ ಬೃಹತ್ ಆಂಟೆನಾಗಳನ್ನು ಹೊಂದಿದ್ದು, ಇವು ಅಂದಾಜು 2,400 ಅಡಿಗಳಷ್ಟು ದೊಡ್ಡದಾಗಿವೆ. ಇವು ಕಕ್ಷೆಗೆ ತಲುಪಿದ ಬಳಿಕ ತೆರೆಯಲ್ಪಡುತ್ತವೆ. ಈ ಫೇಸ್ಡ್ ಅರೇ ಆಂಟೆನಾ (ಹಲವಾರು ಸಣ್ಣ ಸಣ್ಣ ಆಂಟೆನಾಗಳಿಂದ ನಿರ್ಮಿತವಾಗಿರುವ ದೊಡ್ಡದಾದ ಸ್ಮಾರ್ಟ್ ಆಂಟೆನಾ ಆಗಿದ್ದು, ಇಲೆಕ್ಟಾನಿಕ್ ವಿಧಾನದಿಂದ ಜೊತೆಯಾಗಿ ಕಾರ್ಯಾಚರಿಸಿ ಸಂಕೇತಗಳನ್ನು ಕೇಂದ್ರೀಕರಿಸುತ್ತವೆ) ಸಾಮಾನ್ಯವಾದ ಫೋನುಗಳಿಗೂ ನೇರ ಅಂತರ್ಜಾಲ ಸಂಪರ್ಕ ಕಲ್ಪಿಸುತ್ತದೆ.
ಈ ಉಪಗ್ರಹ ಗರಿಷ್ಠ 10,000 ಮೆಗಾಹರ್ಟ್ಜ್ ತನಕದ ಬ್ಯಾಂಡ್‌ವಿಡ್ತ್ ಹೊಂದಿದೆ. ಅಂದರೆ, ಇದು ಅತ್ಯಂತ ಬೃಹತ್ ಪ್ರಮಾಣದ ಮಾಹಿತಿಗಳನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲದು. ಉದಾಹರಣೆಗೆ, ಒಂದು ವಿಶಾಲವಾದ ಹೆದ್ದಾರಿಯಲ್ಲಿ ಯಾವುದೇ ಟ್ರಾಫಿಕ್ ಜಾಮ್ ಉಂಟಾಗದಂತೆ ಏಕಕಾಲದಲ್ಲೇ ಸಾವಿರಾರು ವಾಹನಗಳು ಸಾಗಲು ಸಾಧ್ಯವಾಗುವಂತೆ, 10,000 ಮೆಗಾಹರ್ಟ್ಜ್ ಸಾಮರ್ಥ್ಯ ಸಾವಿರಾರು ಬಳಕೆದಾರರಿಗೆ ಏಕಕಾಲದಲ್ಲೇ ಸುಗಮವಾಗಿ ಅಂತರ್ಜಾಲ ಬಳಸಲು ಅನುಕೂಲ ಕಲ್ಪಿಸುತ್ತದೆ.
ಇದು 120 ಎಂಬಿಪಿಎಸ್ ತನಕದ ಗರಿಷ್ಠ ಅಂತರ್ಜಾಲ ವೇಗವನ್ನು ಒದಗಿಸುತ್ತದೆ. ಅಂದರೆ, ವೇಗವಾದ ವೀಡಿಯೋ ಸ್ಟ್ರೀಮಿಂಗ್, ಸ್ಪಷ್ಟವಾದ ವೀಡಿಯೋ ಕರೆಗಳು, ಮತ್ತು ವೇಗದ ಡೌನ್‌ಲೋಡ್ ಸೇವೆಗಳನ್ನು ಒದಗಿಸುತ್ತದೆ. ಅಂದರೆ, ಸಂಪೂರ್ಣವಾದ ಎಚ್‌ಡಿ ಚಲನಚಿತ್ರವನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಡೌನ್‌ಲೋಡ್ ಮಾಡಬಹುದು.
ಎಎಸ್‌ಟಿ ಸ್ಪೇಸ್ ಮೊಬೈಲ್ ತಾನು ಈಗಾಗಲೇ ಜಗತ್ತಿನಾದ್ಯಂತ 50ಕ್ಕೂ ಹೆಚ್ಚು ಮೊಬೈಲ್ ದೂರಸಂಪರ್ಕ ಸೇವಾದಾರ ಸಂಸ್ಥೆಗಳೊಡನೆ ಸಹಯೋಗ ಸಾಧಿಸಿದ್ದು, ಒಟ್ಟಾರೆಯಾಗಿ 3 ಬಿಲಿಯನ್ ಬಳಕೆದಾರರಿಗೆ ಸೇವೆ ಒದಗಿಸಬಲ್ಲೆ ಎಂದಿದೆ. ಇದು ಫ್ಲೆಕ್ಸಿಬಲ್ ಸ್ಪೆಕ್ಟ್ರಮ್ ಯೋಜನೆಯನ್ನು ಬಳಸಿಕೊಳ್ಳಲಿದೆ. ಅಂದರೆ, ಇದು ತಾನು ಪರವಾನಗಿ ಹೊಂದಿರುವ ಸಂಕೇತಗಳನ್ನು ಮತ್ತು ತನ್ನ ಸಹಯೋಗಿ ಕಂಪನಿಗಳ ಸಂಕೇತಗಳ ಸಂಯೋಜನೆಯನ್ನು ಬಳಸಿಕೊಳ್ಳಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com