ನಿಷೇಧಿತ ಉಲ್ಫಾ - ಇಂಡಿಪೆಂಡೆಂಟ್ (ಉಲ್ಫಾ-ಐ) ಸಂಘಟನೆ ಒಂದು ಹೇಳಿಕೆ ನೀಡಿದ್ದು, ಜುಲೈ 13ರ ಭಾನುವಾರ, ಭಾರತೀಯ ಸೇನೆ ಮಯನ್ಮಾರ್‌ನಲ್ಲಿನ ತನ್ನ ಒಂದು ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದೆ ಎಂದಿದೆ. ತನ್ನ ಕನಿಷ್ಠ ಮೂವರು ಉನ್ನತ ನಾಯಕರು ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಲ್ಫಾ-ಐ ಹೇಳಿದೆ. ಆದರೆ, ಭಾರತೀಯ ಸೇನೆ ಗಡಿಯಾದ್ಯಂತ ಇಂತಹ ಯಾವುದೇ ದಾಳಿಯನ್ನು ತಾನು ನಡೆಸಿಲ್ಲ ಎಂದಿದೆ.
ಉಲ್ಫಾ - ಇಂಡಿಪೆಂಡೆಂಟ್ (ಉಲ್ಫಾ-ಐ) ಭಾರತೀಯ ಸೇನೆಯನ್ನು 'ಇಂಡಿಯನ್ ಆಕ್ಯುಪೇಷನಲ್ ಫೋರ್ಸಸ್' (ಭಾರತೀಯ ಆಕ್ರಮಣಕಾರಿ ಪಡೆಗಳು) ಎಂದು ಕರೆದಿದ್ದು, ಮಯನ್ಮಾರ್ ಗಡಿಯ ಸನಿಹ, ನಾಗಾಲ್ಯಾಂಡಿನ ಲೊಂಗ್ವಾ ಮತ್ತು ಅರುಣಾಚಲ ಪ್ರದೇಶದ ಪಾಂಗ್‌ಸೈ ಪಾಸ್ ಬಳಿ ಇರುವ ತನ್ನ ಹಲವಾರು ನೆಲೆಗಳ ಮೇಲೆ ಭಾನುವಾರ ಬೆಳಗಿನ ಜಾವ 2ರಿಂದ 4 ಗಂಟೆಯ ನಡುವೆ ಡ್ರೋನ್ ದಾಳಿ ನಡೆಸಿವೆ ಎಂದು ಆರೋಪಿಸಿದೆ. ಭಾರತ 150ಕ್ಕೂ ಹೆಚ್ಚು ಇಸ್ರೇಲ್ ಮತ್ತು ಫ್ರಾನ್ಸ್ ನಿರ್ಮಿತ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಗುಂಪು ಹೇಳಿದೆ. ಸಂಘಟನೆಯ ಉನ್ನತ ಮುಖಂಡ, ಲೆಫ್ಟಿನೆಂಟ್ ಜನರಲ್ ನಯನ್ ಮೆಧಿ (ನಯನ್ ಅಸೊಮ್) ಸಹ ಮೃತಪಟ್ಟಿದ್ದು, 19 ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಇನ್ನೊಂದು ಹೇಳಿಕೆಯಲ್ಲಿ, ಉಲ್ಫಾ - ಇಂಡಿಪೆಂಡೆಂಟ್ ತನ್ನ ಇನ್ನೂ ಇಬ್ಬರು ನಾಯಕರಾದ ಬ್ರಿಗೇಡಿಯರ್ ಗಣೇಶ್ ಅಸೊಮ್ ಮತ್ತು ಕರ್ನಲ್ ಪ್ರದೀಪ್ ಅಸೊಮ್ ಅವರಯ ಡ್ರೋನ್ ದಾಳಿಯ ಬಳಿಕ ನಡೆದ ಕ್ಷಿಪಣಿ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದಿದೆ.
ಉಲ್ಫಾ-ಐ ಮುಖಂಡ ಇಶಾನ್ ಅಸೊಮ್ ಹೇಳಿಕೆಯ ಪ್ರಕಾರ, ನಯನ್ ಅಸೊಮ್ ಅಂತ್ಯ ಸಂಸ್ಕಾರ ನಡೆಯುವ ಸಂದರ್ಭದಲ್ಲಿ ಕ್ಷಿಪಣಿ ದಾಳಿಗಳು ನಡೆದವು ಎನ್ನಲಾಗಿದೆ. ಈ ದಾಳಿಯಲ್ಲಿ, ಇಬ್ಬರು ನಾಯಕರಾದ ಗಣೇಶ್ ಅಸೊಮ್ ಮತ್ತು ಪ್ರದೀಪ್ ಅಸೊಮ್ ಮೃತಪಟ್ಟು, ಬಹಳಷ್ಟು ಅಧಿಕಾರಿಗಳು ಮತ್ತು ನಾಗರಿಕರು ಗಾಯಗೊಂಡಿದ್ದಾರೆ.
ಭಾನುವಾರ ಬೆಳಗ್ಗೆಯ ಬಳಿಕವೂ ಮಯನ್ಮಾರ್ ಗಡಿಯಲ್ಲಿ ಭಾರತೀಯ ಸೇನೆಯ ದಾಳಿ ಮುಂದುವರಿದಿದೆ ಎಂದು ಉಲ್ಫಾ ಇಂಡಿಪೆಂಡೆಂಟ್ ಹೇಳಿದೆ. ತನ್ನ ನೆಲೆಗಳ ಮೇಲೆ ನಡೆದ ದಾಳಿಗಳಿಗೆ ತಾನು ತೀಕ್ಷ್ಣ ಪ್ರತಿಕ್ರಿಯೆ ನೀಡುವುದಾಗಿ ಸಂಘಟನೆ ಎಚ್ಚರಿಸಿದೆ.
ಆದರೆ, ಗುವಾಹಟಿಯಲ್ಲಿನ ಭಾರತೀಯ ಸೇನಾ ಅಧಿಕಾರಿಯೊಬ್ಬರು ಇಂತಹ ಕಾರ್ಯಾಚರಣೆಯ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ನಾಗಾಲ್ಯಾಂಡಿನ ಇನ್ನೋರ್ವ ಅಧಿಕಾರಿಯೂ ಇದೇ ಮಾತನ್ನಾಡಿದ್ದಾರೆ.
ಆದರೆ, ಮೂಲಗಳ ಪ್ರಕಾರ, ಭಾರತೀಯ ಸೇನೆ ಮಯನ್ಮಾರ್ ಒಳ ಭಾಗದಲ್ಲಿ ದಾಳಿ ನಡೆಸಿದ್ದು, ಎರಡು ನಿಷೇಧಿತ ಗುಂಪುಗಳಾದ ಎನ್ಎಸ್‌ಸಿಎನ್-ಕೆ (ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ - ಖಾಪ್ಲಂಗ್) ಮತ್ತು ಪಿಎಲ್ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ನೆಲೆಗಳನ್ನು ಗುರಿಯಾಗಿಸಿದೆ. ಇವುಗಳಲ್ಲಿ ಒಂದಷ್ಟು ಶಿಬಿರಗಳು ಈ ದಾಳಿಯಲ್ಲಿ ಹಾನಿಗೊಳಗಾಗಿವೆ.
ಮಯನ್ಮಾರ್ ಒಳಗಿನ ಉಲ್ಫಾ ಇಂಡಿಪೆಂಡೆಂಟ್ ನೆಲೆಯ ಮೇಲೆ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಜನವರಿ 8ರಂದು ಹೇಳಿಕೆ ನೀಡಿದ್ದ ಸಂಘಟನೆ, ಭಾರತೀಯ ಸೇನೆ ಹಿಂದಿನ ದಿನ ಡ್ರೋನ್‌ಗಳನ್ನು ಬಳಸಿಕೊಂಡು ತನ್ನ ಒಂದು ಶಿಬಿರದ ಮೇಲೆ ದಾಳಿ ನಡೆಸಿದ್ದು, ಇಬ್ಬರು ಸದಸ್ಯರಿಗೆ ಸಣ್ಣ ಗಾಯಗಳಾಗಿವೆ ಎಂದಿತ್ತು.
ಪರೇಶ್ ಬರುವಾ ನೇತೃತ್ವದ ಉಲ್ಫಾ-ಐ ಸಂಘಟನೆ ಮಯನ್ಮಾರ್‌ನಲ್ಲಿ ಹಲವಾರು ಶಿಬಿರಗಳನ್ನು ಹೊಂದಿದೆ. ತಾನು ಶಾಂತಿ ಮಾತುಕತೆಗೆ ಬರಬೇಕಾದರೆ, ಮಾತುಕತೆ ಅಸ್ಸಾಂ ಭಾರತದಿಂದ ಪ್ರತ್ಯೇಕವಾಗಿ, ಸ್ವತಂತ್ರ ರಾಷ್ಟ್ರವಾಗುವ ತನ್ನ ಬೇಡಿಕೆಯೂ ಚರ್ಚೆಗೆ ಬರಬೇಕು ಎಂದು ಉಲ್ಫಾ-ಐ ಸ್ಪಷ್ಟಪಡಿಸಿದೆ.
ಅಸ್ಸಾಮೀ ಜನರು ತಮ್ಮದೇ ಆದ ಸ್ವತಂತ್ರ ಸಂಸ್ಕೃತಿ, ಭಾಷೆ, ಮತ್ತು ತಮ್ಮ ಅಸ್ತತ್ವದ ಕುರಿತು ಬಲವಾದ ಪ್ರಜ್ಞೆಯನ್ನು ಹೊಂದಿದ್ದಾರೆ. ಆದರೆ, 1800ರ ಕಾಲಘಟ್ಟದಲ್ಲಿ ಚಹಾ, ಕಲ್ಲಿದ್ದಲು, ಮತ್ತು ತೈಲ ಉದ್ಯಮಗಳು ಅಭಿವೃದ್ಧಿ ಹೊಂದತೊಡಗಿದಾಗ, ಬೇರೆ ಪ್ರದೇಶಗಳ ಬಹಳಷ್ಟು ಜನರು ಅಸ್ಸಾಮಿಗೆ ವಲಸೆ ಬರತೊಡಗಿದರು. ಇದು ಸ್ಥಳೀಯ ಜನರಲ್ಲಿ ತಮ್ಮ ಗುರುತು ಮತ್ತು ಭವಿಷ್ಯದ ಕುರಿತು ಅಸಮಾಧಾನ ಮೂಡಿಸಿತು. ಭಾರತದ ವಿಭಜನೆಯ ಬಳಿಕ, ಪೂರ್ವ ಪಾಕಿಸ್ತಾನದಿಂದ (ಇಂದಿನ ಬಾಂಗ್ಲಾದೇಶ) ಸಾಕಷ್ಟು ನಿರಾಶ್ರಿತರು ಅಸ್ಸಾಮಿಗೆ ವಲಸೆ ಬರತೊಡಗಿದ ಬಳಿಕ, ಪರಿಸ್ಥಿತಿ ತೀವ್ರವಾಗಿ ಹದಗೆಡಲಾರಂಭಿಸಿತು.
ಅಸ್ಸಾಮಿಗೆ ಹೆಚ್ಚು ಹೆಚ್ಚು ಜನರು ಬರತೊಡಗಿದಂತೆ, ಉದ್ಯೋಗ, ಭೂಮಿ, ಮತ್ತು ಇತರ ಸಂಪನ್ಮೂಲಗಳಿಗಾಗಿ ಹೋರಾಟಗಳು ಅತ್ಯಂತ ಗಂಭೀರ ಸ್ವರೂಪ ತಾಳತೊಡಗಿದವು. ಇದರ ಪರಿಣಾಮವಾಗಿ, ಆರು ವರ್ಷಗಳ ಕಾಲ ಸಾರ್ವಜನಿಕ ಪ್ರತಿಭಟನೆಗಳು ನಡೆದವು. 1985ರಲ್ಲಿ, ಅಕ್ರಮ ವಲಸಿಗರನ್ನು ತಡೆಯುವ ಸಲುವಾಗಿ, ಅಸ್ಸಾಂ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿತು.
ಇವೆಲ್ಲ ಉದ್ವಿಗ್ನತೆಗಳ ನಡುವೆ, ತೀವ್ರವಾದಿ ಆಲೋಚನೆಗಳನ್ನು ಹೊಂದಿರುವ ಜನರ ಒಂದು ಗುಂಪು ಜೊತೆಯಾಗಿ, ಎಪ್ರಿಲ್ 7, 1979ರಂದು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ) ಅನ್ನು ಸ್ಥಾಪಿಸಿದವು. ಇದರ ಮುಖಂಡರಲ್ಲಿ ಭೀಮಕಂಠ ಬುರಾಗೊಹೈನ್, ಅರಬಿಂದ್ ರಾಜ್‌ಖೋವಾ, ಅನೂಪ್ ಚೇಟಿಯಾ, ಭರ್ದೇಶ್ವರ್ ಗೊಹೇನ್ ಮತ್ತು ಪರೇಶ್ ಬರುವಾ ಮುಖ್ಯರಾಗಿದ್ದರು.
ಅಸ್ಸಾಮನ್ನು ಭಾರತದಿಂದ ಪ್ರತ್ಯೇಕಿಸಿ, ಸ್ವತಂತ್ರ ರಾಷ್ಟ್ರವಾಗಿಸುವ ಉದ್ದೇಶದಿಂದ ಉಲ್ಫಾ ಸಂಘಟನೆಯನ್ನು ಸ್ಥಾಪಿಸಲಾಯಿತು. ಈ ಗುರಿಯನ್ನು ಸಾಧಿಸಲು, ಉಲ್ಫಾ ಗುಂಪು ಆಯುಧಗಳು ಮತ್ತು ಹಿಂಸಾಚಾರದ ಹಾದಿ ಹಿಡಿಯಿತು. 46ಕ್ಕೂ ಹೆಚ್ಚು ವರ್ಷಗಳ ಕಾಲ, ಉಲ್ಫಾ ಬಂಡುಕೋರರು ಅಪಹರಣ, ಹಣಕ್ಕಾಗಿ ಬೆದರಿಕೆ, ಹತ್ಯೆ ಮತ್ತು ಬಾಂಬ್ ಸ್ಫೋಟಗಳಂತಹ ಕ್ರಮಗಳನ್ನು ಕೈಗೊಳ್ಳುತ್ತಾ ಬಂದರು. ಈ ಸುದೀರ್ಘ ಚಕಮಕಿ ಅಸ್ಸಾಂ ಮತ್ತು ಇತರ ಪ್ರದೇಶಗಳಲ್ಲಿ ಭಾರೀ ಜೀವ ಹಾನಿ ಮತ್ತು ನೋವಿಗೆ ಕಾರಣವಾಗಿದೆ.
ಉಲ್ಫಾ ಸಂಘಟನೆಯ ಹಿಂಸಾಚಾರವನ್ನು ನಿಗ್ರಹಿಸಲು ಭಾರತ ಸರ್ಕಾರವೂ ಹಲವು ಕಠಿಣ ಹೆಜ್ಜೆಗಳನ್ನು ಇಟ್ಟಿತು. 1990ರಲ್ಲಿ ಸರ್ಕಾರ ಆಪರೇಷನ್ ಬಜರಂಗ್ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸಿ, 1,221 ಉಲ್ಫಾ ಸದಸ್ಯರನ್ನು ಬಂಧಿಸಿತು. ಸರ್ಕಾರ ಅಸ್ಸಾಮನ್ನು ತೊಂದರೆಗೊಳಗಾದ ಪ್ರದೇಶ ಎಂದು ಘೋಷಿಸಿ, ರಾಷ್ಟ್ರಪತಿ ಆಡಳಿತ ತಂದು, ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸಿತು. ಎಎಫ್ಎಸ್‌ಪಿಎ (ಆರ್ಮ್ಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆ್ಯಕ್ಟ್) ಹೆಸರಿನ ಕಾನೂನಿನ ಅಡಿಯಲ್ಲಿ ಸೇನೆಗೆ ವಿಶೇಷ ಅಧಿಕಾರಗಳನ್ನು ನೀಡಿತು.
ಉಲ್ಫಾ ಸಂಘಟನೆಯಲ್ಲಿ ನಿರಂತರವಾಗಿ ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರುತ್ತಿದ್ದು, ಸರ್ಕಾರವೂ ಸಂಘಟನೆಯ ಒಳಗಿನ ಭಿನ್ನ ಗುಂಪುಗಳಿಗೆ ಮೌನವಾಗಿಯೇ ಬೆಂಬಲ ನೀಡುತ್ತಿತ್ತು ಎನ್ನಲಾಗಿದೆ. 1992ರಲ್ಲಿ, ಒಂದು ಗುಂಪು ಸಂಘಟನೆಯಿಂದ ಹೊರನಡೆದು, ಶರಣಾಗತಿಯನ್ನು ಆಯ್ಕೆ ಮಾಡಿತು. ಈ ಗುಂಪನ್ನು ಬಳಿಕ ಸುಲ್ಫಾ (ಸರಂಡರ್ಡ್ ಉಲ್ಫಾ) ಎನ್ನಲಾಯಿತು. ಈ ಗುಂಪು ಬಳಿಕ ಸರ್ಕಾರದೊಡನೆ ಮಾತುಕತೆಗೆ ಮುಂದಾಯಿತು. ನಂತರ ಸುಲ್ಫಾ ಸದಸ್ಯರು ಉಲ್ಫಾ ಬಂಡುಕೋರರು, ಅವರ ಕುಟುಂಬಸ್ಥರನ್ನು ರಹಸ್ಯವಾಗಿ ಹತ್ಯೆ ಮಾಡಲು ಆರಂಭಿಸಿದ್ದು, ಅವರಿಗೆ ರಾಜ್ಯ ಸರ್ಕಾರದ ರಹಸ್ಯ ಬೆಂಬಲವೂ ಇತ್ತು ಎನ್ನಲಾಗಿದೆ.
ಇಷ್ಟೆಲ್ಲ ಕ್ರಮಗಳ ನಂತರವೂ ಉಲ್ಫಾ ಸಕ್ರಿಯವಾಗಿ ಉಳಿದಿತ್ತು. ಇದಕ್ಕೆ ಭಾರತದ ಹೊರಗಿನಿಂದ ಲಭಿಸುತ್ತಿದ್ದ ಬೆಂಬಲವೂ ಕಾರಣವಾಗಿತ್ತು. ಉಲ್ಫಾ ಈಗ ಮಯನ್ಮಾರ್‌ನಲ್ಲಿ ತನ್ನ ನೆಲೆಗಳನ್ನು ಹೊಂದಿದ್ದು, ಮೊದಲು ಬಾಂಗ್ಲಾದೇಶ ಮತ್ತು ಭೂತಾನ್‌ಗಳಲ್ಲೂ ತನ್ನ ಶಿಬಿರಗಳನ್ನು ಹೊಂದಿತ್ತು. ಈ ಶಿಬಿರಗಳು ದಟ್ಟ ಕಾಡುಗಳು ಮತ್ತು ಪರ್ವತ ಪ್ರದೇಶಗಳಲ್ಲಿ ರಹಸ್ಯವಾಗಿದ್ದವು. ಉಲ್ಫಾ ಈ ನೆಲೆಗಳನ್ನು ಬಳಸಿಕೊಂಡು, ಗಡಿಯಾದ್ಯಂತ ದಾಳಿಗಳನ್ನು ರೂಪಿಸಲು ಮತ್ತು ಬಳಿಕ ಬಚ್ಚಿಟ್ಟುಕೊಳ್ಳಲು, ನೂತನ ಸದಸ್ಯರಿಗೆ ತರಬೇತಿ ನೀಡಲು ಬಳಸಿಕೊಳ್ಳುತ್ತದೆ.
ಉಲ್ಫಾ ಉತ್ತರ ಭಾರತ ಮತ್ತು ಮಯನ್ಮಾರ್‌ನ ಇತರ ಬಂಡುಕೋರ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ. ಇದು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳಾದ ಹರ್ಕತ್ ಉಲ್ ಜಿಹಾದ್ ಎ ಇಸ್ಲಾಮಿ, ಅಲ್ ಕೈದಾಗಳೊಡನೆಯೂ ಸಂಬಂಧ ಹೊಂದಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಉಲ್ಫಾ ಮಿಲಿಟರಿ ವಿಭಾಗದ ಮುಖ್ಯಸ್ಥ ಪರೇಶ್ ಬರುವಾ ಅಮೆರಿಕಾದ 9/11 ದಾಳಿಯ ರೂವಾರಿ, ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನೂ ಭೇಟಿಯಾಗಿದ್ದ.
ಉಲ್ಫಾ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಜೊತೆಗೂ ಸಂಪರ್ಕ ಹೊಂದಿದ್ದು, ಹಿಂದೆ ಅದು ಉಲ್ಫಾ ಸದಸ್ಯರಿಗೆ ತರಬೇತಿ ನೀಡಿತ್ತು ಎನ್ನಲಾಗಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಉಲ್ಫಾ ತನ್ನ ಮಾಸಿಕ ಪತ್ರಿಕೆಯಾದ ಸ್ವಾಧೀನತಾದಲ್ಲಿ ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತ್ತು.
2003ರಲ್ಲಿ, ಭೂತಾನ್ ಉಲ್ಫಾ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿ, ಅದರ ನೆಲೆಗಳನ್ನು ನಾಶಪಡಿಸಿತು. ಬಳಿಕ, 2009ರಲ್ಲಿ ಶೇಕ್ ಹಸೀನಾ ಬಾಂಗ್ಲಾದೇಶದ ಪ್ರಧಾನಿಯಾದ ಬಳಿಕ, ಅವರ ಸರ್ಕಾರವೂ ಉಲ್ಫಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದರ ಪರಿಣಾಮವಾಗಿ, ಬಹುತೇಕ ಉಲ್ಫಾ ಬಂಡುಕೋರರು ಭೂತಾನ್ ಮತ್ತು ಬಾಂಗ್ಲಾದೇಶವನ್ನು ತೊರೆಯಬೇಕಾಯಿತು.
2005ರಲ್ಲಿ, ಉಲ್ಫಾ ಮಾತುಕತೆಯ ಉದ್ದೇಶದಿಂದ 11 ಸದಸ್ಯರ 'ಪೀಪಲ್ಸ್ ಕನ್ಸಲ್ಟೇಟಿವ್ ಗ್ರೂಪ್' ಎಂಬ ತಂಡವನ್ನು ಸ್ಥಾಪಿಸಿ, ಶಾಂತಿಯ ಭರವಸೆ ನೀಡಿತು. ಆದರೆ, ಕೆಲ ಸಮಯದಲ್ಲೇ ಉಲ್ಫಾ ಮನ ಬದಲಾಯಿಸಿ, ಮತ್ತೆ ಹಿಂಸಾಚಾರವನ್ನು ಆರಂಭಿಸಿತು.
2009ರಲ್ಲಿ, ಭಾರತೀಯ ಭದ್ರತಾ ಪಡೆಗಳು ರಾಜ್‌ಖೊವಾ ನೇತೃತ್ವದ ಗುಂಪಿನ ಒಂದಷ್ಟು ಉಲ್ಫಾ ನಾಯಕರನ್ನು ಬಂಧಿಸಿದವು. ಬಳಿಕ, ಸೆಪ್ಟೆಂಬರ್ 2011ರಲ್ಲಿ, ಈ ಗುಂಪು ಹೋರಾಟ ನಿಲ್ಲಿಸಲು ಒಪ್ಪಿಗೆ ಸೂಚಿಸಿ, ಕೇಂದ್ರ ಸರ್ಕಾರದೊಡನೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.
2012ರಲ್ಲಿ, ಶಾಂತಿ ಮಾತುಕತೆಯ ವಿರುದ್ಧವಿದ್ದ ಪರೇಶ್ ಬರುವಾ ರಾಜ್‌ಖೊವಾನನ್ನು ಉಲ್ಫಾದಿಂದ ಕಿತ್ತುಹಾಕಿದ. ಎಪ್ರಿಲ್ 2013ರಲ್ಲಿ, ಆತನ ಗುಂಪು ಉಲ್ಫಾ (ಇಂಡಿಪೆಂಡೆಂಟ್) ಎಂದು ಮರುನಾಮಕರಣ ಹೊಂದಿತು. ಶಾಂತಿ ಮಾತುಕತೆಯನ್ನು ಬೆಂಬಲಿಸಿದ್ದ ಇನ್ನೊಂದು ಗುಂಪು, ಹಿಂಸಾಚಾರವನ್ನು ನಿಲ್ಲಿಸಲು ಮೊದಲ ಒಪ್ಪಿಗೆ ನೀಡಿದ 12 ವರ್ಷಗಳ ಬಳಿಕ, 2023ರಲ್ಲಿ ಅಂತಿಮ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.
ಒಪ್ಪಂದದ ಪ್ರಕಾರ, ಉಲ್ಫಾ ಹಿಂಸಾಚಾರವನ್ನು ನಿಲ್ಲಿಸಿ, ಆಯುಧ ಬಳಸದಿರುವ ಮತ್ತು ತನ್ನ ಸಶಸ್ತ್ರ ಗುಂಪನ್ನು ಸ್ಥಗಿತಗೊಳಿಸುವ ಭರವಸೆ ನೀಡಿದೆ. ತನ್ನ ಹಿಡಿತದಲ್ಲಿರುವ ಎಲ್ಲ ಶಿಬಿರಗಳನ್ನೂ ತ್ಯಜಿಸುವುದಾಗಿ ಹೇಳಿದೆ. ಕಾನೂನಿನ ಅನುಸಾರವಾಗಿ, ಶಾಂತಿಯುತ ರಾಜಕಾರಣಕ್ಕೆ ಮರಳುವುದಾಗಿಯೂ ಗುಂಪು ಹೇಳಿದೆ. ಇದು ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಂದ ಹಿಂದೆ ಸರಿದು, ಭಾರೀ ಬದಲಾವಣೆಯಾಗಿದೆ.
ಉಲ್ಫಾದ ಒಂದಷ್ಟು ಬೇಡಿಕೆಗಳನ್ನು ಅಂಗೀಕರಿಸುವ ರೀತಿಯಲ್ಲಿ, ಕೇಂದ್ರ ಸರ್ಕಾರ ಒಂದಷ್ಟು ಕಾಲಮಿತಿಯನ್ನು ಹಾಕಿಕೊಂಡು, ಸೂಕ್ತ ಯೋಜನೆಯನ್ನು ರೂಪಿಸಲಿದೆ. ಈ ಅಭಿವೃದ್ಧಿಯನ್ನು ಗಮನಿಸುವ ಸಲುವಾಗಿ, ಒಂದು ವಿಶೇಷ ಸಮಿತಿಯನ್ನೂ ಸ್ಥಾಪಿಸಲಾಗುತ್ತದೆ. ಈ ಒಪ್ಪಂದ, ಅಸ್ಸಾಮಿನ ಸಮಗ್ರ ಅಭಿವೃದ್ಧಿಗಾಗಿ 1.5 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಹೂಡಿಕೆಯನ್ನೂ ಒಳಗೊಂಡಿದೆ. ಒಪ್ಪಂದದ ಇನ್ನೊಂದು ಪ್ರಮುಖ ಅಂಶವೆಂದರೆ, ಉಲ್ಫಾದ ರಾಜಕೀಯ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಅಸ್ಸಾಂ ಗಡಿಗಳನ್ನು ರಕ್ಷಿಸುವ ಸಲುವಾಗಿ, ನೆರೆಯ ಈಶಾನ್ಯ ರಾಜ್ಯಗಳೊಡನೆ ಶಾಂತಿಯುತವಾಗಿ ಗಡಿ ತಕರಾರುಗಳನ್ನು ಇತ್ಯರ್ಥಗೊಳಿಸುವುದನ್ನೂ ಈ ಒಪ್ಪಂದ ಒಳಗೊಂಡಿದೆ. 2023ರಲ್ಲಿ ವಿಧಾನಸಭಾ ಕ್ಷೇತ್ರಗಳ ಮರು ರೂಪಿಸುವಿಕೆಗೆ ಬಳಸಿದ ನಿಯಮಗಳನ್ನೇ ಭವಿಷ್ಯದಲ್ಲೂ ಬಳಸಲಾಗುತ್ತದೆ.
ಒಪ್ಪಂದದ ಪ್ರಮುಖ ಗುರಿಯೆಂದರೆ, ರಾಜ್ಯದ 126 ಸದಸ್ಯರ ವಿಧಾನಸಭೆಯಲ್ಲಿ ಅಸ್ಸಾಮಿನ ಮೂಲ ನಿವಾಸಿಗಳಿಗೇ ಆದ್ಯತೆ ಲಭಿಸುವಂತೆ ಮಾಡುವುದು. ಇದನ್ನು ಕಾರ್ಯರೂಪಕ್ಕೆ ತರಲು, ಮೂಲತಃ ಅಸ್ಸಾಮಿಗರಲ್ಲದ, ಪ್ರಮುಖವಾಗಿ ಮುಸ್ಲಿಂ ವಲಸಿಗರನ್ನು ಬಹುತೇಕ ಕ್ಷೇತ್ರಗಳ ವಿಧಾನಸಭಾ ಸ್ಥಾನಗಳಿಂದ ಹೊರಗಿಡಲಾಗುತ್ತದೆ. 2023ರ ಬದಲಾವಣೆಗಳ ಬಳಿಕ, ವಾಸ್ತವವಾಗಿ ಮೂಲತಃ ಅಸ್ಸಾಮಿಗರಲ್ಲದ ಜನರು 126 ಸ್ಥಾನಗಳ ಪೈಕಿ 106 ಸ್ಥಾನಗಳನ್ನು ಗೆಲ್ಲುವ ಯಾವುದೇ ಸಾಧ್ಯತೆಗಳಿಲ್ಲ.
ವಿಧಾನಸಭೆಯಲ್ಲಿ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವ ಜೊತೆಗೆ, ಈ ಒಪ್ಪಂದ ಇನ್ನಷ್ಟು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ, 1955ರ ಪೌರತ್ವ ಹಕ್ಕಿನ 3ನೇ ವಿಧಿಯಿಂದ ಅಸ್ಸಾಮನ್ನು ಹೊರಗಿಡುವುದೂ ಮುಖ್ಯ ಬೇಡಿಕೆಯಾಗಿದೆ. ಈ ವಿಧಿ, ಹುಟ್ಟಿನಿಂದಲೇ ಯಾರನ್ನು ಭಾರತೀಯ ಎನ್ನಬಹುದು ಎನ್ನುವ ಅಂಶಗಳನ್ನು ಒಳಗೊಂಡಿದೆ. ಅದರೊಡನೆ, ವ್ಯಕ್ತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿರುವುದು ಮತ್ತು ಬೇರೆ ಕಾರಣಗಳಿಂದ ಪೌರತ್ವ ಕಳೆದುಕೊಂಡಿರುವುದನ್ನೂ ಇದು ಒಳಗೊಂಡಿದೆ.
ಇದರ ಅರ್ಥ ಏನೆಂದರೆ, ಈ ಒಪ್ಪಂದ ಅಸ್ಸಾಮಿಗೆ ವಿಶೇಷ ನಿಯಮಗಳು ಬೇಕೆಂದು ಪ್ರತಿಪಾದಿಸುತ್ತಿದ್ದು, ಒಂದು ಬಾರಿ ಭಾರತೀಯ ಪೌರತ್ವವನ್ನು ತ್ಯಜಿಸಿದವರು, ಅಥವಾ ಕಳೆದುಕೊಂಡವರು, ರಾಜ್ಯದಲ್ಲಿ ಅದನ್ನು ಮತ್ತೆ ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗಬಾರದು. ಇದರ ಮುಖ್ಯ ಉದ್ದೇಶ, ಅಸ್ಸಾಮಿನ ಸ್ಥಳೀಯ ಜನರನ್ನು ರಕ್ಷಿಸಿ, ಕಾನೂನಿನ ಲೋಪಗಳ ದುರ್ಬಳಕೆ ಮಾಡಿಕೊಂಡು ಅಕ್ರಮ ವಲಸಿಗರು ಭಾರತೀಯ ಪೌರರಾಗುವುದನ್ನು ತಡೆಯುವುದಾಗಿದೆ.
ಅದರೊಡನೆ, ಈ ಒಪ್ಪಂದ ತಾವು ವಾಸಿಸದಿರುವ ಪ್ರದೇಶದಲ್ಲಿ ಜನರು ಮತದಾರರಾಗಿ ನೋಂದಣಿ ಮಾಡದಂತೆ ತಡೆಯುವ ಗುರಿಯನ್ನೂ ಹೊಂದಿದೆ. ಇದು ಹೊಸದಾದ, ಸ್ಪಷ್ಟವಾದ, ಮತ್ತು ದೋಷ ಮುಕ್ತವಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿಯಾಗಬೇಕೆಂದು ಆಗ್ರಹಿಸುತ್ತಿದೆ. ಹಿಂದೆ ನವೀಕರಿಸಿದ ಪ್ರಜೆಗಳ ಪಟ್ಟಿಯಲ್ಲಿ, 3.3 ಕೋಟಿ ಅರ್ಜಿದಾರರ ಪೈಕಿ 19.06 ಲಕ್ಷ ಜನರನ್ನು ಅವರ ಪೌರತ್ವವನ್ನು ಖಾತ್ರಿಪಡಿಸುವ ಸೂಕ್ತ ದಾಖಲೆಗಳ ಕೊರತೆಯ ಕಾರಣದಿಂದ ಹೊರಗಿಡಲಾಗಿದೆ.
2016ರಲ್ಲಿ ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು 11ನೇ ಒಪ್ಪಂದವಾಗಿದ್ದು, ಈ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದರಿಂದ ರಾಜ್ಯದಲ್ಲಿ 90% ಹಿಂಸಾಚಾರ ಕೊನೆಯಾಗಿದೆ ಎಂದಿದ್ದಾರೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ತಜ್ಞರು ಈ ಒಪ್ಪಂದ ಒಂದು ಉತ್ತಮ ಹೆಜ್ಜೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ನಿಜಕ್ಕೂ ಶಾಂತಿ ಸ್ಥಾಪನೆಯಾಗಬೇಕಾದರೆ, ಪರೇಶ್ ಬರುವಾ ಮತ್ತು ಆತನ ಉಲ್ಫಾ (ಇಂಡಿಪೆಂಡೆಂಟ್) ಪಡೆಯ ಅಂದಾಜು 200 ಹೋರಾಟಗಾರರು ಹಿಂಸಾಚಾರವನ್ನು ನಿಲ್ಲಿಸಿ, ಶಾಂತಿ ಮಾತುಕತೆಗೆ ಮುಂದಾಗಬೇಕು. ಈಗ ಮುಂದಿರುವ ಬಹುದೊಡ್ಡ ಸವಾಲೆಂದರೆ, ಸರ್ಕಾರ ತಾನು ಒಪ್ಪಂದದಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನೈಜ ಕ್ರಮಗಳನ್ನು ಕೈಗೊಳ್ಳುವುದು.
ಉಲ್ಫಾ ಇಂಡಿಪೆಂಡೆಂಟ್ ಮಯನ್ಮಾರಿನ ಸಗಾಯಿಂಗ್ ಪ್ರಾಂತ್ಯದ ರಹಸ್ಯ ನೆಲೆಗಳಿಂದ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಸಂಘಟನೆಯ ಮುಖ್ಯಸ್ಥ, ಪರೇಶ್ ಬರುವಾ ಮಯನ್ಮಾರ್ - ಚೀನಾ ಗಡಿಯ ಬಳಿ ನೆಲೆಸಿದ್ದಾನೆ ಎನ್ನಲಾಗಿದೆ. ಅಸ್ಸಾಂ ಪ್ರತ್ಯೇಕ ರಾಷ್ಟ್ರವಾಗುವ ವಿಚಾರ ಮುನ್ನೆಲೆಗೆ ಬರುವ ತನಕ ಭಾರತ ಸರ್ಕಾರದ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬರುವಾ ಪದೇಪದೇ ಹೇಳಿದ್ದಾನೆ.
ಆದರೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಈಗಾಗಲೇ ಸರ್ಕಾರ ಯಾವುದೇ ಕಾರಣಕ್ಕೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ವಿಚಾರದ ಕುರಿತು ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಸ್ಸಾಮಿನ ಜನರು ಭಾರತದಿಂದ ಪ್ರತ್ಯೇಕವಾಗುವುದನ್ನು ಬಯಸುವುದಿಲ್ಲ ಎಂದಿದ್ದಾರೆ. ಇಷ್ಟಾದರೂ, ಸರ್ಕಾರ ಬರುವಾನನ್ನು ಶಾಂತಿ ಮಾತುಕತೆಗೆ ಬರುವಂತೆ ಮನ ಒಲಿಸುವ ಪ್ರಯತ್ನ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಇತ್ತೀಚಿನ ಡ್ರೋನ್ ದಾಳಿ ನಡೆದಿರುವುದು ಖಚಿತವಾದರೆ, ಅದು ಈಗಿನ ಚಕಮಕಿಯನ್ನು ಸಾಕಷ್ಟು ತೀವ್ರವಾಗಿಸಿದಂತಾಗಲಿದೆ. ಇನ್ನುಳಿದ ಉಲ್ಫಾ ಗುಂಪುಗಳನ್ನು ಶಾಂತಿ ಮಾತುಕತೆಯ ಹಾದಿಗೆ ತರುವುದಕ್ಕೆ ಇದು ಅಡ್ಡಿಯಾಗುವ ಸಾಧ್ಯತೆಗಳಿವೆ. ಭಾನುವಾರದ ದಾಳಿಯಲ್ಲಿ ಮೂವರು ಉಲ್ಫಾ-ಐ ಮುಖಂಡರು ಸಾವಿವೀಡಾಗಿದ್ದು, ಅಸ್ಸಾಮಿನಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆಯ ಹಾದಿ ಇನ್ನೂ ಅನಿಶ್ಚಿತವಾಗಿದ್ದು, ಬಹಳಷ್ಟು ಸವಾಲಿನಿಂದ ಕೂಡಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com