ಭಾರತದಲ್ಲಿರುವ ರಾಜಕೀಯ ಬಲಪಂಥದ ಬೆಂಬಲಿಗರು ಅಮೆರಿಕದಲ್ಲಿ ರೈಟಿಸ್ಟ್ ಎಂದು ಕರೆಸಿಕೊಳ್ಳುವವರನ್ನು ತಮ್ಮ ಸೈದ್ಧಾಂತಿಕ ಸಹಪ್ರಯಾಣಿಕರೆಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ಹಾಗಲ್ಲ ಎಂಬುದು ಈಗ ಪ್ರಾಯೋಗಿಕವಾಗಿ ಸಾಬೀತಾಗುತ್ತಿದೆ. ಇದಂತೂ ತಥಾಕಥಿತ ಬಲಪಂಥೀಯ ರಾಜಕೀಯ ಪಕ್ಷವಾದ ರಿಪಬ್ಲಿಕನ್ನರ ಈ ಬಾರಿಯ ಆಡಳಿತದಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಹಾಗಾದರೆ, ಈ ರೈಟಿಸ್ಟ್ ಎಂಬ ರಾಜಕೀಯ ಪದ ನಮ್ಮಲ್ಲಿ ಬಹುತೇಕರನ್ನು ಹಾದಿ ತಪ್ಪಿಸಿರುವುದಾದರೂ ಎಲ್ಲಿ?
ಅಮೆರಿಕದ ‘ರೈಟ್’ ನಮಗೆ ಬಲಗೊಡುವುದಿಲ್ಲ
ಅದು ಭಾರತೀಯ ಮೂಲದ ಅಮೆರಿಕನ್ನರೇ ಇದ್ದಿರಬಹುದು, ಅಥವಾ ಇಲ್ಲಿಂದ ಭಾವನಾತ್ಮಕವಾಗಿ ಅಮೆರಿಕದ ವಿದ್ಯಮಾನಗಳಿಗೆ ಸ್ಪಂದಿಸುವ ಭಾರತೀಯರೇ ಆಗಿದ್ದಿರಬಹುದು, ಇವರೆಲ್ಲ ಒಂದು ಸಮತೋಲನದ ಕಾರ್ಯತಂತ್ರದ ದೃಷ್ಟಿಯಿಂದ ತಮ್ಮ ರಾಜಕೀಯ ಬೆಂಬಲವನ್ನು ಅಭಿವ್ಯಕ್ತಿಸುತ್ತಿದ್ದರೆ ಅದಕ್ಕೇನೂ ಅಡ್ಡಿ ಇಲ್ಲ. ಅಂದರೆ, ಅಮೆರಿಕದಲ್ಲಿರುವ ಡೆಮಾಕ್ರಾಟ್ ಪಕ್ಷವು ತಮ್ಮನ್ನು ಟೇಕನ್ ಫಾರ್ ಗ್ರಾಂಟೆಡ್-ಹೇಗೆಂದರೂ ಇವರು ನಮ್ಮ ಜತೆ ಎಂದುಕೊಳ್ಳುವುದು ಬೇಡ ಎನ್ನುವ ಕಾರ್ಯತಂತ್ರದ ದೃಷ್ಟಿಯಿಂದ ರಿಪಬ್ಲಿಕನ್ನರನ್ನು ಬೆಂಬಲಿಸಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಹೆಚ್ಚಿನ ಮಂದಿ ರಿಪಬ್ಲಿಕನ್ನರನ್ನು ‘ರೈಟಿಸ್ಟ್’ ಎಂಬ ಕಾರಣಕ್ಕೆ ಬೆಂಬಲಿಸುತ್ತಾರೆ. ಅದುವೇ ಮಿಥ್ಯೆ!
ಡೆಮಾಕ್ರಟ್ ಪಾಳೆಯಕ್ಕೆ ಹೋಲಿಸಿದರೆ ಇಸ್ಲಾಂ ಮೂಲಭೂತವಾದವನ್ನು ಎದರಿಸುವುದಕ್ಕೆ ರಿಪಬ್ಲಿಕನ್ನರು ಸ್ವಲ್ಪ ಹೆಚ್ಚು ಸಶಕ್ತರು ಎಂದು ವಾದಿಸುವುದಕ್ಕೆ ಸ್ವಲ್ಪ ಜಾಗವಿರಬಹುದೇ ಹೊರತು ಉಳಿದಂತೆ ಅಮೆರಿಕವು ರೈಟಿಸ್ಟ್ ಆದಷ್ಟೂ ಭಾರತಕ್ಕೆ ತಲೆನೋವೇ ಹೆಚ್ಚು. ಏಕೆಂದರೆ ಅಮೆರಿಕದ ರಾಜಕೀಯ ಚೌಕಟ್ಟಿನಲ್ಲಿ ಬಲಪಂಥವು ಗಟ್ಟಿಯಾಗುವುದು ಎಂದರೆ ಅದರರ್ಥ ಅದರ ಕ್ರೈಸ್ತ ಐಡೆಂಟಿಟಿಯೇ ಮುಖ್ಯವಾಗುವುದು ಎಂದರ್ಥ. ರಿಪಬ್ಲಿಕನ್ನರು ಇವಾಂಜಲಿಕಲ್ ಕ್ರೈಸ್ತ ಧಾರೆಯನ್ನು ಬಲವಾಗಿ ಪ್ರತಿಪಾದಿಸುವವರು. ಇದರರ್ಥ ಅವರು ಕೆಲವು ಉದಾರ ಕ್ರೈಸ್ತ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ ಎಂದಾಗಿದ್ದರೆ ಅದರಲ್ಲೇನೂ ತೊಂದರೆ ಇರಲಿಲ್ಲ. ಆದರೆ ಇವಾಂಜಲಿಕಲ್ ಎಂಬುದರ ವ್ಯಾಪ್ತಿ ಏನೆಂದರೆ, ಮೂಲತಃ ಅವರು ಕ್ರೈಸ್ತರಾದವರು ಮಾತ್ರ ತಮ್ಮವರೆಂದೂ, ಹಾಗೆ ಜಗತ್ತಿನ ಎಲ್ಲರನ್ನೂ ಕ್ರೈಸ್ತಮತಕ್ಕೆ ಮತಾಂತರಿಸುವುದೇ ದೈವದ ಇಚ್ಛೆಯಾಗಿದೆ ಎಂಬುದನ್ನೂ ಪ್ರತಿಪಾದಿಸುವವರು ಎಂದರ್ಥ. ಈ ಹಿನ್ನೆಲೆಯಲ್ಲಿ ಅಮೆರಿಕದ ಕಟ್ಟರ್ ರೈಟಿಸ್ಟ್ ಒಬ್ಬ ಯಾವುದೇ ಭಾರತೀಯನ ಸೈದ್ಧಾಂತಿಕ ಸಹಪಯಣಿಗನಾಗುವುದಕ್ಕೆ ಸಾಧ್ಯವಿಲ್ಲ. ಒಂದು ಪುಸ್ತಕ, ಒಂದು ಪ್ರವಾದಿಯ ಹೊರತಾಗಿ ಅಂತಿಮ ಸತ್ಯವನ್ನು ತಲುಪುವುದಕ್ಕೆ ಇನ್ಯಾವ ಮಾರ್ಗಗಳೂ ಇಲ್ಲ ಎಂದು ಪ್ರತಿಪಾದಿಸುವ ಯಾರೇ ಆದರೂ ಆ ಕ್ಷಣದ ವ್ಯಾವಹಾರಿಕ ಕಾರಣಗಳಿಗಾಗಿ ಸ್ನೇಹಿತರಾಗಿದ್ದಿರಬಹುದೇ ಹೊರತು ಅದರಾಚೆಗಿನ ಭಾವನಾತ್ಮಕತೆ ಬೇಕಿಲ್ಲ.
ಹಾಗಾದರೆ ಅಮೆರಿಕದ ಲೆಫ್ಟ್, ರಾಜಕೀಯವಾಗಿ ಹೇಳುವುದಿದ್ದರೆ ಡೆಮಾಕ್ರಟ್ ಪಾಳೆಯದವರೇನು ಸುಭಗರಾ, ಭಾರತದ ಪರಮ ಸ್ನೇಹಿತರಾ ಎಂದರೆ ಅದಕ್ಕೂ ಉತ್ತರ ನಕಾರಾತ್ಮಕವೇ. ಆದರೆ ಅವರ ನೆಲೆ ಮುಖ್ಯವಾಗಿ ಕಟ್ಟರ್ ಕ್ರೈಸ್ತರಿಂದ ಬಂದಿಲ್ಲವಾದ್ದರಿಂದ ಆ ನೆಲೆಯಲ್ಲಿ ವಿರೋಧವಿಲ್ಲ. ಉಳಿದಂತೆ ಡೆಮಾಕ್ರಾಟ್ ಆಗಿರಲಿ, ರಿಪಬ್ಲಿಕನ್ ಆಗಿರಲಿ ಬಿಳಿ ತೊಗಲಿನ ಶ್ರೇಷ್ಠತೆಯ ಮನಸ್ಥಿತಿ ಎಂಬುದು ಇಬ್ಬರಲ್ಲೂ ಇದ್ದದ್ದೇ. ಆದರೆ ರಿಪಬ್ಲಿಕನ್ನರ ವಿಷಯ ಬಂದಾಗ ಅಲ್ಲಿ ಕಟ್ಟರ್ ಕ್ರೈಸ್ತ ಐಡೆಂಟಿಟಿಯೂ ಸೇರಿಕೊಳ್ಳುತ್ತದೆ.
ಆರ್ಥಿಕವಾಗಿಯಾದರೂ ಹೊಂದಿಕೊಳ್ಳುತ್ತದೆಯೇ ರೈಟಿಸ್ಟ್ ಸಮೀಕರಣ?
ಈ ಸೈದ್ಧಾಂತಿಕ ರೈಟಿಸ್ಟ್ ವ್ಯಾಖ್ಯಾನ ಏನೂ ಇದ್ದಿರಲಿ ಆದರೆ ಇಕನಾಮಿಕ್ ರೈಟಿಸ್ಟ್ ಎಂದರೆ ಎಲ್ಲ ಕಡೆ ಒಂದೇ, ಅವರು ಮುಕ್ತ ಮಾರುಕಟ್ಟೆ ಬಯಸುವವರಾಗಿರುತ್ತಾರೆ ಎಂಬ ಪ್ರತಿಪಾದನೆಯೊಂದಿದೆ. ಈ ಮುಕ್ತ ಮಾರುಕಟ್ಟೆ ವಾದ ಸಹ ತಮಗೆ ಅನುಕೂಲವಾಗುವ ಕಡೆಗೆ ಮಾತ್ರ ಎಂಬುದನ್ನು ಟ್ರಂಪ್ ಆಡಳಿತದ ರೀತಿನೀತಿಗಳೇ ಸ್ಪಷ್ಟಪಡಿಸಿವೆ. ಮುಕ್ತ ಎಂದಾದರೆ ಅಮೆರಿಕದ ಉದ್ಯೋಗ ಮಾರುಕಟ್ಟೆ ಸಹ ಎಲ್ಲರಿಗೂ ತೆರೆದಿರಬೇಕಲ್ಲವೇ? ಅದನ್ನು ಮುಚ್ಚುತ್ತೇವೆ, ಆದರೆ ನಮ್ಮ ವಸ್ತುಗಳನ್ನು ಮಾತ್ರ ನಿಮ್ಮ ಮಾರುಕಟ್ಟೆಗೆ ಬಿಟ್ಟುಕೊಳ್ಳಿ ಎನ್ನುವುದು ಮುಕ್ತ ಮಾರುಕಟ್ಟೆ ಹೇಗಾದೀತು?
ಭಾರತದ ರೈಟಿಸ್ಟ್ ಸಹ ಷರತ್ತುಗಳೇ ಇಲ್ಲದ ಮುಕ್ತ ಮಾರುಕಟ್ಟೆಯನ್ನು ಒಪ್ಪಲಾರ. ಏಕೆಂದರೆ ನಮ್ಮದೇ ದೇಶೀಯ ಉತ್ಪನ್ನಗಳನ್ನು ಇನ್ಯಾವುದೋ ದೇಶವು ಕೇವಲ ತನ್ನ ದುಡ್ಡು ಪ್ರಿಂಟ್ ಮಾಡುವ ಬಲದಿಂದ ಹೊಸಕಿಹಾಕುವುದನ್ನು ಒಪ್ಪಲಾದೀತೇ? ಅಲ್ಲದೇ, ನೀವು ನಿಜಕ್ಕೂ ಸನಾತನಿ ಆಗಿದ್ದರೆ ಸಂಪತ್ತಿನ ಬಗ್ಗೆ ಗೌರವ-ಅಪೇಕ್ಷೆಗಳನ್ನು ಇರಿಸಿಕೊಳ್ಳುವುದೇನೋ ಸರಿಯಾದರೂ ಕೇವಲ ಉಪಭೋಗ ಹೆಚ್ಚಿಸಿಕೊಳ್ಳುವುದರಿಂದ ಎಕಾನಮಿ ಬೆಳೆಸಬೇಕು, ಉಪಭೋಗದ ಸಾಮರ್ಥ್ಯ ಹೆಚ್ಚಿದಷ್ಟೂ ಸುಖ ಹೆಚ್ಚು ಎಂಬುದನ್ನು ಪ್ರತಿಪಾದಿಸಲಾರಿರಿ. ಹಾಗೆ ಯೋಚಿಸುವವರೆಲ್ಲ ಹಿಂದು ಹೆಸರಿಟ್ಟುಕೊಂಡಿದ್ದರೂ ಅದಾಗಲೇ ಅಬ್ರಾಹಮಿಕ್ ಮತಚಿಂತನೆಯತ್ತಲೋ, ನಾಸ್ತಿಕವಾದದತ್ತಲೋ ಹೊರಳಿದ್ದಾರೆಂದರ್ಥ. ಏಕೆಂದರೆ ಸನಾತನದಲ್ಲಿ ನೀನು ಈಗ ಬಾಳುತ್ತಿರುವುದು ಮಾತ್ರವೇ ಬದುಕಲ್ಲ. ನಿನ್ನಾತ್ಮ ಕರ್ಮಫಲಕ್ಕೆ ಅನುಗುಣವಾಗಿ ಬೇರೆ ಬೇರೆ ಅನುಭವದ ಕಾಯಗಳನ್ನು ದಕ್ಕಿಸಿಕೊಳ್ಳುತ್ತಲೇ ಇರುತ್ತದೆ, ಮೋಕ್ಷದವರೆಗೂ. “ಇರುವುದೊಂದು ಜೀವನ, ಮಜಾ ಮಾಡಬೇಕಷ್ಟೇ” ಎಂಬುದಕ್ಕೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಮತಗಳ್ಯಾವವೂ ಪುಷ್ಟಿ ಕೊಡುವುದಿಲ್ಲ, ಚಾರ್ವಾಕ ವಾದವೊಂದನ್ನು ಬಿಟ್ಟು. ಅದು ಮಾತ್ರವೇ ಒಂದು ದಿನ ಭಸ್ಮವಾಗುವ ಈ ದೇಹ ಮತ್ತೆ ಬರುವುದಿಲ್ಲ, ಹಾಗಾಗಿ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುತ್ತದೆ. ಅಬ್ರಾಹಮಿಕ್ ಮತಗಳಲ್ಲಿ ಸಹ ಇರುವುದೊಂದೇ ಜೀವನ. ಅಂತಿಮ ತೀರ್ಪಿನ ದಿನದಂದು ಪ್ರವಾದಿ ಮತ್ತು ದೈವ ಪ್ರತ್ಯಕ್ಷವಾಗಿ ಸಮಸ್ತ ಮನುಕುಲವನ್ನೂ ಸ್ವರ್ಗಕ್ಕೋ, ನರಕಕ್ಕೋ ಕಳುಹಿಸುವವರೆಗೆ ಗೋರಿಯಲ್ಲೇ ಕಾಯ್ದುಕೊಂಡಿರುತ್ತೀರಿ. ಸನಾತನಿಯ ಪಾಲಿಗೆ ಸ್ವರ್ಗ ದಕ್ಕಿಸಿಕೊಂಡರೂ ಅದು ಶಾಶ್ವತವಲ್ಲ. ಪುಣ್ಯಫಲ ಖಾಲಿಯಾಗುತ್ತಲೇ ಮತ್ತೆ ಯಾವುದೋ ಜೀವಿಯಾಗಲೇಬೇಕು. ಹೀಗಾಗಿ ಕೇವಲ ಕನ್ಸುಮರಿಸಂ ಸುತ್ತಲೇ ಅರ್ಥವ್ಯವಸ್ಥೆ ಕಟ್ಟುತ್ತೇವೆಂಬ ಅಮೆರಿಕ ಮಾದರಿಯನ್ನು ಜಗತ್ತಿನ ಯಾವ ರೈಟು-ಲೆಫ್ಟ್ ಸಿದ್ಧಾಂತಗಳು ಪ್ರತಿಪಾದಿಸಿದರೂ ಭಾರತದ ರೈಟಿಸ್ಟ್ ಅದನ್ನು ಒಪ್ಪಲಾರ. ಒಪ್ಪಿದರೆ ಆತ ನಿಜಕ್ಕೂ ಸನಾತನಿ, ಬಲಪಂಥೀಯ ಆಗುವುದೇ ಇಲ್ಲ!
ಅಮೆರಿಕದ ಹಿಂದುಗಳಿಗೆ ಆತಂಕದ ಕಾಲ
ಅಮೆರಿಕವು ಮೊದಲಿಗೆ ಬೈದಾಡಿ-ಚೀರಾಡಿ, ನಂತರ ಮೆತ್ತಗಾಗಿ ಭಾರತದ ಜತೆ ಏನೋ ಒಂದು ಒಪ್ಪಂದವನ್ನು ಮಾಡಿಕೊಂಡರೂ ಅದು ಸನಿಹ ಭವಿಷ್ಯದಲ್ಲಿ ಡಾಲರ್ ಪಾರಮ್ಯ ತಗ್ಗದಂತೆ ತಡೆಯುವ ಕೆಲಸವನ್ನೇನೂ ಮಾಡಲಾರದು. 34 ಟ್ರಿಲಿಯನ್ ಡಾಲರ್ ಸಾಲ ಸೃಷ್ಟಿಯ ಮೂಲಕ ಅಮೆರಿಕವೇ ಡಾಲರಿಗೆ ಮರ್ಯಾದೆ ಇಲ್ಲದಂತೆ ಮಾಡಿದೆ. ಇನ್ನು ಕೆಲವು ತಿಂಗಳಲ್ಲೋ, ವರ್ಷದಲ್ಲೋ ಡಾಲರ್ ಮೌಲ್ಯ ಒಂದಷ್ಟರಮಟ್ಟಿಗಂತೂ ಕುಸಿಯಲೇಬೇಕು. ಆಗ ಅಮೆರಿಕದಲ್ಲಿ ಹುಟ್ಟುವ ಹತಾಶೆ ಅಲ್ಲಿನ ಸ್ಥಳೀಯ ಹಿಂದುಗಳ ಮೇಲೆ ತಿರುಗುವ ಸಂಭವವನ್ನು ತಳ್ಳಿಹಾಕುವುದಕ್ಕಾಗುವುದಿಲ್ಲ. ಏಕೆಂದರೆ ಡಾಲರ್ ಹರಿವು ಯಥೇಚ್ಛವಾಗಿರುವವರೆಗೆ ಅಮೆರಿಕನ್ನರು ಅದರ ಮಜದಲ್ಲಿದ್ದರು. ಈಗ ಬದುಕು ದುಬಾರಿಯಾಗಲು ಶುರುವಾಗುತ್ತಿದ್ದಂತೆ ಅವರ ಅಸೂಯೆ-ದ್ವೇಷಗಳು ಆ ನೆಲಕ್ಕೆ ಹೋಗಿ ಅವರಿಗಿಂತ ಉತ್ತಮ ಯಶಸ್ಸು ಹಾಗೂ ಕೌಟುಂಬಿಕ ಬದುಕು ಹೊಂದಿರುವ ಭಾರತೀಯರ ಮೇಲೆ ತಿರುಗುವುದು ಸಹಜ. ತಾವು ಬಿಳಿಯರೇ ಶ್ರೇಷ್ಟ ಎಂಬ ಅಲ್ಲಿನ ಜನಮಾನಸದ ಸಾಮಾನ್ಯ ಗ್ರಹಿಕೆಯ ಜತೆಗೆ, ರಿಪಬ್ಲಿಕನ್ನರ ಕ್ರೈಸ್ತ ಐಡೆಂಟಿಟಿಯೂ ಸೇರಿಕೊಂಡುಬಿಟ್ಟರೆ ಅಲ್ಲಿನ ಹಿಂಸಾಚಾರ ಸಾಧ್ಯತೆ ಭಯ ಹುಟ್ಟಿಸುವಂಥದ್ದೇ ಆಗಿದೆ.
ಕೆಲವರ್ಷಗಳ ಹಿಂದೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಕೈಹಿಡಿದು ಭಾರತದ ಪ್ರಧಾನಿ ಸ್ಟೇಡಿಯಂ ಸುತ್ತಿದಾಗ, ತೀರ ಮೊನ್ನೆ ಮೊನ್ನೆಯವರೆಗೂ ಟ್ರಂಪ್ ತನ್ನ ಮಾತುಗಳಲ್ಲಿ “ಮೋದಿ ಮೈ ಫ್ರೆಂಡ್” ಎಂದಿದ್ದಾಗ ಭಾರತ ಹಾಗೂ ಪಶ್ಚಿಮದ ರೈಟಿಸ್ಟ್ ಧಾರೆಗಳೆರಡೂ ಸಂಗಮಿಸಿಬಿಟ್ಟವೇನೋ ಎಂಬ ಭಾವನೆ ಆವರಿದ್ದದ್ದು ಸುಳ್ಳಲ್ಲ. ಆದರೆ ಈಗಿನ ಟ್ರಂಪ್ ಕಠೋರ ವ್ಯವಹಾರ, ಅವರ ಗುಂಪಿನಲ್ಲಿರುವವರು ಆಡುತ್ತಿರುವ ಕಟುಮಾತುಗಳ ಪ್ರವಾಹ ನೋಡಿದಾಗ, ರೈಟಿಸ್ಟ್ ಎಂದರೆ ಭಾರತ ಮತ್ತು ಅಮೆರಿಕಗಳ ಶಬ್ದಕೋಶಗಳಲ್ಲಿ ಭಿನ್ನ ಅರ್ಥಗಳಿವೆ ಎಂಬುದು ಎಲ್ಲರಿಗೂ ಅರಿವಾಗಬೇಕು.
- ಚೈತನ್ಯ ಹೆಗಡೆ
cchegde@gmail.com