ವಿಜಯೇಂದ್ರ- ಬಸನಗೌಡ ಪಾಟೀಲ್ ಯತ್ನಾಳ್ online desk
ಅಂಕಣಗಳು

ಬೆಂಬಲಿಸಿದವರೂ ದೂರ; ಬಂಡಾಯದ ಹಾದಿಯಲ್ಲಿ ಒಂಟಿಯಾದ ಯತ್ನಾಳ್ (ಸುದ್ದಿ ವಿಶ್ಲೇಷಣೆ)

ಯತ್ನಾಳ್ ಈಗ ವಿಜಯದಶಮಿ ವೇಳೆಗೆ ಹಿಂದುತ್ವ ಸಿದ್ಧಾಂತ ಹೊಂದಿರುವ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.

ಕಡೆಗೂ ಅಳೆದೂ ಸುರಿದೂ ಬಿಜೆಪಿ ಹೈಕಮಾಂಡ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಛಾಟಿಸಿದೆ. ಇಂತಹ ಉಚ್ಛಾಟನೆಗಳು ಹೊಸದೇನಲ್ಲ. ಬಿಜೆಪಿಗೂ ಯತ್ನಾಳ್ ಅವರಿಗೂ ಅಭ್ಯಾಸ ಆಗಿ ಹೋಗಿದೆ.

ಹಾಗೆಯೇ ಇದು ಅನಿರೀಕ್ಷಿತವೂ ಅಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಕೆಲವು ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದರೂ ಈ ವಿವಾದಕ್ಕೆ ಮೂಲದಲ್ಲೇ ಮದ್ದು ಕಂಡು ಹಿಡಿಯುವಲ್ಲಿ ಬಿಜೆಪಿ ವರಿಷ್ಠರು ಆಸಕ್ತಿ ತೋರದೇ ವಿವಾದವನ್ನು ಸುದೀರ್ಘ ಅವಧಿಗೆ ಬೆಳೆಯಲು ಬಿಟ್ಟಿದ್ದೇ ಇದೊಂದು ಕಗ್ಗಂಟಾಗಲು ಕಾರಣ.

ಈಗ ಉಚ್ಛಾಟನೆ ನಿರ್ಧಾರದೊಂದಿಗೆ ವಿವಾದದ ಒಂದು ಅಧ್ಯಾಯ ಮುಗಿದಿದೆ. ಇದರ ಜತೆ ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಬಹಿರಂಗವಾಗಿಯೇ ಸಹಾನುಭೂತಿ ತೋರುತ್ತಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರಿಗೆ ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವರಾದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಮತ್ತು ವಿಜಯೇಂದ್ರ ವಿರೋಧಿ ಗುಂಪಿನಲ್ಲಿದ್ದ ಶಾಸಕ ಹರೀಶ್ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಬಿಜೆಪಿಯ ಮಟ್ಟಿಗೆ ಇದೊಂದು ಪ್ರಹಸನ. ಯತ್ನಾಳ್ ಅವರ ವಿಚಾರವನ್ನೇ ತೆಗೆದುಕೊಂಡರೆ ಅವರಿಗೆ ಇಂತಹ ಶಿಸ್ತು ಕ್ರಮ ಹೊಸದೇನಲ್ಲ. ಹಾಗೆಯೇ ಇಂತಹ ಉಚ್ಛಾಟನೆ ನಿರ್ಧಾರಗಳು ಆರು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ಅರ್ಧದಲ್ಲೇ ವಾಪಸು ಪಡೆದ ಉದಾಹರಣೆಗಳೂ ಬಿಜೆಪಿಯಲ್ಲಿವೆ. ಹಾಗಾಗಿ ಇದೊಂದು ಸಾಮಾನ್ಯ ಪ್ರಹಸನವಷ್ಟೆ. ಇದರಿಂದ ರಾಜ್ಯ ರಾಜಕಾರಣದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತದೆ ಎಂದೇನೂ ಹೇಳಲಾಗುವುದಿಲ್ಲ.

ಯತ್ನಾಳ್ ಈಗ ವಿಜಯದಶಮಿ ವೇಳೆಗೆ ಹಿಂದುತ್ವ ಸಿದ್ಧಾಂತ ಹೊಂದಿರುವ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಅವರ ಬೆನ್ನಿಗೆ ಪಂಚಮಸಾಲಿ ಸಮುದಾಯದ ಬಸವ ಮೃತ್ಯುಂಜಯ ಸ್ವಾಮೀಜಿ ನಿಂತಿದ್ದು ಉಚ್ಛಾಟನೆ ಕ್ರಮದ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ನೋಡಿದರೆ ಈವರೆವಿಗೆ ಅವರನ್ನು ಬೆಂಬಲಿಸಿಕೊಂಡು ಬಂದಿದ್ದ ಬಿಜೆಪಿಯ ಶಾಸಕರಾದ ರಮೇಶ್ ಜಾರಕಿಹೊಳಿ, ಹರೀಶ್ ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರ ಮುಂದಿನ ನಿಲುವು ಏನು? ಎಂಬುದೇ ಸದ್ಯದ ಕುತೂಹಲ. ಈ ಪೈಕಿ ಲಿಂಬಾವಳಿ ಹೊರತುಪಡಿಸಿದರೆ ಉಳಿದವರು ರಾಜಕಾರಣದಲ್ಲಿ ಅಧಿಕಾರದ ಅವಕಾಶಗಳಿಗಾಗಿ ಪಕ್ಷ ಬದಲಾಯಿಸುತ್ತಾ ಬಂದವರು . ಅವರು ಭವಿಷ್ಯದ ದಿನಗಳಲ್ಲಿ ಅಧಿಕಾರ ವಂಚಿತರಾಗಿ ಕೂರುವಷ್ಟು ತಾಳ್ಮೆ ಹೊಂದಿದವರಲ್ಲ. ಅವರಿಗೆ ಅಧಿಕಾರ ಹಿಡಿಯುವುದೇ ಸಿದ್ಧಾಂತ ಆಗಿರುವುದರಿಂದ ಮತ್ತು ರಾಜಕೀಯವಾಗಿಯೂ ಬಹು ದೊಡ್ಡ ಶಕ್ತಿ ಅಲ್ಲವಾದ್ದರಿಂದ ಬಿಜೆಪಿ ಅವರ ವಿಚಾರಗಳನ್ನು ಗಂಭಿರವಾಗಿ ಪರಿಗಣಿಸುವ ಸಾಧ್ಯತೆಗಳು ಕಡಿಮೆ. ಇನ್ನುಳಿದಂತೆ ಅರವಿಂದ ಲಿಂಬಾವಳಿ ಏನೇ ಅಸಮಾಧಾನ ಹೊಂದಿದ್ದರೂ ಅವರು ಮೂಲತಃ ಸಂಘ ಪರಿವಾರದ ಹಿನ್ನಲೆಯಿಂದ ಬಂದಿರುವುದರಿಂದ ಸದ್ಯಕ್ಕೆ ಅವರನ್ನು ಬಿಜೆಪಿ ವರಿಷ್ಟರು ತಣ್ಣಗೆ ಮಾಡಬಹುದು. ಅದು ಹೊರತು ಪಡಿಸಿದರೆ ಸದ್ಯದ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದ ಮೇಲೆ ಈ ವಿದ್ಯಮಾನ ಮಹತ್ವ ಪರಿಣಾಮವನ್ನೇನೂ ಬೀರದು.

ಯತ್ನಾಳ್ ಉಚ್ಛಾಟನೆ ವಿರೋಧಿಸಿ ಪಂಚಮಸಾಲಿ ಸಮುದಾಯದ ಮಠಾಧೀಶ ಬಸವ ಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ಕರೆ ಕೊಟ್ಟಿರುವುದಕ್ಕೆ ಸಮುದಾಯದ ಇತರ ಮುಖಂಡರಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಕಾರಣ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಲ್ಲೂ ಈ ಸಮುದಾಯದ ಹಲವು ಮುಖಂಡರು ವಿವಿಧ ಅಧಿಕಾರ ಸ್ಥಾನಗಳಲ್ಲಿರುವುದರಿಂದ ಒಬ್ಬ ವ್ಯಕ್ತಿಯ ಪರವಾದ ಈ ಪ್ರತಿಭಟನೆಗೆ ಇಡೀ ಸಮುದಾಯ ಒಟ್ಟಾಗಿ ಸ್ಪಂದಿಸುವ ಸಾಧ್ಯತೆಗಳು ಕಡಿಮೆ.

ಇನ್ನು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬದಲಾಯಿಸುವ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲ. ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಅದಿನ್ನೂ ನಿಖರವಾಗಿ ನಿಗದಿಯಾಗಿಲ್ಲ.

ಮೇಲಾಗಿ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ಕುರಿತಾದ ಸಮಸ್ಯೆಗಳೇ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಸರ್ಕಾರ ಯಾವಾಗ ಈ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಇರುವ ಆಂತರಿಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ಬಹಿರಂಗವಾಗಿ ಪರ- ವಿರೋಧ ಚರ್ಚೆಗಳಿಂದ ವಿವಾದದ ಕಿಡಿ ಹಾರುತ್ತಿವೆಯಾದರೂ ಅದು ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವಷ್ಟರ ಮಟ್ಟಿಗೆ ಪ್ರಬಲವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಕಳೆದುಕೊಳ್ಳುವ ಮನೋಸ್ಥಿತಿಯಲ್ಲಿ ಕಾಂಗ್ರೆಸ್ ನ ಯಾವೊಬ್ಬ ಮುಖಂಡರೂ ಶಾಸಕರೂ, ಮಂತ್ರಿಗಳೂ ಇಲ್ಲ. ಹೀಗಾಗಿ ಕಾಂಗ್ರೆಸ್ ಸದ್ಯಕ್ಕೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ 2028 ರವರೆಗೆ ತಮ್ಮ ಉದ್ದೇಶಿತ ಪ್ರಾದೇಶಿಕ ಪಕ್ಷವನ್ನು ನೆಲೆ ನಿಲ್ಲಿಸಲು ಯತ್ನಾಳ್ ಬಹಳಷ್ಟು ಶ್ರಮ ಪಡಬೇಕಿದೆ. ಆ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಉಂಟಾಗಬಹುದಾದ ರಾಜಕೀಯ ಬೆಳವಣಿಗೆಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಸೆಣಸಾಡಿದ ಅತಿರಥ ಮಹಾರಥ ನಾಯಕರೆಲ್ಲ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಮತ್ತೆ ಮುಖ್ಯ ವಾಹಿನಿಯ ಪಕ್ಷಗಳನ್ನು ಸೇರಿ ಅಧಿಕಾರ ಕಂಡುಕೊಂಡ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ 2028 ರ ಚುನಾವಣೆಯಲ್ಲಿ ಗೆದ್ದು ಮುಖ್ಯ ಮಂತ್ರಿಆಗುವ ಕನಸು ಹೊತ್ತಿರುವ ಯತ್ನಾಳ್ ಈ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಅನುಮಾನವೇ ಸರಿ. ಈ ವಾಸ್ತವ ಸಂಗತಿ ಸ್ವತಹಾ ಯತ್ನಾಳ್ ಅವರಿಗೂ ಗೊತ್ತಿಲ್ಲವೆಂದೇನಲ್ಲ. ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರಬಲ ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಲಿಂಗಾಯಿತ ಸಮುದಾಯವನ್ನೇ ತಮ್ಮ ಮತ ಬ್ಯಾಂಕ್ ಆಗಿ ಅವರು ನೆಚ್ಚಿಕೊಂಡಿದ್ದಾರೆ. ಆದರೆ ಲಿಂಗಾಯಿತ ಸಮುದಾಯದ ಇತರ ಪಂಗಡಗಳು ಅವರನ್ನು ಬೆಂಬಲಿಸಿದಂತಿಲ್ಲ. ಏಕೆಂದರೆ ಒಟ್ಟು ಸಮಾಜದ ಹಿತ ಕಾಪಾಡುವ ಪ್ರಶ್ನೆ ಎದುರಾದಾಗ ಒಳ ಪಂಗಡಗಳ ಭೇದ ಮರೆತು ಒಂದಾಗಿ ಸಮಾಜದ ಹಿತ ಕಾಪಾಡುವ ವ್ಯಕ್ತಿಯ ನಾಯಕತ್ವದ ಪರ ಸಮುದಾಯದ ಮತದಾರರು ನಿರ್ಣಯ ಕೈಗೊಂಡ ಉದಾಹರಣೆಗಳು ರಾಜ್ಯ ರಾಜಕಾರಣದ ಇತಿಹಾಸದಲ್ಲಿವೆ. ಹಾಗೆಯೇ ಸಮುದಾಯದ ವ್ಯಕ್ತಿ ಎಷ್ಟೇ ವೈಯಕ್ತಿವಾಗಿ ಪ್ರಭಾವಿಯಾದರೂ ಅಂಥವರ ಪ್ರಾದೇಶಿಕ ಪಕ್ಷವನ್ನು ತಿರಸ್ಕರಿಸಿ ಮುಖ್ಯವಾಹಿನಿಯ ಪಕ್ಷಗಳ ಜತೆ ನಿಂತ ನಿದರ್ಶನಗಳೂ ಇವೆ.

ಈ ದೃಷ್ಟಿಯಿಂದ ನೋಡಿದರೆ ಯಾವುದೇ ಒಂದು ಜಾತಿಯ ಬೆಂಬಲದಿಂದ ರಾಜಕೀಯ ಪಕ್ಷಗಳು ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಉದಾಹರಣೆಗಳು ಇಲ್ಲ. ಪಂಚಮಸಾಲಿ ಸಮುದಾಯ ಹೊರತುಪಡಿಸಿ ಇತರ ಸಮುದಾಯಗಳಲ್ಲಿ ಯತ್ನಾಳ್ ಯಾವ ರೀತಿ ತಮ್ಮ ಅನಿವಾರ್ಯತೆಯನ್ನು ಮೂಡಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಈಗ ಅವರ ಜತೆಗಿರುವ ಹಿಂದುಳಿದ ವರ್ಗಗಳ ಮುಖಂಡರಾದ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಮತ್ತಿತರರಿಗೆ ರಾಜಕೀಯವಾಗಿ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ಅವರು ಬಿಜೆಪಿಯಲ್ಲೇ ಇದ್ದು ಯತ್ನಾಳ್ ಅವರನ್ನು ಮಾನಸಿಕವಾಗಿ ಬೆಂಬಲಿಸುವ ಸಾಧ್ಯತೆಗಳೇ ಜಾಸ್ತಿ. ಆದರೆ ಅಧಿಕಾರವೇ ಪ್ರಧಾನವಾಗಿರುವ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ವೈಯಕ್ತಿಕ ಗೆಳೆತನ ರಾಜಕೀಯ ಬೆಂಬಲವಾಗಿ ದೀರ್ಘಾವಧಿಯವರೆಗೆ ಉಳಿಯುವ ಸಾಧ್ಯತೆಗಳು ಇಲ್ಲವೇ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯತ್ನಾಳ್ ರಾಜಕೀಯವಾಗಿ ಒಂಟಿ ಆಗುವ ಅಪಾಯಗಳೂ ಇವೆ.

ಇನ್ನು ಬಿಜೆಪಿಯೊಳಗಿದ್ದೂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಪ್ರಾಬಲ್ಯವನ್ನು ಬಹಿರಂಗವಾಗಿ ಪ್ರತಿಭಟಿಸಲಾಗದ ಹಾಗೆಯೇ ಒಪ್ಪಿಕೊಳ್ಳಲೂ ಆಗದ ನಾಯಕರುಗಳ ಗುಂಪೊಂದೂ ಇದೆ. ಆದರೆ ಅವರು ಯಾರೂ ಯತ್ನಾಳ್ ಪರ ರಾಜಕೀಯವಾಗಿ ನಿಲ್ಲುವ ಸಾಧ್ಯತೆಗಳು ದೂರ. ಪಕ್ಷದೊಳಗೇ ಇದ್ದು ಅಸ್ತಿತ್ವ ಕಾಪಾಡಿಕೊಳ್ಳುವ ನಿರ್ಧಾರಕ್ಕೆ ಅವರು ಬದ್ದರಾಗುವುದೇ ಹೆಚ್ಚು. ಇನ್ನು ಹಿಂದುತ್ವದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷ ಕಟ್ಟಲು ಹೊರಟಿರುವ ಯತ್ನಾಳ್ ಅವರಿಗೆ ಬಿಜೆಪಿಯ ಮಾಜಿ ನಾಯಕ ಕೆ.ಎಸ್. ಈಶ್ವರಪ್ಪ ಅಡ್ಡಿಯಾಗಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಡಿದೆದ್ದು ಈಗಾಗಲೇ ತಮ್ಮದೇ ಆದ ಸಂಗೊಳ್ಳಿರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸ್ಥಾಪಿಸಿ ಹೋರಾಟಕ್ಕಿಳಿದಿರುವ ಅವರು ಉತ್ತರ ಕರ್ನಾಟಕದಲ್ಲಿ ಹಿಂದುಳಿದ ವರ್ಗಳ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದೇ ಹಿಂದುತ್ವದ ಸಿದ್ಧಾಂತವನ್ನೇ ಅವರು ತಮ್ಮ ಗುರಿಯಾಗಿಸಿಕೊಂಡಿರುವುದರಿಂದ ಅಲ್ಲೂ ಯತ್ನಾಳ್ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಜಾಸ್ತಿ.

ಜತೆಗೇ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದ , ಸಂದರ್ಭ ಒದಗಿ ಬಂದರೆ ವೈಯಕ್ತಿಕ ದಾಳಿಗೂ ಹಿಂಜರಿಯದ ಅವರ ಜತೆ ದೀರ್ಘಕಾಲದ ಸ್ನೇಹ ಮಾಡಲು ಅನೇಕ ರಾಜಕೀಯ ಮುಂಖಂಡರೂ ಹಿಂಜರಿಯುತ್ತಾರೆ . ಹಾಗೆ ನೋಡಿದರೆ ಬಿಜೆಪಿ ನಾಯಕರ ಪೈಕಿ ಈವರೆವಿಗೆ ಯತ್ನಾಳ್ ವಾಗ್ದಾಳಿಗೆ ಸಿಕ್ಕದೇ ಇರುವ ಪ್ರಮುಖ ಮುಖಂಡರ ಸಂಖ್ಯೆ ಕಡೆಮೆ ಎಂದೇ ಹೇಳಬಹುದು. ಭವಿಷ್ಯದಲ್ಲಿ ಮತ್ತೆ ಬಿಜೆಪಿಗೆ ಮರಳುವ ಆಕಾಂಕ್ಷೆ ಹೊತ್ತು ರಾಜಕೀಯವಾಗಿ ಸೂಕ್ಷ್ಮ ಹೆಜ್ಜೆಗಳನ್ನು ಇಡುತ್ತಿರುವ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ದಿಲ್ಲಿ ಬಿಜೆಪಿ ನಾಯಕರಿಗೆ ಮತ್ತು ಸಂಘ ಪರಿವಾರದ ಹಿರಿಯರಿಗೆ ಈಗಲೂ ಸಹಾನುಭೂತಿ ಇದೆ. ಪುತ್ರನ ರಾಜಕೀಯ ಭವಿಷ್ಯದ ಕಾರಣಕ್ಕೆ ಅವರು ಯಡಿಯೂರಪ್ಪನವರ ಜತೆ ಏನೇ ಕಿತ್ತಾಡಿಕೊಂಡಿದ್ದರೂ ಇಬ್ಬರೂ ನಾಯಕರ ನಡುವೆ ರಾಜಕಾಣ ಮೀರಿದ ಸ್ನೇಹ ಆತ್ಮೀಯ ಸಂಬಂಧಗಳು ಇವೆ. ಇದಲ್ಲದೇ ಬಿಜೆಪಿಗೂ ಹಿಂದುತ್ವದ ಸಿದ್ಧಾಂತವನ್ನು ಒಪ್ಪಿಕೊಂಡ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರೊಬ್ಬರ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅಹಿಂದ ವರ್ಗಗಳ ನಾಯಕರಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರು ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಸಾಧ್ಯತೆಗಳು ಇವೆ. ಅವರನ್ನು ಬಿಟ್ಟರೆ ಆ ಪಕ್ಷದಲ್ಲಿ ಅಹಿಂದ ಮತಗಳನ್ನು ಗಣನೀಯವಾಗಿ ಸೆಳೆಯುವ ಇತರ ಪ್ರಭಾವಿ ನಾಯಕರು ಇಲ್ಲ. ಹೀಗಾಗಿ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ದೂರ ಸರಿದರೆ ಅದರ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಈ ಪ್ರಯತ್ನಕ್ಕೆ ಈಶ್ವರಪ್ಪ ಅವರು ಒಂದು ಅಸ್ತ್ರವಾದರೂ ಆಶ್ಚರ್ಯವೇನಿಲ್ಲ. ರಾಜಕಾರಣ ಸಾಧ್ಯತೆಗಳ ಸಂತೆಯಾಗಿರುವುದರಿಂದ ಏನು ಬೇಕಾದರೂ ಆಗಬಹುದು.

ರಾಜಣ್ಣ ಪ್ರಕರಣ: ಇನ್ನು ಕಾಂಗ್ರೆಸ್ ನಲ್ಲಿ ಸಚಿವ ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಪ್ರಯತ್ನ ಪ್ರಕರಣದ ಬಗ್ಗೆ ತನಿಖೆಯೇನೋ ಆರಂಭವಾಗಿದೆ. ಆದರೆ ಈ ಕುರಿತಂತೆ ತನ್ನ ಬಳಿ ಯಾವುದೇ ನಿಖರ ಸಾಕ್ಷಾಧಾರಗಳಿಲ್ಲ ಎಂದು ಅವರೇ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸದನದಲ್ಲಿ ಬಹಿರಂಗವಾಗಿ ಈ ವಿಚಾರ ಪ್ರಸ್ತಾಪಿಸಿದ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಅಸಮಾಧಾನಗೊಂಡಿದೆ. ಈ ಪ್ರಕರಣ ಒಂದು ಕಡೆಯಾದರೆ ತನ್ನ ಕೊಲೆಗೆ ಬೆಂಗಳೂರಿನ ಪ್ರಮುಖ ರಾಜಕೀಯ ನಾಯಕರೊಬ್ಬರು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿ ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಪೊಲಿಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಆರು ತಿಂಗಳ ಬಳಿಕ ಅವರು ದೂರು ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ಆಧರಿಸಿ ಕೆಲವರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಂತರಿಕ ಕಿತ್ತಾಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೂ ಕೂಡಾ ಅದರ ಮುಂದುವರಿದ ಭಾಗ ಎಂಬಂತೆ ಗೋಚರವಾಗುತ್ತಿದೆ. ಈ ಬೆಳವಣಿಗೆಗಳು ಒಂದು ಕಡೆಯಾದರೆ ತನ್ನನ್ನು ಮೂಲೆ ಗುಂಪು ಮಾಡುವ ಪ್ರಯತ್ನಗಳ ವಿರುದ್ಧ ಸಿಡಿದು ನಿಂತಿರುವ ಉಪ ಮುಖ್ಯಮಂತ್ರಿ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಸುದೀರ್ಘ ವಿವರಗಳುಳ್ಳ ದೂರು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಇಬ್ಬರು ನಾಯರ ನಡುವಿನ ಕಿತ್ತಾಟದಿಂದ ಭವಿಷ್ಯದಲ್ಲಿ ಉಂಟಾಗಲಿರುವ ಸಮಸ್ಯೆಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯ ಸಂಧಾನ ಸೂತ್ರಗಳನ್ನು ರೂಪಿಸುತ್ತದೆ ಎಂಬುದೇ ಈಗ ಉಳಿದಿರುವ ಕುತೂಹಲ.

ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಸಮೀಕರಣದ ಮಾತು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿದೆ. ಅದು ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT