ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ online desk
ಅಂಕಣಗಳು

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)

ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.

ಟ್ರಂಪ್ ಅಮೇರಿಕಾ ದೇಶವನ್ನು ಮತ್ತೆ ಮಹಾನ್ ಮಾಡಬೇಕು ಎನ್ನುವ ಆಕಾಂಕ್ಷೆಯಲ್ಲಿ ತನ್ನ ದೇಶದ ಕಾರ್ಪೊರೇಟ್ ಸಂಸ್ಥೆಗಳಿಗೆ ಕೂಡ ಟಾರ್ಗೆಟ್ ನೀಡುವುದು, ಎಷ್ಟು ಹಣ ಇಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಪ್ರಶ್ನಿಸುವುದು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಟ್ರಂಪ್ ಒಬ್ಬ ವ್ಯಾಪಾರಿ. ಆತನಿಗೂ ಚನ್ನಾಗಿ ಗೊತ್ತಿರುತ್ತದೆ, ಬಿಸಿನೆಸ್ ಹೀಗೆಲ್ಲಾ ವರ್ಕ್ ಆಗುವುದಿಲ್ಲ ಎನ್ನುವುದು. ಇದೊಂದು ಕಣ್ಣೊರೆಸುವ ನಾಟಕ. ಕೆಲವು ತಿಂಗಳುಗಳಿಂದ ನಡೆಯುತ್ತಾ ಬಂದಿದ್ದ ಈ ಪ್ರಹಸನ ನಾಟಕ ಎನ್ನುವುದನ್ನು ಕಳೆದ ದಿನಗಳಲ್ಲಿ ನಡೆದ ಎರಡು ಪ್ರಮುಖ ಘಟನೆಗಳು ಸಾಬೀತು ಪಡಿಸಿವೆ. ಆಪೆಲ್ ಸಂಸ್ಥೆ ಚೀನಾದಲ್ಲಿ 100 ಮಿಲಿಯನ್ ಡಾಲರ್ ಹೊಸದಾಗಿ ಹೂಡಿಕೆ ಮಾಡಲಿದೆ. ಅಕ್ಟೋಬರ್ 15 ರಂದು ಅಪ್ಪಲ್ ಸಂಸ್ಥೆಯ ಸಿಇಓ ಟಿಮ್ ಕುಕ್ ಚೀನಾದ ಇನ್ಫಾರ್ಮಶನ್ ಅಂಡ್ ಟೆಕ್ನಾಲಜಿ ಸಚಿವರೊಂದಿಗೆ ಮಾತನಾಡಿದ ನಂತರ ಹೂಡಿಕೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 100 ಮಿಲಿಯನ್ ಡಾಲರ್ ಎಂದರೆ 0.1 ಬಿಲಿಯನ್ ಡಾಲರ್. ಇದಕ್ಕೆ ಒಂದು ದಿನ ಮುಂಚೆ ಗೂಗೆಲ್ ನ ಮಾತೃ ಸಂಸ್ಥೆ ಅಲ್ಫಬೆಟ್ ಭಾರತದ ವಿಶಾಖಪಟ್ಟದಲ್ಲಿ ವಿಶ್ವದ ಅತಿ ದೊಡ್ಡ ಎಐ ಡೇಟಾ ಸೆಂಟರ್ ತೆರೆಯುವುದಾಗಿ ಘೋಷಣೆ ಮಾಡಿದೆ. ಮುಂದಿನ ಐದು ವರ್ಷದಲ್ಲಿ ಇಲ್ಲಿ 15 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಲಾಗುತ್ತದೆ.

ಈ ಎರಡು ಸುದ್ದಿಗಳು ಒಂದು ದಿನದ ಅಂತರದಲ್ಲಿ ವಿತ್ತ ಜಗತ್ತಿನಲ್ಲಿ ಸಂಚಲನ ಮೂಡಿಸಿವೆ. ಇದಕ್ಕೆ ಕಾರಣ ಟ್ರಂಪ್ ಅವರು ತನ್ನ ದೇಶದ ಸಂಸ್ಥೆಗಳನ್ನು ಅಮೇರಿಕಾದಲ್ಲಿ ಹೂಡಿಕೆ ಮಾಡಬೇಕು ಎನ್ನುವ ಫರ್ಮಾನು ಹೊರಡಿಸಿದ್ದು ಮತ್ತು ಅಲ್ಲಿನ ಎರಡು ದೈತ್ಯ ಸಂಸ್ಥೆಗಳು ಅವರ ಮಾತನ್ನು ಮೀರಿ ಚೀನಾ ಮತ್ತು ಭಾರತದಲ್ಲಿ ಹೂಡಿಕೆ ಮಾಡುತ್ತಿರುವುದು. ಅದರಲ್ಲೂ ಭಾರತದ ವಿಶಾಖಪಟ್ಟಣದಲ್ಲಿ ಸಿದ್ಧವಾಗಲಿರುವ ಎಅಯ್ ಡೇಟಾ ಹಬ್ ವಿಶ್ವದ ಗಮನವನ್ನು ಸೆಳೆಯಲಿದೆ.

ಈ ಎರಡು ಸಂಸ್ಥೆಗಳು ತಮ್ಮ ದೇಶದ ಪ್ರೆಸಿಡೆಂಟ್ ಮಾತನ್ನು ಉಲ್ಲಂಘಿಸುವ ಮಟ್ಟಕ್ಕೆ ಏಕೆ ಹೋದವು ಎನ್ನುವುದರ ಕಾರಣ ಹುಡುಕುತ್ತ ಹೋದಾಗ ಬೆಳಕಿಗೆ ಬರುವ ಅಂಶ ರಾಕೆಟ್ ಸೈನ್ಸ್ ಏನಲ್ಲ. ವ್ಯಾಪಾರ ನಿಂತಿರುವುದು ಲಾಭದ ಮೇಲೆ ಮಾತ್ರ. ವ್ಯಾಪಾರ ಎಂದಲ್ಲ, ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವ ಸರಳ ಸೂತ್ರ ಹಣದ ಹರಿವಿಲ್ಲದಿದ್ದರೆ ಸಂಸ್ಥೆಯಿರಬಹುದು ಅಥವಾ ಪುಟಾಣಿ ಕುಟುಂಬ , ಕುಸಿತವಂತೂ ಖಚಿತ. ಭಾರತ ಮತ್ತು ಚೀನಾದಲ್ಲಿ ಹೂಡಿಕೆ ಮಾಡುವುದು ಲಾಭವನ್ನು ತಂದುಕೊಂಡುತ್ತದೆ ಎನ್ನುವುದು ಒಂದಂಶವಾದರೆ, ಅಂತಹ ವ್ಯಾಪಾರ ನಡೆಸಲು ಬೇಕಿರುವ ಏಕೋ ಸಿಸ್ಟಮ್ ಇಂದು ಈ ದೇಶಗಳಲ್ಲಿದೆ. ಅಮೇರಿಕಾದಲ್ಲಿ ಆ ವಾತಾವರಣ ಮಾಯವಾಗುತ್ತಿದೆ ಎನ್ನುವುದಕ್ಕಿಂತ ಮಾಯವಾಗಿದೆ ಎಂದು ಹೇಳಬಹುದು.

ಭಾರತ ಮತ್ತು ಚೀನಾದ ನಡುವೆ ಜಗತ್ತಿನ ಜನಸಂಖ್ಯೆಯ 35 ಪ್ರತಿಶತ ಜನರಿದ್ದಾರೆ ಎನ್ನುವುದು ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಇಂದಿಗೆ ಚೀನಾ ಮತ್ತು ಭಾರತದ ಜನಸಂಖ್ಯೆ ಕೇವಲ ಸಂಖ್ಯೆಯಾಗಿ ಉಳಿದಿಲ್ಲ. ಅವರಲ್ಲಿ ಖರೀದಿ ಶಕ್ತಿ ಬಹಳಷ್ಟು ಹೆಚ್ಚಾಗಿದೆ. ಯೂರೋಪಿನಲ್ಲಿ ಜನಸಂಖ್ಯೆಯ ಕುಸಿತದ ಜೊತೆಗೆ ಅಲ್ಲಿನ ದೇಶಗಳು ವೇಗವಾಗಿ ವೃದ್ಯಾಪ್ಯದ ಕಡೆಗೆ ಸಾಗುತ್ತಿವೆ. ಅಮೇರಿಕಾದಲ್ಲಿ ಹಿಂದಿನ ಏಕೋ ಸಿಸ್ಟಮ್ ಉಳಿದುಕೊಂಡಿಲ್ಲ. ಹೀಗೆ ಜಗತ್ತಿನ ಎಲ್ಲಾ ದೇಶಗಳ ಪರಿಸ್ಥಿತಿ ಜೊತೆಗೆ ತುಲನೆ ಮಾಡಿ ನೋಡಿದಾಗ ಅಗ್ರ ಸ್ಥಾನದಲ್ಲಿ ಚೀನಾ ಮತ್ತು ಆ ನಂತದ ಜಾಗದಲ್ಲಿ ಭಾರತವನ್ನು ಜಗತ್ತು ನೋಡುತ್ತಿದೆ. ಭಾರತ ಮತ್ತು ಚೀನಾದ ನಡುವಿನ ಅಂತರ ಬಹಳ ದೊಡ್ಡದಿದೆ.ನಾವು ಚೀನಾವನ್ನು ಮಣಿಸುವುದು ದೂರದ ಮಾತು ಅವರ ಸಮೀಪ ಕೂಡ ಹೋಗಲಾರೆವು. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿರುವ ಅತಿ ಸ್ವಾತಂತ್ರ್ಯ. ನಮ್ಮಲ್ಲಿ ಒಂದು ಕೆಲಸವನ್ನು ಕಾರ್ಯರೂಪಕ್ಕೆ ತರಬೇಕಾದರೆ ನೂರಾರು ಅಡ್ಡಿ ಆಂತಂಕಗಳು ಎದುರಾಗುತ್ತದೆ. ನಮ್ಮಲ್ಲಿ ವರ್ಷನೂಗಟ್ಟಲೆ ತಗಲುವ ಕೆಲಸ ಚೀನಾದಲ್ಲಿ ವಾರದಲ್ಲಿ ಕೆಲವೊಮ್ಮೆ ದಿನಗಳಲ್ಲಿ ಮಾಡಿ ಮುಗಿಸಿ ಬಿಡುತ್ತಾರೆ. ಸ್ಪೀಡ್ ಅಂಡ್ ಆಕ್ಯುರೆಸಿ ಅವರನ್ನು ಆ ಮಟ್ಟಕ್ಕೆ ಒಯ್ಯ್ದಿದೆ.

ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ.ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ. ಇದಕ್ಕೆ ನಾವು ಈಗಾಗಲೇ ಸಾಕ್ಷಿಯಾಗುತ್ತಿದ್ದೇವೆ. ಎರಡನೇ ಹಂತದಲ್ಲಿ ಚೀನಾ, ಭಾರತ ಸೇರಿದಂತೆ ಬ್ರಿಕ್ಸ್ ದೇಶಗಳು ಡಾಲರಿನಲ್ಲಿ ವಹಿವಾಟು ನಿಲ್ಲಿಸುತ್ತವೆ. ಈಗಾಗಲೇ ಇದರಲ್ಲಿ ಬಹಳಷ್ಟು ಬದಲಾವಣೆಯಾಗಿರುವುದು ನಾವು ಕಾಣಬಹುದು. ಹೀಗಿದ್ದೂ ಇಂದಿಗೂ ಡಾಲರಿನಲ್ಲಿ ಜಗತ್ತಿನ ೬೫ ಪ್ರತಿಶತಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದು ಬಹಳಷ್ಟು ಕುಸಿತವನ್ನು ಕಾಣಲಿದೆ. ಮುಂದಿನ ಎರಡು ವರ್ಷದಲ್ಲಿ ಡಾಲರ್ ಬೆಲೆಯಲ್ಲಿ 20 ಪ್ರತಿಶತ ಕುಸಿತವಂತೂ ಉಂಟಾಗಲಿದೆ.

ಇಂದಿನ ದಿನದಲ್ಲಿ ಡಾಲರ್ ಕುಸಿಯಬೇಕಿತ್ತು. ಅದು ಕುಸಿತ ಕಾಣದಿರಲು ಅದು ಗ್ಲೋಬಲ್ ಕರೆನ್ಸಿಯಾಗಿರುವುದು ಒಂದು ಪ್ರಮುಖ ಕಾರಣವಾಗಿದೆ. ಜಗತ್ತಿನ ಬಹುತೇಕ ದೇಶಗಳು ತಮ್ಮ ರಿಸೆರ್ವ್ ನ್ನು ಡಾಲರಿನಲ್ಲಿ ಸಂಗ್ರಹಣೆ ಮಾಡಿಟ್ಟು ಕೊಂಡಿವೆ. ಡಾಲರ್ ಕುಸಿತ ಕಂಡರೆ ಹೀಗೆ ರಿಸೆರ್ವ್ ಕರೆನ್ಸಿ ಇಟ್ಟು ಕೊಂಡಿರುವ ದೇಶಗಳಿಗೆಲ್ಲಾ ನಷ್ಟ ಉಂಟಾಗುತ್ತದೆ. ಹೀಗಾಗಿ ನಿಧಾನವಾಗಿ ಡಾಲರ್ ಹಣವನ್ನು ಇವು ಲಿಕ್ವಿಡೇಟ್ ಮಾಡಿಕೊಳ್ಳುತ್ತವೆ. ಬಲಿಷ್ಠವಾದ ಇನ್ನೊಂದು ಗ್ಲೋಬಲ್ ಕರೆನ್ಸಿ ಉದಯವಾದಾಗ ತಮ್ಮ ರಿಸೆರ್ವ್ ಹಣವನ್ನು ಆ ಹೊಸ ಕರೆನ್ಸಿಗೆ ಬದಲಾಯಿಸಿಕೊಳ್ಳುತ್ತವೆ. ಆಗ ಡಾಲರ್ ಕುಸಿತ ಬಹುತೇಕ ಖಚಿತವಾಗುತ್ತದೆ. ಅಂದರೆ ಮುಂದಿನ ಐದು ವರ್ಷದಲ್ಲಿ ಒಂದು ಡಾಲರ್ ನಲವತ್ತು ರುಪಾಯಿಗೆ ಸಮವಾಗಲಿದೆ. ಆ ಮಟ್ಟಕ್ಕೆ ಬಂದರೆ ಅದು ನಿಜವಾದ ಡಾಲರ್ ಮೌಲ್ಯ.

ಚೀನಾ , ಭಾರತ ಸೇರಿದಂತೆ ಬಹಳಷ್ಟು ದೇಶಗಳು ಈಗಾಗಲೇ ಚಿನ್ನದ ಖರೀದಿಯಲ್ಲಿ ತೊಡಗಿವೆ. ಸಮಾಜದಲ್ಲಿ ಅಸ್ಥಿರತೆ ಇರುವ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಚಿನ್ನದ ಬೆಲೆ ಏರಿಕೆಯಾದಾಗ ಸ್ಟಾಕ್ ಮಾರ್ಕೆಟ್ ಕುಸಿತವನ್ನು ಕಾಣುತ್ತದೆ. PE ರೇಶಿಯೋ ಅಂದರೆ ಪ್ರೈಸ್ ಟು ಅರ್ನಿಂಗ್ ಕೂಡ ಕುಸಿತವಾಗಬೇಕು. ಆದರೆ ಇವತ್ತಿನ ಪರಿಸ್ಥಿತಿ ಬೇರೆಯದಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಆದರೆ ಜೊತೆಯಲ್ಲಿ ಮಾರುಕಟ್ಟೆ ಕೂಡ ಕುಸಿತ ಕಾಣುತ್ತಿಲ್ಲ. PE ರೇಶಿಯೋ ಕೂಡ ಕುಸಿತ ಕಾಣುತ್ತಿಲ್ಲ. ಇದೊಂದು ರೀತಿ ಬಿಸಿಲು ಕೂಡ ಇದ್ದು ಮಳೆ ಕೂಡ ಬರುವಂತಹ ಸನ್ನಿವೇಶ. ಬಿಸಿಲು ಮತ್ತು ಮಳೆ ಏಕಕಾಲದಲ್ಲಿ ಬಹಳ ಸಮಯ ಇದ್ದ ಉದಾಹರಣೆಯಿಲ್ಲ. ಒಂದೈದು ನಿಮಿಷದಲ್ಲಿ ಮಳೆ ನಿಲ್ಲುತ್ತದೆ. ಇಲ್ಲವೇ ಬಿಸಿಲು ಮಾಯವಾಗುತ್ತದೆ. ಥೇಟ್ ಇದೆ ರೀತಿಯಲ್ಲಿ ಮುಂದಿನ 12/14 ತಿಂಗಳಲ್ಲಿ ಅಮೇರಿಕಾ ಷೇರು ಮಾರುಕಟ್ಟೆ 20/30 ಪ್ರತಿಶತ ಕುಸಿತವನ್ನು ಕಾಣಲಿದೆ. ಇದರ ಪರಿಣಾಮ ಜಗತ್ತಿನ ಎಲ್ಲಾ ಷೇರು ಮಾರುಕಟ್ಟೆಯ ಮೇಲೂ ಆಗಲಿದೆ.

ಅಧಿಕಾರ ಬದಲಾವಣೆಯ ಸಮಯದಲ್ಲಿ ಅದೂ ಗ್ಲೋಬಲ್ ಆರ್ಡರ್ ಬದಲಾಗುವ ಈ ಸಮಯದಲ್ಲಿ ಈ ರೀತಿಯ ನಷ್ಟಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಹೂಡಿಕೆ ಮಾಡಿರುವವರು ಹೆಚ್ಚಿನ ಭಯ ಪಡುವ ಅವಶ್ಯಕತೆಯಿಲ್ಲ. ಕುಸಿತ ಮತ್ತೆ ರಿಕವರಿ ಕಾಣುತ್ತದೆ. ಅಮೇರಿಕಾದಲ್ಲಿ ಹೂಡಿಕೆ ಮಾಡಿರುವರು ಹೆಚ್ಚಿನ ಯೋಚನೆ ಮಾಡಬೇಕು ಏಕೆಂದರೆ ಮೊದಲಿಗೆ ಅಲ್ಲಿನ ಷೇರು ಮಾರುಕಟ್ಟೆ ವರ್ಷದಲ್ಲಿ ಕುಸಿತ ಕಾಣುವುದುದನ್ನು ತಪ್ಪಿಸಲಾಗುವುದಿಲ್ಲ. ಎರಡು ಡಾಲರ್ ಕೂಡ ಅಪಮೌಲ್ಯವಾಗಲಿದೆ. ಈ ಎರಡೂ ಕಾರಣದಿಂದ ಐವತ್ತು ಪ್ರತಿಶತದ ವರೆಗೂ ಹಣವನ್ನು ಕಳೆದು ಕೊಳ್ಳಬೇಕಾಗುತ್ತದೆ.

ಕೊನೆಮಾತು: ಭಾರತಕ್ಕೆ ಮರಳಬೇಕು ಎನ್ನುವ ಭಾರತೀಯರು ಮತ್ತು ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿರುವ ಹೂಡಿಕೆದಾರರು ಈ ಸಮಯದಲ್ಲಿ ಒಂದಷ್ಟು ಎಚ್ಚರಿಕೆಯನ್ನು ವಹಿಸಬೇಕು. ಇಲ್ಲಿ ಬರೆದಿರುವ ಅಂಶಗಳನ್ನು ಸರಿಯಾಗಿ ಗಮನಿಸಿ ಅವುಗಳು ಎಷ್ಟರ ಮಟ್ಟಿಗೆ ಅವರಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕ್ರಮವನ್ನು ತೆಗೆದುಕೊಳ್ಳಬೇಕು. ಬೇರೆಲ್ಲಾ ಅಂಶಗಳನ್ನು ಬದಿಗಿಡಿ. ಏಕೆಂದರೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಒಂದಷ್ಟು ಸಮಯ ಮತ್ತು ಟೆಕ್ನಿಕಲ್ ಅನಾಲಿಸಿಸ್ ಅವಶ್ಯಕತೆಯಿರುತ್ತದೆ. ಒಂದು ಅಂಶ ಸರಳವಾಗಿ ಅರ್ಥವಾಗುವುದು ಅಮೇರಿಕಾ ತನ್ನ ಪ್ರೈಮ್ ಟೈಮ್ ಮುಗಿಸಿಕೊಂಡಿದೆ. ಅದು ಮುಳುಗಲು ಶುರುವಾಗಿರುವ ಎಕಾನಮಿ. ಅಲ್ಲಿನ ಸಂಸ್ಥೆಗಳು ಅಲ್ಲಿನ ಪ್ರೆಸಿಡೆಂಟ್ ಮಾತನ್ನೂ ಮೀರಿ ಭಾರತ ಮತ್ತು ಚೀನಾದಲ್ಲಿ ಹೂಡಿಕೆ ಮಾಡುತ್ತಿರುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ಮದುವೆ ರದ್ದು ಬೆನ್ನಲ್ಲೇ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್!

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

SCROLL FOR NEXT