ಭಾರತದ ನ್ಯಾಯಾಂಗ (ಸಾಂಕೇತಿಕ ಚಿತ್ರ) online desk
ಅಂಕಣಗಳು

ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

ವ್ಯವಸ್ಥೆಯ ವಿರುದ್ಧ ಕ್ರಾಂತಿ ಎಂದಾಗಲೆಲ್ಲ ರಾಜಕಾರಣಿಗಳ ಮುಖವೇ ನೆನಪಾಗುತ್ತದೆ. ಆದರೆ ಕಾರ್ಯಾಂಗ, ನ್ಯಾಯಾಂಗಗಳದ್ದೇನು ಕತೆ ಎಂಬುದನ್ನು ಯೋಚಿಸಿ....

ಇತ್ತೀಚೆಗೆ ನೇಪಾಳದಲ್ಲಿ ಜೆನ್ಜಿ ಎಂಬ ಸಮೂಹ ಬೀದಿಗೆ ಬಂದಿದ್ದು, ಲಢಾಕಿನಲ್ಲಿ ಸಹ ಅಂಥದೊಂದು ಚಿಕ್ಕ ಮಾದರಿ ಕಾಣಿಸಿ ನಂತರ ಮಾಯವಾಗಿದ್ದು ಇವೆಲ್ಲವನ್ನೂ ಇಟ್ಟುಕೊಂಡು ಹಲವರು ರೊಮಾಂಟಿಕ್ ಆಗಿ ಮಾತನಾಡುವುದಿದೆ.

ಭಾರತದಲ್ಲಿ ಸಹ ಜೆನ್ಜಿಗಳು ಬೀದಿಗೆ ಬಂದು ಅಧಿಕಾರ ಬದಲಾಯಿಸುವಂತಾಗಿಬಿಡಬೇಕು ಎಂಬುದು ಮೋದಿ ಪ್ರಣೀತ ಸರ್ಕಾರವನ್ನು ವಿರೋಧಿಸಿಕೊಂಡಿರುವವರ ಆಶಯವಾದರೆ, ಇನ್ನೊಂದೆಡೆ ಇಂಥ ನಿರ್ದಿಷ್ಟ ರಾಜಕೀಯ ನಿಲುವುಗಳೇನನ್ನೂ ಇಟ್ಟುಕೊಳ್ಳದವರು ಸಹ “ನೋಡಿ… ನಮ್ಮಲ್ಲೂ ಸಹ ಭ್ರಷ್ಟ ರಾಜಕಾರಣಿಗಳ ಮೇಲೆ ಹೀಗೆಯೇ ಬೀದಿಯಲ್ಲಿ ಆಕ್ರೋಶ ಸ್ಫೋಟಗೊಳ್ಳುವ ಸಮಯ ಬರುತ್ತದೆ” ಎಂದೆಲ್ಲ ವಾದಿಸುವವರಿದ್ದಾರೆ.

ರಾಜಕಾರಣವು ಭ್ರಷ್ಟವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಪ್ರಶ್ನೆ ಇರುವುದು ಸಮಾಜವು ಭ್ರಷ್ಟವಾಗದೇ ಉಳಿದಿದೆಯಾ ಎಂಬುದರಲ್ಲಿ. ಸಮಾಜಕ್ಕೆ ನಿಜಕ್ಕೂ ಅಷ್ಟೆಲ್ಲ ನೈತಿಕ ಗಟ್ಟಿತನ ಇದ್ದದ್ದೇ ಆದರೆ ನಿರ್ಲಜ್ಜವಾಗಿ ಲೂಟಿಗೈದ, ಅರಾಜಕತೆ ಮಾದರಿಯನ್ನೇ ಸೃಷ್ಟಿಸಿದ ಲಾಲು ಪ್ರಸಾದರಂಥ ರಾಜಕಾರಣಿಗಳು ಆರಾಮಾಗಿ ಇರಬಾರದಿತ್ತಲ್ಲವೇ? ಯೋಚಿಸಿ ನೋಡಿ… ಇವತ್ತಿಗೆ ಪರಮ ಭ್ರಷ್ಟ, ನಿಷ್ಪ್ರಯೋಜಕ ಎಂದು ತಾವೇ ಪಕ್ಕಕ್ಕೆ ಸರಿಸಿದ ರಾಜಕಾರಣಿಗಳನ್ನು ಕೆಲ ವರ್ಷಗಳ ನಂತರ ಅದೇ ಜನ ಆರಿಸಿ ಕಳುಹಿಸುತ್ತಾರೆ. ಕೇವಲ ಹಣದ ವಿಷಯದಲ್ಲಿ ಭ್ರಷ್ಟರಾದವರಷ್ಟೇ ಅಲ್ಲ, ಹೆಣ್ಣಿನ ವಿಚಾರದಲ್ಲಿ ಲಂಪಟರಾದವರು, ವ್ಯಭಿಚಾರಿಗಳಾಗಿರುವವರು ಸಹ ಮತ್ತೆ ಆರಿಸಿಬಂದಿರುವುದರ ಉದಾಹರಣೆಗಳಿವೆ.

ಅರ್ಥ ಮಾಡಿಕೊಳ್ಳಬೇಕಾದ ಮಾನಸಿಕ ಲೆಕ್ಕಾಚಾರ

ಬಹುಶಃ, ರಾಜಕಾರಣಿಗಳ ವಿಷಯದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಸೈಕಾಲಜಿ ಅವರಿಗೆ ವರದಾನವಾಗಿ ಕೆಲಸ ಮಾಡುತ್ತಿರುತ್ತದೆ. ಅದೇನೆಂದರೆ, ಯಾವುದಾದರೂ ಚುನಾವಣೆಯಲ್ಲಿ ರಾಜಕೀಯ ನಾಯಕನ ಪಕ್ಷಕ್ಕೋ, ಆತನಿಗೋ ಹಿನ್ನಡೆಯಾಗುವಂತೆ ಮತ ಚಲಾಯಿಸಿದ ನಂತರ ಜನರು ಒಂದು ರಿಲೀಫ್ ಅನುಭವಿಸುತ್ತಾರೆ. ನಾವು ಆತನನ್ನೋ, ಆಕೆಯನ್ನೋ ಶಿಕ್ಷಿಸಿ ಆಯ್ತು ಎಂಬ ಭಾವವದು. ಹಾಗೆಂದೇ, ಸೋತ ಕ್ಷಣದಲ್ಲಿ ಗರ್ವಭಂಗ, ಅಹಂಕಾರಕ್ಕೆ ಸಿಕ್ಕ ಉತ್ತರ ಎಂದೆಲ್ಲ ಪದಪುಂಜಗಳು ಮೆರೆಯುತ್ತವೆ. ಸೋತಿರುವ ವೃತ್ತಿಪರ ರಾಜಕಾರಣಿ ಸಹ ಆ ಕ್ಷಣಗಳನ್ನು ತುಟಿಕಚ್ಚಿ ಸಹಿಸಿಕೊಳ್ಳುತ್ತಾನೆ. ಅದಾಗಿ ವರ್ಷಗಳು ಉರುಳುತ್ತಿದ್ದಂತೆ, ಯಾವ ರಾಜಕಾರಣಿಯನ್ನು ಜನರು “ತೊಲಗು ಸಾಕಿನ್ನು” ಎಂಬಂತೆ ಬಯ್ದುಕೊಂಡಿದ್ದರೋ ಆತನನ್ನೇ ಪ್ರತಿರೋಧದ ಧ್ವನಿ ಎಂದು ಗುರುತಿಸುವುದಕ್ಕೆ ಶುರು ಮಾಡುತ್ತಾರೆ. ಆತ ಮತ್ತೆ ನೇತೃತ್ವ ವಹಿಸಿಕೊಳ್ಳಬೇಕು ಎಂಬ ಒತ್ತಾಯಗಳು ಶುರುವಾಗುತ್ತವೆ.

ಇವೆಲ್ಲವಕ್ಕೂ ಕಾರಣವಾಗಿ ಕಾಣುವುದು ಒಂದೇ ಅಂಶ. ಅದೆಂದರೆ, ಜನರಿಗೆ ರಾಜಕಾರಣಿಗಳು ಅವೆಷ್ಟೇ ಭ್ರಷ್ಟರಾಗಿ ಕಂಡರೂ, ಕೊನೆಪಕ್ಷ ಐದು ವರ್ಷಕ್ಕೊಮ್ಮೆ ಅವರು ನಮ್ಮೆದುರು ಬರಬೇಕಿರುತ್ತದೆ ಎಂಬ ಭಾವನೆ ಜನರಲ್ಲಿದೆ. ತನ್ನ ಮತಾಧಿಕಾರದ ಮೂಲಕ ಆತನನ್ನು ಶಿಕ್ಷೆಗೆ ಒಳಪಡಿಸಬಹುದು ಎನ್ನುವ ಅಂಶ- ಅದೊಂದು ಮಿಥ್ಯಾ ಕಲ್ಪನೆಯೇ ಆಗಿದ್ದಿರಬಹುದಾದರೂ- ಜನ ಅದನ್ನು ನಂಬಿದ್ದಾರೆ. ಅಲ್ಲದೇ, ಭ್ರಷ್ಟನೊಬ್ಬನಿಗೆ ಐದು ವರ್ಷ ಅಧಿಕಾರದಿಂದ ದೂರವಿರಿಸಿದ ಮಾತ್ರಕ್ಕೆ ಅದೇನೂ ಶಿಕ್ಷೆ ಎನಿಸುವುದಿಲ್ಲ, ಅದಕ್ಕಿಂತ ದೊಡ್ಡ ಮಟ್ಟದಲ್ಲಿ ವಸೂಲಾಗಬೇಕಿದೆ ಎಂದೆಲ್ಲ ತುಂಬ ತಾರ್ಕಿಕವಾಗಿಯೇನೂ ಹೆಚ್ಚಿನ ಮಂದಿ ಯೋಚಿಸುವುದಿಲ್ಲ. ಹೀಗಾಗಿ, ರಾಜಕಾರಣಿಗಳ ಮೇಲೆ ಜನರ ಕೋಪ ಬೆಟ್ಟದಷ್ಟೇ ಇದ್ದರೂ ಅದು ಆಗಾಗ ನಿಯಮಿತವಾಗಿ ರಿಲೀಸ್ ಆಗುತ್ತ ಇರುತ್ತದೆಯಾದ್ದರಿಂದ ಜ್ವಾಲಾಮುಖಿಯ ಪರ್ವತವಾಗುವ ಸಂಭವ ಕಡಿಮೆ.

ಆದರೆ…ಈ ಅಂಗಗಳದ್ದೇನು ಕತೆ?

ವ್ಯವಸ್ಥೆಯ ವಿರುದ್ಧ ಕ್ರಾಂತಿ ಎಂದಾಗಲೆಲ್ಲ ರಾಜಕಾರಣಿಗಳ ಮುಖವೇ ನೆನಪಾಗುತ್ತದೆ. ಆದರೆ ಕಾರ್ಯಾಂಗ, ನ್ಯಾಯಾಂಗಗಳದ್ದೇನು ಕತೆ ಎಂಬುದನ್ನು ಯೋಚಿಸಿ. ಏಕೆಂದರೆ, ಭ್ರಷ್ಟ ರಾಜಕಾರಣಿಯನ್ನು ತಾತ್ಕಾಲಿಕವಾಗಿಯಾದಾರೂ ಮತದಾನದ ಮೂಲಕ ಬದಲಾಯಿಸಬಹುದಾದ ಮಾರ್ಗ ಜನರಿಗೆದೆ. ಆದರೆ, ಲಂಚ ತಿಂದುಕೊಂಡು, ಸಾಮಾನ್ಯ ಕೆಲಸಗಳನ್ನೂ ದುಸ್ತರವಾಗಿಸುತ್ತಿರುವ ಅಧಿಕಾರಿಗಳ ಕುರಿತ ಅಸಹನೆಯನ್ನು ಬರಿದಾಗಿಸಿಕೊಳ್ಳುವ ಮಾರ್ಗ ಎಲ್ಲಿದೆ? ಸಾಮಾನ್ಯ ಪ್ರಕರಣವೊಂದನ್ನು ದಶಕಗಳಷ್ಟು ಕಾಲ ಎಳೆಯುವ ನ್ಯಾಯಾಂಗ ವ್ಯವಸ್ಥೆ ಜತೆ ಕೋಪ ತೋರಿಸಿಕೊಳ್ಳುವ ದಾರಿ ಜನಸಾಮಾನ್ಯನಿಗೆ ಎಲ್ಲಿದೆ? ಹೀಗೆ ಶತಮಾನಗಳ ಕಾಲ ಹಿಡಿದಿಟ್ಟುಕೊಂಡ ಅಸಹನೆ ಒಮ್ಮೆಲೇ ಸ್ಫೋಟಿಸಿದರೆ ಏನಾಗಬಹುದು?

ನ್ಯಾಯಮೂರ್ತಿಗಳ ವಿರುದ್ಧವೇ ಆಗಲೀ ಮತ್ಯಾರದ್ದೇ ವಿರುದ್ಧವೇ ಆಗಲೀ ಹಿಂಸಾತ್ಮಕ ರೂಪದಲ್ಲಿ ಪ್ರತಿಭಟಿಸುವ ಯಾವುದೇ ಮಾದರಿಯನ್ನು ಖಂಡಿತ ಸಮರ್ಥಿಸಬೇಕಿಲ್ಲ. ಆದರೆ, ಇಂಥದೆಲ್ಲ ಘಟನೆಗಳನ್ನು ಒಂದು ಸೂಚನೆ ಎಂದು ಪರಿಗಣಿಸದೇ ಅಂಥವನ್ನು ಸಹ ಮನುವಾದ, ಸಂವಿಧಾನ ವಿರೋಧ ಎಂಬ ರಾಜಕೀಯ ಆಕರ್ಷಣೆಯ ಪದಪುಂಜಗಳಲ್ಲಿ ಹಿಡಿದಿಡುವುದಕ್ಕೆ ಹೋದರೆ ಜನಮಾನಸದಲ್ಲಿರಬಹುದಾದ ಅಸಹನೆ ಹೆಚ್ಚುತ್ತಲೇ ಹೋಗಬಹುದಾದ ಸಂಭವ ಇದೆಯಲ್ಲವೇ? ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ನ್ಯಾಯಾಂಗವು ಕೆಲವೊಮ್ಮೆ ತಾನೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿರುತ್ತದೆ ಎಂಬಂಶವನ್ನು ಮಾತ್ರ ಪರಿಗಣಿಸದೇ ಇರುವಂತೆ ತೋರುತ್ತಿರುವುದೇಕೆ? ಇತ್ತೀಚೆಗೆ ನ್ಯಾಯಾಂಗದ ಸುತ್ತ ಸಂಭವಿಸುತ್ತಿರುವ ಕೆಲವು ವಿದ್ಯಮಾನಗಳು ಇಂಥ ಪ್ರಶ್ನೆಯನ್ನು ಹುಟ್ಟುಹಾಕುತ್ತಿವೆ.

ಪ್ರಶ್ನಿಸುವುದನ್ನೆಲ್ಲ ನಿಂದನೆ ಎಂದುಬಿಟ್ಟರೆ ಹೇಗೆ?

ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲ ವಿಷಯಗಳ ಬಗ್ಗೆಯೂ ತೀರ್ಪು ನೀಡುವ ಅಧಿಕಾರ ಕೋರ್ಟುಗಳಿಗಿದೆ ಎಂದ ಮಾತ್ರಕ್ಕೆ ಅಲ್ಲಿ ದೋಷಗಳಿಲ್ಲ, ಅಥವಾ ಅವರಲ್ಲಿ ತಿದ್ದಿಕೊಳ್ಳಬೇಕಿರುವ ಅಂಶಗಳಿಲ್ಲ ಎಂದಲ್ಲ. ಭಾರತದಾದ್ಯಂತ 5 ಕೋಟಿ ಪ್ರಕರಣಗಳು ಇತ್ಯರ್ಥವಾಗದೇ ಬಹುಸಮಯದಿಂದ ಬಾಕಿ ಉಳಿದುಕೊಂಡಿವೆ. ಈ ಪೈಕಿ ನಾಲ್ಕು ಕೋಟಿಗಳಿಗಿಂತ ಹೆಚ್ಚು ವ್ಯಾಜ್ಯಗಳು ಜಿಲ್ಲಾ ನ್ಯಾಯಾಲಯಗಳ ಮಟ್ಟದಲ್ಲಿ, ಸುಮಾರು 60 ಲಕ್ಷ ಪ್ರಕರಣಗಳು ಹೈಕೋರ್ಟಿನಲ್ಲಿ, ಹತ್ತಿರ ಹತ್ತಿರ ಲಕ್ಷದಷ್ಟು ಪ್ರಕರಣಗಳು ಸುಪ್ರೀಂಕೋರ್ಟಿನಲ್ಲಿ ಬಾಕಿ ಇವೆ.

ಇದಕ್ಕೆ ಕೆಲವಷ್ಟರಮಟ್ಟಿಗೆ ಸರ್ಕಾರವನ್ನು ದೂರಬಹುದಾದರೂ ಒಟ್ಟಾರೆ ವ್ಯವಸ್ಥೆ ಸುಧಾರಣೆಯು ನ್ಯಾಯಾಂಗವನ್ನು ಅವಲಂಬಿಸಿದೆ. ಏಕೆಂದರೆ ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟುಗಳ ಪಾತ್ರ ದೊಡ್ಡದಿದೆ. ಜನಸಾಮಾನ್ಯರ ಕೇಸುಗಳು ಒಂದೆಡೆ ಎಳೆದಾಡಿಕೊಂಡಿದ್ದರೆ ಆರೋಪಿತ ಉಗ್ರರೂ ಸೇರಿದಂತೆ ಕೆಲವರ ಪ್ರಕರಣ ಇತ್ಯರ್ಥಕ್ಕೆ ನ್ಯಾಯಾಲಯಗಳು ಅರ್ಧರಾತ್ರಿಯಲ್ಲೂ ಬಾಗಿಲು ತೆಗೆದಿರುವ ಪ್ರಕರಣಗಳಿವೆ. ಅಲ್ಲಿ ಮೂಲಭೂತವಾದ ಜೀವಿಸುವ ಹಕ್ಕಿನ ಪ್ರಶ್ನೆ ಇತ್ತು ಎಂದೆಲ್ಲ ಸಮರ್ಥನೆಗಳಿವೆಯಾದರೂ ಸಾಮಾನ್ಯರಿಗೆ ಬರುತ್ತಿರುವ ಭಾವನೆ ಎಂದರೆ, ದೊಡ್ಡಮಟ್ಟದ ಫೀಸು ಕೇಳುವ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಇದ್ದವರಿಗಷ್ಟೇ ನ್ಯಾಯಾಲಯದ ಸಮಯ ಸಿಗುತ್ತದೆ ಎನ್ನುವುದು.

ಸುಪ್ರೀಂಕೋರ್ಟ್ ಮಟ್ಟದಲ್ಲಿ ಜಡ್ಜುಗಳ ನೇಮಕ ಪ್ರಕ್ರಿಯೆಯಂತೂ ಜಡ್ಜುಗಳು ತಮ್ಮನ್ನು ತಾವೇ ನೇಮಕ ಮಾಡಿಕೊಳ್ಳುವುದು ಎಂಬಂತಹ ಮಾದರಿಯಲ್ಲಿದೆ. ಇದನ್ನು ನ್ಯಾಯಾಂಗದ ಸ್ವಾಯತ್ತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆಯಾದರೂ ಅಮೆರಿಕ, ಯುಕೆ ಸೇರಿದಂತೆ ಯಾವ ದೇಶಗಳಲ್ಲೂ ಇಂಥದೊಂದು ವ್ಯವಸ್ಥೆ ಇಲ್ಲ. ಇಂಥ ಅಪಾರದರ್ಶಕ ವ್ಯವಸ್ಥೆ ಬದಲಿಸಬೇಕೆಂದು 2014ರಲ್ಲಿ ನ್ಯಾಷನಲ್ ಜುಡಿಷಿಯಲ್ ಅಪಾಯಿಂಟ್ಮೆಂಟ್ ಕಮಿಷನ್ ನೇಮಿಸುವ ಕಾಯ್ದೆಯನ್ನು ಸಂಸತ್ತಿನಲ್ಲಿ ಅನುಮೋದಿಸಲಾಯಿತು. ಆದರೆ, 2015ರಲ್ಲಿ ಸುಪ್ರೀಂಕೋರ್ಟ್ ಇದಕ್ಕೆ ತಡೆ ಕೊಟ್ಟಿತು. ನ್ಯಾಯಾಂಗದಲ್ಲಿ ರಾಜಕೀಯದ ಹಸ್ತಕ್ಷೇಪವಾಗುತ್ತದೆ ಎಂಬ ಕಾರಣ ನೀಡಲಾಯಿತು. ಆದರೆ ಈ ಆಯೋಗದಲ್ಲಿ ಕೇವಲ ಸರ್ಕಾರವೇನೂ ಬಂದು ಕೂರುತ್ತಿರಲಿಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂಕೋರ್ಟಿನ ಇಬ್ಬರು ಹಿರಿಯ ವಕೀಲರು, ದೇಶದ ಕಾನೂನು ಮಂತ್ರಿ, ಸಾಮಾಜಿಕ ವಲಯದಿಂದ ಇಬ್ಬರು ಗೌರವಾನ್ವಿತ ವ್ಯಕ್ತಿಗಳು ಈ ನೇಮಕ ಪ್ರಕ್ರಿಯೆಯಲ್ಲಿರುವಂತೆ ಸಂರಚನೆ ಇತ್ತು. ಸಿವಿಲ್ ಸೊಸೈಟಿಯ ಇಬ್ಬರು ಗೌರವಾನ್ವಿತ ವ್ಯಕ್ತಿಗಳನ್ನು ಸಹ ಕೇವಲ ಆಡಳಿತಾರೂಢ ಸರ್ಕಾರವೇ ನೇಮಿಸುತ್ತದೆ ಎಂದೇನೂ ಇರಲಿಲ್ಲ. ಪ್ರಧಾನಿ, ಮುಖ್ಯ ನ್ಯಾಯಮೂರ್ತಿ, ಪ್ರತಿಪಕ್ಷದ ನಾಯಕರನ್ನೊಳಗೊಂಡ ಸಮಿತಿ ಇದನ್ನು ನಿರ್ಧರಿಸುತ್ತಿತ್ತು. ಆದರೆ ಸುಪ್ರೀಂ ಕೋರ್ಟಿಗೆ ಇದು ಸರಿಯೆನಿಸಲೇ ಇಲ್ಲ.

ಇನ್ನು, ಈ ನ್ಯಾಯಾಂಗ ನಿಂದನೆ ಎಂಬ ಪರಿಕಲ್ಪನೆ ಬ್ರಿಟಿಷರ ಕಾಲದಿಂದ ಬಂದಿದ್ದು. ಅವರು ಭಾರತವನ್ನು ಆಳುತ್ತಿದ್ದಾಗ ಅವರ ನ್ಯಾಯವ್ಯವಸ್ಥೆಯನ್ನು ಪ್ರಶ್ನಿಸಬಾರದೆಂಬ ಕಾರಣಕ್ಕೆ ಇದ್ದ ಈ ಕಾಯ್ದೆಯ ಅವಕಾಶವನ್ನು ಇವತ್ತಿನ ಯುನೈಟೆಡ್ ಕಿಂಗ್ಡಮ್ ಸಡಿಲಿಸಿಬಿಟ್ಟಿದೆ. ಆದರೆ, ಭಾರತ ಮಾತ್ರ ಅದನ್ನು ಹಾಗೆಯೇ ಇಟ್ಟುಕೊಂಡಿದೆ. ಎಲ್ಲ ವಿಮರ್ಶೆಗಳೂ ನಿಂದನೆಯಾಗುವುದಿಲ್ಲ ಹಾಗೂ ಸುಪ್ರೀಂಕೋರ್ಟಿಗೆ ತನ್ನ ಇಮೇಜ್ ಬಗ್ಗೆ ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗುವುದಿಲ್ಲವಾದ್ದರಿಂದ ಇಂಥ ಪ್ರತಿಬಂಧದ ರಕ್ಷೆ ಬೇಕು ಎಂಬೆಲ್ಲ ವಾದಗಳಿವೆ. ಸಮಸ್ಯೆ ಏನೆಂದರೆ, ಯಾವುದು ನ್ಯಾಯಾಂಗ ನಿಂದನೆ ಎಂದು ನಿರ್ಧರಿಸುವಲ್ಲಿ ಕೆಲವು ಅಸ್ಪಷ್ಟತೆಗಳಿವೆ. ಇದನ್ನು ಉಪಯೋಗಿಸಿಕೊಂಡು ಯಾರನ್ನಾದರೂ ಹಣಿಯಬಹುದಾಗಿದೆ.

ಪ್ರಧಾನಿಯವರ ಸಲಹಾ ಕೂಟದಲ್ಲಿ ಕಾರ್ಯನಿರ್ವಹಿಸಿದ್ದ ಸಂಜೀವ ಸಾನ್ಯಾಲ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ‘ವಿಕಸಿತ ಭಾರತಕ್ಕೆ ಬಹುದೊಡ್ಡ ಅಡ್ಡಿಯಾಗಿರುವ ಅಂಶವೇ ಸುಧಾರಣೆ ನಿರಾಕರಿಸುತ್ತಿರುವ ನ್ಯಾಯಾಂಗ’ ಎಂಬರ್ಥದಲ್ಲಿ ವಿಶ್ಲೇಷಿಸಿದ್ದರು. ನ್ಯಾಯಮೂರ್ತಿಗಳಿಗೆ ಮೈಲಾರ್ಡ್ ಎಂಬಂತಹ ಪದಬಳಕೆ ಸಹ ಗುಲಾಮಿ ಮಾನಸಿಕತೆಯ ಮುಂದುವರಿಕೆ ಎಂದೆಲ್ಲ ಅವರು ವಿಶ್ಲೇಷಿಸಿದ್ದರು. ಅದಾಗಲೇ ಕೆಲವು ನ್ಯಾಯವಾದಿಗಳು ಇವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಕ್ಕೆ ಅಟಾರ್ನಿ ಜನರಲ್ ಸಮ್ಮತಿಯನ್ನು ಕೇಳಿದ್ದಾಗಿದೆ.

ಸಂಜೀವ ಸಾನ್ಯಾಲರಂಥ ಬೌದ್ಧಿಕ ವಲಯದ ಉನ್ನತ ವ್ಯಕ್ತಿಗಳನ್ನೇ ನ್ಯಾಯಾಂಗ ನಿಂದನೆಯ ಪ್ರಕರಣ ಹೆದರಿಸುತ್ತದೆ ಎಂದಾದರೆ, ಸಾಮಾನ್ಯರು ನ್ಯಾಯಾಂಗದ ಬಗ್ಗೆ ವಿಶ್ಲೇಷಣೆಯನ್ನೇ ಮಾಡಲಾಗದು ಎಂದಂತಾಗಿಬಿಡುತ್ತದಲ್ಲವೇ? ಒಂದು ಹಂತದ ವಿಮರ್ಶೆಗೆ ತೆರೆದುಕೊಳ್ಳದೇ ತಮ್ಮನ್ನು ನಿರಂತರವಾಗಿ ಸರ್ವಶಕ್ತ ಹಾಗೂ ಸರ್ವಜ್ಞಾನಿ ಪೀಠದಲ್ಲಿರಿಸಿಕೊಳ್ಳುವವರೆಲ್ಲ ಕೊನೆಗೊಮ್ಮೆ ಅಸಹನೆಯ ಮಹಾ ಅಲೆಯನ್ನೇ ಎದುರಿಸಬೇಕಾಗಿ ಬರುತ್ತದೆ ಎಂಬುದು ಇತಿಹಾಸ ಹಾಗೂ ಇತ್ತೀಚಿನ ವಿದ್ಯಮಾನಗಳು ಸಾರುತ್ತಿರುವ ಸತ್ಯ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

News headlines 08-10-2025| BiggBoss Kannada 12 ಶೋ ಶೀಘ್ರವೇ ಪುನಾರಂಭ; CJI ಮೇಲೆ ಶೂ ಎಸೆದ ವಕೀಲರ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಮೆಚ್ಚುಗೆ!; ಬಿಜೆಪಿ ಯುವಮೋರ್ಚಾ ನಾಯಕನ ಹತ್ಯೆ!

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

26/11 ದಾಳಿಯ ನಂತರ ಪ್ರತೀಕಾರ ತಡೆದವರು ಯಾರು ಎಂಬುದನ್ನು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು: ಪ್ರಧಾನಿ ಮೋದಿ

SCROLL FOR NEXT