ಅಂಕಣಗಳು

ಭಾರತದ ಬೆಳವಣಿಗೆ ಮತ್ತು ಪಾಕಿಸ್ತಾನದ ಪತನ: ಎರಡು ವಿಭಿನ್ನ ಹಾದಿಯ ರಾಷ್ಟ್ರಗಳ ಕಥನ (ಜಾಗತಿಕ ಜಗಲಿ)

ಇಂದಿನ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಯಾವುದೇ ಘಟ‌ನೆ, ಅದು ಭಯೋತ್ಪಾದನಾ ದಾಳಿಯಾಗಿರಲಿ, ಅಥವಾ ರಾಜಕೀಯ ಬೆಳವಣಿಗೆಗಳಾಗಲಿ, ಪ್ರತ್ಯೇಕವಾಗಿ, ಯಾರ ಅರಿವಿಗೂ ಬರದಂತೆ ಸಂಭವಿಸಲು ಸಾಧ್ಯವಿಲ್ಲ. ಜಗತ್ತು ಇಂದು ಸುದ್ದಿ, ಸಾಮಾಜಿಕ ಜಾಲತಾಣಗಳು, ಮತ್ತು ಗುಪ್ತಚರ ಜಾಲಗಳ ಮೂಲಕ ಉತ್ತಮವಾಗಿ ಸಂಪರ್ಕಿತವಾಗಿವೆ. ಆದ್ದರಿಂದಲೇ 26 ಅಮಾಯಕ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದನಾ ದಾಳಿ ಒಂದು ಸ್ಥಳೀಯ ಹಿಂಸಾಚಾರದ ದುರಂತ ಘಟನೆಯಷ್ಟೇ ಅಲ್ಲ. ಇದು ಅತ್ಯಂತ ಭಿನ್ನವಾದ ಹಾದಿಯನ್ನು ತುಳಿದಿರುವ ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ದೇಶಗಳ ನಡುವೆ ಆಳವಾಗಿ ಬೇರೂರಿರುವ ಶಕ್ತಿ ಪ್ರದರ್ಶನ, ಹೋರಾಟದ ಭಾಗವಾಗಿದೆ.

ಭಾರತ ಮತ್ತು ಪಾಕಿಸ್ತಾನ: ಭಿನ್ನ ಹಾದಿಯ ಪಯಣಿಗರು

ಭಾರತ ಒಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಸುಭದ್ರ ಆಡಳಿತ ವ್ಯವಸ್ಥೆ ಮತ್ತು ದೇಶಕ್ಕೆ ಜನರ ಸಂಪೂರ್ಣ ಬೆಂಬಲವಿದೆ. ಆದರೆ, ಇನ್ನೊಂದೆಡೆ ಪಾಕಿಸ್ತಾನವನ್ನು ಬಹುತೇಕ ಅದರ ಸೇನೆಯೇ ಆಳುತ್ತಿದೆ. ಪಾಕಿಸ್ತಾನಿ ಸೇನೆ ದೇಶದ ರಾಜಕೀಯ, ಭದ್ರತೆ, ಅಷ್ಟೇ ಏಕೆ, ಪಾಕಿಸ್ತಾನದ ಆರ್ಥಿಕತೆಯನ್ನೂ ನಿಯಂತ್ರಿಸುತ್ತಿದೆ. ಆದರೆ, ಇದೆಲ್ಲದರ ನಡುವೆ ಪಾಕಿಸ್ತಾನದ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ.

ಪಾಕಿಸ್ತಾನದ ಒಳಗೆ, ಜನರು ಅತಿಯಾದ ಹಣದುಬ್ಬರ, ಹೆಚ್ಚುತ್ತಿರುವ ಬೆಲೆಗಳು, ಏರುತ್ತಿರುವ ನಿರುದ್ಯೋಗ, ಮತ್ತು ಕುಸಿಯುತ್ತಿರುವ ಆರ್ಥಿಕತೆಗಳ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಬಲೂಚಿಸ್ತಾನ, ಸಿಂಧ್, ಖೈಬರ್ ಪಖ್ತೂನ್‌ಖ್ವಾದಂತಹ ಪ್ರದೇಶಗಳು ತಮ್ಮನ್ನು ಪಾಕಿಸ್ತಾನದ ಮಿಲಿಟರಿ ನೆಲೆಯಾದ ಪಂಜಾಬ್ ಪ್ರಾಂತ್ಯ ನಿಯಂತ್ರಿಸಿ, ನಮ್ಮನ್ನು ಹಕ್ಕುಗಳು ಮತ್ತು ಸವಲತ್ತುಗಳಿಂದ ವಂಚಿತವಾಗಿಸುತ್ತಿದೆ ಎಂದು ಭಾವಿಸಿವೆ. ಇಂತಹ ಬಹಳಷ್ಟು ಪ್ರಾಂತ್ಯಗಳು ತಮಗೆ ಒಂದೋ ಸ್ವಾತಂತ್ರ್ಯ ಬೇಕು, ಅಥವಾ ಹೆಚ್ಚಿನ ಹಕ್ಕುಗಳು ಬೇಕು ಎಂದು ಹೋರಾಟಕ್ಕಿಳಿದಿವೆ. ಇತ್ತೀಚೆಗೆ ಬಲೂಚ್ ಹೋರಾಟಗಾರರು ಒಂದು ರೈಲನ್ನೇ ಅಪಹರಿಸಿದ್ದರು. ಒಂದು ಸ್ಥಿರ ರಾಷ್ಟ್ರದಲ್ಲಿ ಇಂತಹ ಘಟನೆಗಳು ನಡೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ, ಇಂದು ಪಾಕಿಸ್ತಾನದ ಪರಿಸ್ಥಿತಿ ಅಷ್ಟರಮಟ್ಟಿಗೆ ಅಸ್ಥಿರಗೊಂಡಿದೆ.

ಜನರಲ್ ಮುನೀರ್ ಮತ್ತು ಒಡೆದು ಆಳುವ ತಂತ್ರ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಕೇವಲ ಮಿಲಿಟರಿ ನಾಯಕ ಮಾತ್ರವಲ್ಲ. ಆತ ತನಗೆ ಹಣ ಮತ್ತು ಆಯುಧಗಳನ್ನು ಪೂರೈಸುವ ಚೀನಾ ಮತ್ತು ಕೆಲವೊಂದು ಬಾರಿ ಪಾಶ್ಚಾತ್ಯ ರಾಷ್ಟ್ರಗಳ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಾನೆ. ಇತ್ತೀಚೆಗೆ ಆತ ಮಾಡಿದ ಭಾಷಣಗಳು ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆ ಸೃಷ್ಟಿಸಿ, ಆ ಮೂಲಕ ಭಾರತವನ್ನು ಆಂತರಿಕವಾಗಿ ಒಡೆಯುವಂತೆ ಮಾಡುವ ಉದ್ದೇಶ ಹೊಂದಿದ್ದವು.

ಆದರೆ ಮುನೀರ್ ದುರಾಲೋಚನೆ ಭಾರತದಲ್ಲಿ ಯಶಸ್ವಿಯಾಗಲಿಲ್ಲ. ಭಾರತದ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗಟ್ಟಿನಿಂದ ಧ್ವನಿ ಎತ್ತಿ, ಸರ್ಕಾರದ ಪ್ರತಿಕ್ರಿಯೆಗೆ ಬೆಂಬಲ ಸೂಚಿಸಿದವು. ಭಾರತೀಯ ಸಮಾಜವೂ ಬಹುತೇಕ ಶಾಂತವಾಗಿಯೇ ಮುಂದುವರಿಯಿತು. ಭಾರತದಲ್ಲಿನ ಇಂತಹ ಒಗ್ಗಟ್ಟು ಮುನೀರ್ ಪಾಲಿಗೆ ಅನಿರೀಕ್ಷಿತ ಮತ್ತು ಆಶ್ಚರ್ಯಕರ ಬೆಳವಣಿಗೆಯಾಗಿರಬೇಕು. ಆದ್ದರಿಂದಲೇ ಆತ ಕೆಲವು ದಿನಗಳ ಕಾಲ ಸಾರ್ವಜನಿಕರ ಕಣ್ಣಿನಿಂದ ಮರೆಯಾಗಿದ್ದ.

ದೊಡ್ಡ ಚಿತ್ರಣ: ಚೀನಾ, ಮಾರುಕಟ್ಟೆಗಳು ಮತ್ತು ಸುಂಕ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸಿದ ಬಳಿಕ, ಬೀಜಿಂಗ್ ಹೊಸದಾದ ಮಾರುಕಟ್ಟೆಗೆ ಹುಡುಕಾಟ ಆರಂಭಿಸಿತು. 140 ಕೋಟಿ ಜನಸಂಖ್ಯೆ, ಅದರಲ್ಲೂ 80 ಕೋಟಿ ಮಧ್ಯಮವರ್ಗದ ಜನರನ್ನು ಹೊಂದಿರುವ ಭಾರತ ಜಗತ್ತಿನ ಪಾಲಿಗೆ ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿ ಕಾಣುವುದು ಸಹಜವೇ. ಆದರೆ, ಭಾರತ ಅಷ್ಟು ಸುಲಭವಾಗಿ ತನ್ನ ಮಾರುಕಟ್ಟೆಯ ಬಾಗಿಲು ತೆರೆಯಲು ಸಿದ್ಧವಿಲ್ಲ. ಇತರ ದೇಶಗಳಿಗೆ ಮುಕ್ತ ಮಾರುಕಟ್ಟೆ ಒದಗಿಸುವ ಬದಲು, ಭಾರತ ಆತ್ಮನಿರ್ಭರ ಭಾರತ ಯೋಜನೆಯತ್ತ ತನ್ನ ಹೆಚ್ಚಿನ ಗಮನ ಹರಿಸಿದೆ. ಚೀನಾ ಇದರಿಂದ ಹತಾಶಗೊಂಡಿದ್ದು, ಭಾರತಕ್ಕೆ ತೊಂದರೆ ಉಂಟುಮಾಡಲು ಪಾಕಿಸ್ತಾನವನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಕೇವಲ ಮಿಲಿಟರಿ ಪಾರಮ್ಯಕ್ಕೆ ಸೀಮಿತವಲ್ಲ ಭಾರತದ ಶಕ್ತಿ

ಭಾರತದ ರಾಷ್ಟ್ರೀಯ ಸಾಮರ್ಥ್ಯ ಹಲವಾರು ಸ್ತಂಭಗಳ ಆಧಾರದಲ್ಲಿ ರೂಪುಗೊಂಡಿದೆ. ಅವೆಂದರೆ:

ಸಾಫ್ಟ್ ಪವರ್

ಭಾರತ ತನ್ನ ಶಾಂತಿಯುತ ವ್ಯವಹಾರ ವಿಧಾನ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಕಾರಣದಿಂದಾಗಿ ಜಾಗತಿಕವಾಗಿ ಗೌರವ ಸಂಪಾದಿಸಿದೆ. ಅಮೆರಿಕಾ, ಯುಕೆ, ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ನಾಗರಿಕರು ಆ ದೇಶಗಳಲ್ಲಿ ತೆರಿಗೆ ಪಾವತಿಸುತ್ತಿದ್ದು, ಅಲ್ಲಿನ ನಿಯಮಗಳನ್ನು ಪಾಲಿಸಿ, ಗೌರವಾನ್ವಿತ ನಾಗರಿಕರಾಗಿದ್ದಾರೆ. ಅವರು ಮೌನವಾಗಿಯೇ ಆ ದೇಶಗಳಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಾರೆ.

ರಾಜತಾಂತ್ರಿಕ ಶಕ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಸ್ಲಾಮಿಕ್ ರಾಷ್ಟ್ರಗಳು, ಯುರೋಪ್, ರಷ್ಯಾ, ಮತ್ತು ಅಮೆರಿಕಾಗಳೊಡನೆ ಉತ್ತಮ ಬಾಂಧವ್ಯ ಸಾಧಿಸಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲೂ, ಭಾರತ ಸಮತೋಲನದ ಸ್ಥಾನವನ್ನು ಕಾಯ್ದುಕೊಂಡಿದ್ದು, ಇದು ಜಾಗತಿಕವಾಗಿ ಭಾರತದ ಗೌರವವನ್ನು ಬಹಳಷ್ಟು ಹೆಚ್ಚಿಸಿತು.

ಆರ್ಥಿಕ ಶಕ್ತಿ

ಒಂದು ಪೂರ್ಣ ಪ್ರಮಾಣದ ಯುದ್ಧ ಅತ್ಯಂತ ವೆಚ್ಚದಾಯಕವಾದುದು. ಆದರೆ, ಒಂದು ವೇಳೆ ಯುದ್ಧ ಏರ್ಪಟ್ಟರೆ ಭಾರತದ ಬಳಿ ತನ್ನ ರಕ್ಷಣೆಗೆ ಹಣ ಒದಗಿಸುವ ಸಾಮರ್ಥ್ಯವಿದೆ. ಉದಾಹರಣೆಗೆ, 7 ದಿನಗಳ ಯುದ್ಧಕ್ಕೆ 10 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ. ಆದರೆ, ಅದನ್ನು ಒದಗಿಸಲು ಭಾರತ ಸಮರ್ಥವಾಗಿದೆ.

ಮಿಲಿಟರಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಾಮರ್ಥ್ಯ

ಆಧುನಿಕ ಯುದ್ಧಗಳಿಗೆ ಉಪಗ್ರಹಗಳು, ಸೈಬರ್ ಸಾಮರ್ಥ್ಯ, ಮತ್ತು ನೈಜ ಸಮಯದ ಮಾಹಿತಿಗಳು ಅತ್ಯವಶ್ಯಕವಾಗಿವೆ. ಭಾರತ ಇವೆಲ್ಲವನ್ನೂ ನಿರ್ಮಿಸುವಲ್ಲಿ ಕಾರ್ಯನಿರತವಾಗಿದೆ. ಇಂದಿನ ಮಿಲಿಟರಿ ಮಾನವ ಸಂಪನ್ಮೂಲದ ಮೇಲೆ ಕಡಿಮೆ ಅವಲಂಬಿತವಾಗಿದ್ದು, ತಂತ್ರಜ್ಞಾನದ ಮೇಲೆ ಹೆಚ್ಚು ಆಧಾರಿತವಾಗಿದೆ. ಇದು 'ಸಣ್ಣ ತಂಡಗಳು - ಸ್ಮಾರ್ಟ್ ಆಯುಧಗಳು' ಎಂಬ ಮಾತನ್ನು ಆಧರಿಸಿದೆ.

ಇ-ಆರ್ಬ್ಯಾಟ್ ಮತ್ತು ಐ-ಆರ್ಬ್ಯಾಟ್ ಸಂಯೋಜನೆ

ಸರಳವಾಗಿ ಹೇಳುವುದಾದರೆ, ಇ-ಆರ್ಬ್ಯಾಟ್ (ಇಲೆಕ್ಟ್ರಾನಿಕ್ ಆರ್ಡರ್ ಆಫ್ ಬ್ಯಾಟಲ್) ಎನ್ನುವುದು ಯುದ್ಧದಲ್ಲಿ ಬಳಕೆಯಾಗುವ ರೇಡಾರ್‌ಗಳು, ಜಾಮರ್‌ಗಳು, ಮತ್ತು ಕಣ್ಗಾವಲು ಉಪಕರಣಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಸೂಚಿಸುತ್ತದೆ.

ಐ ಆರ್ಬ್ಯಾಟ್ (ಇನ್ಫಾರ್ಮೇಶನ್ ಆರ್ಡರ್ ಆಫ್ ಬ್ಯಾಟಲ್) ಎನ್ನುವುದು ಗುಪ್ತಚರ ವ್ಯವಸ್ಥೆ, ಅಂದರೆ ಉಪಗ್ರಹಗಳು, ಡ್ರೋನ್‌ಗಳು, ಮತ್ತು ವರದಿಗಳ ಮೂಲಕ ಮಾಹಿತಿ ಕಲೆಹಾಕಿ, ಶತ್ರು ಏನು ಮಾಡುತ್ತಿದ್ದಾನೆ ಎನ್ನುವುದನ್ನು ಪತ್ತೆಹಚ್ಚುವ ವ್ಯವಸ್ಥೆಯಾಗಿದೆ.

ಇವೆರಡೂ ವ್ಯವಸ್ಥೆಗಳನ್ನು ಸಮರ್ಥವಾಗಿ ಸಂಯೋಜಿಸಿದರೆ, ಭಾರತಕ್ಕೆ ಸಮಗ್ರ ಮತ್ತು ನೇರವಾದ ಯುದ್ಧರಂಗದ ಮಾಹಿತಿ ಲಭ್ಯವಾಗುತ್ತದೆ. ಇದು ಕಮಾಂಡ್ ಸೆಂಟರ್ ನೈಜ ಯುದ್ಧದ ಪ್ರದೇಶದಿಂದ ಬಹಳ ದೂರವಿದ್ದರೂ ಭಾರತಕ್ಕೆ ಕ್ಷಿಪ್ರ ಮತ್ತು ನಿಖರವಾದ ಮಿಲಿಟರಿ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಇದನ್ನು 'ನೆಟ್ ಸೆಂಟ್ರಿಕ್ ವಾರ್' ಎಂದು ಕರೆಯಲಾಗುತ್ತದೆ. ಇದರಲ್ಲಿ ಭಾರತ ಅತ್ಯಂತ ಯಶಸ್ವಿ ಮತ್ತು ಸಮರ್ಥವಾಗುತ್ತಿದೆ.

ಅಭಿವೃದ್ಧಿ ಹೊಂದಬೇಕಾದ ಶಕ್ತಿ: ಮಾಧ್ಯಮ

ಭಾರತ ಇಂದಿಗೂ ಹಿಂದುಳಿದಿರುವ ಒಂದು ಕ್ಷೇತ್ರವೆಂದರೆ, ಅದು ರಕ್ಷಣಾ ಮಾಧ್ಯಮ ಮತ್ತು ಮಾಹಿತಿ ಯುದ್ಧ. ಪಾಕಿಸ್ತಾನದ ಮಿಲಿಟರಿ ಐಎಸ್‌ಪಿಆರ್ ಎನ್ನುವು ವಿಶೇಷ ಮಾಧ್ಯಮ ವಿಭಾಗವನ್ನು ಒಳಗೊಂಡಿದೆ. ಇದು ಸುಳ್ಳು ಕತೆಗಳನ್ನು ಹುಟ್ಟುಹಾಕಿ, ಜಗತ್ತಿನ ಹಾದಿ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ನಿವೃತ್ತ ಜನರಲ್‌ಗಳು ಮತ್ತು ಪಾಕ್ ಪರ ಪತ್ರಕರ್ತರು ಜಾಗತಿಕವಾಗಿ ಈ ಕತೆಗಳನ್ನು ಹಂಚುತ್ತಿದ್ದಾರೆ. ಭಾರತವೂ ಪ್ರಬಲ ಮಾಧ್ಯಮ ಧ್ವನಿಯ ಮೂಲಕ, ವಿಶೇಷವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಸುಳ್ಳು ನಿರೂಪಣೆಗಳನ್ನು ಮಟ್ಟಹಾಕಬೇಕು.

ಕುಸಿಯುವ ಹಂತದಲ್ಲಿ ಪಾಕಿಸ್ತಾನ

ಪಾಕಿಸ್ತಾನ ಈಗ ಗಂಭೀರವಾದ ಆಂತರಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿದೆ. ಪಾಕಿಸ್ತಾನದ ಬಹಳಷ್ಟು ಪ್ರಾಂತ್ಯಗಳು ಪಂಜಾಬಿ ಮಿಲಿಟರಿ ನಿಯಂತ್ರಣದಿಂದ ಅತ್ಯಂತ ಅಸಮಾಧಾನಗೊಂಡಿವೆ. ಅದರೊಡನೆ, ಪಾಕಿಸ್ತಾನಿ ಸೇನೆಯ ನಿವೃತ್ತ ಜನರಲ್‌ಗಳು ವಿದೇಶಗಳಿಗೆ ತೆರಳಿ ನೆಲೆಯಾಗುತ್ತಾರೆ. ಉದಾಹರಣೆಗೆ, ಜನರಲ್ ಮುಷರಫ್ ದುಬೈನಲ್ಲಿ ನೆಲೆಸಿದ್ದರೆ, ಇತ್ತೀಚಿನ ಜನರಲ್‌ಗಳು ಯುಕೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ದೇಶದಲ್ಲೇ ಅವರಿಗೆ ಸುರಕ್ಷಿತ ಭಾವನೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.

ಒಂದು ವೇಳೆ ಭಾರತಕ್ಕೆ ದೀರ್ಘಕಾಲೀನ ಶಾಂತಿ ಬೇಕಾದಲ್ಲಿ, ಭಾರತ ಪಾಕಿಸ್ತಾನದಿಂದ ಸ್ವಾಯತ್ತತೆ ಅಥವಾ ಸ್ವಾತಂತ್ರ್ಯ ಬಯಸುತ್ತಿರುವ ಬಲೂಚಿಸ್ತಾನ, ಸಿಂಧ್, ಪಂಜಾಬ್, ಮತ್ತು ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯಗಳಿಗೆ ಬೆಂಬಲ ಒದಗಿಸಬೇಕು. ಭಾರತದ ಇಂತಹ ಪರೋಕ್ಷ ಬೆಂಬಲ ಮತ್ತು ಸಮರ್ಥ ಮಿಲಿಟರಿ ಪ್ರತಿಕ್ರಿಯೆಗಳು ಪಾಕಿಸ್ತಾನಿ ಸೇನೆಯಿಂದ ಬಲಗೊಳ್ಳುವ ಭಯೋತ್ಪಾದನೆಯನ್ನು ಮಟ್ಟಹಾಕಲು ನೆರವಾಗಬಹುದು.

ಹಾಗೆ ನೋಡಿದರೆ, ಈ ಚಕಮಕಿ ಕೇವಲ ಎರಡು ದೇಶಗಳ ನಡುವಿನ ಬಿಕ್ಕಟ್ಟಲ್ಲ. ಇದು ಎರಡು ವಿಭಿನ್ನ ವ್ಯವಸ್ಥೆಗಳ ನಡುವಿನ ಸಮಸ್ಯೆ. ಇಲ್ಲಿ ಭಾರತದ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು, ಇಲ್ಲಿ ಜನರು ಮತದಾನದ ಮೂಲಕ ತಮ್ಮ ಸರ್ಕಾರವನ್ನು ಆರಿಸುತ್ತಾರೆ. ಇನ್ನೊಂದೆಡೆ ಪಾಕಿಸ್ತಾನ ಮಿಲಿಟರಿ ಸರ್ವಾಧಿಕಾರವಾಗಿದ್ದು, ಜನರಲ್‌ಗಳು ಭಯ ಮೂಡಿಸಿ, ಅಧಿಕಾರವನ್ನು ನಿಯಂತ್ರಿಸುತ್ತಾರೆ.

ಭಾರತದ ಏಕತೆ, ಶಕ್ತಿ ಮತ್ತು ಬೆಳೆಯುತ್ತಿರುವ ಆರ್ಥಿಕತೆ ಅದಕ್ಕೆ ಪಾಕಿಸ್ತಾನದ ವಿರುದ್ಧ ಮೇಲುಗೈ ನೀಡಿದೆ. ಆದರೆ, ಭಾರತ ಸದಾ ಜಾಗೃತವಾಗಿದ್ದು, ನಮ್ಮ ಮಾಧ್ಯಮ ಧ್ವನಿಯನ್ನು ಬಲಪಡಿಸಿ, ಜಗತ್ತಿಗೆ ನಮ್ಮ ಬದಿಯ ವಿಚಾರವನ್ನೂ ಸಾರಬೇಕು.

ಹಾಗಾದಾಗ ಮಾತ್ರವೇ ನಾವು ಸುದೀರ್ಘ ಶಾಂತಿ ಮತ್ತು ಪ್ರಾದೇಶಿಕ ಭದ್ರತೆಯನ್ನು ಸಾಧಿಸಲು ಸಾಧ್ಯವಾದೀತು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT