ಚಿನ್ನಸ್ವಾಮಿ ಕ್ರೀಡಾಂಗಣ online desk
ಅಂಕಣಗಳು

ಡಿ-ಕೋಡ್: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಧಿಕಾರಿಗಳೂ ಹೊಣೆ; ಏಕೆಂದರೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ ಎಂದು ಸರ್ಕಾರಕ್ಕೆ ತಿಳಿಸಿದ್ದೆವು ಎಂದು ಪೊಲೀಸ್‌ ಇಲಾಖೆ ಹಾಗೂ ಒಟ್ಟಾರೆ ಕಾರ್ಯಾಂಗ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹಾಗಾದರೆ ಕಾರ್ಯಾಂಗದ ಸ್ಥಾನವೇನು?

ಜೂನ್‌ 3ರಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಐಪಿಎಲ್‌ ಕಪ್‌ ಗೆದ್ದಿತು. ರಾಜ್ಯಾದ್ಯಂತ ಜನರು ಸಂಭ್ರಮಿಸಿದ್ದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಭಾಗವಾಗಿ ರಾಜ್ಯ ಸರ್ಕಾರವು ಮಾರನೆಯ ದಿನವೇ ತಂಡಕ್ಕೆ ಅಭಿನಂದನೆ ಸಲ್ಲಿಸಲು ಮುಂದಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಪಟ್ಟರು. ಮೊದಲ ಬಾರಿಗೆ ಬೆಂಗಳೂರು ತಂಡ ಕಪ್‌ ಗೆದ್ದ ಸಂಭ್ರಮವೆಲ್ಲ ಸೂತಕವಾಗಿ ಪರಿವರ್ತನೆಯಾಯಿತು.

ಕಾಲ್ತುಳಿತಕ್ಕೂ ಮುನ್ನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕ್ರಿಕೆಟ್‌ ತಂಡವನ್ನು ಕೂರಿಸಲಾಗಿತ್ತು. ಹಿಂಬಾಗಿಲಿನಿಂದ ಬಂದ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು, ಸ್ನೇಹಿತರು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅಭಿಮಾನಿಗಳು ವಿಧಾನಸೌಧದ ರಸ್ತೆ, ಪಾದಚಾರಿ ಮಾರ್ಗವಷ್ಟೆ ಅಲ್ಲದೆ ಹೈಕೋರ್ಟ್‌ ಬಳಿಯ ಮರಗಳ ಮೇಲೇರಿ ನೇತಾಡಿಕೊಂಡು ಕಣ್ತುಂಬಿಕೊಳ್ಳುತ್ತಿದ್ದರು. ಯಾವಾಗ ಕಾಲ್ತುಳಿತವಾಗಿ ಜನರು ನಿಧನರಾದರೋ, ಹೊಣೆಗಾರಿಕೆ ಚರ್ಚೆ ಆರಂಭವಾಯಿತು.

ಕಾಲ್ತುಳಿತದ ವೇಳೆ ಪೊಲೀಸ್‌ ಸಿಬ್ಬಂದಿ ಹರಸಾಹಸಪಟ್ಟು ಮಕ್ಕಳನ್ನು, ಮಹಿಳೆಯರನ್ನು ರಕ್ಷಣೆ ಮಾಡಿದ ಫೋಟೊಗಳು, ವಿಡಿಯೋಗಳು ಎಲ್ಲೆಡೆ ಹರಿದಾಡಿದವು. ರಾಜಕಾರಣಿಗಳ ಸ್ವಾರ್ಥವೇ ಇದಕ್ಕೆಲ್ಲ ಕಾರಣ ಎಂಬ ಆಕ್ರೋಶ ವ್ಯಕ್ತವಾಯಿತು. ಆದರೆ ಸರ್ಕಾರ ಎನ್ನುವುದು ‘ಸರ್ಕಾರ’ದಂತೆಯೇ ವರ್ತಿಸಿತು. ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ ಸರ್ಕಾರ, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ಮತ್ತೊಬ್ಬ ಅಧಿಕಾರಿ ವಿಕಾಸ್ ಕುಮಾರ್ ಸೇರಿ ಮತ್ತಿತರರನ್ನು ಅಮಾನತು ಮಾಡಿ ಆದೇಶಿಸಿತು. ಈ ಆದೇಶದ ವಿಚಾರಣೆ CATಯಲ್ಲಿ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಮಾನತು ಆದೇಶವನ್ನು ಹಿಂಪಡೆದಿದೆ.

ಇಲ್ಲಿ ಮುಖ್ಯ ಪ್ರಶ್ನೆ ಬರುವುದು, ಇದರಲ್ಲಿ ರಾಜಕಾರಣಿಗಳ ಪಾತ್ರ ಹಾಗೂ ಅಧಿಕಾರಿಗಳ ಪಾತ್ರವೇನು?ಎನ್ನುವುದು. ನಿಜವಾಗಲೂ ಎಲ್ಲ ತಪ್ಪಿಗೂ ರಾಜಕಾರಣಿಗಳು ಕಾರಣವೇ? ನಿಜಕ್ಕೂ ಕಾರ್ಯಾಂಗ (ಅಧಿಕಾರಿಗಳು) ಎಲ್ಲ ತಪ್ಪನ್ನು ಶಾಸಕಾಂಗದ (ರಾಜಕಾರಣಿಗಳ) ಮೇಲೆ ಹಾಕಿ ಪಾರಾಗಬಹುದೇ? ಎನ್ನುವುದು.

ಅಧಿಕಾರದ ಹಂಚಿಕೆ

ಭಾರತದ ಸಂವಿಧಾನದಲ್ಲಿ ಅತಿ ಮುಖ್ಯ ಅಂಶಗಳಲ್ಲೊಂದು, ಅಧಿಕಾರಗಳ ಸ್ಪಷ್ಟ ಹಂಚಿಕೆ. ಮೊದಲನೆಯದಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಅಧಿಕಾರಗಳ ಹಂಚಿಕೆ. ಇದಕ್ಕೆ ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ, ಸಮವರ್ತಿ ಪಟ್ಟಿ ಎಂದು ಮಾಡಲಾಗಿದೆ. ಇನ್ನೊಂದು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಅಧಿಕಾರಗಳ ಹಂಚಿಕೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ನೇರವಾಗಿ ಆಯ್ಕೆ ಮಾಡುವುದು ಜನಪ್ರತಿನಿಧಿಗಳನ್ನು, ಅಂದರೆ ಶಾಸಕಾಂಗವನ್ನು. ಹಾಗಾಗಿ ಸಂಸತ್ತು, ವಿಧಾನಸಭೆಗೆ ಪರಮಾಧಿಕಾರವಿದೆ. ಆದರೆ ಭಾರತದಲ್ಲಿ ಅಮೆರಿಕನ್‌ ಮಾದರಿಯಲ್ಲಿ ಸಂಪೂರ್ಣ ರಾಜಕೀಯ ಪರಮಾಧಿಕಾರದ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿಲ್ಲ.

ಭಾರತದ ಮುಂದೆ ಮುಖ್ಯವಾಗಿ ಮೂರು ಮಾದರಿಯ ಆಡಳಿತ ವ್ಯವಸ್ಥೆಗಳ ಆಯ್ಕೆ ಇತ್ತು. ಮೊದಲನೆಯದು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ಮಾದರಿ. ಇದರಲ್ಲಿ ನಾಗರಿಕ ಸೇವಾ ಸಿಬ್ಬಂದಿಯು ತಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ಕಡೆ ವಾಲದೇ ತಟಸ್ಥರಾಗಿರುತ್ತಾರೆ. ಎರಡನೆಯದು ಅಮೆರಿಕನ್‌ ವ್ಯವಸ್ಥೆ. ಇದು ಸಂಪೂರ್ಣವಾಗಿ ರಾಜಕೀಯ ವ್ಯವಸ್ಥೆ ಕೇಂದ್ರಿತವಾಗಿ ಕೆಲಸ ಮಾಡುತ್ತದೆ. ಮೂರನೆಯದು ರಷ್ಯನ್‌ ಮಾದರಿ. ಇದರಲ್ಲಿ, ಕಾರ್ಯಾಂಗ ಎನ್ನುವುದು ಸಂಪೂರ್ಣವಾಗಿ ಶಾಸಕಾಂಗದ ಅಧೀನವಾಗಿರುತ್ತದೆ. ಭಾರತ ಈ ಮೂರರಲ್ಲಿ ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ಮಾದರಿಯನ್ನು ಹೋಲುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿತು. ಇಲ್ಲಿ ಶಾಸಕಾಂಗದ ಪ್ರತಿನಿಧಿಗಳು ಬದಲಾಗುತ್ತಲೇ ಇರುತ್ತಾರೆ. ಆದರೆ ಸರ್ಕಾರ ಎನ್ನುವುದರಲ್ಲಿ ನಿರಂತರವಾಗಿರುವುದು ಇದೇ ಕಾರ್ಯಾಂಗ. ಇದೇ ಕಾರಣಕ್ಕೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ‘ಕಾರ್ಯಾಂಗ ಒಕ್ಕೂಟ’ ಎಂದೂ ಕರೆಯಲಾಗುತ್ತದೆ.

ಕಾರ್ಯಾಂಗದ ಪಾತ್ರ

ಭಾರತದ ಒಕ್ಕೂಟ ವ್ಯವಸ್ಥೆಯನ್ನು ಭದ್ರವಾಗಿರಿಸಿಕೊಳ್ಳುವ ಸಲುವಾಗಿ ಅಖಿಲ ಭಾರತೀಯ ಸೇವೆಗಳನ್ನು ಆರಂಭಿಸಲಾಯಿತು. ಬ್ರಿಟಿಷ್‌ ಆಡಳಿತದಲ್ಲಿದ್ದ ಅನೇಕ ಸಂಗತಿಗಳು ಮುಂದುವರಿದವಾದರೂ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಮುಖ್ಯವಾಗಿ ಅಧಿಕಾರಿಗಳು ಕೆಲಸ ಮಾಡಬೇಕಾದ ಮಾನಸಿಕತೆ ಕುರಿತು ದೇಶದ ಮೊದಲ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲರು ಗಮನಹರಿಸಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಹಾಗೂ ವಿವಿಧ ರಾಜಸಂಸ್ಥಾನಗಳನ್ನು ದೇಶದಲ್ಲಿ ವಿಲೀನಗೊಳಿಸುವ ಸಂದರ್ಭದಲ್ಲಿ ನಾಗರಿಕ ಸೇವಾ ಅಧಿಕಾರಿಗಳ ಪಾತ್ರವನ್ನು ಮೆಚ್ಚಿದ್ದರು. ಹಾಗಾಗಿಯೇ ನಾಗರಿಕ ಸೇವೆಯನ್ನು ‘steel frame of India’ ಎಂದು ಕರೆದಿದ್ದರು ಹಾಗೂ ಭವಿಷ್ಯದಲ್ಲೂ ಹಾಗೆಯೇ ಇರಬೇಕು ಎಂದು ಬಯಸಿದ್ದರು.

ಆದರೆ ವರ್ಷ ಕಳೆದಂತೆ, ಸಮಾಜದ ವಿವಿಧ ಸ್ತರಗಳಂತೆ ಈ ವ್ಯವಸ್ಥೆಯಲ್ಲೂ ಶಿಥಿಲತೆ ಬಂದಿದೆ. ತಾನು ಸಂವಿಧಾನದ ಮೂರು ಅಂಗಗಳಲ್ಲೊಂದು ಎನ್ನುವುದನ್ನೇ ಕಾರ್ಯಾಂಗ ಮರೆತಿದೆ. ರಾಜಕಾರಣಿಗಳು ತಮಗಿರುವ ಸಾಂವಿಧಾನಿಕ ರಕ್ಷಣೆಯನ್ನು ಬಳಸಿ ನಿಧಾನವಾಗಿ ಕಾರ್ಯಾಂಗವನ್ನು ತಮ್ಮ ಅಡಿಯಾಳಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದ ಮುಖ್ಯಕಾರ್ಯದರ್ಶಿಯೇ ಕಾರ್ಯಾಂಗದ ಮುಖ್ಯಸ್ಥರು. ಮುಖ್ಯಕಾರ್ಯದರ್ಶಿ ನೇಮಕವನ್ನೇ ಶಾಸಕಾಂಗ ಸಂಪೂರ್ಣ ತನ್ನ ಕೈಲಿರಿಸಿಕೊಂಡಿದೆ. ಅಲ್ಲಿಂದ ಆರಂಭಿಸಿ, ಇಡೀ ಅಧಿಕಾರಿ ವರ್ಗವನ್ನು ನಿಯಂತ್ರಿಸುತ್ತದೆ. ವರ್ಗಾವಣೆ, ಅಮಾನತು, ಸಂಸತ್ತಿನಲ್ಲಿ/ವಿಧಾನಸಭೆಯಲ್ಲಿ ನಿಂತು ವಾಗ್ದಂಡನೆ... ಮುಂತಾದ ಅಸ್ತ್ರಗಳನ್ನು ಮುಂದಾಗಿಸಿಕೊಂಡು ಶಾಸಕಾಂಗವನ್ನು ಬಗ್ಗಿಸಿದೆ. ಅದಕ್ಕೆ ಸರಿಯಾಗಿ, ಶಾಸಕಾಂಗದ ಉನ್ನತ ಸ್ಥಾನದಲ್ಲಿರುವವರು ತಮ್ಮ ಪೊಲಿಟಿಕಲ್‌ ಬಾಸ್‌ಗಳನ್ನು ಮೆಚ್ಚಿಸಲು ತಮ್ಮದೇ ಸಮುದಾಯದ (ಅಧಿಕಾರಿ ವರ್ಗ) ಮೇಲೆ ದಬ್ಬಾಳಿಕೆ ಮಾಡುತ್ತಾರೆ. 2010ರಲ್ಲಿ ಕೇಂದ್ರ ಸರ್ಕಾರದ ಆಡಳಿತ ಸುಧಾರಣೆ ಇಲಾಖೆ ಒಂದು ಸಮೀಕ್ಷೆ ನಡೆಸಿತ್ತು. ಅದರಂತೆ, ಐಎಎಸ್‌ ಅಧಿಕಾರಿಗಳು ರಾಜೀನಾಮೆ ನೀಡಲು ಅಥವಾ ಸ್ವಯಂ ನಿವೃತ್ತಿ ಪಡೆಯಲು ಕಾರಣಗಳನ್ನು ಪಟ್ಟಿ ಮಾಡಲಾಗಿತ್ತು. ಅದರಲ್ಲಿ ಎರಡನೇ ಅತಿ ದೊಡ್ಡ ಕಾರಣವೆಂದರೆ ತಮ್ಮ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪ ಎನ್ನುವುದು. ಅದರ ಜತೆಗೆ ತಮಗೆ ತಕ್ಕುದಲ್ಲದ ಸ್ಥಳಕ್ಕೆ ವರ್ಗಾವಣೆ, ಬೇಸರ, ಗುರುತಿಸುವಿಕೆ ಇಲ್ಲದಿರುವುದು, ಮುಂತಾದ ಕಾರಣವನ್ನೂ ಅನೇಕರು ನೀಡಿದ್ದರು.

ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡುತ್ತಿರುವುದೇ ಅಧಿಕಾರಿ ವರ್ಗದ ಮೇಲ್‌ಸ್ತರದಲ್ಲಿರುವವರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಸುವುದು ಬೇಡ ಎಂದು ಹೇಳಿದ್ದೆವು ಎಂದು ಇದೀಗ ಬೆಂಗಳೂರು ಪೊಲೀಸರು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ನಿಜವಾಗಲೂ ಈ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಿಲ್ಲ ಎಂದಿದ್ದರೆ ತಮ್ಮ ರಾಜಕೀಯ ಬಾಸ್‌ಗಳಿಗೆ ಅದನ್ನು ಕಟ್ಟುನಿಟ್ಟಾಗಿ ಏಕೆ ಹೇಳಲಿಲ್ಲ? ತಮ್ಮ ತರಬೇತಿ, ಅನುಭವದ ಆಧಾರದಲ್ಲಿ ರಾಜಕಾರಣಿಗಳಿಗೆ ಬುದ್ಧಿ ಏಕೆ ಹೇಳಲಿಲ್ಲ? ಇಷ್ಟರ ನಂತರವೂ ರಾಜಕಾರಣಿಗಳು ಒತ್ತಡ ಹೇರುತ್ತಿದ್ದಾರೆ ಎಂದರೆ, ‘ನಾನೂ ಸಂವಿಧಾನದ ಒಂದು ಅಂಗವಾಗಿದ್ದೇನೆ, ನಿಮ್ಮಷ್ಟೇ ಸಾಮಾಜಿಕ ಹೊಣೆಗಾರಿಕೆ ನನಗೂ ಇದೆ, ಕಾರ್ಯಕ್ರಮ ಆಯೋಜನೆ ಸಾಧ್ಯವಿಲ್ಲ’ ಎಂದು ಏಕೆ ಹೇಳಲಿಲ್ಲ? ವೃತ್ತಿಪರತೆ ಎನ್ನುವುದು ಎಲ್ಲಿ ಹೋಯಿತು? ಏಕೆಂದರೆ ಇವತ್ತು ರಾಜಕಾರಣಿಗಳ ಮಾತು ಕೇಳಲಿಲ್ಲವೆಂದರೆ ನಾಳೆ ‘ನೀರು ನೆರಳಿಲ್ಲದ ಕಡೆಗೆ’ ಆ ಪೊಲೀಸ್‌ ಅಧಿಕಾರಿ ವರ್ಗಾವಣೆ ಆಗುವ ಸಾಧ್ಯತೆ ಇತ್ತು. ಭವಿಷ್ಯದಲ್ಲಿ ಕಮಿಷನರ್‌, ಡಿಜಿಪಿ ಮುಂತಾದ ಹುದ್ದೆಗೆ ಪ್ರಮೋಷನ್‌ ಸಮಯ ಬಂದಾಗ ರಾಜಕಾರಣಿಗಳು ತಪ್ಪಿಸುತ್ತಿದ್ದರು ಎಂಬ ಭಯವೇ ಇಂತಹ ಒತ್ತಡಗಳಿಗೆ ಬಗ್ಗುವಂತೆ ಮಾಡುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣವಷ್ಟೆ ಅಲ್ಲ. ಇದೀಗ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಅವುಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ, ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದೆ, ಹಸಿವು ನೀಗುತ್ತಿದೆ ಎಂಬ ಅನೇಕ ವಾದಗಳಿವೆ. ಅವುಗಳೆಲ್ಲವೂ ಸತ್ಯ ಎಂದೇ ಪರಿಗಣಿಸೋಣ. ಆದರೆ ಗೃಹಲಕ್ಷ್ಮೀ ಯೋಜನೆಯಲ್ಲಿ ವರ್ಷಕ್ಕೆ ಸುಮಾರು 30 ಸಾವಿರ ಕೋಟಿ ರೂ. ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಹೀಗೆ ಜಮಾ ಮಾಡಲು ಯಾವುದಾದರೂ ಸಮೀಕ್ಷೆಗಳು, ಅಧ್ಯಯನಗಳು, ಆರ್ಥಿಕ ವರದಿಗಳು... ಇತ್ಯಾದಿ ಯಾವುದಾದರೂ ಇದೆಯೇ? ಇಷ್ಟು ಹಣವನ್ನು ನೇರವಾಗಿ ಖಾತೆಗೆ ನೀಡಲು ಯಾವ ಆರ್ಥಿಕತೆಯೂ ಒಪ್ಪುವುದಿಲ್ಲವಲ್ಲ? ಎಂದು ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರ?

ಇವತ್ತು ಸರ್ಕಾರಿ ಶಾಲೆ ಕಟ್ಟಡಗಳು ಸೋರುತ್ತಿವೆ, ಪ್ರತಿ ವರ್ಷ ಅನೇಕ ಕಟ್ಟಡಗಳು ನೆಲಕ್ಕೆ ಉರುಳುತ್ತಿವೆ. ಅನೇಕ ಆಸ್ಪತ್ರೆಗಳಿಗೆ ಸುಸಜ್ಜಿತ ಕಟ್ಟಡಗಳೇ ಇಲ್ಲ. ಇಂತಹದ್ದಕ್ಕೆಲ್ಲ ಹಣ ಹೆಚ್ಚು ನೀಡಿ ಎಂದಾಗ ಕೊಂಕು ತೆಗೆದು, ಆರ್ಥಿಕ ಹೊರೆಯ ಕಾರಣ ನೀಡುವ ಆರ್ಥಿಕ ಇಲಾಖೆ ಅಧಿಕಾರಿಗಳು ಗ್ಯಾರಂಟಿಗೆ 30 ಸಾವಿರ ಕೋಟಿ ರೂ. ಎತ್ತಿ ಕೊಡುವಾಗ ಯಾವ ಮಾನದಂಡವನ್ನು ಅನುಸರಿಸಿದರು? ಇಲ್ಲಿ ಗ್ಯಾರಂಟಿಯದ್ದು ಒಂದು ಉದಾಹರಣೆ ಅಷ್ಟೆ. ಆದರೆ ಕಾರ್ಯಾಂಗವು ತನ್ನತನವನ್ನು ಮರೆತು ತಾನು ಶಾಸಕಾಂಗದ ಅಡಿಯಾಳು ಎಂಬಂತೆ ವರ್ತನೆ ಮಾಡುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ, ಈ ನಡವಳಿಕೆಯು ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲ ಕಾಲದಲ್ಲೂ ನಡೆದಿದೆ.

ಮನೆ ಸರಿಪಡಿಸಿಕೊಳ್ಳಬೇಕಿದೆ

ಕಾರ್ಯಾಂಗದಲ್ಲಿಯೂ ಮುಖ್ಯವಾಗಿ ಎರಡು ವಿಧವಿದೆ. ಮೊದಲನೆಯದು ಅಖಿಲ ಭಾರತೀಯ ಸೇವೆಗಳು ಹಾಗೂ ರಾಜ್ಯ ಸರ್ಕಾರದ ಸೇವೆಗಳು. ಅಖಿಲ ಭಾರತೀಯ ಸೇವೆ ಅಧಿಕಾರಿಗಳು ತಮ್ಮನ್ನು ತಾವು ಸ್ವರ್ಗದಿಂದ ಇಳಿದುಬಂದವರಂತೆ ವರ್ತಿಸುತ್ತಾರೆ, ತಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಬಹುತೇಕ ರಾಜ್ಯ ಅಧಿಕಾರಿಗಳ ಮಾತು. IAS ಹಾಗೂ Non-IAS ಎಂಬ ವರ್ಗೀಕರಣವನ್ನೇ ಮಾಡಿಕೊಂಡಿದ್ದಾರೆ. ಅದರಲ್ಲಿಯೂ KASನಿಂದ ಪದೋನ್ನತಿ ಹೊಂದಿ IAS ಆದರೂ ಅಲ್ಲೊಂದು ವರ್ಗೀಕರಣ. Pure IAS Cadre ಎಂಬ ಶ್ರೇಷ್ಠತೆ. ಹೀಗೆ ಕಾರ್ಯಾಂಗವು ತನ್ನ ಮನೆಯನ್ನು ತಾನು ಮೊದಲು ಸರಿಪಡಿಸಿಕೊಳ್ಳಬೇಕಿದೆ. ತಾನು ಸಂವಿಧಾನದ ಮೂರು ಅಂಗಗಳಲ್ಲಿ ಒಂದು ಎಂಬುದನ್ನು ಅರಿತು ಅದರಂತೆ ನಡೆಯಬೇಕಿದೆ. ರಾಜಕೀಯ ಪಕ್ಷಗಳು ಬರುತ್ತವೆ, ಅಧಿಕಾರ ನಡೆಸುತ್ತವೆ, ಬದಲಾಗುತ್ತವೆ. ಆದರೆ ಸರ್ದಾರ್‌ ಪಟೇಲರು ಹೇಳಿದಂತೆ ದೇಶದ ‘ಉಕ್ಕಿನ ಚೌಕಟ್ಟು’ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಆಡಳಿತದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ರಾಜಕಾರಣಿಗಳೇ ಕಾರಣ ಎನ್ನುವ ಹೊಣೆಗೇಡಿತನದಿಂದ ಹೊರಬಂದು ಉತ್ತರದಾಯಿತ್ವವನ್ನು ಹೊರುವುದು ಈ ಪ್ರಕ್ರಿಯೆಯ ಮೊದಲ ಹಂತ.

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಕ್ಷಣ ದಾಳಿ ನಿಲ್ಲಿಸುವಂತೆ ಟ್ರಂಪ್ ಆದೇಶಕ್ಕೆ ಡೋಂಟ್ ಕೇರ್: ಇಸ್ರೇಲ್ ದಾಳಿಗೆ ಇಬ್ಬರು ಮಕ್ಕಳು ಸೇರಿ ಏಳು ಮಂದಿ ಪ್ಯಾಲೆಸ್ತೀನಿಯರು ಬಲಿ

Israel -Gaza Conflict: ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಒಪ್ಪಿಗೆ; ಶಾಂತಿ ಒಪ್ಪಂದದಲ್ಲಿ ಮಹತ್ವದ ಬೆಳವಣಿಗೆ, ಟ್ರಂಪ್ ನಡೆಗೆ ಪ್ರಧಾನಿ ಮೋದಿ ಸ್ವಾಗತ

'ದುರ್ಗಾ ಪೂಜೆ ವೇಳೆ ನಟಿ Kajol ಖಾಸಗಿ ಭಾಗ ಮುಟ್ಟಿ ಅನುಚಿತ ವರ್ತನೆ'; ಸಾಮಾಜಿಕ ಜಾಲತಾಣದಲ್ಲಿ Video ವೈರಲ್, ಅಸಲೀಯತ್ತೇನು?

'Greater Bengaluru Authority' ವ್ಯಾಪ್ತಿಯಲ್ಲಿ ಇಂದಿನಿಂದ ಜಾತಿಗಣತಿ: 17 ಸಾವಿರ ಸಿಬ್ಬಂದಿಗಳ ನಿಯೋಜನೆ, ಅನಾವಶ್ಯಕ ಗೈರಾದವರಿಗೆ ಕಠಿಣ ಕ್ರಮದ ಎಚ್ಚರಿಕೆ..!

ದಸರಾ ಪರೇಡ್​ನಲ್ಲಿ ಸಿಎಂ ಜತೆ ಸಚಿವ ಮಹದೇವಪ್ಪ ಮೊಮ್ಮಗನ ದರ್ಬಾರ್: ವಿವರಣೆ ಕೋರಿದ ಕಾಂಗ್ರೆಸ್ ಹೈ ಕಮಾಂಡ್!

SCROLL FOR NEXT