ಅಂಕಣಗಳು

ಗಗನಯಾತ್ರಿ ಪಿನ್ ಇತಿಹಾಸ: 634 ಸಾಧಕರ ಯಾದಿಗೆ ಸೇರಿದ ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)

"ನಾನು ನಂಬರ್ 634 ಎನಿಸಿಕೊಂಡಿದ್ದೇನೆ. ಇದು ನಿಜಕ್ಕೂ ಶ್ರೇಷ್ಠ ಗೌರವ" ಎಂದು ಶುಭಾಂಶು ಶುಕ್ಲಾ ಸಂಭ್ರಮದಿಂದ ಹೇಳಿದ್ದು, ಐಎಸ್ಎಸ್ ಮತ್ತು ಆಕ್ಸಿಯಮ್ ಸಿಬ್ಬಂದಿಗಳೂ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. "

ಗುರುವಾರ, ಜೂನ್ 26ರ ಸಂಜೆ, ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದಾಗ, ಕಮಾಂಡರ್ ಪೆಗ್ಗಿ ವ್ಹಿಟ್ಸನ್ ಶುಕ್ಲಾರಿಗೆ ಒಂದು ವಿಶೇಷ ಸಂಖ್ಯೆಯಾದ - 634 ಅನ್ನು ನೀಡಿದರು. ಈ ಮೂಲಕ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸಿದ 634ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.

"ನಾನು ನಂಬರ್ 634 ಎನಿಸಿಕೊಂಡಿದ್ದೇನೆ. ಇದು ನಿಜಕ್ಕೂ ಶ್ರೇಷ್ಠ ಗೌರವ" ಎಂದು ಶುಭಾಂಶು ಶುಕ್ಲಾ ಸಂಭ್ರಮದಿಂದ ಹೇಳಿದ್ದು, ಐಎಸ್ಎಸ್ ಮತ್ತು ಆಕ್ಸಿಯಮ್ ಸಿಬ್ಬಂದಿಗಳೂ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. "ಬಾಹ್ಯಾಕಾಶದಿಂದ ನಾನು ಭೂಮಿಯನ್ನು ನೋಡಿರುವಂತೆ ನೋಡುವ ಅವಕಾಶ ಬಹಳ ಕಡಿಮೆ ಜನರಿಗೆ ಲಭಿಸಿದೆ. ಆ ನಿಟ್ಟಿನಲ್ಲಿ ಇದು ಬಹುದೊಡ್ಡ ಅದೃಷ್ಟ" ಎಂದು ಶುಕ್ಲಾ ಹೇಳಿದ್ದಾರೆ.

ಶುಕ್ಲಾ ಜೊತೆ ಬಾಹ್ಯಾಕಾಶ ನಿಲ್ದಾಣಕ್ಕೆ ಎಎಕ್ಸ್-4 ಯೋಜನೆಯ ಭಾಗವಾಗಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಆಗಮಿಸಿರುವ ಪೋಲೆಂಡಿನ ಸ್ಲಾವೋ ಉಜ್ನಾನ್ಸ್ಕಿ ವಿಸ್ನೀವ್ಸ್ಕಿ ಮತ್ತು ಹಂಗರಿಯ ಟಿಬರ್ ಕಾಪು ಅವರಿಗೂ ವ್ಹಿಟ್ಸನ್ ವಿಶೇಷವಾದ ಬಂಗಾರದ ಪಿನ್‌ಗಳನ್ನು ನೀಡಿದ್ದಾರೆ. ಈ ಪಿನ್ ಮಧ್ಯಭಾಗದಲ್ಲಿ ಸಣ್ಣದಾದ, ಐದು ಅಂಚುಗಳನ್ನು ಹೊಂದಿರುವ ನಕ್ಷತ್ರವನ್ನು ಹೊಂದಿದ್ದು, ಅದರಿಂದ ಎರಡು ಕಿರಣಗಳು ಬೀರುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಬಾಹ್ಯಾಕಾಶ ಪ್ರಯಾಣದ ಪರಿಕಲ್ಪನೆಯನ್ನು ಚಿತ್ರಿಸುತ್ತದೆ. ಈ ಒಟ್ಟಾರೆ ವಿನ್ಯಾಸವನ್ನು ಬಂಗಾರದ ವೃತ್ತವೊಂದು ಸುತ್ತುವರಿದಿದೆ. ಈ ಪಿನ್‌ಗಳನ್ನು ಭೂಮಿಯ ಕಕ್ಷೆಗೆ ಪ್ರವೇಶಿಸಿರುವವರಿಗೆ ನೀಡಲಾಗುತ್ತದೆ. ಉಜ್ನಾನ್ಸ್ಕಿ ವಿಸ್ನೀವ್ಸ್ಕಿ ಮತ್ತು ಟಿಬರ್ ಕಾಪು ಕ್ರಮವಾಗಿ ಭೂಮಿಯ ಪರಿಭ್ರಮಣೆ ನಡೆಸಿದ 635 ಮತ್ತು 636ನೇ ವ್ಯಕ್ತಿಗಳೆನಿಸಿದರು.

ಗಗನಯಾತ್ರಿಗಳು ಭೂಮಿಯ ಪರಿಭ್ರಮಣೆ ಪೂರ್ಣಗೊಳಿಸಿದ ಬಳಿಕ ನೀಡಲಾಗುವ ಈ ಪಿನ್ ಅನ್ನು ಯುನಿವರ್ಸಲ್ ಆ್ಯಸ್ಟ್ರೋನಾಟ್ ಇನ್‌ಸೈನಿಯಾ ಎಂದು ಕರೆಯಲಾಗುತ್ತದೆ. ಇದನ್ನು ಅಸೋಸಿಯೇಷನ್ ಆಫ್ ಸ್ಪೇಸ್ ಎಕ್ಸ್‌ಪ್ಲೋರರ್ಸ್ (ಎಎಸ್ಇ) ಎಂಬ ಸಂಸ್ಥೆ 2015ರಲ್ಲಿ ನಿರ್ಮಿಸಿತು. ಆ್ಯಂಡಿ ಟರ್ನೇಜ್ ಮತ್ತು ಮೈಕೇಲ್ ಲೊಪೆ ಅಲೆಗ್ರಿಯಾ ಎಂಬ ಇಬ್ಬರು ವ್ಯಕ್ತಿಗಳು ಇದನ್ನು ಪರಿಚಯಿಸಿದರು. ಯಾವುದೇ ದೇಶದ, ಯಾವುದೇ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳು ಭೇದವಿಲ್ಲದೆ ಹೆಮ್ಮೆಯಿಂದ ಧರಿಸುವಂತಹ ಸಂಕೇತವನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು.

2021ರಲ್ಲಿ, ಸಂದರ್ಶನವೊಂದರಲ್ಲಿ ಮಾತನಾಡಿದ ಜಪಾನಿನ ಗಗನಯಾತ್ರಿ ಸೋಯ್ಚಿ ನೊಗುಚಿ "ಯೂರಿ ಗಗಾರಿನ್ ಅವರ ಮೊದಲ ಗಗನಯಾತ್ರೆ ನಡೆದು 60 ವರ್ಷಗಳು ಕಳೆದರೂ, ಬಾಹ್ಯಾಕಾಶಕ್ಕೆ ತೆರಳುವ ಎಲ್ಲ ಗಗನಯಾತ್ರಿಗಳು ಧರಿಸುವಂತಹ ಒಂದು ಸಾಮಾನ್ಯ ಚಿಹ್ನೆಯನ್ನು ಇನ್ನೂ ರಚಿಸಲಾಗಿರಲಿಲ್ಲ. ಆದರೆ, ಈಗ ಎಎಸ್ಇ ಎಲ್ಲ ಗಗನಯಾತ್ರಿಗಳು ಹೆಮ್ಮೆಯಿಂದ ಧರಿಸಬಹುದಾದಂತಹ ಒಂದು ಸಂಕೇತವನ್ನು ಸಿದ್ಧಪಡಿಸಿ, ಅನುಮತಿ ನೀಡಿದೆ" ಎಂದು ವಿವರಿಸಿದ್ದರು.

ಸೊಯ್ಚಿ ನೊಗುಚಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಎಕ್ಸ್ಪೆಡಿಷನ್ 64 ಯೋಜನೆಯ ಅಂಗವಾಗಿ ತೆರಳಿದಾಗ ಈ ಪಿನ್ ಅನ್ನು ಧರಿಸಿದ ಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಯೋಜನೆಯ ಬಳಿಕ, ಈ ಪಿನ್ ಅನ್ನು ಯೂರಿ ಗಗಾರಿನ್ ಅವರು 1961ರ ಐತಿಹಾಸಿಕ ಬಾಹ್ಯಾಕಾಶ ಯಾತ್ರೆಗೆ ತೆರಳಿ, ಬಾಹ್ಯಾಕಾಶಕ್ಕೆ ಸಾಗಿದ ಮೊದಲ ಮಾನವ ಎಂಬ ಹೆಮ್ಮೆಗೆ ಪಾತ್ರರಾದುದನ್ನು ಸ್ಮರಿಸುವ ಸಲುವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಸೊಯುಜ್-ಟಿ10 ಯೋಜನೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರು ಭೂಮಿಯ ಪರಿಭ್ರಮಣೆ ನಡೆಸಿದ 138ನೇ ವ್ಯಕ್ತಿ ಎನಿಸಿಕೊಂಡರು. ಈಗ, ಶುಭಾಂಶು ಶುಕ್ಲಾ ಅವರೂ ಸಹ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಎರಡು ವಾರಗಳ ಸಂಶೋಧನೆಗಳಲ್ಲಿ ತೊಡಗಲು ಆರಂಭಿಸುತ್ತಾ, ಗಗನಯಾತ್ರಿ ಪಿನ್ ಅನ್ನು ಹೆಮ್ಮೆಯಿಂದ ಧರಿಸಿದ್ದಾರೆ.

ಗಗನಯಾತ್ರಿ ಪಿನ್ ಇತಿಹಾಸ (Astronaut PIN history)

ಅಸೋಸಿಯೇಷನ್ ಆಫ್ ಸ್ಪೇಸ್ ಎಕ್ಸ್‌ಪ್ಲೋರರ್ಸ್ (ಎಎಸ್ಇ) ಎರಡು ರೀತಿಯ ಪಿನ್‌ಗಳನ್ನು ಗಗನಯಾತ್ರಿಗಳಿಗೆ ನೀಡುತ್ತದೆ.

ಆರ್ಬಿಟಲ್ ಪಿನ್ - ಇದನ್ನು ತಮ್ಮ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಯ ಸಂಪೂರ್ಣ ಪರಿಭ್ರಮಣೆ ನಡೆಸಿದ ಶುಭಾಂಶು ಶುಕ್ಲಾ ಮತ್ತು ಎಎಕ್ಸ್-4 ಸಿಬ್ಬಂದಿಗಳಂತಹ ಗಗನಯಾತ್ರಿಗಳಿಗೆ ನೀಡಲಾಗುತ್ತದೆ. ಇಂತಹ ಹಾರಾಟವನ್ನು ಆರ್ಬಿಟಲ್ ಫ್ಲೈಟ್ ಎಂದು ಕರೆಯಲಾಗುತ್ತದೆ.

ಸಬ್ ಆರ್ಬಿಟಲ್ ಪಿನ್ - ಇದನ್ನು ಬಾಹ್ಯಾಕಾಶದ ಗಡಿಯನ್ನು ದಾಟುವ, ಆದರೆ ಭೂಮಿಯ ಸಂಪೂರ್ಣ ಪರಿಭ್ರಮಣೆ ನಡೆಸದ ಗಗನಯಾತ್ರಿಗಳಿಗೆ ನೀಡಲಾಗುತ್ತದೆ.

ಇವೆರಡೂ ಪಿನ್‌ಗಳನ್ನು ತಮ್ಮ ಯೋಜನೆಗಾಗಿ ಅಂತರಿಕ್ಷಕ್ಕೆ ತೆರಳುವ ಬಾಹ್ಯಾಕಾಶ ಯಾತ್ರಿಗಳನ್ನು ಗೌರವಿಸುವ ಸಲುವಾಗಿಯೇ ನೀಡಲಾಗುತ್ತದೆ.

ಎಎಸ್ಇ ಎಲ್ಲರಿಗೂ ಸಾಮಾನ್ಯವಾದ ಪಿನ್ ತಯಾರಿಸುವ ಮುನ್ನ, ಪ್ರತಿಯೊಂದು ದೇಶವೂ ತನ್ನದೇ ಆದ ವಿನ್ಯಾಸವನ್ನು ಹೊಂದಿತ್ತು. ಉದಾಹರಣೆಗೆ, ನಾಸಾ ಅಮೆರಿಕಾದ ಗಗನಯಾತ್ರಿಗಳಿಗೆ ತನ್ನದೇ ಆದ ಪಿನ್‌ಗಳನ್ನು ನೀಡುತ್ತಿತ್ತು. ಅಮೆರಿಕಾದ ಮೊದಲ ಗಗನಯಾತ್ರಿ ಪಿನ್‌ಗಳನ್ನು 1961ರಲ್ಲಿ ಮರ್ಕ್ಯುರಿ 7 ಸಿಬ್ಬಂದಿಗಳಿಗೆ ನೀಡಲಾಯಿತು. ಅವರು ಬಾಹ್ಯಾಕಾಶಕ್ಕೆ ತೆರಳಲು ಆಯ್ಕೆಯಾದ ಅಮೆರಿಕಾದ ಮೊದಲ ಗಗನಯಾತ್ರಿಗಳಾಗಿದ್ದರು.

1964ರಲ್ಲಿ ನಾಸಾ ತನ್ನ ಗಗನಯಾತ್ರಿ ಪಿನ್‌ಗಳ ಹೊಸ ಆವೃತ್ತಿಯನ್ನು ನಿರ್ಮಿಸಿತು. ಈ ಪಿನ್ ಕಿರಣಗಳ ವಿನ್ಯಾಸ ಹೊರಬರುವ ನಕ್ಷತ್ರ ಮತ್ತು ಕೆಳಭಾಗದಲ್ಲಿ ಸಣ್ಣ ವೃತ್ತವನ್ನು ಒಳಗೊಂಡಿತ್ತು. ನಾಸಾ ತರಬೇತಿ ಪೂರ್ಣಗೊಳಿಸುವ ತನ್ನ ಗಗನಯಾತ್ರಿಗಳಿಗೆ ಬೆಳ್ಳಿಯ ಪಿನ್ ನೀಡುತ್ತದೆ. ಅವರು ಬಾಹ್ಯಾಕಾಶಕ್ಕೆ ತೆರಳಿದ ಬಳಿಕ, ಅವರಿಗೆ ಚಿನ್ನದ ಪಿನ್ ನೀಡಲಾಗುತ್ತದೆ.

ಇಲ್ಲಿಯ ತನಕ, ಚಂದ್ರನ ಮೇಲೆ ಎರಡು ನಾಸಾದ ಬೆಳ್ಳಿಯ ಪಿನ್‌ಗಳಿವೆ. ಒಂದು ಪಿನ್ ಗಗನಯಾತ್ರಿ ಆಲನ್ ಬೀನ್ ಅವರಿಗೆ ಸೇರಿದ್ದರೆ, ಇನ್ನೊಂದು ಪಿನ್ ಕ್ಲಿಫ್ಟನ್ ವಿಲಿಯಮ್ಸ್ ಅವರದ್ದಾಗಿದೆ. 1969ರಲ್ಲಿ ಬೀನ್ ಚಂದ್ರನ ಅಂಗಳಕ್ಕೆ ತೆರಳಿದಾಗ, ಅವರು ತನ್ನೊಡನೆ 1967ರ ಜೆಟ್ ಅಪಘಾತದಲ್ಲಿ ಮೃತಪಟ್ಟ ತನ್ನ ಸ್ನೇಹಿತ ವಿಲಿಯಮ್ಸ್ ಬೆಳ್ಳಿಯ ಪಿನ್ ಅನ್ನೂ ಒಯ್ದು, ಅಗಲಿದ ಸ್ನೇಹಿತನಿಗೆ ಗೌರವ ಸಲ್ಲಿಸಿದ್ದರು. ವಿಲಿಯಮ್ಸ್ ಗಗನಯಾತ್ರಿ ತರಬೇತಿ ಪಡೆದಿದ್ದರೂ, ಅವರಿಗೆ ಬಾಹ್ಯಾಕಾಶಕ್ಕೆ ತೆರಳಲು ಅವಕಾಶ ಲಭಿಸಿರಲಿಲ್ಲ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT