ಫೈಬ್ರೋಮಯಾಲ್ಜಿಯಾ  online desk
ಅಂಕಣಗಳು

ಫೈಬ್ರೋಮಯಾಲ್ಜಿಯಾ ಎಂದರೇನು? (ಕುಶಲವೇ ಕ್ಷೇಮವೇ)

ಫೈಬ್ರೊಮಯಾಲ್ಜಿಯಾದ ಪ್ರಾಥಮಿಕ ಲಕ್ಷಣವೆಂದರೆ ದೀರ್ಘಕಾಲದ, ವ್ಯಾಪಕವಾದ ನೋವು, ಇದು ಕನಿಷ್ಠ ಮೂರು ತಿಂಗಳವರೆಗೆ ಇರುತ್ತದೆ.

ಫೈಬ್ರೋಮಯಾಲ್ಜಿಯಾ ಒಂದು ದೀರ್ಘಕಾಲಿಕ ರೋಗವಾಗಿದ್ದು ಇದರಿಂದ ಸಾಮಾನ್ಯವಾಗಿ ಸ್ನಾಯು-ಅಸ್ಥಿಪಂಜರದ ವ್ಯಾಪಕ ನೋವು, ದಣಿವು ಮತ್ತು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮೃದುತ್ವ/ಉರಿ ಕಂಡುಬರುತ್ತದೆ. ಈ ರೋಗ ಹೆಚ್ಚಾಗಿ ನಿದ್ರೆಗೆಡುವಿಕೆ, ನೆನಪಿನ ಶಕ್ತಿಯ ತೊಂದರೆಗಳು ಮತ್ತು ಮನಸ್ಸಿನ ಸ್ಥಿತಿಯ ಬದಲಾವಣೆಗಳೊಂದಿಗೆ ಕೂಡಿರುತ್ತದೆ.

ಫೈಬ್ರೋಮಯಾಲ್ಜಿಯಾ ರೋಗ ಬರಲು ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಆದರೂ ಆನುವಂಶಿಕ, ಪರಿಸರದ ಮತ್ತು ಮಾನಸಿಕ ಅಂಶಗಳ ಸಂಯೋಜನೆಯಿಂದ ಈ ರೋಗ ಉಂಟಾಗುತ್ತದೆ ಎಂದು ನಂಬಲಾಗಿದೆ. ಇದು ಪ್ರಪಂಚದ ಲಕ್ಷಾಂತರ ಜನರನ್ನು ಪೀಡಿಸುತ್ತಿದೆ. ಮಹಿಳೆಯರು, ಪುರುಷರು ಮತ್ತು ಕೆಲವೊಮ್ಮೆ ಮಕ್ಕಳೂ ಈ ರೋಗದಿಂದ ಬಾಧಿತರಾಗಬಹುದು. ವಿಶೇಷಾಗಿ ಮಹಿಳೆಯರು ಈ ರೋಗದ ಬಗ್ಗೆ ಹೆಚ್ಚು ಎಚ್ಚರದಿಂದಿರಬೇಕು.

ಭಾರತದಲ್ಲಿ ರುಮಟಾಯ್ಡ್ ಸಂಧಿವಾತವಿರುವ ಒಟ್ಟು ರೋಗಿಗಳಲ್ಲಿ ಶೇಕಡಾ 31ರಷ್ಟು ರೋಗಿಗಳಿಗೆ ಈ ರೋಗವಿದೆ ಎಂದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಮತ್ತೊಂದು ಅಧ್ಯಯನವು ಇಂತಹ ರೋಗಿಗಳಲ್ಲಿ ಈ ರೋಗ ಹೆಚ್ಚು ಸಾಮಾನ್ಯವಾಗಿದೆ ಎಂದು ತಿಳಿಸಿದೆ. ಒಂದು ಅಂದಾಜಿನ ಪ್ರಕಾರ ಕನಿಷ್ಠ ಒಂದು ಕೋಟಿ ಭಾರತೀಯರು ಈ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಫೈಬ್ರೋಮಯಾಲ್ಜಿಯಾ ರೋಗ ಲಕ್ಷಣಗಳು

ಫೈಬ್ರೊಮಯಾಲ್ಜಿಯಾದ ಪ್ರಾಥಮಿಕ ಲಕ್ಷಣವೆಂದರೆ ದೀರ್ಘಕಾಲದ, ವ್ಯಾಪಕವಾದ ನೋವು, ಇದು ಕನಿಷ್ಠ ಮೂರು ತಿಂಗಳವರೆಗೆ ಇರುತ್ತದೆ. ಈ ನೋವು ಸಾಮಾನ್ಯವಾಗಿ ದೇಹದ ಎರಡೂ ಬದಿಗಳಲ್ಲಿ ಮತ್ತು ಸೊಂಟದ ಮೇಲೆ ಮತ್ತು ಕೆಳಗೆ ಕಂಡುಬರುತ್ತದೆ.

ಈ ರೋಗದ ಇತರ ಸಾಮಾನ್ಯ ಲಕ್ಷಣಗಳು ಹೀಗಿವೆ:

ಆಯಾಸ: ರೋಗಿಗಳು ಪೂರ್ಣ ರಾತ್ರಿಯ ನಿದ್ರೆಯ ನಂತರವೂ ಹೆಚ್ಚಾಗಿ ದಣಿವನ್ನು ಅನುಭವಿಸುತ್ತಾರೆ.

ನಿದ್ರೆಯ ತೊಂದರೆಗಳು: ಅನೇಕ ಜನರಿಗೆ ನಿದ್ರಾಹೀನತೆ ಕಂಡುಬರುತ್ತದೆ, ಕೆಲವೊಮ್ಮೆ ನಿದ್ರೆಯಿಂದ ಎಚ್ಚರವಾಗುತ್ತದೆ.

ಅರಿವಿನ ತೊಂದರೆಗಳು: ಸಾಮಾನ್ಯವಾಗಿ "ಫೈಬ್ರೊ ಫಾಗ್" ಎಂದು ಕರೆಯಲಾಗುತ್ತದೆ, ಇದರಲ್ಲಿ ಸ್ಮರಣಶಕ್ತಿ, ಏಕಾಗ್ರತೆ ಮತ್ತು ಮಾನಸಿಕ ಸ್ಪಷ್ಟತೆಯ ಸಮಸ್ಯೆಗಳು ಸೇರಿವೆ.

ಮನಸ್ಸಿನ ಸ್ಥಿತಿಯ ತೊಂದರೆಗಳು: ಫೈಬ್ರೊಮ್ಯಾಲ್ಜಿಯ ರೋಗಿಗಳಲ್ಲಿ ಆತಂಕ ಮತ್ತು ಖಿನ್ನತೆ ಸಾಮಾನ್ಯವಾಗಿದೆ.

ಬಿಗಿತ: ದೀರ್ಘಕಾಲದ ನಿಷ್ಕ್ರಿಯತೆಯ ನಂತರ ನಿದ್ರೆಯಿಂದ ಎದ್ದಾಗ ದೇಹದಲ್ಲಿ ಬಿಗಿತದ ಅನುಭವ ಉಂಟಾಗುತ್ತದೆ.

ತಲೆನೋವು: ಕೆಲವೊಮ್ಮೆ ಉದ್ವೇಗ ತಲೆನೋವು ಅಥವಾ ಮೈಗ್ರೇನ್ ಕಾಣಿಸಿಕೊಳ್ಳಬಹುದು.

ಕರುಳಿನ ಸಮಸ್ಯೆಗಳು: ಹೊಟ್ಟೆ ಉಬ್ಬುವುದು, ಮಲಬದ್ಧತೆ ಅಥವಾ ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

ಹೆಚ್ಚು ಸಂವೇದನಾ ಸೂಕ್ಷ್ಮತೆ: ಬೆಳಕು, ಶಬ್ದ, ತಾಪಮಾನ ಮತ್ತು ಸ್ಪರ್ಶಕ್ಕೆ ಹೆಚ್ಚು ಸಂವೇದನಾ ಸೂಕ್ಷ್ಮತೆ ಕಂಡುಬರುತ್ತದೆ.

ಫೈಬ್ರೋಮಯಾಲ್ಜಿಯಾ ರೋಗನಿರ್ಣಯ ಹೇಗೆ?

ಫೈಬ್ರೊಮಯಾಲ್ಜಿಯಾವನ್ನು ಪತ್ತೆಹಚ್ಚುವುದು ಒಂದು ಸವಾಲೇ ಸರಿ. ಏಕೆಂದರೆ ಇದಕ್ಕೆ ಯಾವುದೇ ನಿರ್ದಿಷ್ಟ ಪರೀಕ್ಷೆ ಇಲ್ಲ. ವೈದ್ಯರು ಸಾಮಾನ್ಯವಾಗಿ ರೋಗಿಯ ವೈದ್ಯಕೀಯ ಇತಿಹಾಸ, ದೈಹಿಕ ಪರೀಕ್ಷೆ ಮತ್ತು ಕನಿಷ್ಠ ಮೂರು ತಿಂಗಳವರೆಗೆ ವ್ಯಾಪಕ ನೋವನ್ನು ಗಮನಿಸಿ ಈ ರೋಗ ನಿರ್ಣಯ ಮಾಡುತ್ತಾರೆ. ಹೈಪೋಥೈರಾಯ್ಡಿಸಮ್ ಅಥವಾ ರುಮಟಾಯ್ಡ್ ಸಂಧಿವಾತದಂತಹ ರೋಗಗಳಿಂದ ಈ ರೋಗವನ್ನು ಪತ್ಯೇಕವಾಗಿ ಕಂಡುಹಿಡಿಯಲು ರಕ್ತ ಪರೀಕ್ಷೆಗಳನ್ನು ನಡೆಸಬಹುದು.

ಫೈಬ್ರೋಮಯಾಲ್ಜಿಯಾಗೆ ಚಿಕಿತ್ಸಾ ಆಯ್ಕೆಗಳು

ಫೈಬ್ರೊಮಯಾಲ್ಜಿಯಾಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೂ ರೋಗಲಕ್ಷಣಗಳನ್ನು ನಿರ್ವಹಿಸುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಚಿಕಿತ್ಸೆಯನ್ನು ವೈದ್ಯರು ಮಾಡುತ್ತಾರೆ. ಚಿಕಿತ್ಸಾವಿಧಾನವು ಬಹುಶಿಸ್ತೀಯ ವಿಧಾನವಾಗಿದ್ದು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಲ್ಲಿ ನೋವು ನಿವಾರಕಗಳು ಮತ್ತು ಖಿನ್ನತೆ ನಿವಾರಕಗಳ ಬಳಕೆಯಾಗುತ್ತದೆ. ಫಿಸಿಯೋಥೆರಪಿ ಮತ್ತು ಅರಿವಿನ ವರ್ತನೆಯ ಚಿಕಿತ್ಸೆಯನ್ನೂ ರೋಗಗಳಿಗೆ ನೀಡಲಾಗುತ್ತದೆ.

ಜೀವನಶೈಲಿಯ ಬದಲಾವಣೆಗಳು ರೋಗ ನಿರ್ವಹಣೆಗೆ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತವೆ. ವ್ಯಾಯಾಮ, ನಡಿಗೆ, ಈಜು ಅಥವಾ ಯೋಗದಂತಹ ದೇಹದ ಮೇಲೆ ಕಡಿಮೆ-ಪ್ರಭಾವದ ಚಟುವಟಿಕೆಗಳು ನೋವನ್ನು ಕಡಿಮೆ ಮಾಡಬಹುದು ಮತ್ತು ಮನಸ್ಥಿತಿಯನ್ನು ಸುಧಾರಿಸಬಹುದು. ನಿಯಮಿತವಾಗಿ ನಿದ್ರೆ ಮಾಡುವುದು ಮತ್ತು ವಿಶ್ರಾಂತಿಗೆ ಅನುಕೂಲ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ. ಒತ್ತಡ ನಿರ್ವಹಣೆಗೆ ಧ್ಯಾನ, ಆಳವಾದ ಉಸಿರಾಟ ಅಥವಾ ಮೈಂಡ್‌ಫುಲ್‌ನೆಸ್ ತಂತ್ರಗಳು ಸಹಾಯ ಮಾಡಬಹುದು.

ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆಯ ಮೂಲಕ ಪರಿಣಾಮಕಾರಿಯಾಗಿ ಈ ರೋಗವನ್ನು ನಿಯಂತ್ರಣಕ್ಕೆ ತರಲಾಗುತ್ತದೆ.

ಇದಲ್ಲದೇ ಪರ್ಯಾಯವಾಗಿ ಅಕ್ಯುಪಂಕ್ಚರ್ ನೋವು ನಿವಾರಣೆಗೆ ಸಹಾಯ ಮಾಡಬಹುದು. ಮಸಾಜ್ ಚಿಕಿತ್ಸೆ ಮೂಲಕ ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ದೈಹಿಕ ವಿಶ್ರಾಂತಿಯನ್ನು ಉತ್ತೇಜಿಸಬಹುದು.

ಆರೋಗ್ಯಕರ ದೇಹದ ತೂಕ, ಸಮತೋಲಿತ ಆಹಾರ ಸೇವನೆ, ನಿಯಮಿತವಾಗಿ ವಿಶ್ರಾಂತಿ, ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ಒತ್ತಡವನ್ನು ನಿರ್ವಹಿಸುವುದರ ಮೂಲಕ ಈ ರೋಗ ಬರದಂತೆ ನೋಡಿಕೊಳ್ಳಬಹುದು. ಪ್ರತಿ ದಿನ ಸಾಕಷ್ಟು ಅಂದರೆ ಮೂರು ಲೀಟರ್ ನೀರನ್ನು ಕುಡಿಯಬೇಕು.

ಸಾರಾಂಶ

ಒಟ್ಟಾರೆ ಹೇಳುವುದಾದರೆ ಫೈಬ್ರೊಮಯಾಲ್ಜಿಯಾ ಒಂದು ಸಂಕೀರ್ಣ ರೋಗ. ಇದನ್ನು ವೈಯಕ್ತಿಕ ನೆಲೆಯಲ್ಲಿ ನಿರ್ವಹಿಸುವ ಅಗತ್ಯವಿದೆ. ಇದನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ ಔಷಧಿಗಳು, ಚಿಕಿತ್ಸೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಸಂಯೋಜನೆಯು ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಫೈಬ್ರೊಮಯಾಲ್ಜಿಯಾ ರೋಗ ಇದೆ ಎಂದು ಗೊತ್ತಾಗಲು ಸರಿಯಾಗಿ ರೋಗನಿರ್ಣಯ ಮಾಡಬೇಕು ಮತ್ತು ಸೂಕ್ತವಾದ ಚಿಕಿತ್ಸಾ ಯೋಜನೆಯನ್ನು ಅನುಸರಿಸಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT