ಇಡೀ ಜಾಗತಿಕ ವಿತ್ತ ವ್ಯವಸ್ಥೆ ಸಂಕ್ರಮಣ ಸ್ಥಿತಿಯಲ್ಲಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬದಲಾವಣೆಯ ಕಾಲಘಟ್ಟವನ್ನು ಕಳೆದ 50 ಅಥವಾ 60 ವರ್ಷದಲ್ಲಿ ನಾವ್ಯಾರೂ ಕಂಡಿಲ್ಲ. ರಷ್ಯಾ ಅಮೇರಿಕಾ ನಡುವಿನ ಶೀತಲ ಸಮರದ ಸಮಯದಲ್ಲೂ ಈ ಮಟ್ಟದ ಏರಿಳಿತ ಕಂಡಿರಲಿಲ್ಲ. ಈ ಬಾರಿ ಅಮೇರಿಕಾ ಎದುರು ಠಕ್ಕರ್ ಕೊಟ್ಟು ನಿಂತಿರುವುದು ಚೀನಾ ಎನ್ನುವ ದೇಶ, ಅದು ರಷ್ಯಾದಷ್ಟು ಸುಲಭ ತುತ್ತಲ್ಲ. ಟ್ರಂಪ್ ಅಧಿಕಾರ ಹಿಡಿದ ದಿನದಿಂದ ಈ ಜಗತ್ತಿಗೆ ಅಮೇರಿಕಾ ದೇಶವೇ ಹಿರಿಯಣ್ಣ. ನಾನು ಆ ದೇಶದ ಚುಕ್ಕಾಣಿ ಹಿಡಿದಿರುವ ಬಾಸ್ ಎನ್ನುವಂತೆ ವರ್ತಿಸಲು ಶುರು ಮಾಡಿದರು.
ಅಮೇರಿಕಾ ಆರ್ಥಿಕತೆ ಇನ್ನಿಲ್ಲದಷ್ಟು ನೆಲ ಕಚ್ಚಿದೆ. ಕೆಲಸದ ಕೊರತೆ , ಬಡತನ , ಹಣದುಬ್ಬರ ಆ ದೇಶವನ್ನು ಒಳಗಿನಿಂದ ಕೊರೆದು ಬಿಟ್ಟಿವೆ. ಇವುಗಳನ್ನು ಮುಚ್ಚಿಡಲು ನೂತನ ಅಧ್ಯಕ್ಷ ಹರಸಾಹಸ ಪಡುತ್ತಿದ್ದಾರೆ. ಕೀಳಿರಿಮೆಯನ್ನು ಮುಚ್ಚಿಕೊಳ್ಳಲು ಸುಪೀರಿಯರಿಟಿ ತೋರಿಸಿಕೊಳ್ಳುವಂತೆ , ಮಾತಿನಲ್ಲಿ , ಚರ್ಚೆಯಲ್ಲಿ ಸೋಲಾಗುತ್ತದೆ , ಇನ್ನು ಮಾತಾಡಲು ಏನೂ ಉಳಿದಿಲ್ಲ ಎಂದಾಗ ಕಿರುಚುವುದು ಸಾಮಾನ್ಯ. ಟ್ರಂಪ್ ಪರಿಸ್ಥಿತಿ ಇದನ್ನೇ ಹೋಲುತ್ತಿದೆ.
ಟ್ರಂಪ್ ಗೆ ಮಿತ್ರರಾರು, ಶತ್ರುವಾರು ಎನ್ನುವ ಅರಿವು ಕೂಡ ಹೊರಟು ಹೋಗಿದೆ. ಎಲ್ಲರಿಗೂ ಒಂದೇ ಮಂತ್ರದಂಡ ಎನ್ನುವ ಅವರ ಒಮ್ಮುಖ ನಿರ್ಧಾರಗಳು ಅವರಿಗೆ, ಅಮೇರಿಕಾ ದೇಶಕ್ಕೆ ಮುಳುವಾಗುತ್ತದೆ ಎನ್ನುವುದನ್ನು ಹಣಕ್ಲಾಸು ಅಂಕಣದಲ್ಲಿ ಈ ಹಿಂದೆ ಬರೆದಿದ್ದೆ.ಅದು ನಿಜವಾಗಿದೆ. ಅಮೇರಿಕಾ ಒಮ್ಮುಖ ತೆರಿಗೆ ನೀತಿಯ ಪರಿಣಾಮ ನಿನ್ನೆ ಅಮೇರಿಕಾ ಷೇರು ಮಾರುಕಟ್ಟೆ ಇನ್ನಿಲ್ಲದ ಕುಸಿತ ಕಂಡಿದೆ. ಸೋಮವಾರ ಒಂದೇ ದಿನದಲ್ಲಿ ಸರಿಸುಮಾರು 1.75 ಟ್ರಿಲಿಯನ್ ಡಾಲರ್ ಹಣವನ್ನು ಮಾರುಕಟ್ಟೆ ಕಳೆದುಕೊಂಡಿದೆ. ಕಳೆದ ಇಪ್ಪತ್ತು ದಿನದಲ್ಲಿ ಹೀಗೆ ಕಳೆದು ಕೊಂಡ ಹಣದ ಮೊತ್ತ 4 ಟ್ರಿಲಿಯನ್ ಅಮೆರಿಕನ್ ಡಾಲರ್.! ಕಳೆದ 3 ವರ್ಷದಲ್ಲಿ ಅಮೇರಿಕಾ ಷೇರು ಮಾರುಕಟ್ಟೆ ಈ ಮಟ್ಟದ ಕುಸಿತವನ್ನು ಕಂಡಿರಲಿಲ್ಲ. ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಭಾರತ ದೇಶದಲ್ಲಿ ವರ್ಷ ಪೂರ್ತಿ ನಡೆಯುವ ಸೇವೆ ಮತ್ತು ಸರಕುಗಳ ಒಟ್ಟು ಮೊತ್ತ ! ಅಂದರೆ ಭಾರತದ ಒಂದು ವರ್ಷದ ಜಿಡಿಪಿ ಸದ್ದಿಲ್ಲದೇ 20 ದಿನದಲ್ಲಿ ಕರಗಿ ಹೋಗಿದೆ.
ಅಮೇರಿಕಾ ದೇಶದ ಈ ನಡೆ ಅವರ ಕಾಲ ಮೇಲೆ ಅವರೇ ಚಪ್ಪಡಿ ಕಲ್ಲು ಹಾಕಿಕೊಂಡಂತೆ, ಇದರಿಂದ ಹಣದುಬ್ಬರ ಹೆಚ್ಚುತ್ತದೆ. ಆರ್ಥಿಕತೆ ಕುಸಿತ ಕಾಣುತ್ತದೆ ಎನ್ನುವ ತಜ್ಞರ ಅಭಿಪ್ರಾಯಕ್ಕೆ ಟ್ರಂಪ್ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಸೋಮವಾರದ ಮಾರುಕಟ್ಟೆ ಕುಸಿತದ ನಂತರ ಮಾಧ್ಯಮ ಸಂಸ್ಥೆಗಳು' ಅಮೇರಿಕಾ ದೇಶ ಆರ್ಥಿಕ ಹಿಂಜರಿತ (ರಿಸೆಶನ್) ಕಡೆಗೆ ಸಾಗುತ್ತಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆಗಳನ್ನು ಕೇಳಿದಾಗ , ಟ್ರಂಪ್ ನಾನು ಊಹಾಪೋಹ ಮಾಡುವುದನ್ನು ದ್ವೇಷಿಸುತ್ತೇನೆ, ನಾವು ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮತ್ತು ಕೆಲಸಗಳು ಬಹಳ ದೊಡ್ಡವು' ಎನ್ನುವ ಮಾತನ್ನು ಆಡಿದ್ದಾರೆ. ರಿಸೆಶನ್ ಆಗುವುದಿಲ್ಲ ಎಂದು ಹೇಳಲಿಲ್ಲ. ಇದು ಇನ್ನಷ್ಟು ಊಹಾಪೋಹಕ್ಕೆ ದಾರಿ ಮಾಡಿಕೊಟ್ಟಿದೆ.
ಮೇಲಿನ ಬದಲಾವಣೆಗಳನ್ನು, ಸನ್ನಿವೇಶಗಳನ್ನು ಗಮನದಲ್ಲಿಟ್ಟು ಕೊಂಡು ನೋಡಿದಾಗ ಅಮೇರಿಕಾ ಆರ್ಥಿಕ ಹಿಂಜರಿತಕ್ಕೆ ಸಿಲುಕಿರುವುದು ಸ್ಪಷ್ಟ. ಟ್ರಂಪ್ ತಮ್ಮ ಗಡುಸು ಮಾತು ಮತ್ತು ಜಗತ್ತಿಗೆ ಬಾಸು ಎನ್ನುವ ನಡವಳಿಕೆ ಮೂಲಕ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಜಗತ್ತಿಗೆ ಸಾರಲು ಪ್ರಯತ್ನಪಟ್ಟರು. ಆದರೆ ಕೇವಲ 20 ದಿನದಲ್ಲಿ ಮಾರುಕಟ್ಟೆ ಕುಸಿತ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ನಿಜ ಹೇಳಬೇಕೆಂದರೆ ಟ್ರಂಪ್ ಮುಂದಿನ ನಡೆಯ ಬಗ್ಗೆ ಸಂಶಯ ಇಷ್ಟೆಲ್ಲಾ ಕುಸಿತಕ್ಕೆ ಕಾರಣವಾಗುತ್ತಿದೆ. ಈ ಮಧ್ಯೆ ಅಮೆರಿಕಾದ ಫೆಡರಲ್ ಬಡ್ಡಿ ದರವನ್ನು ಸ್ವಸ್ಥಿತಿಯಲ್ಲಿ ಮುಂದುವರಿಸುವುದಾಗಿ ಅದರ ಮುಖ್ಯಸ್ಥ ಹೇಳಿಕೆ ಕೊಟ್ಟಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಡ್ಡಿದರ ಎನ್ನುವುದು ಅತಿ ಸೂಕ್ಷ್ಮ ವಿಷಯ. ಹೆಚ್ಚು ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಇದು ಜಾಗತಿಕ ವಿತ್ತ ಜಗತ್ತಿನ ಮೇಲೆ, ಷೇರು ಮಾರುಕಟ್ಟೆ ಮೇಲೆ ಕೂಡ ಪ್ರಭಾವ ಬೀರುತ್ತದೆ. ಭಾರತದ ಮೇಲೆ ಇದು ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎನ್ನುವುದನ್ನು ನೋಡೋಣ.
ಮಾರ್ಗನ್ ಸ್ಟಾನ್ಲಿ ಸಂಸ್ಥೆಯ ಪ್ರಕಾರ ಅಮೇರಿಕಾ ಕುಸಿತ ಭಾರತಕ್ಕೆ ಫೆವರೆಬೆಲ್ ಆಗಿ ಕೆಲಸ ಮಾಡವುತ್ತದೆ. 2025ರ ಡಿಸೆಂಬರ್ ವೇಳೆಗೆ ಸೆನ್ಸೆಕ್ಸ್ 93, 000 ದಿಂದ 105,000 ಅಂಕಗಳನ್ನು ಮುಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದು ನಿಜವಾದರೆ 25 ಪ್ರತಿಶತ ಏರಿಕೆಯನ್ನು ಕಂಡಂತಾಗುತ್ತದೆ.
ಜಗತ್ತಿನೆಲ್ಲೆಡೆ ಕುಸಿತ ಶುರುವಾಗಿ, ಹೂಡಿಕೆದಾರ ಇದ್ಯಾವುದರ ಸಹವಾಸ ಬೇಡ ಎಂದು ಒಂದು ವರ್ಷ ಸುಮ್ಮನೆ ಹಣದ ಮೇಲೆ ಕೂರುವ ನಿರ್ಧಾರ ಮಾಡಿದರೆ ಆಗ ಡಿಸೆಂಬರ್ 2025ರ ವೇಳೆಗೆ ಸೆನ್ಸೆಕ್ಸ್ 70 ಸಾವಿರಕ್ಕೆ ಕುಸಿಯಬಹುದು. ಇವತ್ತಿಗೆ ನಾವು 73 ಸಾವಿರದಲ್ಲಿದ್ದೇವೆ. ಕುಸಿತ ಕಂಡರೂ ಮಹಾ ಕುಸಿತವೇನಲ್ಲ.
ಚೀನಾ ದೇಶದ ಆರ್ಥಿಕತೆ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಹೀಗಾಗಿ ಹೂಡಿಕೆದಾರರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಅವರ ಮುಂದಿರುವುದು ಚೀನಾ, ಜಪಾನ್, ಭಾರತ ಇದರ ಜೊತೆಗೆ ಎಮೆರಿಜಿಂಗ್ ಮಾರುಕಟ್ಟೆ ಎನ್ನಿಸಿಕೊಂಡ ಬ್ರೆಜಿಲ್, ಮೆಕ್ಸಿಕೋ,ದಕ್ಷಿಣ ಆಫ್ರಿಕಾ ಗಳಿವೆ. ಒಟ್ಟಾರೆ ಆಯ್ಕೆ ಮಾಡಿಕೊಳ್ಳಲು ಇರುವ ಹತ್ತು, ಹನ್ನೆರೆಡು ದೇಶದಲ್ಲಿ ಭಾರತ ಹೂಡಿಕೆದಾರರ ಡಾರ್ಲಿಂಗ್ ಎನ್ನಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಡ.
ಇವು ಬಹಳ ಅಂತಂತ್ರ ದಿನಗಳು. ಇಂತಹ ಸಮಯದಲ್ಲಿ ನಾವೇನು ಮಾಡಬೇಕು ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ. ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು, ಎಲ್ಲರೂ ಇದು ಹೂಡಿಕೆ ಮಾಡಲು ಸಕಾಲ ಎನ್ನುತ್ತಿದ್ದಾರೆ. ಹೌದು ಹೂಡಿಕೆಯ ಮೂಲಮಂತ್ರವೇ ಅದು. ಯಾವಾಗ ಮಾರುಕಟ್ಟೆ ನೆಲ ಕಚ್ಚುತ್ತದೆ, ಆಗ ಖರೀದಿ ಮಾಡಬೇಕು. ಇದಕ್ಕೊಂದು ಉದಾಹರಣೆ ಹೇಳುತ್ತೇನೆ. ನಿಮಗೆ ಇಷ್ಟವಾದ ಬ್ರಾಂಡೆಡ್ ಬಟ್ಟೆಯ ಬೆಲೆ ಸಾವಿರ ರೂಪಾಯಿ ಎಂದುಕೊಳ್ಳಿ. ಅದನ್ನು ಈಗ 600 ಕ್ಕೋ ಅಥವಾ 500 ಕ್ಕೋ ಮಾರಾಟಕ್ಕೆ ಇಟ್ಟರೆ ನೀವು ಏನು ಮಾಡುವಿರಿ? ಖಂಡಿತ ಕೊಳ್ಳುವಿರಿ ಅಲ್ಲವೇ? ಇಂದು ಷೇರು ಮಾರುಕಟ್ಟೆಯಲ್ಲಿ ಆಗಿರುವುದು ಕೂಡ ಇದೆ. ಬಹಳಷ್ಟು ಉತ್ತಮ, ಅತ್ಯುತ್ತಮ ಸಂಸ್ಥೆಗಳ ಷೇರುಗಳು 30/40/50 ಪ್ರತಿಶತ ಕಡಿಮೆ ಬೆಲೆಗೆ ಇಂದು ಲಭ್ಯವಿದೆ. ಹೀಗಾಗಿ ಖಂಡಿತ ಇದು ಕೊಳ್ಳುವವರ ಮಾರುಕಟ್ಟೆ ಎನ್ನುವುದರಲ್ಲಿ ಸಂಶಯವಿಲ್ಲ.
ಆದರೆ 2025 ರಲ್ಲಿ ಸ್ಥಿರತೆ ಎನ್ನುವುದನ್ನು ಮಾತ್ರ ನಾವು ಅಪೇಕ್ಷಿಸಲು ಹೋಗಬಾರದು. ಏಕೆಂದರೆ ನಾವು ಇಂದು ಕಡಿಮೆ ಬೆಲೆಗೆ ಸಿಕ್ಕಿದೆ ಎದು ಕೊಂಡರೆ ಆ ನಂತರ ಕೂಡ ಮಾರುಕಟ್ಟೆ ಇನ್ನಷ್ಟು ಕುಸಿತ ಕಾಣುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ ಕೂಡ ಇಲ್ಲ. ಹೀಗಾಗಿ ಕುಸಿದಾಗ ಕೊಳ್ಳಬೇಕು ಎನ್ನುವ ಸಿದ್ದ ಸೂತ್ರವನ್ನು ಪಾಲಿಸುವ ಮುನ್ನ ಕಾದು ನೋಡುವ ತಂತ್ರವನ್ನು ಕೂಡ ಅನುಸರಿಸುವುದು ಬಹಳ ಮುಖ್ಯ. ಮಾರ್ಚ್ ಅಂತ್ಯದ ವರೆಗೆ ಕಾಯುವುದು ಉತ್ತಮ.
ಕೊನೆ ಮಾತು: ನೀವು ಹೆಚ್ಚಿನದೇನು ಮಾಡುವ ಅವಶ್ಯಕತೆಯಿಲ್ಲ. ಸುಮ್ಮನೆ ಜಗತ್ತಿನ ಎಲ್ಲಾ ದೇಶಗಳನ್ನು ಕೂಡ ಗಮನಿಸುವ ಅವಶ್ಯಕತೆಯಿಲ್ಲ. ಆರ್ಥಿಕತೆಯ ಎಂಜಿನ್ ಎನ್ನಿಸಿಕೊಂಡಿರುವ ಹತ್ತಾರು ದೇಶಗಳಲ್ಲಿ ಕೂಡ ಮುಖ್ಯವಾದ ಐದಾರು ದೇಶಗಳ ಕಥೆಯನ್ನು ಒಮ್ಮೆ ಅವಲೋಕಿಸಿ ನೋಡಿ. ಯೂರೋಪಿಯನ್ ಯೂನಿಯನ್ ನ ಎಂಜಿನ್ ಜರ್ಮನಿ ಬಸವಳಿದು ಕುಳಿತಿದೆ. ಚೀನಾ ತನ್ನದೇ ಆದ ಸಾಲದಲ್ಲಿ ಮುಳುಗಿದೆ. ಅಮೇರಿಕಾ ತನ್ನ ಅಸ್ತಿತ್ವಕ್ಕೆ ಹೋರಾಡುತ್ತಿದೆ. ಅವರೇ ಹೇಳುತ್ತಿದ್ದಾರೆ ಲೆಟ್ಸ್ ಮೇಕ್ ಅಮೇರಿಕಾ ಗ್ರೇಟ್ ಅಗೈನ್ ಎಂದು , ಅರ್ಥ ಅಮೇರಿಕಾ ಗ್ರೇಟ್ ಆಗಿ ಉಳಿದಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಜಪಾನ್ ಈಗಷ್ಟೆ ತನ್ನ ಡಿಫ್ಲೇಷನ್ ನಿಂದ ಹೊರಬಂದು ಟೂರಿಸಂ ಮೂಲಕ ಒಂದಷ್ಟು ಭದ್ರತೆ ಪಡೆದುಕೊಳ್ಳುತ್ತಿದೆ. ಹೇಗೆ ಲೆಕ್ಕಾಚಾರ ಹಾಕಿದರೂ ಹೂಡಿಕೆಯ ದೃಷ್ಟಿಯಿಂದ ಇದ್ದುದರಲ್ಲಿ ಭಾರತವೇ ವಾಸಿ ಎನ್ನುವುದು ಗೊತ್ತಾಗುತ್ತದೆ. ಮತ್ತೆ ಜಾಗತಿಕ ಹೂಡಿಕೆದಾರರು ಬರುವವರೆಗೆ ಸ್ವಲ್ಪ ತಾಳ್ಮೆಯಿಂದ ಕಾಯೋಣ. ಅವರಿಗೂ ಬೇರೆ ದಾರಿಯಿಲ್ಲ. ಭಾರತಕ್ಕೆ ಅವರು ಬಂದೆ ಬರುತ್ತಾರೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com