ಪ್ರಿಯಾಂಕ್ ಖರ್ಗೆ- ಮೋಹನ್ ಭಾಗ್ವತ್ online desk
ಅಂಕಣಗಳು

D-ಕೋಡ್: ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಹಾಗೂ ಆರ್‌ಎಸ್‌ಎಸ್‌ ಉತ್ತರ: ವಿಶ್ಲೇಷಣೆ

ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸಂವಿಧಾನಬದ್ಧವಾಗಿದೆ. ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ?” ಎಂದರು. ಹಾಗೆ ನೋಡಿದರೆ ಇದು ಸಂಪೂರ್ಣ ಸಮರ್ಪಕ ಉತ್ತರವಲ್ಲದೆ, ಪ್ರಶ್ನೆ ಕೇಳಿದವರನ್ನೇ ಮತ್ತೆ ಪ್ರಶ್ನಿಸುವುದು, ಕಾಲೆಳೆಯುವಂತೆಯೇ ಇತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇತ್ತೀಚೆಗೆ ಒಂದು ವಿಚಾರದ ಮೂಲಕವೇ ಸುದ್ದಿಯಲ್ಲಿದ್ದಾರೆ. 1925ರಲ್ಲಿ ಆರಂಭವಾಗಿ ಇದೀಗ ನೂರನೇ ವರ್ಷವನ್ನು ಪೂರೈಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಕಳೆದ ಅಕ್ಟೋಬರ್‌ 2 ರಂದು ನಡೆದ ವಿಜಯ ದಶಮಿ ಆಸುಪಾಸಿನಿಂದ ಆರಂಭಿಸಿ ನಿರಂತರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಆರ್‌ಎಸ್‌ಎಸ್‌ಗೆ ನೂರನೇ ವರ್ಷದ ಸಂದರ್ಭದಲ್ಲಿ ಸರಸಂಘಚಾಲಕ (ಮುಖ್ಯಸ್ಥ) ಡಾ. ಮೋಹನ್‌ ಭಾಗವತ್‌ ಅವರು ಬೆಂಗಳೂರಿನಲ್ಲಿ ಎರಡು ದಿನ ಸರಣಿ ಉಪನ್ಯಾಸ ನೀಡಿದರು. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಸಾಹಿತ್ಯ, ಸಂಸ್ಕೃತಿ, ಉದ್ಯಮ, ಸಾಮಾಜಿಕ ಸೇವೆ, ಪತ್ರಿಕೋದ್ಯಮ ಸೇರಿ ಅನೇಕ ಕ್ಷೇತ್ರಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಆಹ್ವಾನಿತ ಗಣ್ಯರ ಎದುರು ನಾಲ್ಕು ಅವಧಿಗಳಲ್ಲಿ ಆರು ಗಂಟೆಗೂ ಹೆಚ್ಚು ಸಮಯ ವಿಚಾರ ಮಂಡಿಸಿದರು.

ಮೊದಲ ದಿನ ಎರಡು ಅವಧಿಗಳಲ್ಲಿ ಮಾತನಾಡಿದರು. ಮೊದಲ ಅವಧಿಯಲ್ಲಿ, ಆರ್‌ಎಸ್‌ಎಸ್‌ ಆರಂಭವಾದ ಬಗೆಯನ್ನು ವಿವರಿಸಿದರು. ಎರಡನೇ ಅವಧಿಯಲ್ಲಿ, ನೂರನೇ ವರ್ಷದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕೈಗೊಳ್ಳಲಿರುವ ಪ್ರಮುಖ ಯೋಜನೆಗಳನ್ನು ವಿವರಿಸಿದರು.

ಮೀಸಲಾತಿಯು ಅರ್ಹತೆಗೆ ವಿರುದ್ಧವಲ್ಲ

ಮೊದಲ ದಿನ ಆಗಮಿಸಿದ್ದ ಗಣ್ಯರಲ್ಲಿ 285 ಜನರು ಲಿಖಿತವಾಗಿ ಕೇಳಿದ್ದ ಸುಮಾರು 480 ಪ್ರಶ್ನೆಗಳಿಗೆ ಎರಡನೇ ದಿನದ ಎರಡು ಅವಧಿಗಳಲ್ಲಿ ಮೋಹನ್‌ ಭಾಗವತ್‌ ಅವರು ಉತ್ತರಿಸಿದರು/ಪ್ರತಿಕ್ರಿಯಿಸಿದರು. ಇದರಲ್ಲಿ ಮುಖ್ಯವಾಗಿ ಅವರು ಮೀಸಲಾತಿ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಖಾರವಾಗಿಯೇ ಉತ್ತರಿಸಿದರು. ‘ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಸ್ಥಗಿತಗೊಳಿಸಿ ಅರ್ಹತೆ ಉತ್ತೇಜಿಸುವುದು ಹೇಗೆ?’ ಎಂಬ ಪ್ರಶ್ನೆಗೆ ಮೋಹನ್‌ ಭಾಗವತ್‌ ಅವರು ಹೀಗೆ ಉತ್ತರಿಸಿದರು:

“ಮೀಸಲಾತಿಗೂ ಅರ್ಹತೆಗೂ ಸಂಬಂಧವಿಲ್ಲ ಎನ್ನುವುದನ್ನು ಮೊದಲು ತಿಳಿಯಿರಿ. ಮೀಸಲಾತಿ ಪಡೆಯದವರಲ್ಲಿ ಮಾತ್ರ ಯೋಗ್ಯತೆ ಇದೆ ಎನ್ನುವ ತಿಳುವಳಿಕೆ ತಪ್ಪು. ಮೀಸಲಾತಿ ಬೇಕಾದ ಸಮಾಜದಲ್ಲೂ ಯೋಗ್ಯತೆ, ಬುದ್ಧಿವಂತಿಕೆ ಇದೆ. ಎರಡನ್ನೂ

ಸಮೀಕರಿಸಬೇಡಿ. ಎಲ್ಲ ವರ್ಗಗಳೂ ಮೇಲೆ ಬರಬೇಕು. ಇಲ್ಲದಿದ್ದರೆ ಅರ್ಹತೆಗೆ ಬೆಲೆಯಿರುವುದಿಲ್ಲ. ಅವಕಾಶ, ಪ್ರೀತಿಯಲ್ಲಿ ಗೌರವದಲ್ಲಿ ಸಮಾನತೆಯನ್ನು ತರುವುದೊಂದೇ ಮೀಸಲಾತಿಯನ್ನು ತಡೆಯುವ ಮಾರ್ಗ. ಸಮಾಜದಲ್ಲಿ ಇನ್ನೂ ಭೇದಭಾವ, ಅಸ್ಪೃಶ್ಯತೆ ಜೀವಂತವಾಗಿದೆ. ಮೀಸಲಾತಿ ಮುಂದುವರಿಯಲಿ, ಅಸಮಾನತೆ ಕೊನೆಗೊಳ್ಳಲಿ. ಹೃದಯವನ್ನು ಕುಬ್ಜವಾಗಿಸಿಕೊಳ್ಳುವುದು ಬೇಡ. ಮುಕ್ತ ಮನಸ್ಸಿನಿಂದ ಆಲೋಚಿಸೋಣ” ಎಂದರು.

ಆರ್‌ಎಸ್‌ಎಸ್‌ ಮೀಸಲಾತಿ ವಿರುದ್ಧ ಎಂಬ ನರೇಟಿವ್‌ ಇದೆ. ಆದರೆ ಅಸ್ಪೃಶ್ಯತೆ, ಮೀಸಲಾತಿ ಕುರಿತು ಆರ್‌ಎಸ್‌ಎಸ್‌ ಎಂದಿಗೂ ತನ್ನ ನಿಲುವನ್ನು ಸ್ಪಷ್ಟವಾಗಿಯೇ ಹೇಳಿದೆ. ‘ಅಸ್ಪೃಶ್ಯತೆ ತಪ್ಪಿಲ್ಲದಿದ್ದಲ್ಲಿ ಜಗತ್ತಿನಲ್ಲಿ ಯಾವುದೂ ತಪ್ಪಲ್ಲ’ ಎಂಬ ಅತ್ಯಂತ ಕಠಿಣ ನಿಲುವನ್ನು ಪಡೆದವರು ಆರ್‌ಎಸ್‌ಎಸ್‌ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್‌ ದೇವರಸ್‌ ಅವರು. ಅದರಲ್ಲೂ ಈ ಮಾತನ್ನು ಹೇಳುವ ಸಂದರ್ಭದಲ್ಲಿ (80-90ರ ದಶಕ) ಆರ್‌ಎಸ್‌ಎಸ್‌ ಸಂಘಟನೆಯು ಈ ಪ್ರಮಾಣದಲ್ಲಿ ಭೌಗೋಳಿಕವಾಗಿಯೂ, ಸಾಮಾಜಿಕವಾಗಿಯೂ ವ್ಯಾಪಕತೆಯನ್ನು ಪಡೆದಿರಲಿಲ್ಲ ಎನ್ನುವುದು ಗಮನೀಯ. 2015ರ ಬಿಹಾರ ಚುನಾವಣೆ ಸಮಯದಲ್ಲಿ ಮೋಹನ್‌ ಭಾಗವತ್‌ ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದರು ಎಂಬ ಗುಲ್ಲೆಬ್ಬಿಸಲಾಯಿತು. ಈ ಹೇಳಿಕೆಯಿಂದಲೇ ಬಿಜೆಪಿ ಮೈತ್ರಿಕೂಟವು ಚುನಾವಣೆಯಲ್ಲಿ ಸೋತಿತು ಎಂದು ಚುನಾವಣಾ ವಿಶ್ಲೇಷಕರು, ಕೆಲವು ಹಂತಕ್ಕೆ, ಸೋತ ಬಿಜೆಪಿ ಪಕ್ಷದ ನಾಯಕರೂ ಭಾಗವತ್‌ ಅವರ ಮೇಲೆ ಗೂಬೆ ಕೂರಿಸಿದರು. ಆ ಘಟನೆಗೆ ಹಿಂದೆಯೂ, ನಂತರವೂ ಮೀಸಲಾತಿ, ಅಸ್ಪೃಶ್ಯತೆ ಕುರಿತು ಆರ್‌ಎಸ್‌ಎಸ್‌ ನಿಲುವಿನಲ್ಲಿ ವ್ಯತ್ಯಾಸವಾಗಿಲ್ಲವಾದರೂ ಅದನ್ನು ವ್ಯಕ್ತಪಡಿಸುವ ಭಾಷೆಯಲ್ಲಿ ಗೊಂದಲಕ್ಕೆ ಅವಕಾಶ ಇಲ್ಲದಂತೆ ಎಚ್ಚರಿಕೆ ವಹಿಸಲಾಗುತ್ತಿರುವುದು ಗೋಚರಿಸುತ್ತಿದೆ.

ರಾಜಕೀಯೇತರ ಸಂಘಟನೆ?

ಮೋಹನ್‌ ಭಾಗವತ್‌ ಅವರು ಆರ್‌ಎಸ್‌ಎಸ್‌ನ ರಾಜಕೀಯ ಆದ್ಯತೆ, ಬಿಜೆಪಿಯ ಸಂಬಂಧದ ಕುರಿತು ಉತ್ತರಿಸುತ್ತ, “ಸಂಘವು ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ. ರಾಜಕೀಯ ಕ್ಷೇತ್ರ ಎನ್ನುವುದು ಅದರ ಮೂಲ ಸ್ವಭಾವದಲ್ಲೇ ಸಮಾಜದಲ್ಲಿ ಭಿನ್ನತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಾವು ರಾಜಕೀಯದಿಂದ ದೂರವಿದ್ದೇವೆ. ನಾವು ನೀತಿಯನ್ನು ಬೆಂಬಲಿಸುತ್ತೇವೆ. ವ್ಯಕ್ತಿ, ಪಕ್ಷವನ್ನಲ್ಲ, ನೀತಿಗೆ ನಮ್ಮ ಬೆಂಬಲ. ನಮಗೆ ಒಂದು ಪಕ್ಷದ ಮೇಲೆ ನಮಗೆ ವಿಶೇಷ ಪ್ರೀತಿ ಇಲ್ಲ. ಸಂಘದ ಪಕ್ಷ ಎನ್ನುವುದು ಯಾವುದೂ ಇಲ್ಲ, ಎಲ್ಲ ಪಕ್ಷಗಳೂ ನಮ್ಮವೆ. ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೇ ವಿನಃ ರಾಜನೀತಿಯನ್ನಲ್ಲ” ಎಂದರು. ಹಾಗೆಯೇ, “ರಾಮಮಂದಿರ ಬೇಕೆಂದು ಬಯಸಿದೆವು. ಯಾರು ಈ ನಿರ್ಮಾಣಕ್ಕೆ ಬೆಂಬಲಿಸಿದರೋ ಆ ಪಕ್ಷ ಬಿಜೆಪಿಯನ್ನು ಸ್ವಯಂಸೇವಕರು ಬೆಂಬಲಿಸಿದರು. ಕಾಂಗ್ರೆಸ್‌ ಇದಕ್ಕೆ ಮುಂದಾಗಿದ್ದರೆ ಬಹುಶಃ ಸ್ವಯಂಸೇವಕರು ಆ ಪಕ್ಷವನ್ನೂ ಬೆಂಬಲಿಸುತ್ತಿದ್ದರು” ಎಂದೂ ತಿಳಿಸಿದರು.

ತಾತ್ತ್ವಿಕವಾಗಿ ಮೋಹನ್‌ ಭಾಗವತ್‌ ಅವರ ಉತ್ತರ ಸರಿಯಿರಬಹುದು. ಆದರೆ ಸಾಮಾನ್ಯ ಜನರ ಕಣ್ಣು, ಕಿವಿಗೆ ಬೀಳುತ್ತಿರುವ ಸುದ್ದಿಗಳ ಆಧಾರದಲ್ಲಿ ಹಾಗೂ ಚುನಾವಣೆಯ ಸಂದರ್ಭದಲ್ಲಿ ಮತ್ತು ವಿವಿಧೆಡೆ ಬಿಜೆಪಿ ಸರ್ಕಾರಗಳ ಆಡಳಿತವಿರುವಾಗ ಆರ್‌ಎಸ್‌ಎಸ್‌ ಕಾರ್ಯಕರ್ತರ ಭಾಗವಹಿಸುವಿಕೆಯನ್ನು ಕಂಡವರಿಗೆ ಈ ಉತ್ತರವನ್ನು ಅರಗಿಸಿಕೊಳ್ಳುವುದು ಕಷ್ಟ. ಆಂತರ್ಯದಲ್ಲಿ ಏನೇ ಇದ್ದರೂ ಪಂಚೇದ್ರಿಯಗಳು ಈ ಉತ್ತರವನ್ನು ನಿರಾಕರಿಸುತ್ತವೆ. ಸಂವಾದದಲ್ಲಿ ನೀಡಿದ ಇತರೆ ಉತ್ತರಗಳಂತೆ ಈ ಉತ್ತರವೂ ಸಹಜವಾಗಿ ಜೀರ್ಣವಾಗಬೇಕೆಂದರೆ ಬಿಜೆಪಿ ಜೊತೆಗೆ ಹೊಂದಿರುವ ಸಂಬಂಧದಲ್ಲಿ ಅಗಾಧ ಬದಲಾವಣೆ ಅಥವಾ ಪಾರದರ್ಶಕತೆಯನ್ನು ಮೂಡಿಸುವ ಹೊಣೆಗಾರಿಕೆಯೂ ಆರ್‌ಎಸ್‌ಎಸ್‌ ಮೇಲೆಯೇ ಇದೆ.

ನೋಂದಣಿ ವಿಚಾರ:

ಹೀಗೆ ಅನೇಕ ವಿಚಾರಗಳಿಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಪ್ರಿಯಾಂಕ್‌ ಖರ್ಗೆ ಅವರು ಅನೇಕ ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೂ ಉತ್ತರಿಸಿದರು. ಆರ್‌ಎಸ್‌ಎಸ್‌ ಅನ್ನು ಏಕೆ ಸರ್ಕಾರಿ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿಲ್ಲ ಎನ್ನುವುದು ಪ್ರಿಯಾಂಕ್‌ ಖರ್ಗೆ ಅವರ ಪ್ರಶ್ನೆ. ಪ್ರಶ್ನೆಯೇನೂ ಕಾನೂನುಬಾಹಿರವಲ್ಲ. ಯಾವುದೇ ಸಂಘಟನೆ ಏಕೆ ನೋಂದಣಿಯಾಗಿಲ್ಲ ಎಂದು ಕೇಳಲು ಎಲ್ಲರಿಗೂ ಅಧಿಕಾರವಿದೆ. ಆದರೆ ಇದೇನೋ ಬಹಳ ಗಂಭೀರವಾದ ಪ್ರಶ್ನೆಯಲ್ಲ ಎನ್ನುವುದು ಸಂವಿಧಾನದ ಸಾಮಾನ್ಯ ಜ್ಞಾನವಿರುವವರಿಗೂ ತಿಳಿದುವಂಥದ್ದೆ. ನೋಂದಣಿ ಆಗಲೇಬೇಕು ಎಂಬ ಆಗ್ರಹ ಸಂವಿಧಾನದಲ್ಲಿ ಎಲ್ಲಿದೆ? ಎಂಬ ಮರುಪ್ರಶ್ನೆಗೆ ಅವರಲ್ಲಿ ಉತ್ತರ ಇಲ್ಲ.

ಸಂವಿಧಾನದ ಅನುಚ್ಛೇದ 19(ಸಿ) ಈ ಕುರಿತು ಸ್ಪಷ್ಟವಾಗಿ ಹೇಳಿದೆ. “ಭಾರತದ ಸಮಸ್ತ ನಾಗರಿಕರೂ ಸಂಸ್ಥೆಗಳನ್ನು ಅಥವಾ ಸಂಘಗಳನ್ನು (ಅಥವಾ ಸಹಕಾರ ಸಂಘಗಳನ್ನು) ರಚಿಸುವ ಹಕ್ಕನ್ನು ಹೊಂದಿರತಕ್ಕದ್ದು”. ಎಂದು ತಿಳಿಸಲಾಗಿದೆ. ಈ ವಿಚಾರವು ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲೂ ಆಗಮಿಸಿತ್ತು. ಸಂಘ ಸಂಸ್ಥೆಗಳನ್ನು ರಚಿಸಿಕೊಳ್ಳುವುದನ್ನು ಮೂಲಭೂತ ಹಕ್ಕು ಎಂದು ಹೇಳುವುದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದಲ್ಲವೇ ಎಂದು ಕೆಲವು ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ಸಂವಿಧಾನ ಕರ್ತೃ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು, ದೇಶದಲ್ಲಿ ಮೂಲಭೂತ ಹಕ್ಕು ಎನ್ನುವುದು ತನ್ನಷ್ಟಕ್ಕೆ ತಾನು ಸಂಪೂರ್ಣವಲ್ಲ. ಅದು ದೇಶದ ಸಾರ್ವಭೌಮತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಯನ್ನು ಮೀರುವಂತಿಲ್ಲ. ಮೀರಿದರೆ ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇದ್ದೇ ಇರುತ್ತದೆ ಎಂದಿದ್ದರು. ಹಾಗಾಗಿ ಯಾವುದೇ ಸಂಘಸಂಸ್ಥೆಯನ್ನು ನೋಂದಣಿ ಮಾಡಲೇಬೇಕು ಎಂಬುದು ಆಯ್ಕೆಯೇ ಹೊರತು ಕಡ್ಡಾಯವಲ್ಲ ಎನ್ನುವುದು ತಿಳಿಯುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸ್ವಯಂಸೇವಕರಿಂದ ಪಡೆಯುವ ಗುರುದಕ್ಷಿಣೆ ಹಣಕ್ಕೆ ಆದಾಯ ತೆರಿಗೆ ಇಲಾಖೆಯು ವಿನಾಯಿತಿ ನೀಡಿರುವುದರಿಂದ, ಸರ್ಕಾರದ ಸಂಸ್ಥೆಯೊಂದರ ನಿಗಾವಣೆಯಲ್ಲಿ ಆರ್‌ಎಸ್‌ಎಸ್‌ ಈಗಾಗಲೆ ಇದೆ ಎನ್ನುವುದು ಸ್ಪಷ್ಟ. ಇಷ್ಟರ ನಂತರವೂ ಆರ್‌ಎಸ್‌ಎಸ್‌ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತವಾಗಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲು ಅಥವಾ ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ ಇದ್ದೇ ಇದೆ. ಈ ಅಧಿಕಾರವನ್ನೇ ಬಳಸಿ ಸರ್ಕಾರ ಈಗಾಗಲೆ ಮೂರು ಬಾರಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದೆ, ಕಾನೂನು ಪ್ರಕಾರವೇ ನಿಷೇಧವನ್ನು ತೆರವುಗೊಳಿಸಿದೆ.

ನೋಂದಣಿ ಕುರಿತ ಈ ವಾದಗಳು ಗೌಪ್ಯವಾಗೇನೂ ಇಲ್ಲ, ಸಾರ್ವಜನಿಕವಾಗಿಯೇ ಲಭ್ಯವಿರುವ ಮಾಹಿತಿಯೇ ಅದನ್ನು ಸ್ಪಷ್ಟಪಡಿಸುತ್ತದೆ. ಆದರೂ ಪ್ರಿಯಾಂಕ್‌ ಖರ್ಗೆ ಅವರು ಪದೇಪದೆ ಈ ಪ್ರಶ್ನೆ ಎತ್ತುತ್ತಿರುವುದು ‘ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧ’ ಎನ್ನುವಂತೆ ಕಾಣುತ್ತಿದೆ. ಅತ್ತ ಮೋಹನ್‌ ಭಾಗವತ್‌ ಅವರು ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿರುವಾಗಲೇ ಹತ್ತು ಪ್ರಶ್ನೆಗಳನ್ನು ಪ್ರಿಯಾಂಕ್‌ ಅವರು ಕೇಳಿದರು. ಅಲ್ಲಿನ 11 ಪ್ರಶ್ನೆಗಳೂ ಈಗಾಗಲೆ ಅನೇಕ ಬಾರಿ ಆರ್‌ಎಸ್‌ಎಸ್‌ ಉತ್ತರಿಸಿರುವಂಥವೆ. ಸುಮಾರು 75 ವರ್ಷದ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಿರುವ ಆರ್‌ಎಸ್‌ಎಸ್‌ ಸಂವಿಧಾನದಿಂದಲೂ ಈ ಪ್ರಶ್ನೆಗಳಲ್ಲಿ ಹಲವಕ್ಕೆ ಉತ್ತರ ಲಭಿಸುತ್ತದೆ. ಇಷ್ಟೆಲ್ಲದರ ನಂತರವೂ ನೋಂದಣಿ ಕುರಿತ ಪ್ರಶ್ನೆಗೆ ಸಂವಾದದಲ್ಲಿ ಮೋಹನ್‌ ಭಾಗವತ್‌ ಅವರು ನೀಡಿದ ಉತ್ತರ ಹೀಗಿದೆ.

“ಸಂಘ ಆರಂಭವಾಗಿದ್ದು 1925ರಲ್ಲಿ. ಸಂಘವನ್ನು ಆರಂಭಿಸಿದ ಡಾ. ಹೆಡಗೆವಾರರು ಬ್ರಿಟಿಷರ ವಿರುದ್ಧವೇ ಹೋರಾಡಿದವರು. ಹಾಗಾದರೆ ನಾವು ಬ್ರಿಟಿಷ್‌ ಸರ್ಕಾರದಲ್ಲಿ ನೋಂದಣಿ ಆಗಬೇಕಿತ್ತೇ? ಸ್ವಾತಂತ್ರ‍್ಯದ ನಂತರ ಸರ್ಕಾರವು ಸಂಘವನ್ನು ‘ವ್ಯಕ್ತಿಗಳ ಸಂಘಟನೆ’ ಎಂದು ಗುರುತಿಸಿದೆ, ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಅದೂ ಗುರುತಿಸಿದೆ ಎಂದಲ್ಲವೇ? ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ. ಸಂವಿಧಾನಬದ್ಧವಾಗಿದೆ. ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ?” ಎಂದರು. ಹಾಗೆ ನೋಡಿದರೆ ಇದು ಸಂಪೂರ್ಣ ಸಮರ್ಪಕ  ಉತ್ತರವಲ್ಲದೆ, ಪ್ರಶ್ನೆ ಕೇಳಿದವರನ್ನೇ ಮತ್ತೆ ಪ್ರಶ್ನಿಸುವುದು, ಕಾಲೆಳೆಯುವಂತೆಯೇ ಇತ್ತು. ಬಹುಶಃ ಪದೇ ಪದೆ ಇದೇ ಪ್ರಶ್ನೆಗೆ ಉತ್ತರಿಸಿದರೂ ಬೇಕೆಂದೇ ಕೇಳುವ ಕಾರಣಕ್ಕೆ ಮೋಹನ್‌ ಭಾಗವತ್‌ ಅವರು ಹೀಗೆ ಉತ್ತರಿಸಿದ್ದಾರೆ ಎನ್ನಿಸುತ್ತದೆ.

ಈ ಅಭಿಪ್ರಾಯಕ್ಕೆ ಬರಲು ಇನ್ನೊಂದು ಪ್ರಶ್ನೆಗೆ ನೀಡಿದ ಉತ್ತರ ಕಾರಣ. ತನ್ನ ಕುರಿತ ಟೀಕೆಗಳಿಗೆ ಆರ್‌ಎಸ್‌ಎಸ್‌ ಏಕೆ ಪ್ರತಿಕ್ರಿಯಿಸುವುದಿಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, “ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಾಗಿಲ್ಲ. ಕೆಲವರು ಒಂದೇ ಪ್ರಶ್ನೆಯನ್ನು ಪದೇಪದೆ ಕೇಳುತ್ತಾರೆ. ಸುಖಾಸುಮ್ಮನೆ, ಅನುಮಾನಾಸ್ಪದವಾಗಿ ಪ್ರಶ್ನೆ ಕೇಳುತ್ತಾರೆ. ಅವರಿಗೆ ಉತ್ತರಿಸುವ ಅಗತ್ಯವಿಲ್ಲ. ಎಲ್ಲರಿಗೂ ಉತ್ತರಿಸುತ್ತಾ ನಮ್ಮ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ, ನಮಗೆ ಮಾಡಲು ಬೇರೆ ಕೆಲಸಗಳಿವೆ. ಹಾಗೆ ನೋಡಿದರೆ ಟೀಕೆಗಳೇ ನಮ್ಮನ್ನು ಹೆಚ್ಚು ಪ್ರಸಿದ್ಧಿ ಮಾಡುತ್ತಿವೆ. ಈಗಂತೂ ಕರ್ನಾಟಕದಲ್ಲಿ ಇದಕ್ಕೆ ಎಲ್ಲರೂ ಸಾಕ್ಷಿಯಾಗಿದ್ದೀರಿ. ಯಾರು ನೈಜ ಉದ್ದೇಶದಿಂದ ಪ್ರಶ್ನಿಸುತ್ತಾರೆಯೋ ಅವರಿಗೆ ಖಂಡಿತ ಉತ್ತರಿಸುತ್ತೇವೆ. ಸುಖಾಸುಮ್ಮನೆ ಕೇಳುವವರಿಗೆ ಏಕೆ ಉತ್ತರಿಸಬೇಕು?” ಎಂದರು. ಬಹುಶಃ ಪ್ರಿಯಾಂಕ್‌ ರ‍್ಗೆ ಅವರ ಟೀಕೆಗಳಿಗೆ ನೀಡಿದ ಉತ್ತರದ ರೀತಿಯನ್ನು ನೋಡಿದರೆ, ಪ್ರಿಯಾಂಕ್‌ ಖರ್ಗೆ ಅವರನ್ನು ಆರ್‌ಎಸ್‌ಎಸ್‌ ಸಂಘಟನೆಯು ‘ಸುಖಾಸುಮ್ಮನೆ’ ಪ್ರಶ್ನೆ ಕೇಳುವ ಗುಂಪಿಗೆ ಸೇರಿಸಿದೆ ಎನ್ನಿಸುತ್ತಿದೆ.

- ರಮೇಶ್ ದೊಡ್ಡಪುರ

journoramesha@gmail.com

(ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಗಲಕೋಟೆ: ರೈತರ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚುತ್ತಿರುವ Video ವೈರಲ್; ಮೂರು FIR ದಾಖಲು

ಪಶ್ಚಿಮ ಬಂಗಾಳದ ರಾಜಭವನದಲ್ಲಿ ಶಸ್ತ್ರಾಸ್ತ್ರ ದಾಸ್ತಾನಿದೆ: ಟಿಎಂಸಿ ಸಂಸದನ ಆರೋಪಕ್ಕೆ ರಾಜ್ಯಪಾಲರ ಎಚ್ಚರಿಕೆ

1st test: ಭಾರತದ ಸೋಲಿಗೆ ಆ 'ಇಬ್ಬರೇ ಕಾರಣ': ಉಪ ನಾಯಕ ರಿಷಬ್ ಪಂತ್ ಹೇಳಿಕೆ

ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

Cricket: ಭಾರತ vs ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, 3 ದಾಖಲೆಗಳ ನಿರ್ಮಾಣ

SCROLL FOR NEXT