ಡಿಕೆ ಶಿವಕುಮಾರ್-ಮಲ್ಲಿಕಾರ್ಜುನ್ ಖರ್ಗೆ-ಸಿದ್ದರಾಮಯ್ಯ 
ಅಂಕಣಗಳು

ಸಿಎಂ ಸ್ಥಾನ: ಸಿದ್ದು-ಡಿಕೆಶಿ ಆಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಸುಸ್ತು (ಸುದ್ದಿ ವಿಶ್ಲೇಷಣೆ)

ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ಪುನಾರಚನೆ ಆದರೆ ಕಾಂಗ್ರೆಸ್ ಬೆಳವಣಿಗೆಗಳ ದಿಕ್ಕು ಸ್ಪಷ್ವವಾಗಬಹುದು. ಈಗಿನ ಸಂದರ್ಭದಲ್ಲಿ 35ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ತ್ಯಜಿಸಿ ಹೋಗುತ್ತಾರೆಂಬುದು ಬರೀ ಊಹಾಪೋಹ.

ಬಜೆಟ್ ಅಧಿವೇಶನ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣ ಗಣನೆ ಆರಂಭವಾಗಲಿದೆಯ?

ರಾಜ್ಯ ಕಾಂಗ್ರೆಸ್ ನಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುವುದು ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದೆ. ಬರುವ ಮೇ ತಿಂಗಳಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬಲಿದೆ. ಇದೇ ಸಂದರ್ಭದಲ್ಲಿ ಈ ಹಿಂದೆ ಹೈಕಮಾಂಡ್ ಮಟ್ಟದಲ್ಲಿ ಆಗಿರುವ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕೆಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ದಿಲ್ಲಿ ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಯಾವುದೇ ಸಂದರ್ಭ ಎದುರಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಈಗಾಗಲೇ ತಮ್ಮ ಬೆಂಬಲಿಗೆ ಸಚಿವರ ಮೂಲಕ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಿರುವಾಗ ದಿಲ್ಲಿ ನಾಯಕರು ಕೈಗೊಳ್ಳಬಹುದಾದ ತೀರ್ಮಾನದತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ಅಥವಾ ಕೈಗೊಳ್ಳದಿದ್ದರೂ ಕಷ್ಟ ಎಂಬ ಇಕ್ಕಟ್ಟಿನ ಸ್ಥಿತಿಗೆ ಕಾಂಗ್ರೆಸ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಟ್ಟಿದ್ದಾರೆ. ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮನವೊಲಿಸುವ ಪ್ರಯತ್ನಗಳು ನಡೆದರೂ ಅದಕ್ಕೆಲ್ಲ ಅವರು ಒಪ್ಪುವುದು ಸಾಧ್ಯವೇ ಇಲ್ಲ. ಹಾಗೂ ಒಂದುವೇಳೆ ಬಲವಂತದ ಕ್ರಮಕ್ಕೆ ಮುಂದಾದರೆ ಸರ್ಕಾರವೇ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವುದಿಲ್ಲ. ಕಾಂಗ್ರೆಸ್ ಶಕ್ತಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಆ ಪಕ್ಷವನ್ನು ನಂಬಿ ಕೂರಲು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ತಯಾರಿಲ್ಲ. ಪದಚ್ಯುತಿಯ ಸನ್ನಿವೇಶ ಎದುರಾದರೆ ಅವರ ಬೆಂಬಲಿಗ ಶಾಸಕರು ಒಂದಷ್ಟು ಮಂದಿ ಬಿಜೆಪಿ ಸೇರಿ ಮುಂದಿನ ದಾರಿ ಕಂಡುಕೊಳ್ಳುವ ಆಲೋಚನೆಯಲ್ಲಿದ್ದಾರೆ. ಮತ್ತೊಂದು ಕಡೆ ಒಪ್ಪಂದದಂತೆ ಅಧಿಕಾರ ಹಸ್ತಾಂತರ ಆಗದಿದ್ದರೆ ಮುಂದಿನ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಡಿ.ಕೆ.ಶಿವಕುಮಾರ್ ಇತ್ತೀಚೆಗೆ ದಿಲ್ಲಿ ವರಿಷ್ಟರಿಗೆ ಸ್ಪಷ್ಟವಾಗಿ ತಿಳಿಸಿ ಬಂದಿದ್ದಾರೆ. ಹೀಗಾಗಿ ಮೇ ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭವಿಷ್ಯ ಏನೆಂಬುದೇ ಸದ್ಯ ಪ್ರಶ್ನೆಯಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹಿಂದುತ್ವದ ಸಿದ್ದಾಂತಗಳಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ. ಇತ್ತೀಚೆಗೆ ಅವರು ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿದ್ದು,ಹೀಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅವರನ್ನು ವಿಶೇಷ ಅತಿಥಿಯಾಗಿ ಸತ್ಕರಿಸಿದ್ದು, ಅಲ್ಲಿಂದ ವಾಪಸು ಬಂದ ನಂತರ ಕುಂಭ ಮೇಳದ ವ್ಯವಸ್ಥೆಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಹೊಗಳಿದ್ದು. ಇದಾದ ನಂತರ ತೀರಾ ಇತ್ತೀಚೆಗೆ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮದಲ್ಲಿ ಶಿವರಾತ್ರಿ ಆಚರಣೆ ನೆಪದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾಗಿದ್ದು,ಇತ್ತೀಚೆಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಹೆಚ್ಚು ಹೆಚ್ಚು ಕೇಂದ್ರದ ಸಚಿವರನ್ನು ಭೇಟಿ ಆಗುತ್ತಿರುವುದೂ ಸೇರಿದಂತೆ ಅವರ ಹಲವು ಚಟುವಟಿಕೆಗಳನ್ನು ಗಮನಿಸಿದರೆ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಬಿಜೆಪಿ ಸೇರಿದರೂ ಆಶ್ಚರ್ಯೇನೂ ಇಲ್ಲ ಎಂಬ ವದಂತಿಗಳು ಹಬ್ಬಿವೆ.

ಆದರೆ ಇವೆಲ್ಲವನ್ನೂ ಜಾಣತನದಿಂದಲೇ ನಿಭಾಯಿಸುತ್ತಾ ಬಂದಿರುವ ಅವರು ಯಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರ ಜತೆಗೇ ಮುಂದಿನ ಚುನಾವಣೆ ತನ್ನ ನಾಯಕತ್ವದಲ್ಲೇ ನಡೆಯುವುದಾಗಿ ಅವರು ಬಹಿರಂಗವಾಗೇ ಹೇಳಿರುವುದು ಕಾಂಗ್ರೆಸ್ ನಲ್ಲಿ ಹಲವು ತಲ್ಲಣಗಳಿಗೆ ಕಾರಣವಾಗಿದೆ. ತನ್ನ ವಿರುದ್ಧ ಬಹಿರಂಗವಾಗೇ ಚಟುವಟಿಕೆ ನಡೆಸುತ್ತಿರುವ ಬೆಂಬಲಿಗರ ಗುಂಪಿನ ವರ್ತನೆಗಳ ಬಗ್ಗೆ ಸ್ವಯಂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿರುವುದು ಅವರನ್ನು ಕೆರಳಿಸಿದೆ. ಈ ಚಟುವಟಿಕೆಗಳ ಹಿಂದೆ ಸಿದ್ದರಾಮಯ್ಯ ಕೃಪಾಶೀರ್ವಾದ ಇದೆ ಎಂಬ ತೀರ್ಮಾನಕ್ಕೆ ಬಂದಿರುವ ಶಿವಕುಮಾರ್ ಇತ್ತೀಚೆಗೆ ದಿಲ್ಲಿಯಲ್ಲಿ ಪಕ್ಷದ ವರಿಷ್ಟರನ್ನು ಭೇಟಿಯಾದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಲು ತಾನು ಸಿದ್ಧ ಆದರೆ ಈ ಹಿಂದೆ ಆದ ಒಪ್ಪಂದದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೊಡಿಸಿ ತನ್ನನ್ನು ಮುಖ್ಯಮಂತ್ರಿ ಮಾಡಬೇಕು ಅಥವಾ ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಆಗಬೇಕು. ಅದಿಲ್ಲವಾದರೆ ನನ್ನ ದಾರಿ ನನಗೆ ಎಂದೂ ಸ್ಪಷ್ಟ ಮಾತುಗಳಲ್ಲಿ ಹೇಳಿ ಬಂದಿದ್ದಾರೆ. ಈ ಮಾತುಗಳಿಂದ ಕಾಂಗ್ರೆಸ್ ನ ದಿಲ್ಲಿ ನಾಯಕರು ಕಸಿವಿಸಿ ಗೊಂಡಿರುವುದಂತೂ ಸತ್ಯ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೈ ಹಾಕಿದ್ದೇ ಆದರೆ ಸರ್ಕಾರ ಪತನಗೊಳ್ಳುವುದಷ್ಟೇ ಅಲ್ಲ. ಪಕ್ಷವೂ ಇಬ್ಭಾಗ ಆಗಲಿದೆ. ಹೀಗಾದಾಗ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಇದರಿಂದ ವೈಯಕ್ತಿಕವಾಗಿ ಶಿವಕುಮಾರ್ ಅಥವಾ ಆಯ್ದ ಕೆಲವು ನಾಯಕರಿಗೆ ನಷ್ಟವೇನೂ ಇಲ್ಲವಾದರೂ ಪಕ್ಷದ ಅಸ್ತಿತ್ವಕ್ಕೇ ಪೆಟ್ಟು ಬೀಳುವ ಅಪಾಯಗಳನ್ನು ಆಲೋಚಿಸಿದ್ದಾರೆ. ಈ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ನಿಮ್ಮನ್ನು ಕದಲಿಸುವುದಿಲ್ಲ. ನಿಮ್ಮ ವಿರುದ್ಧ ಚಟುವಟಿಕೆ ನಡೆಸುತ್ತಿರುವ ಕೆಲವು ಸಚಿವರು ಮುಖಂಡರಿಗೆ ಮಾತನಾಡದಂತೆ ಎಚ್ಚರಿಕೆ ನೀಡುತ್ತೇವೆ. ಹಾಗೂ ಮುಂದುವರಿದರೆ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂಬ ಸಮಾಧಾನದ ಮಾತುಗಳನ್ನಾಡಿ ಕಳಿಸಿದ್ದಾರೆ. ಯಾವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೇಂದ್ರದ ನಾಯಕರು ಅಭಯ ನೀಡಿದರೋ ಶಿವಕುಮಾರ್ ಬಿರುಸಾಗಿದ್ದಾರೆ. ಅದರ ಮುಂದುವರಿದ ಭಾಗವೇ ಅವರ ಹೇಳಿಕೆಗಳು ಮತ್ತು ಚಟುವಟಿಕೆಗಳು. ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳ ಚುನಾವಣೆ ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಈ ಹಂತದಲ್ಲಿ ಪಕ್ಷದಲ್ಲಿ ಗೊಂದಲಗಳು ಹೆಚ್ಚಿದರೆ ಚುನಾವಣೆ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ವರಿಷ್ಠರಿಗೆ ಒಂದು ಕಡೆ. ಮತ್ತೊಂದು ಕಡೆ ನಾಯಕತ್ವಕ್ಕೆ ಮೊದಲಿನಿಂದಲೂ ನಿಷ್ಟರಾಗಿ ಹಲವು ಸಂಕಷ್ಟಗಳನ್ನು ಎದುರಿಸಿದರೂ ಪಕ್ಷದಲ್ಲೇ ಉಳಿದಿರುವ ಶಿವಕುಮಾರ್ ಇನ್ನೊಂದು ಕಡೆ. ಇದಷ್ಟೇ ಅಲ್ಲ ,ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಉತ್ತರದ ಚುನಾವಣೆಗಳು ನಡೆದಾಗಲೆಲ್ಲ ಶಿವಕುಮಾರ್ ನೆರವಾಗಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಅವರು ಪಕ್ಷ ತ್ಯಜಿಸಿದರೆ ಅದರಿಂದ ತೀವ್ರ ಸ್ವರೂಪದ ನಷ್ಟ ಉಂಟಾಗಬಹುದು ಎಂಬ ಆತಂಕ ಇನ್ನೊಂದು ಕಡೆ. ಹೀಗಾಗಿ ಹೈಕಮಾಂಡ್ ಇಕ್ಕಟ್ಟಿಗೆ ಸಿಕ್ಕಿದೆ. ಜಾತ್ಯತೀತ ಜನತಾ ದಳ ದುರ್ಬಲವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆದರೆ ಇಡೀ ಒಕ್ಕಲಿಗ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗಿ ಬರುವುದರ ಜತೆಗೇ ಜಾತ್ಯತೀತ ಜನತಾ ದಳ ಮತ್ತೆ ಎದ್ದು ನಿಲ್ಲಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾದರೆ ಅದರಿಂದ ನಷ್ಟ ಉಂಟಾಗುವುದು ಕಾಂಗ್ರೆಸ್ ಪಕ್ಷಕ್ಕೇ ಹೊರತೂ ಬಿಜೆಪಿಗಲ್ಲ ಎಂಬ ಸಂಗತಿಯನ್ನು ಅರಿತಿರುವ ದಿಲ್ಲಿ ನಾಯಕರು ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಮಾಧಾನದ ಮಾತುಗಳನ್ನಾಡಿ ಶಿವಕುಮಾರ್ ರನ್ನು ಕಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಪರಿಶೀಲನೆಯಲ್ಲಿರುವ ಇನ್ನೊಂದು ಸಂಗತಿ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ರಾಜೀನಾಮೆ ಪಡೆಯುವುದು ಅದಕ್ಕೆ ಪ್ರತಿಯಾಗಿ ಅವರು ಹೇಳಿದವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬರುವ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಮಾತಿಗೆ ಮನ್ನಣೆ ನೀಡಿ ಅವರು ಹೇಳಿದವರನ್ನು ಉಪಮುಖ್ಯಮಂತ್ರಿ ಮತ್ತು ಸಚಿವರನ್ನಾಗಿ ಮಾಡುವುದು. ಈ ಸೂತ್ರಕ್ಕೆ ಶಿವಕುಮಾರ್ ಅವರನ್ನು ಒಪ್ಪಿಸುವುದು. ಆದರೆ ಈ ಸೂತ್ರಕ್ಕೆ ಇಬ್ಬರೂ ಒಪ್ಪುವ ಸಾಧ್ಯತೆಗಳು ಇಲ್ಲ. ಹೀಗಾಗಿ ಈ ಬಿಕ್ಕಟ್ಟಿನ ಸನ್ನಿವೇಶದಿಂದ ಯಾವ ರೀತಿ ಪಕ್ಷವನ್ನು ಪಾರು ಮಾಡುವುದು ಎಂಬ ಚಿಂತೆಗೆ ವರಿಷ್ಠರು ಬಿದ್ದಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ದಿನೇ ದಿನೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಸಕರ ಅಸಮಾಧಾನ ಹೆಚ್ಚುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ತಾವು ಪ್ರತಿನಿಧಿಸುವ ಕ್ಷೇತ್ರಗಳ ಅಭಿವೃದ್ಧಿ ಚಟುಟಿಕೆಗಳಿಗೆ ಹಣ ಬಿಡುಗಡೆ ಆಗದೇ ಎರಡು ವರ್ಷಗಳ ಅವಧಿಯಲ್ಲಿ ಅಸಹಾಯಕರಾಗಿ ಕೈ ಕಟ್ಟಿ ಕೂರುವಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ಜನರನ್ನು ಎದುರಿಸುವುದು ಕಷ್ಟ ಎಂಬ ತೀರ್ಮಾನಕ್ಕೆ ಬಹು ಸಂಖ್ಯೆಯ ಶಾಸಕರು ಬಂದಿದ್ದಾರೆ. ಈ ಅಸಮಾಧಾನ ನಾಯಕತ್ವ ಬದಲಾವಣೆಯ ಕೂಗಾಗಿ ಗಟ್ಟಿಗೊಳ್ಳಲು ಇನ್ನೂ ಕಾಲಾವಕಾಶ ಬೇಕಾಗಿದೆ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಬದಲಿಸುವ ದೈರ್ಯದಲ್ಲಿ ಕಾಂಗ್ರೆಸ್ ವರಿಷ್ಠರೂ ಇಲ್ಲ. ಇನ್ನು ಆಡಳಿತದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಮಂಡಿ ನೋವಿನಿಂದಾಗಿಯೂ ಅವರ ಚಟುವಟಿಕೆಗಳಿಗೆ ಸಮಸ್ಯೆಯಾಗಿದ್ದು ಆಡಳಿತದ ಮೇಲೂ ಅದು ಪ್ರಭಾವ ಬೀರಲು ಆರಂಭಿಸಿದೆ. ಇದೇ ನೆಪ ಒಡ್ಡಿ ಅವರನ್ನು ಬದಲಾಯಿಸುವ ವಿಚಾರವೂ ದಿಲ್ಲಿ ಕಾಂಗ್ರೆಸ್ ನಾಯಕರ ವಲಯಗಳಲ್ಲಿ ಚರ್ಚೆ ಆಗುತ್ತಿದೆ. ಈ ಹಿಂದೆ ಇಂಥದೇ ಪ್ರಸಂಗದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ಅನಾರೋಗ್ಯದಿಂದಾಗಿ ಆಡಳಿತ ನಡೆಸಲು ಕಷ್ಟವಾದಾಗ ರಾಜಕೀಯವಾಗಿ ಬಲಿಷ್ಠರಾಗಿದ್ದರೂ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವ ಗಟ್ಟಿ ನಿರ್ಧಾರವನ್ನ ಹೈಕಮಾಂಡ್ ತೆಗೆದುಕೊಂಡಾಗ ಅವರ ಬೆಂಬಲಕ್ಕಿದ್ದ ಅಧಿಕ ಸಂಖ್ಯೆಯ ಶಾಸಕರು ಪಕ್ಷದ ನಿರ್ಧಾರವನ್ನು ಬೆಂಬಲಿಸಿದ್ದರು. ಈಗಲೂ ಅಂಥದೇ ಪ್ರಸಂಗ ಎದುರಾದರೂ ಆಗಬಹುದು ಎಂಬುದು ಕಾಂಗ್ರೆಸ್ ಮೂಲಗಳು ನೀಡುವ ವಿವರಣೆ.

ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಶಾಸಕರಿಗೆ ಸದ್ಯಕ್ಕೆ ವಿಧಾನಸಭೆ ವಿಸರ್ಜನೆಗೊಂಡು ಮಧ್ಯಂತರ ಚುನಾವಣೆ ನಡೆಯುವುದು ಬೇಕಿಲ್ಲ. ಹಾಗೂ ಒಂದುವೇಳೆ ರಾಜಕೀಯ ವಿಪ್ಲವ ಸಂಭವಿಸಿ ಸರ್ಕಾರ ಪತನಗೊಂಡರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರಬಹುದೇ ಹೊರತೂ ವಿಧಾನಸಭೆಗೆ ಚುನಾವಣೆ ನಡೆಯುವುದಿಲ್ಲ ಈ ಎರಡರಲ್ಲಿ ಯಾವುದೇ ಆದರೂ ನಷ್ಟವಾಗುವುದು ತಮಗೇ ಎಂಬ ವಾಸ್ತವ ಅರಿತಿರುವ ಕಾಂಗ್ರೆಸ್ ಶಾಸಕರು ಬಜೆಟ್ ಅಧಿವೇಶನ ಮುಗಿಯುವವರೆಗೆ ಬೆಳವಣಿಗೆಗಳನ್ನು ಕಾದು ನೋಡಲು ನಿರ್ಧರಿಸಿದ್ದಾರೆ. ಈ ಕಾರಣಕ್ಕಾಗೇ ಹೆಚ್ಚು ಮಂದಿ ಹಿರಿಯ ಸಚಿವರೂ ಪಕ್ಷದಲ್ಲಿ ತಲೆದೋರಿರುವ ಬಿಕ್ಕಟ್ಟಿನ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ತಟಸ್ಥರಾಗಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವ ಇನ್ನೊಂದು ಸಂಗತಿ ಎಂದರೆ ನಾಯಕತ್ವ ಬದಲಾವಣೆಗೆ ಕೈಹಾಕಿದ್ದೇ ಆದಲ್ಲಿ ಒಂದಷ್ಟು ಸಂಖ್ಯೆಯ ಶಾಸಕರು ಪಕ್ಷ ತ್ಯಜಿಸಲು ಮುಂದಾಗಬಹುದು ಎಂಬುದು .ಆದರೆ 140 ರಷ್ಟು ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ನಲ್ಲಿ ಮೂರನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆಯುವ ಸಾಧ್ಯತೆಗಳು ಕಡಿಮೆ. ಯಾವುದೇ ದೃಷ್ಟಿ ಕೋನದಿಂದ ನೋಡಿದರೂ ಕಾಂಗ್ರೆಸ್ ನ ಬಿಕ್ಕಟ್ಟು ಪರಿಹಾರ ಆಗುವ ಸೂಚನೆಗಳು ಕಾಣುತ್ತಿಲ್ಲ.

ಏತನ್ಮಧ್ಯೆ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಪದವಿ ಸಿಗದಿದ್ದರೆ ಶಿವಕುಮಾರ್ ತಮ್ಮನ್ನು ಬೆಂಬಲಿಸುವ ಶಾಸಕರ ಜತೆಗೂಡಿ ಪಕ್ಷ ಒಡೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ವದಂತಿಗಳೂ ಹಬ್ಬಿವೆ. ಬಿಜೆಪಿ ಪಾಳೇಯದಲ್ಲಿ ಇಂತಹ ನಿರೀಕ್ಷೆಗಳೇನೋ ಇರುವುದು ನಿಜವಾದರೂ ಅಂತಹ ಸಂದರ್ಭ ಸೃಷ್ಟಿಯಾಗುವ ಸಾಧ್ಯತೆಗಳು ಇಲ್ಲ. ತಮ್ಮ ಪರಮ ವಿರೋಧಿ ಜೆಡಿಎಸ್ ಬೆಂಬಲ ಪಡೆದಿರುವ ಬಿಜೆಪಿ ಜತೆ ಗೆಳೆತನ ಬೆಳೆಸಿ ಪಕ್ಷ ಒಡೆದು ಮುಖ್ಯಮಂತ್ರಿ ಆಗುವ ಆಲೋಚನೆ ಶಿವಕುಮಾರ್ ಗೂ ಇಲ್ಲ. ರಾಜಕೀಯ ವಲಯಗಳಲ್ಲಿ ಆ ರೀತಿ ಹಬ್ಬಿರುವ ಸುದ್ದಿಗಳಿಗೆ ಆಧಾರವೇ ಇಲ್ಲ ಎಂಬುದು ಬೆಳವಣಿಗೆಗಳ ಒಳಹೊಕ್ಕು ನೋಡಿದರೆ ಗೊತ್ತಾಗುವ ಸಂಗತಿ. ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ಪುನಾರಚನೆ ಆದರೆ ಕಾಂಗ್ರೆಸ್ ಬೆಳವಣಿಗೆಗಳ ದಿಕ್ಕು ಸ್ಪಷ್ವವಾಗಬಹುದು. ಈಗಿನ ಸಂದರ್ಭದಲ್ಲಿ 35ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ತ್ಯಜಿಸಿ ಹೋಗುತ್ತಾರೆಂಬುದು ಬರೀ ಊಹಾಪೋಹ. ಶಿವಕುಮಾರ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಪರಮಾಪ್ತ ಸಚಿವ ಕೆ.ಎನ್. ರಾಜಣ್ಣ ಸದ್ಯಕ್ಕೆ ತಣ್ಣಗಾಗಿದ್ದಾರೆ. ಮುಂದಿನದು ಕಾದು ನೋಡಬೇಕು.

100%

-ಯಗಟಿ ಮೋಹನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಬೇಡಿ: ಕುರುಬ ಸಮುದಾಯ ST ಸೇರ್ಪಡೆ ಪ್ರಸ್ತಾಪಕ್ಕೆ VS ಉಗ್ರಪ್ಪ ವಿರೋಧ

SCROLL FOR NEXT