ಹೊಸ ವರ್ಷ (ಸಂಗ್ರಹ ಚಿತ್ರ) online desk
ಅಂಕಣಗಳು

New Year 2026 : ಅಸ್ಥಿರ ಸಮಯದಲ್ಲಿ ಬೇಕಾದದ್ದು ಸ್ಥಿರ ಆಲೋಚನೆ! (ಹಣಕ್ಲಾಸು)

ಈ ವರ್ಷ ಟ್ರಂಪ್ ರಂಪಾಟಗಳಿಗೆ ತೆರೆ ಬೀಳದಿದ್ದರೆ ಆರ್ಥಿಕವಾಗಿ ಅಮೇರಿಕಾ ಇನ್ನಷ್ಟು ಪೆಟ್ಟು ತಿನ್ನಲಿದೆ. ಅದರ ಜೊತೆಗೆ ಜಾಗತಿಕ ಆರ್ಥಿಕತೆಯ ಲೆಕ್ಕಾಚಾರವನ್ನು ಕೂಡ ಅದು ಬುಡಮೇಲು ಮಾಡಲಿದೆ.

ಜಗತ್ತು ದಿನದಿಂದ ದಿನಕ್ಕೆ ಸಂಕ್ಲಿಷ್ಟವಾಗುತ್ತ ಸಾಗುತ್ತಿದೆ. ಜಾಗತಿಕ ರಾಜಕೀಯದಲ್ಲಿ ಹಣ ಮತ್ತು ಅಧಿಕಾರದ ಮೇಲಿನ ಹಿಡಿತದ ಕಾರಣ ಬಹಳಷ್ಟು ಸಂಘರ್ಷಗಳು ನಡೆಯುತ್ತಿವೆ. ಹಲವಾರು ಬಾರಿ ನನ್ನ ಲೇಖನಗಳಲ್ಲಿ ಬರೆದಿರುವಂತೆ ರಿಸೆಟ್ ಬಟನ್ ಒತ್ತುವುದು ಅನಿವಾರ್ಯ ಎನ್ನುವಂತಾಗಿದೆ. ಆದರೆ ಸುಲಭವಾಗಿ ಅಮೇರಿಕಾ ಅಧಿಕಾರವನ್ನು ಬಿಟ್ಟು ಕೊಡಲು ಸಿದ್ದವಿಲ್ಲ. ಅಲ್ಲದೆ ಹಿಂದಿನಂತೆ ಒಂದು ದೇಶವನ್ನು ನಾಯಕ ಎಂದು ಒಪ್ಪಲು ಜಗತ್ತಿನಲ್ಲಿ ಇಂದಿಗೆ ಶಕ್ತಿಶಾಲಿಯಾಗಿರುವ ಅನೇಕ ದೇಶಗಳು ಒಪ್ಪುವುದಿಲ್ಲ. ಈ ಎಲ್ಲಾ ಕಾರಣ ಗಳಿಂದ 2026ರಲ್ಲಿ ಕೂಡ ಅಸ್ಥಿರತೆ ಮುಂದುವರೆಯುವುದು ಗ್ಯಾರಂಟಿ.

ಈ ವರ್ಷ ಟ್ರಂಪ್ ರಂಪಾಟಗಳಿಗೆ ತೆರೆ ಬೀಳದಿದ್ದರೆ ಆರ್ಥಿಕವಾಗಿ ಅಮೇರಿಕಾ ಇನ್ನಷ್ಟು ಪೆಟ್ಟು ತಿನ್ನಲಿದೆ. ಅದರ ಜೊತೆಗೆ ಜಾಗತಿಕ ಆರ್ಥಿಕತೆಯ ಲೆಕ್ಕಾಚಾರವನ್ನು ಕೂಡ ಅದು ಬುಡಮೇಲು ಮಾಡಲಿದೆ. ಇವತ್ತಿಗೆ ಆಗಲೇ ಅನೇಕ ಪಂಡಿತರು ಭಾರತದ ಷೇರು ಮಾರುಕಟ್ಟೆ ಬಹಳಷ್ಟು ಬೀಳಲಿದೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ಭಾರತದ ಆರ್ಥಿಕತೆ ಕೇವಲ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ನಿಂತಿಲ್ಲ. ಅಲ್ಲದೆ ಭಾರತೀಯ ಷೇರು ಮಾರುಕಟ್ಟೆಯನ್ನು ಬಂಡವಾಳ ಹಿಂಪಡೆತದಂತಹ ತಂತ್ರಗಳ ಮೂಲಕ ಅಸ್ಥಿರ ಗೊಳಿಸಬಹುದು. ಆದರೆ ಭಾರತದ ನಿಜವಾದ ಗ್ರೋಥ್ ರೇಟ್ ಅಷ್ಟು ಸುಲಭವಾಗಿ ಕುಸಿತ ಕಾಣುವುದಿಲ್ಲ. ಅಲ್ಲದೆ ಮಾರುಕಟ್ಟೆಯ ತಲ್ಲಣಗಳು ಶಾಶ್ವತವಲ್ಲ. ನಿರಂತರ ಅಭಿವೃದ್ಧಿ ಸೂಚ್ಯಂಕ ದೀರ್ಘಕಾಲದಲ್ಲಿ ಮಾರುಕಟ್ಟೆಯಲ್ಲಿನ ಎಲ್ಲಾ ನಷ್ಟವನ್ನು ಕೂಡ ತುಂಬಿಕೊಡುವ ಕ್ಷಮತೆಯನ್ನು ಹೊಂದಿದೆ. ನಿಜವಾದ ಹೂಡಿಕೆದಾರ ಇದನ್ನು ಎಂದಿಗೂ ಮರೆಯಬಾರದು. ಆದರೆ ಇಂದಿನ ದಿನಗಳಲ್ಲಿ ಗದ್ದಲ ಜಾಸ್ತಿ. ಹೀಗಾಗಿ ಗದ್ದಲವನ್ನು ನಂಬುವವರ ಸಂಖ್ಯೆ ಹೆಚ್ಚಾಗಿದೆ.

2026 ರಲ್ಲಿ ನಾವು ಗಮನ ಹರಿಸಬೇಕಾದ ಅಂಶಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ವಾತಾವರಣ ಬದಲಾವಣೆ: ನಾವು ಮನಷ್ಯರು ನಮ್ಮ ಹಣ, ಅಧಿಕಾರಕ್ಕೆ ಕಚ್ಚಾಟ ಮಾಡಿಕೊಂಡು ಅಭಿವೃದ್ಧಿ ಹೆಸರಿನಲ್ಲಿ ನಾವಿರುವ ಮನೆಯನ್ನು ಬಹಳಷ್ಟು ಹಾಳುಗೆಡವಿ ಬಿಟ್ಟಿದ್ದೇವೆ. ಬೇಸಿಗೆ ಮತ್ತು ಬಿಸಿಲಿಗೆ ಪ್ರಸಿದ್ದವಾದ ಕರ್ನಾಟಕದ ನಗರಗಳಲ್ಲಿ ಕೂಡ ತಡೆಯಲಾಗದ ಚಳಿ ಶುರುವಾಗಿದೆ. ದುಬೈ ನಂತಹ ಮರಳುಗಾಡಿನಲ್ಲಿ ಹಿಮ ಬೀಳುವುದಕ್ಕೆ ಶುರುವಾಗಿದೆ. ಹೀಗಾಗಿ ಕಣ್ಣಿಗೆ ಕಾಣುವ ನಮ್ಮ ಸಮಸ್ಯೆಗಳ ಪಟ್ಟಿಗೆ ವಾತಾವರಣ ಬದಲಾವಣೆ ಕೂಡ ಸೇರಿಕೊಂಡಿದೆ. ಡಿ ಕಾರ್ಬನೈಸಷನ್ ಅತಿ ಅವಶ್ಯಕವಾಗಲಿದೆ. ಇದಕ್ಕೆ ತಗಲುವ ಹಣವನ್ನು ಕೂಡ ಬಾಂಡ್ ವಿತರಣೆ ಮೂಲಕ ಎತ್ತಲಾಗುತ್ತದೆ. ಹೀಗಾಗಿ ಸಸ್ಟೈನಬೆಲ್, ಗ್ರೀನ್ ಮತ್ತು ಸೋಶಿಯಲ್ ಬಾಂಡ್ ಗಳ ಮೇಲೆ ಹೂಡಿಕೆಯನ್ನು ಮಾಡಬಹುದು.

ಹಣದುಬ್ಬರ: ಈ ವರ್ಷವೂ ಅನಿಶ್ಚಿತತೆ ಹೆಚ್ಚಾಗಿರುವ ಕಾರಣ ಮತ್ತು ವರ್ಲ್ಡ್ ಸುಪ್ರೇಮಿಸಿ ಗಾಗಿ ಆಗುವ ಹೊಡೆದಾಟದ ಕಾರಣ ಹಣದುಬ್ಬರ ಹೆಚ್ಚಾಗಲಿದೆ. ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಇನ್ನಷ್ಟು ಜಟಿಲ ಪ್ರಶ್ನೆಯಾಗಿ ಉಳ್ಳವರ ಮುಂದೆ ನಿಲ್ಲಲಿದೆ. ಇನ್ನೊಂದೆಡೆ ಇಲ್ಲದವರ ಪರದಾಟ ಕೂಡ ಹೆಚ್ಚಾಗಲಿದೆ.

ಡೆಮೊಗ್ರಾಫಿಕ್ ಶಿಫ್ಟ್ಸ್ ಮತ್ತು ಅಂದರಿಂದ ಆಗುವ ಪರಿಣಾಮಗಳು: ಇಂಗ್ಲೆಂಡ್ , ಫ್ರಾನ್ಸ್ ಸೇರಿದಂತೆ ಬಹಳಷ್ಟು ಯೂರೋಪಿಯನ್ ದೇಶಗಳಲ್ಲಿ ಜನನ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿದೆ. ಜಪಾನ್ ಮತ್ತು ಜರ್ಮನಿ ಕೂಡ ಇದಕ್ಕೆ ಹೊರತಲ್ಲ. ಈ ಕಾರಣದಿಂದ ಈ ದೇಶಗಳಲ್ಲಿ ಕೆಲಸ ಮಾಡಲು ವಲಸಿಗರ ಅವಶ್ಯಕತೆ ಹೆಚ್ಚಾಗಲಿದೆ. ಆದರೆ ಅಲ್ಲಿರುವ ಸ್ಥಳೀಯರಿಗೆ ತಮ್ಮ ಐಡೆಂಟಿಟಿ ಕಳೆದುಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ಈಗಾಗಲೇ ಇಲ್ಲಿ ಸ್ಥಳೀಯ ಮತ್ತು ವಲಸಿಗ ಎನ್ನವ ಕಿತ್ತಾಟ ಹೆಚ್ಚಾಗಿದೆ. ವಲಸಿಗರಿಲ್ಲದೆ ದೇಶದ ಆರ್ಥಿಕತೆ ಸೊರಗುತ್ತದೆ. ವಲಸಿಗರನ್ನು ಬಿಟ್ಟುಕೊಂಡರೆ ನಿಧಾನಕ್ಕೆ ದೇಶ ಅವರ ಪಾಲಾಗುತ್ತದೆ. ಇವೆರಡರ ಮಧ್ಯದ ಜಗಳ ಈ ವರ್ಷ ಇನ್ನಷ್ಟು ತಾರಕಕ್ಕೆ ಏರಲಿದೆ. ಜನಾಂಗೀಯ ಕಲಹಗಳು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇವೆಲ್ಲದರ ಮಧ್ಯೆ ಉತ್ತಮ ಬದುಕು ಕಟ್ಟಿಕೊಳ್ಳಲು ಬಯಸುವ ನುರಿತ ವೃತ್ತಿ ಪರರಿಗೆ ಅವಕಾಶಗಳಿಗೆ ಕೂಡ ಹೇರಳವಾಗಿರುತ್ತದೆ. ಇದರ ಜೊತೆಗೆ ಅತಿ ವೇಗವಾಗಿ ಹೆಚ್ಚುತ್ತಿರುವ ವಯೋವೃದ್ಧರ ಸಂಖ್ಯೆ ಈ ದೇಶಗಳಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸಲಿದೆ. ತೀವ್ರ ನಗರೀಕರಣ ಕೂಡ ಹತ್ತಾರು ಸಮಸ್ಯೆಗಳಿಗೆ ಕಾರಣವಾಗಲಿದೆ.

ಬ್ಲಾಕ್ ಸ್ವಾನ್ ರಿಸ್ಕ್ : ಯಾರೊಬ್ಬರ ಗಮನಕ್ಕೂ ಬಾರದೆ , ಯಾರೊಬ್ಬರ ಹಿಡಿತಕ್ಕೂ ಸಿಗದೇ ಆಗುವ ಬದಲಾವಣೆಗಳು ಮತ್ತು ಅದರಿಂದ ಆಗುವ ನಷ್ಟ ಮತ್ತು ಕುಸಿತಕ್ಕೆ ಬ್ಲಾಕ್ ಸ್ವಾನ್ ರೀತಿಯ ಅಪಾಯ ಎನ್ನುತ್ತಾರೆ. ಉದಾಹರಣೆಗೆ ಟೆರರ್ ಅಟ್ಟಾಕ್ಸ್, ಪ್ರವಾಹ, ಬರ, ಅಗ್ನಿ ದುರಂತಗಳು ಇತ್ಯಾದಿಗಳು. ಆದರೆ ಇವತ್ತಿನ ದಿನದಲ್ಲಿ ಕೆಲವೇ ಕೆಲವು ಮಂದಿ ಇವುಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದ್ದಾರೆ. ಹೀಗಾಗಿ ಜನ ಸಾಮಾನ್ಯನಿಗೆ ಇದು ಬ್ಲಾಕ್ ಸ್ವಾನ್ ಎನ್ನಿಸುತ್ತದೆ. ಆದರೆ ಇದನ್ನು ಕೂಡ ಹೀಗೆ ಆಗಬೇಕು ಎನ್ನುವ ಹವಣಿಕೆಯಲ್ಲಿ ಒಂದಷ್ಟು ಜನ ಇದ್ದಾರೆ. ಅವರಿಗೆ ಬೇಕಿರುವುದು ಜಾಗತಿಕ ನಿಯಂತ್ರಣ. ಡೀಪ್ ಸ್ಟೇಟ್ ಎನ್ನುವುದು ಇವುಗಳಲೊಂದು. ಪಾಕಿಸ್ತಾನದಲ್ಲಿನ ಅಧಿಕಾರ ಬದಲಾವಣೆ, ನೇಪಾಳ ದಂಗೆ, ಬಾಂಗ್ಲಾ ದೇಶದಲ್ಲಿನ ಅಧಿಕಾರ ಬದಲಾವಣೆ , ಶ್ರೀಲಂಕಾದಲ್ಲಿನ ಅರಾಜಕತೆ , ಮಾಲ್ಡಿವ್ ಅರಾಜಕತೆ , ತುರ್ಕಿ ಮತ್ತು ಅಜರ್ ಭೈಜಾನ್ ದೇಶಗಳು ಭಾರತದ ವಿರುದ್ಧ ಬುಸುಗುಡಿವಿಕೆ , ಭಾರತದ ಒಳಗೆ ನಡೆದ ಟೆರರ್ ಅಟ್ಯಾಕ್ ಗಳು ಇವೆಲ್ಲವೂ ಡೀಪ್ ಸ್ಟೇಟ್ ನ ದೊಡ್ಡ ಪ್ಲಾನ್ ನ ಚಿಕ್ಕ ಅಂಶಗಳು.

ಎನರ್ಜಿ ಶಿಫ್ಟ್: ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆ ಮತ್ತಷ್ಟು ಕಡಿಮೆಯಾಗಲಿದೆ. ಎಲೆಕ್ಟ್ರಿಕ್ ಮತ್ತು ಸೋಲಾರ್ ಶಕ್ತಿ ವಲಯಗಳು ಇನ್ನಷ್ಟು ವೃದ್ಧಿಯನ್ನು ಕಾಣಲಿವೆ. ಹೀಗಾಗಿ ಅಸ್ಥಿರ ಸಮಯದಲ್ಲಿ ಈ ವಲಯಗಳಲ್ಲಿ ಹೂಡಿಕೆ ಮಾಡುವುದು ಒಂದಷ್ಟು ಸ್ಥಿರತೆಯನ್ನು ತಂದುಕೊಡಲಿವೆ.

ಹೆಚ್ಚಲಿವೆ ಸೈಬರ್ ಕ್ರೈಂ ಪ್ರಕರಣಗಳು: ನಿಮಗೆಲ್ಲಾ ಗೊತ್ತಿರಲಿ ಭಾರತದ ಜಿಡಿಪಿಯ 0.7 ಪ್ರತಿಶತ ಹಣ ಸೈಬರ್ ಕ್ರೈಂ ಗೆ ತುತ್ತಾಗುತ್ತಿದೆ. ಇದು 2025ರ ಅಂಕಿ-ಅಂಶ. ಇನ್ನು ಜಾಗತಿಕವಾಗಿ ನೋಡಿದರೂ ಕೂಡ ಈ ಸಂಖ್ಯೆ ಹೆಚ್ಚು ಕಡಿಮೆ ಅಷ್ಟೇ ಇದೆ. ಜಗತ್ತಿನ ಜಿಡಿಪಿ 117 ಟ್ರಿಲಿಯನ್ ಅಮೆರಿಕನ್ ಡಾಲರ್. ಇದರಲ್ಲಿ 2025ರಲ್ಲಿ 10.5 ಟ್ರಿಲಿಯನ್ ಹಣ ಸೈಬರ್ ಅಪರಾಧಕ್ಕೆ ಸಿಲುಕಿದೆ ಎಂದರೆ ಇದೆಷ್ಟು ದೊಡ್ಡ ಮೊತ್ತ ಎನ್ನುವುದು ತಿಳಿಯುತ್ತದೆ. ಭಾರತದ ಆರ್ಥಿಕತೆ 4 ಟ್ರಿಲಿಯನ್ ! ಜಾಗತಿಕವಾಗಿ ಸೈಬರ್ ಕ್ರೈಂ ಗೆ ತುತ್ತಾಗುವ ಹಣ 10 ಟ್ರಿಲಿಯನ್ ! ಭಾರತದ ಆರ್ಥಿಕತೆಯ ಎರಡೂವರೆ ಪಟ್ಟು ಮೋಸದಲ್ಲಿ ಹಣ ಜನ ಕಳೆದುಕೊಳ್ಳುತ್ತಿದ್ದಾರೆ. ಇದೊಂದು ವ್ಯವಸ್ಥಿತ ಜಾಲ. ಹೀಗಾಗಿ ಇದಕ್ಕೆ ಬಲಿಯಾಗದಂತೆ ನಾವೇ ಎಚ್ಚರ ವಹಿಸಬೇಕಾಗಿದೆ.

ಬದುಕಿನಲ್ಲಿ ಹೆಚ್ಚಲಿರುವ ಎಐ ಬಳಕೆ: ಕೆಲಸವಿಲ್ಲ ಎನ್ನುವ ಕೂಗಿಗೆ 2026 ಇನ್ನಷ್ಟು ಬಲ ತುಂಬುವ ಸಾಧ್ಯತೆಗಳಿವೆ. ಕಾರ್ಪೊರೇಟ್ ಹೌಸುಗಳಿಗೆ ಲಾಭದ ಚಿಂತೆ ಬಿಟ್ಟು ಬೇರೇನೂ ಇಲ್ಲ. ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಎನ್ನುವುದು ಕಣ್ಣೊರೆಸಲು ಇರುವ ಒಂದು ಸಾಧನ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹತ್ತಾರು ಜನ ಮಾಡುವ ಕೆಲಸವನ್ನು ಒಂದಿಬ್ಬರ ಸಹಾಯದಿಂದ ಮಾಡಲು ಸಾಧ್ಯವಾಗುತ್ತಿರುವ ಕಾರಣದಿಂದ ಅವರು ಹಂತ ಹಂತವಾಗಿ ಕೆಲಸಗಾರರನ್ನು ತೆಗೆಯುತ್ತಿದ್ದಾರೆ. ಕೆಲಸವಿಲ್ಲ ಎನ್ನುವ ಕೂಗಿನ ಜೊತೆಗೆ ಕೆಲಸ ಮಾಡಲು ಬೇಕಾಗಿರುವ ಕೌಶಲ ಹೊಂದಿರುವ ಜನರ ಕೊರತೆಯಿದೆ ಎನ್ನುವ ಅಂಕಿಅಂಶಗಳು ಕೂಡ ನಮ್ಮ ಕಣ್ಣೆದುರಿಗಿದೆ.

ಇನ್ನಷ್ಟು ಕುಸಿಯಲಿರುವ ರೂಪಾಯಿ: ಡಾಲರ್ ಎದಿರು ಭಾರತದ ರೂಪಾಯಿ ಇನ್ನಷ್ಟು ಕುಸಿತವನ್ನು ಕಾಣುತ್ತದೆ. 93/95 ರೂಪಾಯಿ ಮುಟ್ಟುವ ಸಾಧ್ಯತೆಗಳು ಕೂಡ ಇವೆ. ಇದು ಭಾರತದ ಆಮದಿಗೆ ಒಳ್ಳೆಯ ಸುದ್ದಿಯಲ್ಲ. ಅದೇ ವೇಳೆಯಲ್ಲಿ ಇದು ಭಾರತದ ರಫ್ತಿಗೆ ಒಳ್ಳೆಯ ಸುದ್ದಿ. ಎಲ್ಲಾ ರಫ್ತು ವ್ಯವಹಾರಕ್ಕೂ ಒಳ್ಳೆಯದು ಎನ್ನವಂತಿಲ್ಲ. ಏಕೆಂದರೆ ಕೆಲವು ಮೂಲಭೂತ ಪದಾರ್ಥಗಳು ಆಮದು ಮಾಡಿಕೊಂಡಿರುತ್ತೇವೆ. ಹೀಗಾಗಿ ಡಾಲರ್ ಎದಿರು ರೂಪಾಯಿ ಒಂದೇ ಸಮನೆ ಕುಸಿಯುವುದು ಒಳ್ಳೆಯ ಸುದ್ದಿ ಖಂಡಿತ ಅಲ್ಲ. ಏಪ್ರಿಲ್ ಅಥವಾ ಮೇ ವೇಳೆಗೆ ರೂಪಾಯಿ ಕುಸಿತವನ್ನು ನಿಲ್ಲಿಸದಿದ್ದರೆ ಆಗ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸುವುದು ಅವಶ್ಯಕವಾಗುತ್ತದೆ.

ಕೊನೆಮಾತು: ಪ್ರತಿ ವರ್ಷವೂ ಒಂದಷ್ಟು ಸವಾಲುಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಅವೇನು ಎಂದು ತಿಳಿದುಕೊಳ್ಳುವುದು ಉತ್ತಮ ಮಾರ್ಗ. ಅವುಗಳನ್ನು ಹೇಗೆ ಎದುರಿಸಬೇಕು ಎನ್ನುವ ಸಿದ್ದತೆಗೆ ಇದು ಸಹಾಯ ಮಾಡುತ್ತದೆ. ಮತ್ತು ಅದೇ ಸಮಯದಲ್ಲಿ ಹೆಜ್ಜೆ ಇಡುವ ಮುನ್ನ ಅಂದರೆ ಹೂಡಿಕೆ ಮಾಡುವ ಮುನ್ನ ಒಂದಷ್ಟು ವಿಚಾರ ವಿನಿಮಯ ಮಾಡಿಕೊಂಡು ನಂತರ ಹೂಡಿಕೆ ಮಾಡುವುದು ಒಳ್ಳೆಯದು ಎನ್ನುವುದನ್ನು ಕೂಡ ಇದರಿಂದ ನಾವು ಕಲಿಯಬಹುದು. 2026 ರಲ್ಲಿ ನಾವು ಬಹಳಷ್ಟು ಜಾಗತಿಕ ಪಲ್ಲಟಗಳಿಗೆ ಸಾಕ್ಷಿಯಾಗಲಿದ್ದೇವೆ. ಈ ಮಧ್ಯೆ ಭಾರತವನ್ನು ಅಸ್ಥಿರಗೊಳಿಸಲು ಕೂಡ ಸಾಕಷ್ಟು ಪ್ರಯತ್ನಗಳನ್ನು ಕೂಡ ನಾವು ನೋಡಲಿದ್ದೇವೆ. ದೊಡ್ಡ ಮಟ್ಟದಲ್ಲಿ ಅವುಗಳನ್ನು ಮಟ್ಟ ಹಾಕಲು ಸರಕಾರ ಸಿದ್ಧವಿದೆ. ನಾವು ಊಹೆಗಳಿಗೆ , ತಪ್ಪು ಮಾಹಿತಿಗಳಿಗೆ , ನಮ್ಮನ್ನು ಒಡೆಯಲು ಹವಣಿಸುವ ವದಂತಿಗಳಿಗೆ ಕಿವಿಯಾಗದೆ ಸ್ಥಿರವಾಗಿರುವ ಸಿದ್ದತೆಯನ್ನು ಮಾಡಿಕೊಳ್ಳಬೇಕಿದೆ. ಸದೀರ್ಘಾವಧಿಯಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದು , ಮಾಡಿರುವುದು ಲಾಭದಾಯಕ ಎನ್ನುವುದನ್ನು ಕೂಡ ನಾವು ಮನಗಾಣಬೇಕಿದೆ. ಅಸ್ಥಿರ ಸಮಯದಲ್ಲಿ ಬೇಕಾಗಿರುವುದು ಸ್ಥಿರ ಆಲೋಚನೆ. ಅದು ನಮ್ಮದಾಗಲಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ, ಬೆಂಕಿ​​​​; 9 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ; ತನಿಖೆಗೆ ಆದೇಶ; Video

ಚಿತ್ರದುರ್ಗ ಬಸ್ ದುರಂತ: ಸಿಎಂ ಸಿದ್ದರಾಮಯ್ಯ-ಪ್ರಧಾನಿ ಮೋದಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ: ಪ್ರಕರಣದ ಆರೋಪಿಗಳ ಜೊತೆಗೆ ಸೋನಿಯಾ ನಂಟು; ಸಿಎಂ ಪಿಣರಾಯಿ ಗಂಭೀರ ಆರೋಪ

ಗಾಂಧೀಜಿ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಿದ್ದೀರಾ? ಡಿಕೆಶಿ ಮಾಡುತ್ತಿರುವಷ್ಟು ಪೂಜೆ ನಾನು ಮಾಡಿಲ್ಲ; ಸಿದ್ದರಾಮಯ್ಯನವರೂ ಮಾಡಲು ಸಾಧ್ಯವಿಲ್ಲ'

ನೈಸ್ ಪ್ರಕರಣ: ರಿಟ್ ಅರ್ಜಿಯಲ್ಲಿ ನನ್ನ ಹೆಸರು ಉಲ್ಲೇಖ; ಈ ಇಳಿ ವಯಸ್ಸಿನಲ್ಲೂ ನಾನು ಕೋರ್ಟ್ ಅಲೆಯಬೇಕೇ? ದೇವೇಗೌಡ ಬೇಸರ

SCROLL FOR NEXT