ಜಾಗತಿಕ ತೈಲದ ಚದುರಂಗ ಈಗ ಹೊಸದಾಗಿ ರೂಪು ತಳೆಯುತ್ತಿದ್ದು, ಈ ಬಾರಿಯ ನಡೆ ಒಪೆಕ್ ಅಥವಾ ಮಾಸ್ಕೋದ ಕಡೆಯಿಂದ ಬಂದಿಲ್ಲ. ಬದಲಿಗೆ, ಅನಿರೀಕ್ಷಿತವಾಗಿ ವಾಷಿಂಗ್‌ಟನ್ ನಿಂದ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಎರಡು ಬೃಹತ್ ತೈಲ ಸಂಸ್ಥೆಗಳಾದ ರಾಸ್‌ನೆಫ್ಟ್ ಮತ್ತು ಲುಕಾಯಿಲ್‌ಗಳ ಮೇಲೆ ಬೃಹತ್ ನಿರ್ಬಂಧಗಳನ್ನು ಹೇರಿದ್ದಾರೆ. ಆದರೆ, ಈ ನಿರ್ಬಂಧಗಳ ಪರಿಣಾಮ ಉಕ್ರೇನ್ ಯುದ್ಧದ ಪರಿಣಾಮವಾಗಿ ಕಡಿಮೆ ಬೆಲೆಗೆ ರಷ್ಯನ್ ತೈಲ ಖರೀದಿ ನಡೆಸುತ್ತಿದ್ದ ಏಷ್ಯನ್ ಶಕ್ತಿಗಳಾದ ಭಾರತ ಮತ್ತು ಚೀನಾಗಳ ಮೇಲಾಗಿದೆ.
ಭಾರತ ಮತ್ತು ಚೀನಾಗಳು ಈಗ ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿವೆ. ರಷ್ಯಾ ರಫ್ತು ಮಾಡುವ ಆರು ಬ್ಯಾರಲ್ ಕಚ್ಚಾ ತೈಲಗಳ ಪೈಕಿ ಐದು ಬ್ಯಾರಲ್‌ಗಳನ್ನು ಭಾರತ - ಚೀನಾಗಳೇ ಖರೀದಿಸುತ್ತಿವೆ. ರಷ್ಯನ್ ತೈಲದ ಮೇಲೆ ಇಷ್ಟೊಂದು ಪ್ರಮಾಣದ ಅವಲಂಬನೆ ನಡೆಸುತ್ತಿರುವುದರಿಂದ ತಕ್ಷಣವೇ ಹಿಂಪಡೆಯುವುದು ವೆಚ್ಚದಾಯಕ ಮತ್ತು ಅಪಾಯಕಾರಿಯಾಗಲಿದೆ. ಟ್ರಂಪ್ ಮತ್ತೆ ಸುಂಕಗಳು ಮತ್ತು ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ನವದೆಹಲಿ ಮತ್ತು ಬೀಜಿಂಗ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ರಾಸ್‌ನೆಫ್ಟ್, ಲುಕಾಯಿಲ್ ಮತ್ತು ಇತರ 30 ಉಪ ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ನಿರ್ಬಂಧಗಳು ಮಾಸ್ಕೋದ ಯುದ್ಧ ಹೂಡಿಕೆಯ ಕತ್ತು ಹಿಸುಕುವ ಗುರಿ ಹೊಂದಿವೆ. ಅಮೆರಿಕದ ಸಂದೇಶ ಅತ್ಯಂತ ಕಟುವಾಗಿದೆ: ಯಾವುದೇ ದೇಶ ಅಥವಾ ಸಂಸ್ಥೆ ಈ ರಷ್ಯನ್ ಸಂಸ್ಥೆಗಳೊಡನೆ ವ್ಯವಹಾರ ಮುಂದುವರಿಸಿದರೆ, ಅವುಗಳು ಅಮೆರಿಕದ ಡಾಲರ್ ವ್ಯವಸ್ಥೆಯ ನಿರ್ಬಂಧ ಎದುರಿಸಬೇಕಾಗುತ್ತದೆ. ಇದು ಭಾರತ ಮತ್ತು ಚೀನಾಗಳ ಪ್ರಮುಖ ಬ್ಯಾಂಕ್‌ಗಳಿಗೆ ಆತಂಕದಾಯಕ ವಿಚಾರವಾಗಿದ್ದು, ಅವುಗಳು ಜಾಗತಿಕ ವ್ಯವಹಾರಕ್ಕಾಗಿ ಅಮೆರಿಕದ ಬ್ಯಾಂಕಿಂಗ್ ಜಾಲಗಳ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ಅಮೆರಿಕದ ಖಜಾನೆ ಇಲಾಖೆ ನೀಡಿರುವ ಹೇಳಿಕೆ ಕೇವಲ 'ಉಲ್ಲಂಘಿಸಿದವರು ನಿರ್ಬಂಧಗಳನ್ನು ಎದುರಿಸುವ ಸಾಧ್ಯತೆಗಳು ಇರಬಹುದು' ಎಂದಷ್ಟೇ ಹೇಳಿದ್ದರೂ, ಈ ಸಾಧ್ಯತೆಗಳೇ ಏಷ್ಯಾದ ಇಂಧನ ಮಾರುಕಟ್ಟೆಗಳಿಗೆ ಆತಂಕ ಮೂಡಿಸಿದೆ.
ಭಾರತದ ಪಾಲಿಗೆ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗ ಎರಡು ಆದ್ಯತೆಗಳ ನಡುವೆ ಸಿಲುಕಿದ್ದಾರೆ. ಅವೆಂದರೆ - ಭಾರತದ ಇಂಧನ ಪೂರೈಕೆಗಳನ್ನು ಸ್ಥಿರವಾಗಿಡುವುದು ಮತ್ತು ವಾಷಿಂಗ್ಟನ್ ಜೊತೆ ಕಡಿಮೆ ಸುಂಕದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು. ಅಮೆರಿಕ ಭಾರತೀಯ ಉತ್ಪನ್ನಗಳ ಮೇಲೆ ಆಗಸ್ಟ್ ತಿಂಗಳಲ್ಲಿ 50% ಸುಂಕ ವಿಧಿಸಿದ್ದು, ರಷ್ಯನ್ ತೈಲ ಆಮದು ಮಾಡುತ್ತಿರುವುದೇ ಈ ಸುಂಕಕ್ಕೆ ಕಾರಣ ಎಂದಿತ್ತು. ಅದಾದ ಒಂದು ತಿಂಗಳ ಒಳಗಾಗಿ ಅಮೆರಿಕಾಗೆ ಭಾರತದ ರಫ್ತು ಬಹುತೇಕ 40% ಇಳಿಕೆ ಕಂಡಿತ್ತು ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ಹೇಳಿದೆ.
ಇಷ್ಟೆಲ್ಲದರ ನಡುವೆಯೂ ಭಾರತ ರಷ್ಯನ್ ತೈಲ ಖರೀದಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಿದ್ಧವಿಲ್ಲ. ಉಕ್ರೇನ್ ಯುದ್ಧದ ನಂತರ, ಭಾರತೀಯ ತೈಲ ಸಂಸ್ಕರಣಾಗಾರಗಳು ತಮ್ಮ ಪೂರೈಕೆ ಸರಪಳಿಯನ್ನು ಮರು ರೂಪಿಸಿಕೊಂಡಿದ್ದು, ರಿಯಾಯಿತಿ ದರದಲ್ಲಿ ಲಭಿಸುವ ರಷ್ಯನ್ ಕಚ್ಚಾ ತೈಲದ ಮೇಲೆ ಅಪಾರ ಅವಲಂಬನೆ ಹೊಂದಿವೆ. ಇದರಿಂದಾಗಿ ಬಿಲಿಯನ್‌ಗಟ್ಟಲೆ ಆಮದು ವೆಚ್ಚವನ್ನು ಉಳಿಸಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಇತ್ತೀಚೆಗೆ ರಷ್ಯನ್ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಒಪ್ಪಿಗೆ ಸೂಚಿಸಿರುವುದಾಗಿ ಹೇಳಿದ್ದು, ಭಾರತೀಯ ಅಧಿಕಾರಿಗಳು ಇದನ್ನು ಮೌನವಾಗಿಯೇ ಅಲ್ಲಗಳೆದಿದ್ದಾರೆ. ಆದರೆ ಬಹಿರಂಗವಾಗಿ ಟ್ರಂಪ್‌ಗೆ ವಿರುದ್ಧವಾಗಿ ಮಾತನಾಡುವುದನ್ನು ತಪ್ಪಿಸಿದ್ದಾರೆ.
ಭಾರತ ನಿಧಾನವಾಗಿ ಮಧ್ಯ ಪೂರ್ವ, ಲ್ಯಾಟಿನ್ ಅಮೆರಿಕ, ಮತ್ತು ಅಮೆರಿಕದಿಂದಲೂ ತೈಲ ಖರೀದಿಸುವುದಕ್ಕೆ ತೊಡಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ರಷ್ಯನ್ ತೈಲ ಖರೀದಿಯನ್ನು ಸದ್ಯದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಾಧ್ಯತೆಗಳು ಕಡಿಮೆ. ಕೆಪ್ಲರ್ ವಿಶ್ಲೇಷಕ ಸುಮಿತ್ ರಿಟೊಲಿಯಾ ಅವರು ಟ್ರಂಪ್ ಎಷ್ಟರಮಟ್ಟಿಗೆ ಒತ್ತಡ ಹೇರುತ್ತಾರೆ ಮತ್ತು ಎಷ್ಟರಮಟ್ಟಿನ ಪ್ರಕ್ಷುಬ್ಧತೆಯನ್ನು ಭಾರತ ತಡೆದುಕೊಳ್ಳಬಲ್ಲದು ಎನ್ನುವುದರ ಮೇಲೆ ಭಾರತದ ನಿರ್ಧಾರ ಅವಲಂಬಿತವಾಗಲಿದೆ ಎಂದಿದ್ದಾರೆ.
ರಷ್ಯಾದ ಒಟ್ಟು ಕಚ್ಚಾ ತೈಲ ರಫ್ತಿನ 47%ವನ್ನು ಚೀನಾ ಖರೀದಿಸುತ್ತಿದ್ದು, ಅದಕ್ಕೂ ಅಮೆರಿಕದ ಬಿಸಿ ಮುಟ್ಟಿದೆ. ಚೀನಾ 3 ಬಿಲಿಯನ್ ಡಾಲರ್ ಮೌಲ್ಯದ (26,400 ಕೋಟಿ ರೂಪಾಯಿ) ರಷ್ಯನ್ ತೈಲವನ್ನು ಪ್ರತಿ ತಿಂಗಳೂ ಆಮದು ಮಾಡುತ್ತಿದ್ದು, ಇದು ಚೀನಾದ ಒಟ್ಟು ಆಮದಿನ 20% ಆಗಿದೆ. ಆದರೆ, ಕೆಪ್ಲರ್‌ನ ಮುಯು ಕ್ಸು ಪ್ರಕಾರ, ಬೀಜಿಂಗ್ ಅಮೆರಿಕದ ನಿರ್ಬಂಧಗಳ ಪರಿಣಾಮವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪಾಯವನ್ನು ತಪ್ಪಿಸುವ ಸಲುವಾಗಿ, ಚೀನಾದ ಪ್ರಮುಖ ತೈಲ ಕಂಪನಿಗಳು ರಷ್ಯನ್ ಪೂರೈಕೆದಾರರಿಂದ ನೇರ ಖರೀದಿ ನಿಲ್ಲಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ತಿಂಗಳುಗಟ್ಟಲೆ ಸಂಗ್ರಹ ಮಾಡಿಕೊಂಡರೂ, ತಾನು ಅನಿರ್ದಿಷ್ಟ ಕಾಲ ವಾಷಿಂಗ್ಟನ್ ವಿರುದ್ಧ ನಡೆಯಲು ಸಾಧ್ಯವಿಲ್ಲ ಎನ್ನುವುದು ಚೀನಾಗೆ ಅರಿವಿದೆ. ಚೀನಾದ ವಿದೇಶಾಂಗ ಸಚಿವಾಲಯ ಅಮೆರಿಕದ ಕ್ರಮಗಳನ್ನು ಖಂಡಿಸಿದ್ದು, "ಅಮೆರಿಕಾದ ಕ್ರಮಗಳು ಏಕಪಕ್ಷೀಯವಾಗಿದ್ದು, ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅಕ್ರಮವಾಗಿವೆ" ಎಂದಿದೆ. ಆದರೆ ಚೀನಾದ ಆರ್ಥಿಕ ಸಂಸ್ಥೆಗಳು ಡಾಲರ್ ಆಧಾರಿತ ಜಾಗತಿಕ ವ್ಯವಸ್ಥೆಯೊಡನೆ ಆಳವಾಗಿ ಬೆರೆತಿದ್ದು, ಈ ಅವಲಂಬನೆಯನ್ನು ಚೀನಾಗೆ ಸುಲಭವಾಗಿ ತೊಡೆದು ಹಾಕಲು ಸಾಧ್ಯವಿಲ್ಲ.
ಐರೋಪ್ಯ ಒಕ್ಕೂಟ 2022ರಲ್ಲಿ ರಷ್ಯನ್ ತೈಲವನ್ನು ನಿಷೇಧಿಸಿದ ಬಳಿಕ, ರಷ್ಯಾ ಪೂರ್ವದತ್ತ ಮುಖ ಮಾಡಿತು. ಇಂದು ರಷ್ಯನ್ ಕಚ್ಚಾ ತೈಲ ರಫ್ತಿನಲ್ಲಿ ಚೀನಾ 47%, ಭಾರತ 38% ಖರೀದಿಸಿದರೆ, ಟರ್ಕಿ ಮತ್ತು ಐರೋಪ್ಯ ಒಕ್ಕೂಟಗಳು ತಲಾ 6% ಖರೀದಿಸುತ್ತಿವೆ. ಭಾರತದ ಮೂರನೇ ಒಂದರಷ್ಟು ತೈಲ ಅವಶ್ಯಕತೆಯನ್ನು (33%) ರಷ್ಯಾವೇ ಪೂರೈಸುತ್ತಿದ್ದು, ಜಾಗತಿಕ ವ್ಯಾಪಾರದ ಹರಿವನ್ನು ಬದಲಾಯಿಸಿ, ಮಾಸ್ಕೋ ಜೊತೆಗಿನ ಏಷ್ಯಾದ ಇಂಧನ ಬಾಂಧವ್ಯವನ್ನು ಬಲಪಡಿಸುತ್ತಿದೆ.
ಉಕ್ರೇನ್ ಆಕ್ರಮಣದ ಬಳಿಕ ಪಾಶ್ಚಾತ್ಯ ಗ್ರಾಹಕರು ಹಿಂದೆ ಸರಿದ ಪರಿಣಾಮವಾಗಿ ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯನ್ ಬ್ಯಾರಲ್‌ಗಳು ಲಭಿಸುತ್ತಿದ್ದು, ಹಣದುಬ್ಬರ ಮತ್ತು ಆರ್ಥಿಕ ಸಮಸ್ಯೆಗೆ ಸಿಲುಕಿರುವ ಏಷ್ಯನ್ ಆರ್ಥಿಕತೆಗಳಿಗೆ ವರದಾನವಾಗಿದೆ. ಆದರೆ, ಇದೇ ವರದಾನವನ್ನು ಅಮೆರಿಕ ಹೊಸಕಿ ಹಾಕುವ ಅಪಾಯವೂ ಎದುರಾಗಿದೆ.
ಆಂತರಿಕವಾಗಿಯೂ ಪ್ರಧಾನಿ ಮೋದಿ ವಾಷಿಂಗ್ಟನ್ ಜೊತೆಗಿನ ಒಪ್ಪಂದ ಅಂತಿಮಗೊಳಿಸುವ ಒತ್ತಡ ಎದುರಿಸುತ್ತಿದ್ದಾರೆ. ತಜ್ಞರಾದ ಹರೀಶ್ ವಿ ಪಂತ್ ಅವರು ಮೋದಿ ರಷ್ಯಾ ಮೇಲಿನ ನೂತನ ನಿರ್ಬಂಧಗಳನ್ನು ಭಾರತದ ತೈಲ ನೀತಿಯನ್ನು ಹೊಂದಾಣಿಕೆ ಮಾಡಿಕೊಳ್ಳಲು 'ಮುಖ ಉಳಿಸುವ ತಂತ್ರವಾಗಿ' ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಧಾನ ಅಮೆರಿಕನ್ ನಿರ್ಬಂಧಗಳನ್ನು ನಿವಾರಿಸುವ ಕುರಿತು ಮಾತುಕತೆಗಳನ್ನು ವೇಗಗೊಳಿಸಲು ನೆರವಾಗಬಹುದು ಎನ್ನಲಾಗಿದೆ.
ಇಷ್ಟಾದರೂ, ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಇದಕ್ಕೆ ಸೃಜನಶೀಲ ಪರಿಹಾರೋಪಾಯಗಳನ್ನು ಕಂಡುಕೊಂಡಿವೆ. ನೇರವಾಗಿ ರಾಸ್‌ನೆಫ್ಟ್ ಅಥವಾ ಲುಕಾಯಿಲ್ ಸಂಸ್ಥೆಗಳಿಂದ ನೇರವಾಗಿ ಖರೀದಿಸಿ ಅಮೆರಿಕನ್ ನಿರ್ಬಂಧಗಳಿಗೆ ತುತ್ತಾಗುವ ಬದಲು, ಮಧ್ಯವರ್ತಿಗಳಿಂದ ಖರೀದಿಸುವುದಕ್ಕೆ ಅವು ಮುಂದಾಗಿವೆ. ಆದರೆ ಖಾಸಗಿ ದೈತ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಜಗತ್ತಿನ ಅತ್ಯಂತ ದೊಡ್ಡ ಸಂಸ್ಕರಣಾಗಾರಗಳಲ್ಲಿ ಒಂದನ್ನು ಕಾರ್ಯಾಚರಿಸುತ್ತಿದ್ದು, ಇದು ರಾಸ್‌ನೆಫ್ಟ್ ಜೊತೆ ದೀರ್ಘಕಾಲೀನ ಒಪ್ಪಂದ ಮಾಡಿಕೊಂಡಿದೆ. ಇದು ನಿರ್ಬಂಧಗಳಿಗೆ ಹೆಚ್ಚು ತೆರೆದಿಡಲ್ಪಟ್ಟಿದೆ.
ಒಟ್ಟಾರೆಯಾಗಿ, ಟ್ರಂಪ್ ನಿರ್ಬಂಧಗಳು ಹೊಸ ಭೌಗೋಳಿಕ ದೋಷ ರೇಖೆಗಳನ್ನು ಸೃಷ್ಟಿಸಿವೆ. ಅಮೆರಿಕದ ಉದ್ದೇಶ ರಷ್ಯಾದ ಆದಾಯದ ಹರಿವನ್ನು ಕಡಿತಗೊಳಿಸುವುದಾದರೆ, ಮಾಸ್ಕೋಗೆ ಏಷ್ಯಾಗೆ ತನ್ನ ಇಂಧನ ಪೂರೈಕೆಯನ್ನು ಸ್ಥಿರಗೊಳಿಸುವುದಾಗಿದೆ. ಭಾರತ ಮತ್ತು ಚೀನಾಗಳಿಗೆ ಜಾಗತಿಕ ವ್ಯಾಪಾರಕ್ಕೆ ಅವಶ್ಯಕವಾದ ಡಾಲರ್ ಆಧಾರಿತ ವ್ಯವಸ್ಥೆಯನ್ನು ಕಳೆದುಕೊಳ್ಳದೆಯೂ ತಮ್ಮ ಆರ್ಥಿಕತೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು.
ಇದು ಕೇವಲ ತೈಲ ಸಂಬಂಧಿತ ವಿಚಾರವಲ್ಲ. ಇದು ತೈಲದ ರೂಪದಲ್ಲಿರುವ ಅಧಿಕಾರದ ಕಥೆಯಾಗಿದೆ. ಓರ್ವ ವಿಶ್ಲೇಷಕರ ಪ್ರಕಾರ 'ಟ್ರಂಪ್ ಹಾಸಿಗೆಯಲ್ಲಿ ತಪ್ಪು ಮಗ್ಗುಲಲ್ಲಿ ಎದ್ದಿದ್ದಾರೆ ಎಂಬ ಕಾರಣಕ್ಕೆ ದೇಶಗಳು ತಮ್ಮ ಚಿಂತನೆಯ ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಇಷ್ಟಾದರೂ ಜಗತ್ತಿನ ಎರಡು ಬೃಹತ್ ಬೆಳೆಯುತ್ತಿರುವ ಆರ್ಥಿತೆಗಳಾದ ಚೀನಾ ಮತ್ತು ಭಾರತ ತಮ್ಮ ಇಂಧನ ಭದ್ರತೆ ಮತ್ತು ಜಾಗತಿಕ ಸಹಯೋಗ ಎರಡನ್ನೂ ಸುರಕ್ಷಿತವಾಗಿ ನೋಡಿಕೊಳ್ಳುವ ಅನಿವಾರ್ಯತೆ ಇದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com