ಇದು ನೆತ್ತಿಯ ಮೇಲೆ ತೂಗುತ್ತಿರುವ ಕತ್ತಿಯಂತೆ. ಇದರಿಂದ ಇಬ್ಬರೂ ನಾಯಕರು ಪಾರಾಗುತ್ತಾರಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣ(ಪೋಕ್ಸೋ) ಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ಇದರ ಹಿಂದೆಯೇ ಎರಡೂ ಪಕ್ಷಗಳಲ್ಲಿ ರಾಜಕೀಯ ಅನಿಶ್ಚಯತೆಯೂ ಮುಂದುವರಿದಿದೆ.
ಮುಡಾ ನಿವೇಶನ ಹಂಚಿಕೆ ಹಗರಣದ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಅವರ ಅರ್ಜಿಯನ್ನು ತಳ್ಳಿ ಹಾಕಿರುವ ಹೈಕೋರ್ಟ್ ಈಗಾಗಲೇ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವುದರಿಂದ ಅದೇ ಮುಂದುವರಿಯಲಿ ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಅವರಿಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿ ಈ ಸಂಬಂಧ ವಿಚಾರಣೆ ಮುಂದುವರಿಸುವಂತೆ ಅಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.
ಈ ಎರಡೂ ಪ್ರಕರಣಗಳ ತೀರ್ಪಿನಿಂದ ಮೇಲ್ನೋಟಕ್ಕೆ ಇಬ್ಬರೂ ನಾಯಕರ ಪಾಳೇಯದಲ್ಲಿ ಕವಿದಿದ್ದ ಆತಂಕದ ಛಾಯೆ ನಿವಾರಣೆಯಾಗಿ ಇದೊಂದು ರಾಜಕೀಯ ಮೇಲಾಟದ ವಿಜಯ ಎಂದು ಭಾವಿಸಲಾಗುತ್ತಿದೆಯಾದರೂ ವಾಸ್ತವದ ಪರಿಸ್ಥಿತಿಯೇ ಬೇರೆ.
ಮುಡಾ ಪ್ರಕರಣದ ತನಿಖೆಯನ್ನು ಸರ್ಕಾರವೇ ಲೋಕಾಯುಕ್ತಕ್ಕೆ ವಹಿಸಿತ್ತು. ಅದು ಈಗ ಅಂತಿಮ ಹಂತಕ್ಕೆ ಬಂದಿದ್ದು ಸದ್ಯದಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ನಂತರವಷ್ಟೇ ತನಿಖೆಗೆ ಸಂಬಂಧಿಸಿದ ವಾಸ್ತವ ಅಂಶಗಳು ಬಯಲಾಗಲಿವೆ. ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಈ ಪ್ರಕರಣದಲ್ಲಿ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ ಎಂದು ಬಿಂಬಿಸಲಾಗುತ್ತಿದೆಯಾದರೂ ಅಧಿಕೃತವಾಗಿ ಲೋಕಾಯುಕ್ತ ಸಂಸ್ಥೆ ವರದಿ ನೀಡುವವರೆಗೂ ಯಾವುದೇ ನಿಖರ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಈ ಹಂತದಲ್ಲಿ ಯಾವುದೇ ನಿರ್ಣಯಕ್ಕೆ ಬರುವುದೂ ಸಮರ್ಥನೀಯವಲ್ಲ.
ಮತ್ತೊಂದು ಕಡೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಜಾರಿ ನಿರ್ದೇಶನಾಲಯವೂ(ಇ.ಡಿ.) ಸಮಾನಾಂತರ ತನಿಖೆ ನಡೆಸುತ್ತಿದ್ದು ಅದರಲ್ಲಿ ನಿವೇಶನಗಳ ಖರೀದಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುವ ಮಧ್ಯವರ್ತಿಗಳು ಹಣದ ಅಕ್ರಮ ವರ್ಗಾವಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇದುವರೆಗೆ ಬಹಿರಂಗವಾಗಿರುವ ಮಾಹಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೇರ ಅಕ್ರಮದ ಆರೋಪ ಕೇಳಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಯಾವ ದಿಕ್ಕಿನಲ್ಲಿ ಮುಂದುವರಿಯುತ್ತದೆ ಹಾಗೆಯೇ ಲೋಕಾಯುಕ್ತ ಸಂಸ್ಥೆಯ ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾದ ನಂತರವಷ್ಟೇ ನಿಖರ ತೀರ್ಮಾನಕ್ಕೆ ಬರಲು ಸಾಧ್ಯ.ಹೀಗಾಗಿ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ದೋಷಮುಕ್ತರಾಗಿದ್ದಾರೆಂದಾಲೀ ಅಥವಾ ಅಕ್ರಮ ಎಸಗಿದ್ದಾರೆಂದಾಗಲೀ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಇನ್ನು ಈ ಸಂಬಂಧದ ಬೆಳವಣಿಗೆಗಳಿಂದ ಸಿದ್ದರಾಮಯ್ಯನವರ ರಾಜಕೀಯ ಶಕ್ತಿ ಇಮ್ಮಡಿಗೊಂಡಿದೆ ಎಂದೂ ಹೇಳಲೂ ಆಗುವುದಿಲ್ಲ. ಸದ್ಯದಲ್ಲೇ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಅವರು ನೂತನ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದು ಅದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ನಲ್ಲಿ ನಡೆಯಬಹುದಾದ ಬೆಳವಣಿಗೆಗಳ ಮೇಲೆ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ.
ಬರುವ ಮೇ ತಿಂಗಳಿಗೆ ಅವರ ಸರ್ಕಾರ ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ. ಈಗಾಗಲೇ ಬಹಿರಂಗವಾಗೇ ಚರ್ಚೆ ಆಗುತ್ತಿರುವ ಪ್ರಕಾರ ಕಾಂಗ್ರೆಸ್ ನಲ್ಲಿನ ಆಂತರಿಕ ಒಪ್ಪಂದದ ಅನ್ವಯ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು ಹಾಗೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು. ಆದರೆ ಹೈಕಮಾಂಡ್ ಮಟ್ಟದಲ್ಲಿ ಆಗಿದೆ ಎಂದು ಹೇಳಲಾಗುತ್ತಿರುವ ಈ ಒಪ್ಪಂದದ ಬಗ್ಗೆ ಸಾರ್ವಜನಿಕವಾಗಿ ಇಷ್ಟೆಲ್ಲ ಚರ್ಚೆ ಆಗುತ್ತಿದ್ದರೂ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಸ್ಪಷ್ಟನೆ ನೀಡುತ್ತಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಹೈಕಮಾಂಡ್ ಎಚ್ಚರಿಕೆಯ ನಡುವೆಯೂ ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆ ನಿಲ್ಲಿಸಿಲ್ಲ. ಸದ್ಯಕ್ಕಂತೂ ಆ ಪಕ್ಷದಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ.
ಹಾಗೆ ನೋಡಿದರೆ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ತಾನು ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಆಗಾಗ ಹೇಳುತ್ತಾರೆ. ಅವರ ಬೆಂಬಲಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರ ಹಂಚಿಕೆಯ ಯಾವ ಒಪ್ಪಂದವೂ ಆಗಿಲ್ಲ, ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಜಾತಿಗಳ ಹೆಸರಲ್ಲಿ ಸಚಿವರು, ಶಾಸಕರು ಗುಟ್ಟಾಗಿ ಸಭೆ ಸೇರಿ ಚರ್ಚೆ ನಡೆಸುವುದೂ ಮುಂದುವರಿದೇ ಇದೆ. ಯಾವುದೇ ಕೋನದಿಂದ ನೋಡಿದರೂ ಕಾಂಗ್ರೆಸ್ ನಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರ ಹಂಚಿಕೆ ವಿಚಾರವೇ ದೊಡ್ಡ ಯುದ್ಧವಾಗಿ ಪರಿವರ್ತಿತವಾದರೂ ಆಶ್ಚರ್ಯ ಇಲ್ಲ.
ಮೈಸೂರಿನ ನಿವೇಶನ ಹಗರಣದ ವಿಚಾರವನ್ನೇ ತೆಗೆದುಕೊಂಡರೆ ತಮ್ಮ ಕುಟುಂಬದ ವಿರುದ್ಧ ಆರೋಪಗಳು ಕೇಳಿ ಬಂದ ಸುದೀರ್ಘ ಸಮಯದ ನಂತರ ಮುಡಾದಿಂದ ಪರಿಹಾರ್ಥವಾಗಿ ಪಡೆದಿದ್ದ ನಿವೇಶನಗಳನ್ನು ಸಿದ್ದರಾಮಯ್ಯ ಪತ್ನಿ ವಾಪಸು ಮರಳಿಸಿದ್ದಾರೆ. ಈ ವಿಚಾರದಲ್ಲಿ ಪ್ರಾಧಿಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈವರೆಗಿನ ಮಾಹಿತಿ ಪ್ರಕಾರ ನಿವೇಶನ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಯಾವುದೇ ಆದೇಶ ಅಥವಾ ಶಿಫಾರಸು ಪತ್ರ ನೀಡಿರುವ ಬಗ್ಗೆ ದಾಖಲೆಗಳು ಬಹಿರಂಗವಾಗಿಲ್ಲ. ಇನ್ನು ಜಾರಿ ನಿರ್ದೇಶನಾಲಯ ನಡೆಸಿರುವ ತನಿಖೆಯಲ್ಲಿ ಕೆಲವರ ವಿರುದ್ಧ ಅಕ್ರಮ ಹಣದ ವರ್ಗಾವಣೆ ಆರೋಪಗಳು ಕೇಳಿ ಬಂದಿದೆಯಾದರೂ ಈ ವ್ಯಕ್ತಿಗಳಿಗೂ ಸಿದ್ದರಾಮಯ್ಯ ಕುಟುಂಬ ನಿವೇಶನ ಪಡೆದಿದ್ದ ಪ್ರಕರಣಕ್ಕೂ ಏನು ಸಂಬಂಧವಿದೆ ಎಂಬುದು ತನಿಖೆ ಪೂರ್ಣಗೊಂಡು ವರದಿ ಬಂದ ನಂತರವಷ್ಟೇ ಗೊತ್ತಾಗಬೇಕು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಲಿದೆ ಎಂಬುದರ ಮೇಲೆ ವಿಚಾರಗಳು ಇತ್ಯರ್ಥವಾಗಲಿದೆ.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದರಿಂದ ದಕ್ಷಿಣದ ಕರ್ನಾಟಕದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಅಧಿಕಾರ ಹಂಚಿಕೆ ವಿಚಾರದಲ್ಲಿ ರಾಜ್ಯ ನಾಯಕರಿಗೆ ಇರುವಷ್ಟು ಆತುರವನ್ನು ಕಾಂಗ್ರೆಸ್ ವರಿಷ್ಠರು ತೋರುವ ಸಾಧ್ಯತೆಗಳು ಇಲ್ಲ.
ಇನ್ನು ಮುಖ್ಯಮಂತ್ರಿ ಗದ್ದುಗೆ ಹಿಡಿಯುವ ಹಾದಿಯಲ್ಲಿ ತಮ್ಮ ರಾಜಕೀಯ ದಾಳಗಳನ್ನು ನಿಧಾನವಾಗಿ ಉರುಳಿಸುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ದಿನೇ ದಿನೇ ಬಿಗಿಗೊಳಿಸುತ್ತಿದ್ದಾರೆ. ಮೊನ್ನೆ ನಡೆದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಸಿದ್ದರಾಮಯ್ಯ ಗುಂಪಿನ ಕೈಮೇಲಾಗದಂತೆ ನೋಡಿಕೊಂಡಿದ್ದು ತಮ್ಮ ಶಿಷ್ಯ ಮಂಜುನಾಥ್ ಅಧ್ಯಕ್ಷರಾಗುವಂತೆ ನೋಡಿಕೊಂಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ವಿಚಾರ ಚರ್ಚೆ ಆದಾಗಲೆಲ್ಲ ಬಹಿರಂಗವಾಗಿ ತನ್ನ ಯಾವುದೇ ಅಭಿಪ್ರಾಯವನ್ನು ಅವರು ಹೊರ ಹಾಕುತ್ತಿಲ್ಲ. ತಾನು ಹೇಳಬೇಕಾದ್ದನ್ನು ತನ್ನ ಬೆಂಬಲಿಗ ಶಾಸಕರ ಮೂಲಕ ಹೇಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಕರ್ನಾಟಕ ಹಾಲು ಉತ್ಪಾದನಾ ಒಕ್ಕೂಟಗಳ ಮಹಾ ಮಂಡಲದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರೊಬ್ಬರನ್ನು ಕೂರಿಸುವ ಪ್ರಯತ್ನದಲ್ಲಿ ಅವರಿದ್ದಾರೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಮಾಂತರ ಪ್ರದೇಶಗಳನ್ನು ನಗರ ವ್ಯಾಪ್ತಿಗೆ ಸೇರಿಸಿ ಗ್ರೇಟರ್ ಬೆಂಗಳೂರು ಮಾಡುವ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಮಂಜೂರಾತಿ ಪಡೆಯುವಲ್ಲೂ ಅವರು ಯಶಸ್ವಿಯಾಗಿದ್ದಾರೆ.
ಮತ್ತೊಂದು ಕಡೆ ವಿಧಾನಮಂಡಲದ ಬಜೆಟ್ ಅಧಿವೇಶನದ ನಂತರ ಜೆಡಿಎಸ್ ನಲ್ಲಿರುವ 12 ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಮೂಲಕ ಆ ಪಕ್ಷವನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನವನ್ನು ಅವರು ಮುಂದುವರಿಸಿದ್ದಾರೆ. ಒಮ್ಮೆ ಜೆಡಿಎಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಆ ಪಕ್ಷ ಇಬ್ಭಾಗವಾದರೆ ಅದರ ರಾಜಕೀಯಲಾಭ ನೇರವಾಗಿ ಸಿದ್ದರಾಮಯ್ಯ ಅವರಿಗಿಂತ ತನಗೇ ಹೆಚ್ಚು ಆಗಲಿದೆ ಎಂಬುದು ಅವರ ರಾಜಕೀಯ ಲೆಕ್ಕಾಚಾರ. ಮುಂದಿನ ದಿನಗಳಲ್ಲಿ ಇದು ಕಾರ್ಯಸಾದುವಾದರೂ ಆಶ್ಚರ್ಯಪಡಬೇಕಿಲ್ಲ.
ಇನ್ನು ಶಿಸ್ತಿನ ಪಕ್ಷ ಎಂಬ ಸ್ವಯಂ ಕೀರ್ತಿಗೆ ಅಂಟಿಕೊಂಡಿದ್ದ ಬಿಜೆಪಿಯಲ್ಲಿ ಇತ್ತೀಚಿನ ವಿದ್ಯಮಾನಗಳು ಆ ಪಕ್ಷ ದುರ್ಬಲವಾಗುತ್ತಿರುವುದನ್ನು ಸಾಬೀತುಪಡಿಸಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಿಡಿದು ನಿಂತು ದಿಲ್ಲಿಯಾತ್ರೆ ಕೈಗೊಂಡಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಗುಂಪಿಗೆ ಅಲ್ಲಿ ಗೃಹ ಸಚಿವ ಅಮಿತ್ ಶಾ ರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ದಿಲ್ಲಿಗೆ ತೆರಳಿದ್ದ ಈ ಗುಂಪು ಬರಿ ಗೈಲಿ ವಾಪಸಾಗಿದೆ. ವರಿಷ್ಠರ ಸೂಚನೆ ನಂತರವೂ ವಿಜಯೇಂದ್ರ ಮತ್ತು ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ಕೊಡುವುದನ್ನು ಯತ್ನಾಳ್ ನಿಲ್ಲಿಸಿಲ್ಲ. ರಾಜಕೀಯ ವಿಚಾರಗಳಿಗಷ್ಟೇ ಸೀಮಿತವಾಗಿರಬೇಕಿದ್ದ ಟೀಕೆಗಳು ಅದರಾಚೆಗೂ ಹೋಗಿ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದೆ. ಇದೆಲ್ಲ ಗೊತ್ತಿದ್ದೂ ಬಿಜೆಪಿ ಹೈಕಮಾಂಡ್ ಮೌನವಾಗಿದೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಬದಲಾಯಿಸುವುದಾದರೂ ಪರ್ಯಾಯವಾಗಿ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕನ ಕೊರತೆ ಬಿಜೆಪಿ ವರಿಷ್ಟರನ್ನು ಕಾಡುತ್ತಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಬದಿಗೊತ್ತಿ ಅಭ್ಯರ್ಥಿಗಳ ಆಯ್ಕೆ ನಡೆಸಿದ್ದ ದಿಲ್ಲಿ ವರಿಷ್ಟರಿಗೆ ಚುನಾವಣೆಗಳಲ್ಲಿನ ಸೋಲು ಆತಂಕ ತಂದಿರುವುದಂತೂ ಸತ್ಯ. ಹೀಗಾಗಿ ಯಡಿಯೂರಪ್ಪ ನವರ ವಿರೋಧ ಕಟ್ಟಿಕೊಂಡು ನೂತನ ಅಧ್ಯಕ್ಷರನ್ನು ನೇಮಿಸಿದ್ದೇ ಆದರೆ ಅದರಿಂದ ಮುಂದಿನ ದಿನಗಳಲ್ಲಿ ಸಂಘಟನಾತ್ಮಕವಾಗಿ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕವೂ ಕಾಡುತ್ತಿದೆ. ಇದೇ ಕಾರಣಕ್ಕಾಗಿ ವರಿಷ್ಠರು ಇಕ್ಕಟ್ಟಿಗೆ ಸಿಕ್ಕಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ನಡೆದಿರುವ ಸಂದರ್ಭದಲ್ಲೇ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಬಂಧನ ಪ್ರಕ್ರಿಯೆಯಿಂದ ಅವರು ಪಾರಾಗಿದ್ದಾರೆ.ಆದರೆ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿಯಲಿದೆ. ಇದೊಂದು ರೀತಿ ಬಿಜೆಪಿಗೂ ಮುಜುಗುರ ತರುವ ಸನ್ನಿವೇಶವಾಗಿ ಪರಿಣಮಿಸಿದೆ. ಬಿಜೆಪಿಯಲ್ಲಿನ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಸೂಚನೆಗಳು ಇಲ್ಲ.
ಏತನ್ಮಧ್ಯೆ ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ ರಾಜಕೀಯದಲ್ಲಿ ಅಧಿಕಾರ ಪಡೆದ ಕೆಲವು ಮುಖಂಡರು ಇದೀಗ ವಿಜಯೇಂದ್ರ ವಿರುದ್ಧ ತಿರುಗಿಬಿದ್ದು ಅಧ್ಯಕ್ಷ ಸ್ಥಾನದಿಂದ ಅವರನ್ನು ಇಳಿಸಲು ಹೊರಟಿರುವುದು ಪರಿಸ್ಥಿತಿಯ ವ್ಯಂಗ್ಯವೂ ಹೌದು. ಮುಂದಿನ ದಿನಗಳು ಬಿಜೆಪಿಯ ಪಾಲಿಗೆ ಮತ್ತಷ್ಟು ಕಷ್ಟಕರವಾದರೂ ಆಶ್ಚರ್ಯ ಪಡಬೇಕಿಲ್ಲ.
-ಯಗಟಿ ಮೋಹನ್